ಪದ್ಯ ೫೯: ಘಟೋತ್ಕಚನೊಡನೆ ಯಾರು ಯುದ್ಧಕ್ಕೆ ಬಂದರು?

ಬಕನ ಮಕ್ಕಳು ಜಟನ ಕಿಮ್ಮೀ
ರಕನ ಸುತರು ಹಿಡಿಂಬತನುಜರು
ವೃಕಜರಾಸಂಧಾತ್ಮಜರು ಶಿಶುಪಾಲನಂದನರು
ಸಕಲ ಸನ್ನಾಹದಲಿ ದೈತ್ಯ
ಪ್ರಕರ ಹೊಕ್ಕುದು ರಾಯ ರಥಪಾ
ಲಕರು ಕವಿದರು ತುಡುಕಿದರು ರಣವನು ಘಟೋತ್ಕಚನ (ದ್ರೋಣ ಪರ್ವ, ೧೫ ಸಂಧಿ, ೫೯ ಪದ್ಯ)

ತಾತ್ಪರ್ಯ:
ರಾಕ್ಷಸರಾದ ಬಕ, ಜಟ, ಕಿಮ್ಮೀರ, ಹಿಡಿಂಬ, ವೃಕ, ಜರಾಸಂಧ, ಶಿಶುಪಾಲಋಎ ಮೊದಲಾದವರು ಮಕ್ಕಳು, ಸಮಸ್ತ ಸನ್ನಾಹದಿಂದ ಯುದ್ಧಕ್ಕೆ ಬಮ್ದು ಘಟೋತ್ಕಚನೊಡನೆ ಕಾಳಗಕ್ಕೆ ಬಂದರು.

ಅರ್ಥ:
ಮಕ್ಕಳು: ಸುತರು; ಸುತ: ಮಕ್ಕಳು; ತನುಜ: ಮಗ; ಆತ್ಮಜ: ಮಕ್ಕಳು; ನಂದನ: ಮಕ್ಕಳು; ಸಕಲ: ಎಲ್ಲಾ; ಸನ್ನಾಹ: ಬಂಧನ; ದೈತ್ಯ: ರಾಕ್ಷಸ; ಪ್ರಕರ: ಗುಂಪು; ಹೊಕ್ಕು: ಸೇರು; ರಾಯ: ರಾಜ; ರಥ: ಬಂಡಿ; ಪಾಲಕ: ನೋಡಿಕೊಳ್ಳುವವ; ಕವಿ: ಆವರಿಸು; ತುಡುಕು: ಹೋರಾಡು, ಸೆಣಸು;

ಪದವಿಂಗಡಣೆ:
ಬಕನ +ಮಕ್ಕಳು +ಜಟನ +ಕಿಮ್ಮೀ
ರಕನ +ಸುತರು +ಹಿಡಿಂಬ+ತನುಜರು
ವೃಕ+ಜರಾಸಂಧ+ಆತ್ಮಜರು +ಶಿಶುಪಾಲ+ನಂದನರು
ಸಕಲ +ಸನ್ನಾಹದಲಿ +ದೈತ್ಯ
ಪ್ರಕರ +ಹೊಕ್ಕುದು +ರಾಯ +ರಥಪಾ
ಲಕರು +ಕವಿದರು +ತುಡುಕಿದರು +ರಣವನು +ಘಟೋತ್ಕಚನ

ಅಚ್ಚರಿ:
(೧) ಮಕ್ಕಳು, ಸುತರು, ತನುಜ, ಆತ್ಮಜ, ನಂದನ – ಸಮಾನಾರ್ಥಕ ಪದಗಳು

ಪದ್ಯ ೫೮: ಕೌರವ ಸೈನಿಕರು ಏನೆಂದು ಕೂಗಿದರು?

ಅಕಟ ದೊರೆಯೋ ಸಿಕ್ಕಿದನು ಪಾ
ತಕರು ರಥಿಕರು ಶಿವ ಹಿಡಿಂಬಾ
ರ್ಭಕನಿಗೊಪ್ಪಿಸಿಕೊಟ್ಟು ಕೊಂದರು ದ್ರೋಣ ಕೃಪರೆನುತ
ಸಕಲ ಪರಿಚಾರಕರು ಮಂತ್ರಿ
ಪ್ರಕರವೊರಲಲು ಕೇಳಿ ಬದ್ಧ
ಭ್ರುಕುಟಿ ಭೀಷಣಮುಖರು ಮಸಗಿತು ದೈತ್ಯಬಲಜಲಧಿ (ದ್ರೋಣ ಪರ್ವ, ೧೫ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅಯ್ಯೋ ದೊರೆಯೇ, ಶತ್ರುವಿಗೆ ಸಿಕ್ಕಿದನು. ಮಹಾರಥರಾದ ದ್ರೋಣ ಕೃಪರೆಂಬ ಪಾಪಿಗಳು ದೊರೆಯನ್ನು ಹಿಡಿಂಬಿಯ ಮಗನಿಗೆ ಒಪ್ಪಿಸಿಬಿಟ್ಟು ಅವನನ್ನು ಕೊಂದರು, ಎಂದು ದೊರೆಯ ಪರಿಚಾರಕರು ಮಂತ್ರಿಗಳು ಒರಲಲು, ಆ ಕೂಗನ್ನು ಕೇಳಿ ಹುಬ್ಬುಗಂಟಿಟ್ಟ ಭೀಕರಮುಖದ ರಾಕ್ಷಸರು ಯುದ್ಧಕ್ಕೆ ಬಂದರು.

ಅರ್ಥ:
ಅಕಟ: ಅಯ್ಯೋ; ದೊರೆ: ರಾಜ; ಸಿಕ್ಕು: ಬಂಧನಕ್ಕೊಳಗಾಗು; ಪಾತಕ: ಪಾಪಿ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಶಿವ: ಶಂಕರ; ಅರ್ಭಕ: ಸಣ್ಣ ಹುಡುಗ; ಒಪ್ಪಿಸು: ಒಪ್ಪಿಗೆ, ಸಮ್ಮತಿ; ಕೊಂದು: ಸಾಯಿಸು; ಸಕಲ: ಎಲ್ಲಾ; ಪರಿಚಾರಕ: ಆಳು, ಸೇವಕ; ಪ್ರಕರ: ಗುಂಪು, ಸಮೂಹ; ಕೇಳು: ಆಲಿಸು; ಭ್ರುಕುಟಿ: ಹುಬ್ಬು; ಬದ್ಧ: ಬಂಧಿಸು, ಗಟ್ಟಿ; ಭೀಷಣ: ಭಯಂಕರವಾದ; ಮಸಗು: ಹರಡು; ಕೆರಳು; ದೈತ್ಯ: ರಾಕ್ಷಸ; ಬಲ: ಸೈನ್ಯ; ಜಲಧಿ: ಸಾಗರ;

ಪದವಿಂಗಡಣೆ:
ಅಕಟ +ದೊರೆಯೋ +ಸಿಕ್ಕಿದನು +ಪಾ
ತಕರು +ರಥಿಕರು +ಶಿವ +ಹಿಡಿಂಬ
ಅರ್ಭಕನಿಗ್+ಒಪ್ಪಿಸಿಕೊಟ್ಟು +ಕೊಂದರು +ದ್ರೋಣ +ಕೃಪರೆನುತ
ಸಕಲ+ ಪರಿಚಾರಕರು+ ಮಂತ್ರಿ
ಪ್ರಕರವ್+ಒರಲಲು +ಕೇಳಿ +ಬದ್ಧ
ಭ್ರುಕುಟಿ +ಭೀಷಣಮುಖರು +ಮಸಗಿತು +ದೈತ್ಯ+ಬಲ+ಜಲಧಿ

ಅಚ್ಚರಿ:
(೧) ಘಟೋತ್ಕಚನನ್ನು ಹಿಡಿಂಬಾರ್ಭಕ ಎಂದು ಕರೆದಿರುವುದು
(೨) ಬ ಕಾರದ ತ್ರಿವಳಿ ಪದ – ಬದ್ಧ ಭ್ರುಕುಟಿ ಭೀಷಣಮುಖರು

ಪದ್ಯ ೫೭: ಘಟೋತ್ಕಚನು ಹೇಗೆ ಯುದ್ಧವನ್ನು ಮಾಡಿದನು?

ಎಸುತ ಹೊಕ್ಕನು ದಳ್ಳಿಸುವ ಹೊಸ
ಮಸೆಯ ಕಣೆ ಮುಕ್ಕುರುಕಿದವು ನಿ
ಪ್ಪಸರದಲಿ ನೃಪನೆಚ್ಚು ಕಾಣನು ಹರಿವನಾ ಕಣೆಗೆ
ಕುಸುರಿದರಿದವು ಜೋಡು ಸೀಸಕ
ಬೆಸುಗೆಯೊಡೆದುದು ಘಾಯದಲಿ ಮೈ
ಬಸಿಯೆ ಬಿರಿದುದು ಶೌರ್ಯ ಬಿಗಿದುದು ಭೀತಿ ಭೂಪತಿಗೆ (ದ್ರೋಣ ಪರ್ವ, ೧೫ ಸಂಧಿ, ೫೭ ಪದ್ಯ)

ತಾತ್ಪರ್ಯ:
ಬಾಣವನ್ನು ಬಿಡುತ್ತಾ ಘಟೋತ್ಕಚನು ಕೌರವ ಸೈನ್ಯವನ್ನು ಹೊಕ್ಕನು. ಅವನ ಕೂರಂಬುಗಳು ಉರಿಯನ್ನುಗುಳುತ್ತಿದ್ದವು. ದುರ್ಯೋಧನನು ಅತಿಶಯವಾಗಿ ಬಾಣಗಳನ್ನು ಬಿಟ್ಟರೂ ಆ ಬಾಣಗಳು ತುಂಡಾಗಲಿಲ್ಲ. ದುರ್ಯೋಧನನ ಕವಚ ಶಿರಸ್ತ್ರಾಣಗಳ ಬೆಸುಗೆ ಬಿಚ್ಚಿತು. ಘಟೋತ್ಕಚನ ಬಾಣಗಳಿಂದ ಮೈಯಲ್ಲಿ ಗಾಯವಾಗಿ ರಕ್ತ ಬಸಿಯುತ್ತಿತ್ತು. ದುರ್ಯೋಧನನ ಶೌರ್ಯ ಛಿದ್ರವಾಯಿತು. ಭೀತಿ ಆವರಿಸಿತು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಹೊಕ್ಕು: ಸೇರು; ದಳ್ಳಿಸು: ಧಗ್ ಎಂದು ಉರಿ; ಹೊಸ: ನವೀನ; ಮಸೆ: ಚೂಪಾದ; ಕಣೆ: ಬಾಣ; ಮುಕ್ಕುರು: ಆವರಿಸು; ನಿಪ್ಪಸರ: ಅತಿಶಯ, ಹೆಚ್ಚಳ; ನೃಪ: ರಾಜ; ಎಚ್ಚು: ಬಾಣ ಪ್ರಯೋಗ ಮಾಡು; ಕಾಣು: ತೋರು; ಹರಿ: ಚಲಿಸು; ಕುಸುರಿ: ತುಂಡು; ಅರಿ: ಸೀಳು; ಜೋಡು: ಕವಚ; ಸೀಸಕ: ಶಿರಸ್ತ್ರಾಣ; ಬೆಸುಗೆ: ಪ್ರೀತಿ, ಜೋತೆ; ಒಡೆ: ಸೀಳು; ಘಾಯ: ಪೆಟ್ಟು; ಬಸಿ: ಒಸರು, ಸ್ರವಿಸು; ಶೌರ್ಯ: ಪರಾಕ್ರಮ; ಬಿಗಿ: ಭದ್ರವಾಗಿರುವುದು; ಭೀತಿ: ಭಯ; ಭೂಪತಿ: ರಾಜ;

ಪದವಿಂಗಡಣೆ:
ಎಸುತ +ಹೊಕ್ಕನು +ದಳ್ಳಿಸುವ +ಹೊಸ
ಮಸೆಯ +ಕಣೆ +ಮುಕ್ಕುರುಕಿದವು +ನಿ
ಪ್ಪಸರದಲಿ+ ನೃಪನ್+ಎಚ್ಚು +ಕಾಣನು +ಹರಿವನಾ+ ಕಣೆಗೆ
ಕುಸುರಿದ್+ಅರಿದವು +ಜೋಡು +ಸೀಸಕ
ಬೆಸುಗೆ+ಒಡೆದುದು +ಘಾಯದಲಿ +ಮೈ
ಬಸಿಯೆ +ಬಿರಿದುದು +ಶೌರ್ಯ +ಬಿಗಿದುದು +ಭೀತಿ +ಭೂಪತಿಗೆ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಘಾಯದಲಿ ಮೈ ಬಸಿಯೆ ಬಿರಿದುದು ಶೌರ್ಯ ಬಿಗಿದುದು ಭೀತಿ ಭೂಪತಿಗೆ
(೨) ಕವಚ ಕಳಚಿತು ಎಂದು ಹೇಳುವ ಪರಿ – ಕುಸುರಿದರಿದವು ಜೋಡು ಸೀಸಕ ಬೆಸುಗೆಯೊಡೆದುದು

ಪದ್ಯ ೫೬: ಕೌರವನಿಗೆ ಘಟೋತ್ಕಚನ ಧೀರ ಉತ್ತರವೇನು?

ಬಯ್ಯಲರಿವೆ ದುರುಕ್ತಿ ಶರದಲಿ
ಮೆಯ್ಯನೆಸುವೆಯೊ ಮೇಣು ಮಾರ್ಗಣೆ
ಕಯ್ಯಲುಂಟೇ ನಿನಗೆ ಸಂಬಳವೇನು ಸಮರದಲಿ
ಅಯ್ಯನನು ಕರೆಯೆಂಬ ಬಾಯನು
ಕೊಯ್ಯ ಬೇಡಾ ಸಿಂಹ ಕೇಸರ
ದುಯ್ಯಲಾಡುವ ಗಜವ ನೋಡೆಂದುರುಬಿದನು ನೃಪನ (ದ್ರೋಣ ಪರ್ವ, ೧೫ ಸಂಧಿ, ೫೬ ಪದ್ಯ)

ತಾತ್ಪರ್ಯ:
ಕೆಟ್ಟ ಮಾತುಗಳೆಂಬ ಬಾನಗಳಿಂದ ಬೈಯುವುದು ನಿನಗೆ ಗೊತ್ತಿದೆ. ಆದ್ದರಿಂದ ದೇಹವನ್ನು ಗಾಯಗೊಳಿಸುವೆಯೋ? ನಿನಗೆ ಕೈಯಲ್ಲಿ ಆಯುಧವಿದೆಯೇ? ಯುದ್ಧ ಮಾಡಲು ನಿನಗೆ ಎಷ್ಟು ಸಂಬಳ ಅಪ್ಪನನ್ನು ಕರೆಯಬೇಕಂತೆ! ಹಾಗೆಂದ ಬಾಯನ್ನು ಸೀಳಿಬಿಡುವೆ, ಸಿಂಹದ ಕೂದಲುಗಳನ್ನು ಹಿಡಿದು ಉಯ್ಯಾಲೆಯಾಡಲು ಬರುವ ಈ ಆನೆಯನ್ನು ನೋಡು ಎಂದು ಘಟೋತ್ಕಚನು ಬಾಣಗಳ ಮಳೆಗೆರೆದನು.

ಅರ್ಥ:
ಬಯ್ಯು: ಜರಿ; ಅರಿ: ತಿಳಿ; ದುರುಕ್ತಿ: ಕೆಟ್ಟ ನುಡಿ; ಶರ: ಬಾಣ; ಮೆಯ್ಯ: ಒಡಲು, ದೇಹ; ಎಸುವೆ: ತೋರು; ಮೇಣ್: ಅಥವ; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ; ಸಂಬಳ: ವೇತನ; ಸಮರ: ಯುದ್ಧ; ಅಯ್ಯ: ತಂದೆ; ಕರೆ: ಬರೆಮಾಡು; ಕೊಯ್ಯು: ಸೀಳು; ಸಿಂಹ: ಕೇಸರಿ; ಕೇಸರ: ಕೂದಲು; ಉಯ್ಯಾಲೆ: ತೂಗಾಡುವ ಆಟ; ಗಜ: ಆನೆ; ನೋಡು: ವೀಕ್ಷಿಸು; ಉರುಬು: ಮೇಲೆ ಬೀಳು; ನೃಪ: ರಾಜ;

ಪದವಿಂಗಡಣೆ:
ಬಯ್ಯಲ್+ಅರಿವೆ +ದುರುಕ್ತಿ +ಶರದಲಿ
ಮೆಯ್ಯನ್+ಎಸುವೆಯೊ +ಮೇಣು +ಮಾರ್ಗಣೆ
ಕಯ್ಯಲುಂಟೇ +ನಿನಗೆ +ಸಂಬಳವೇನು +ಸಮರದಲಿ
ಅಯ್ಯನನು +ಕರೆಯೆಂಬ +ಬಾಯನು
ಕೊಯ್ಯ +ಬೇಡಾ +ಸಿಂಹ +ಕೇಸರದ್
ಉಯ್ಯಲಾಡುವ+ ಗಜವ+ ನೋಡೆಂದ್+ಉರುಬಿದನು +ನೃಪನ

ಅಚ್ಚರಿ:
(೧) ಘಟೋತ್ಕಚನು ತನ್ನ ಸಾಮರ್ಥ್ಯದ ಬಗ್ಗೆ ಹೇಳುವ ಪರಿ – ಸಿಂಹ ಕೇಸರ ದುಯ್ಯಲಾಡುವ ಗಜವ ನೋಡೆಂದುರುಬಿದನು

ಪದ್ಯ ೫೫: ಕೌರವನು ಘಟೋತ್ಕಚನನ್ನು ಹೇಗೆ ಹಂಗಿಸಿದನು?

ಹೆಣನನರಸುತ ರಕುತಪಾನಕೆ
ಸೆಣಸಿ ಶಾಕಿನಿ ಢಾಕಿನಿಯರೊಳು
ಹೆಣಗಿ ಗೆಲುವುದೆಯಾಯ್ತು ದಾನವವಿದ್ಯೆ ಜಗವರಿಯೆ
ರಣದೊಳಗ್ಗದ ಕೈದುಕಾರರ
ಕೆಣಕಿ ಗೆಲುವುದ ಕೇಳಿದರಿಯೆವು
ಹೆಣದಿನಿಹಿಗಳು ಹೇವ ಮಾರಿಗಳೆಂದನಾ ಭೂಪ (ದ್ರೋಣ ಪರ್ವ, ೧೫ ಸಂಧಿ, ೫೫ ಪದ್ಯ)

ತಾತ್ಪರ್ಯ:
ದುರ್ಯೋಧನನು ಉತ್ತರಿಸುತ್ತಾ, ಹೆಣವನ್ನು ಹುಡುಕುತ್ತಾ ರಕ್ತಪಾನ ಮಾಡಲು ಶಾಕಿನಿ, ಢಾಕಿನಿಯರೊಡನೆ ಗಜಳ ತೆಗೆದು ಗೆಲ್ಲುವುದೇ ನಿಮ್ಮ ರಾಕ್ಷಸವಿದ್ಯೆ, ಕಾಳಗದಲ್ಲಿ ವೀರರಾದವರನ್ನು ಕೆಣಕಿ ಯುದ್ಧಮಾಡಿ ರಾಕ್ಷಸರು ಗೆದ್ದುದನ್ನು ನಾನು ಕೇಳಿಲ್ಲ, ನೀವು ಹೆಣ ತಿನ್ನುವ ಮೊಂಡರೆಂದು ದುರ್ಯೋಧನನು ಘಟೋತ್ಕಚನನ್ನು ಹಂಗಿಸಿದನು.

ಅರ್ಥ:
ಹೆಣ: ಜೀವವಿಲ್ಲದ ದೇಹ; ಅರಸು: ಹುಡುಕು; ರಕುತ: ನೆತ್ತರು; ಪಾನ: ಕುಡಿ; ಸೆಣಸು: ಹೋರಾಡು; ಶಾಕಿನಿ: ರಾಕ್ಷಸಿ; ಢಾಕಿನಿ: ಒಂದು ಕ್ಷುದ್ರ ದೇವತೆ; ಹೆಣಗು: ಸೆಣಸು; ಗೆಲುವು: ಜಯ; ದಾನವ: ರಾಕ್ಷಸ; ಜಗ: ಪ್ರಪಂಚ; ಅರಿ: ತಿಳಿ; ರಣ: ಯುದ್ಧ; ಅಗ್ಗ: ಶ್ರೇಷ್ಠ; ಕೈದುಕಾರ: ಆಯುಧವನ್ನು ಹಿಡಿದ, ಪರಾಕ್ರಮಿ; ಕೆಣಕು: ರೇಗಿಸು; ಗೆಲುವು: ಜಯ; ಕೇಳು: ಆಲಿಸು; ಅರಿ: ತಿಳಿ; ತಿನಿ: ತಿನ್ನು; ಹೇವ: ಲಜ್ಜೆ, ಅವಮಾನ; ಮಾರಿ: ರಾಕ್ಷಸಿ; ಭೂಪ: ರಾಜ;

ಪದವಿಂಗಡಣೆ:
ಹೆಣನನ್+ಅರಸುತ +ರಕುತ+ಪಾನಕೆ
ಸೆಣಸಿ +ಶಾಕಿನಿ +ಢಾಕಿನಿಯರೊಳು
ಹೆಣಗಿ +ಗೆಲುವುದೆಯಾಯ್ತು +ದಾನವವಿದ್ಯೆ +ಜಗವ್+ಅರಿಯೆ
ರಣದೊಳ್+ಅಗ್ಗದ +ಕೈದುಕಾರರ
ಕೆಣಕಿ +ಗೆಲುವುದ +ಕೇಳಿದ್+ಅರಿಯೆವು
ಹೆಣ+ತಿನಿಹಿಗಳು +ಹೇವ +ಮಾರಿಗಳೆಂದನಾ +ಭೂಪ

ಅಚ್ಚರಿ:
(೧) ಘಟೋತ್ಕಚನನ್ನು ಹಂಗಿಸುವ ಪರಿ – ಹೆಣದಿನಿಹಿಗಳು ಹೇವ ಮಾರಿಗಳೆಂದನಾ ಭೂಪ
(೨) ಶಾಕಿನಿ, ಢಾಕಿನಿ – ಪ್ರಾಸ ಪದಗಳು
(೩) ರಾಕ್ಷಸರ ಕೆಲಸ – ಹೆಣನನರಸುತ ರಕುತಪಾನಕೆ ಸೆಣಸಿ ಶಾಕಿನಿ ಢಾಕಿನಿಯರೊಳು ಹೆಣಗಿ ಗೆಲುವುದೆಯಾಯ್ತು ದಾನವವಿದ್ಯೆ

ಪದ್ಯ ೫೪: ಘಟೋತ್ಕಚನು ಕೌರವನಿಗೆ ಏನೆಂದು ಉತ್ತರಿಸಿದನು?

ಮರಳು ಕೌರವ ಜಂಗಮ ಸ್ಥಾ
ವರದ ದೇಹಕೆ ನೆಳಲಹುದು ದಿನ
ಕರನ ದೇಹಕೆ ನೆಳಲು ಶ್ರುತವೋ ದೃಷ್ಟವೋ ನಿನಗೆ
ಸುರ ನಿಶಾಚರ ಮರ್ತ್ಯರೊಳು ತಾ
ನೆರವ ಬಯಸುವುದುಂಟೆ ಹರಿಯಂ
ತಿರಲಿ ಚೈತನ್ಯಾತ್ಮನಾತನ ಮಾತದೇಕೆಂದ (ದ್ರೋಣ ಪರ್ವ, ೧೫ ಸಂಧಿ, ೫೪ ಪದ್ಯ)

ತಾತ್ಪರ್ಯ:
ಘಟೋತ್ಕಚನು ಗರ್ಜಿಸುತ್ತ ಎಲೈ ಕೌರವ ಹಿಂದಿರುಗು, ಸುಮ್ಮನೆ ಹೋಗು, ಸ್ಥಾವರ, ಜಂಗಮ ವಸ್ತುಗಳಿಗೆ ನೆರಳಿರುತ್ತದೆ, ಆದರೆ ಸೂರ್ಯನ ದೇಹಕ್ಕೆ ನೆರಳಿರುವುದನ್ನು ನೋಡಿದೆಯಾ ಅಥವ ಕೇಳಿದೆಯಾ? ಸುರ, ದೆವ್ವ, ಮಾನವರ ನೆರವನ್ನು ನಾನು ಬಯಸುವುದುಂಟೇ? ೈನ್ನು ಶ್ರೀಕೃಷ್ಣ, ಅವನು ಚಿನ್ಮಾತ್ರನಾದ ಆತ್ಮ, ಅವನ ಮಾತೇಕೆ ಎಂದು ಕೌರವನಿಗೆ ಹೇಳಿದನು.

ಅರ್ಥ:
ಮರಳು: ಹಿಂದಿರುಗು; ಜಂಗಮ: ಚಲಿಸುವ; ಸ್ಥಾವರ: ನಿಂತಿರುವ; ದೇಹ: ತನು, ಒಡಲು; ನೆಳಲು: ನೆರಳು, ಆಶ್ರಯ; ದಿನಕರ: ಸೂರ್ಯ; ಶ್ರುತ: ಕೇಳು; ದೃಷ್ಟ: ನೋಡು; ಸುರ: ದೇವತೆ; ನಿಶಾಚರ: ದೆವ್ವ, ದಾನವ; ಮರ್ತ್ಯ: ಭೂಲೋಕ; ಬಯಸು: ಆಸೆಪಡು; ಹರಿ: ಕೃಷ್ಣ; ಚೈತನ್ಯ: ಶಕ್ತಿ, ಸಾಮರ್ಥ್ಯ; ಮಾತು: ವಾಣಿ; ಎರವು: ಸಾಲ;

ಪದವಿಂಗಡಣೆ:
ಮರಳು +ಕೌರವ +ಜಂಗಮ +ಸ್ಥಾ
ವರದ +ದೇಹಕೆ +ನೆಳಲಹುದು +ದಿನ
ಕರನ +ದೇಹಕೆ +ನೆಳಲು+ ಶ್ರುತವೋ +ದೃಷ್ಟವೋ +ನಿನಗೆ
ಸುರ +ನಿಶಾಚರ +ಮರ್ತ್ಯರೊಳು +ತಾನ್
ಎರವ +ಬಯಸುವುದುಂಟೆ +ಹರಿ+ಯಂ
ತಿರಲಿ +ಚೈತನ್ಯ+ಆತ್ಮನ್+ಆತನ +ಮಾತದ್+ಏಕೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ದಿನಕರನ ದೇಹಕೆ ನೆಳಲು ಶ್ರುತವೋ ಧೃಷ್ಟವೋ ನಿನಗೆ
(೨) ಸ್ಥಾವರ, ಜಂಗಮ – ವಿರುದ್ಧ ಪದಗಳು