ಪದ್ಯ ೪೬: ಉತ್ತರನು ಅರ್ಜುನನ ಚರಣಕ್ಕೆ ಏಕೆ ಎರಗಿದನು?

ಅಹುದು ಬಳಿಕೇನುಳಿದವರಿಗೀ
ಮಹಿಮೆ ತಾನೆಲ್ಲಿಯದು ಕಾಣಲು
ಬಹುದಲಾ ಜೀವಿಸಿದರತಿಶಯವನು ಮಹಾದೇವ
ಗಹನ ಮಾಡದೆ ನುಡಿದ ತಪ್ಪಿನ
ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು ಪದಕೆ (ವಿರಾಟ ಪರ್ವ, ೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಉತ್ತರನು, ಹೌದು ನಿಮಗಲ್ಲದೆ ಉಳಿದವರಿಗೆ ಇಂತಹ ಹಿರಿಮೆ ಎಲ್ಲಿಂದ ಬಂದೀತು? ಶಿವ ಶಿವಾ ನಾನು ಮೊದಲೇ ಹೇಳಿದಂತೆ, ಬದುಕಿದ್ದರೆ ಎಂತಹ ಆಶ್ಚರ್ಯವನ್ನಾದರೂ ನೋಡಬಹುದು, ನಿನ್ನೊಡನೆ ನಾನು ವರ್ತಿಸಿದ ರೀತಿ ಆಡಿದ ಮಾತುಗಳ ತಪ್ಪುಗಳನ್ನೇ ಭಾವಿಸದೆ, ನನ್ನನ್ನು ಕುಹಕಿಯೆನ್ನದೆ ಕಾಪಾಡು ಎಂದು ನಮಸ್ಕರಿಸಿದನು.

ಅರ್ಥ:
ಬಳಿಕ: ನಂತರ; ಉಳಿದ: ಮಿಕ್ಕ; ಮಹಿಮೆ: ಶ್ರೇಷ್ಠತೆ, ಔನ್ನತ್ಯ; ಕಾಣು: ತೋರು; ಜೀವಿಸು: ಬಾಳು; ಅತಿಶಯ: ಹೆಚ್ಚು; ಗಹನ: ದಟ್ಟವಾದ, ನಿಬಿಡವಾದ; ನುಡಿ: ಮಾತಾಡು; ತಪ್ಪು: ಸರಿಯಲ್ಲದ; ಬಹಳ: ಅಧಿಕ, ಹೆಚ್ಚು; ಭಾವಿಸು: ತಿಳಿ; ಕುಹಕ: ಮೋಸ, ವಂಚನೆ; ಕಾಯ: ರಕ್ಷಿಸು; ಎರಗು: ನಮಸ್ಕರಿಸು, ಬಾಗು; ಪದ: ಪಾದ, ಚರಣ;

ಪದವಿಂಗಡಣೆ:
ಅಹುದು +ಬಳಿಕೇನ್+ಉಳಿದವರಿಗ್+ಈ
ಮಹಿಮೆ +ತಾನೆಲ್ಲಿಯದು +ಕಾಣಲು
ಬಹುದಲಾ +ಜೀವಿಸಿದರ್+ಅತಿಶಯವನು +ಮಹಾದೇವ
ಗಹನ+ ಮಾಡದೆ +ನುಡಿದ +ತಪ್ಪಿನ
ಬಹಳತೆಯ +ಭಾವಿಸದೆ +ತನ್ನನು
ಕುಹಕಿಯೆನ್ನದೆ+ ಕಾಯಬೇಕೆಂದ್+ಎರಗಿದನು +ಪದಕೆ

ಅಚ್ಚರಿ:
(೧) ಉತ್ತರನು ತನ್ನನ್ನು ಕ್ಷಮಿಸು ಎಂದು ಹೇಳುವ ಪರಿ – ನುಡಿದ ತಪ್ಪಿನ ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು

ಪದ್ಯ ೪೫: ಅರ್ಜುನನು ಪಾಂಡವರನ್ನು ಉತ್ತರನಿಗೆ ಹೇಗೆ ಪರಿಚಯಿಸಿದನು?

ಆದೊಡಾನರ್ಜುನನು ಬಾಣಸಿ
ಯಾದ ವಲಲನು ಭೀಮ ವರಯತಿ
ಯಾದ ಕಂಕನು ಧರ್ಮಪುತ್ರನು ನಿಮ್ಮ ಗೋಕುಲವ
ಕಾದವನು ಸಹದೇವ ರಾವುತ
ನಾದವನು ನಕುಲನು ವಿಳಾಸಿನಿ
ಯಾದವಳು ಸೈರಂಧ್ರಿ ರಾಣೀವಾಸವೆಮಗೆಂದ (ವಿರಾಟ ಪರ್ವ, ೭ ಸಂಧಿ, ೪೫ ಪದ್ಯ)

ತಾತ್ಪರ್ಯ:
ಕೇಳು ಉತ್ತರಕುಮಾರ, ನಾನೇ ಅರ್ಜುನ, ವಲಲನಾಗಿ ಬಾಣಸಿಯಾದವನು ಭೀಮ, ಕಂಕನು ಧರ್ಮಜನು, ಗೋಕುಲವನ್ನು ರಕ್ಷಿಸಿದವನು ಸಹದೇವ, ಕುದುರೆಗಳನ್ನು ಕಾಯುತ್ತಿದ್ದವನು ಸಹದೇವ, ನಮ್ಮ ಪತ್ನಿಯಾದ ದ್ರೌಪದಿ ಸೈರಂಧ್ರಿಯಾಗಿ ದಾಸಿಯಾಗಿದ್ದವಳು ಎಂದು ಪರಿಚಯಿಸಿದನು.

ಅರ್ಥ:
ಬಾಣಸಿ: ಅಡಗೆಯವ; ವರ: ಶ್ರೇಷ್ಠ; ಯತಿ: ಸಂನ್ಯಾಸಿ; ಗೋಕುಲ: ಗೋಸಮೂಹ; ಕಾದವ: ರಕ್ಷಿಸು; ವಿಳಾಸಿನಿ: ಸ್ತ್ರೀ, ದಾಸಿ; ರಾಣಿ: ಅರಸಿ; ರಾವುತ: ಅಶ್ವ;

ಪದವಿಂಗಡಣೆ:
ಆದೊಡ್+ಆನ್+ಅರ್ಜುನನು +ಬಾಣಸಿ
ಯಾದ +ವಲಲನು +ಭೀಮ +ವರ+ಯತಿ
ಯಾದ +ಕಂಕನು+ ಧರ್ಮಪುತ್ರನು +ನಿಮ್ಮ+ ಗೋಕುಲವ
ಕಾದವನು +ಸಹದೇವ +ರಾವುತ
ನಾದವನು +ನಕುಲನು +ವಿಳಾಸಿನಿ
ಯಾದವಳು+ ಸೈರಂಧ್ರಿ +ರಾಣೀವಾಸವ್+ಎಮಗೆಂದ

ಅಚ್ಚರಿ:
(೧) ಕಾದವನು, ಆದವನು – ಪ್ರಾಸ ಪದಗಳು

ಪದ್ಯ ೪೪: ಉತ್ತರನು ಸಾರಥಿಯನ್ನು ಯಾರೆಂದು ಊಹಿಸಿದನು?

ಆರು ನೀನರ್ಜುನನೊ ನಕುಲನೊ
ಮಾರುತನ ಸುತನೋ ಯುಧಿಷ್ಠಿರ
ವೀರನೋ ಸಹದೇವನೋ ಮೇಣವರ ಬಾಂಧವನೊ
ಧೀರ ಹೇಳೈ ಬೇಡಿಕೊಂಬೆನು
ಕಾರಣವ ವಿಸ್ತರಿಸು ಪಾಂಡಕು
ಮಾರರಾಯುಧತತಿಯ ನೀನೆಂತರಿವೆ ಹೇಳೆಂದ (ವಿರಾಟ ಪರ್ವ, ೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಎಲೈ ಸಾರಥಿ ನೀನಾದರು ಯಾರು? ಅರ್ಜುನನೋ, ನಕುಲನೋ, ವಾಯುಪುತ್ರನಾದ ಭೀಮನೋ, ವೀರ ಯುಧಿಷ್ಠಿರನೋ, ಸಹದೇವನೋ ಅಥವ ಅವರ ಬಾಂಧವನೋ, ಎಲೈ ಶೂರ,ನಾನು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ತಿಳಿಸು, ಈ ಪಾಂಡವರ ಆಯುಧಗಳೆಲ್ಲವೂ ನಿನಗೆ ಹೇಗೆ ತಿಳಿದಿದೆ ಎಂದು ಕೇಳಿದನು.

ಅರ್ಥ:
ವೀರ: ಶೂರ; ಸುತ: ಮಗ; ಮಾರುತ: ವಾಯು; ಮೇಣ್: ಅಥವ; ಬಾಂಧವ: ಸಂಬಂಹಿಕ; ಧೀರ: ಶೂರ; ಹೇಳು: ತಿಳಿಸು; ಬೇಡು: ಯಾಚಿಸು; ಕಾರಣ: ನಿಮಿತ್ತ, ಹೇತು; ವಿಸ್ತರಿಸು: ವಿವರಣೆ; ಕುಮಾರ: ಮಕ್ಕಳು; ಆಯುಧ: ಶಸ್ತ್ರ; ತತಿ: ಗುಂಪು; ಅರಿ: ತಿಳಿ; ಹೇಳು: ತಿಳಿಸು;

ಪದವಿಂಗಡಣೆ:
ಆರು+ ನೀನ್+ಅರ್ಜುನನೊ +ನಕುಲನೊ
ಮಾರುತನ +ಸುತನೋ +ಯುಧಿಷ್ಠಿರ
ವೀರನೋ +ಸಹದೇವನೋ +ಮೇಣ್+ಅವರ +ಬಾಂಧವನೊ
ಧೀರ +ಹೇಳೈ +ಬೇಡಿಕೊಂಬೆನು
ಕಾರಣವ +ವಿಸ್ತರಿಸು +ಪಾಂಡ+ಕು
ಮಾರರ್+ಆಯುಧ+ತತಿಯ+ ನೀನೆಂತರಿವೆ+ ಹೇಳೆಂದ

ಅಚ್ಚರಿ:
(೧) ವೀರ, ಧೀರ; ಸುತ, ಕುಮಾರ – ಸಮನಾರ್ಥಕ ಪದ

ಪದ್ಯ ೪೩: ಉತ್ತರನು ಆಶ್ಚರ್ಯಗೊಂಡು ಏನೆಂದು ಕೇಳಿದನು?

ಅವರವರ ಬತ್ತಳಿಕೆ ಚಾಪವ
ನವರ ಶರವನು ಕಂಬು ಖಡುಗವ
ಕವಚ ಸೀಸಕ ಜೋಡುಗಳ ಬಿರುದುಗಳ ಟೆಕ್ಕೆಯವ
ವಿವಿಧ ಶಸ್ತ್ರಾಸ್ತ್ರವನು ಫಲುಗುಣ
ವಿವರಿಸಲು ಬೆರಗಾಗಿ ಸಾರಥಿ
ಯಿವನು ತಾನಾರೆಂದು ಮತ್ಸ್ಯನಸೂನು ಬೆಸಗೊಂಡ (ವಿರಾಟ ಪರ್ವ, ೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅರ್ಜುನನು ಪಾಂಡವರ ಪ್ರತಿಯೊಬ್ಬರ ಬಿಲ್ಲು, ಬಾಣ, ಬತ್ತಳಿಕೆ, ಶಂಖ, ಖಡ್ಗ, ಕವಚ, ಶಿರಸ್ತ್ರಾಣ, ಪಾದರಕ್ಷೆ, ಧ್ವಜ ಮುಂತಾದ ಆಯುಧಗಳ ವಿವರವನ್ನು ಹೇಳಲು, ಉತ್ತರನು ಆಶ್ಚರ್ಯಗೊಂಡು, ಎಲೈ ಸಾರಥಿ ಇವನ್ನೆಲ್ಲಾ ಬಲ್ಲ ನೀನು ಯಾರು ಎಂದು ಕೇಳಿದನು.

ಅರ್ಥ:
ಬತ್ತಳಿಕೆ: ಬಾಣಗಳನ್ನು ಇಡುವ ಸ್ಥಳ; ಚಾಪ: ಬಿಲ್ಲು; ಶರ: ಬಾಣ; ಕಂಬು: ಕಡಗ, ಶಂಖ; ಖಡುಗ: ಕತ್ತಿ, ಕರವಾಳ; ಕವಚ: ಹೊದಿಕೆ, ಉಕ್ಕಿನ ಅಂಗಿ; ಸೀಸಕ: ಶಿರಸ್ತ್ರಾಣ; ಜೋಡು: ಕವಚ, ಪಾದರಕ್ಷೆ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಟೆಕ್ಕೆ: ಧ್ವಜ; ವಿವಿಧ: ಹಲವಾರು; ಶಸ್ತ್ರ: ಆಯುಧ; ವಿವರಿಸು: ಹೇಳು; ಬೆರಗು: ಆಶ್ಚರ್ಯ; ಸಾರಥಿ: ಸೂತ; ಸೂನು: ಮಗ; ಬೆಸ:ಕೇಳುವುದು;

ಪದವಿಂಗಡಣೆ:
ಅವರವರ +ಬತ್ತಳಿಕೆ +ಚಾಪವನ್
ಅವರ +ಶರವನು+ ಕಂಬು +ಖಡುಗವ
ಕವಚ +ಸೀಸಕ+ ಜೋಡುಗಳ +ಬಿರುದುಗಳ +ಟೆಕ್ಕೆಯವ
ವಿವಿಧ +ಶಸ್ತ್ರಾಸ್ತ್ರವನು +ಫಲುಗುಣ
ವಿವರಿಸಲು +ಬೆರಗಾಗಿ +ಸಾರಥಿ
ಇವನು +ತಾನ್+ಆರೆಂದು +ಮತ್ಸ್ಯನ+ಸೂನು ಬೆ+ಸಗೊಂಡ

ಅಚ್ಚರಿ:
(೧) ಆಯುಧಗಳ ಪರಿಚಯ – ಚಾಪ, ಶರ, ಕಂಬು, ಖಡುಗ, ಕವಚ, ಸೀಸಕ, ಟೆಕ್ಕೆ