ಪದ್ಯ ೪೦: ಅಶ್ವತ್ಥಾಮನು ಯಾವು ವಿಚಾರವನ್ನು ಕೌರವನಿಗೆ ತಿಳಿಸಿದನು?

ಅರಸ ಕೇಳೈ ಸುಕೃತವನು ವಿ
ಸ್ತರಿಸುವೆನು ಪೂರಾಯವೆನೆ ಕಾ
ಹುರದ ನುಡಿ ಬೇಡೇಳು ನಡೆವುದು ಹಸ್ತಿನಾಪುರಿಗೆ
ಅರಿಗಳೈತಂದೌಕಿದಡೆ ಗಜ
ಪುರದ ದುರ್ಗವ ಬಲಿದು ನಿಲುವುದು
ಪರಮಮಂತ್ರವಿದೆಂದನಶ್ವತ್ಥಾಮನವನಿಪನ (ಗದಾ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು, ರಾಜಾ, ನಿನ್ನ ಪುಣ್ಯವನ್ನು ಅರೆಬರೆಯಾಗಿದ್ದರೂ ಪೂರ್ಣಗೊಳಿಸುತ್ತೇನೆ. ಉದ್ವೇಗದ ಮಾತನ್ನು ಬಿಡು, ಮೇಲೇಳು, ಹಸ್ತಿನಾಪುರಕ್ಕೆ ಹೋಗೋಣ, ಶತ್ರುಗಳು ಮುತ್ತಿದರೆ ಕೋಟೆಯನ್ನು ಬಲಗೊಳಿಸೋಣ. ಇದೇ ಅತ್ಯುತ್ತಮವಾದ ಉಪಾಯ ಎಂದು ಹೇಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಸುಕೃತ: ಒಳ್ಳೆಯ ಕೆಲಸ; ವಿಸ್ತರಿಸು: ಹರಡು; ಪೂರಾಯ: ಪೂರ್ಣವಾಗಿ; ಕಾಹುರ: ಆವೇಶ, ಸೊಕ್ಕು, ಕೋಪ; ನುಡಿ: ಮಾತು; ಬೇಡ: ತ್ಯಜಿಸು; ನಡೆ: ಚಲಿಸು; ಅರಿ: ವೈರಿ; ಐತಂದು: ಬಂದು ಸೇರು; ಔಕು: ನೂಕು; ದುರ್ಗ: ಕೋಟೆ; ಬಲಿ: ಗಟ್ಟಿ, ದೃಢ; ನಿಲು: ನಿಲ್ಲು; ಪರಮ: ಶ್ರೇಷ್ಠ; ಮಂತ್ರ: ವಿಚಾರ; ಅವನಿಪ: ರಾಜ;

ಪದವಿಂಗಡಣೆ:
ಅರಸ +ಕೇಳೈ +ಸುಕೃತವನು+ ವಿ
ಸ್ತರಿಸುವೆನು +ಪೂರಾಯವೆನೆ +ಕಾ
ಹುರದ +ನುಡಿ +ಬೇಡ್+ಏಳು +ನಡೆವುದು +ಹಸ್ತಿನಾಪುರಿಗೆ
ಅರಿಗಳ್+ಐತಂದ್+ಔಕಿದಡೆ +ಗಜ
ಪುರದ +ದುರ್ಗವ +ಬಲಿದು +ನಿಲುವುದು
ಪರಮ+ಮಂತ್ರವಿದೆಂದನ್+ಅಶ್ವತ್ಥಾಮನ್+ಅವನಿಪನ

ಅಚ್ಚರಿ:
(೧) ೬ನೇ ಸಾಲು ಒಂದೇ ಪದವಾಗಿ ರಚಿತವಾಗಿರುವುದು – ಪರಮಮಂತ್ರವಿದೆಂದನಶ್ವತ್ಥಾಮನವನಿಪನ
(೨) ಅರಸ, ಅವನಿಪ – ಪದ್ಯದ ಮೊದಲ ಹಾಗು ಕೊನೆಯ ಪದ

ಪದ್ಯ ೩೯: ದುರ್ಯೋಧನನು ತನ್ನನ್ನು ಅರಗೆಲಸಿ ಎಂದೇಕೆ ಹೇಳಿದನು?

ಖರೆಯರೈ ನೀವುಭಯ ರಾಯರ
ಗುರುಗಳದು ಕುಂದಿಲ್ಲ ಕೃಪನೇ
ಹಿರಿಯನಾಚಾರಿಯನು ಯಾದವರೊಳಗೆ ಕೃತವರ್ಮ
ಗರುವರೈ ನೀವಿಲ್ಲಿ ರಣಬಾ
ಹಿರರೆ ಸಾಕಂತಿರಲಿ ಸುಕೃತದೊ
ಳರಗೆಲಸಿಗಳು ನಾವೆ ನಿಮ್ಮಲಿ ಕೊರತೆಯಿಲ್ಲೆಂದ (ಗದಾ ಪರ್ವ, ೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ದುರ್ಯೋಧನನು ಉತ್ತರಿಸುತ್ತಾ, ನಿಮ್ಮ ಮಾತು ನಿಜ, ನೀವು ಶ್ರೇಷ್ಠರು. ಉಭಯ ರಾಜರ ಗುರುಗಳು, ಕೃಪನು ನಮ್ಮ ಹಿರಿಯಗುರು. ಯಾದವರಲ್ಲಿ ಕೃತವರ್ಮನು ಅಗ್ರಗಣ್ಯ. ನೀವು ಯುದ್ಧದಲ್ಲಿ ಅರ್ಹರಲ್ಲ ಎನ್ನುತ್ತಿಲ್ಲ, ನಾವು ಅರೆ ಬರೆ ಪುಣ್ಯಶಾಲಿಗಳೆಂಬುದೇ ಕೊರತೆ, ನಿಮ್ಮಲ್ಲಿ ಏನೂ ನ್ಯೂನ್ಯತೆಗಳಿಲ್ಲ ಎಂದು ಕೌರವನು ನುಡಿದನು.

ಅರ್ಥ:
ಖರೆ: ನಿಜ; ಉಭಯ: ಎರದು; ರಾಯ: ರಾಜ; ಗುರು: ಆಚಾರ್ಯ; ಕುಂದು: ಕೊರತೆ, ನ್ಯೂನ್ಯತೆ; ಹಿರಿ: ದೊಡ್ಡವ; ಆಚಾರಿ: ಗುರು; ಗರುವ: ಹಿರಿಯ, ಶ್ರೇಷ್ಠ; ರಣ: ಯುದ್ಧ; ಬಾಹಿರ: ಬಹಿಷ್ಕೃತವಾದ, ಹೊರತಾದುದು; ಸಾಕು: ಅಗತ್ಯ ಪೂರೈಸಿತು; ಸುಕೃತ: ಒಳ್ಳೆಯ ಕೆಲಸ; ಅರಗೆಲಸಿ: ಅರೆ ಬರೆ; ಕೊರತೆ: ನ್ಯೂನ್ಯತೆ;

ಪದವಿಂಗಡಣೆ:
ಖರೆಯರೈ +ನೀವ್+ಉಭಯ +ರಾಯರ
ಗುರುಗಳ್+ಅದು +ಕುಂದಿಲ್ಲ +ಕೃಪನೇ
ಹಿರಿಯನ್+ಆಚಾರಿಯನು +ಯಾದವರೊಳಗೆ+ ಕೃತವರ್ಮ
ಗರುವರೈ+ ನೀವಿಲ್ಲಿ+ ರಣ+ಬಾ
ಹಿರರೆ+ ಸಾಕ್+ಅಂತಿರಲಿ +ಸುಕೃತದೊಳ್
ಅರಗೆಲಸಿಗಳು +ನಾವೆ +ನಿಮ್ಮಲಿ +ಕೊರತೆಯಿಲ್ಲೆಂದ

ಅಚ್ಚರಿ:
(೧) ದುರ್ಯೋಧನನು ತನ್ನನ್ನು ನಿಂದಿಸುವ ಪರಿ – ಸುಕೃತದೊಳರಗೆಲಸಿಗಳು ನಾವೆ ನಿಮ್ಮಲಿ ಕೊರತೆಯಿಲ್ಲೆಂದ

ಪದ್ಯ ೩೮: ಅಶ್ವತ್ಥಾಮನು ತನ್ನ ಪರಾಕ್ರಮದ ಬಗ್ಗೆ ಏನು ಹೇಳಿದನು?

ರಣದೊಳಾ ಗಾಂಗೇಯಗಿಮ್ಮಡಿ
ಗುಣವ ತೋರುವೆನಪ್ಪನವರಿಂ
ದೆಣಿಸಿಕೊಳು ಮೂವಡಿಯನಗ್ಗದ ಸೂತನಂದನನ
ರಣಕೆ ನಾಲ್ವಡಿ ಮಾದ್ರರಾಜನ
ಹೊಣಕೆಗೈದು ಸುಶರ್ಮ ಶಕುನಿಗ
ಳೆಣಿಸುವಡೆ ಪಾಡಲ್ಲ ನೋಡೇಳೆಂದನಾ ದ್ರೌಣಿ (ಗದಾ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ನುಡಿಯುತ್ತಾ, ಭೀಷ್ಮನ ಯುದ್ಧ ಕೌಶಲ್ಯದ ಇಮ್ಮಡಿ ಕುಶಲತೆಯನ್ನೂ, ನನ್ನ ತಂದೆ ದ್ರೋಣನ, ಮೂರರಷ್ಟನ್ನೂ, ಕರ್ಣನ ಪರಾಕ್ರಮದ ನಾಲ್ಕರಷ್ಟನ್ನೂ, ಶಲ್ಯನ ಐದರಷ್ಟು ಚಾತುರ್ಯತೆಯನ್ನೂ ತೋರಿಸುತ್ತೇನೆ. ಸುಶರ್ಮ ಶಕುನಿಗಳಿಗೆ ಹೋಲಿಸಲಾಗದಂತಹ ರಣಕೌಶಲ ನನ್ನನು, ನೀನು ನೀರಿನಿಂದ ಹೊರಬಂದು ನೋಡು ಎಂದು ಅಶ್ವತ್ಥಾಮನು ಬೇಡಿದನು.

ಅರ್ಥ:
ರಣ: ಯುದ್ಧಭೂಮಿ; ಇಮ್ಮಡಿ: ಎರಡು ಪಟ್ಟು; ಗುಣ: ನಡತೆ; ತೋರು: ಪ್ರದರ್ಶಿಸು; ಅಪ್ಪ: ತಂದೆ; ಎಣಿಸು: ಲೆಕ್ಕ ಹಾಕು; ಮೂವಡಿ: ಮೂರ್ಪಟ್ಟು; ಅಗ್ಗ: ಶ್ರೇಷ್ಠ; ನಂದನ: ಮಗ; ನಾಲ್ವಡಿ: ನಾಲ್ಕರಷ್ಟು; ಹೊಣಕೆ: ಯುದ್ಧ; ಶೌರ್ಯ; ಪಾಡು: ಸಮಾನ, ಸಾಟಿ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ರಣದೊಳಾ +ಗಾಂಗೇಯಗ್+ಇಮ್ಮಡಿ
ಗುಣವ +ತೋರುವ್+ಎನಪ್ಪನ್+ಅವರಿಂದ್
ಎಣಿಸಿಕೊಳು +ಮೂವಡಿಯನ್+ಅಗ್ಗದ +ಸೂತ+ನಂದನನ
ರಣಕೆ +ನಾಲ್ವಡಿ +ಮಾದ್ರರಾಜನ
ಹೊಣಕೆಗ್+ಐದು +ಸುಶರ್ಮ+ ಶಕುನಿಗಳ್
ಎಣಿಸುವಡೆ+ ಪಾಡಲ್ಲ +ನೋಡ್+ಏಳ್+ಎಂದನಾ +ದ್ರೌಣಿ

ಅಚ್ಚರಿ:
(೧) ರಣ, ಗುಣ – ಪ್ರಾಸ ಪದಗಳು
(೨) ರಣ – ೧, ೪ ಸಾಲಿನ ಮೊದಲ ಪದ

ಪದ್ಯ ೩೭: ದುರ್ಯೋಧನನು ಅಶ್ವತ್ಥಾಮನಿಗೆ ಏನೆಂದು ಉತ್ತರಿಸಿದ?

ಸೇಸೆದಳಿದೆನು ಭೀಷ್ಮಗಗ್ಗದ
ಭಾಷೆ ನಿಮ್ಮಯ್ಯನಲಿ ಗತವಾ
ಯೇಸ ಪತಿಕರಿಸಿದೆನು ಕರ್ಣನನಂದು ನೀನರಿಯ
ಓಸರಿಸಿದನೆ ಮಾದ್ರಪತಿ ಬಳಿ
ಕೀಸು ಬಂದುದು ದೈವದೊಲಹಿನ
ಪೈಸರಕೆ ನೀವೇನ ಮಾಡುವಿರೆಂದನಾ ಭೂಪ (ಗದಾ ಪರ್ವ, ೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಅಶ್ವತ್ಥಾಮನಿಗೆ ಉತ್ತರಿಸುತ್ತಾ, ಮೊದಲು ಭೀಷ್ಮನಿಗೆ ಸೇನಾಧಿಪತ್ಯವನ್ನು ಕೊಟ್ಟು ಸೇಸೆಯನ್ನಿಟ್ಟೆ, ನಿಮ್ಮ ತಂದೆಯು ಮಾಡಿದ ಮಹಾ ಪ್ರತಿಜ್ಞೆಯು ವ್ಯರ್ಥವಾಯಿತು. ಕರ್ಣನನ್ನು ಹೇಗೆ ಮನ್ನಿಸಿ ಸೇನಾಧಿಪತ್ಯವನ್ನು ಕೊಟ್ಟೆನೆಂಬುದು ನೀನು ತಿಳಿದಿರುವೆ. ಶಲ್ಯನೇನು ಜಾರಿಕೊಂಡು ಹೋದನೇ, ಇವೆಲ್ಲದರ ನಂತರ ಹೀಗಾಗಿದೆ, ದೈವದ ಕೃಪೆ ಜಾರಿಹೋದರೆ ನೀವೇನು ಮಾಡೀರಿ ಎಂದನು.

ಅರ್ಥ:
ಸೇಸೆ: ಮಂತ್ರಾಕ್ಷತೆ; ಅಗ್ಗ: ಶ್ರೇಷ್ಠ; ಭಾಷೆ: ಮಾತು; ಅಯ್ಯ: ತಂದೆ; ಗತ: ಹಿಂದೆ ಆದುದು, ಹೋದ; ಪತಿಕರಿಸು: ದಯೆತೋರು, ಅನುಗ್ರಹಿಸು; ಅರಿ: ತಿಳಿ; ಓಸರಿಸು: ಓರೆಮಾಡು, ಹಿಂಜರಿ; ಮಾದ್ರಪತಿ: ಶಲ್ಯ; ಬಳಿಕ: ನಂತರ; ಈಸು: ಇಷ್ಟು; ಬಂದು: ಆಗಮಿಸು; ದೈವ: ಭಗವಂತ; ಒಲವು: ಪ್ರೀತಿ; ಪೈಸರ: ಜಾರುವಿಕೆ, ಹಿಂದಕೆ ಸರಿ; ಭೂಪ: ರಾಜ;

ಪದವಿಂಗಡಣೆ:
ಸೇಸೆ+ತಳಿದೆನು +ಭೀಷ್ಮಗ್+ಅಗ್ಗದ
ಭಾಷೆ +ನಿಮ್ಮಯ್ಯನಲಿ +ಗತವಾಯ್ತ್
ಏಸ +ಪತಿಕರಿಸಿದೆನು+ ಕರ್ಣನನ್+ಅಂದು +ನೀನರಿಯ
ಓಸರಿಸಿದನೆ+ ಮಾದ್ರಪತಿ+ ಬಳಿಕ್
ಈಸು +ಬಂದುದು +ದೈವದ್+ಒಲಹಿನ
ಪೈಸರಕೆ+ ನೀವೇನ +ಮಾಡುವಿರೆಂದನಾ +ಭೂಪ

ಅಚ್ಚರಿ:
(೧) ದೈವದ ಕೃಪೆಯ ಮಹತ್ವ: ದೈವದೊಲಹಿನ ಪೈಸರಕೆ ನೀವೇನ ಮಾಡುವಿರೆಂದನಾ

ಪದ್ಯ ೩೬: ಅಶ್ವತ್ಥಾಮನು ಕೌರವನಿಗೆ ಏನನ್ನು ಹೇಳಿದನು?

ಇವೆ ಮಹಾಮಂತ್ರಾಸ್ತ್ರಸಂತತಿ
ಯಿವೆ ಮಹಾಧನುರಾಜ್ಯಸತ್ಕೃತಿ
ಸವನ ಸಾಪೇಕ್ಷಂಗಳಿವೆ ತ್ರೈರಥಿಕರೊಬ್ಬರಲಿ
ಅವನಿಪತಿ ನೀ ಸೇಸೆದಳಿ ಮಿ
ಕ್ಕವರು ಸೇನೆ ವಿರೋಧಿವರ್ಗಕೆ
ದಿವವೊ ಧರೆಯೋ ನೋಡಲಹುದೇಳೆಂದನಾ ದ್ರೌಣಿ (ಗದಾ ಪರ್ವ, ೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಮಾತನಾಡುತ್ತಾ, ಇಗೋ ಅಸ್ತ್ರಗಳೆಂಬ ಮಹಾ ಮಂತ್ರಗಳಿವೆ. ಮಹಾಧನಸ್ಸುಗಳೆಂಬ ತುಪ್ಪವಿದೆ. ಸವನಗಳು ಮೂವರಲ್ಲಿ ಒಬ್ಬೊಬ್ಬರಲ್ಲೂ ಇವೆ. ರಾಜ, ನೀನು ದೀಕ್ಷಿತನಾಗು. ಉಳಿದ ಪಾಂಡವರಿಗೂ ಅವರ ಸೇನೆಗೂ ಭೂಮಿವಶವಾಗುವುದೋ, ಸ್ವರ್ಗವೋ ನೋಡಬಹುದು ಎಂದು ನುಡಿದನು.

ಅರ್ಥ:
ಮಹಾ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಸ್ತ್ರ: ಶಸ್ತ್ರ; ಸಂತತಿ: ವಂಶ, ಪೀಳಿಗೆ; ಧನು: ಬಿಲ್ಲು; ಸತ್ಕೃತಿ: ಒಳ್ಳೆಯ ಕಾರ್ಯ; ಸವನ: ಯಜ್ಞ, ಯಾಗ, ಮಂಗಳ ಸ್ನಾನ; ಅಪೇಕ್ಷೆ: ಇಚ್ಛೆ, ಬಯಕೆ; ತ್ರೈ: ಮೂರು; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಅವನಿಪತಿ: ರಾಜ; ಸೇಸೆದಳಿ: ದೀಕ್ಷಿತನಾಗು; ಸೇಸೆ: ಮಂಗಳಾಕ್ಷತೆ; ಮಿಕ್ಕ: ಉಳಿದ; ವಿರೋಧಿ: ವೈರಿ; ವರ್ಗ: ಗುಂಪು; ದಿವ: ಸ್ವರ್ಗ; ಧರೆ: ಭೂಮಿ; ನೋಡು: ವೀಕ್ಷಿಸು; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಇವೆ +ಮಹಾಮಂತ್ರ+ಅಸ್ತ್ರ+ಸಂತತಿ
ಇವೆ +ಮಹಾಧನು+ರಾಜ್ಯ+ಸತ್ಕೃತಿ
ಸವನ+ ಸಾಪೇಕ್ಷಂಗಳಿವೆ +ತ್ರೈರಥಿಕರ್+ಒಬ್ಬರಲಿ
ಅವನಿಪತಿ +ನೀ +ಸೇಸೆದಳಿ+ ಮಿ
ಕ್ಕವರು +ಸೇನೆ +ವಿರೋಧಿ+ವರ್ಗಕೆ
ದಿವವೊ +ಧರೆಯೋ +ನೋಡಲಹುದ್+ಏಳೆಂದನಾ +ದ್ರೌಣಿ

ಅಚ್ಚರಿ:
(೧) ದಿವವೊ, ಧರೆಯೋ – ಪದಗಳ ಬಳಕೆ