ಪದ್ಯ ೧೪: ದ್ರೋಣನು ಪಾಂಡವರ ಸೈನ್ಯವನ್ನು ಹೇಗೆ ಹಂಗಿಸಿದನು?

ಅಂಗವಣೆಯೊಳ್ಳಿತು ಮಹಾದೇ
ವಂಗೆ ಮೊಗಸುವಡರಿದು ಮೊದಲಲಿ
ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ
ಭಂಗವಿಲ್ಲದೆ ಬಿದ್ದ ನಿಮ್ಮ
ಯ್ಯಂಗೆ ಹಳಿವನು ಹೊರಿಸದಿಹ ಮನ
ದಂಗವಣಿಯುಂಟಾಗೆ ಮೆಚ್ಚುವೆನೆಂದನಾ ದ್ರೋಣ (ದ್ರೋಣ ಪರ್ವ, ೧೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ದ್ರೋಣನು ಪಾಂಡವರ ಸೈನ್ಯವನ್ನು ಕಂಡು, ಭಲೇ, ಚೆನ್ನಾಗಿ ಜೋಡಿಸಿಕೊಂಡು ಬಂದಿದ್ದೀರಿ, ಶಿವನೂ ನಿಮ್ಮನ್ನು ಇದಿರಿಸಲಾರ ಎನ್ನಿಸುತ್ತದೆ. ಆದರೆ ಸಿಂಹದಂತಹ ಒಂದು ಬಾಣ ನಿಮ್ಮ ಮೇಲೆ ಬಂದರೆ, ಓಟದಲ್ಲಿ ಮೊಲವನ್ನು ಮೀರಿಸುತ್ತೀರಿ, ನಿರಾಯಾಸವಾಗಿ ಸತ್ತು ನಿಮ್ಮ ತಂದೆಗೆ ಅಪಕೀರ್ತಿಯನ್ನು ತರದಂತೆ ಯುದ್ಧಮಾಡುವ ಇಚ್ಛೆ ನಿಮಗಿದ್ದರೆ ಆಗ ಮೆಚ್ಚುತ್ತೇನೆ ಎಂದು ದ್ರೋಣನು ಸೈನಿಕರನ್ನು ಹೀಯಾಳಿಸಿದನು.

ಅರ್ಥ:
ಅಂಗವಣೆ: ರೀತಿ, ಬಯಕೆ; ಒಳ್ಳಿತು: ಚೆನ್ನು; ಮೊಗಸು: ಬಯಕೆ, ಅಪೇಕ್ಷೆ; ಅರಿ: ತಿಳಿ; ಮೊದಲು: ಆದಿ; ಸಿಂಗ: ಸಿಂಹ; ಆಯತ: ವಿಸ್ತಾರ; ಅಂಬು: ಬಾಣ; ಸುಳಿ: ಆವರಿಸು, ಮುತ್ತು; ಮುಂಚು: ಮುಂದೆ; ಭಂಗ: ಮುರಿಯುವಿಕೆ; ಬಿದ್ದು: ಬೀಳು; ಅಯ್ಯ: ತಂದೆ; ಹಳಿ: ದೂಷಿಸು, ನಿಂದಿಸು; ಹೊರಿಸು: ಭಾರವನ್ನು ಹೊರುವಂತೆ ಮಾಡು; ಮನ: ಮನಸ್ಸು; ಮೆಚ್ಚು: ಒಲುಮೆ, ಪ್ರೀತಿ;

ಪದವಿಂಗಡಣೆ:
ಅಂಗವಣೆ+ಒಳ್ಳಿತು +ಮಹಾದೇ
ವಂಗೆ+ ಮೊಗಸುವಡ್+ಅರಿದು+ ಮೊದಲಲಿ
ಸಿಂಗದ್+ಆಯತದ್+ಅಂಬು +ಸುಳಿದರೆ +ಮೊಲನ +ಮುಂಚುವಿರಿ
ಭಂಗವಿಲ್ಲದೆ +ಬಿದ್ದ +ನಿಮ್ಮ್
ಅಯ್ಯಂಗೆ+ಹಳಿವನು +ಹೊರಿಸದಿಹ+ ಮನದ್
ಅಂಗವಣಿ+ಉಂಟಾಗೆ +ಮೆಚ್ಚುವೆನೆಂದನಾ +ದ್ರೋಣ

ಅಚ್ಚರಿ:
(೧) ರೂಪಕದ ಪ್ರಯೋಗ – ಅಂಗವಣೆಯೊಳ್ಳಿತು ಮಹಾದೇವಂಗೆ ಮೊಗಸುವಡರಿದು; ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ

ಪದ್ಯ ೧೮: ಬೆಳದಿಂಗಳು ಹೇಗೆ ಚೈತನ್ಯವನ್ನು ತಂದಿತು?

ತಳಿತ ತಂಪಿನ ತಂಗದಿರ ತೊರೆ
ಯೊಳಗೆ ತೇಕಾಡಿದುದು ಬಲವ
ಗ್ಗಳದ ಬಳಲಿಕೆ ಬೀಳುಕೊಂದುದು ಬಲಿದುದಂಗವಣೆ
ಒಲೆದು ಬರಿಕೈತೂಗಿ ಕಿವಿಗಳ
ನಲುಗಿದವು ಕರಿನಿಕರವವಿಲಣ
ಘಲಿಲೆನಲು ಕೊಡಹಿದವು ವಳಯವನಖಿಳ ಹಯನಿಕರ (ದ್ರೋಣ ಪರ್ವ, ೧೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ತಂಪಾದ ಬೆಲದಿಂಗಳಿನ ತೊರೆಯಲ್ಲಿ ಎರಡು ಸೈನ್ಯಗಳೂ ತೇಲಿದವು. ಬಳಲಿಕೆಯಿಲ್ಲದಂತಾಯಿತು. ಮೈಯಲ್ಲಿ ಶಕ್ತಿ ಮತ್ತೆ ಬಂದಿತು. ಅನೆಗಳು ಸೊಂಡಿಲನ್ನು ತೂಗಿ ಕಿವಿಗಳನ್ನು ಕೊಡವಿದವು. ಕುದುರೆಗಳು ಕತ್ತನ್ನು ಕೊಡವಲು ಕಿರುಗಂಟೆಗಳು ಸದ್ದುಮಾಡಿದವು.

ಅರ್ಥ:
ತಳಿತ: ಚಿಗುರಿದ; ತಂಪು: ತಣಿವು, ಶೈತ್ಯ; ತಂಗು: ಇಳಿದುಕೊಳ್ಳು, ಬೀಡುಬಿಡು; ತೊರೆ: ನದಿ, ಹೊಳೆ; ತೇಕು: ಏದುಸಿರು, ಮೇಲುಸಿರು; ಬಲ: ಶಕ್ತಿ; ಅಗ್ಗಳ: ಶ್ರೇಷ್ಠ; ಬಳಲು: ಆಯಾಸಗೊಳ್ಳು; ಬೀಳುಕೊಂಡು: ತೆರಳು; ಬಲಿ: ಗಟ್ಟಿ, ದೃಢ; ಅಂಗವಣೆ: ರೀತಿ ಬಯಕೆ; ಒಲೆ: ತೂಗಾಡು; ಬರಿ: ಕೇವಲ; ಕೈ: ಹಸ್ತ; ತೂಗು: ಅಲ್ಲಾಡು; ಕಿವಿ: ಕರ್ಣ; ಅಲುಗು: ಅಳ್ಳಾಡು; ಕೈ: ಆನೆ; ನಿಕರ: ಗುಂಪು; ಘಲ್: ಶಬ್ದವನ್ನು ವಿವರಿಸುವ ಪದ; ಕೊಡಹು: ಹೊರಹಾಕು; ವಳಯ: ವರ್ತುಲ, ಪರಿಧಿ; ಅಖಿಳ: ಎಲ್ಲಾ; ಹಯ: ಕುದುರೆ; ನಿಕರ: ಗುಂಪು;

ಪದವಿಂಗಡಣೆ:
ತಳಿತ +ತಂಪಿನ +ತಂಗದಿರ+ ತೊರೆ
ಯೊಳಗೆ +ತೇಕಾಡಿದುದು +ಬಲವ್
ಅಗ್ಗಳದ +ಬಳಲಿಕೆ +ಬೀಳು+ಕೊಂದುದು +ಬಲಿದುದ್+ಅಂಗವಣೆ
ಒಲೆದು +ಬರಿಕೈ+ತೂಗಿ +ಕಿವಿಗಳನ್
ಅಲುಗಿದವು +ಕರಿನಿಕರವವಿಲಣ
ಘಲಿಲೆನಲು+ ಕೊಡಹಿದವು +ವಳಯವನ್+ಅಖಿಳ +ಹಯನಿಕರ

ಅಚ್ಚರಿ:
(೧) ತ ಕಾರದ ಸಾಲು ಪದಗಳು – ತಳಿತ ತಂಪಿನ ತಂಗದಿರ ತೊರೆಯೊಳಗೆ ತೇಕಾಡಿದುದು
(೨) ಬ ಕಾರದ ಸಾಲು ಪದಗಳು – ಬಲವಗ್ಗಳದ ಬಳಲಿಕೆ ಬೀಳುಕೊಂದುದು ಬಲಿದುದಂಗವಣೆ

ಪದ್ಯ ೬: ಅರ್ಜುನನು ಸೇನೆಯಲ್ಲಿ ಯಾವ ವಿಷಯವನ್ನು ಸಾರಿದನು?

ಬಳಲಿದಿರಿ ಹಗಲಿರುಳಕಾಳೆಗ
ದೊಳಗೆ ಕೈಮಾಡಿದಿರಿ ಕಗ್ಗ
ತ್ತಲೆಯ ಬಲುಗಂಡಿಯಲಿ ಸಿಲುಕಿತು ಕಂಗಳಂಗವಣೆ
ನಳಿನರಿಪುವುದಯಿಸಲಿ ಬೆಳುದಿಂ
ಗಳಲಿ ಕೈದುವ ಕೊಳ್ಳಿ ನಿದ್ರೆಯ
ನಿಳಿಯಬಿಡಬೇಕೆಂದು ಸೇನೆಗೆ ಸಾರಿದನು ಪಾರ್ಥ (ದ್ರೋಣ ಪರ್ವ, ೧೭ ಸಂಧಿ, ೬ ಪದ್ಯ)

ತಾತ್ಪರ್ಯ:
ಹಗಲೂ, ಇರುಳು ಯುದ್ಧಮಾಡಿ ಬಳಲಿದ್ದೀರಿ. ಕಗ್ಗತ್ತಲಿನಲ್ಲಿ ಕಣ್ಣು ಕಾಣಿಸುತ್ತಿಲ್ಲ, ಚಂದ್ರನು ಹುಟ್ಟಿದ ಮೇಲೆ ಆಯುಧಗಳನ್ನು ಹಿಡಿಯಿರಿ. ನಿದ್ರಿಸಬೇಡಿ, ಎಂದು ಅರ್ಜುನನು ಸೇನೆಯಲ್ಲಿ ಸಾರಿದನು.

ಅರ್ಥ:
ಬಳಲು: ಆಯಾಸಗೊಳ್ಳು; ಹಗಲು: ದಿನ; ಇರುಳು: ರಾತ್ರಿ; ಕಾಳೆಗ: ಯುದ್ಧ; ಕೈಮಾಡು: ಹೋರಾದು; ಕಗ್ಗತ್ತಲೆ: ದಟ್ಟವಾದ ಅಂಧಕಾರ; ಕಂಡಿ: ರಂಧ್ರ, ತೂತು; ಸಿಲುಕು: ಬಂಧನಕ್ಕೊಳಗಾಗು; ಕಂಗಳು: ಕಣ್ಣು; ಅಂಗವಣೆ: ರೀತಿ, ಬಯಕೆ; ನಳಿನ: ಕಮಲ; ರಿಪು: ವೈರಿ; ಉದಯ: ಹುಟ್ಟು; ಬೆಳುದಿಂಗಳು: ಹುಣ್ಣಿಮೆ; ಕೈದು: ಆಯುಧ; ಕೊಳ್ಳು: ತೆಗೆದುಕೋ; ನಿದ್ರೆ: ಶಯನ; ಇಳಿ: ಜಾರು; ಸೇನೆ: ಸೈನ್ಯ; ಸಾರು: ಪಸರಿಸು;

ಪದವಿಂಗಡಣೆ:
ಬಳಲಿದಿರಿ +ಹಗಲಿರುಳ+ಕಾಳೆಗ
ದೊಳಗೆ +ಕೈಮಾಡಿದಿರಿ +ಕಗ್ಗ
ತ್ತಲೆಯ +ಬಲುಗಂಡಿಯಲಿ +ಸಿಲುಕಿತು +ಕಂಗಳ್+ಅಂಗವಣೆ
ನಳಿನರಿಪು+ಉದಯಿಸಲಿ +ಬೆಳುದಿಂ
ಗಳಲಿ +ಕೈದುವ +ಕೊಳ್ಳಿ +ನಿದ್ರೆಯನ್
ಇಳಿಯಬಿಡಬೇಕೆಂದು +ಸೇನೆಗೆ +ಸಾರಿದನು +ಪಾರ್ಥ

ಅಚ್ಚರಿ:
(೧) ಚಂದ್ರನನ್ನು ನಳಿನರಿಪು ಎಂದು ಕರೆದಿರುವುದು
(೨) ಹಗಲು, ಇರುಳು – ವಿರುದ್ಧ ಪದಗಳು

ಪದ್ಯ ೩: ಸುಭಟರು ಹೇಗೆ ಕಾದಿದರು?

ಅಂಗವಣೆ ಮನದಲ್ಲಿ ಪದದಲಿ
ಮುಂಗುಡಿಯ ದುವ್ವಾಳಿ ಕಯ್ಯಲಿ
ಸಿಂಗದಾಯತ ಸವೆಯದೆರಡೊಡ್ಡಿನಲಿ ಸುಭಟರಿಗೆ
ಕಂಗಳನು ಕಾರಿರುಳು ರಕ್ಕಸಿ
ನುಂಗಿದಳು ನಾನೇನನುಸುರುವೆ
ನಂಗವಿಸಿ ಕಡುಗಲಿಗಳಿರಿದಾಡಿದರು ತಮ್ಮೊಳಗೆ (ದ್ರೋಣ ಪರ್ವ, ೧೭ ಸಂಧಿ, ೩ ಪದ್ಯ)

ತಾತ್ಪರ್ಯ:
ಎರಡೂ ಕಡೆಯ ಸೈನಿಕರಿಗೆ ಮನಸ್ಸಿನಲ್ಲಿ ಉತ್ಸಾಹ, ಕಾಲುಗಳಿಗೆ ಮುನ್ನುಗ್ಗುವ ತವಕ, ಕೈಯಲ್ಲಿ ಸಿಂಹಬಲ ಕಡಿಮೆಯೇ ಆಗಲಿಲ್ಲ. ಆದರೆ ಕಣ್ಣುಗಳನ್ನು ಕಾರಿರುಳಿನ ರಾಕ್ಷಸಿ ನುಂಗಿದಳು. ಏನು ಹೇಳಲಿ ವೀರರು ತಮ್ಮೊಳಗೆ ಇರಿದಾಡಿದರು.

ಅರ್ಥ:
ಅಂಗವಣೆ: ರೀತಿ, ಬಯಕೆ; ಮನ: ಮನಸ್ಸು; ಪದ: ಚರಣ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ದುವ್ವಾಳಿ: ತೀವ್ರಗತಿ, ವೇಗವಾದ ನಡೆ; ಕಯ್ಯಲಿ: ಹಸ್ತದಲ್ಲಿ; ಸಿಂಗ: ಸಿಂಹ; ಆಯತ: ಅಣಿಗೊಳಿಸು, ಸಿದ್ಧ, ಸಹಜ; ಸವೆ: ತೀರು; ಒಡ್ಡು: ಸೈನ್ಯ; ಸುಭಟ: ಸೈನಿಕ, ಪರಾಕ್ರಮಿ; ಕಂಗಳು: ಕಣ್ಣು; ಕಾರಿರುಳು: ದಟ್ಟವಾದ ಕತ್ತಲು; ರಕ್ಕಸಿ: ರಾಕ್ಷಸಿ; ನುಂಗು: ತಿನ್ನು; ಉಸುರುವೆ: ಹೇಳು; ಅಂಗವಿಸು: ಬಯಸು; ಕಡುಗಲಿ: ಮಹಾಶೂರ; ಇರಿ: ಚುಚ್ಚು;

ಪದವಿಂಗಡಣೆ:
ಅಂಗವಣೆ +ಮನದಲ್ಲಿ +ಪದದಲಿ
ಮುಂಗುಡಿಯ +ದುವ್ವಾಳಿ +ಕಯ್ಯಲಿ
ಸಿಂಗದಾಯತ +ಸವೆಯದ್+ಎರಡ್+ಒಡ್ಡಿನಲಿ +ಸುಭಟರಿಗೆ
ಕಂಗಳನು+ ಕಾರಿರುಳು +ರಕ್ಕಸಿ
ನುಂಗಿದಳು +ನಾನೇನನ್+ಉಸುರುವೆನ್
ಅಂಗವಿಸಿ+ ಕಡುಗಲಿಗಳ್+ಇರಿದಾಡಿದರು+ ತಮ್ಮೊಳಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ಕಂಗಳನು ಕಾರಿರುಳು ರಕ್ಕಸಿ ನುಂಗಿದಳು

ಪದ್ಯ ೩೧: ರಾಜರ ಪುತ್ರರಿಗೆ ಯಾವುದು ಶೋಭಿಸುತ್ತದೆ?

ಬಾಲತನವೇನೂಣಯವೆ ಕ
ಟ್ಟಾಳುತನವಾಭರಣವವನೀ
ಪಾಲ ಸುತರಿಗೆ ವಿದ್ಯವೇ ವಿಪ್ರರಿಗಲಂಕಾರ
ಆಳಿನಂಗವನೆತ್ತ ಬಲ್ಲೆ ಶ
ರಾಳಿಯಲಿ ನಿನ್ನಂಘವಣೆಯ ಛ
ಡಾಳತನವನು ಮುದ್ರಿಸುವೆನೆನುತೆಚ್ಚನಭಿಮನ್ಯು (ದ್ರೋಣ ಪರ್ವ, ೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಶಲ್ಯನಿಗೆ ಉತ್ತರಿಸುತ್ತಾ, ಬಾಲಕತನವೇನು ದೋಷವೇ? ಪರಾಕ್ರಮವು ರಾಜಪುತ್ರರಿಗೆ ಅಲಂಕಾರ, ವಿದ್ಯೆಯು ಬ್ರಾಹ್ಮಣರಿಗೆ ಅಲಂಕಾರ, ಪೌರುಷದ ಪರಿ ನಿನಗೇನು ಗೊತ್ತು, ನನ್ನ ಬಾಣಗಳಿಂದ ನಿನ್ನ ಸಾಹಸದ ದೊಡ್ಡಸ್ತಿಕೆಯನ್ನು ಕಟ್ಟಿ ಮುದ್ರಿಸುತ್ತೇನೆ ಎಂದು ಹೇಳಿ ಅಭಿಮನ್ಯುವು ಬಾಣಗಳನ್ನು ಬಿಟ್ಟನು.

ಅರ್ಥ:
ಬಾಲತನ: ಮಕ್ಕಳಾಟ; ಊಣ: ದೋಷ; ಕಟ್ಟಾಳು: ಶೂರ, ಸೇವಕ; ಆಭರಣ: ಒಡವೆ; ಅವನೀಪಾಲ: ರಾಜ; ಸುತ: ಮಕ್ಕಳು; ವಿದ್ಯ: ಜ್ಞಾನ; ವಿಪ್ರ: ಬ್ರಾಹ್ಮಣ; ಅಲಂಕಾರ: ಭೂಷಣಪ್ರಾಯ; ಆಳಿನಂಗವ: ಪೌರುಷತನ; ಅಂಗ: ರೀತಿ, ದೇಹದ ಭಾಗ; ಬಲ್ಲೆ: ತಿಳಿ; ಶರಾಳಿ: ಬಾಣದ ಗುಂಪು; ಅಂಗವಣೆ: ರೀತಿ, ಉದ್ದೇಶ; ಛಡಾಳ: ಹೆಚ್ಚಳ; ಮುದ್ರಿಸು: ಕೆತ್ತು, ಗುರುತುಮಾಡು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಬಾಲತನವೇನ್+ಊಣಯವೆ+ ಕ
ಟ್ಟಾಳುತನವ್+ಆಭರಣವ್+ಅವನೀ
ಪಾಲ +ಸುತರಿಗೆ +ವಿದ್ಯವೇ +ವಿಪ್ರರಿಗ್+ಅಲಂಕಾರ
ಆಳಿನಂಗವನ್+ಎತ್ತ +ಬಲ್ಲೆ +ಶ
ರಾಳಿಯಲಿ +ನಿನ್ನಂಘವಣೆಯ +ಛ
ಡಾಳತನವನು +ಮುದ್ರಿಸುವೆನ್+ಎನುತ್+ಎಚ್ಚನ್+ಅಭಿಮನ್ಯು

ಅಚ್ಚರಿ:
(೧) ಯಾವುದು ಯಾರಿಗೆ ಅಲಂಕಾರ – ಕಟ್ಟಾಳುತನವಾಭರಣವವನೀಪಾಲ ಸುತರಿಗೆ ವಿದ್ಯವೇ ವಿಪ್ರರಿಗಲಂಕಾರ

ಪದ್ಯ ೨೦: ಭೀಷ್ಮರು ಯಾರನ್ನು ಅಪ್ಸರೆಯರ ಬಳಿ ಕಳುಹಿಸಿದನು?

ಅಂಗವಿಸಿ ಮರಿಹುಲ್ಲೆ ಖುರದಲಿ
ಸಿಂಗವನು ಹೊಯ್ವಂತೆ ನೃಪರು
ತ್ತುಂಗ ಸಹಸಿಯ ಮೇಲೆ ಕೈಮಾಡಿದರು ಖಡ್ಗದಲಿ
ಅಂಗವಣೆಯನು ಹೊಗಳುತಾ ದಿವಿ
ಜಾಂಗನಾ ಕಾಮುಕರ ಮಾಡಿಯ
ಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ (ಭೀಷ್ಮ ಪರ್ವ, ೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜಿಂಕೆಯ ಮರಿಗಳು ತಮ್ಮ ಗೊರಸಿನಿಂದ ಸಿಂಹವನ್ನು ಹೊಡೆವಂತೆ ರಾಜರು ಪ್ರೌಢ ಪ್ರತಾಪಿಯಾದ ಭೀಷ್ಮನನ್ನು ಖಡ್ಗದಿಮ್ದ ಹೊಡೆಯಲು ಬಂದರು. ಅವರ ಸಾಹಸವನ್ನು ಹೊಗಳುತ್ತಾ ಭೀಷ್ಮನು ಅವರು ಅಪ್ಸರ ಸ್ತ್ರೀಯರನ್ನು ಕಾಮಿಸುವಂತೆ ಮಾಡಿದನು.

ಅರ್ಥ:
ಅಂಗವಿಸು: ಬಯಸು, ಸ್ವೀಕರಿಸು; ಮರಿಹುಲ್ಲೆ: ಜಿಂಕೆಮರಿ; ಖುರ: ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು; ಸಿಂಗ: ಸಿಂಹ, ಕೇಸರಿ; ಹೊಯ್ವ: ಹೊಡೆಯುವ; ನೃಪ: ರಾಜ; ಉತ್ತುಂಗ: ಉನ್ನತವಾದ; ಸಹಸಿ: ಪರಾಕ್ರಮಿ; ಕೈಮಾಡು: ಹೋರಾಡು; ಖಡ್ಗ: ಕತ್ತಿ; ಅಂಗವಣೆ: ಬಯಕೆ, ಉದ್ದೇಶ; ಹೊಗು: ತೆರಳು; ದಿವಿಜಾಂಗನೆ: ಅಪ್ಸರೆ; ಕಾಮುಕ: ಕಾಮಾಸಕ್ತನಾದವನು, ಲಂಪಟ; ಭಂಗ: ತುಂಡು, ಚೂರು; ಅಭಂಗ: ಸೋಲಿಲ್ಲದ; ಮೆರೆ: ಹೊಳೆ, ಪ್ರಕಾಶಿಸು; ಉನ್ನತ: ಹೆಚ್ಚು; ಬಾಹು: ಭುಜ; ವಿಕ್ರಮ: ಪರಾಕ್ರಮ;

ಪದವಿಂಗಡಣೆ:
ಅಂಗವಿಸಿ +ಮರಿಹುಲ್ಲೆ +ಖುರದಲಿ
ಸಿಂಗವನು +ಹೊಯ್ವಂತೆ +ನೃಪರ್
ಉತ್ತುಂಗ +ಸಹಸಿಯ +ಮೇಲೆ +ಕೈಮಾಡಿದರು +ಖಡ್ಗದಲಿ
ಅಂಗವಣೆಯನು +ಹೊಗಳುತಾ +ದಿವಿ
ಜಾಂಗನಾ +ಕಾಮುಕರ+ ಮಾಡಿ+
ಅಭಂಗ +ಭೀಷ್ಮನು +ಮೆರೆದನ್+ಉನ್ನತ +ಬಾಹುವಿಕ್ರಮವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಂಗವಿಸಿ ಮರಿಹುಲ್ಲೆ ಖುರದಲಿ ಸಿಂಗವನು ಹೊಯ್ವಂತೆ
(೨) ಸಾಯಿಸಿದನು ಎಂದು ಹೇಳಲು – ದಿವಿಜಾಂಗನಾ ಕಾಮುಕರ ಮಾಡಿಯಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ

ಪದ್ಯ ೧೯: ಸೈನ್ಯದ ನಂತರ ಭೀಷ್ಮನೆದುರು ಯಾರು ನಿಂತರು?

ಆಳು ಮುರಿದವು ಮೇಲೆ ಹೊಕ್ಕು ನೃ
ಪಾಲಕರು ಬೊಬ್ಬಿರಿದು ಭೀಷ್ಮನ
ಕೋಲಕೊಳ್ಳಎ ಕೊಂಡು ಹರಿದರು ರಥದ ಹೊರೆಗಾಗಿ
ಆಳುತನದಂಗವಣೆಯೊಳ್ಳಿತು
ಮೇಳವೇ ಬಳಿಕೇನು ಪೃಥ್ವೀ
ಪಾಲರಲ್ಲಾ ಪೂತು ಮಝ ಎನುತೆಚ್ಚನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಸೈನ್ಯವು ಪುಡಿಯಾದ ಮೇಲೆ ರಾಜರು, ಭೀಷ್ಮನ ಬಾಣಗಳನ್ನು ಲೆಕ್ಕಿಸದೆ, ಭೀಷ್ಮನೆದುರಿಗೆ ಬಂದು ನಿಂತರು. ಭೀಷ್ಮನು ನಿಮ್ಮ ಪರಾಕ್ರಮ ಹಿರಿದಾದುದು, ಎಷ್ಟೇ ಆಗಲಿ ನೀವು ರಾಜರಲ್ಲವೇ ಎನ್ನುತ್ತಾ ಅವರ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಆಳು: ಸೈನಿಕ; ಮುರಿ: ಸೀಳು; ಹೊಕ್ಕು: ಸೇರು; ನೃಪಾಲ: ರಾಜ; ಬೊಬ್ಬಿರಿದು: ಅರಚು; ಕೋಲ: ಬಾಣ; ಹರಿ: ಸೀಳು; ರಥ: ಬಂಡಿ; ಹೊರೆ: ರಕ್ಷಣೆ, ಆಶ್ರಯ; ಆಳುತನ: ಪರಾಕ್ರಮ; ಅಂಗವಣೆ: ರೀತಿ, ಬಯಕೆ; ಒಳ್ಳಿತು: ಸರಿಯಾದ; ಮೇಳ: ಗುಂಪು; ಬಳಿಕ: ನಂತರ; ಪೃಥ್ವೀಪಾಲ: ರಾಜ; ಪೃಥ್ವಿ: ಭೂಮಿ; ಪೂತ: ಪುಣ್ಯವಂತ; ಮಝ: ಭಲೇ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಆಳು+ ಮುರಿದವು +ಮೇಲೆ +ಹೊಕ್ಕು +ನೃ
ಪಾಲಕರು+ ಬೊಬ್ಬಿರಿದು +ಭೀಷ್ಮನ
ಕೋಲಕೊಳ್ಳದೆ+ ಕೊಂಡು+ ಹರಿದರು +ರಥದ +ಹೊರೆಗಾಗಿ
ಆಳುತನದ್+ಅಂಗವಣೆ+ಒಳ್ಳಿತು
ಮೇಳವೇ +ಬಳಿಕೇನು +ಪೃಥ್ವೀ
ಪಾಲರಲ್ಲಾ +ಪೂತು +ಮಝ +ಎನುತ್+ಎಚ್ಚನಾ +ಭೀಷ್ಮ

ಅಚ್ಚರಿ:
(೧) ನೃಪಾಲ, ಪೃಥ್ವೀಪಾಲ – ಸಮಾನಾರ್ಥಕ ಪದ

ಪದ್ಯ ೨: ಶಿವನು ಅರ್ಜುನನನ್ನು ಏನು ಕೇಳಿದನು?

ಎನಲು ನಕ್ಕನು ಶಂಭು ಭಕ್ತನ
ಮನದ ಧೃತಿಯನು ಬಲವನಾ
ತನ ಪರಾಕ್ರಮ ಲಕ್ಷ್ಮಿಯನು ಪಾರ್ವತಿಗೆ ತೋರಿಸುತ
ನೆನೆದು ನುಡಿದನಿದೇನು ತಮ್ಮಡಿ
ನಿನಗೆ ತಪದಲಿ ಖಡ್ಗವೇಕೀ
ಧನುಶರಾವಳಿಯೇಕೆ ನಿನ್ನಂಗವಣೆಯೇನೆಂದ (ಅರಣ್ಯ ಪರ್ವ, ೭ ಸಂಧಿ, ೨ ಪದ್ಯ)

ತಾತ್ಪರ್ಯ:
ಅರ್ಜುನನ ಮಾತುಗಳನ್ನು ಕೇಳಿ ಶಿವನು ನಕ್ಕನು, ಅವನ ಧೈರ್ಯ, ಬಲ, ಪರಾಕ್ರಮಗಳನ್ನು ಮೆಚ್ಚಿ ಅವನ್ನು ಪಾರ್ವತಿಗೆ ತೋರಿಸಿದನು. ನಂತರ ಎಲೇ ಋಷಿಯೇ ತಪಸ್ಸು ಮಾಡುವ ನಿನಗೆ ಕತ್ತಿ, ಬಿಲ್ಲು ಬಾಣಗಳೇಕೆ? ಇವನ್ನು ಧರಿಸುವ ಅಭಿಪ್ರಾಯವಾದರೂ ಏನು ಎಂದು ಕೇಳಿದನು.

ಅರ್ಥ:
ಎನಲು: ಹೀಗೆ ಹೇಳಲು, ನಕ್ಕು: ಸಂತೋಷಿಸಿ; ಶಂಭು: ಶಂಕರ; ಭಕ್ತ: ಆರಾಧಕ; ಮನ: ಮನಸ್ಸು; ಧೃತಿ: ಧೈರ್ಯ, ಧೀರತನ; ಬಲ: ಶಕ್ತಿ; ಪರಾಕ್ರಮ: ಶೂರತ್ವ; ಲಕ್ಷ್ಮಿ: ಐಶ್ವರ್ಯ, ಸಿರಿ; ತೋರು: ಪ್ರದರ್ಶಿಸು, ಕಾಣು; ನೆನೆ: ಮನಸ್ಸಿನಲ್ಲಿ ಜ್ಞಾಪಿಸು; ನುಡಿ: ಮಾತಾಡು; ತಮ್ಮಡಿ: ನಿಮ್ಮ ಪಾದ; ತಪ: ತಪಸ್ಸು; ಖಡ್ಗ: ಕತ್ತಿ; ಧನು: ಬಿಲ್ಲು; ಶರಾವಳಿ: ಬಾಣಗಳು; ಅಂಗವಣೆ: ರೀತಿ, ಬಯಕೆ;

ಪದವಿಂಗಡಣೆ:
ಎನಲು +ನಕ್ಕನು +ಶಂಭು +ಭಕ್ತನ
ಮನದ+ ಧೃತಿಯನು +ಬಲವನ್+ಆ
ತನ+ ಪರಾಕ್ರಮ ಲಕ್ಷ್ಮಿಯನು +ಪಾರ್ವತಿಗೆ +ತೋರಿಸುತ
ನೆನೆದು +ನುಡಿದನ್+ಇದೇನು +ತಮ್ಮಡಿ
ನಿನಗೆ +ತಪದಲಿ +ಖಡ್ಗವೇಕ್+ಈ+
ಧನು+ಶರಾವಳಿ+ಏಕೆ+ ನಿನ್+ಅಂಗವಣೆ+ಏನೆಂದ

ಅಚ್ಚರಿ:
(೧) ಅರ್ಜುನನ ಶಕ್ತಿಯ ವಿವರ – ಭಕ್ತನ ಮನದ ಧೃತಿಯನು ಬಲವನಾತನ ಪರಾಕ್ರಮ ಲಕ್ಷ್ಮಿಯನು ಪಾರ್ವತಿಗೆ ತೋರಿಸುತ

ಪದ್ಯ ೨೬: ಪರಮೇಶ್ವರನು ಮುನಿಗಳಿಗೆ ಏನು ಹೇಳಿದನು?

ಅರಿದೆ ನಾನಂಜದಿರಿ ಹುಯ್ಯಲ
ಬರಿದೆ ತಂದಿರಿ ನಿಮ್ಮ ಗೆಲವಿಂ
ಗೆರಗುವವನವನಲ್ಲ ಬೇರಿಹುದಾತನಂಗವಣೆ
ಅರುಹಲೇಕೆ ಭವತ್ತಪೋವನ
ನೆರೆ ನಿಮಗೆ ನಾನವನನೆಬ್ಬಿಸಿ
ತೆರಹ ಮಾಡಿಸಿ ಕೊಡುವೆನೆಂದನು ನಗುತ ಶಶಿಮೌಳಿ (ಅರಣ್ಯ ಪರ್ವ, ೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ಶಿವನು ಮುನಿಗಳಿಗೆ, ಅವನಾರೆಂದು ತಿಳಿಯಿತು. ನೀವು ಹೆದರಬೇಡಿ, ನಿಮ್ಮ ತಪಸ್ಸನ್ನು ನಿರ್ವಿಘ್ನವಾಗಿ ಮಾಡಬಿಡುವವನು ಅವನಲ್ಲ. ಅವನ ರೀತಿಯೇ ಬೇರೆ. ಹೆಚ್ಚೇನು ಹೇಳಲಿ, ನಿಮ್ಮ ತಪೋವನದಲ್ಲಿಯೇ ನೀವು ತಪಸ್ಸು ಮಾಡಿರಿ, ನಾನು ಅವನನ್ನೆಬ್ಬಿಸಿ ತಪೋಭೂಮಿಯನ್ನು ನಿಮಗೆ ತೆರವು ಮಾಡಿಸಿಕೊಡುತ್ತೇನೆ ಎಂದು ಹೇಳಿದನು.

ಅರ್ಥ:
ಅರಿ: ತಿಳಿ; ಅಂಜು: ಹೆದರು; ಹುಯ್ಯಲು: ಪೆಟ್ಟು, ಹೊಡೆತ; ಬರಿ: ಸುಮ್ಮನೆ, ಕೇವಲ; ಗೆಲವು: ಜಯ; ಎರಗು: ಬೀಳು, ನಮಸ್ಕರಿಸು; ಬೇರೆ: ಅನ್ಯ; ಅಂಗವಣೆ: ರೀತಿ, ವಿಧಾನ; ಅರುಹ: ಅರ್ಹ; ಭವತ್: ನಿಮ್ಮ; ತಪೋವನ: ತಪಸ್ಸು ಮಾಡುವ ಸ್ಥಳ; ನೆರೆ: ಪಕ್ಕ; ಎಬ್ಬಿಸು: ಮೇಲೇಳಿಸು; ತೆರವು: ಖಾಲಿ,ಬರಿದಾದುದು; ಕೊಡು: ನೀಡು; ನಗು: ಸಂತಸ; ಶಶಿ: ಚಂದ್ರ; ಮೌಳಿ: ಶಿರ; ಶಶಿಮೌಳಿ: ಶಂಕರ;

ಪದವಿಂಗಡಣೆ:
ಅರಿದೆ +ನಾನ್+ಅಂಜದಿರಿ+ ಹುಯ್ಯಲ
ಬರಿದೆ +ತಂದಿರಿ+ ನಿಮ್ಮ +ಗೆಲವಿಂಗ್
ಎರಗುವವನವನಲ್ಲ+ ಬೇರಿಹುದ್+ಆತನ್+ಅಂಗವಣೆ
ಅರುಹಲೇಕೆ +ಭವತ್+ತಪೋವನ
ನೆರೆ +ನಿಮಗೆ +ನಾನ್+ಅವನನ್+ಎಬ್ಬಿಸಿ
ತೆರಹ +ಮಾಡಿಸಿ +ಕೊಡುವೆನ್+ಎಂದನು +ನಗುತ +ಶಶಿಮೌಳಿ

ಅಚ್ಚರಿ:
(೧) ಅರ್ಜುನನ ಸಾಮರ್ಥ್ಯವನ್ನು ಹೇಳುವ ಪರಿ – ನಿಮ್ಮ ಗೆಲವಿಂಗೆರಗುವವನವನಲ್ಲ ಬೇರಿಹುದಾತನಂಗವಣೆ

ಪದ್ಯ ೩೦: ಉತ್ತರನು ಉತ್ತರೆಗೆ ಏನು ಹೇಳಿದನು?

ತಂಗಿ ಹೇಳೌ ತಾಯೆ ನಿನಗೀ
ಸಂಗತಿಯನಾರರುಹಿದರು ಬಳಿ
ಕಂಗವಣೆಯುಳ್ಳವನೆ ಸಾರಥಿತನದ ಕೈಮೆಯಲಿ
ಮಂಗಳವಲಾ ಬಳಿಕರಣದೊಳ
ಭಂಗನಹೆ ನಿನ್ನಾಣೆ ತನ್ನಯ
ತುಂಗ ವಿಕ್ರಮತನವನುಳುಹಿದೆ ಹೇಳು ಹೇಳೆಂದ (ವಿರಾಟ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸಾರಥಿಯು ಸಿಕ್ಕಿದನು ಎಂದು ಹೇಳಿದ ಬಳಿಕ ಉತ್ತರನು, “ತಂಗೀ ಸಾರಥಿಯ ವಿಷಯವನ್ನು ನಿನಗೆ ಯಾರು ಹೇಳಿದರು? ಅವನಿಗೆ ಸಾರಥಿತನದಲ್ಲಿ ಕುಶಲತೆಯಿದೆಯೇ? ಬಹಳ ಒಳ್ಳೆಯದಾಯಿತು, ಯುದ್ಧದಲ್ಲಿ ನಿನ್ನಾಣೆ ಗೆದ್ದು ಬರುತ್ತೇನೆ, ನನ್ನ ಪರಾಕ್ರಮವನ್ನು ನೀನು ಉಳಿಸಿದೆ” ಎಂದನು.

ಅರ್ಥ:
ತಂಗಿ: ಸೋದರಿ; ಹೇಳು: ತಿಳಿಸು; ತಾಯೆ: ಮಾತೆ; ಸಂಗತಿ: ವಿಚಾರ; ಅರುಹು: ಹೇಳು; ಬಳಿಕ: ನಂತರ; ಕೈಮೆ: ಕೆಲಸ, ಕಾರ್ಯ; ಸಾರಥಿ: ಗಾಡಿ ಓಡಿಸುವ; ಮಂಗಳ: ಒಳ್ಳೆಯ; ರಣ: ಯುದ್ಧ; ಭಂಗ: ನಾಶ;ಆಣೆ: ಪ್ರತಿಜ್ಞೆ; ತುಂಗ: ಉನ್ನತವಾದ; ವಿಕ್ರಮ:ಶೌರ್ಯ; ಅಳುವು: ಶಕ್ತಿ;ಆಂಗವಣೆ: ಉದ್ದೇಶ;

ಪದವಿಂಗಡಣೆ:
ತಂಗಿ+ ಹೇಳೌ +ತಾಯೆ +ನಿನಗ್}ಈ
ಸಂಗತಿಯನ್+ಆರ್+ಅರುಹಿದರು +ಬಳಿಕ್
ಅಂಗವಣೆ+ಯುಳ್ಳವನೆ+ ಸಾರಥಿತನದ+ ಕೈಮೆಯಲಿ
ಮಂಗಳವಲಾ +ಬಳಿಕ+ರಣದೊಳ
ಭಂಗನಹೆ +ನಿನ್ನಾಣೆ +ತನ್ನಯ
ತುಂಗ +ವಿಕ್ರಮ+ತನವನ್+ಅಳುಹಿದೆ+ ಹೇಳು +ಹೇಳೆಂದ

ಅಚ್ಚರಿ:
(೧) ತನ್ನ ಭಯವನ್ನು ಒಳಗೇ ತೋರಿಸುವ ಪರಿ – ತಂಗೀ ತಾಯೆ, ಹೇಳು ನಿನಗಾರು ಹೇಳಿದರು – ತಂಗಿ ಹೇಳೌ ತಾಯೆ ನಿನಗೀ ಸಂಗತಿಯನಾರರುಹಿದರು