ಪದ್ಯ ೪: ಕೌರವ ಸೈನಿಕರು ಘಟೋತ್ಕಚನನ್ನು ಹೇಗೆ ಆಕ್ರಮಣ ಮಾಡಿದರು?

ಹೊಕ್ಕ ಸುಭಟರು ಮರಳದಿರಿ ಖಳ
ಸಿಕ್ಕಿದನು ಸಿಕ್ಕಿದನು ಚಲಿಸುವ
ಚುಕ್ಕಿಗರ ಹೊಯ್ ಬೀಳಗುತ್ತೆನುತರಸನುಬ್ಬರಿಸೆ
ಹೊಕ್ಕು ತಿವಿದರು ನೀಡಿ ಹರಿಗೆಯ
ನಿಕ್ಕಿ ನಿಂದರು ತಮತಮಗೆ ಮೇ
ಲಿಕ್ಕಿದರು ತೆರೆ ಮುರಿಯೆ ಬಳಿದೆರೆ ಮಸಗಿ ಕವಿವಂತೆ (ದ್ರೋಣ ಪರ್ವ, ೧೬ ಸಂಧಿ, ೪ ಪದ್ಯ)

ತಾತ್ಪರ್ಯ:
ದುರ್ಯೋಧನನು, ಮುಂದೆ ನುಗ್ಗಿದ ಯೋಧರು ಹಿಮ್ಮೆಟ್ಟಬೇಡಿರಿ ರಾಕ್ಷಸನು ಸಿಕ್ಕೇಬಿಟ್ಟ ಸಿಕ್ಕೇಬಿಟ್ಟ, ಹೆದರುವ ಚುಕ್ಕೆಗಳನ್ನು ನೀವೇ ಹೊಡೆದು ಕೆಡವಿರಿ, ಎಂದು ಗರ್ಜಿಸಲು, ಸೈನಿಕರು ಹೊಕ್ಕು ಘಟೋತ್ಕಚನನ್ನು ತಿವಿದರು. ಅವನ ಹೊಡೆತಗಳನ್ನು ಗುರಾಣಿಗಳಿಂದ ತಪ್ಪಿಸಿಕೊಂಡರು. ಒಂದು ತೆರೆಯ ಹಿಂದೆ ಮತ್ತೊಂದು ತರೆ ಮೇಲೆ ಬಂದಮ್ತೆ ಘಟೋತ್ಕಚನ ಮೇಲೆ ನುಗ್ಗಿದರು.

ಅರ್ಥ:
ಹೊಕ್ಕು: ಸೇರು; ಭಟ: ಸೈನಿಕ; ಮರಳು: ಹಿಂದಿರುಗು; ಇರಿ: ಸೀಳು; ಖಳ: ದುಷ್ಟ; ಸಿಕ್ಕು: ತೊಡಕು; ಚಲಿಸು: ನಡೆ; ಚುಕ್ಕಿ: ಬಿಂದು, ಚಿಹ್ನೆ; ಹೊಯ್: ಹೊಡೆ; ಬೀಳು: ಕುಗ್ಗು; ಅರಸ: ರಾಜ; ಉಬ್ಬರಿಸು: ಜೋರು ಮಾಡು; ತಿವಿ: ಸೀಳು; ಹರಿಗೆ: ಚಿಲುಮೆ, ತಲೆಪೆರಿಗೆ; ನಿಂದು: ನಿಲ್ಲು; ತೆರೆ: ತೆಗೆ, ಬಿಚ್ಚು; ಮುರಿ: ಸೀಳು; ಬಳಿ: ಸಾರಿಸು, ಒರೆಸು; ಮಸಗು: ಹರಡು; ಕೆರಳು; ತಿಕ್ಕು; ಕವಿ: ಆವರಿಸು;

ಪದವಿಂಗಡಣೆ:
ಹೊಕ್ಕ +ಸುಭಟರು +ಮರಳದಿರಿ +ಖಳ
ಸಿಕ್ಕಿದನು +ಸಿಕ್ಕಿದನು +ಚಲಿಸುವ
ಚುಕ್ಕಿಗರ +ಹೊಯ್ +ಬೀಳಗುತ್ತೆನುತ್+ಅರಸನ್+ಉಬ್ಬರಿಸೆ
ಹೊಕ್ಕು +ತಿವಿದರು +ನೀಡಿ +ಹರಿಗೆಯನ್
ಇಕ್ಕಿ +ನಿಂದರು +ತಮತಮಗೆ +ಮೇ
ಲಿಕ್ಕಿದರು +ತೆರೆ +ಮುರಿಯೆ +ಬಳಿದೆರೆ +ಮಸಗಿ +ಕವಿವಂತೆ

ಅಚ್ಚರಿ:
(೧) ಸಿಕ್ಕಿ, ಇಕ್ಕಿ, ಮೇಲಿಕ್ಕಿ, ಚುಕ್ಕಿ – ಪ್ರಾಸ ಪದಗಳು

ಪದ್ಯ ೩: ಸೈನಿಕರು ಹೇಗೆ ಘಟೋತ್ಕಚನನ್ನು ಆವರಿಸಿದರು?

ಎಡಬಲದಿ ಹಿಂದಿದಿರಿನಲಿ ಕೆಲ
ಕಡೆಯ ದಿಕ್ಕಿನೊಳೌಕಿದರು ಬಲು
ಗಡಲ ಕಡೆಹದ ಹಿರಿಯನಬುಧಿಯ ತೆರೆಗಲೊದೆವಂತೆ
ಕೊಡಹಿದರೆ ಕಟ್ಟಿರುಹೆಗಳು ಬೆಂ
ಬಿಡದೆ ಭುಜಗನನಳಿಸುವವೋ
ಲಡಸಿ ತಲೆಯೊತ್ತಿದರು ಬೀಳುವ ಹೆಣನನೊಡಮೆಟ್ಟಿ (ದ್ರೋಣ ಪರ್ವ, ೧೬ ಸಂಧಿ, ೩ ಪದ್ಯ)

ತಾತ್ಪರ್ಯ:
ಎಡಬಲ ಹಿಂದೆ ಮುಂದೆ ಉಳಿದ ದಿಕ್ಕುಗಲಲ್ಲಿ ನುಗ್ಗಿ ಮಂದರಪರ್ವತವನ್ನು ಸಮುದ್ರದ ತೆರೆಗಳು ಅಪ್ಪಳಿಸುವಮ್ತೆ ಸೈನಿಕರು ನುಗ್ಗಿದರು. ಅವರನ್ನು ದೂರಕ್ಕೆ ದಬ್ಬಿದರೆ, ಕಟ್ಟಿರುವೆಗಳು ಹಾವನ್ನು ಮುತ್ತಿಕೊಂಡಂತೆ ಬಿದ್ದ ಹೆಣಗಲನ್ನು ತುಳಿದು ಘಟೋತ್ಕಚನ ಮೇಲೆ ಹಾಯ್ದರು.

ಅರ್ಥ:
ಎಡಬಲ: ಅಕ್ಕಪಕ್ಕ; ಹಿಂದೆ: ಹಿಂಭಾಗ; ಇದಿರು: ಎದುರು; ದಿಕ್ಕು: ದಿಶ; ಔಕು: ಒತ್ತು; ಬಲು: ಬಹಳ; ಕಡಲ: ಸಾಗರ; ಗಿರಿ: ಬೆಟ್ಟ; ಅಬುಧಿ: ಸಾಗರ; ತೆರೆ: ಅಲೆ, ತರಂಗ; ಒದೆ: ತುಳಿ, ಮೆಟ್ಟು; ಕೊಡಹು: ಬೆನ್ನುಬಿಡು; ಭುಜ: ಬಾಹು; ಅಳಿಸು: ನಾಶ; ಅಡಸು: ಆಕ್ರಮಿಸು, ಮುತ್ತು; ತಲೆ: ಶಿರ; ಬೀಳು: ಬಾಗು; ಹೆಣ: ಜೀವವಿಲ್ಲದ ಶರೀರ; ಇರುಹೆ: ಇರುವೆ;

ಪದವಿಂಗಡಣೆ:
ಎಡಬಲದಿ +ಹಿಂದ್+ಇದಿರಿನಲಿ +ಕೆಲ
ಕಡೆಯ +ದಿಕ್ಕಿನೊಳ್+ಔಕಿದರು +ಬಲು
ಕಡಲ+ ಕಡೆಹದ +ಹಿರಿಯನ್+ಅಬುಧಿಯ +ತೆರೆಗಳ್+ಒದೆವಂತೆ
ಕೊಡಹಿದರೆ+ ಕಟ್ಟಿರುಹೆಗಳು +ಬೆಂ
ಬಿಡದೆ +ಭುಜಗನನ್+ಅಳಿಸುವವೋಲ್
ಅಡಸಿ +ತಲೆಯೊತ್ತಿದರು +ಬೀಳುವ +ಹೆಣನ್+ಒಡಮೆಟ್ಟಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಲುಗಡಲ ಕಡೆಹದ ಹಿರಿಯನಬುಧಿಯ ತೆರೆಗಲೊದೆವಂತೆ; ಕಟ್ಟಿರುಹೆಗಳು ಬೆಂಬಿಡದೆ ಭುಜಗನನಳಿಸುವವೋಲ್

ನುಡಿಮುತ್ತುಗಳು: ದ್ರೋಣ ಪರ್ವ ೧೬ ಸಂಧಿ

  • ಬಲುಗಡಲ ಕಡೆಹದ ಹಿರಿಯನಬುಧಿಯ ತೆರೆಗಲೊದೆವಂತೆ – ಪದ್ಯ  
  • ಕಟ್ಟಿರುಹೆಗಳು ಬೆಂಬಿಡದೆ ಭುಜಗನನಳಿಸುವವೋಲ್ – ಪದ್ಯ  
  • ಕಡ್ಡಿಗೆ ಬಗೆವನೇ ಸಾಗರವನರವಟ್ಟಿಗೆಯನಿಟ್ಟರೆ ವಡಬನಲ್ಲಾ ನೀರ ಕುಡಿವವನು – ಪದ್ಯ  
  • ಗರುಡನುಬ್ಬಟೆಗಹಿನಿಕರ ಜಜ್ಝರಿತವಾದವೊಲಿ – ಪದ್ಯ ೧೨
  • ನಮ್ಮವರ ಪಾಡೇನೈ ಪಲಾಯನ ತವನಿಧಿಯಲೇ ನಿಮ್ಮ ಬಲ – ಪದ್ಯ  ೧೪
  • ಧಾರಿಡುವ ರಕುತದಲೆರಡು ಬಲದಲಿ ಹಿಡಿದ ದೀವಿಗೆ ನಂದಿದವು – ಪದ್ಯ  ೧೭
  • ಬಹಳಾಂಭೋನಿಧಿಯ ವಿಷದುರಿಯ ಧಾಳಿಗೆ ದಾನವಾಮರರಿಂದುಮೌಳಿಯ ಮರೆಯ ಹೊಗುವಂತೆ – ಪದ್ಯ ೧೯
  • ಪೂತು ದಾನವ ನೀ ಕೃತಾರ್ಥನಲ – ಪದ್ಯ ೨೨
  • ಕೀರ್ತಿಕೌಮುದಿ ಕಳಿದ ಕತ್ತಲೆಯೊ – ಪದ್ಯ ೨೪
  • ವಿಕ್ರಮಾಗ್ನಿಯ ತಗಹುಗಳ ತನಿಹೊಗೆಯೊ – ಪದ್ಯ ೨೪
  • ಹೂಸಕದ ಹೂಣೆಗತನವ ಸೊನ್ನಾರವಿದ್ಯೆಯ ಸಾಹಸೋನ್ನತಿಯ ಸೊಗಸೆ ಹುಟ್ಟಿಸಿ ಸುಲಿವ ರಸವಾದಿಗಳು – ಪದ್ಯ ೨೫
  • ನಡೆವುತೆಡಹಿದ ಪಟ್ಟದಾನೆಯಮಿಡಿಯ ಹೊಯ್ವರೆ – ಪದ್ಯ ೨೬
  • ನಮ್ಮ ಸುಭಟರು ಯೋಗಿಗಳವೊಲು ದಂಡಹೀನರು – ಪದ್ಯ ೨೭
  • ತಾನೆ ತನ್ನನೆ ಹೊಗಳಿಕೊಂಬರೆ ಮಾನನಿಧಿಯಾದವರು – ಪದ್ಯ ೩೩
  • ನೆತ್ತರ ಜೋರು ಮಸಗಿತು ಕೂಡೆ ಜಾಜಿನ ಗಿರಿಯರೌಕುಳದ – ಪದ್ಯ ೩೬
  • ದರಿಗಳೊಳು ದರ್ವೀಕರಾವಳಿಯುರವಣಿಸಿದರೆ ಬಲ್ಲುದೇ ಕುಲಗಿರಿ – ಪದ್ಯ ೪೧
  • ತಿರುಗುತೈತಹ ಪರಿಘ ಕಾಂತರೆ ಗಿರಿಗಳಡಿ ಮೇಲಹವು – ಪದ್ಯ ೪೨
  • ಕೋಪದ ತಿಮಿರ ಗರಿಗಟ್ಟಿತು – ಪದ್ಯ ೪೩
  • ತೂರಿದರೆ ತನಿಹೊಟ್ಟು ಗಾಳಿಗೆಹಾರುವುದು ಕುಲಗಿರಿಯ ಬೈಸಿಕೆ ಜಾರುವುದೆ – ಪದ್ಯ ೪೪
  • ದೈತ್ಯರಾಹು ಗ್ರಹಣವಾಯಿತು ಕರ್ಣಸೂರ್ಯನ ಮಹಿಮೆ ಮಸುಳಿತ್ – ಪದ್ಯ ೪೬
  • ಕರುಬುತನವೇಕಕಟ ಪುಣ್ಯದ ಕೊರೆತೆ ನಮ್ಮದು – ಪದ್ಯ ೪೯
  • ನಿನ್ನಾಯುಷವ ಹಿಂದಿಕ್ಕಿ ಕೊಂಬನ ತಾಯೆನುತ – ಪದ್ಯ ೫೨
  • ಬಲುಭಾರಿಯೊಡಲೊರ್ಗುಡಿಸಿ ಕೆಡೆದುದು ಬಿರಿದ ಗಿರಿಯಂತೆ – ಪದ್ಯ ೫೪
  • ಗರಳವಿಲ್ಲದ ಕುಪಿತಫಣಿ ಹಲುಮೊರೆದು ಮಾಡುವುದೇನು – ಪದ್ಯ ೫
  • ಕರ್ಣನು ಬೇರುಹರಿದಾ ದ್ರುಮದವೊಲು ಗತಶೌರ್ಯನ್ – ಪದ್ಯ ೫೬

ಪದ್ಯ ೨: ರಾವುತರು ಹೇಗೆ ನುಗ್ಗಿದರು?

ಚೆಲ್ಲಿತರಿಬಲಜಲಧಿ ಭಟರ
ಲ್ಲಲ್ಲಿ ಮುಕ್ಕುರುಕಿದರು ಸಬಳದ
ಸೆಲ್ಲೆಹದ ತೋಮರದ ಚಕ್ರದ ಸರಿಯ ಸೈಗರೆದು
ಘಲ್ಲಿಸಿದವಾನೆಗಳು ತೇರಿನ
ಬಿಲ್ಲವರು ತುಡುಕಿದರು ಕಂಬುಗೆ
ಯಲ್ಲಿ ಖುರ ಕುಣಿದಾಡೆ ಹೊಕ್ಕರು ರಾಯರಾವುತರು (ದ್ರೋಣ ಪರ್ವ, ೧೬ ಸಂಧಿ, ೨ ಪದ್ಯ)

ತಾತ್ಪರ್ಯ:
ಕೌರವನ ಸೈನ್ಯವು ಚೆಲ್ಲಾಪಿಲ್ಲಿಯಾಯಿತು. ಅಲ್ಲಲ್ಲಿ ಸೈನಿಕರು ಶತ್ರುವಿನ ಸುತ್ತಲೂ ಕವಿದರು. ಸಬಳ, ತೋಮರ, ಸಲ್ಲೆಹ, ಚಕ್ರ ಮೊದಲಾದ ಆಯುಧಗಲ ಮಳೆಗರೆದರು. ಆನೆಗಳು ನುಗ್ಗಿದವು. ರಥಿಕರು ಬಾಣಗಳನ್ನು ಬಿಟ್ಟರು. ತೇರಿನ ಆಯುಧ ತುಂಬುವ ಕಂಬುಗೆಯಲ್ಲಿ ಕುದುರೆಗಳ ಗೊರಸು ಕುಣಿಯುವಂತೆ ರಾವುತರು ನುಗ್ಗಿದರು.

ಅರ್ಥ:
ಚೆಲ್ಲು: ಹರಡು; ಬಲ: ಸೈನ್ಯ; ಜಲಧಿ: ಸಾಗರ; ಭಟ: ಸೈನಿಕ; ಮುಕ್ಕುರು: ಕವಿ, ಮುತ್ತು, ಆವರಿಸು; ಸಬಳ: ಈಟಿ; ಸೆಲ್ಲೆಹ: ಈಟಿ, ಭರ್ಜಿ; ತೋಮರ: ಈಟಿಯಂತಹ ಒಂದು ಬಗೆಯ ಆಯುಧ; ಚಕ್ರ: ತಿರುಗುವಂತಹ ಆಯುಧ; ಘಲ್ಲಿಸು: ಶಬ್ದಮಾಡು; ಆನೆ: ಗಜ; ತೇರು: ಬಂಡಿ; ಬಿಲ್ಲು: ಚಾಪ; ತುಡುಕು: ಹೋರಾಡು, ಸೆಣಸು; ಕಂಬುಗೆ: ಆಯುಧಗಳನ್ನು ತುಂಬುವ ರಥದ ಒಂದು ಭಾಗ; ಖುರ: ಕುದುರೆ ದನಕರು ಗಳ ಕಾಲಿನ ಗೊರಸು, ಕೊಳಗು; ಕುಣಿ: ನರ್ತಿಸು; ಹೊಕ್ಕು: ಸೇರು; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ;

ಪದವಿಂಗಡಣೆ:
ಚೆಲ್ಲಿತ್+ಅರಿಬಲ+ಜಲಧಿ +ಭಟರ್
ಅಲ್ಲಲ್ಲಿ +ಮುಕ್ಕುರುಕಿದರು+ ಸಬಳದ
ಸೆಲ್ಲೆಹದ +ತೋಮರದ +ಚಕ್ರದ +ಸರಿಯ +ಸೈಗರೆದು
ಘಲ್ಲಿಸಿದವ್+ಆನೆಗಳು +ತೇರಿನ
ಬಿಲ್ಲವರು +ತುಡುಕಿದರು +ಕಂಬುಗೆ
ಯಲ್ಲಿ +ಖುರ +ಕುಣಿದಾಡೆ +ಹೊಕ್ಕರು +ರಾಯ+ರಾವುತರು

ಅಚ್ಚರಿ:
(೧) ಆಯುಧಗಳ ಹೆಸರು – ಸಬಳ, ಸೆಲ್ಲೆಹ, ತೋಮರ, ಚಕ್ರ

ಪದ್ಯ ೧: ಘಟೋತ್ಕಚನು ಏನೆಂದು ಗರ್ಜಿಸಿದನು?

ಕೇಳು ಧೃತರಾಷ್ಟ್ರಾವನಿಪ ದೊರೆ
ಯಾಳನರಸುತ ಹೊಕ್ಕು ಸೂಠಿಯೊ
ಳಾಳುಕುದುರೆಯ ಥಟ್ಟನಿಬ್ಬಗಿಮಾಡಿ ದಳವುಳಿಸಿ
ಕೋಲ ತೊಡಚೈ ಕರ್ಣ ಕುರುಭೂ
ಪಾಲ ಕೈದುವ ಹಿಡಿ ಕೃಪಾದಿಗ
ಳೇಳಿ ಸಮ್ಮುಖವಾಗೆನುತ ಕೈಮಾಡಿ ಬೊಬ್ಬಿರಿದ (ದ್ರೋಣ ಪರ್ವ, ೧೬ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರನೇ ಕೇಳು, ಘಟೋತ್ಕಚನು ಕೌರವನ ಪ್ರಮುಖ ನಾಯಕರನ್ನು ಹುಡುಕುತ್ತಾ ಹೊಕ್ಕು ಸೈನ್ಯವನ್ನು ಬಗೆದು ನುಗ್ಗಿ, ಕರ್ಣಾ ಬಾಣವನ್ನು ಹೂಡು, ದುರ್ಯೋಧನಾ ಆಯುಧವನ್ನು ಹಿಡಿ, ಕೃಪಾಚಾರ್ಯರೇ ಮೊದಲಾದವರೆಲ್ಲರೂ ನನ್ನೆದುರು ಬನ್ನಿ ಎಂದು ಕೈಬೀಸಿ ಗರ್ಜಿಸಿದನು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ದೊರೆ: ರಾಜ; ಆಳು: ಸೈನಿಕ; ಅರಸು: ಹುಡುಕು; ಹೊಕ್ಕು: ಸೇರು; ಸೂಠಿ: ವೇಗ; ಕುದುರೆ: ಅಶ್ವ; ಥಟ್ಟು: ಗುಂಪು; ಇಬ್ಬಗಿ: ಎರಡು; ದಳ: ಸೈನ್ಯ; ಕೋಲ: ಬಾಣ; ತೊಡಚು: ಹೂಡು; ಭೂಪಾಲ: ರಾಜ; ಕೈದು: ಆಯುಧ; ಹಿಡಿ: ಗ್ರಹಿಸು; ಸಮ್ಮುಖ: ಎದುರುಗಡೆ; ಕೈಮಾಡು: ಹೋರಾಡು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ +ದೊರೆ
ಆಳನ್+ಅರಸುತ +ಹೊಕ್ಕು +ಸೂಠಿಯೊಳ್
ಆಳು+ಕುದುರೆಯ+ ಥಟ್ಟನ್+ಇಬ್ಬಗಿಮಾಡಿ +ದಳವುಳಿಸಿ
ಕೋಲ +ತೊಡಚೈ +ಕರ್ಣ +ಕುರು+ಭೂ
ಪಾಲ +ಕೈದುವ +ಹಿಡಿ +ಕೃಪಾದಿಗಳ್
ಏಳಿ +ಸಮ್ಮುಖವಾಗೆನುತ+ ಕೈಮಾಡಿ +ಬೊಬ್ಬಿರಿದ

ಅಚ್ಚರಿ:
(೧) ದೊರೆಯಾಳು, ಆಳುಕುದುರೆ – ಆಳು ಪದದ ಬಲಕೆ
(೨) ಅವನಿಪ, ಭೂಪಾಲ, ದೊರೆ – ಸಮಾನಾರ್ಥಕ ಪದ