ಪದ್ಯ ೨: ಬಲರಾಮನು ಯಾರ ಜೊತೆ ಮಾತನಾಡಿದನು?

ಇಳಿದು ಗಜಹಯರಥವ ಸುಭಟಾ
ವಳಿ ಕೃತಾಂಜಲಿ ನೊಸಲೊಳಿರೆ ಕೆಲ
ಬಲಕೆ ಸಾರ್ದರು ನೋಡಿದನು ಪಾಂಡವ ಪತಾಕಿನಿಯ
ಉಳಿದುದೀಚೆಯಲೀಸು ಬಲವಿವ
ನುಳಿದನೊಬ್ಬನೆ ದೈವಗತಿಗಾ
ರಳಲಿ ಮಾಡುವುದೇನೆನುತ ನುಡಿಸಿದನು ಕುರುಪತಿಯ (ಗದಾ ಪರ್ವ, ೬ ಸಂಧಿ, ೨ ಪದ್ಯ)

ತಾತ್ಪರ್ಯ:
ಪಾಂಡವ ಸೇನೆಯ ಯೋಧರು ತಮ್ಮ ಕುದುರೆ ಆನೆ ರಥಗಳನ್ನಿಳಿದು ಅಂಜಲಿಯನ್ನು ಹಣೆಯಲ್ಲಿಟ್ಟು ಅಕ್ಕಪಕ್ಕದಲ್ಲಿ ನಿಂತಿರಲು, ಬಲರಾಮನು ಆ ಸೈನ್ಯವನ್ನು ನೋಡಿ, ಅವರ ಕಡೆ ಇಷ್ಟು ಸೈನ್ಯವುಳಿದಿದೆ, ಇತ್ತ ಇವನೊಬ್ಬನೇ ಉಳಿದಿದ್ದಾನೆ, ದೈವಗತಿ ಹೀಗಿರಲು ಯಾರು ದುಃಖಿಸಿ ಮಾಡುವುದೇನು ಎಂದು ಚಿಂತಿಸಿ ಕೌರವನನ್ನು ಮಾತನಾಡಿಸಿದನು.

ಅರ್ಥ:
ಇಳಿ: ಕೆಳಕ್ಕೆ ಬಂದು; ಗಜ: ಆನೆ; ಹಯ: ಕುದುರೆ; ಭಟಾವಳಿ: ಸೈನಿಕರ ಗುಂಪು; ಕೃತಾಂಜಲಿ: ಮುಗಿದ ಕೈ; ನೊಸಲು: ಹಣೆ; ಕೆಲಬಲ: ಅಕ್ಕಪಕ್ಕ; ಸಾರ್ದು: ಹರಡು; ನೋಡಿ: ವೀಕ್ಷಿಸಿ; ಪತಾಕಿನಿ: ಸೈನ್ಯ; ಉಳಿದ: ಮಿಕ್ಕ; ಈಚೆ: ಹೊರಗೆ; ಈಸು: ಇಷ್ಟು; ಬಲ: ಶಕ್ತಿ; ಉಳಿದ: ಮಿಕ್ಕ; ದೈವ: ಭಗವಂತ; ನುಡಿಸು: ಮಾತನಾಡಿಸು;

ಪದವಿಂಗಡಣೆ:
ಇಳಿದು+ ಗಜಹಯ+ರಥವ +ಸುಭಟಾ
ವಳಿ+ ಕೃತಾಂಜಲಿ +ನೊಸಲೊಳ್+ಇರೆ +ಕೆಲ
ಬಲಕೆ+ ಸಾರ್ದರು+ ನೋಡಿದನು +ಪಾಂಡವ +ಪತಾಕಿನಿಯ
ಉಳಿದುದ್+ಈಚೆಯಲ್+ಈಸು +ಬಲವಿವನ್
ಉಳಿದನ್+ಒಬ್ಬನೆ+ ದೈವಗತಿಗ್+ಆರ್
ಅಳಲಿ+ ಮಾಡುವುದೇನ್+ಎನುತ +ನುಡಿಸಿದನು +ಕುರುಪತಿಯ

ಅಚ್ಚರಿ:
(೧) ಇಳಿ, ಉಳಿ, ಭಟಾವಳಿ – ಪ್ರಾಸ ಪದಗಳು

ಪದ್ಯ ೧: ಬಲರಾಮನಿಗೆ ಯಾರು ನಮಸ್ಕರಿಸಿದರು?

ಕೇಳು ಧೃತರಾಷ್ಟ್ರವನಿಪ ಸಿರಿ
ಲೋಲ ಸಹಿತ ಯುಧಿಷ್ಠಿರಾದಿ ನೃ
ಪಾಲಕರು ಕಾಣಿಕೆಯನಿತ್ತರು ನಮಿಸಿ ಹಲಧರಗೆ
ಮೇಲುದುಗುಡದ ಮುಖದ ನೀರೊರೆ
ವಾಲಿಗಳ ಕಕ್ಷದ ಗದೆಯ ಭೂ
ಪಾಲ ಬಂದನು ನೊಸಲ ಚಾಚಿದನವರ ಚರಣದಲಿ (ಗದಾ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರ ಕೇಳು, ಧರ್ಮಜನೇ ಮೊದಲಾದ ರಾಜರು ಶ್ರೀಕೃಷ್ಣನೊಡನೆ ಬಲರಾಮನಿಗೆ ವಂದಿಸಿ ಕಾಣಿಕೆಯನ್ನು ನೀಡಿದರು. ದುರ್ಯೋಧನನ ಅಪಾರ ದುಃಖವು ಅವನ ಕಣ್ಣಿನ ಕೊನೆಯಲ್ಲಿ ತುಂಬಿದ ನೀರಿನಿಂದ ಹೊರಹೊಮ್ಮುತ್ತಿತ್ತು. ಬಗಲಿನಲ್ಲಿ ಗದೆಯನ್ನಿಟ್ಟುಕೊಂಡು ಅವನು ಬಲರಾಮನ ಪಾದಗಳಿಗೆ ಹಣೆಯನ್ನು ಚಾಚಿದನು.

ಅರ್ಥ:
ಅವನಿಪ: ರಾಜ; ಸಿರಿಲೋಲ: ಲಕ್ಷ್ಮಿಯ ಪ್ರಿಯಕರ (ಕೃಷ್ಣ); ಸಹಿತ: ಜೊತೆ; ಆದಿ: ಮುಂತಾದ; ನೃಪಾಲ: ರಾಜ; ಕಾಣಿಕೆ: ಉಡುಗೊರೆ; ನಮಿಸು: ಎರಗು; ಹಲಧರ: ಹಲವನ್ನು ಹಿಡಿದವ (ಬಲರಾಮ); ದುಗುಡ: ದುಃಖ; ಮೇಲುದುಗುಡ: ತುಂಬಾ ದುಃಖ; ಮುಖ: ಆನನ; ನೀರು: ಜಲ; ಒರೆವಾಲಿ: ಕಣ್ಣಿನ ಕೊನೆ; ಕಕ್ಷ: ಕಂಕಳು; ಗದೆ: ಮುದ್ಗರ; ಭೂಪಾಲ: ರಾಜ; ಬಂದು: ಆಗಮಿಸು; ನೊಸಲ: ಹಣೆ; ಚಾಚು: ಹರಡು; ಚರಣ: ಪಾದ;

ಪದವಿಂಗಡಣೆ:
ಕೇಳು+ ಧೃತರಾಷ್ಟ್ರ +ಅವನಿಪ +ಸಿರಿ
ಲೋಲ +ಸಹಿತ +ಯುಧಿಷ್ಠಿರಾದಿ+ ನೃ
ಪಾಲಕರು+ ಕಾಣಿಕೆಯನಿತ್ತರು+ ನಮಿಸಿ+ ಹಲಧರಗೆ
ಮೇಲು+ದುಗುಡದ +ಮುಖದ +ನೀರ್+ಒರೆ
ವಾಲಿಗಳ +ಕಕ್ಷದ+ ಗದೆಯ +ಭೂ
ಪಾಲ +ಬಂದನು +ನೊಸಲ +ಚಾಚಿದನವರ +ಚರಣದಲಿ

ಅಚ್ಚರಿ:
(೧) ಅವನಿಪ, ಭೂಪಾಲ, ನೃಪಾಲ – ಸಮಾನಾರ್ಥಕ ಪದ
(೨) ದುಃಖವನ್ನು ವಿವರಿಸುವ ಪರಿ – ಮೇಲುದುಗುಡದ ಮುಖದ ನೀರೊರೆವಾಲಿಗಳ

ಪದ್ಯ ೫೭: ಕೌರವನ ಮುಖವೇಕೆ ಅರಳಿತು?

ಆ ನಿಖಿಳ ಪರಿವಾರದನುಸಂ
ಧಾನ ದೃಷ್ಟಿಗಳತ್ತ ತಿರುಗಿದ
ವೇನನೆಂಬೆನು ಮುಸಲಧರನಾಗಮನ ಸಂಗತಿಯ
ಈ ನರೇಂದ್ರನ ಸುಮುಖತೆಯ ಸು
ಮ್ಮಾನ ಹೊಳೆದುದು ಭಯದಿ ಕುಂತೀ
ಸೂನುಗಳು ಮರೆಗೊಳುತಲಿರ್ದುದು ವೀರನರಯಣನ (ಗದಾ ಪರ್ವ, ೫ ಸಂಧಿ, ೫೭ ಪದ್ಯ)

ತಾತ್ಪರ್ಯ:
ಸೇನಾ ಪರಿವಾರದ ದೃಷ್ಟಿಗಳು ಬಲರಾಮನತ್ತ ತಿರುಗಿದವು. ಅವನ ಆಗಮನದಿಂದ ಕೌರವನ ಮುಖವರಳಿತು. ಪಾಂಡವರು ಭಯದಿಂದ ವೀರನಾರಾಯಣನ ಆಶ್ರಯಕ್ಕೆ ಬಂದರು.

ಅರ್ಥ:
ನಿಖಿಳ: ಎಲ್ಲಾ; ಪರಿವಾರ: ಬಂಧುಜನ; ಅನುಸಂಧಾನ: ಪರಿಶೀಲನೆ, ಪ್ರಯೋಗ; ದೃಷ್ಟಿ: ನೋಟ; ತಿರುಗು: ಸುತ್ತು; ಮುಸಲ: ಗದೆ; ಧರ: ಧರಿಸು; ಆಗಮನ: ಬಂದು; ಸಂಗತಿ: ಜೊತೆ, ಸಂಗಡ; ನರೇಂದ್ರ: ಇಂದ್ರ; ಮುಖ: ಆನನ; ಸುಮ್ಮಾನ: ಸಂತಸ; ಹೊಳೆ: ಪ್ರಕಾಶ; ಭಯ: ಅಂಜಿಕೆ; ಸೂನು: ಮಗ; ಮರೆ: ಅವಿತುಕೋ;

ಪದವಿಂಗಡಣೆ:
ಆ +ನಿಖಿಳ +ಪರಿವಾರದ್+ಅನುಸಂ
ಧಾನ +ದೃಷ್ಟಿಗಳತ್ತ+ ತಿರುಗಿದವ್
ಏನನೆಂಬೆನು +ಮುಸಲಧರನ್+ಆಗಮನ +ಸಂಗತಿಯ
ಈ +ನರೇಂದ್ರನ+ ಸುಮುಖತೆಯ +ಸು
ಮ್ಮಾನ +ಹೊಳೆದುದು +ಭಯದಿ +ಕುಂತೀ
ಸೂನುಗಳು +ಮರೆಗೊಳುತಲಿರ್ದುದು+ ವೀರನರಯಣನ

ಅಚ್ಚರಿ:
(೧) ಬಲರಾಮನನ್ನು ಮುಸಲಧರ ಎಂದು ಕರೆದಿರುವುದು
(೨) ಸುಮುಖತೆ, ಸುಮ್ಮಾನ, ಸೂನು – ಸು ಕಾರದ ಪದಗಳ ಬಳಕೆ

ಪದ್ಯ ೫೬: ಯುದ್ಧವನ್ನು ನೋಡಲು ಯಾರು ಬಂದರು?

ಅರಸ ಕೇಳಿವರಿಬ್ಬರುಬ್ಬಿನ
ಧುರದ ಥಟ್ಟಣೆ ಪಸರಿಸಿತು ಸುರ
ನರರನಾ ಸಮಯದಲಿ ಪೂರ್ವೋತ್ತರದ ದೆಸೆಯಿಂದ
ವರ ಮುನಿಸ್ತೋಮದ ನಡುವೆ ಕಂ
ಧರದ ಮುಸಲದ ವಿಮಳ ನೀಲಾಂ
ಬರದ ರಾಮನ ಸುಳಿವ ಕಂಡರು ಕೃಷ್ಣ ಪಾಂಡವರು (ಗದಾ ಪರ್ವ, ೫ ಸಂಧಿ, ೫೬ ಪದ್ಯ)

ತಾತ್ಪರ್ಯ:
ಇಬ್ಬರ ನಡುವೆ ಯುದ್ಧವು ಜೋರಾಯಿತು. ಇವರ ಯುದ್ಧವನು ದೇವತೆಗಳೂ, ಮನುಷ್ಯರೂ ನಿರೀಕ್ಷಿಸುತ್ತಿರುವ ಸಮಯದಲ್ಲಿ ಈಶಾನ್ಯದಿಕ್ಕಿನೀಂದ ಒನಕೆಯನ್ನು ಭುಜದ ಮೇಲಿಟ್ಟು ನೀಲಾಂಬರವನ್ನು ಧರಿಸಿ ಮುನಿಗಳ ಸಮೂಹದ ನಡುವೆ ಬಲರಾಮನು ಬರುತ್ತಿರುವುದನ್ನು ಕೃಷ್ಣನು ಪಾಂಡವರೂ ಕಂಡರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಉಬ್ಬು: ಹೆಚ್ಚಾಗು; ಉಬ್ಬು: ಕಣ್ಣಿನ ಮೇಲಿನ ರೋಮಾಳಿ; ಧುರ: ಯುದ್ಧ, ಕಾಳಗ; ಥಟ್ಟಣೆ: ಗುಂಪು; ಪಸರಿಸು: ಹರಡು; ಸುರ: ಅಮರ; ನರ: ಮನುಷ್ಯ; ಸಮಯ: ಕಾಲ; ಪೂರ್ವೋತ್ತರ: ಹಿಂದೆ ನಡೆದ; ದೆಸೆ: ದಿಕ್ಕು; ವರ: ಶ್ರೇಷ್ಟ; ಮುನಿ: ಋಷಿ; ಸ್ತೋಮ: ಗುಂಪು; ನಡುವೆ: ಮಧ್ಯ; ಕಂಧರ: ಕೊರಳು; ಮುಸಲ: ಗದೆ; ವಿಮಳ: ನಿರ್ಮಲ; ಅಂಬರ: ಬಟ್ಟೆ; ಸುಳಿ: ಕಾಣಿಸಿಕೊಳ್ಳು;

ಪದವಿಂಗಡಣೆ:
ಅರಸ +ಕೇಳ್+ಇವರಿಬ್ಬರ್+ಉಬ್ಬಿನ
ಧುರದ+ ಥಟ್ಟಣೆ+ ಪಸರಿಸಿತು +ಸುರ
ನರರನ್+ಆ+ ಸಮಯದಲಿ+ ಪೂರ್ವೋತ್ತರದ+ ದೆಸೆಯಿಂದ
ವರ +ಮುನಿಸ್ತೋಮದ+ ನಡುವೆ+ ಕಂ
ಧರದ +ಮುಸಲದ +ವಿಮಳ +ನೀಲಾಂ
ಬರದ +ರಾಮನ +ಸುಳಿವ +ಕಂಡರು +ಕೃಷ್ಣ+ ಪಾಂಡವರು

ಅಚ್ಚರಿ:
(೧) ಬಲರಾಮನ ವಿವರಣೆ – ವರ ಮುನಿಸ್ತೋಮದ ನಡುವೆ ಕಂಧರದ ಮುಸಲದ ವಿಮಳ ನೀಲಾಂ
ಬರದ ರಾಮನ

ಪದ್ಯ ೫೫: ಭೀಮ ದುರ್ಯೋಧನರು ತಮ್ಮ ಹಗೆಯನ್ನು ಹೇಗೆ ವ್ಯಕ್ತಪಡಿಸಿದರು?

ಚಟುಳತರ ಭಾರಂಕದಂಕದ
ಭಟರು ತರುಬಿದರುಬ್ಬೆಯಲಿ ಲಟ
ಕಟಿಸಿದವು ಕಣ್ಣಾಲಿ ಬದ್ಧಭ್ರುಕುಟಿಭಂಗದಲಿ
ಕಟುವಚನ ವಿಕ್ಷೇಪರೋಷ
ಸ್ಫುಟನವೇಲ್ಲಿತವಾಕ್ಯಭಂಗೀ
ಘಟನ ವಿಘಟನದಿಂದ ಮೂದಲಿಸಿದರು ಮುಳಿಸಿನಲಿ (ಗದಾ ಪರ್ವ, ೫ ಸಂಧಿ, ೫೫ ಪದ್ಯ)

ತಾತ್ಪರ್ಯ:
ಘೋರವಾದ ಅತಿವೇಗದ ವೀರರಿಬ್ಬರೂ ಒಬ್ಬರನ್ನೊಬ್ಬರು ತರುಬಿ ನಿಂತರು. ಕಣ್ಣಾಲಿಗಳು ನೆಟ್ಟನೋಟದಿಂದ ಲಟಕಟಿಸಿದವು. ಕತುವಚನಗಳಿಂದ ಒಬ್ಬರನ್ನೊಬ್ಬರು ನಿಂದಿಸಿ ರೋಷವನ್ನು ವ್ಯಕ್ತಪಡಿಸಿದರು. ಸಿಟ್ಟಿನಿಂದ ಒಬ್ಬರನ್ನೊಬ್ಬರು ಮೂದಲಿಸಿದರು.

ಅರ್ಥ:
ಚತುಳ: ಚಟುವಟಿಕೆ, ಲವಲವಿಕೆ; ಭಾರಂಕ: ಮಹಾಯುದ್ಧ; ಭಟ: ಸೈನಿಕ; ತರುಬು: ಎದುರಿಸು, ಅಡ್ಡಹಾಕು; ಉಬ್ಬೆ: ಹೆಚ್ಚಳ; ಲಟಕಟ: ಉದ್ರೇಕಗೊಳ್ಳು; ಕಣ್ಣು: ನಯನ; ಕಣ್ಣಾಲಿ: ಕಣ್ಣಿನ ಕೊನೆ, ಓರೆ ಕಣ್ಣು; ಬದ್ಧ: ಕಟ್ಟಿದ, ಬಿಗಿದ; ಭ್ರುಕುಟಿ: ಹುಬ್ಬು; ಭಂಗ: ಮುರಿ; ಕಟುವಚನ: ಒರಟು ಮಾತು; ವಿಕ್ಷೇಪ: ಇಡಲ್ಪಟ್ಟಿದ್ದು; ರೋಷ: ಕೋಪ; ಸ್ಫುಟ: ಸ್ಪಷ್ಟವಾದ; ಘಟ: ಶರೀರ; ವಿಘಟನ: ಬೇರೆ ಮಾಡು; ಮೂದಲಿಸು: ಹಂಗಿಸು; ಮುಳಿಸು: ಕೋಪ;

ಪದವಿಂಗಡಣೆ:
ಚಟುಳತರ +ಭಾರಂಕದ್+ಅಂಕದ
ಭಟರು +ತರುಬಿದರ್+ಉಬ್ಬೆಯಲಿ+ ಲಟ
ಕಟಿಸಿದವು +ಕಣ್ಣಾಲಿ +ಬದ್ಧ+ಭ್ರುಕುಟಿ+ಭಂಗದಲಿ
ಕಟುವಚನ +ವಿಕ್ಷೇಪ+ರೋಷ
ಸ್ಫುಟನವೇಲ್ಲಿತ+ವಾಕ್ಯಭಂಗೀ
ಘಟನ +ವಿಘಟನದಿಂದ +ಮೂದಲಿಸಿದರು +ಮುಳಿಸಿನಲಿ

ಅಚ್ಚರಿ:
(೧) ಪದಗಳ ರಚನೆ – ಘಟನ ವಿಘಟನದಿಂದ
(೨) ಮ ಕಾರದ ಜೋಡಿ ಪದ – ಮೂದಲಿಸಿದರು ಮುಳಿಸಿನಲಿ