ಪದ್ಯ ೨೦: ನಿನ್ನದೆಂಥ ಜೀವನವೆಂದು ಧರ್ಮಜನೇಕೆ ಹಂಗಿಸಿದನು?

ಜೀವಸಖ ರಾಧೇಯನಾತನ
ಸಾವಿನಲಿ ನೀನುಳಿದೆ ಸೋದರ
ಮಾವ ಶಕುನಿಯ ಸೈಂಧವನ ದುಶ್ಯಾಸನಾದಿಗಳ
ಸಾವಿನಲಿ ಹಿಂದುಳಿದ ಜೀವನ
ಜೀವನವೆ ಜೀವನನಿವಾಸವಿ
ದಾವ ಗರುವಿಕೆ ಕೊಳನ ಹೊರವಡು ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ನಿನ್ನ ಪ್ರಾಣ ಸ್ನೇಹಿತನಾದ ಕರ್ಣನು ಸತ್ತರೂ, ನೀನು ಬದುಕಿರುವೆ, ನಿನ್ನ ಸೋದರಮಾವ ಶಕುನಿ, ಮೈದುನ ಸೈಂಧವ, ತಮ್ಮ ದುಶ್ಯಾಸನ ಇವರೆಲ್ಲ ಸತ್ತರೂ ನೀನು ಬದುಕಿರುವೆ ಇಂತಹ ಜೀವನವು ಒಂದು ಜೀವನವೇ? ಇದೆಂಥ ಸ್ವಾಭಿಮಾನ ಹೀನತೆ? ಕೊಳವನ್ನು ಬಿಟ್ಟು ಹೊರಬಂದು ಆಯುಧವನ್ನು ಹಿಡಿ ಎಂದು ಪ್ರಚೋದಿಸಿದನು.

ಅರ್ಥ:
ಜೀವ: ಜೀವನ; ರಾಧೇಯ: ಕರ್ಣ; ಸಾವು: ಮರಣ; ಉಳಿ: ಬದುಕು; ಸೋದರಮಾವ: ತಾಯಿಯ ತಮ್ಮ; ಆದಿ: ಮುಂತಾದ; ನಿವಾಸ: ಆಲಯ; ಗರುವ: ಶ್ರೇಷ್ಠ; ಕೊಳ: ಸರಸಿ; ಹೊರವಡು: ಹೊರಗೆ ಬಾ; ಕೈದು: ಆಯುಧ;

ಪದವಿಂಗಡಣೆ:
ಜೀವಸಖ +ರಾಧೇಯನ್+ಆತನ
ಸಾವಿನಲಿ +ನೀನುಳಿದೆ +ಸೋದರ
ಮಾವ +ಶಕುನಿಯ +ಸೈಂಧವನ+ ದುಶ್ಯಾಸನಾದಿಗಳ
ಸಾವಿನಲಿ +ಹಿಂದುಳಿದ +ಜೀವನ
ಜೀವನವೆ +ಜೀವನ+ನಿವಾಸವ್
ಇದಾವ +ಗರುವಿಕೆ +ಕೊಳನ +ಹೊರವಡು +ಕೈದುಗೊಳ್ಳೆಂದ

ಅಚ್ಚರಿ:
(೧) ಜೀವನ ಪದದ ಬಳಕೆ – ಸಾವಿನಲಿ ಹಿಂದುಳಿದ ಜೀವನ ಜೀವನವೆ ಜೀವನನಿವಾಸವಿದಾವ ಗರುವಿಕೆ

ಪದ್ಯ ೧೯: ಕೌರವನನ್ನು ನೋಡಿ ಹೆಂಗಸರೇಕೆ ನಗುವರು?

ಅಡವಿಯೇ ನೆಲೆ ಪಾಂಡುಸುತರಿಗೆ
ಕೊಡೆನು ಧರಣಿಯನೆಂದುಖಡುಗವ
ಜಡಿದೆಲಾ ನಿನ್ನೋಲಗದ ನಾರಿಯರ ಸಮ್ಮುಖದಿ
ಖಡುಗವನು ಕಳನೊಳಗೆ ಹಾಯಿಕಿ
ನಡುಗೊಳನ ನೀನೋಡಿ ಹೊಕ್ಕಡೆ
ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ (ಗದಾ ಪರ್ವ, ೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಂದು ನಿನ್ನ ಆಸ್ಥಾನದಲ್ಲಿ ಇದ್ದ ಸ್ತ್ರೀಯರ ಸಮ್ಮುಖದಲ್ಲಿ ಪಾಂಡವರಿಗೆ ಭೂಮಿಯನ್ನು ಕೊಡುವುದಿಲ್ಲ, ಅವರಿಗೆ ಕಾಡೇಗತಿ ಎಂದು ಘೋಷಿಸಿ ಖಡ್ಗವನ್ನು ಹಿರಿದೆಯಲ್ಲವೇ? ಆ ಖಡ್ಗವನ್ನು ರಣಭೂಮಿಯಲ್ಲೆಸೆದು ಓಡಿಬಂದು ಕೊಳದ ಮಧ್ಯದಲ್ಲಿ ಅವಿತುಕೊಂಡರೆ, ಆ ಹೆಣ್ಣುಮಕ್ಕಳು ಕೈ ತಟ್ಟಿ ನಗುವುದಿಲ್ಲವೇ ಎಂದು ಧರ್ಮಜನು ಹಂಗಿಸಿದನು.

ಅರ್ಥ:
ಅಡವಿ: ಕಾಡು; ನೆಲೆ: ಭೂಮಿ; ಸುತ: ಮಕ್ಕಳು; ಕೊಡೆ: ನೀಡುವುದಿಲ್ಲ; ಧರಣಿ: ಭೂಮಿ; ಖಡುಗ: ಕತ್ತಿ; ಜಡಿ: ಬೀಸು; ಓಲಗ: ದರ್ಬಾರು; ನಾರಿ: ಸ್ತ್ರೀ; ಸಮ್ಮುಖ: ಎದುರು; ಕಳ: ರಣರಂಗ; ಹಾಯಿಕು: ಹಾಕು, ಬಿಸಾಡು; ನಡು: ಮಧ್ಯ; ಕೊಳ: ಸರಸಿ; ಓಡು: ಧಾವಿಸು; ಹೊಕ್ಕು: ಸೇರು; ಮಡದಿ: ಹೆಂಡತಿ; ನಗು: ಹರ್ಷಿಸು; ಹೊಯ್ದು: ಹೊಡೆ; ಕರತಳ: ಹಸ್ತ, ಕೈ;

ಪದವಿಂಗಡಣೆ:
ಅಡವಿಯೇ +ನೆಲೆ +ಪಾಂಡುಸುತರಿಗೆ
ಕೊಡೆನು+ ಧರಣಿಯನೆಂದು+ಖಡುಗವ
ಜಡಿದೆಲಾ +ನಿನ್ನೋಲಗದ +ನಾರಿಯರ +ಸಮ್ಮುಖದಿ
ಖಡುಗವನು +ಕಳನೊಳಗೆ +ಹಾಯಿಕಿ
ನಡು+ಕೊಳನ +ನೀನೋಡಿ+ ಹೊಕ್ಕಡೆ
ಮಡದಿಯರು +ತಮತಮಗೆ+ ನಗರೇ+ ಹೊಯ್ದು +ಕರತಳವ

ಅಚ್ಚರಿ:
(೧) ನಾರಿಯರು ನಗುವ ಪರಿ – ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ

ಪದ್ಯ ೧೮: ಕೌರವನನ್ನು ಉತ್ತರನಿಗೆ ಹೋಲಿಸಿ ಹೇಗೆ ಹಂಗಿಸಿದನು?

ಕಂಡೆವಂದೊಬ್ಬನ ಪಲಾಯನ
ಪಂಡಿತನನುತ್ತರನನಾತನ
ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ
ಭಂಡರಿಬ್ಬರು ಭೂಮಿಪರೊಳಾ
ಭಂಡನಿಗೆ ನೀ ಮಿಗಿಲು ಸಲಿಲದ
ಕೊಂಡದಲಿ ಹೊಕ್ಕೆನೆ ವಿರಾಟಜನೆಂದನಾ ಭೂಪ (ಗದಾ ಪರ್ವ, ೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಹಿಂದೆ ಗೋಗ್ರಹಣದಲ್ಲಿ ಉತ್ತರಕುಮಾರನನೆಂಬ ಪಲಾಯನ ಪಂಡಿತನನ್ನು ನೋಡಿದ್ದೇವೆ, ನೀನು ಅವನನ್ನು ಪಲಾಯನ ಸಂಪತ್ತಿನಲ್ಲಿ ಮೀರಿಸಿದೆ. ರಾಜರಲ್ಲಿ ಇಬ್ಬರು ಭಂಡರು. ಆ ಭಂಡನನ್ನು ನೀನು ಮೀರಿಸಿದೆ. ಉತ್ತರನು ಓಡಿಹೋದ, ಅವನೇನು ನಿನ್ನಂತೆ ನೀರನ್ನು ಹೊಕ್ಕನೆ ಎಂದು ಹೇಳಿ ಹಂಗಿಸಿದನು.

ಅರ್ಥ:
ಕಂಡು: ನೋಡು; ಪಲಾಯನ: ಓಡುವಿಕೆ, ಪರಾರಿ; ಪಂಡಿತ: ತಿಳಿದವ, ವಿದ್ವಾಂಸ; ಗಂಡ: ಯಜಮಾನ; ಸಿರಿ: ಐಶ್ವರ್ಯ; ಸೂರೆ: ಲೂಟಿ; ಭಂಡ: ನಾಚಿಕೆ, ಲಜ್ಜೆ; ಭೂಮಿ: ಇಳೆ; ಮಿಗಿಲು: ಹೆಚ್ಚು; ಸಲಿಲ: ಜಲ; ಹೊಕ್ಕು: ಸೇರು; ವಿರಾಟಜ: ಉತ್ತರ (ವಿರಾಟನ ಮಗ); ಭೂಪ: ರಾಜ;

ಪದವಿಂಗಡಣೆ:
ಕಂಡೆವ್+ಅಂದ್+ಒಬ್ಬನ +ಪಲಾಯನ
ಪಂಡಿತನನ್+ಉತ್ತರನನ್+ಆತನ
ಗಂಡ +ನೀನಾದೈ +ಪಲಾಯನ+ಸಿರಿಯ +ಸೂರೆಯಲಿ
ಭಂಡರಿಬ್ಬರು+ ಭೂಮಿಪರೊಳ್+ಆ
ಭಂಡನಿಗೆ +ನೀ +ಮಿಗಿಲು +ಸಲಿಲದ
ಕೊಂಡದಲಿ+ ಹೊಕ್ಕೆನೆ+ ವಿರಾಟಜನೆಂದನಾ +ಭೂಪ

ಅಚ್ಚರಿ:
(೧) ಹೋಲಿಸುವ ಪರಿ – ಪಲಾಯನ ಪಂಡಿತನನುತ್ತರನನಾತನ ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ
(೨) ೨ನೇ ಸಾಲು ಒಂದೇ ಪದವಾಗಿ ರಚನೆ – ಪಂಡಿತನನುತ್ತರನನಾತನ
(೩) ಉತ್ತರಕುಮಾರನನ್ನು – ಉತ್ತರ, ವಿರಾಟಜ ಎಂದು ಕರೆದಿರುವುದು

ಪದ್ಯ ೧೭: ಧರ್ಮಜನು ಸುಯೋಧನನನ್ನು ಹೇಗೆ ಹಂಗಿಸಿದನು?

ಹೇಳಿದರಲಾ ಭೀಷ್ಮವಿದುರರು
ಮೇಲುದಾಯದ ತಾಗುಥಟ್ಟನು
ಕೇಳದಖಿಳಾಕ್ಷೋಹಿಣಿಯ ಕ್ಷತ್ರಿಯರ ತಡೆಗಡಿಸಿ
ಕಾಳೆಗದೊಳೊಟ್ಟೈಸಿ ನೀರೊಳು
ಬೀಳುವುದು ನಿನಗಾರು ಬುದ್ಧಿಯ
ಹೇಳಿದರು ನುಡಿ ನುಡಿ ಸುಯೋಧನ ಎಂದನಾ ಭೂಪ (ಗದಾ ಪರ್ವ, ೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಷ್ಮ, ವಿದುರರು ಮುಂದೇನಾದೀತೆಂಬ ಲೆಕ್ಕವನ್ನು ನಿನಗೆ ಅಂದೇ ಹೇಳಿದರು. ಅದನ್ನು ಕೇಳದೆ ಲೋಕದ ಅಕ್ಷೋಹಿಣಿಯ ಅಧಿಪತಿಗಳಾದ ಕ್ಷತ್ರಿಯರನ್ನು ಯುದ್ಧದಲ್ಲಿ ಕಡಿದೊಟ್ಟಿಸಿ, ನೀರಿನಲ್ಲಿ ಬಿದ್ದು ಮುಳುಗುವುದನ್ನು ಯಾರು ಹೇಳಿಕೊಟ್ಟರ? ಮಾತಾಡು ಮಾತಾಡು ಎಂದು ಧರ್ಮಜನು ಸುಯೋಧನನಿಗೆ ಹೇಳಿದನು.

ಅರ್ಥ:
ಹೇಳು: ತಿಳಿಸು; ಮೇಲುದಾಯ: ಮುಂದಾಗುವ; ತಾಗುಥಟ್ಟು: ಎದುರಿಸುವ ಸೈನ್ಯ; ಕೇಳು: ಆಲಿಸು; ಅಖಿಳ: ಎಲ್ಲಾ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ತಡೆ: ನಿಲ್ಲಿಸು; ಕಾಳೆಗ: ಯುದ್ಧ; ಒಟ್ಟೈಸು: ಕೂಡಿಸು; ನೀರು: ಜಲ; ಬೀಳು: ಎರಗು; ಬುದ್ಧಿ: ತಿಳುವಳಿಕೆ; ನುಡಿ: ಮಾತಾದು; ಭೂಪ: ರಾಜ;

ಪದವಿಂಗಡಣೆ:
ಹೇಳಿದರಲ್+ಆ+ ಭೀಷ್ಮ+ವಿದುರರು
ಮೇಲುದಾಯದ +ತಾಗುಥಟ್ಟನು
ಕೇಳದ್+ಅಖಿಳ+ಅಕ್ಷೋಹಿಣಿಯ +ಕ್ಷತ್ರಿಯರ +ತಡೆಗಡಿಸಿ
ಕಾಳೆಗದೊಳ್+ಒಟ್ಟೈಸಿ +ನೀರೊಳು
ಬೀಳುವುದು +ನಿನಗಾರು +ಬುದ್ಧಿಯ
ಹೇಳಿದರು+ ನುಡಿ+ ನುಡಿ +ಸುಯೋಧನ+ ಎಂದನಾ +ಭೂಪ

ಅಚ್ಚರಿ:
(೧) ಹೇಳಿ – ೧, ೬ ಸಾಲಿನ ಮೊದಲ ಪದ

ಪದ್ಯ ೧೬: ಕೌರವನನ್ನು ಧರ್ಮಜನು ಹೇಗೆ ರೇಗಿಸಿದನು?

ನಾಡೊಳರ್ಧವ ಕೊಡದೆ ಹೋದಡೆ
ಬೇಡಿದೈದೂರುಗಳ ಕೊಡುಯೆನ
ಲೇಡಿಸಿದಲೈ ಸೂಚಿಯಗ್ರಪ್ರಮಿತಧಾರುಣಿಯ
ಕೂಡೆ ನೀ ಕೊಡೆನೆಂದು ದರ್ಪವ
ಮಾಡಿ ಸಕಲ ಮಹೀತಳವ ಹೋ
ಗಾಡಿ ಹೊಕ್ಕೈ ಜಲವನಾವೆಡೆ ನಿನ್ನ ಛಲವೆಂದ (ಗದಾ ಪರ್ವ, ೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ನೀನು ಅರ್ಧ ಭೂಮಿಯನ್ನು ಕೊಡಲಿಲ್ಲ, ಬೇಡ, ಐದು ಊರುಗಳನ್ನು ಕೊಡು ಎಂದರೆ ಅದನ್ನು ಕೊಡದೆ ನಮ್ಮನ್ನು ಲೇವಡಿ ಮಾಡಿದೆ. ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡುವುದಿಲ್ಲವೆಂದು ದರ್ಪವನ್ನು ತೋರಿದೆ. ಈಗ ಸಮಸ್ತ ಭೂಮಿಯನ್ನು ಕಳೆದುಕೊಂಡು ನೀರನ್ನು ಹೊಕ್ಕಿರುವೆ. ಎಲ್ಲಿ ಹೋಯಿತು ನಿನ್ನ ಛಲವೆಂದು ಧರ್ಮಜನು ಕೌರವನನ್ನು ರೇಗಿಸಿದನು.

ಅರ್ಥ:
ನಾಡು: ದೇಶ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಕೊಡು: ನೀಡು; ಬೇಡು: ಕೇಳು; ಊರು: ಗ್ರಾಮ, ಪುರ; ಕೊಡು: ನೀಡು; ಏಡಿಸು: ಅವಹೇಳನ ಮಾಡು, ನಿಂದಿಸು; ಸೂಚಿ: ಸೂಜಿ; ಅಗ್ರ: ತುದಿ; ಪ್ರಮಿತ: ಪ್ರಮಾಣಕ್ಕೆ ಒಳಗಾದುದು; ಧಾರುಣಿ: ಭೂಮಿ; ಕೂಡು: ಜೊತೆಯಾಗು; ಕೊಡೆ: ನೀಡು; ದರ್ಪ: ಅಹಂಕಾರ; ಸಕಲ: ಎಲ್ಲಾ; ಮಹೀತಳ: ಭೂಮಿ; ಹೋಗು: ತೆರಳು; ಹೊಕ್ಕು: ಸೇರು; ಜಲ: ನೀರು; ಛಲ: ದೃಢ ನಿಶ್ಚಯ;

ಪದವಿಂಗಡಣೆ:
ನಾಡೊಳ್+ಅರ್ಧವ +ಕೊಡದೆ +ಹೋದಡೆ
ಬೇಡಿದ್+ಐದೂರುಗಳ +ಕೊಡುಯೆನೆಲ್
ಏಡಿಸಿದಲೈ +ಸೂಚಿ+ಅಗ್ರ+ಪ್ರಮಿತ+ಧಾರುಣಿಯ
ಕೂಡೆ +ನೀ +ಕೊಡೆನೆಂದು+ ದರ್ಪವ
ಮಾಡಿ +ಸಕಲ+ ಮಹೀತಳವ +ಹೋ
ಗಾಡಿ +ಹೊಕ್ಕೈ +ಜಲವನ್+ಆವೆಡೆ +ನಿನ್ನ +ಛಲವೆಂದ

ಅಚ್ಚರಿ:
(೧) ಧಾರುಣಿ, ಮಹೀತಳ, ನಾಡು – ಸಮಾನಾರ್ಥಕ ಪದ

ಪದ್ಯ ೧೫: ಚಂದ್ರವಂಶಕ್ಕೆ ಕೆಟ್ಟ ಹೆಸರೇಕೆ ಬರುತ್ತದೆ?

ಜಾತಿಮಾತ್ರದಮೇಲೆ ಬಂದ
ಖ್ಯಾತಿವಿಖ್ಯಾತಿಗಳು ನಮಗೆನೆ
ಜಾತರಾದೆವು ನಾವು ನಿರ್ಮಳ ಸೋಮವಂಶದಲಿ
ಭೀತಿಯಲಿ ನೀ ನೀರ ಹೊಕ್ಕಡೆ
ಮಾತು ತಾಗದೆ ತಮ್ಮನಕಟಾ
ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ (ಗದಾ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ನಮ್ಮ ಹುಟ್ಟಿನಿಂದ ಬಂದ ಕೀರ್ತಿ ಪ್ರಸಿದ್ಧಿಗಳು ನಮಗೆ ಬೇಕಲ್ಲವೇ? ಹಾಗಾದರೆ ನಾವು ಹುಟ್ಟಿದ್ದು ನಿರ್ಮಲವಾದ ಚಂದ್ರವಂಶದಲ್ಲಿ. ನೀನು ಹೆದರಿ ಓಡಿ ನೀರಿನಲ್ಲಿ ಅಡಗಿಕೋಂಡರೆ ನಮಗೆ ಕೆಟ್ಟ ಹೆಸರು ಬರುವುದಿಲ್ಲವೇ? ನಾಡಾಡಿಗಳ ಕೈಗೆ ಬಾಯಿಗೆ ನೀನು ಗಾಸವಾಗಿ ಕೆಟ್ಟ ಹೆಸರು ಹೊತ್ತುಕೊಂಡಂತಾಗುವುದಿಲ್ಲವೇ ಎಂದು ಧರ್ಮಜನು ಕೌರವನಿಗೆ ಹೇಳಿದನು.

ಅರ್ಥ:
ಜಾತಿ: ಕುಲ; ಬಂದ: ಪಡೆದ; ಖ್ಯಾತಿ: ಪ್ರಸಿದ್ಧಿ; ವಿಖ್ಯಾತಿ: ಪ್ರಸಿದ್ಧಿ, ಕೀರ್ತಿ; ಜಾತ: ಹುಟ್ಟಿದುದು; ನಿರ್ಮಳ: ಶುದ್ಧ; ಸೋಮ: ಚಂದ್ರ; ವಂಶ: ಕುಲ; ಭೀತಿ: ಭಯ; ಹೊಕ್ಕು: ಸೇರು; ಮಾತು: ನುಡಿ; ತಾಗು: ಮುಟ್ಟು; ಅಕಟ: ಅಯ್ಯೋ; ಬೂತು: ಕುಚೋದ್ಯ, ಕುಚೇಷ್ಟೆ; ಬಂದೈ: ಬರೆಮಾಡು; ತಂದೆ: ಅಪ್ಪ; ರಾಯ: ರಾಜ;

ಪದವಿಂಗಡಣೆ:
ಜಾತಿಮಾತ್ರದಮೇಲೆ +ಬಂದ
ಖ್ಯಾತಿ+ವಿಖ್ಯಾತಿಗಳು +ನಮಗ್+ಎನೆ
ಜಾತರಾದೆವು +ನಾವು +ನಿರ್ಮಳ +ಸೋಮ+ವಂಶದಲಿ
ಭೀತಿಯಲಿ +ನೀ +ನೀರ +ಹೊಕ್ಕಡೆ
ಮಾತು +ತಾಗದೆ+ ತಮ್ಮನ್+ಅಕಟಾ
ಬೂತುಗಳ+ ಕೈಬಾಯ್ಗೆ +ಬಂದೈ +ತಂದೆ +ಕುರುರಾಯ

ಅಚ್ಚರಿ:
(೧) ಕೌರವನ ಸ್ಥಿತಿಯನ್ನು ವರ್ಣಿಸುವ ಪರಿ – ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ