ಪದ್ಯ ೩೭: ಧರ್ಮಜನು ಭೀಮನಿಗೆ ಎಲ್ಲಿಗೆ ಹೋಗಲು ಹೇಳಿದ?

ಹಾ ನುಡಿಯದಿರು ನಿಲು ಪಿತಾಮಹ
ನೇನ ಬೆಸಸಿದುದಕೆ ಹಸಾದವು
ನೀನು ನಡೆ ಪಾಳಯಕೆ ಬಿಡುಗುರಿತನವ ಮಾಣೆಯಲ
ಮೌನಮುದ್ರೆಯ ಹಿಡಿಯೆನಲು ಪವ
ಮಾನನಂದನ ಖಾತಿಯಲಿ ಯಮ
ಸೂನುವನು ಬಿಡೆ ನೋಡಿ ಮೆಲ್ಲನೆ ಸರಿದನಲ್ಲಿಂದ (ಭೀಷ್ಮ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ಭೀಮನ ಮಾತನ್ನು ಕೇಳಿ ಧರ್ಮಜನು, ಸಾಕು, ಮಾತನಾಡಬೇಡ, ತಾತನು ಏನು ಹೇಳಿದರೂ ಅದೇ ನಮಗೆ ಪ್ರಸಾದ. ಛೇ ನೀನು ಉರಿತುಂಬಿದ ಮಾತಾಡುವುದನ್ನು ಬಿಡುವುದೇ ಇಲ್ಲವಲ್ಲ. ಸುಮ್ಮನೆ ಪಾಳೆಯಕ್ಕೆ ಹೋಗು, ಎನ್ನಲು ಭೀಮನು ಸಿಟ್ಟಿನಿಂದ ಅಣ್ಣನನ್ನು ನೋಡುತ್ತಾ ಅಲ್ಲಿಂದ ಹೊರಟು ಹೋದನು.

ಅರ್ಥ:
ನುಡಿ: ಮಾತು; ನಿಲು: ನಿಲ್ಲು, ತಾಳು; ಪಿತಾಮಹ: ತಾತ; ಬೆಸಸು: ಆಜ್ಞಾಪಿಸು, ಹೇಳು; ಹಸಾದ: ಪ್ರಸಾದ; ನಡೆ: ಹೋಗು; ಪಾಳಯ: ಸೀಮೆ; ಬಿಡು: ತೊರೆ, ಹೋಗು; ಉರಿ: ಬೆಂಕಿ; ಮಾಣು: ನಿಲ್ಲು, ಸ್ಥಗಿತಗೊಳ್ಳು; ಮೌನ: ಸುಮ್ಮನಿರುವಿಕೆ; ಮುದ್ರೆ: ಚಿಹ್ನೆ; ಹಿಡಿ: ಗ್ರಹಿಸು; ಪವಮಾನ: ವಾಯು; ನಂದನ: ಮಗ; ಖಾತಿ: ಕೋಪ; ಸೂನು: ಮಗ; ಬಿಡು: ತೊರೆ, ತ್ಯಜಿಸು; ನೋಡು: ತೋರು, ಗೋಚರಿಸು; ಮೆಲ್ಲನೆ: ನಿಧಾನವಾಗಿ; ಸರಿ: ಚಲಿಸು, ಗಮಿಸು;

ಪದವಿಂಗಡಣೆ:
ಹಾ +ನುಡಿಯದಿರು +ನಿಲು +ಪಿತಾಮಹನ್
ಏನ+ ಬೆಸಸಿದುದಕೆ+ ಹಸಾದವು
ನೀನು +ನಡೆ +ಪಾಳಯಕೆ +ಬಿಡುಗ್+ಉರಿತನವ +ಮಾಣೆಯಲ
ಮೌನಮುದ್ರೆಯ +ಹಿಡಿಯೆನಲು+ ಪವ
ಮಾನನಂದನ+ ಖಾತಿಯಲಿ +ಯಮ
ಸೂನುವನು+ ಬಿಡೆ +ನೋಡಿ +ಮೆಲ್ಲನೆ +ಸರಿದನಲ್ಲಿಂದ

ಅಚ್ಚರಿ:
(೧) ಸುಮ್ಮನಿರು ಎಂದು ಹೇಳುವ ಪರಿ – ಮೌನಮುದ್ರೆಯ ಹಿಡಿಯೆನಲು ಪವಮಾನನಂದನ ಖಾತಿಯಲಿ ಯಮ
ಸೂನುವನು ಬಿಡೆ

ಪದ್ಯ ೩೬: ಭೀಮನು ಏನೆಂದು ಗರ್ಜಿಸಿದನು?

ಎಲವೊ ಭೀಷ್ಮರ ಮಾತುಗಳ ನೀ
ನೊಲಿವರೆಯು ಸಂಧಾನದಲಿ ನೀ
ನಿಲುವರೆಯು ದೇಹಾಭಿಲಾಷೆಗೆ ಬಲಿವರೆಯು ಮನವ
ಒಲಿದ ಭೀಮನೆ ನಿನ್ನ ಸಂಧಿಯ
ಕಳಚಿ ನಿನ್ನೊಡಹುಟ್ಟಿದೀತನ
ತಿಳಿರಕುತವನು ಸುರಿವನಲ್ಲದೆ ಬಿಡುವನಲ್ಲೆಂದ (ಭೀಷ್ಮ ಪರ್ವ, ೧೦ ಸಂಧಿ, ೩೬ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತುಗಳನ್ನು ಕೇಳುತ್ತಿದ್ದ ಭೀಮನು, ಎಲವೋ ಕೌರವ, ನೀನು ಭೀಷ್ಮರ ಮಾತುಗಳಿಗೆ ಒಪ್ಪಿದರೂ, ಸಂಧಾನ ಮಾಡಿಕೊಂಡರೂ, ಬದುಕಬೇಕೆಂದು ನಿರ್ಧರಿಸಿದರೂ, ನಿನ್ನ ಸಂಧಿಯನ್ನು ಕಿತ್ತುಹಾಕಿ, ನಿನ್ನ ಒಡಹುಟ್ಟಿದ ದುಶ್ಯಾಸನನ ತಿಳಿರಕ್ತವನ್ನು ಸುರಿದುಕೊಳ್ಳದೆ ಬಿಡುವುದಿಲ್ಲ ಎಂದು ಗರ್ಜಿಸಿದನು.

ಅರ್ಥ:
ಮಾತು: ನುಡಿ; ಒಲಿ: ಒಪ್ಪು, ಸಮ್ಮತಿಸು; ಸಂಧಾನ: ಸೇರಿಸುವುದು, ಹೊಂದಿಸುವುದು; ನಿಲು: ನಿಲ್ಲು, ಇರು, ಉಳಿ; ದೇಹ: ತನು, ಕಾಯ; ಅಭಿಲಾಷೆ: ಇಚ್ಛೆ; ಬಲಿ: ಗಟ್ಟಿ, ದೃಢ; ಮನ: ಮನಸ್ಸು; ಕಳಚು: ಬೇರ್ಪಡಿಸು, ಕೀಳು; ಒಡಹುಟ್ಟು: ಜೊತೆಗೆ ಹುಟ್ಟಿದ, ತಮ್ಮ; ತಿಳಿ: ಸ್ವಚ್ಛತೆ, ನೈರ್ಮಲ್ಯ; ರಕುತ: ನೆತ್ತರು; ಸುರಿ: ಚೆಲ್ಲು; ಬಿಡು: ತೊರೆ;

ಪದವಿಂಗಡಣೆ:
ಎಲವೊ +ಭೀಷ್ಮರ +ಮಾತುಗಳ +ನೀನ್
ಒಲಿವರೆಯು +ಸಂಧಾನದಲಿ +ನೀ
ನಿಲುವರೆಯು +ದೇಹಾಭಿಲಾಷೆಗೆ+ ಬಲಿವರೆಯು+ ಮನವ
ಒಲಿದ+ ಭೀಮನೆ+ ನಿನ್ನ+ ಸಂಧಿಯ
ಕಳಚಿ +ನಿನ್ನೊಡಹುಟ್ಟಿದ್+ಈತನ
ತಿಳಿರಕುತವನು +ಸುರಿವನಲ್ಲದೆ +ಬಿಡುವನಲ್ಲೆಂದ

ಅಚ್ಚರಿ:
(೧) ಭೀಮನ ಆಕ್ರೋಶ – ಭೀಮನೆ ನಿನ್ನ ಸಂಧಿಯ ಕಳಚಿ ನಿನ್ನೊಡಹುಟ್ಟಿದೀತನ ತಿಳಿರಕುತವನು ಸುರಿವನಲ್ಲದೆ ಬಿಡುವನಲ್ಲೆಂದ
(೨) ೧, ೨ ಸಾಲಿನ ಕೊನೆ ಪದ “ನೀ” ಎಂದಿರುವುದು

ಪದ್ಯ ೩೫: ಭೀಷ್ಮರಿಗೆ ಯಾವು ಬಿರುದುಂಟು?

ಕಾಯದಲಿ ಕಕ್ಕುಲಿತೆ ಯೇಕಿದ
ರಾಯಸವು ತಾನೇಸು ದಿನ ಕ
ಲ್ಪಾಯುಗಳಿಗೊಳಗಾಗಿ ಕಾಲನ ರಾಜಕಾರಿಯವು
ಹೇಯವೀ ಸಿರಿಯಿದರ ಮೈವಶ
ದಾಯತಿಕೆ ನಮಗಿಲ್ಲ ಪಾಂಡವ
ರಾಯ ಮಸ್ತಕಶೂಲನೆಂಬೀ ಬಿರುದ ಬಿಡೆನೆಂದ (ಭೀಷ್ಮ ಪರ್ವ, ೧೦ ಸಂಧಿ, ೩೫ ಪದ್ಯ)

ತಾತ್ಪರ್ಯ:
ಈ ದೇಹದ ಮೇಲಿನ ಅತಿಯಾಶೆ ಏಕೆ? ಈ ದೇಹದ ನೋವು ಎಷ್ಟು ದಿನವಿದ್ದೀತು. ಕಲ್ಪಾಂತದವರೆಗೂ ಬದುಕುವವರ ಮೇಲೂ ಯಮನ ರಾಜಕಾರ್ಯ ತಪ್ಪುವುದಿಲ್ಲ ಸಾವು ಯಾರಿಗೆ ತಪ್ಪದು. ಲೋಕದ ಐಶ್ವರ್ಯವು ಹೇಯವಾದುದು. ಅದರ ಮೋಹ ನನಗಿಲ್ಲ. ಪಾಂಡವರಾಜ ಮಸ್ತಕ ಶೂಲ ಎನ್ನುವುದು ನನ್ನ ಬಿರುದು. ಅದನ್ನು ಬಿಡುವುದಿಲ್ಲ.

ಅರ್ಥ:
ಕಾಯ: ದೇಹ; ಕಕ್ಕುಲತೆ: ಆಸಕ್ತಿ, ಚಿಂತೆ; ಆಯಸ: ಆಯುಷ್ಯ; ದಿನ: ದಿವಸ; ಕಲ್ಪ: ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಯುಗ: ವಿಶ್ವದ ದೀರ್ಘವಾದ ಕಾಲಖಂಡ; ಕಾಲ: ಯಮ; ರಾಜಕಾರಿ: ರಾಜಕಾರ್ಯ; ಹೇಯ: ಬಿಡಲು ಯೋಗ್ಯವಾದ, ತ್ಯಾಜ್ಯವಾದ; ಸಿರಿ: ಐಶ್ವರ್ಯ; ಮೈ: ತನು; ವಶ: ಅಧೀನ; ರಾಯ: ರಾಜ; ಮಸ್ತಕ: ಶಿರ; ಶೂಲ: ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ, ತ್ರಿಶೂಲ; ಬಿರುದು: ಗೌರವ ಸೂಚಕವಾಗಿ ಕೊಡುವ ಪ್ರಶಸ್ತಿ; ಬಿಡು: ತೊರೆ;

ಪದವಿಂಗಡಣೆ:
ಕಾಯದಲಿ +ಕಕ್ಕುಲಿತೆ +ಏಕ್+ಇದರ್
ಆಯಸವು +ತಾನ್+ಏಸು +ದಿನ +ಕ
ಲ್ಪಾಯುಗಳಿಗ್+ಒಳಗಾಗಿ +ಕಾಲನ +ರಾಜಕಾರಿಯವು
ಹೇಯವ್+ಈ+ ಸಿರಿ+ಇದರ +ಮೈವಶ
ದಾಯತಿಕೆ+ ನಮಗಿಲ್ಲ +ಪಾಂಡವ
ರಾಯ +ಮಸ್ತಕ+ಶೂಲನ್+ಎಂಬೀ +ಬಿರುದ +ಬಿಡೆನೆಂದ

ಅಚ್ಚರಿ:
(೧) ಭೀಷ್ಮರ ಬಿರುದು – ಪಾಂಡವರಾಯ ಮಸ್ತಕಶೂಲನೆಂಬೀ ಬಿರುದ

ಪದ್ಯ ೩೪: ದುರ್ಯೊಧನನ ನೇರ ನುಡಿಯೇನು?

ಒಂದು ಮತವೆನಗೊಂದು ನುಡಿ ಮನ
ವೊಂದು ಮತ್ತೊಂದಿಲ್ಲ ಸಾಕಿದ
ನೆಂದು ಫಲವೇನಿನ್ನು ಸಂಧಿಯೆ ಪಾಂಡುತನಯರಲಿ
ಇಂದು ನಮಗೀ ಹದನ ನಾನೇ
ತಂದು ಬಳಿಕೆನ್ನೊಡಲ ಸಲಹುವ
ಚೆಂದವೊಳ್ಳಿತು ತಪ್ಪನಾಡಿದಿರೆಂದನವನೀಶ (ಭೀಷ್ಮ ಪರ್ವ ೧೦ ಸಂಧಿ, ೩೪ ಪದ್ಯ)

ತಾತ್ಪರ್ಯ:
ಒಂದು ಅಭಿಪ್ರಾಯ, ಒಂದು ಮಾತು, ಮನಸ್ಸಲ್ಲೂ ಅದೇ ಹೊರತು ಮತ್ತೊಂದಿಲ್ಲ. ನೀವು ಸಾಕಿದವರು, ಆಡಿ ಏನು ಫಲ. ಪಾಂಡವರಿಂದ ನಿಮಗೆ ನಾನೇ ಈ ದುರ್ಗತಿಯನ್ನು ತಂದು, ನಾನು ಉಳಿದು ನನ್ನ ದೇಹವನ್ನು ಹೊರೆಯುವುದು ಏತರದ ಮಾತು, ನೀವು ತಪ್ಪನ್ನಾಡಿದಿರಿ, ಎಂದು ದುರ್ಯೋಧನನು ಭೀಷ್ಮಗೆ ಹೇಳಿದನು.

ಅರ್ಥ:
ಮತ: ವಿಚಾರ, ಅಭಿಪ್ರಾಯ; ನುಡಿ: ಮಾತು; ಮನ: ಮನಸ್ಸು; ಸಾಕು: ನಿಲ್ಲಿಸು; ಫಲ: ಪ್ರಯೋಜನ; ಸಂಧಿ: ಕೂಡಿಸು; ತನಯ: ಮಗ; ಹದ: ರೀತಿ; ಒಡಲು: ದೇಹ; ಸಲಹು: ಕಾಪಾಡು, ರಕ್ಷಿಸು; ಚೆಂದ: ಸೊಗಸು; ಒಳ್ಳಿತು: ಸರಿಯಾದ; ತಪ್ಪು: ಸರಿಯಲ್ಲದು; ಅವನೀಶ: ರಾಜ;

ಪದವಿಂಗಡಣೆ:
ಒಂದು +ಮತವ್+ಎನಗ್+ಒಂದು +ನುಡಿ +ಮನವ್
ಒಂದು+ ಮತ್ತೊಂದಿಲ್ಲ +ಸಾಕಿದನ್
ನೆಂದು+ ಫಲವೇನ್+ಇನ್ನು +ಸಂಧಿಯೆ +ಪಾಂಡು+ತನಯರಲಿ
ಇಂದು +ನಮಗೀ +ಹದನ +ನಾನೇ
ತಂದು +ಬಳಿಕ್+ಎನ್ನೊಡಲ+ ಸಲಹುವ
ಚೆಂದವ್+ಒಳ್ಳಿತು +ತಪ್ಪನಾಡಿದಿರ್+ಎಂದನ್+ಅವನೀಶ

ಅಚ್ಚರಿ:
(೧) ದುರ್ಯೋಧನನ ಅಭಿಪ್ರಾಯ – ಒಂದು ಮತವೆನಗೊಂದು ನುಡಿ ಮನವೊಂದು ಮತ್ತೊಂದಿಲ್ಲ

ಪದ್ಯ ೩೩: ದುರ್ಯೋಧನನ ಮತವಾವುದು?

ಮೊದಲಲೆಂದಿರಿ ನೀವು ಬಳಿಕೀ
ಯದುಕುಲಾಧಿಪ ಕೃಷ್ಣ ನೆರೆ ಹೇ
ಳಿದನು ಋಷಿಗಳು ಬೊಪ್ಪನವರೀ ಹದನ ಸಾರಿದರು
ವಿದುರ ಹೇಳಿದನೆಲ್ಲರಿಗೆ ತಾ
ನಿದುವೆ ಮತವೆನಗೊಬ್ಬಗೆಯು ಬಲು
ಗದನವೇ ಮತವೆಂದು ಹೇಳಿದ ಹಿಂದೆ ನಿಮಗೆಂದ (ಭೀಷ್ಮ ಪರ್ವ, ೧೦ ಸಂಧಿ, ೩೩ ಪದ್ಯ)

ತಾತ್ಪರ್ಯ:
ಮೊದಲು ನೀವು ಸಂಧಿ ಮಾಡಿಕೋ ಮೈತ್ರಿಯಿಂದ ಬಾಳು ಎಂದು ಹೇಳಿದಿರಿ, ಬಳಿಕ ಕೃಷ್ಣನು ಹೇಳಿದ, ಋಷಿಗಳು ಸಹ ಇದನ್ನೇ ಹೇಳಿದರು. ಅಪ್ಪನೂ, ವಿದುರನೂ ಈ ಮಾತನ್ನೇ ಹೇಳಿದರು, ನಿಮ್ಮೆಲ್ಲರಿಗೂ ಒಂದೇ ಅಭಿಪ್ರಾಯ, ಆದರೆ ನನಗೊಬ್ಬನಿಗೆ ಯುದ್ಧದಲ್ಲಿಯೇ ಮತ ಎಂದು ಈ ಹಿಂದೆಯೇ ಹೇಳಿದ್ದೆ ಎಂದು ದುರ್ಯೋಧನನು ತಿಳಿಸಿದನು.

ಅರ್ಥ:
ಮೊದಲು: ಆದಿ, ಮುಂಚೆ; ಬಳಿಕ: ನಂತರ; ಯದುಕುಲಾಧಿಪ: ಕೃಷ್ಣ; ಅಧಿಪ: ಒಡೆಯ; ನೆರೆ: ಸೇರು; ಹೇಳು: ತಿಳಿಸು; ಋಷಿ: ಮುನಿ; ಬೊಪ್ಪ: ತಂದೆ; ಹದ: ರೀತಿ; ಸಾರು: ಕೂಗು, ಘೋಷಿಸು; ಮತ: ಅಭಿಪ್ರಾಯ; ಕದನ: ಯುದ್ಧ; ಮತ: ವಿಚಾರ;

ಪದವಿಂಗಡಣೆ:
ಮೊದಲಲ್+ಎಂದಿರಿ +ನೀವು +ಬಳಿಕ್+ಈ
ಯದುಕುಲ+ಅಧಿಪ+ ಕೃಷ್ಣ +ನೆರೆ +ಹೇ
ಳಿದನು +ಋಷಿಗಳು +ಬೊಪ್ಪನವರೀ +ಹದನ +ಸಾರಿದರು
ವಿದುರ+ ಹೇಳಿದನ್+ಎಲ್ಲರಿಗೆ +ತಾ
ನಿದುವೆ +ಮತವ್+ಎನಗ್+ಒಬ್ಬಗೆಯು +ಬಲು
ಕದನವೇ +ಮತವೆಂದು +ಹೇಳಿದ +ಹಿಂದೆ +ನಿಮಗೆಂದ

ಅಚ್ಚರಿ:
(೧) ದುರ್ಯೋಧನನ ಮತ – ಎನಗೊಬ್ಬಗೆಯು ಬಲುಗದನವೇ ಮತ

ಪದ್ಯ ೩೨: ಭೀಷ್ಮರ ಹಿತನುಡಿಗೆ ದುರ್ಯೋಧನನ ಉತ್ತರವೇನು?

ಮಾತು ಕಿವಿಯೊಗದಾನು ಸಮರಂ
ಗಾತುರನು ಛಲದಂಕನೆಂಬೀ
ಖ್ಯಾತಿಯನು ಮೆರೆದಾತನಲ್ಲದೆ ರಾಜ್ಯ ಪದವಿಯಲಿ
ಸೋತ ಮನದವನಲ್ಲ ಭುವನ
ಖ್ಯಾತನೆನಿಪೊಂದಾಶೆಯನು ದಿಟ
ನೀತಿಗಳೆದರೆ ಬಳಿಕ ನಿಮ್ಮಯ ಮೊಮ್ಮನಲ್ಲೆಂದ (ಭೀಷ್ಮ ಪರ್ವ, ೧೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ಭೀಷ್ಮರ ಮಾತಿಗೆ ಉತ್ತರಿಸುತ್ತಾ, ನಿಮ್ಮ ಮಾತು ನನ್ನ ಕಿವಿಯನ್ನು ಹೊಗುವುದಿಲ್ಲ, ಯುದ್ಧಾತುರ ಛಲದಂಕಮಲ್ಲ ಎಂಬ ಕೀರ್ತಿಯನ್ನು ಮೆರೆಯುವವನೇ ಹೊರತು, ರಾಜ್ಯಪದವಿಗೆ ಇಷ್ಟಪದುವವನಲ್ಲ. ಲೋಕ ಖ್ಯಾತಿಯನ್ನು ಹೊಂದುವ ಮಾರವನ್ನು ಕೈಬಿಟ್ಟರೆ ನಾನು ನಿಮ್ಮ ಮೊಮ್ಮಗನೇ ಅಲ್ಲ ಎಂದು ಭೀಷ್ಮರ ಹಿತನುಡಿಯನ್ನು ತಿರಸ್ಕರಿಸಿದನು.

ಅರ್ಥ:
ಮಾತು: ನುಡಿ; ಕಿವಿ: ಕರ್ಣ; ಒಗು: ಆವರಿಸು, ಸುತ್ತು; ಸಮರ: ಯುದ್ಧ; ಆತುರ: ಅವಸರ; ಛಲ: ದೃಢ ನಿಶ್ಚಯ; ಖ್ಯಾತಿ: ಪ್ರಸಿದ್ಧಿ; ಮೆರೆ: ಹೊಳೆ, ಪ್ರಕಾಶಿಸು; ಪದವಿ: ಸ್ಥಾನ, ಅಧಿಕಾರ; ಸೋತು: ಪರಾಭವ; ಮನ: ಮನಸ್ಸಿ; ಭುವನ: ಜಗತ್ತು; ಖ್ಯಾತ: ಪ್ರಸಿದ್ಧ; ಆಶೆ: ಬಯಕೆ; ದಿಟ: ನಿಜ; ನೀತಿ: ಒಯ್ಯುವಿಕೆ, ಶಿಷ್ಟಾಚಾರ; ಬಳಿಕ: ನಂತರ; ಮೊಮ್ಮ: ಮೊಮ್ಮಗ;

ಪದವಿಂಗಡಣೆ:
ಮಾತು+ ಕಿವಿಯೊಗದ್+ಆನು +ಸಮರಂಗ್
ಆತುರನು +ಛಲದಂಕನ್+ಎಂಬೀ
ಖ್ಯಾತಿಯನು +ಮೆರೆದಾತನಲ್ಲದೆ+ ರಾಜ್ಯ +ಪದವಿಯಲಿ
ಸೋತ +ಮನದವನಲ್ಲ +ಭುವನ
ಖ್ಯಾತನ್+ಎನಿಪ್+ಒಂದಾಶೆಯನು +ದಿಟ
ನೀತಿ+ಕಳೆದರೆ +ಬಳಿಕ +ನಿಮ್ಮಯ +ಮೊಮ್ಮನಲ್ಲೆಂದ

ಅಚ್ಚರಿ:
(೧) ದುರ್ಯೋಧನನ ಮನದ ಮಾತು – ಸೋತ ಮನದವನಲ್ಲ ಭುವನಖ್ಯಾತನೆನಿಪೊಂದಾಶೆಯನು ದಿಟ

ಪದ್ಯ ೩೧: ಭೀಷ್ಮರು ದುರ್ಯೋಧನನಿಗೆ ಯಾವ ಉಪಕಾರವನ್ನು ಕೇಳಿದರು?

ನಿನಗರೋಚಕವೆಮ್ಮ ಮಾತುಗ
ಳೆನಿಬರಿಗೆ ಸೊಗಸುವುದು ಪಾಂಡವ
ರನುಮತವು ಬೇರಿಲ್ಲ ನಮ್ಮನುಮತದೊಳಡಗಿಹರು
ತನುಜ ಕದನದ ಕಡ್ಡತನ ಬೇ
ಡೆನಗಿದುಪಕಾರವು ವೃಥಾ ಕುರು
ವನಕೆ ವಹ್ನಿಯ ಬಿತ್ತಬೇಡಕಟೆಂದನಾ ಭೀಷ್ಮ (ಭೀಷ್ಮ ಪರ್ವ, ೧೦ ಸಂಧಿ, ೩೧ ಪದ್ಯ)

ತಾತ್ಪರ್ಯ:
ಭೀಷ್ಮನು ತನ್ನ ಮಾತುಗಳನ್ನು ಮುಂದುವರೆಸುತ್ತಾ, ನಮ್ಮ ಮಾತುಗಳು ನಿನಗೆ ರುಚಿಸುವುದಿಲ್ಲ, ಅವರೆಲ್ಲರಿಗೂ ರುಚಿಸುತ್ತದೆ, ನನ್ನ ಅಭಿಪ್ರಾಯವೇ ಪಾಂಡವರ ಅಭಿಪ್ರಾಯ. ಮಗನೇ ಯುದ್ಧ ಮಾಡಬೇಕೆಂಬ ಮೂರ್ಖತನ ಬೇಡ. ಅದನ್ನು ನೀನು ಬಿಟ್ಟರೆ ನನಗೆ ಉಪಕಾರ ಮಾಡಿದಂತೆ, ಕುರುಕುಲವೆಂಬ ವನಕ್ಕೆ ವೃಥಾ ಬೆಂಕಿಹಚ್ಚಬೇಡ ಎಂದು ಹೇಳಿದರು.

ಅರ್ಥ:
ಅರೋಚಕ: ರುಚಿಯಿಲ್ಲದ; ಮಾತು: ನುಡಿ; ಅನಿಬರು: ಅಷ್ಟು ಜನ; ಸೊಗಸು: ಚೆಲುವು; ಅನುಮತ: ಒಪ್ಪಿಗೆ; ಬೇರೆ: ಅನ್ಯ; ಅಡಗು: ಒಂದಾಗು, ಒಟ್ಟಾಗು; ತನುಜ: ಮಗ; ಕದನ: ಯುದ್ಧ; ಕಡ್ಡ: ಕೆಟ್ಟದಾದ; ಬೇಡ: ತೊರೆ; ಉಪಕಾರ: ಸಹಾಯ; ವೃಥಾ: ಸುಮ್ಮನೆ; ವನ: ಕಾಡು; ವಹ್ನಿ: ಬೆಂಕಿ; ಬಿತ್ತು: ಹಾಕು; ಅಕಟ: ಅಯ್ಯೋ;

ಪದವಿಂಗಡಣೆ:
ನಿನಗ್+ಅರೋಚಕವ್+ಎಮ್ಮ+ ಮಾತುಗಳ್
ಅನಿಬರಿಗೆ +ಸೊಗಸುವುದು +ಪಾಂಡವರ್
ಅನುಮತವು +ಬೇರಿಲ್ಲ +ನಮ್ಮ್+ಅನುಮತದೊಳ್+ಅಡಗಿಹರು
ತನುಜ +ಕದನದ +ಕಡ್ಡತನ+ ಬೇಡ್
ಎನಗ್+ಇದ್+ಉಪಕಾರವು+ ವೃಥಾ +ಕುರು
ವನಕೆ +ವಹ್ನಿಯ+ ಬಿತ್ತಬೇಡ್+ಅಕಟೆಂದನಾ+ ಭೀಷ್ಮ

ಅಚ್ಚರಿ:
(೧) ಭೀಷ್ಮರ ಸಲಹೆ – ವೃಥಾ ಕುರುವನಕೆ ವಹ್ನಿಯ ಬಿತ್ತಬೇಡಕಟೆಂದನಾ ಭೀಷ್ಮ