ಪದ್ಯ ೨೩: ಧರ್ಮಜನು ಭೀಮನಿಗೆ ಏನು ಹೇಳಿದನು?

ಆತನಿಂಗಿತದನುವನಿಅರಿದು ಮ
ಹೀತಳಾಧಿಪ ಧರ್ಮಸುತನತಿ
ಕಾತರಿಸದಿರು ವಲಲ ಸೈರಿಸು ಸೈರಿಸಕಟೆನುತ
ಈ ತರುವ ಮುರಿಯದಿರು ಸುಜನ
ವ್ರಾತಕಾಶ್ರಯಊರಹೊರಗೆ ಮ
ಹಾತಿಶಯ ತರುವುಂಟು ನಿನ್ನಯ ಬಾಣಸಿನ ಮನೆಗೆ (ವಿರಾಟ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧರ್ಮಜನು ಭೀಮನ ಮನಸ್ಸಿನ ಭಾವನೆಯನ್ನರಿತು, ವಲಲ ದುಡುಕಬೇಡ, ತಾಳ್ಮೆಯಿಂದಿರು, ಆ ಮರವನ್ನು ಬೀಳಿಸಬೇಡ, ಊರಿನ ಸಜ್ಜನರು ಇದರಡಿ ಕುಳಿತಿರುತ್ತಾರೆ, ಊರ ಹೊರಗೆ ಒಣಗಿದ ಮರವಿದೆ ಅದನ್ನು ತರಿಸಿಕೋಮ್ಡು ಅಡುಗೆ ಮಾಡು ಎಂದನು.

ಅರ್ಥ:
ಇಂಗಿತ: ಭಾವನೆ; ಅನುವು: ರೀತಿ; ಅರಿ: ತಿಳಿ; ಮಹೀತಳಾಧಿಪ: ರಾಜ; ಮಹೀತಳ: ಭೂಮಿ; ಅಧಿಪ: ಒಡೆಯ; ಕಾತರ: ಕಳವಳ; ಸೈರಿಸು: ಸಮಾಧಾನ; ಅಕಟ: ಅಯ್ಯೋ; ತರು: ಮರ; ಮುರಿ: ಸೀಳು, ನಾಶಮಾಡು; ಸುಜನ: ಸಜ್ಜನ; ವ್ರಾತ: ಗುಂಪು; ಆಶ್ರಯ: ಆಸರೆ; ಊರು: ಪುರ; ಹೊರಗೆ: ಆಚೆ; ಮಹಾತಿಶಯ: ಅತಿ ದೊಡ್ಡ; ಬಾಣಸಿನ: ಅಡುಗೆ; ಮನೆ: ಆಲಯ;

ಪದವಿಂಗಡಣೆ:
ಆತನ್+ಇಂಗಿತದ್+ಅನುವನ್+ಅರಿದು +ಮ
ಹೀತಳಾಧಿಪ+ ಧರ್ಮಸುತನ್+ಅತಿ
ಕಾತರಿಸದಿರು +ವಲಲ +ಸೈರಿಸು +ಸೈರಿಸ್+ಅಕಟೆನುತ
ಈ +ತರುವ +ಮುರಿಯದಿರು +ಸುಜನ
ವ್ರಾತಕ್+ಆಶ್ರಯ+ ಊರ+ಹೊರಗೆ+ ಮ
ಹಾತಿಶಯ +ತರುವುಂಟು +ನಿನ್ನಯ +ಬಾಣಸಿನ +ಮನೆಗೆ

ಅಚ್ಚರಿ:
(೧) ರಾಜ ಎಂದು ಹೇಳುವ ಪರಿ – ಮಹೀತಳಾಧಿಪ

ಪದ್ಯ ೨೨: ಭೀಮನು ಏನೆಂದು ನಿಶ್ಚೈಸಿದನು?

ಒಳಗೆ ನಿಶ್ಚೈಸಿದನು ಮೊದಲಲಿ
ಹಿಳಿದು ಹಿಂಡುವೆನಿವಳ ಬಡಿದಾ
ಖಳನನಿವನೊಡಹುಟ್ಟಿದರನಿವನಾಪ್ತಪರಿಜನವ
ಬಳಿಕ ಪರಿಜನ ಸಹ ವಿರಾಟನ
ಕೊಲುವೆನರಿಯದ ಮುನ್ನ ಕೌರವ
ಕುಲವ ಸವರುವೆನೆಂದು ಕಿಡಿಕಿಡಿಯಾದನಾ ಭೀಮ (ವಿರಾಟ ಪರ್ವ, ೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಈ ಮರವನ್ನು ಕಿತ್ತು, ದ್ರೌಪದಿಯನ್ನು ಹೊಡೆದ ನೀಚನನ್ನು ಹೊಸಗಿ ಹಿಂಡಿ ಹಾಕಿ ಬಿಡುತ್ತೇನೆ, ಬಳಿಕ ಇವನ ಒಡ ಹುಟ್ಟಿದವರನ್ನು ಪರಿಜನರನ್ನು, ಆಪ್ತರನ್ನು ಸವರುತ್ತೇನೆ, ಬಳಿಕ ಪರಿಜನರೊಡನೆ ವಿರಾಟನನ್ನು ಕೊಲ್ಲುತ್ತೇನೆ, ಈ ಸಮಾಚಾರವು ಕೌರವರಿಗೆ ತಿಳಿಯುವ ಮೊದಲೇ ಕೌರವ ಕುಲವನ್ನು ನಾಶಮಾಡುತ್ತೇನೆ ಎಂದು ಭೀಮನು ಕಿಡಿಕಿಡಿಯಾದನು.

ಅರ್ಥ:
ನಿಶ್ಚೈಸು: ನಿರ್ಧರಿಸು; ಮೊದಲು: ಮುಂಚೆ; ಹಿಳಿ: ಹಿಸುಕಿ ರಸವನ್ನು ತೆಗೆ, ನಾಶಮಾಡು; ಹಿಂಡು: ಹಿಸುಕು, ತಿರುಚು; ಬಡಿ: ಹೊಡೆ; ಖಳ: ದುಷ್ಟ; ಒಡಹುಟ್ಟಿದ: ಜೊತೆಯಲ್ಲಿ ಜನಿಸಿದ; ಆಪ್ತ: ಹತ್ತಿರದ; ಪರಿಜನ: ಸುತ್ತಲಿನ ಜನ, ಬಂಧುಗಳು; ಬಳಿಕ: ನಂತರ; ಸಹ: ಜೊತೆ; ಕೊಲು: ಸಾಯಿಸು; ಅರಿ: ತಿಳಿ; ಮುನ್ನ: ಮುಂಚೆ; ಕುಲ: ವಂಶ; ಸವರು: ನಾಶಗೊಳಿಸು, ಧ್ವಂಸ ಮಾಡು; ಕಿಡಿಕಿಡಿ: ಕೋಪಗೊಂಡು;

ಪದವಿಂಗಡಣೆ:
ಒಳಗೆ +ನಿಶ್ಚೈಸಿದನು +ಮೊದಲಲಿ
ಹಿಳಿದು +ಹಿಂಡುವೆನ್+ಇವಳ +ಬಡಿದ್+ಆ
ಖಳನನ್+ಇವನ್+ಒಡಹುಟ್ಟಿದರನ್+ಇವನ್+ಆಪ್ತ+ಪರಿಜನವ
ಬಳಿಕ+ ಪರಿಜನ+ ಸಹ +ವಿರಾಟನ
ಕೊಲುವೆನ್+ಅರಿಯದ +ಮುನ್ನ +ಕೌರವ
ಕುಲವ +ಸವರುವೆನೆಂದು +ಕಿಡಿಕಿಡಿಯಾದನ್+ಆ+ ಭೀಮ

ಅಚ್ಚರಿ:
(೧) ಕೊಲು, ಸವರು, ಹಿಂಡು, ಹಿಳಿ – ನಾಶಮಾಡುವೆನೆಂದು ಹೇಳುವ ಪದಗಳು

ಪದ್ಯ ೨೧: ಭೀಮನು ಎಲ್ಲಿಂದ ನೋಡಿದನು?

ನೊಂದಳಕಟಾ ಸತಿಯೆನುತ ಮನ
ನೊಂದು ಮೋರೆಯ ಬಲಿದು ಖತಿಯಲಿ
ಕಂದಿದನು ಮೈ ಮರೆದು ರೋಷದೊಳವುಡನೊಡೆಯೊತ್ತಿ
ಮಂದಿಯರಿಯದವೋಲು ಚೇಷ್ಟೆಯೊ
ಳೊಂದಿ ಮೆಲ್ಲನೆ ಬಾಗಿ ನೋಡಿದ
ನಂದು ರಾಜಾಲಯದ ಮೂಮ್ದಣ ಮರನನಾ ಭೀಮ (ವಿರಾಟ ಪರ್ವ, ೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ನನ್ನ ಸತಿ ದ್ರೌಪದಿಯು ದುಃಖಪಟ್ಟಳೇ, ಎಂದು ಭೀಮನು ನೊಂದುಕೊಂಡನು, ಮುಖವನ್ನು ಗಂಟಿಟ್ಟು, ಕೋಪದಿಂದ ಕಳೆಗೆಟ್ಟು, ಪರವಶನಾಗಿ, ತುಟಿಯನ್ನು ಬಲವಾಗಿ ಕಚ್ಚಿ, ಭೀಮನು ಜನರು ನೋಡದಂತೆ ಸರಿದು ಹೋಗಿ ಅರಮನೆಯ ದ್ವಾರದಲ್ಲಿ ಮುಂದಿದ್ದ ದೊಡ್ಡ ಮರದಿಂದ ಬಾಗಿ ನೋಡಿದನು.

ಅರ್ಥ:
ನೊಂದು: ಗೋಳಿಡು, ದುಃಖಭರಿತ; ಸತಿ: ಹೆಂಡತಿ; ಮನ: ಮನಸ್ಸು; ಮೋರೆ: ಮುಖ; ಬಲಿ: ಗಟ್ಟಿ, ದೃಢ; ಖತಿ: ಕೋಪ; ಕಂದು: ಕಳಾಹೀನ; ಮೈಮರೆ: ಪರವಶನಾಗು; ರೋಷ: ಕೋಪ; ಅವುಡು: ಕೆಳತುಟಿ, ದವಡೆ; ಕಚ್ಚು: ಹಲ್ಲಿನಿಂದ ಬಿಗಿಯಾಗಿ ಹಿಡಿ; ಮಂದಿ: ಜನ; ಅರಿ: ತಿಳಿ; ಚೇಷ್ಟೆ: ವರ್ತನೆ, ಚಾಲನೆ; ಮೆಲ್ಲನೆ: ನಿಧಾನ; ಬಾಗಿ; ಬಗ್ಗು, ತಗ್ಗು; ನೋಡು: ವೀಕ್ಷಿಸು; ರಾಜಾಲಯ: ಅರಮನೆ; ಮುಂದಣ: ಮುಂದೆ, ಎದುರು; ಮರ: ತರು;

ಪದವಿಂಗಡಣೆ:
ನೊಂದಳ್+ಅಕಟಾ +ಸತಿ+ಎನುತ +ಮನ
ನೊಂದು +ಮೋರೆಯ+ ಬಲಿದು +ಖತಿಯಲಿ
ಕಂದಿದನು +ಮೈ ಮರೆದು+ ರೋಷದೊಳ್+ಅವುಡನೊಡೆಯೊತ್ತಿ
ಮಂದಿ+ಅರಿಯದವೋಲು +ಚೇಷ್ಟೆಯೊ
ಳೊಂದಿ +ಮೆಲ್ಲನೆ +ಬಾಗಿ +ನೋಡಿದನ್
ಅಂದು+ ರಾಜಾಲಯದ+ ಮುಂದಣ+ ಮರನನಾ+ ಭೀಮ

ಅಚ್ಚರಿ:
(೧) ಭೀಮನ ಕೋಪವನ್ನು ವರ್ಣಿಸುವ ಪರಿ – ಮನನೊಂದು ಮೋರೆಯ ಬಲಿದು ಖತಿಯಲಿ
ಕಂದಿದನು ಮೈ ಮರೆದು ರೋಷದೊಳವುಡನೊಡೆಯೊತ್ತಿ

ಪದ್ಯ ೨೦: ಅರ್ಜುನ, ಯಮಳರೇನು ಮಾಡಿದರು?

ಧೈರ್ಯವನು ನೆರೆ ಬಲಿದು ಮೇಲಣ
ಕಾರ್ಯಭಾಗವನರಿದು ನೃಪಜನ
ವರ್ಯ ನೋಡದೆ ನುಡಿಸದಿದ್ದನು ಧರ್ಮನಂದನನು
ಶೌರ್ಯಕವಸರವಲ್ಲ ನಮಗಿ
ನ್ನಾರ್ಯನಾಜ್ಞೆಯೆನುತ್ತ ಮಾಣ್ದಾ
ತುರ್ಯರಿದ್ದರು ಪಾರ್ಥ ಯಮಳರು ಬಲಿದ ದುಗುಡದಲಿ (ವಿರಾಟ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನ ಮನಸ್ಸನ್ನು ಧೈರ್ಯದಿಂದ ಗಟ್ಟಿ ಮಾಡಿಕೊಂಡು, ಮುಂದಿನ ಕೆಲಸದ ಮೇಲೆ ಗಮನಹರಿಸಿ, ದ್ರೌಪದಿಯನ್ನು ನೋಡಲಿಲ್ಲ, ಮಾತನಾಡಿಸಲಿಲ್ಲ, ಅರ್ಜುನ ನಕುಲ ಸಹದೇವರು ನಮಗೆ ಅಣ್ಣನ ಆಜ್ಞೆಯಾಗಿದೆ, ಶೌರ್ಯವನ್ನು ತೋರಿಸುವ ಸಮಯವಿದಲ್ಲ ಎಂದು ಚಿಂತಿಸಿ ದುಃಖಮಗ್ನರಾಗಿ ಕುಳಿತರು.

ಅರ್ಥ:
ಧೈರ್ಯ: ಎದೆಗಾರಿಕೆ, ಕೆಚ್ಚು, ದಿಟ್ಟತನ; ನೆರೆ: ಕೂಡು; ಬಲಿದು: ಗಟ್ಟಿಯಾಗು; ಮೇಲಣ: ಮುಂದಿನ; ಕಾರ್ಯ: ಕೆಲಸ; ಅರಿ: ತಿಳಿ; ನೃಪಜನ: ರಾಜ ಪರಿವಾರದ ಜನ; ವರ್ಯ: ಶ್ರೇಷ್ಠ; ನೋಡು: ವೀಕ್ಷಿಸು; ನುಡಿಸು: ಮಾತಾಡು; ಶೌರ್ಯ: ಸಾಹಸ, ಪರಾಕ್ರಮ; ಅವಸರ: ಬೇಗ; ಆರ್ಯ: ಹಿರಿಯ, ಶ್ರೇಷ್ಠ; ಮಾಣು: ನಿಲ್ಲಿಸು; ಧಾತು: ಶಕ್ತಿ, ವೀರ್ಯ; ಬಲಿದು: ಹೆಚ್ಚಾಗು; ದುಗುಡ: ದುಃಖ;

ಪದವಿಂಗಡಣೆ:
ಧೈರ್ಯವನು +ನೆರೆ +ಬಲಿದು +ಮೇಲಣ
ಕಾರ್ಯಭಾಗವನ್+ಅರಿದು +ನೃಪಜನ
ವರ್ಯ +ನೋಡದೆ +ನುಡಿಸದಿದ್ದನು +ಧರ್ಮನಂದನನು
ಶೌರ್ಯಕ್+ಅವಸರವಲ್ಲ+ ನಮಗಿನ್
ಆರ್ಯನಾಜ್ಞೆ+ಎನುತ್ತ +ಮಾಣ್
ಧಾತುರ್ಯರಿದ್ದರು +ಪಾರ್ಥ +ಯಮಳರು +ಬಲಿದ +ದುಗುಡದಲಿ

ಅಚ್ಚರಿ:
(೧) ಧಾತುರ್ಯ, ಜನವರ್ಯ, ಶೌರ್ಯ, ಧೈರ್ಯ, ಕಾರ್ಯ, ಆರ್ಯ – ಪ್ರಾಸ ಪದಗಳು

ಪದ್ಯ ೧೯: ದ್ರೌಪದಿ ಏಕೆ ಕೊರಗಿದಳು?

ಎಲೆ ವಿದೇಶಿಗ ಕಂಕಭಟ್ಟನೆ
ಹಲವು ಧರ್ಮವ ಬಲ್ಲೆ ಗಡ ನೃಪ
ತಿಲಕಗರುಹುವುದೇನು ಸನ್ಯಾಸಿಗಳಿಗುಚಿತವಿದು
ತಿಳಿ ವಿದೇಶಿಗರಿಗೆ ವಿದೇಶಿಗ
ರೊಲವು ಸಮನಿಸಬೇಕು ಸಭೆಯಲಿ
ಬಲವಿಹೀನರಿಗಾಪ್ತರಿಲ್ಲೆಂದಬಲೆಯೊರಲಿದಳು (ವಿರಾಟ ಪರ್ವ, ೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ದ್ರೌಪದಿಯು ಕಂಕಭಟ್ಟನ (ಯುಧಿಷ್ಠಿರ) ಕಡೆಗೆ ತಿರುಗಿ, ಎಲೇ ಪರದೇಶಿಯಾದ ಕಂಕಭಟ್ಟನೇ, ನೀನು ಧರ್ಮವನ್ನು ಸಮಗ್ರವಾಗಿ ತಿಳಿದಿರುವೆಯಲ್ಲವೇ, ರಾಜನಿಗೆ ನೀನು ಹೇಳಬೇಕಾಗಿತ್ತು, ಸನ್ಯಾಸಿಯಾದ ನೀನು ಉಚಿತವಾದುದನ್ನು ಹೇಳಬೇಕು, ತಿಳಿದುಕೋ ನಾನು ಪರದೇಶದವಳು, ಪರದೇಶಿಯಾದ ನೀನು ನನ್ನ ಪರವಾಗಿ ಹೇಳಬೇಕಾಗಿತ್ತು, ಈ ರಾಜಸಭೆಯಲ್ಲಿ ದುರ್ಬಲರಿಗೆ ಬೆಮ್ಬಲವಾಗುವವರು ಯಾರೂ ಇಲ್ಲ ಎಮ್ದು ದುಃಖಿಸಿದಳು.

ಅರ್ಥ:
ವಿದೇಶಿ: ಪರದೇಶಿ; ಹಲವು: ಬಹಳ; ಧರ್ಮ: ನಿಯಮ, ಆಚಾರ; ಬಲ್ಲೆ: ತಿಳಿದಿರುವೆ; ಗಡ: ಅಲ್ಲವೆ; ನೃಪ: ರಾಜ; ತಿಲಕ: ಶ್ರೇಷ್ಠ; ಅರುಹು: ತಿಳಿಸು, ಹೇಳು; ಸನ್ಯಾಸಿ: ಋಷಿ, ಯೋಗಿ; ಉಚಿತ: ಸರಿಯಾದ; ತಿಳಿ: ಅರಿ; ಒಲವು: ಪ್ರೀತಿ; ಸಮನಿಸು:ಘಟಿಸು, ದೊರಕು; ಸಭೆ: ದರ್ಬಾರು; ಬಲವಿಹೀನ: ಶಕ್ತಿಯಿಲ್ಲದ; ಆಪ್ತ: ಹತ್ತಿರದವ; ಅಬಲೆ: ಸ್ತ್ರೀ; ಒರಲು: ಗೋಳಿಡು;

ಪದವಿಂಗಡಣೆ:
ಎಲೆ +ವಿದೇಶಿಗ+ ಕಂಕಭಟ್ಟನೆ
ಹಲವು +ಧರ್ಮವ +ಬಲ್ಲೆ +ಗಡ +ನೃಪ
ತಿಲಕಗ್+ಅರುಹುವುದೇನು +ಸನ್ಯಾಸಿಗಳಿಗ್+ಉಚಿತವಿದು
ತಿಳಿ +ವಿದೇಶಿಗರಿಗೆ+ ವಿದೇಶಿಗರ್
ಒಲವು +ಸಮನಿಸಬೇಕು+ ಸಭೆಯಲಿ
ಬಲವಿಹೀನರಿಗ್+ಆಪ್ತರ್+ಇಲ್ಲೆಂದ್+ಅಬಲೆ+ಒರಲಿದಳು

ಅಚ್ಚರಿ:
(೧) ವಿಚಾರವನ್ನು ಹೇಳುವ ಪರಿ – ತಿಳಿ ವಿದೇಶಿಗರಿಗೆ ವಿದೇಶಿಗರೊಲವು ಸಮನಿಸಬೇಕು

ಪದ್ಯ ೧೮: ದ್ರೌಪದಿಯೇಕೆ ಗೋಳಿಟ್ಟಳು?

ಶಿವಶಿವಾ ಪಾಪಿಗಳು ಪತಿಯಾ
ದವರ ತಾಗಲಿ ಸುಯ್ಲಕಟ ನಾ
ಲುವರ ನಡುವಣ ಹಾವು ಸಾಯದು ನಿರಪರಾಧಿಯನು
ಅವಗಡಿಸಿದನು ಖಳನು ಧರ್ಮದ
ವಿವರ ಸುದ್ದಿಯನಾಡದೀ ಜನ
ನಿವಹ ಘೋರಾರಣ್ಯವಾಯ್ತೆಂದೊರಲಿದಳು ತರಳೆ (ವಿರಾಟ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಿವ ಶಿವಾ ನಾನು ಬಿಟ್ಟ ನಿಟ್ಟುಸಿರು ಪಾಪಿಗಳಾದ ನನ್ನ ಪತಿಗಳಿಗೆ ಮುಟ್ಟಲಿ, ನಾಲ್ಕು ಜನ ನಡುವಿನ ಹಾವು ಸಾಯುವುದಿಲ್ಲ, ನಿರಪರಾಧಿಯಾದ ನನ್ನನ್ನು ಈ ದುಷ್ಟನು ಬದಿದನು. ಅದನ್ನು ತಡೆಯುವ ಒಂದೂ ಮಾತಾಡದ ಈ ಜನರ ಗುಂಪಿನ ತಾಣ ಭಯಂಕರವಾದ ಕಾಡು, ಧರ್ಮವನ್ನರಿಯದ ಜಂಗುಳಿಯಿದು ಎಂದು ದ್ರೌಪದಿಯು ಗೋಳಿಟ್ಟಳು.

ಅರ್ಥ:
ಪಾಪಿ: ದುಷ್ಟ; ಪತಿ: ಗಂಡ; ತಾಗು: ಮುಟ್ಟು; ಸುಯ್ಲು: ನಿಟ್ಟುಸಿರು; ಅಕಟ: ಅಯ್ಯೋ; ಹಾವು: ಉರಗ; ಸಾವು: ಮರಣ; ನಿರಪರಾಧಿ: ಅಪರಾಧ ಮಾಡದಿರುವ; ಅವಗಡ: ಅಸಡ್ಡೆ; ಖಳ: ದುಷ್ಟ; ಧರ್ಮ: ಧಾರಣೆ ಮಾಡಿದುದು; ವಿವರ: ವಿಚಾರ; ಸುದ್ದಿ: ವಾರ್ತೆ, ಸಮಾಆರ; ನಿವಹ: ಗುಂಪು; ಘೋರ: ಉಗ್ರ, ಭಯಂಕರ; ಅರಣ್ಯ: ಕಾಡು; ಒರಳು: ಗೋಳಿಡು; ತರಳೆ: ಹೆಣ್ಣು;

ಪದವಿಂಗಡಣೆ:
ಶಿವಶಿವಾ +ಪಾಪಿಗಳು +ಪತಿಯಾ
ದವರ +ತಾಗಲಿ +ಸುಯ್ಲ್+ಅಕಟ+ ನಾ
ಲುವರ +ನಡುವಣ+ ಹಾವು +ಸಾಯದು +ನಿರಪರಾಧಿಯನು
ಅವಗಡಿಸಿದನು +ಖಳನು +ಧರ್ಮದ
ವಿವರ+ ಸುದ್ದಿಯನ್+ಆಡದ್+ಈ+ ಜನ
ನಿವಹ+ ಘೋರ+ಅರಣ್ಯವಾಯ್ತೆಂದ್+ಒರಲಿದಳು+ ತರಳೆ

ಅಚ್ಚರಿ:
(೧) ವಿಚಾರವನ್ನು ಹೇಳುವ ಪರಿ – ನಾಲುವರ ನಡುವಣ ಹಾವು ಸಾಯದು