ಪದ್ಯ ೬೨: ಶಲ್ಯ ಧರ್ಮಜರ ಯುದ್ಧವು ಹೇಗೆ ನಡೆಯಿತು?

ಸಾರಥಿಗೆ ಸೂಚಿಸಿ ನೃಪಾಲನ
ಸಾರೆ ದುವ್ವಾಳಿಸಲು ಮಿಗೆ ನೃಪ
ನೋರೆಗೊಂಡನು ತಿರುಗೆ ತಿರುಗಿದನೊಲೆದೊಡೊಡ ನೊಲೆದು
ಚೂರಿಸುವ ನಾರಾಚವಿಕ್ರಮ
ದೋರಣೆಗೆ ನಾರಾಚಿಸಿತು ವಿ
ಸ್ತಾರದಲಿ ವಿಸ್ತರಿಸಿದನು ಜಯಸಮರಸಾಹಸವ (ಶಲ್ಯ ಪರ್ವ, ೩ ಸಂಧಿ, ೬೨ ಪದ್ಯ)

ತಾತ್ಪರ್ಯ:
ಶಲ್ಯನು ಸಾರಥಿಗೆ ಸೂಚನೆ ಕೊಡಲು, ಅವನು ಧರ್ಮಜನ ರಥದ ಮೇಲೆ ಆಕ್ರಮಣ ಮಾಡಿದನು. ಧರ್ಮಜನು ಓರೆಗೆ ತಿರುಗಲು, ಶಲ್ಯನ ರಥವೂ ತಿರುಗಿತು. ಅವನು ಅತ್ತಿತ್ತಾ ತಿರುಗಲು ಇವನೂ ತಿರುಗಿದನು. ಅವನು ಬಾಣಗಳನ್ನು ಬಿಟ್ಟರೆ ಇವನೂ ಬಿಟ್ಟನು. ಸಮರದಲ್ಲಿ ನಿಶ್ಚಿತವಾಗಿ ಗೆಲ್ಲುವಂತಹ ಸಾಹಸವನ್ನು ಶಲ್ಯನು ತೋರಿದನು.

ಅರ್ಥ:
ಸಾರಥಿ: ಸೂತ; ಸೂಚಿಸು: ತೋರಿಸು; ನೃಪಾಲ: ರಾಜ; ಸಾರೆ: ಹತ್ತಿರ, ಸಮೀಪ; ದುವ್ವಾಳಿಸು: ಕುದುರೆ ಸವಾರಿ ಮಾಡು; ಮಿಗೆ: ಅಧಿಕ; ನೃಪ: ರಾಜ; ಓರೆ: ಡೊಂಕು; ತಿರುಗು: ಸುತ್ತು; ಒಲೆ: ತೂಗಾಡು; ಚೂರಿಸು: ಸೀಳು; ನಾರಾಚ:ಬಾಣ, ಸರಳು; ವಿಸ್ತಾರ: ವಿಶಾಲ; ವಿಸ್ತರಿಸು: ಹರಡು; ಜಯ: ಗೆಲುವು; ಸಮರ: ಯುದ್ಧ; ಸಾಹಸ: ಪರಾಕ್ರಮ; ಓರಣೆ: ಸಾಲು, ಕ್ರಮ;

ಪದವಿಂಗಡಣೆ:
ಸಾರಥಿಗೆ +ಸೂಚಿಸಿ +ನೃಪಾಲನ
ಸಾರೆ +ದುವ್ವಾಳಿಸಲು +ಮಿಗೆ +ನೃಪನ್
ಓರೆಗೊಂಡನು +ತಿರುಗೆ +ತಿರುಗಿದನ್+ಒಲೆದೊಡ್+ಒಡನೊಲೆದು
ಚೂರಿಸುವ +ನಾರಾಚ+ವಿಕ್ರಮದ್
ಓರಣೆಗೆ +ನಾರಾಚಿಸಿತು +ವಿ
ಸ್ತಾರದಲಿ +ವಿಸ್ತರಿಸಿದನು +ಜಯ+ಸಮರ+ಸಾಹಸವ

ಅಚ್ಚರಿ:
(೧) ನಾರಾಚ ಪದದ ಬಳಕೆ – ಚೂರಿಸುವ ನಾರಾಚವಿಕ್ರಮದೋರಣೆಗೆ ನಾರಾಚಿಸಿತು
(೨) ವಿಸ್ತಾರ ಪದದ ಬಳಕೆ – ವಿಸ್ತಾರದಲಿ ವಿಸ್ತರಿಸಿದನು ಜಯಸಮರಸಾಹಸವ
(೩) ಜೋಡಿ ಪದಗಳು – ತಿರುಗೆ ತಿರುಗಿದನೊಲೆದೊಡೊಡ ನೊಲೆದು

ಪದ್ಯ ೬೧: ಶಲ್ಯನು ಧರ್ಮಜನನ್ನು ಹೇಗೆ ಮೂದಲಿಸಿದನು?

ರಥಕೆ ಬಂದು ಪಸಾಯವನು ಸಾ
ರಥಿಗೆ ಕೊಟ್ಟನು ಚಾಪಶರವನು
ರಥದೊಳಗೆ ತುಂಬಿದನು ನಂಬಿಸಿದನು ಸುಯೋಧನನ
ಪೃಥೆಯ ಮಕ್ಕಳ ರಣಪರಾಕ್ರಮ
ವ್ಯಥೆ ಕಣಾ ಕರ್ಣಾದಿ ಸುಭಟ
ವ್ಯಥೆಯ ನಿಲಿಸುವೆನೆನುತ ಮೂದಲಿಸಿದನು ಧರ್ಮಜನ (ಶಲ್ಯ ಪರ್ವ, ೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ಶಲ್ಯನು ರಥವನ್ನೇರಿ ಸಾರಥಿಗೆ ಉಡುಗೊರೆಯನ್ನು ಕೊಟ್ಟು ಬಿಲ್ಲು ಬಾಣಗಳನ್ನು ರಥದಲ್ಲಿ ತುಂಬಿಸಿ, ಸುಯೋಧನನಿಗೆ ನಂಬುಗೆ ಕೊಟ್ಟು, ಕುಂತಿಯ ಮಕ್ಕಳದು ವೃಥಾ ಪರಾಕ್ರಮ, ಕರ್ಣಾದಿ ವೀರರ ಮರಣದ ವ್ಯಥೆಯನ್ನು ನಿಲ್ಲಿಸುತ್ತೇನೆ ಎಂದು ಧರ್ಮಜನನ್ನು ಮೂದಲಿಸಿದನು.

ಅರ್ಥ:
ರಥ: ಬಂಡಿ; ಪಸಾಯ: ಉಡುಗೊರೆ, ಬಹುಮಾನ; ಸಾರಥಿ: ಸೂತ; ಕೊಡು: ನೀಡು; ಚಾಪ: ಬಿಲ್ಲು; ಶರ: ಬಾಣ; ರಥ: ಬಂಡಿ; ತುಂಬು: ಭರ್ತಿಮಾಡು; ನಂಬು: ವಿಶ್ವಾಸವಿಡು; ಪೃಥೆ: ಕುಂತಿ; ಮಕ್ಕಳು: ಪುತ್ರರು; ರಣ: ಯುದ್ಧ; ಪರಾಕ್ರಮ: ಶೂರ; ವ್ಯಥೆ: ದುಃಖ; ಆದಿ: ಮುಂತಾದ; ಸುಭಟ: ಪರಾಕ್ರಮಿ; ನಿಲಿಸು: ತಡೆ; ಮೂದಲಿಸು: ಹಂಗಿಸು;

ಪದವಿಂಗಡಣೆ:
ರಥಕೆ +ಬಂದು +ಪಸಾಯವನು +ಸಾ
ರಥಿಗೆ +ಕೊಟ್ಟನು +ಚಾಪ+ಶರವನು
ರಥದೊಳಗೆ +ತುಂಬಿದನು +ನಂಬಿಸಿದನು +ಸುಯೋಧನನ
ಪೃಥೆಯ +ಮಕ್ಕಳ +ರಣ+ಪರಾಕ್ರಮ
ವ್ಯಥೆ +ಕಣಾ +ಕರ್ಣಾದಿ +ಸುಭಟ
ವ್ಯಥೆಯ +ನಿಲಿಸುವೆನೆನುತ +ಮೂದಲಿಸಿದನು +ಧರ್ಮಜನ

ಅಚ್ಚರಿ:
(೧) ಪಾಂಡವರನ್ನು ಮೂದಲಿಸುವ ಪರಿ – ಪೃಥೆಯ ಮಕ್ಕಳ ರಣಪರಾಕ್ರಮ ವ್ಯಥೆ ಕಣಾ

ಪದ್ಯ ೬೦: ಶಲ್ಯನು ಭೀಮನನ್ನು ಹೇಗೆ ಹೊಗಳಿದನು?

ಲೇಸ ಮಾಡಿದೆ ಭೀಮ ಕಟ್ಟಾ
ಳೈಸಲೇ ನೀನವರೊಳಗೆ ನಿ
ನ್ನಾಸೆಯಲ್ಲಾ ಧರ್ಮಪುತ್ರನ ಸತ್ವಸಂಪದಕೆ
ಐಸೆ ಬಳಿಕೇನೆನುತ ಶಲ್ಯ ಮ
ಹೀಶ ಮುರಿಯಲು ಹೊಸ ರಥವ ಮೇ
ಳೈಸಿ ಸಾರಥಿ ಸಂಧಿಸಿದನವಧಾನ ಜೀಯೆನುತ (ಶಲ್ಯ ಪರ್ವ, ೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ಶಲ್ಯನು ಮಾತನಾಡುತ್ತಾ, ನೀನು ಪಾಂಡವರಲ್ಲಿ ಮಹಾಯೋಧ, ಧರ್ಮಜನ ಸತ್ವವು ನಿನ್ನ ಬಲವನ್ನೇ ಅವಲಂಬಿಸಿದೆ ಎನ್ನುತ್ತಾ ಶಲ್ಯನು ಪಕ್ಕಕ್ಕೆ ತಿರುಗಲು, ಅವನ ಸಾರಥಿಯು ಹೊಸ ರಥವನ್ನು ತಂದು ನಿಲ್ಲಿಸಿ, ಒಡೆಯಾ ಚಿತ್ತೈಸಿ ಎಂದು ಹೇಳಿದನು.

ಅರ್ಥ:
ಲೇಸು: ಒಳಿತು; ಕಟ್ಟಾಳು: ಶೂರ; ಐಸಲೇ: ಅಲ್ಲವೇ; ಆಸೆ: ಇಚ್ಛೆ; ಸತ್ವ: ಸಾರ; ಸಂಪದ: ಐಶ್ವರ್ಯ, ಸಂಪತ್ತು; ಐಸು: ಅಷ್ಟು; ಬಳಿಕ: ನಂತರ; ಮಹೀಶ: ರಾಜ; ಮುರಿ: ಸೀಳು; ಹೊಸ: ನವ; ರಥ: ಬಂದಿ; ಮೇಳೈಸು: ಕೂಡಿಸು; ಸಾರಥಿ: ಸೂತ; ಸಂಧಿಸು: ಕೂಡು, ಸೇರು; ಅವಧಾನ: ಎಚ್ಚರಿಕೆ ಹೇಳುವುದು; ಜೀಯ: ಒಡೆಯ;

ಪದವಿಂಗಡಣೆ:
ಲೇಸ+ ಮಾಡಿದೆ +ಭೀಮ +ಕಟ್ಟಾಳ್
ಐಸಲೇ +ನೀನ್+ಅವರೊಳಗೆ +ನಿ
ನ್ನಾಸೆಯಲ್ಲಾ +ಧರ್ಮಪುತ್ರನ+ ಸತ್ವ+ಸಂಪದಕೆ
ಐಸೆ+ ಬಳಿಕೇನ್+ಎನುತ +ಶಲ್ಯ+ ಮ
ಹೀಶ +ಮುರಿಯಲು+ ಹೊಸ +ರಥವ +ಮೇ
ಳೈಸಿ +ಸಾರಥಿ +ಸಂಧಿಸಿದನ್+ಅವಧಾನ +ಜೀಯೆನುತ

ಅಚ್ಚರಿ:
(೧) ಭೀಮನನ್ನು ಹೊಗಳುವ ಪರಿ – ಭೀಮ ಕಟ್ಟಾಳೈಸಲೇ

ಪದ್ಯ ೫೯: ಧರ್ಮಜನ ಸಹಾಯಕ್ಕೆ ಯಾರು ಬಂದರು?

ಅಕಟಕಟ ಧರ್ಮಜನನೀ ಕಂ
ಟಕಕೆ ಕೈವರ್ತಿಸಿದರೇ ಪಾ
ತಕರು ಪಾಂಡವರೆನುತ ಕುರುಬಲವೆಲ್ಲ ಸಮತಳಿಸೆ
ವಿಕಟ ರೋಷಶಿಖಿ ಸ್ಫುಲಿಂಗ
ಪ್ರಕಟ ಭೀಷಣಸಹಿತ ಕೌಕ್ಷೇ
ಯಕವ ಖಂಡಿಸಿ ಧರೆ ಬಿರಿಯೆ ಬೊಬ್ಬಿರಿದನಾ ಭೀಮ (ಶಲ್ಯ ಪರ್ವ, ೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಶಲ್ಯನ ಆಟೋಪವನ್ನು ಕಂಡು ಪಾಂಡವರು ಪಾಪಿಗಳು, ಧರ್ಮಜನನ್ನು ಶಲ್ಯನ ಕೈಗೆ ಕೊಟ್ಟರು ಎಂದು ಸೇನೆಯು ಗೊಂದಲಕ್ಕೀಡಾಯಿತು. ಆಗ ಭೀಮನು ಮಹಾಕೋಪದಿಂದ ಕಿಡಿಕಾರುತ್ತಾ ಶಲ್ಯನ ಖಡ್ಗವನ್ನು ಕತ್ತರಿಸಿ ಗರ್ಜಿಸಿದನು.

ಅರ್ಥ:
ಅಕಟಕಟ: ಅಯ್ಯೋ; ಕಂಟಕ: ತೊಂದರೆ; ವರ್ತಿಸು: ವಿನಿಯೋಗವಾಗು; ಪಾತಕ: ಪಾಪಿ; ಬಲ: ಸೈನ್ಯ; ಸಮತಳ: ಮಟ್ಟಮಾಡು; ವಿಕಟ: ಕುರೂಪಗೊಂಡ; ರೋಷ: ಕೋಪ; ಶಿಖಿ: ಬೆಂಕಿ; ಸ್ಫುಲಿಂಗ: ಬೆಂಕಿಯ ಕಿಡಿ; ಪ್ರಕಟ: ಸ್ಪಷ್ಟವಾದುದು; ಭೀಷಣ: ಭಯಂಕರವಾದ; ಸಹಿತ: ಜೊತೆ; ಕೌಕ್ಷೇಯಕ: ಕತ್ತಿ, ಖಡ್ಗ; ಖಂಡಿಸು: ತುಂಡು ಮಾಡು; ಧರೆ: ಭೂಮಿ; ಬಿರಿ: ಬಿರುಕು, ಸೀಳು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಅಕಟಕಟ+ ಧರ್ಮಜನನ್+ಈ+ ಕಂ
ಟಕಕೆ +ಕೈವರ್ತಿಸಿದರೇ +ಪಾ
ತಕರು +ಪಾಂಡವರ್+ಎನುತ +ಕುರುಬಲವೆಲ್ಲ+ ಸಮತಳಿಸೆ
ವಿಕಟ+ ರೋಷಶಿಖಿ+ ಸ್ಫುಲಿಂಗ
ಪ್ರಕಟ +ಭೀಷಣ+ಸಹಿತ+ ಕೌಕ್ಷೇ
ಯಕವ +ಖಂಡಿಸಿ +ಧರೆ +ಬಿರಿಯೆ +ಬೊಬ್ಬಿರಿದನಾ +ಭೀಮ

ಅಚ್ಚರಿ:
(೧) ಗರ್ಜನೆಯನ್ನು ವರ್ಣಿಸುವ ಪರಿ – ಧರೆ ಬಿರಿಯೆ ಬೊಬ್ಬಿರಿದನಾ ಭೀಮ
(೨) ಭೀಮನು ಬಂದ ಪರಿ – ವಿಕಟ ರೋಷಶಿಖಿ ಸ್ಫುಲಿಂಗ ಪ್ರಕಟ ಭೀಷಣಸಹಿತ ಕೌಕ್ಷೇಯಕವ ಖಂಡಿಸಿ
(೩) ವಿಕಟ, ಪ್ರಕಟ, ಅಕಟ – ಪ್ರಾಸ ಪದಗಳು

ಪದ್ಯ ೫೮: ಶಲ್ಯನು ಯುಧಿಷ್ಠಿರನನ್ನು ಹೇಗೆ ಹಂಗಿಸಿದನು?

ಎಸು ಯುಧಿಷ್ಠಿರ ಹಲಗೆ ಖಡ್ಗವ
ಕುಸುರಿದರಿಯಾ ಚಾಪವಿದ್ಯಾ
ಕುಶಲನೆಂಬರಲೈ ತನುತ್ರ ರಥಂಗಳಿಲ್ಲೆಮಗೆ
ಅಸುವ ತಡೆವರೆ ರಣಪಲಾಯನ
ವೆಸೆವುದೇ ಕ್ಷತ್ರಿಯರಿಗತಿಸಾ
ಹಸಿಕನಾದಡೆ ನಿಲ್ಲೆನುತ ಮೂದಲಿಸಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಎಲವೋ ಯುಧಿಷ್ಠಿರ, ಬಾಣಗಳಿಂದ ನನ್ನ ಖಡ್ಗ ಗುರಾಣಿಗಳನ್ನು ಕತ್ತರಿಸಿಹಾಕು, ನೀನು ಬಿಲ್ಲು ವಿದ್ಯೆಯಲ್ಲಿ ಚತುರನೆನ್ನುತ್ತಾರೆ, ನನಗೆ ಕವಚವಿಲ್ಲ, ರಥವಿಲ್ಲ. ಪ್ರಾಣವನ್ನುಳಿಸಿಕೊಳ್ಳಲು ಓಡಿ ಹೋಗುವುದೊಂದೇ ದಾರಿ. ಕ್ಷತ್ರಿಯನಾದುದರಿಂದ ಓಡಿ ಹೋಗುವಂತಿಲ್ಲ. ನಿನ್ನಲ್ಲಿ ಸಾಹಸವಿದ್ದುದೇ ಆದರೆ ನಿಲ್ಲು ಎಂದು ಶಲ್ಯನು ಮೂದಲಿಸಿದನು.

ಅರ್ಥ:
ಹಲಗೆ: ಒಂದು ಬಗೆಯ ಗುರಾಣಿ; ಎಸು: ಬಾಣ ಪ್ರಯೋಗ; ಖಡ್ಗ: ಕತ್ತಿ; ಕುಸುರಿ: ಸೂಕ್ಷ್ಮವಾದ; ಅರಿ: ಸೀಳು; ಚಾಪ: ಬಿಲ್ಲು ಕುಶಲ: ಚಾತುರ್ಯ; ತನುತ್ರ: ಕವಚ; ರಥ: ಬಂಡಿ; ಅಸು: ಪ್ರಾಣ; ತಡೆ: ನಿಲ್ಲು; ರಣ: ಯುದ್ಧಭೂಮಿ; ಪಲಾಯನ: ಓಡು; ಸಾಹಸಿ: ಪರಾಕ್ರಮಿ; ಮೂದಲಿಸು: ಹಂಗಿಸು;

ಪದವಿಂಗಡಣೆ:
ಎಸು+ ಯುಧಿಷ್ಠಿರ +ಹಲಗೆ +ಖಡ್ಗವ
ಕುಸುರಿದ್+ಅರಿ+ಆ +ಚಾಪವಿದ್ಯಾ
ಕುಶಲನೆಂಬರಲೈ +ತನುತ್ರ +ರಥಂಗಳಿಲ್ಲ್+ಎಮಗೆ
ಅಸುವ +ತಡೆವರೆ +ರಣ+ಪಲಾಯನವ್
ಎಸೆವುದೇ +ಕ್ಷತ್ರಿಯರಿಗ್+ಅತಿ+ಸಾ
ಹಸಿಕನಾದಡೆ +ನಿಲ್ಲೆನುತ +ಮೂದಲಿಸಿದನು +ಶಲ್ಯ

ಅಚ್ಚರಿ:
(೧) ಎಸು, ಅಸು – ಪ್ರಾಸ ಪದ
(೨) ಹಲಗೆ, ಖಡ್ಗ, ಚಾಪ – ಆಯುಧಗಳನ್ನು ಹೆಸರಿಸುವ ಶಬ್ದ
(೩) ಕ್ಷತ್ರಿಯರ ಧರ್ಮ – ಅಸುವ ತಡೆವರೆ ರಣಪಲಾಯನವೆಸೆವುದೇ ಕ್ಷತ್ರಿಯರಿಗ್

ಪದ್ಯ ೫೭: ಶಲ್ಯನನ್ನು ಎದುರಿಸಲು ಯಾರು ಮುಂದೆ ಬಂದರು?

ಮಲೆತ ಧೃಷ್ಟದ್ಯುಮ್ನನನು ಭಯ
ಗೊಳಿಸಿ ಸೋಮಕ ಸೃಂಜಯರನ
ಪ್ಪಳಿಸಿದನು ಸಾತ್ಯಕಿ ಯುಧಾಮನ್ಯೂತ್ತಮೌಂಜಸರ
ದಳದೊಳೋಡಿಸಿ ಮುರಿದು ಚಾತು
ರ್ಬಲವ ಸವರಿ ಶಿಖಂಡಿ ನಕುಲರ
ಹೊಲಬುಗೆಡಿಸಿ ಮಹೀಪತಿಯ ಪಡಿಮುಖಕೆ ಮಾರಾಂತ (ಶಲ್ಯ ಪರ್ವ, ೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ಎದುರು ನಿಂತ ಧೃಷ್ಟದ್ಯುಮ್ನನನ್ನು ಬೆದರಿಸಿ ಸಾತ್ಯಕಿ, ಸೋಮಕ, ಸೃಂಜಯರನ್ನು ಯುಧಾಮನ್ಯು, ಉತ್ತಮೌಜಸರನ್ನು ಓಡಿಸಿ, ಚತುರಂಗ ಸೈನ್ಯವನ್ನು ಸವರಿ ಶಿಖಂಡಿ ನಕುಲರನ್ನು ದಾರಿತಪ್ಪಿಸಿ ಮತ್ತೆ ಧರ್ಮಜನ ಮುಂದೆ ಬಂದು ಹೋರಾಡಲು ಸಿದ್ಧನಾದನು.

ಅರ್ಥ:
ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಭಯ: ಅಂಜಿಕೆ; ಅಪ್ಪಳಿಸು: ತಟ್ಟು, ತಾಗು; ದಳ: ಸೈನ್ಯ; ಓಡು: ಧಾವಿಸು; ಮುರಿ: ಸೀಳು; ಚಾತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಸವರು: ನಾಶಮಾಡು; ಹೊಲಬು: ರೀತಿ, ಮಾರ್ಗ; ಮಹೀಪತಿ: ರಾಜ; ಪಡಿಮುಖ: ಎದುರು, ಮುಂಭಾಗ; ಮಾರಂತು: ಯುದ್ಧಕ್ಕಾಗಿ ನಿಂತು;

ಪದವಿಂಗಡಣೆ:
ಮಲೆತ +ಧೃಷ್ಟದ್ಯುಮ್ನನನು +ಭಯ
ಗೊಳಿಸಿ +ಸೋಮಕ +ಸೃಂಜಯರನ್
ಅಪ್ಪಳಿಸಿದನು +ಸಾತ್ಯಕಿ +ಯುಧಾಮನ್ಯು+ಉತ್ತಮೌಂಜಸರ
ದಳದೊಳ್+ಓಡಿಸಿ+ ಮುರಿದು +ಚಾತು
ರ್ಬಲವ +ಸವರಿ +ಶಿಖಂಡಿ +ನಕುಲರ
ಹೊಲಬುಗೆಡಿಸಿ+ ಮಹೀಪತಿಯ+ ಪಡಿಮುಖಕೆ +ಮಾರಾಂತ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೋಮಕ ಸೃಂಜಯರನಪ್ಪಳಿಸಿದನು ಸಾತ್ಯಕಿ