ಪದ್ಯ ೩೦: ಉತ್ತರನೇಕೆ ಸಾರಥಿಯಾಗಲು ಒಪ್ಪಲಿಲ್ಲ?

ಎನ್ನವಂದಿಗ ರಾಜಪುತ್ರರಿ
ಗಿನ್ನು ಮೊಗಸಲು ಬಾರದಿದೆ ನೀ
ನೆನ್ನ ಸಾರಥಿ ಮಾಡಿಕೊಂಡೀ ಬಲವ ಜಯಿಸುವೆಯ
ಅನ್ನಿಯರ ಮನಗಾಂಬರಲ್ಲದೆ
ತನ್ನ ತಾ ಮನಗಾಂಬರೇ ಈ
ಗನ್ನಗತಕವ ನಾನು ಬಲ್ಲೆನು ಬಿಟ್ಟು ಕಳುಹೆಂದ (ವಿರಾಟ ಪರ್ವ, ೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ನನ್ನಂತಹ ರಾಜಪುತ್ರನಿಗೇ ಈ ಸೈನ್ಯವನ್ನು ಮುಖವೆತ್ತಿ ನೋಡಲಾಗುತ್ತಿಲ್ಲ, ಅದರಲ್ಲಿ ನೀನು ನನ್ನನ್ನು ಸಾರಥಿಯಾಗಿ ಮಾಡಿಕೊಂಡು ಯುದ್ಧವನ್ನು ಮಾಡಿ ಗೆಲ್ಲುವೆಯಾ? ಲೋಕದ ಜನ ಕಂಡವರಲ್ಲಿ ತಪ್ಪೆಣಿಸುತ್ತಾರೆ, ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವುದಿಲ್ಲ, ನಿನ್ನ ಮೋಸ ನನಗೆ ಗೊತ್ತು, ನನ್ನನ್ನು ಬಿಟ್ಟು ಬಿಡು ಎಂದು ಉತ್ತರನು ಕೇಳಿದನು.

ಅರ್ಥ:
ರಾಜಪುತ್ರ: ರಾಜಕುಮಾರ; ಮೊಗಸು: ತೊಡಗುವಿಕೆ; ಸಾರಥಿ: ಸೂತ; ಬಲ: ಸೈನ್ಯ; ಜಯಿಸು: ಗೆಲ್ಲು; ಅನ್ನಿಗ: ಅನ್ನ ಬೇರೆಯ; ಮನ: ಮನಸ್ಸು; ಕಾಂಬು: ನೋಡು; ಗನ್ನಗತಕ: ಮೋಸ, ವಂಚನೆ; ಬಲ್ಲೆ: ತಿಳಿದಿರುವೆ; ಬಿಟ್ಟು: ತೊರೆ; ಕಳುಹು: ಕಳಿಸು, ಬೀಳ್ಕೊಡು;

ಪದವಿಂಗಡಣೆ:
ಎನ್ನವಂದಿಗ +ರಾಜಪುತ್ರರಿಗ್
ಇನ್ನು +ಮೊಗಸಲು +ಬಾರದಿದೆ+ ನೀನ್
ಎನ್ನ +ಸಾರಥಿ+ ಮಾಡಿಕೊಂಡ್+ಈ+ ಬಲವ+ ಜಯಿಸುವೆಯ
ಅನ್ನಿಯರ +ಮನಗಾಂಬರಲ್ಲದೆ
ತನ್ನ +ತಾ +ಮನಗಾಂಬರೇ+ ಈ
ಗನ್ನಗತಕವ+ ನಾನು+ ಬಲ್ಲೆನು+ ಬಿಟ್ಟು +ಕಳುಹೆಂದ

ಅಚ್ಚರಿ:
(೧) ಮೋಸಕ್ಕೆ ಗನ್ನಗತಕ ಪದದ ಬಳಕೆ
(೨) ಉತ್ತರನ ನುಡಿ – ಅನ್ನಿಯರ ಮನಗಾಂಬರಲ್ಲದೆ ತನ್ನ ತಾ ಮನಗಾಂಬರೇ

ಪದ್ಯ ೨೯: ಉತ್ತರನು ಅರ್ಜುನನಿಗೆ ಏನು ಹೇಳಿದ?

ಕಾದುವೆನು ಮಾರೊಡ್ಡಿನಲಿ ನೀ
ಚೋದಿಸೆನ್ನಯ ರಥವನಕಟಾ
ವಾದವನು ನೆರೆಮಾಣು ಸಾರಥಿಯಾಗು ಬಾ ಎನಲು
ಆದಿಯಲಿ ನೀನಾವ ರಾಯರ
ಕಾದಿ ಗೆಲಿದೈ ಹುಲು ಬೃಹನ್ನಳೆ
ಯಾದ ನಿನಗೀ ಕದನ ನಾಟಕ ವಿದ್ಯೆಯಲ್ಲೆಂದ (ವಿರಾಟ ಪರ್ವ, ೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರನಿಗೆ ರಥವನ್ನು ನಡೆಸಲು ಹೇಳಿದ, ನಮಗೆದುರಾಗಿ ನಿಂತ ಈ ಸೈನ್ಯದೊಡನೆ ನಾನು ಯುದ್ಧ ಮಾಡುತ್ತೇನೆ, ವ್ಯರ್ಥ ವಾದವನ್ನು ಬಿಟ್ಟು, ನೀನು ಸಾರಥಿಯಾಗು ಎಂದು ಹೇಳಲು, ಆಶ್ಚರ್ಯಗೊಂಡ ಉತ್ತರನು, ಈ ಮುಂಚೆ ನೀನಾವ ರಾಜರನ್ನು ಕಾದಿ ಗೆದ್ದಿದೆ? ಬೃಹನ್ನಳೆ ಯಾದ ನೀನು ಯುದ್ಧವೆಂದರೆ ಏನೆಂದು ತಿಳಿದಿರುವೆ, ಇದೇನು ನಾಟಕ ವಿದ್ಯೆಯಲ್ಲ ಎಂದು ಎಚ್ಚರಿಕೆಯ ಮಾತನ್ನು ಹೇಳಿದನು.

ಅರ್ಥ:
ಕಾದು: ಹೋರಾಡು; ಚೋದಿಸು: ರಥವನ್ನು ನಡೆಯಿಸು; ಮಾರು: ಎದುರಿಸು; ಒಡ್ಡು: ಸೈನ್ಯ, ಪಡೆ; ರಥ: ಬಂಡಿ; ಅಕಟ: ಅಯ್ಯೋ; ವಾದ: ಮಾತು, ಸಂಭಾಷಣೆ; ನೆರೆ: ಗುಂಪು, ಸೇರು; ಮಾಣು: ನಿಲ್ಲಿಸು; ಆದಿ: ಮುಂಚೆ; ರಾಯ: ರಾಜ; ಕಾದು: ಹೋರಾಡು; ಗೆಲಿದೆ: ಜಯಿಸಿದೆ; ಹುಲು: ಕ್ಷುಲ್ಲಕ; ಕದನ: ಯುದ್ಧ; ನಾಟಕ: ನಟನೆ, ಅಭಿನಯ ಪ್ರಧಾನವಾದ ದೃಶ್ಯ ಪ್ರಬಂಧ, ರೂಪಕ; ವಿದ್ಯೆ: ಜ್ಞಾನ;

ಪದವಿಂಗಡಣೆ:
ಕಾದುವೆನು +ಮಾರೊಡ್ಡಿನಲಿ +ನೀ
ಚೋದಿಸೆನ್ನಯ +ರಥವನ್+ಅಕಟಾ
ವಾದವನು +ನೆರೆಮಾಣು +ಸಾರಥಿಯಾಗು +ಬಾ+ ಎನಲು
ಆದಿಯಲಿ +ನೀನಾವ +ರಾಯರ
ಕಾದಿ +ಗೆಲಿದೈ +ಹುಲು +ಬೃಹನ್ನಳೆ
ಯಾದ+ ನಿನಗೀ+ ಕದನ+ ನಾಟಕ +ವಿದ್ಯೆ+ಅಲ್ಲೆಂದ

ಅಚ್ಚರಿ:
(೧) ಅರ್ಜುನನಿಗೆ ಉತ್ತರನ ಎಚ್ಚರಿಕೆಯ ನುಡಿ – ಹುಲು ಬೃಹನ್ನಳೆಯಾದ ನಿನಗೀ ಕದನ ನಾಟಕ ವಿದ್ಯೆಯಲ್ಲೆಂದ

ಪದ್ಯ ೨೮: ಅರ್ಜುನನು ಉತ್ತರನನ್ನು ಎಲ್ಲಿಗೆ ಬರಲು ಹೇಳಿದನು?

ಪೊಡವಿಪತಿಗಳ ಬಸಿರಬಂದೀ
ಯೊಡಲ ಕಕ್ಕುಲಿತೆಯಲಿ ಕಾಳಗ
ದೆಡೆಗೆ ಬಾರದರಿಲ್ಲ ಭೂತ ಭವದ್ಭವಿಷ್ಯದಲಿ
ನುಡಿಯಲಹುದೇ ಬಂಜೆನುಡಿಯನು
ಸುಡುಸುಡೆಲವೋ ರಾಜಬಾಹಿರ
ನಡೆ ವರೂಥದ ಹೊರಗೆ ಕಾದಲು ಬೇಡ ಬಾಯೆಂದ (ವಿರಾಟ ಪರ್ವ, ೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ರಾಜನ ಬಸಿರಿನಲ್ಲಿ ಹುಟ್ಟಿ ಕ್ಷತ್ರಿಯ ಜಾತಿಯವನಾಗಿ ದೇಹವನ್ನುಳಿಸಿಕೊಳ್ಳಬೇಕೆಂಬ ಚಿಂತೆಯಿಂದ ಯುದ್ಧವೇ ಬೇಡವೆಂದು ಹೋಗುವವನು, ಹಿಂದೂ, ಮುಂದೂ, ಇಂದೂ ಇಲ್ಲ. ವ್ಯರ್ಥವಾದ ಮಾತನ್ನಾಡಬಹುದೇ? ಸುಡು ಆ ವ್ಯರ್ಥದ ಮಾತುಗಳನ್ನು ಎಲವೋ ರಾಜಕುಲಕ್ಕೆ ಹೊರಗಿನವನಾದವನೇ ರಥಕ್ಕೆ ಬಾ, ಯುದ್ಧವನ್ನು ಮಾಡಬೇಡೆಂದು ಹೇಳಿದನು.

ಅರ್ಥ:
ಪೊಡವಿ: ಭೂಮಿ; ಪತಿ: ಒಡೆಯ; ಪೊಡವಿಪತಿ: ರಾಜ; ಬಸಿರು: ಹೊಟ್ಟೆ; ಒಡಲು: ದೇಹ; ಕಕ್ಕುಲಿತೆ: ಚಿಂತೆ, ಪ್ರೀತಿ; ಕಾಳಗ: ಯುದ್ಧ; ಬಾರದು: ಬಂದು; ಭೂತ: ಹಿಂದಿನ; ಭವಿಷ್ಯ: ಮುಂದೆ ನಡೆಯುವ; ನುಡಿ: ಮಾತು; ಬಂಜೆ: ಗೊಡ್ಡು; ಸುಡು: ದಹಿಸು; ಬಾಹಿರ: ಹೊರಗಿನವ; ವರೂಥ: ತೇರು, ರಥ; ಹೊರಗೆ: ಬಾಹಿರ; ಕಾದು: ಹೋರಾಡು; ಬೇಡ: ಸಲ್ಲದು, ಕೂಡದು; ಬಾ: ಆಗಮಿಸು;

ಪದವಿಂಗಡಣೆ:
ಪೊಡವಿಪತಿಗಳ +ಬಸಿರಬಂದ್+ಈ
ಒಡಲ +ಕಕ್ಕುಲಿತೆಯಲಿ +ಕಾಳಗದ್
ಎಡೆಗೆ +ಬಾರದರಿಲ್ಲ+ ಭೂತ +ಭವದ್+ಭವಿಷ್ಯದಲಿ
ನುಡಿಯಲಹುದೇ +ಬಂಜೆ+ನುಡಿಯನು
ಸುಡುಸುಡ್+ಎಲವೋ +ರಾಜಬಾಹಿರ
ನಡೆ +ವರೂಥದ +ಹೊರಗೆ +ಕಾದಲು +ಬೇಡ +ಬಾಯೆಂದ

ಅಚ್ಚರಿ:
(೧) ಉತ್ತರನನ್ನು ಒಲಿಸುವ ಪರಿ – ಎಲವೋ ರಾಜಬಾಹಿರ ನಡೆ ವರೂಥದ ಹೊರಗೆ ಕಾದಲು ಬೇಡ ಬಾಯೆಂದ
(೨) ಪೊಡವಿಪತಿ, ರಾಜ – ಸಮನಾರ್ಥಕ ಪದಗಳು