ಪದ್ಯ ೬೨: ಘಟೋತ್ಕಚನು ತನ್ನ ಪ್ರತಿಜ್ಞೆಯನ್ನು ಹೇಗೆ ಕಾಪಾಡಿಕೊಂಡನು?

ಓಡಲೀಯದೆ ಸದರಗೊಡುತ ವಿ
ಭಾಡಿಸುತ ಮೇಲಿಕ್ಕಿದರೆ ಕೈ
ಮಾಡಿದರೆ ಶರಹತಿಗೆ ದೇಹವ ಕೊಟ್ಟು ಸೈರಿಸುತ
ಖೇಡತನವನು ಬಿಡಿಸಿ ಸಲೆ ಕೊಂ
ಡಾಡಿ ಕಾದಿದನಸುರಜಾತಿಗ
ಳೋಡೆ ಪರಿಭವ ತನ್ನದೆಮ್ಬ ಪದಸ್ತತನದಿಂದ (ದ್ರೋಣ ಪರ್ವ, ೧೫ ಸಂಧಿ, ೬೨ ಪದ್ಯ)

ತಾತ್ಪರ್ಯ:
ವಿರೋಧಿ ದೈತ್ಯರಿಗೆ ಸದರಗೊಟ್ಟು ಅವರನ್ನು ಬಡಿದುಹಾಕಿ, ಅವರು ಬಾಣಗಳನ್ನು ಬಿಟ್ಟರೆ ಅವನ್ನು ಸಹಿಸಿಕೊಂಡು, ಅವರ ಹೇಡಿತನವನ್ನು ಬಿಡಿಸಿ ಹತ್ತಿರಕ್ಕೆ ಬಂದಾಗ ಸಂಹರಿಸಿ ಘಟೋತ್ಕಚನು ಕಾಡಿದನು. ಅಸುರಜಾತಿಯವರು ಓಡಿಹೋದರೆ ಅದು ತನ್ನ ಸೋಲು ಎಂಬ ಪ್ರತಿಜ್ಞೆಯನ್ನು ಕಾಪಾಡಿಕೊಂಡನು.

ಅರ್ಥ:
ಓಡು: ಧಾವಿಸು; ಸದರ: ಸುಲಭ, ಸರಾಗ; ವಿಭಾಡಿಸು: ನಾಶಮಾಡು; ಶರ: ಬಾಣ; ಹತಿ: ಸಂಹಾರ; ದೇಹ: ಒಡಲು; ಸೈರಿಸು: ತಾಳು, ಸಹಿಸು; ಖೇಡ: ಹೆದರಿದವನು; ಬಿಡಿಸು: ತ್ಯಜಿಸು; ಸಲೆ: ಸರಿಯಾಗಿ; ಕೊಂಡಾಡು: ಹೊಗಳು; ಕಾದು: ಹೋರಾಡು; ಅಸುರ: ರಾಕ್ಷಸ; ಜಾತಿ: ವಂಶ; ಪರಿಭವ: ಸೋಲು, ಪರಾಜಯ; ಪದಸ್ತತನ: ಸ್ಥಾನ, ಗೌರವ;

ಪದವಿಂಗಡಣೆ:
ಓಡಲೀಯದೆ +ಸದರಗೊಡುತ +ವಿ
ಭಾಡಿಸುತ +ಮೇಲಿಕ್ಕಿದರೆ +ಕೈ
ಮಾಡಿದರೆ +ಶರಹತಿಗೆ +ದೇಹವ +ಕೊಟ್ಟು +ಸೈರಿಸುತ
ಖೇಡತನವನು +ಬಿಡಿಸಿ +ಸಲೆ +ಕೊಂ
ಡಾಡಿ +ಕಾದಿದನ್+ಅಸುರಜಾತಿಗಳ್
ಓಡೆ +ಪರಿಭವ +ತನ್ನದೆಂಬ+ ಪದಸ್ತತನದಿಂದ

ಅಚ್ಚರಿ:
(೧) ಘಟೋತ್ಕಚನ ಪ್ರತಿಜ್ಞೆ – ಕಾದಿದನಸುರಜಾತಿಗಳೋಡೆ ಪರಿಭವ ತನ್ನದೆಮ್ಬ ಪದಸ್ತತನದಿಂದ

ಪದ್ಯ ೬೧: ಘಟೋತ್ಕಚನು ತನ್ನ ಪರಾಕ್ರಮವನ್ನು ಹೇಗೆ ತೋರಿಸಿದನು?

ಹೆಸರುಗೊಂಡರೆ ಕಿವಿಗಳಿಗೆ ಕ
ರ್ಕಶರು ರಕ್ಕಸರೆಂಬ ಹೆಸರಿದು
ನುಸಿಗಳೊಳಗಾಶ್ರಯಿಸಿ ಕೆಟ್ಟುದು ಶಿವ ಶಿವಾಯೆನುತ
ಹೊಸ ಮಸೆಯ ಹೊಗರಂಬುಗಳನೆ
ಬ್ಬಿಸಿದನುಬ್ಬಿಸಿದನು ವಿರೋಧಿಗ
ಳನು ಸಮೀರಣನಿಂದ ನಿಜಭುಜ ವಿಕ್ರಮಾನಳನ (ದ್ರೋಣ ಪರ್ವ, ೧೫ ಸಂಧಿ, ೬೧ ಪದ್ಯ)

ತಾತ್ಪರ್ಯ:
ರಾಕ್ಷಸರೆಂಬ ಹೆಸರೇ ಕಿವಿಗೆ ಕರ್ಕಶ ಎನ್ನುವ ಕೀರ್ತಿ ಈ ನುಸಿಗಳನ್ನಾಶ್ರಯಿಸಿ ಕೆಟ್ಟು ಹೋಯಿತು. ಶಿವ ಶಿವಾ ಎಂದು ಘಟೋತ್ಕಚನು ಹೊಸ ಹರಿತವಾದ ಬಾಣಗಳನ್ನು ಬಿಟ್ಟು ವಿರೋಧಿಗಳ ದೇಹದಿಂದ ಪ್ರಾಣವಾಯುವನ್ನು ಮೇಲಕ್ಕೆಬ್ಬಿಸಿ, ಆ ಗಾಳಿಯಿಂದ ತನ್ನ ವಿಕ್ರಮಾಗ್ನಿಯ ಜ್ವಾಲೆಗಳನ್ನು ಹೆಚ್ಚಿಸಿದನು.

ಅರ್ಥ:
ಹೆಸರು: ನಾಮ; ಕಿವಿ: ಕರ್ಣ; ಕರ್ಕಶ: ಕಠೋರ; ರಕ್ಕಸ: ರಾಕ್ಷಸ; ನುಸಿ: ಹುಡಿ, ಧೂಳು; ಆಶ್ರಯ: ಆಸರೆ, ಅವಲಂಬನ; ಕೆಟ್ಟು: ಹಾಳು; ಹೊಸ: ನವೀನ; ಮಸೆ: ಹರಿತವಾದುದು; ಹೊಗರು: ಕಾಂತಿ, ಪ್ರಕಾಶ; ಅಂಬು: ಬಾಣ; ಎಬ್ಬಿಸು: ಮೇಲೇಳು; ಉಬ್ಬಿಸು: ಹುರಿದು೦ಬಿಸು; ವಿರೋಧಿ: ಶತ್ರು; ಸಮೀರಣ: ವಾಯು; ವಿಕ್ರಮ: ಶೂರ, ಸಾಹಸ; ಆನಳ: ಬೆಂಕಿ;

ಪದವಿಂಗಡಣೆ:
ಹೆಸರುಗೊಂಡರೆ +ಕಿವಿಗಳಿಗೆ +ಕ
ರ್ಕಶರು +ರಕ್ಕಸರೆಂಬ +ಹೆಸರ್+ಇದು
ನುಸಿಗಳೊಳಗ್+ಆಶ್ರಯಿಸಿ +ಕೆಟ್ಟುದು +ಶಿವ +ಶಿವಾಯೆನುತ
ಹೊಸ +ಮಸೆಯ +ಹೊಗರಂಬುಗಳನ್
ಎಬ್ಬಿಸಿದನ್+ಉಬ್ಬಿಸಿದನು +ವಿರೋಧಿಗ
ಳನು +ಸಮೀರಣನಿಂದ +ನಿಜಭುಜ +ವಿಕ್ರಮಾನಳನ

ಅಚ್ಚರಿ:
(೧) ಸಾಯಿಸಿದ ಎಂದು ಹೇಳಲು – ಹೊಸ ಮಸೆಯ ಹೊಗರಂಬುಗಳನೆ ಬ್ಬಿಸಿದನುಬ್ಬಿಸಿದನು ವಿರೋಧಿಗ
ಳನು ಸಮೀರಣನಿಂದ ನಿಜಭುಜ ವಿಕ್ರಮಾನಳನ

ಪದ್ಯ ೬೦: ಘಟೋತ್ಕಚನು ಕೌರವರ ಸೈನ್ಯದ ಬಗ್ಗೆ ಏನು ಹೇಳಿದನು?

ಕೆಣಕಿದರಲಾ ರಣವ ರಕ್ಕಸ
ಬಣಗುಗಳು ಮಝ ಪೂತು ಸಮರಾಂ
ಗನದೊಳಗೆ ನಾವಾದ ಸದರವೊ ನೊಡಿರೈ ಭಟರು
ಸೆಣಸು ಗಡ ನಮ್ಮೊಡನೆ ಸಲೆ ಟೆಂ
ಠಣಿಸುವರು ಗಡ ಬವರಕೋಸುಗ
ಹೊಣಕೆಗಡ ನಮ್ಮೊಡನೆನುತ ಸಾರಥಿಯ ಕೈವೊಯ್ದ (ದ್ರೋಣ ಪರ್ವ, ೧೫ ಸಂಧಿ, ೬೦ ಪದ್ಯ)

ತಾತ್ಪರ್ಯ:
ಘಟೋತ್ಕಚನು ಸಾರಥಿಯ ಕೈಯನ್ನು ತಟ್ಟಿ, ಕೆಲಸಕ್ಕೆ ಬಾರದ ದುರ್ಬಲ ರಾಕ್ಷಸರು ನಮ್ಮೊಡನೆ ಯುದ್ಧಕ್ಕೆ ಬಂದರು, ಭಲೇ, ಯುದ್ಧರಂಗದಲ್ಲಿ ನಾವು ಸದರವೆಂದುಕೊಂಡು ಬಿಟ್ಟರು. ನಮ್ಮೊಡನೆ ಕಾಳಗ!! ಯುದ್ಧಮಾಡಲು ಉತ್ಸುಕರಾಗಿ ಬರುತ್ತಿದ್ದಾರೆ, ನನ್ನ ಮೇಲೆ ಜಿದ್ದು, ಅಷ್ಟಲ್ಲದೇ ಏನೆ ಎಂದನು.

ಅರ್ಥ:
ಕೆಣಕು: ರೇಗಿಸು; ರಣ: ಯುದ್ಧ; ರಕ್ಕಸ: ರಾಕ್ಷಸ; ಬನ: ಗುಂಪು; ಮಝ: ಭಲೇ; ಪೂತು: ಹೊಗಳುವ ಮಾತು; ಸಮರ: ಯುದ್ಧ; ಸದರ: ಸುಲಭ, ಸರಾಗ; ನೋಡು: ವೀಕ್ಷಿಸು; ಭಟ: ಸೈನಿಕ; ಸೆಣಸು: ಹೋರಾಡು; ಗಡ: ಅಲ್ಲವೆ; ಟೆಂಠಣಿಸು: ನಡುಗು; ಬವರ: ಯುದ್ಧ; ಹೊಣಕೆ: ಜೊತೆ, ಜೋಡಿ; ಸಾರಥಿ: ಸೂತ; ಕೈವೊಯ್: ಕೈಹೊಡೆ,ಚಪ್ಪಾಳೆ;

ಪದವಿಂಗಡಣೆ:
ಕೆಣಕಿದರಲಾ ರಣವ ರಕ್ಕಸ
ಬಣಗುಗಳು ಮಝ ಪೂತು ಸಮರಾಂ
ಗಣದೊಳಗೆ ನಾವಾದ ಸದರವೊ ನೊಡಿರೈ ಭಟರು
ಸೆಣಸು ಗಡ ನಮ್ಮೊಡನೆ ಸಲೆ ಟೆಂ
ಠಣಿಸುವರು ಗಡ ಬವರಕೋಸುಗ
ಹೊಣಕೆಗಡ ನಮ್ಮೊಡನೆನುತ ಸಾರಥಿಯ ಕೈವೊಯ್ದ

ಅಚ್ಚರಿ:
(೧) ರಣ, ಬವರ – ಸಮಾನಾರ್ಥಕ ಪದ