ಪದ್ಯ ೪೩: ಭೀಮನ ಪರಾಕ್ರಮದ ಮಾತುಗಳು ಹೇಗಿದ್ದವು?

ದೇಹ ಕೀರ್ತಿಗಳೊಳಗೆ ನಿಲುವುದು
ದೇಹವೋ ಕೀರ್ತಿಯೊ ಮುರಾಂತಕ
ಬೇಹುದನು ಬೆಸಸಿದಡೆ ಮಾಡೆನು ಬಲ್ಲಿರೆನ್ನನುವ
ಗಾಹುಗತಕದಲುಳಿವ ಧರ್ಮ
ದ್ರೋಹಿ ತಾನಲ್ಲಿನ್ನು ನೋಡಾ
ಸಾಹಸವನೆನುತಿತ್ತ ಮುರಿದನು ಸರಳ ಸಮ್ಮುಖಕೆ (ದ್ರೋಣ ಪರ್ವ, ೧೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೀಮನು ನುಡಿಯುತ್ತಾ, ದೇಹ ಕೀರ್ತಿಗಳಲ್ಲಿ ನಿಲ್ಲುವುದು ದೇಹವೋ ಕೀರ್ತಿಯೋ? ನಿನಗ ಬೇಕಾದುದನ್ನು ಹೇಳಿಕೊಂಡರೆ ನಾನು ಕೇಳುವವನಲ್ಲ. ನನ್ನ ರೀತಿ ನಿಮಗೆ ಗೊತ್ತಿದೆ, ಮೋಸದಿಂದ ಬದುಕಲು ಬಯಸುವ ಧರ್ಮದ್ರೋಹಿ ನಾನಲ್ಲ. ನನ್ನ ಸಾಹಸವನ್ನು ನೋಡು ಎಂದು ಭೀಮನು ಅಸ್ತ್ರವನ್ನಿದಿರಿಸಿದನು.

ಅರ್ಥ:
ದೇಹ: ಒಡಲು, ಶರೀರ; ಕೀರ್ತಿ: ಯಶಸ್ಸು; ನಿಲುವು: ನಿಂತುಕೊಳ್ಳು; ಮುರಾಂತಕ: ಕೃಷ್ಣ; ಬೇಹುದು: ಬೇಕಾದುದು; ಬೆಸಸು: ಹೇಳು, ಆಜ್ಞಾಪಿಸು; ಬಲ್ಲಿರಿ: ತಿಳಿದ; ಗಾಹು: ಮೋಸ; ಉಳಿವ: ಮಿಕ್ಕ; ಧರ್ಮ: ಧಾರಣೆ ಮಾಡಿದುದು; ದ್ರೋಹ: ಮೋಸ; ಸಾಹಸ: ಪರಾಕ್ರಮ; ಮುರಿ: ಸೀಳು; ಸರಳ: ಬಾಣ; ಸಮ್ಮುಖ: ಎದುರು; ಅನುವು: ರೀತಿ;

ಪದವಿಂಗಡಣೆ:
ದೇಹ +ಕೀರ್ತಿಗಳೊಳಗೆ +ನಿಲುವುದು
ದೇಹವೋ +ಕೀರ್ತಿಯೊ +ಮುರಾಂತಕ
ಬೇಹುದನು+ ಬೆಸಸಿದಡೆ+ ಮಾಡೆನು +ಬಲ್ಲಿರ್+ಎನ್ನ್+ಅನುವ
ಗಾಹುಗತಕದಲ್+ಉಳಿವ +ಧರ್ಮ
ದ್ರೋಹಿ +ತಾನಲ್ಲ್+ಇನ್ನು +ನೋಡಾ
ಸಾಹಸವನ್+ಎನುತ್+ಇತ್ತ +ಮುರಿದನು +ಸರಳ +ಸಮ್ಮುಖಕೆ

ಅಚ್ಚರಿ:
(೧) ಭೀಮನ ಸಾಹಸದ ನುಡಿ – ದೇಹ ಕೀರ್ತಿಗಳೊಳಗೆ ನಿಲುವುದು ದೇಹವೋ ಕೀರ್ತಿಯೊ

ಪದ್ಯ ೪೨: ಕೃಷ್ಣನು ಭೀಮನಿಗೆ ಏನು ಮಾಡಲು ಹೇಳಿದನು?

ಇವರೊಳುಂಟೇ ಕೈದುವೊತ್ತವ
ರವರನರಸುವೆನೆನುತ ಬರಲಾ
ಪವನಸುತನನು ಥಟ್ಟಿಸಿದನಾ ದನುಜರಿಪು ಮುಳಿದು
ಅವನಿಗಿಳಿದೀಡಾಡಿ ಕಳೆ ಕೈ
ದುವನು ತಾ ಮೊದಲಾಗಿ ನಿಂದಂ
ದವನು ನೋಡೆನಲನಿಲಸುತ ನಸುನಗುತಲಿಂತೆಂದ (ದ್ರೋಣ ಪರ್ವ, ೧೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಎದುರಿನಲ್ಲಿ ಎಲ್ಲರೂ ಶಸ್ತ್ರವನ್ನು ತ್ಯಜಿಸಿರುವುದನ್ನು ಕಂಡ ನಾರಾಯಣಾಸ್ತ್ರವು, ಶಸ್ತ್ರವನ್ನು ಹಿಡಿದವರನ್ನು ಹುಡುಕುತ್ತಾ ಬರುತ್ತಿತ್ತು. ಆಗ ಕೃಷ್ಣನು ಭೀಮನಿಗೆ ಕೋಪದಿಂದ, ತನ್ನ ಕೈಯಲ್ಲಿರುವ ಆಯುಧವನ್ನು ಭೂಮಿಗೆ ಎಸೆದು ನನ್ನನ್ನೇ ನೋಡೆಂದು ಹೇಳಲು ಭೀಮನು ನಗುತ್ತಾ ಹೀಗೆ ಉತ್ತರಿಸಿದನು.

ಅರ್ಥ:
ಕೈದು: ಶಸ್ತ್ರ; ಒತ್ತ: ಹಿಡಿದ; ಅಸರು: ಹುಡುಕು; ಬರಲು: ಆಗಮಿಸು; ಪವನಸುತ: ಭೀಮ; ಸುತ: ಮಗ; ಥಟ್ಟು: ಪಕ್ಕ, ಕಡೆ, ಗುಂಪು; ದನುಜರಿಪು: ಕೃಷ್ಣ; ಮುಳಿ: ಸಿಟ್ಟು, ಕೋಪ; ಅವನಿ: ಭೂಮಿ; ಈಡಾಡು: ಕಿತ್ತು, ಒಗೆ, ಚೆಲ್ಲು; ಕಳೆ: ಬೀಡು, ತೊರೆ; ಕೈದು: ಆಯುಧ; ಮೊದಲು: ಮುಂಚೆ; ನಿಂದು: ನಿಲ್ಲು; ನೋಡು: ವೀಕ್ಷಿಸು; ಅನಿಲಸುತ: ಭೀಮ; ನಸುನಗು: ಹಸನ್ಮುಖ;

ಪದವಿಂಗಡಣೆ:
ಇವರೊಳ್+ಉಂಟೇ +ಕೈದು+ ವೊತ್ತವರ್
ಅವರನ್+ಅರಸುವೆನ್+ಎನುತ +ಬರಲ್+ಆ
ಪವನಸುತನನು+ ಥಟ್ಟಿಸಿದನಾ +ದನುಜರಿಪು+ ಮುಳಿದು
ಅವನಿಗ್+ಇಳಿದ್+ಈಡಾಡಿ +ಕಳೆ +ಕೈ
ದುವನು +ತಾ +ಮೊದಲಾಗಿ +ನಿಂದಂದ್
ಅವನು+ ನೋಡೆನಲ್+ಅನಿಲಸುತ +ನಸುನಗುತಲ್+ಇಂತೆಂದ

ಅಚ್ಚರಿ:
(೧) ಪವನಸುತ, ಅನಿಲಸುತ – ಭೀಮನನ್ನು ಕರೆದ ಪರಿ

ಪದ್ಯ ೪೧: ನಾರಾಯಣಾಸ್ತ್ರವು ಯಾವ ಪ್ರಮಾಣ ಮಾಡಿತು?

ಏಕೆ ನಾಚಿಕೆ ಧರ್ಮಹಾನಿ
ವ್ಯಾಕುಳತೆಯಿನ್ನೇಕೆ ವೈದಿಕ
ಲೌಕಿಕವದೇಗುವುವು ಜೀವವ್ರಯಕೆ ಕುಲವುಂಟೆ
ಏಕೆ ಭಯ ನಮಗಿನ್ನು ಕೈದುವ
ನೂಕಿದವರನು ಹೆಂಗಸನು ತಾ
ಸೋಕಿದರೆ ಮುರಹರನ ಪದದಾಣೆಂದುದಮಳಾಸ್ತ್ರ (ದ್ರೋಣ ಪರ್ವ, ೧೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರವು, ನಾಚಿಕೆಯೇಕೆ, ಧರ್ಮಹಾನಿಯಾಯಿತೆಂಬ ನೋವೇಕೆ? ವೈದಿಕ ಲೌಕಿಕಗಳು ಏನು ಮಾಡಿಯಾವು? ಸಾಯುವುದಕ್ಕೆ ಯಾವ ಕುಲ? ಆಯುಧವನ್ನು ಹಿಡಿಯದವರನ್ನು ಹೆಂಗುಸನ್ನು ಮುಟ್ಟಿದರೆ ಶ್ರೀಕೃಷ್ಣ ಪಾದದಣೆ ಎಂದಿತು.

ಅರ್ಥ:
ನಾಚಿಕೆ: ಲಜ್ಜೆ, ಸಿಗ್ಗು; ಧರ್ಮ: ಧಾರಣೆ ಮಾಡಿದುದು; ಹಾನಿ: ನಷ್ಟ; ವ್ಯಾಕುಲ: ದುಃಖ, ವ್ಯಥೆ, ಗಾಬರಿ; ವೈದಿಕ: ವೇದಗಳನ್ನು ಬಲ್ಲವನು; ಲೌಕಿಕ: ಪ್ರಪಂಚಕ್ಕೆ ಸಂಬಂಧಿಸಿದ; ಏಗು: ನಿಭಾಯಿಸು; ಜೀವ: ಪ್ರಾಣ; ವ್ರಯ: ಖರ್ಚು; ಕುಲ: ವಂಶ; ಭಯ: ಅಂಜಿಕೆ; ಕೈದು: ಆಯುಧ; ನೂಕು: ತಳ್ಳು; ಹೆಂಗಸು: ಹೆಣ್ಣು; ಸೋಕು: ಮುಟ್ಟು; ಮುರಹರ: ಕೃಷ್ಣ; ಪದ: ಚರಣ; ಆಣೆ: ಪ್ರಮಾಣ; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ಏಕೆ+ ನಾಚಿಕೆ +ಧರ್ಮಹಾನಿ
ವ್ಯಾಕುಳತೆ+ಇನ್ನೇಕೆ +ವೈದಿಕ
ಲೌಕಿಕವದ್+ಏಗುವುವು +ಜೀವ+ವ್ರಯಕೆ +ಕುಲವುಂಟೆ
ಏಕೆ +ಭಯ +ನಮಗಿನ್ನು +ಕೈದುವ
ನೂಕಿದವರನು +ಹೆಂಗಸನು +ತಾ
ಸೋಕಿದರೆ +ಮುರಹರನ +ಪದದಾಣೆಂದುದ್+ಅಮಳಾಸ್ತ್ರ

ಅಚ್ಚರಿ:
(೧) ಸಾವು ಅಂತ ಹೇಳಲು ಜೀವವ್ರಯ ಪದದ ಬಳಕೆ
(೨) ಆಯುಧವಿಲ್ಲದವರನ್ನು ಎಂದು ಹೇಳಲು ಕೈದುವ ನೂಕಿದವರನು ಪದದ ಬಳಕೆ

ಪದ್ಯ ೪೦: ನಾರಾಯಣಾಸ್ತ್ರವು ಏನನ್ನು ನೋಡಿತು?

ಹರಿಯ ಬಯ್ಗುಳು ಬೆದರಿಸಲು ನೃಪ
ನಿರೆ ನಿರಾಯುಧನಾಗಿ ಮಾದ್ರೇ
ಯರು ಶಿಖಂಡಿ ಯುಯುತ್ಸು ಸಾತ್ಯಕಿ ಸೃಂಜಯಾದಿಗಳು
ಕರದ ಕದಪಿನ ತಳಿತ ಮುಸುಕಿನ
ಮುರಿದ ಮೋರೆಯ ಮುಂದೆ ಹರಹಿದ
ತರತರದ ಕೈದುಗಳ ಸುಭಟರ ಕಂಡುದಮಳಾಸ್ತ್ರ (ದ್ರೋಣ ಪರ್ವ, ೧೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಬೈಗುಳಿಗೆ ಹೆದರಿ ಧರ್ಮಜನು ನಿರಾಯುಧನಾಗಿ ಕುಳಿತಿದ್ದನು. ನಕುಲ, ಸಹದೇವ, ಶಿಖಂಡಿ, ಯುಯುತ್ಸು, ಸಾತ್ಯಕಿ ಸೃಂಜಯ ಮೊದಲಾದವರೆಲ್ಲಾ ಕೆನ್ನೆಯ ಮೇಲೆ ಕೈಯಿಟ್ಟು ಮುಸುಕು ಹಾಕಿಕೊಂಡು ಆಯುಧಗಳನ್ನೂ ತಮ್ಮ ಮುಂದೆ ಹರಡಿ ಇಟ್ಟುಕೊಂಡಿರುವುದನ್ನು ನಾರಾಯಣಾಸ್ತ್ರವು ನೋಡಿತು.

ಅರ್ಥ:
ಹರಿ: ಕೃಷ್ಣ; ಬಯ್ಗುಳು: ಜರಿದ ಮಾತು; ಬೆದರಿಸು: ಹೆದರಿಸು; ನೃಪ: ರಾಜ; ನಿರಾಯುಧ: ಆಯುಧವಿಲ್ಲದ ಸ್ಥಿತಿ; ಆದಿ: ಮುಂತಾದ; ಕರ: ಕೈ; ಕದಪು: ಕೆನ್ನೆ; ತಳಿತ: ಚಿಗುರಿದ; ಮುಸುಕು: ಹೊದಿಕೆ; ಮುರಿ: ಸೀಳು; ಮೋರೆ: ಮುಖ; ಮುಂದೆ: ಎದುರು; ಹರಹು: ವಿಸ್ತಾರ, ವೈಶಾಲ್ಯ; ತರತರ: ವಿಧವಿಧ; ಕೈದು: ಆಯುಧ; ಸುಭಟ: ಪರಾಕ್ರಮಿ; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ಹರಿಯ +ಬಯ್ಗುಳು +ಬೆದರಿಸಲು+ ನೃಪ
ನಿರೆ +ನಿರಾಯುಧನಾಗಿ+ ಮಾದ್ರೇ
ಯರು +ಶಿಖಂಡಿ +ಯುಯುತ್ಸು +ಸಾತ್ಯಕಿ+ ಸೃಂಜಯಾದಿಗಳು
ಕರದ +ಕದಪಿನ +ತಳಿತ +ಮುಸುಕಿನ
ಮುರಿದ+ ಮೋರೆಯ +ಮುಂದೆ +ಹರಹಿದ
ತರತರದ +ಕೈದುಗಳ +ಸುಭಟರ +ಕಂಡುದ್+ಅಮಳಾಸ್ತ್ರ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮುಸುಕಿನ ಮುರಿದ ಮೋರೆಯ ಮುಂದೆ
(೨) ಬೇಜಾರು, ನಿರುತ್ಸಾಹ ಎಂದು ಹೇಳುವ ಪರಿ – ಮುರಿದ ಮೋರೆಯ

ಪದ್ಯ ೩೯: ನಾರಾಯಣಾಸ್ತ್ರವು ಯಾರನ್ನು ಹುಡುಕಿಕೊಂಡು ಹೋಯಿತು?

ಭೀತ ಕೈದುಗಳಖಿಳದಳ ಸಂ
ಘಾತವನು ಬಾಣಾಗ್ನಿ ಬೆರಸಿತು
ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ
ಆತನಾವೆಡೆ ಧರ್ಮಜನು ವಿ
ಖ್ಯಾತನರ್ಜುನನನಿಲಸುತ ಮಾ
ದ್ರೀತನುಜರೆಂದೆನುತ ಹೊಕ್ಕುದು ರಾಜ ಮೋಹರವ (ದ್ರೋಣ ಪರ್ವ, ೧೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಸೈನ್ಯದಲ್ಲಿ ಆಯುಧವನ್ನೆಸೆದು ನಿಮ್ತ ಎಲ್ಲರನ್ನೂ ಬಾಣಾಗ್ನಿ ಆವರಿಸಿ ಭಲೇ ಭಂಡರಿರಾ ಎನ್ನುತ್ತಾ ಅವರನ್ನು ಕೈ ಬಿಟ್ಟಿತು, ಆ ಧರ್ಮಜನೆಲ್ಲಿ, ಅರ್ಜುನನೆಲ್ಲಿ, ಭೀಮನೆಲ್ಲಿ, ಮಾದ್ರಿಯ ಮಕ್ಕಳೆಲ್ಲಿ ಎನ್ನುತ್ತಾ ನಾರಾಯಣಾಸ್ತ್ರವು ಅವರನ್ನು ಹುಡುಕಿಕೊಂಡು ಹೋಯಿತು.

ಅರ್ಥ:
ಭೀತ: ಭಯ; ಕೈದು: ಆಯುಧ; ಅಖಿಳ: ಎಲ್ಲಾ; ದಳ: ಸೈನ್ಯ; ಸಂಘಾತ: ಗುಂಪು, ಸಮೂಹ; ಬಾಣ: ಸರಳು; ಅಗ್ನಿ: ಬೆಂಕಿ; ಬೆರಸು: ಕಲಸು; ಪೂತು: ಭಲೇ; ಭಂಡ: ನಾಚಿಕೆ, ಲಜ್ಜೆ; ಬಿಟ್ಟು: ತೊರೆ; ಬಾಣ: ಸರಳು; ಅರಿ: ವೈರಿ; ಭಟ: ಸೈನ್ಯ; ವಿಖ್ಯಾತ: ಪ್ರಸಿದ್ಧ; ಅನಿಲಸುತ: ಭೀಮ; ಸುತ: ಪುತ್ರ; ತನುಜ: ಮಗ; ಹೊಕ್ಕು: ಸೇರು; ಮೋಹರ: ಯುದ್ಧ;

ಪದವಿಂಗಡಣೆ:
ಭೀತ +ಕೈದುಗಳ್+ಅಖಿಳ+ದಳ +ಸಂ
ಘಾತವನು +ಬಾಣಾಗ್ನಿ +ಬೆರಸಿತು
ಪೂತು+ ಭಂಡರಿರ್+ಎನುತ +ಬಿಟ್ಟುದು +ಬಾಣವ್+ಅರಿ+ಭಟರ
ಆತನಾವೆಡೆ +ಧರ್ಮಜನು +ವಿ
ಖ್ಯಾತನ್+ಅರ್ಜುನನ್+ಅನಿಲಸುತ +ಮಾ
ದ್ರೀತನುಜರ್+ಎಂದೆನುತ +ಹೊಕ್ಕುದು +ರಾಜ +ಮೋಹರವ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಾಣಾಗ್ನಿ ಬೆರಸಿತು ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ

ಪದ್ಯ ೩೮: ಪಾಂಡವರ ಸೇನೆಯು ಯಾವ ಉಪಾಯವನ್ನು ಅನುಸರಿಸಿದರು?

ಕಳಿದ ಹೂವಿನ ತೊಡಬೆಯೋ ಕುಸಿ
ದಲೆಯ ಬಿಟ್ಟಿಯ ಭಾರವೋ ನಿ
ರ್ಮಳನ ಚಿತ್ತದ ಖತಿಯೊ ದಾನವ್ಯಸನಿಯೊಡವೆಗಳೊ
ನಳಿನನಾಭನ ಮಾತು ಹಿಂಚಿತು
ಕಳಚಿದವು ಕೈದುಗಳು ಕೈಗಳ
ಲುಳಿವುಪಾಯದ ಜೋಡ ತೊಟ್ಟುದು ಪಾಂಡುಸುತಸೇನೆ (ದ್ರೋಣ ಪರ್ವ, ೧೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಇನ್ನೇನು ಉದುರಲಿರುವ ಹೂವಿನ ತೊಟ್ಟೋ, ಬಿಟ್ಟಿ ಕೂಲಿಗಾಗಿ ಭಾರಹೊತ್ತ ತಲೆಗಳೋ, ನಿರ್ಮಲ ಚಿತ್ತನ ಕೋಪವೋ, ದಾನಿಯ ಆಭರಣಗಳೋ ಎಂಬಂತೆ ಶ್ರೀಕೃಷ್ಣನ ಮಾತು ಮುಗಿಯುವ ಮೊದಲೇ ಯೋಧರ ಕೈಗಳಲ್ಲಿದ್ದ ಆಯುಧಗಳು ಕೆಳಕ್ಕೆ ಬಿದ್ದವು. ಉಳಿಯುವ ಉಪಾಯದ ಕವಚವನ್ನು ಪಾಂಡವರ ಸೇನೆ ಧರಿಸಿತು.

ಅರ್ಥ:
ಕಳಿದ: ಉದುರು; ಹೂವು: ಪುಷ್ಪ; ತೊಡಬೆ: ತೊಟ್ಟು; ಕುಸಿ: ಬೀಳು; ತಲೆ: ಶಿರ; ಬಿಟ್ಟಿ: ವ್ಯರ್ಥ; ಭಾರ: ಹೊರೆ; ನಿರ್ಮಳ: ಶುದ್ಧ; ಚಿತ್ತ: ಮನಸ್ಸು; ಖತಿ: ಕೋಪ; ದಾನ: ನೀಡುವ ಸ್ವಭಾವ; ವ್ಯಸನ: ಗೀಳು, ಚಟ; ಒಡವೆ: ಆಭರಣ; ನಳಿನನಾಭ: ಕೃಷ್ಣ; ಮಾತು: ವಾಣಿ; ಹಿಂಚು: ಮುಗಿ, ಕೊನೆಗೊಳ್ಳು; ಕಳಚು: ಬೇರ್ಪಡಿಸು, ತೆಗೆ; ಕೈದು: ಆಯುಧ; ಕೈ: ಹಸ್ತ; ಉಪಾಯ: ಯುಕ್ತಿ; ಜೋಡು: ಜೊತೆ, ಜೋಡಿ; ತೊಟ್ಟು: ತೊಡು; ಸುತ: ಮಕ್ಕಳು; ಸೇನೆ: ಸೈನ್ಯ; ಲುಳಿ: ವೇಗ;

ಪದವಿಂಗಡಣೆ:
ಕಳಿದ+ ಹೂವಿನ +ತೊಡಬೆಯೋ +ಕುಸಿದ್
ತಲೆಯ +ಬಿಟ್ಟಿಯ +ಭಾರವೋ +ನಿ
ರ್ಮಳನ +ಚಿತ್ತದ +ಖತಿಯೊ +ದಾನ+ವ್ಯಸನಿ+ಒಡವೆಗಳೊ
ನಳಿನನಾಭನ +ಮಾತು +ಹಿಂಚಿತು
ಕಳಚಿದವು +ಕೈದುಗಳು +ಕೈಗಳ
ಲುಳಿ+ಉಪಾಯದ+ ಜೋಡ +ತೊಟ್ಟುದು +ಪಾಂಡುಸುತಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಳಿದ ಹೂವಿನ ತೊಡಬೆಯೋ ಕುಸಿದಲೆಯ ಬಿಟ್ಟಿಯ ಭಾರವೋ ನಿ
ರ್ಮಳನ ಚಿತ್ತದ ಖತಿಯೊ ದಾನವ್ಯಸನಿಯೊಡವೆಗಳೊ

ಪದ್ಯ ೩೭: ಕೃಷ್ಣನು ಯಾವ ಉಪಾಯವನ್ನು ಹೇಳಿದನು?

ವಾಯಕಂಜದಿರಂಜದಿರಿ ಫಡ
ಬಾಯ ಬಿಟ್ಟರೆ ಹೋಹುದೇ ನಿ
ಮ್ಮಾಯುಷಕೆ ಹೊಣೆ ತಾನು ಹೇಳಿತ ಮಾಡಿ ಬೇಗದಲಿ
ಆಯುಧಂಗಳ ಬಿಸುಟು ಕರಿ ರಥ
ಜಾಯಿಲಂಗಳನಿಳಿದು ಬದುಕುವು
ಪಾಯವೆಂದಸುರಾರಿ ಸಾರಿದನಂದು ಕೈ ನೆಗಹಿ (ದ್ರೋಣ ಪರ್ವ, ೧೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಕೈಯೆತ್ತಿ, ಈ ಉರಿ ಹೊಗೆಗಳಿಗೆ ಮೋಸ ಹೋಗಬೇಡಿರಿ, ಬಾಯಿಬಿಟ್ಟು ಹಲುಬಿದರೆ ಇದು ಹೋಗುವುದಿಲ್ಲ. ನಿಮ್ಮ ಆಯುಷ್ಯಕ್ಕೆ ನಾನು ಜವಾಬ್ದಾರಿ ಹೊತ್ತಿದ್ದೇನೆ. ಹೇಳುವುದನ್ನು ಕೂಡಲೇ ಮಾಡಿರಿ, ಆಯುಧಗಳನ್ನು ಬಿಸುಡಿರಿ. ಆನೆ, ಕುದುರೆ ರಥಗಳಿಂದ ಇಳಿದುಬಿಡಿ. ಬದುಕಲು ಇರುವುದಿದೊಂದೇ ಉಪಾಯ ಎಂದು ಘೋಷಿಸಿದನು.

ಅರ್ಥ:
ವಾಯ: ಮೋಸ, ಕಪಟ, ಕಾರಣ; ಅಂಜು: ಹೆದರು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಬಿಡು: ಅಗಲಿಸು; ಹೋಹು: ತೆರಳು; ಆಯುಷ: ಜೀವಿತಾವಧಿ; ಹೊಣೆ: ಜವಾಬ್ದಾರಿ; ಹೇಳು: ತಿಳಿಸು; ಬೇಗ: ಶೀಘ್ರ; ಆಯುಧ: ಶಸ್ತ್ರ; ಬಿಸುಟು: ಹೊರಹಾಕು; ಕರಿ: ಆನೆ; ರಥ: ಬಂಡಿ; ಇಳಿ: ಕೆಳಕ್ಕೆ ನಡೆ; ಬದುಕು: ಜೀವಿಸು; ಉಪಾಯ: ಯುಕ್ತಿ, ಹಂಚಿಕೆ; ಅಸುರಾರಿ: ಕೃಷ್ಣ; ಸಾರು: ತಿಳಿಸು; ಕೈ: ಹಸ್ತ; ನೆಗಹು: ಮೇಲೆತ್ತು;

ಪದವಿಂಗಡಣೆ:
ವಾಯಕ್+ಅಂಜದಿರ್+ಅಂಜದಿರಿ+ ಫಡ
ಬಾಯ +ಬಿಟ್ಟರೆ +ಹೋಹುದೇ +ನಿಮ್ಮ್
ಆಯುಷಕೆ+ ಹೊಣೆ+ ತಾನು +ಹೇಳಿತ +ಮಾಡಿ +ಬೇಗದಲಿ
ಆಯುಧಂಗಳ +ಬಿಸುಟು +ಕರಿ+ ರಥ
ಜಾಯಿಲಂಗಳನ್+ಇಳಿದು +ಬದುಕು
ಉಪಾಯವೆಂದ್+ಅಸುರಾರಿ +ಸಾರಿದನ್+ಅಂದು +ಕೈ +ನೆಗಹಿ

ಅಚ್ಚರಿ:
(೧) ಕೃಷ್ಣನ ಅಭಯ ವಾಣಿ – ನಿಮ್ಮಾಯುಷಕೆ ಹೊಣೆ ತಾನು
(೨) ವಾಯ, ಬಾಯ, ಉಪಾಯ – ಪ್ರಾಸ ಪದಗಳು

ಪದ್ಯ ೩೬: ಪಾಂಡವ ಸೈನ್ಯದಲ್ಲಾದ ತೊಂದರೆ ಹೇಗಿತ್ತು?

ಝಳಕೆ ಘೀಳಿಟ್ಟೊರಲಿದವು ಕರಿ
ಕುಳ ತುರಂಗದ ಥಟ್ಟು ಖುರದಲಿ
ನೆಲನ ಹೊಯ್ದವ್ವಳಿಸಿದವು ರಾವುತರನೀಡಾಡಿ
ಬಲು ರಥವನಸಬಡಿದು ಸೂತನ
ನಿಳುಹಿ ಹಯವೋಡಿದವು ಮು
ಮ್ಮುಳಿಸಿ ತನಿಗುದಿಗುದಿದು ಕೋಟಲೆಗೊಂಡುದರಿಸೇನೆ (ದ್ರೋಣ ಪರ್ವ, ೧೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರದ ಬೆಂಕಿಯ ತಾಪಕ್ಕೆ ಆನೆಗಳು ಜೋರಾಗಿ ಕಿರುಚಿದವು. ಗೊರಸುಗಳಿಂದ ನೆಲವನಪ್ಪಳಿಸಿ, ರಾವುತರನ್ನು ಕೆಳಕ್ಕೆಸೆದು ಕುದುರೆಗಳು ಆರ್ಭಟಿಸಿದವು. ರಥವು ನೆಲಕ್ಕೆ ಬೀಳುವಂತೆ ಮಾಡಿ, ಸಾರಥಿಯನ್ನು ಲೆಕ್ಕಿಸದೆ ರಥಕ್ಕೆ ಕಟ್ಟಿದ ಕುದುರೆಗಳು ಓಡಿದವು. ಪಾಂಡವ ಸೈನ್ಯ ಕುದಿಕುದಿದು ತೊಂದರೆಯನ್ನು ಅನುಭವಿಸಿದವು.

ಅರ್ಥ:
ಝಳ: ತಾಪ; ಘೀಳಿಡು: ಕಿರುಚು; ಒರಲು: ಕೂಗು; ಕರಿ: ಆನೆ; ಕುಳ: ಗುಂಪು; ತುರಂಗ: ಕುದುರೆ; ಥಟ್ಟು: ಗುಂಪು; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ನೆಲ: ಭೂಮಿ; ಹೊಯ್ದು: ಹೊಡೆ; ಅವ್ವಳಿಸು: ಆರ್ಭಟಿಸು; ರಾವುತ: ಕುದುರೆ ಸವಾರ; ಈಡಾಡು: ಒಗೆ, ಚೆಲ್ಲು; ಬಲು: ಬಹಳ; ರಥ: ಬಂಡಿ; ಬಡಿ: ಹೊಡೆ; ಅಸಬಡಿ: ಸದೆಬಡಿ; ಸೂತ: ಸಾರಥಿ; ಇಳುಹಿ: ಕೆಳಗಿಳಿಸು; ಹಯ: ಕುದುರೆ; ಓಡು: ಧಾವಿಸು; ಮುಮ್ಮುಳಿಸು: ನಾಶವಾಗು; ತನಿ: ಹೆಚ್ಚಾಗು; ಕುದಿ: ಮರಳು; ಕೋಟಲೆ: ತೊಂದರೆ; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಝಳಕೆ +ಘೀಳಿಟ್ಟ್+ಒರಲಿದವು +ಕರಿ
ಕುಳ +ತುರಂಗದ +ಥಟ್ಟು +ಖುರದಲಿ
ನೆಲನ +ಹೊಯ್ದ್+ಅವ್ವಳಿಸಿದವು +ರಾವುತರನ್+ಈಡಾಡಿ
ಬಲು +ರಥವನ್+ಅಸಬಡಿದು +ಸೂತನನ್
ಇಳುಹಿ +ಹಯವ್+ಓಡಿದವು +ಮು
ಮ್ಮುಳಿಸಿ +ತನಿ+ಕುದಿಕುದಿದು +ಕೋಟಲೆಗೊಂಡುದ್+ಅರಿಸೇನೆ

ಅಚ್ಚರಿ:
(೧) ತುರಂಗ, ಹಯ; ಕುಳ, ಥಟ್ಟು – ಸಮಾನಾರ್ಥಕ ಪದ
(೨) ಘೀಳಿಡು, ಅವ್ವಳಿಸು, ಒರಲು – ಸಾಮ್ಯಾರ್ಥ ಪದ