ಪದ್ಯ ೨೯: ಗಗನವೇಕೆ ಕಾಣದಾಯಿತು?

ಬಿಗಿದ ಬೀಯಗ ಬದ್ದರದ ಬಂ
ಡಿಗಳು ರಾಣಿವಾಸದಂದಣ
ತೆಗೆದುವೊರಲುವ ಕಂಚುಕಿಗಳುಗ್ಗಡದ ರಭಸದಲಿ
ಗಗನವಡಗಿತು ಪಲ್ಲವದ ಸ
ತ್ತಿಗೆಯ ಸಾಲಿನ ಝಲ್ಲರಿಯ ಜಾ
ಡಿಗಳಲಾಡುವ ಚಮರ ಸೀಗುರಿಗಳ ಪತಾಕೆಯಲಿ (ಅರಣ್ಯ ಪರ್ವ, ೧೮ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬೀಗ ಹಾಕಿ ಬಿಗಿ ಮಾಡಿದ ರಥಗಳು ಮತ್ತು ಪಲ್ಲಕ್ಕಿಗಳಲ್ಲಿ ರಾಣಿವಾಸದವರು ಹೊರಡಲು, ಮುಂದೆ ಕಂಚುಕಿಗಳು ದಾರಿ ಬಿಡಿಸಲು ಕೂಗುತ್ತಿದ್ದರು. ಚಾಮರ, ಕೊಡೆ, ಜಾಲರಿಗಳ ಆಟದಿಂದ ಆಕಾಶವು ಕಾಣದಾಯಿತು.

ಅರ್ಥ:
ಬಿಗಿ: ಭದ್ರವಾಗಿ; ಬೀಯಗ: ಬಂಧು; ಬದ್ದರ: ಮಂಗಳಕರವಾದುದು; ಬಂಡಿ: ರಥ; ರಾಣಿ: ಅರಸಿ; ಅಂದಣ: ಚೆಲುವು; ತೆಗೆ: ಹೊರತರು; ಒರಲು: ಅರಚು, ಕೂಗಿಕೊಳ್ಳು; ಕಂಚುಕಿ: ಅಂತಃಪುರದ ಅಧಿಕಾರಿ; ಉಗ್ಗಡ: ಶ್ರೇಷ್ಠತೆ; ರಭಸ: ವೇಗ; ಗಗನ: ಆಗಸ; ಅಡಗು: ಮುಚ್ಚು; ಪಲ್ಲವ: ಮೊಳಕೆ, ಚಿಗುರು; ಸತ್ತಿಗೆ: ಕೊಡೆ, ಛತ್ರಿ; ಸಾಲು: ಪಂಕ್ತಿ, ಶ್ರೇಣಿ; ಝಲ್ಲರಿ: ಕುಚ್ಚು; ಜಾಡಿ: ಸಂದಣಿ, ದಟ್ಟಣೆ; ಆಡು: ಕ್ರೀಡಿಸು; ಸೀಗುರಿ: ಚಾಮರ; ಪತಾಕೆ: ಬಾವುಟ;

ಪದವಿಂಗಡಣೆ:
ಬಿಗಿದ +ಬೀಯಗ +ಬದ್ದರದ+ ಬಂ
ಡಿಗಳು +ರಾಣಿವಾಸದ್+ಅಂದಣ
ತೆಗೆದುವ್+ಒರಲುವ+ ಕಂಚುಕಿಗಳ್+ಉಗ್ಗಡದ +ರಭಸದಲಿ
ಗಗನವ್+ಅಡಗಿತು +ಪಲ್ಲವದ+ ಸ
ತ್ತಿಗೆಯ +ಸಾಲಿನ +ಝಲ್ಲರಿಯ +ಜಾ
ಡಿಗಳಲ್+ಆಡುವ +ಚಮರ +ಸೀಗುರಿಗಳ +ಪತಾಕೆಯಲಿ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಿಗಿದ ಬೀಯಗ ಬದ್ದರದ ಬಂಡಿಗಳು

ಪದ್ಯ ೨೮: ಎಷ್ಟು ಜನ ಸ್ತ್ರೀಯರು ಹೊರಟರು?

ಕೇರಿಯಲಿ ಸಾರಿದರು ಕೊಟ್ಟರು
ವಾರಕವನಬಲಾಜನಕೆ ಭಂ
ಡಾರ ಸವೆದುದು ಗಣಿಕೆಯರಿಗಾಭರಣದಾನದಲಿ
ಸಾರಪರಿಮಳ ವಸ್ತುಗಲ ಬಲು
ಭಾರಣೆಯ ಪೆಟ್ಟಿಗೆಗಳೊಟ್ಟಿತು
ತೇರುಗಳ ಮೇಲೊದಗಿತಕ್ಷೋಹಿಣಿಯ ರಾಣಿಯರು (ಅರಣ್ಯ ಪರ್ವ, ೧೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ಘೋಷಯಾತ್ರೆಯ ವಿಷಯವನ್ನು ಬೀದಿಗಳಲ್ಲಿ ಸಾರಿದರು. ಸ್ತ್ರೀಯರಿಗೆ ಬಳುವಳಿ ಕೊಟ್ಟರು. ಗಣಿಕೆಯರಿಗೆ ಆಭರಣಗಳನ್ನು ಕೊಟ್ಟುದರಿಂದ ರಾಜನ ಭಂಡಾರವು ಸವೆದು ಹೋಯಿತು. ಪರಿಮಳ ದ್ರವ್ಯಗಳ ಪೆಟ್ಟಿಗೆಗಳನ್ನು ರಾಶಿ ರಾಶಿ ಸೇರಿಸಿದರು. ತೇರುಗಳ ಮೇಲೆ ಅಕ್ಷೋಹಿಣೀ ಸಂಖ್ಯೆಯಲ್ಲಿ ರಾಣಿಯರು ಹೊರಟರು.

ಅರ್ಥ:
ಕೇರಿ: ಮನೆಸಾಲುಗಳ ನಡುವಿನ ಹಾದಿ, ಬೀದಿ, ಓಣಿ; ಸಾರು: ಹರಡು; ಕೊಟ್ಟು: ನೀಡು; ವಾರಕ: ಉಡುಗೊರೆ; ಅಬಲಾ: ನಾರಿ; ಭಂಡಾರ: ಬೊಕ್ಕಸ, ಖಜಾನೆ; ಸವೆದು: ಕಡಿಮೆಯಾಗು; ಗಣಿಕೆ: ವೇಶ್ಯೆ; ಆಭರಣ: ಒಡವೆ; ದಾನ: ಚತುರೋಪಾಯಗಳಲ್ಲಿ ಒಂದು; ಸಾರ: ಶ್ರೇಷ್ಠವಾದ; ಪರಿಮಳ: ಸುಗಂಧ; ವಸ್ತು: ಸಾಮಗ್ರಿ; ಬಲು: ತುಂಬ; ಭಾರಣೆ: ಮಹಿಮೆ, ಗೌರವ; ಪೆಟ್ಟಿಗೆ: ಡಬ್ಬ; ಒಟ್ಟು: ರಾಶಿ, ಗುಂಪು; ತೇರು: ರಥ; ಮೇಲೆ: ಅಗ್ರಭಾಗ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ರಾಣಿ: ಸ್ತ್ರೀ, ಅರಸಿ;

ಪದವಿಂಗಡಣೆ:
ಕೇರಿಯಲಿ +ಸಾರಿದರು +ಕೊಟ್ಟರು
ವಾರಕವನ್+ಅಬಲಾ+ಜನಕೆ+ ಭಂ
ಡಾರ +ಸವೆದುದು +ಗಣಿಕೆಯರಿಗ್+ಆಭರಣ+ದಾನದಲಿ
ಸಾರ+ಪರಿಮಳ +ವಸ್ತುಗಳ+ ಬಲು
ಭಾರಣೆಯ+ ಪೆಟ್ಟಿಗೆಗಳ್+ಒಟ್ಟಿತು
ತೇರುಗಳ +ಮೇಲ್+ಒದಗಿತ್+ಅಕ್ಷೋಹಿಣಿಯ+ ರಾಣಿಯರು

ಅಚ್ಚರಿ:
(೧) ಬಹಳ ಸ್ತ್ರೀಯರು ಹೊರಟರು ಎಂದು ಹೇಳಲು – ಅಕ್ಷೋಹಿಣಿ ಪದದ ಬಳಕೆ

ಪದ್ಯ ೨೭: ದುರ್ಯೋಧನನ ಗರ್ವದ ಉತ್ತರವು ಹೇಗಿತ್ತು?

ಅದರಲ್ಲಿ ಶುಭಾಶುಭದ ಫಲ
ಬೀದಿವರಿಸುವುದೈಸಲೇ ನಿಮ
ಗೀ ದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ
ಆದುದಾಗಲಿ ಹೋಗಿಯೆನೆ ದು
ರ್ಭೇದ ಗರ್ವ ಗ್ರಂಥಿಕಲುಷ ವಿ
ನೋದಶೀಲರು ಭುಜವ ಹೊಯ್ದರು ನೋಡಬಹುದೆನುತೆ (ಅರಣ್ಯ ಪರ್ವ, ೧೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ದುರ್ಯೋಧನನ ಮೊಂಡತನದ ಉತ್ತರಕ್ಕೆ ಭೀಷ್ಮರು, ನೀವು ಮಾಡಿದ ಶುಭ ಮತ್ತು ಅಶುಭ ಕರ್ಮಗಳ ಫಲವು ನಿಮ್ಮನ್ನು ಅಕಾರ್ಯಕ್ಕೆ ಎಳೆದೊಯ್ಯುತ್ತದೆ, ಬೇಡವೆಂದರೂ ಹೋಗಿಯೇ ತೀರ್ವೆವೆಂಬ ಈ ದುರಾಗ್ರಹ ನಿಮಗೇಕೆ? ನಮಗೆ ತಿಳಿಯದು, ಆದದ್ದಾಗಲಿ ನೀವು ಹೋಗಿರಿ ಎಂದು ಹೇಳಲು, ದುರ್ಯೋಧನನು, ಪರಿಹರಿಸಲಾರದ ಗರ್ವದ ಗಂಟಿನ ಕೊಳೆಯಲ್ಲಿ ವಿನೋದವನ್ನು ಕಾಣುವ ಕೌರವನೂ ಪರಿವರದವರೂ ತೋಳುಕಟ್ಟಿ ನೋಡಬಹುದು ಎಂದು ಸಂತಸಪಟ್ಟರು.

ಅರ್ಥ:
ಶುಭ: ಮಂಗಳ; ಅಶುಭ: ಮಂಗಳಕರವಲ್ಲದ; ಫಲ: ಫಲಿತಾಂಶ; ಬೀದಿ: ಮಾರ್ಗ, ಹರಹು; ಐಸಲೇ: ಅಲ್ಲವೇ; ದುರಾಗ್ರಹ: ಹಟಮಾರಿತನ, ಮೊಂಡ; ಕಾಂಬು: ನೋಡು; ಅಗ್ರ: ಮುಂದೆ; ಹೋಗು: ತೆರಳು; ಭೇದ: ಬಿರುಕು, ಛಿದ್ರ; ಗರ್ವ: ಅಹಂಕಾರ; ಗ್ರಂಥಿ: ಕಟ್ಟು, ಬಂಧ; ಕಲುಷ: ಕಳಂಕ, ಸಿಟ್ಟಿಗೆದ್ದ; ವಿನೋದ: ಸಂತಸ; ಶೀಲ: ಗುಣ; ಭುಜ: ಬಾಹು; ಹೊಯ್ದು: ಹೊಡೆದು; ನೋಡು: ವೀಕ್ಷಿಸು;

ಪದವಿಂಗಡಣೆ:
ಅದರಲ್ಲಿ +ಶುಭ+ಅಶುಭದ +ಫಲ
ಬೀದಿವರಿಸುವುದ್+ಐಸಲೇ +ನಿಮಗ್
ಈ+ ದುರಾಗ್ರಹವೇಕೆ+ ಕಾಂಬಿರಿ+ ಫಲವನ್+ಅಗ್ರದಲಿ
ಆದುದಾಗಲಿ +ಹೋಗಿಯೆನೆ +ದು
ರ್ಭೇದ +ಗರ್ವ +ಗ್ರಂಥಿ+ಕಲುಷ+ ವಿ
ನೋದ+ಶೀಲರು +ಭುಜವ +ಹೊಯ್ದರು +ನೋಡಬಹುದೆನುತೆ

ಅಚ್ಚರಿ:
(೧) ಆಡುವ ಪದದ ಬಳಕೆ – ಆದುದಾಗಲಿ
(೨) ಕೌರವರನ್ನು ಬಣ್ಣಿಸುವ ಪರಿ – ದುರ್ಭೇದ ಗರ್ವ ಗ್ರಂಥಿಕಲುಷ ವಿನೋದಶೀಲರು ಭುಜವ ಹೊಯ್ದರು

ಪದ್ಯ ೨೬: ದುರ್ಯೋಧನ ಭೀಷ್ಮರ ಮಾತಿಗೆ ಹೇಗೆ ಉತ್ತರಿಸಿದನು?

ಸಾರಿದೆವು ನಿಮ್ಮೊಡನೆ ಬಾರೆವು
ದೂರಲಾಗದು ನಮ್ಮನಿನಿಬರ
ಮೀರಿದೊಡೆ ರಣಭಂಗ ತಪ್ಪನು ಹೋಗಬೇಡೆನಲು
ದೂರತಾರೆವು ನಿಮಗೆ ನಾವ್ ಕೈ
ಮೀರಿ ನಡೆಯೆವು ಕಾರ್ಯಗತಿಯಲಿ
ಜಾರಿ ಜಡಿತೆಯ ಮಾಡೆವೆಂದನು ಕೌರವರ ರಾಯ (ಅರಣ್ಯ ಪರ್ವ, ೧೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೀಷ್ಮರು ಘೋಷಿಸಿದರು, ನಾವು ನಿಮ್ಮೊಡನೆ ಬರುವುದಿಲ್ಲ. ನೀವು ನಮ್ಮ ಜೊತೆ ಬಿಟ್ಟು ಹೊರಟೆವಾದರೆ ನಮ್ಮನ್ನು ನೀವು ತೆಗಳಬೇಡಿರಿ, ನಮ್ಮ ಮಾತನ್ನು ಮೀರಿದರೆ ಯುದ್ದದಲ್ಲಿ ಸೋಲು ಮತ್ತು ಅಪಮಾನ ನಿಶ್ಚಿತ, ನೀವು ಘೋಷಯಾತ್ರೆಗೆ ಹೋಗಬೇಡಿರಿ ಎಂದು ಭೀಷ್ಮರು ಹೇಳಲು, ದುರ್ಯೋಧನನು ಇದಕ್ಕೆ ಉತ್ತರಿಸುತ್ತಾ, ನಾವು ನಿಮ್ಮನ್ನು ದೂರುವುದಿಲ್ಲ, ಮೀರಿ ವರ್ತಿಸುವುದಿಲ್ಲ, ನಮ್ಮ ಕರ್ತವ್ಯವನ್ನು ಬಿಟ್ಟು ಯುದ್ಧಕ್ಕೆ ತೊಡಗುವುದಿಲ್ಲ ವೆಂದು ಹೇಳಿದನು.

ಅರ್ಥ:
ಸಾರು: ಘೋಷಿಸು; ಬಾರೆವು: ಬರುವುದಿಲ್ಲ; ದೂರು: ಆರೋಪ ಮಾಡು; ಇನಿಬರ: ಇಷ್ಟು ಜನ; ಮೀರು: ಉಲ್ಲಂಘಿಸು, ದಾಟು; ರಣ: ಯುದ್ಧ; ಭಂಗ: ನಾಶ, ಹಾಳು; ತಪ್ಪು:ನೀತಿಬಿಟ್ಟ ನಡೆ, ಸುಳ್ಳಾಗು; ಹೋಗು: ತೆರಳು; ದೂರ: ಅಂತರ; ನಡೆ: ಆಚರಣೆ; ಕಾರ್ಯ: ಕೆಲಸ; ಗತಿ: ವೇಗ; ಜಾರು: ಕಳಚಿಕೊಳ್ಳು; ಜಡಿ: ಗದರಿಸು; ರಾಯ: ರಾಜ;

ಪದವಿಂಗಡಣೆ:
ಸಾರಿದೆವು +ನಿಮ್ಮೊಡನೆ +ಬಾರೆವು
ದೂರಲಾಗದು +ನಮ್ಮನ್+ಇನಿಬರ
ಮೀರಿದೊಡೆ +ರಣಭಂಗ +ತಪ್ಪನು +ಹೋಗಬೇಡೆನಲು
ದೂರತಾರೆವು+ ನಿಮಗೆ+ ನಾವ್+ ಕೈ
ಮೀರಿ +ನಡೆಯೆವು+ ಕಾರ್ಯಗತಿಯಲಿ
ಜಾರಿ +ಜಡಿತೆಯ+ ಮಾಡೆವೆಂದನು+ ಕೌರವರ+ ರಾಯ

ಅಚ್ಚರಿ:
(೧) ದೂರ, ಮೀರಿ – ೨,೪;೩,೫ ಸಾಲಿನ ಮೊದಲ ಪದ
(೨) ಸಾರಿ, ಜಾರಿ – ಪ್ರಾಸ ಪದಗಳು

ಪದ್ಯ ೨೫: ಭೀಷ್ಮರು ಯಾವ ಅಭಿಪ್ರಾಯವನ್ನು ಹೇಳಿದರು?

ಅವಗಡೆಯನಾ ಭೀಮ ನೀವೆಂ
ಬವರು ನಿಸ್ಸೀಮರು ಚತುರ್ಬಲ
ನಿವಹ ನಿಲ್ಲದು ತುಡುಕುವುದು ತುಳಿವುದು ತಪೋವನವ
ವಿವಿಧ ಋಷಿಗಳನೇಡಿಸುವರೀ
ಯುವತಿಯರು ಕೈಕಾಲು ಮೆಟ್ಟಿನ
ಬವರ ಗಂಟಕ್ಕುವುದು ಲೇಸಲ್ಲೆಂದನಾ ಭೀಷ್ಮ (ಅರಣ್ಯ ಪರ್ವ, ೧೮ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಷ್ಮರು ತಮ್ಮ ಅಭಿಪ್ರಾಯವನ್ನು ಹೇಳುತ್ತಾ, ಭೀಮನು ಮಹಾ ಸಾಹಸಿ, ನೀವೋ ಎಲ್ಲೆ ಕಟ್ಟಿನಲ್ಲಿ ಇರುವವರಲ್ಲ. ಚತುರಂಗ ಸೈನ್ಯವು ತಪೋವನಗಳನ್ನು ತುಳಿದು ಹಾಕುತ್ತದೆ. ನಿಮ್ಮ ಪರಿವಾರದ ಹೆಂಗಳೆಯರು ಋಷಿಗಳನ್ನು ಅಪಹಾಸ್ಯ ಮಾಡುತ್ತಾರೆ. ಕೈ ಕೈ ಜೋಡಿಸಿ ಯುದ್ಧವು ಸಂಭವಿಸುತ್ತದೆ, ಅದು ಒಳಿತಲ್ಲ ಎಂದು ಭೀಷ್ಮರು ಹೇಳಿದರು.

ಅರ್ಥ:
ಅವಗಡ: ಅಸಡ್ಡೆ; ನಿಸ್ಸೀಮ: ಪರಾಕ್ರಮಿ; ನಿವಹ: ಗುಂಪು; ನಿಲ್ಲು: ತಡೆ; ತುಡುಕು: ಸೆಣಸು; ತುಳಿ: ಮೆಟ್ಟು; ತಪೋವನ: ತಪ್ಪಸ್ಸಿಗಾಗಿ ಮೀಸಲಿಟ್ಟ ಅರಣ್ಯ; ವಿವಿಧ: ಹಲವಾರು; ಋಷಿ: ಮುನಿ; ಏಡಿಸು: ಅವಹೇಳನ ಮಾಡು; ಯುವತಿ: ಹೆಣ್ಣು; ಮೆಟ್ಟು: ತುಳಿತ; ಬವರ: ಕಾಳಗ, ಯುದ್ಧ; ಗಂಟಿಕ್ಕು: ಕಟ್ಟು, ಸಮಸ್ಯೆ; ಲೇಸು: ಒಳಿತು;

ಪದವಿಂಗಡಣೆ:
ಅವಗಡೆಯನ್+ಆ+ ಭೀಮ+ ನೀವೆಂಬ್
ಅವರು +ನಿಸ್ಸೀಮರು +ಚತುರ್ಬಲ
ನಿವಹ+ ನಿಲ್ಲದು+ ತುಡುಕುವುದು+ ತುಳಿವುದು +ತಪೋವನವ
ವಿವಿಧ +ಋಷಿಗಳನ್+ಏಡಿಸುವರ್+ಈ
ಯುವತಿಯರು +ಕೈಕಾಲು +ಮೆಟ್ಟಿನ
ಬವರ+ ಗಂಟಕ್ಕುವುದು +ಲೇಸಲ್ಲೆಂದನಾ +ಭೀಷ್ಮ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತುಡುಕುವುದು ತುಳಿವುದು ತಪೋವನವ