ಪದ್ಯ ೧೭: ಕುರು ಸೈನ್ಯದ ಸ್ಥಿತಿ ಹೇಗಿತ್ತು?

ಸಿಡಿವ ತಲೆಗಳ ಬಳಿವಿಡಿದು ಧಾ
ರಿಡುವ ರಕುತದಲೆರಡು ಬಲದಲಿ
ಹಿಡಿದ ದೀವಿಗೆ ನಂದಿದವು ಕುಂದಿದುದು ಚತುರಂಗ
ಮಡಮುರಿಯ ಮಯವಾಯ್ತು ಸುಭಟರ
ನಿಡು ಮುಸುಕು ಮೋಹಿಸಿತು ಮುರುಹಿನ
ಕಡುಹುಕಾರರು ಕೇಣಿಗೊಂಡರು ಬಹಳ ದುಷ್ಕೃತವ (ದ್ರೋಣ ಪರ್ವ, ೧೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಉರುಳಿದ ತಲೆಗಳಿಂದ, ಧಾರೆಯಾಗಿ ಚಿಮ್ಮಿಸುರಿದ ರಕ್ತದಿಂದ ಎರಡೂಕಡೆಯ ಸೈನ್ಯಗಳ ದೀಪಗಳು ಆರಿಹೋದವು. ಚತುರಂಗ ಬಲ ಕುಗ್ಗಿತು. ತೋಳುಗಳು ಎಲ್ಲೆಲ್ಲೂ ಮುರಿದವು. ವೀರರು ಮುಖಕ್ಕೆ ಮುಸುಕು ಹಾಕಿಕೊಂಡು ಜಾರಿದರು. ವೀರರನ್ನಿಸಿಕೊಂಡವರು ಬಹಳ ದುಷ್ಕೃತಕ್ಕೊಳಗಾದರು. ಪಾಪದ ಕೇಣಿಯನ್ನು ತೆಗೆದುಕೊಂಡರು.

ಅರ್ಥ:
ಸಿಡಿ: ಸೀಳು; ತಲೆ: ಶಿರ; ಬಳಿ: ಹತ್ತಿರ; ಧಾರೆ: ಮಳೆ; ರಕುತ: ನೆತ್ತರು; ಬಲ: ಸೈನ್ಯ; ಹಿಡಿ: ಗ್ರಹಿಸು; ದೀವಿಗೆ: ದೀಪ; ನಂದು: ಆರಿಹೋಗು, ಮಂಕಾಗು; ಕುಂದು: ಕೊರತೆ, ನೂನ್ಯತೆ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಮಡ: ಪಾದದ ಹಿಂಭಾಗ, ಹರಡು, ಹಿಮ್ಮಡಿ; ಮುರಿ: ಸೀಳು; ಮಯ: ತುಂಬಿದ; ಸುಭಟ: ಸೈನಿಕ; ಮುಸುಕು: ಹೊದಿಕೆ; ಮೋಹಿಸು: ಇಚ್ಛಿಸು; ಮುರುಹು: ತಿರುಗಿಸು; ಕಡುಹು: ಸಾಹಸ; ಕೇಣಿ: ಗುತ್ತಿಗೆ, ಗೇಣಿ; ಬಹಳ: ತುಂಬ; ದುಷ್ಕೃತ: ಕೆಟ್ಟ ಕೆಲಸ;

ಪದವಿಂಗಡಣೆ:
ಸಿಡಿವ +ತಲೆಗಳ +ಬಳಿವಿಡಿದು +ಧಾ
ರಿಡುವ +ರಕುತದಲ್+ಎರಡು +ಬಲದಲಿ
ಹಿಡಿದ +ದೀವಿಗೆ +ನಂದಿದವು +ಕುಂದಿದುದು +ಚತುರಂಗ
ಮಡಮುರಿಯ +ಮಯವಾಯ್ತು +ಸುಭಟರನ್
ಇಡು +ಮುಸುಕು +ಮೋಹಿಸಿತು +ಮುರುಹಿನ
ಕಡುಹುಕಾರರು +ಕೇಣಿಗೊಂಡರು+ ಬಹಳ +ದುಷ್ಕೃತವ

ಅಚ್ಚರಿ:
(೧) ರೂಪಕದ ಪ್ರಯೋಗ – ಧಾರಿಡುವ ರಕುತದಲೆರಡು ಬಲದಲಿ ಹಿಡಿದ ದೀವಿಗೆ ನಂದಿದವು

ಪದ್ಯ ೧೬: ಕೌರವರ ಪರಾಭವ ಹೇಗೆ ಕಂಡಿತು?

ಇಳಿದ ಕುದುರೆಗೆ ಬಿಸುಟ ರಥಸಂ
ಕುಳಕೆ ಹಾಯ್ಕಿದ ಟೆಕ್ಕೆಯಕೆ ಕೈ
ಬಳಿಚಿದಾಯುಧತತಿಗೆ ನೂಕಿದ ಜೋಡು ಸೀಸಕಕೆ
ಕಳಚಿದಾಭರಣಾತಪತ್ರಾ
ವಳಿಗೆ ಕಾಣೆನು ಕಡೆಯನೀ ಪರಿ
ಕೊಲೆಗೆ ಭಂಗಕೆ ನಿನ್ನ ಬಿರುದರು ಬಂದುದಿಲ್ಲೆಂದ (ದ್ರೋಣ ಪರ್ವ, ೧೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಇಳಿದ ಕುದುರೆಗಳಿಗೆ, ಬಿಟ್ಟೋಡಿದ ರಥಗಳಿಗೆ, ಕೆಳಗಿಳಿಸಿದ ಧ್ವಜಗಳಿಗೆ, ಕೈಯಿಂದ ಕೆಳಬಿದ್ದ ಆಯುಧಗಳಿಗೆ, ಸರಿಸಿ ಹಾಕಿದ ಕವಚ, ಸೀಸಕಗಳಿಗೆ, ಕಳಚಿಹಾಕಿದ ಆಭರನಗಳಿಗೆ, ಎಸೆದ ಕೊಡೆಗಳಿಗೆ ಲೆಕ್ಕವೇ ಇಲ್ಲ. ನಿನ್ನ ವೀರರು ಇಷ್ಟೊಂದು ಕೊಲೆಗೆ ಅಪಮಾನಕ್ಕೆ ಎಂದೂ ಸಿಕ್ಕಿರಲಿಲ್ಲ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಇಳಿ: ಕೆಳಕ್ಕೆ ಬಾ; ಕುದುರೆ: ಅಶ್ವ; ಬಿಸುಟು: ಹೊರಹಾಕು; ರಥ: ಬಂಡಿ; ಸಂಕುಳ: ಗುಂಪು; ಹಾಯ್ಕು: ಇಡು, ಇರಿಸು; ಟೆಕ್ಕೆ: ಬಾವುಟ, ಧ್ವಜ; ಕೈ: ಹಸ್ತ; ಆಯುಧ: ಶಸ್ತ್ರ; ತತಿ: ಗುಂಪು; ನೂಕು: ತಳ್ಳು; ಜೋಡು: ಜೊತೆ; ಸೀಸಕ: ಶಿರಸ್ತ್ರಾಣ; ಕಳಚು: ಬೇರ್ಪಡಿಸು, ಬೇರೆಮಾಡು; ಆಭರಣ: ಒಡವೆ; ಆತಪತ್ರ: ಕೊಡೆ, ಛತ್ರಿ; ಆವಳಿ: ಗುಂಪು; ಕಾಣು: ತೋರು; ಪರಿ: ರೀತಿ; ಕೊಲೆ:ಸಾವು; ಭಂಗ: ಮುರಿಯುವಿಕೆ; ಬಿರುದರು: ವೀರರು;

ಪದವಿಂಗಡಣೆ:
ಇಳಿದ +ಕುದುರೆಗೆ +ಬಿಸುಟ +ರಥ+ಸಂ
ಕುಳಕೆ +ಹಾಯ್ಕಿದ +ಟೆಕ್ಕೆಯಕೆ +ಕೈ
ಬಳಿಚಿದ್+ಆಯುಧ+ತತಿಗೆ +ನೂಕಿದ +ಜೋಡು +ಸೀಸಕಕೆ
ಕಳಚಿದ್+ಆಭರಣ+ಆತಪತ್ರ
ಆವಳಿಗೆ +ಕಾಣೆನು +ಕಡೆಯನೀ +ಪರಿ
ಕೊಲೆಗೆ +ಭಂಗಕೆ +ನಿನ್ನ +ಬಿರುದರು+ ಬಂದುದಿಲ್ಲೆಂದ

ಅಚ್ಚರಿ:
(೧) ವೀರರು ಎಂದು ಹೇಳಲು – ಬಿರುದರು ಪದದ ಬಳಕೆ
(೨) ಸಂಕುಳ, ತತಿ – ಸಾಮ್ಯಾರ್ಥ ಪದ

ಪದ್ಯ ೧೫: ಅತಿರಥರೇಕೆ ಹಿಮ್ಮೆಟ್ಟಿದರು?

ಹಾಯಿಕಲಿ ಟೇಕ್ಕೆಯವ ಭಟ್ಟರ
ಬಾಯ ಹೊಯ್ ಗಡಬಡೆಯ ಹೊತ್ತ
ಲ್ಲಾಯುಧವನೀಡಾಡು ಕೊಯ್ ಕೊಯ್ ಜೋಡು ಹೊಲಿಗೆಗಳ
ರಾಯ ಕೊಂದರೆ ಕೊಲಲಿ ಸುಕೃತವು
ಬೀಯವಾಗಲಿ ನಾವು ರಕ್ಕಸ
ನಾಯ ಕಯ್ಯಲಿ ಸಾಯೆವೆನುತೊಡೆಮುರಿದರತಿರಥರು (ದ್ರೋಣ ಪರ್ವ, ೧೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧ್ವಜವನ್ನಿಳಿಸಿರಿ, ಹೊಗಳುಭಟ್ಟರ ಬಾಯಿಗಳನ್ನು ಬಡಿಯಿರಿ, ಇದು ಯುದ್ಧದಲ್ಲಿ ತೊಡಗುವ ಸಮಯವಲ್ಲ. ಆಯುಧವನ್ನು ಎಸೆಯಿರಿ. ಕವಚಗಳನ್ನು ಬಿಚ್ಚಿರಿ. ನಮ್ಮನ್ನು ರಾಜನೇ ಕೊಲ್ಲಲಿ, ನಮ್ಮ ಪುಣ್ಯ ಹಾಳಾಗಲಿ, ಈ ರಾಕ್ಷಸ ನಾಯಿಯಿಂದ ನಾವು ಸಯುವುದಿಲ್ಲ ಎನ್ನುತ್ತಾ ಅತಿರಥರು ಹಿಮ್ಮೆಟ್ಟಿದರು.

ಅರ್ಥ:
ಹಾಯಿಕು: ಹಾಕು; ಟೆಕ್ಕೆ: ಬಾವುಟ; ಭಟ್ಟ: ಸೈನಿಕ; ಗಡಬಡ: ಗಟ್ಟಿಯಾದ ಶಬ್ದ; ಹೊತ್ತು: ಹೊರು; ಆಯುಧ: ಶಸ್ತ್ರ; ಈಡಾಡು: ಕಿತ್ತು, ಒಗೆ; ಜೋಡು: ಜೊತೆ, ಜೋಡಿ; ಹೊಲಿಗೆ: ಹೊಲಿಯುವಿಕೆ; ರಾಯ: ರಾಜ; ಕೊಂದು: ಸಾಯಿಸು; ಸುಕೃತ: ಒಳ್ಳೆಯ ಕೆಲಸ; ಬೀಯ: ತೌಡನ್ನು ತೆಗೆದ ಅಕ್ಕಿ ; ರಕ್ಕಸ: ರಾಕ್ಷಸ; ನಾಯ: ನಾಯಿ; ಮುರಿ: ಸೀಳು; ಅತಿರಥ: ಪರಾಕ್ರಮಿ;

ಪದವಿಂಗಡಣೆ:
ಹಾಯಿಕಲಿ +ಟೆಕ್ಕೆಯವ +ಭಟ್ಟರ
ಬಾಯ +ಹೊಯ್ +ಗಡಬಡೆಯ +ಹೊತ್ತಲ್
ಆಯುಧವನ್+ಈಡಾಡು +ಕೊಯ್ +ಕೊಯ್ +ಜೋಡು +ಹೊಲಿಗೆಗಳ
ರಾಯ +ಕೊಂದರೆ +ಕೊಲಲಿ +ಸುಕೃತವು
ಬೀಯವಾಗಲಿ +ನಾವು +ರಕ್ಕಸ
ನಾಯ +ಕಯ್ಯಲಿ +ಸಾಯೆವೆನುತ್+ಒಡೆ+ಮುರಿದರ್+ಅತಿರಥರು

ಅಚ್ಚರಿ:
(೧) ರಾಯ, ಬಾಯ, ನಾಯ – ಪದಗಳ ಬಳಕೆ

ಪದ್ಯ ೧೪: ಘಟೋತ್ಕಚನನೆದುರು ಕುರುಸೈನ್ಯವೇಕೆ ನಿಲ್ಲಲಿಲ್ಲ?

ಇವನ ಧಾಳಿಯನಿವನ ಧೈರ್ಯವ
ನಿವನ ಹೂಣಿಗತನವನಿವನಾ
ಹವದ ಹೊರಿಗೆಯನಿವನ ಭಾರಿಯ ವೆಗ್ಗಳೆಯತನವ
ದಿವಿಜರಾನಲು ನೂಕದಿದು ನ
ಮ್ಮವರ ಪಾಡೇನೈ ಪಲಾಯನ
ತವನಿಧಿಯಲೇ ನಿಮ್ಮ ಬಲ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೧೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಘಟೋತ್ಕಚನ ದಾಳಿ, ಧೈರ್ಯ, ಯುದ್ಧದ ಚಾತುರ್ಯ, ಇವನ ಮೀರಿದ ಸತ್ವಗಳನ್ನು ದೇವತೆಗಳೂ ಎದುರಿಸಿ ನಿಲ್ಲಲಾರರು ಎಂದ ಮೇಲೆ ನಮ್ಮ ಕುರುಸೈನ್ಯದ ಪಾಡೇನು. ನಿಮ್ಮ ಸೈನ್ಯವು ಪಲಾಯನ ಮಾಡಿದರು.

ಅರ್ಥ:
ಧಾಳಿ: ಆಕ್ರಮಣ; ಧೈರ್ಯ: ದಿಟ್ಟತನ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ, ಸಾಹಸಿ; ಆಹವ: ಯುದ್ಧ; ಹೊರೆಗೆ: ಭಾರ, ಹೊರೆ; ಭಾರಿ: ಅತಿಶಯವಾದ; ವೆಗ್ಗಳಿಕೆ: ಶ್ರೇಷ್ಠತೆ; ದಿವಿಜ: ಅಮರರು; ನೂಕು: ತಳ್ಳು; ಪಾಡು: ಸ್ಥಿತಿ; ಪಲಾಯನ: ಓಡುವಿಕೆ, ಪರಾರಿ; ತವನಿಧಿ: ಕೊನೆಯಾಗದ ಭಂಡಾರ; ಬಲ: ಸೈನ್ಯ; ಕೇಳು: ಆಲಿಸು;

ಪದವಿಂಗಡಣೆ:
ಇವನ+ ಧಾಳಿಯನ್+ಇವನ +ಧೈರ್ಯವನ್
ಇವನ +ಹೂಣಿಗತನವನ್+ಇವನ್
ಆಹವದ +ಹೊರಿಗೆಯನ್+ಇವನ +ಭಾರಿಯ +ವೆಗ್ಗಳೆಯತನವ
ದಿವಿಜರಾನಲು +ನೂಕದಿದು+ ನ
ಮ್ಮವರ +ಪಾಡೇನೈ +ಪಲಾಯನ
ತವನಿಧಿಯಲೇ +ನಿಮ್ಮ +ಬಲ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಪಲಾಯನವನ್ನು ವಿವರಿಸುವ ಪರಿ – ನಮ್ಮವರ ಪಾಡೇನೈ ಪಲಾಯನ ತವನಿಧಿಯಲೇ ನಿಮ್ಮ ಬಲ

ಪದ್ಯ ೧೩: ಅಶ್ವತ್ಥಾಮನು ಯಾವ ಮಂತ್ರವನ್ನು ಜಪಿಸಿದನು?

ಧಾತುಗೆಟ್ಟುದು ದೊದ್ದೆಯೆಂದೇ
ಭೂತಳಾಧಿಪ ಬಗೆಯದಿರು ತೆಗೆ
ಮಾತು ಹುಸಿ ಮರಳಿದರು ನಿನ್ನಯ ಪಟ್ಟದಾನೆಗಳು
ಭೀತಿಗೊಂಡನು ದ್ರೋಣ ಸೋಲಕೆ
ಕೇತುವಾದನು ಶಲ್ಯನಪಜಯ
ಮಾತೃಕಾಕ್ಷರನಾದನಶ್ವತ್ಥಾಮನಿಂದಿನಲಿ (ದ್ರೋಣ ಪರ್ವ, ೧೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಶತ್ರುವು ಬರಿಯ ದೊಂಬಿಮಾಡಿ ಅರಿಚಿಕೊಳ್ಳುವನೆಂದುಕೊಳ್ಳಬೇಡ ರಾಜನೇ. ನಿನ್ನ ಪಟ್ಟದಾನೆಗಳ ಪ್ರತಿಜ್ಞೆ ಹುಸಿಯಾಗಿ ಅವರೆಲ್ಲ ಸೋತು ಬಂದರು. ದ್ರೋಣನು ಭಯಗೊಂಡನು. ಶಲ್ಯನು ಸೋಲಿನ ಧ್ವಜವನ್ನೇರಿಸಿದನು. ಅಶ್ವತ್ಥಾಮನು ಅಪಜಯದ ಬೀಜಮಂತ್ರವನ್ನು ಜಪಿಸಿದನು.

ಅರ್ಥ:
ಧಾತು: ಮೂಲವಸ್ತು; ಕೆಟ್ಟು: ಹಾಳು; ದೊದ್ದೆ: ಗುಂಪು, ಸಮೂಹ; ಭೂತಳಾಧಿಪ: ರಾಜ; ಬಗೆ: ತಿಳಿ; ತೆಗೆ: ಹೊರತರು; ಮಾತು: ವಾಣಿ; ಹುಸಿ: ಸುಳ್ಳು; ಮರಳು: ಹಿಂದಿರುಗು; ಪಟ್ಟ: ಶ್ರೇಷ್ಠ, ಅಧಿಕಾರ; ಆನೆ: ಗಜ; ಭೀತಿ: ಭಯ; ಸೋಲು: ಪರಾಭವ; ಕೇತು: ಬಾವುಟ; ಅಪಜಯ: ಸೋಲು; ಮಾತೃ: ಮಾತೆ; ಅಕ್ಷರ: ಬರೆಹ, ಮಂತ್ರ; ಮಾತೃಕಾಕ್ಷರ: ಮಂತ್ರಬೀಜಾಕ್ಷರ;

ಪದವಿಂಗಡಣೆ:
ಧಾತುಗೆಟ್ಟುದು +ದೊದ್ದೆಯೆಂದೇ
ಭೂತಳಾಧಿಪ +ಬಗೆಯದಿರು +ತೆಗೆ
ಮಾತು +ಹುಸಿ +ಮರಳಿದರು +ನಿನ್ನಯ +ಪಟ್ಟದಾನೆಗಳು
ಭೀತಿಗೊಂಡನು +ದ್ರೋಣ +ಸೋಲಕೆ
ಕೇತುವಾದನು +ಶಲ್ಯನ್+ಅಪಜಯ
ಮಾತೃಕಾಕ್ಷರನಾದನ್+ಅಶ್ವತ್ಥಾಮನ್+ಇಂದಿನಲಿ

ಅಚ್ಚರಿ:
(೧) ಪರಾಕ್ರಮಿಗಳನ್ನು ಕರೆದ ಪರಿ – ಪಟ್ಟದಾನೆ
(೨) ಸೋಲು, ಅಪಜಯ – ಸಮಾನಾರ್ಥಕ ಪದಗಳು