ಪದ್ಯ ೮: ಖಳಶಿರೋಮಣಿಗಳ ವರ್ತನೆ ಹೇಗಿತ್ತು?

ಅಳಲುವೀ ಧೃತರಾಷ್ಟ್ರನುರು ಕಳ
ಕಳವ ಕೇಳಿದನು ಕರ್ಣ ಶಕುನಿಗ
ಳುಲಿದು ತಂಬುಲ ಸೊಸೆ ನಕ್ಕರು ಹೊಯ್ದು ಕರತಳವ
ಖಳಶಿರೋಮಣಿಗಳು ಮಹೀಶನ
ನಿಳಯ ಕೈತಂದರು ಸುಲೋಚನ
ಜಲವ ಸೆರಗಿನೊಳೊರಸಿ ನುಡಿದರು ಖೇದವೇಕೆನುತ (ಅರಣ್ಯ ಪರ್ವ, ೧೮ ಸಂಧಿ, ೮ ಪದ್ಯ)

ತಾತ್ಪರ್ಯ:
ಧೃತರಾಷ್ಟನ ಅಳಲಿನ ವಿಷಯವನ್ನು ಕೇಳಿ, ಖಳಶಿರೋಮಣಿಗಳಾದ ಕರ್ಣ, ಶಕುನಿಗಳು ಕೈತಟ್ಟಿ ತಂಬುಲವ ಹೊರಹಾಕುವಂತೆ ಜೋರಾಗಿ ನಕ್ಕರು. ನಂತರ, ಧೃತರಾಷ್ಟನ ಮನೆಗೆ ಹೋಗಿ ಅವನ ಕಣ್ಣಿರನ್ನು ಅವರ ಸೆರಗಿನಲ್ಲಿ ಒರಸಿ ದುಃಖವೇಕೆ ಎಂದು ಕೇಳಿದರು.

ಅರ್ಥ:
ಅಳಲು: ಶೋಕ, ದುಃಖಿಸು; ಉರು: ಹೆಚ್ಚು; ಕಳಕಳ: ವ್ಯಥೆ; ಕೇಳು: ಆಲಿಸು; ಉಲಿ: ಕೂಗು; ತಂಬುಲ: ಅಗಿದು ಉಗುಳುವ ಕವಳ – ತಾಂಬೂಲ; ಸೂಸು: ಎರಚುವಿಕೆ; ನಗು: ನಲಿ, ಸಂತೋಷ; ಹೊಯ್ದು: ಹೊಡೆ; ಕರತಳ: ಕೈ; ಖಳಶಿರೋಮಣಿ: ದುಷ್ಟರಲ್ಲಿ ಅಗ್ರಮಾನ್ಯ; ಮಹೀಶ; ರಾಜ; ನಿಳಯ: ಮನೆ; ಐತಂದರು: ಆಗಮಿಸು; ಸುಲೋಚನ: ಕಣ್ಣು; ಜಲ: ನೀರು; ಸೆರಗು: ಬಟ್ಟೆಯ ತುದಿ; ಒರಸು: ಸಾರಿಸು; ನುಡಿ: ಮಾತಾಡು; ಖೇದ: ದುಃಖ;

ಪದವಿಂಗಡಣೆ:
ಅಳಲುವ್+ಈ+ ಧೃತರಾಷ್ಟ್ರನ್+ಉರು +ಕಳ
ಕಳವ+ ಕೇಳಿದನು +ಕರ್ಣ +ಶಕುನಿಗಳ್
ಉಲಿದು +ತಂಬುಲ +ಸೊಸೆ +ನಕ್ಕರು +ಹೊಯ್ದು +ಕರತಳವ
ಖಳಶಿರೋಮಣಿಗಳು+ ಮಹೀಶನ
ನಿಳಯಕ್ +ಐತಂದರು +ಸುಲೋಚನ
ಜಲವ +ಸೆರಗಿನೊಳ್+ಒರಸಿ +ನುಡಿದರು +ಖೇದವೇಕೆನುತ

ಅಚ್ಚರಿ:
(೧) ದುರ್ಯೋಧನನ ಕಡೆಯವರನ್ನು ಖಳಶಿರೋಮಣಿ ಎಂದು ಕರೆದಿರುವುದು
(೨) ದುಷ್ಟರ ನಗುವಿನ ಚಿತ್ರಣ – ಉಲಿದು ತಂಬುಲ ಸೊಸೆ ನಕ್ಕರು ಹೊಯ್ದು ಕರತಳವ

ಪದ್ಯ ೭: ಧೃತರಾಷ್ಟ್ರನು ಏಕೆ ದುಃಖಿಸಿದನು?

ಮರಳಿ ಮರಳಿ ಯುಧಿಷ್ಠಿರನ ಮನ
ದಿರವ ಭೀಮನ ಖತಿಯ ಪಾರ್ಥನ
ಪರಿಯ ನಕುಲನ ನಿಲವನಾ ಸಹದೇವನಾಯತವ
ತರಳೆಯುಬ್ಬೆಯನಾ ಪುರೋಹಿತ
ವರನ ಖೇದವನಾ ಮುನೀಂದ್ರರ
ಪರಗತಿಯನಡಿಗಡಿಗೆ ಕೇಳಿದು ಮರುಗಿದನು ನೃಪತಿ (ಅರಣ್ಯ ಪರ್ವ, ೧೮ ಸಂಧಿ, ೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಚಿಂತೆ, ಭೀಮನ ಕೋಪ, ಅರ್ಜುನನ ರೀತಿ, ನಕುಲನ ನಿಲುಮೆ, ಸಹದೇವನ ಸಿದ್ಧತೆ, ದ್ರೌಪದಿಯ ಉದ್ವೇಗ, ಧೌಮ್ಯನ ದುಃಖ, ಪರಿವಾರದ ಬ್ರಾಹ್ಮಣರ ತಪಸ್ಸು, ಇವುಗಳನ್ನು ಧೃತರಾಷ್ಟ್ರನು ಮತ್ತೆ ಮತ್ತೆ ವಿಚಾರಿಸಿ ತಿಳಿದುಕೊಂಡು ಕೊರಗಿದನು.

ಅರ್ಥ:
ಮರಳಿ: ಹಿಂದಿರುಗು, ಪುನಃ; ಮನ: ಮನಸ್ಸು; ಇರವು: ಸ್ಥಿತಿ; ಖತಿ: ಕೋಪ; ಪರಿ: ರೀತಿ; ನಿಲವು: ಸ್ಥಿತಿ, ಅವಸ್ಥೆ; ಆಯತ: ನೆಲೆ; ತರಳೆ: ಹೆಣ್ಣು, ಬಾಲೆ; ಉಬ್ಬೆ: ಉದ್ವೇಗ; ಪುರೋಹಿತ: ಧಾರ್ಮಿಕ ವ್ರತವನ್ನು ಮಾಡಿಸುವವ; ಖೇದ: ದುಃಖ; ಮುನಿ: ಋಷಿ; ಪರಗತಿ: ಮೋಕ್ಷ; ಅಡಿಗಡಿಗೆ: ಮತ್ತೆ ಮತ್ತೆ; ಕೇಳು: ಆಲಿಸು; ಮರುಗು: ಕೊರಗು; ನೃಪತಿ: ರಾಜ;

ಪದವಿಂಗಡಣೆ:
ಮರಳಿ +ಮರಳಿ +ಯುಧಿಷ್ಠಿರನ +ಮನ
ದಿರವ +ಭೀಮನ +ಖತಿಯ +ಪಾರ್ಥನ
ಪರಿಯ +ನಕುಲನ +ನಿಲವನ್+ಆ+ ಸಹದೇವನ್+ಆಯತವ
ತರಳೆ+ಉಬ್ಬೆಯನ್+ಆ+ ಪುರೋಹಿತ
ವರನ+ ಖೇದವನ್+ಆ+ ಮುನೀಂದ್ರರ
ಪರಗತಿಯನ್+ಅಡಿಗಡಿಗೆ +ಕೇಳಿದು +ಮರುಗಿದನು+ ನೃಪತಿ

ಅಚ್ಚರಿ:
(೧) ೧ ಸಾಲಿನ ಮೊದಲನೇ ಮತ್ತು ಕೊನೆ ಪದ ಮ ಕಾರವಾಗಿರುವುದು

ಪದ್ಯ ೬: ಧೃತರಾಷ್ಟ್ರನೇಕೆ ಕೊರಗಿದನು?

ಈ ವಿಧಿಯೆ ಪಾಂಡವರಿಗಕಟಾ
ಸಾವು ಸೇರದು ತನಗೆ ತಾಮು
ನ್ನಾವ ನೋಂಪಿಯನಳಿದೆನೋ ಭವಭವಸಹಸ್ರದಲಿ
ಈ ವಿಲಾಸವನೀವಿಭವ ಸಂ
ಭಾವನೆಯನೀಪದವನೀ ಪು
ತ್ರಾವಳಿಯ ಸುಡಲೆನುತ ಮಿಗೆ ಮರುಗಿದನು ಧೃತರಾಷ್ಟ್ರ (ಅರಣ್ಯ ಪರ್ವ, ೧೮ ಸಂಧಿ, ೬ ಪದ್ಯ)

ತಾತ್ಪರ್ಯ:
ಬ್ರಾಹ್ಮಣನ ಮಾತನ್ನು ಕೇಳಿದ ಧೃತರಾಷ್ಟ್ರನು, ಪಾಂಡವರಿಗೆ ಈ ಗತಿಯೇ! ಅಯ್ಯೋ ನನಗೆ ಸಾವು ಬರುತ್ತಿಲ್ಲವಲ್ಲ, ಹಿಂದಿನ ಸಹಸ್ರಾರು ಜನ್ಮಗಳಲ್ಲಿ ಯಾವ ವ್ರತವನ್ನು ಮುರಿದೆನೋ!, ಈ ವಿಲಾಸ, ವಿಭ್ರಮ, ವೈಭವ, ಸ್ಥಾನ, ಸನ್ಮಾನ, ಮಕ್ಕಳು ಇದರಿಂದೇನು, ಇವೆಲ್ಲವನ್ನು ಸುಡಬೇಕೆಂದು ಹೇಳಿ ಕೊರಗಿದನು.

ಅರ್ಥ:
ವಿಧಿ: ನಿಯಮ, ಬ್ರಹ್ಮ; ಅಕಟ: ಅಯ್ಯೋ; ಸಾವು: ಮರಣ; ಸೇರು: ತಲುಪು; ಮುನ್ನ: ಮೊದಲು; ನೋಂಪು: ನಿಯಮ, ವ್ರತ; ಅಳಿ: ಮುರಿ; ಭವ: ಜನ್ಮ, ಇರುವಿಕೆ; ಸಹಸ್ರ: ಸಾವಿರ; ವಿಲಾಸ: ಅಂದ, ಸೊಬಗು; ವಿಭವ: ಸಿರಿ, ಸಂಪತ್ತು; ಸಂಭಾವನೆ: ಮನ್ನಣೆ; ಪದವಿ: ಅಂತಸ್ತು, ಸ್ಥಾನ; ಪುತ್ರಾವಳಿ: ಮಕ್ಕಳ ಸಾಲು; ಸುಡು: ದಹಿಸು; ಮರುಗು: ಕನಿಕರಿಸು, ಕೊರಗು; ಮಿಗೆ: ಅಧಿಕ;

ಪದವಿಂಗಡಣೆ:
ಈ +ವಿಧಿಯೆ +ಪಾಂಡವರಿಗ್+ಅಕಟಾ
ಸಾವು +ಸೇರದು +ತನಗೆ +ತಾಮು
ನ್ನಾವ +ನೋಂಪಿಯನ್+ಅಳಿದೆನೋ +ಭವ+ಭವ+ಸಹಸ್ರದಲಿ
ಈ +ವಿಲಾಸವನ್+ಈ+ವಿಭವ +ಸಂ
ಭಾವನೆಯನ್+ಈ+ಪದವನ್+ಈ+ ಪು
ತ್ರಾವಳಿಯ+ ಸುಡಲೆನುತ+ ಮಿಗೆ +ಮರುಗಿದನು +ಧೃತರಾಷ್ಟ್ರ

ಅಚ್ಚರಿ:
(೧) ವಿಲಾಸ, ವಿಭವ, ಸಂಭಾವನೆ, ಪದವಿ, ಪುತ್ರವಳಿ – ಆನಂದಕಾರಕವನ್ನು ಸೂಚಿಸುವ ಪದಗಳು

ಪದ್ಯ ೫: ಬ್ರಾಹ್ಮಣನು ಧೃತರಾಷ್ಟ್ರಂಗೆ ಏನು ಹೇಳಿದನು?

ವಿವಿಧ ವನ ಪರಿಯಟಣದಾಯಾ
ಸವನು ತತ್ಪರಿಸರದ ಕಂಟಕ
ನಿವಹವನು ದಾನವರ ದಕ್ಕಡತನದ ದಟ್ಟಣೆಯ
ಅವಚಿದಾಪತ್ತಿನ ಮನಃ ಖೇ
ದವನು ಖೋಡಿಯ ಖತಿಯ ಲಜ್ಜಾ
ವಿವರಣವನರುಹಿದನು ಧೃತರಾಷ್ಟ್ರಾವನೀಶಂಗೆ (ಅರಣ್ಯ ಪರ್ವ, ೧೮ ಸಂಧಿ, ೫ ಪದ್ಯ)

ತಾತ್ಪರ್ಯ:
ಹಲವಾರು ಕಾಡುಗಳಲ್ಲಿ ತಿರುಗಾಡಿದ ಆಯಾಸ, ಅಲ್ಲಿ ಒದಗಿದ ತೊಂದರೆಗಳು, ರಾಕ್ಷಸರ ಪರಾಕ್ರಮ ಮತ್ತು ಅವರಿಂದೊದಗಿದ ಕಾಟ, ಆಪತ್ತು ಬಂದು ಅವಚಿದಾಗ ಉಂಟಾದ ದುಃಖ, ತಮಗೊದಗಿದ ದುಸ್ಥಿತಿಗೆ ಉಂಟಾದ ಕೋಪ, ಲಜ್ಜೆ, ಇವುಗಳಿಂದ ಪಾಂಡವರು ಬೆಂಡಾದುದನ್ನು ಬ್ರಾಹ್ಮಣನು ಧೃತರಾಷ್ಟ್ರಂಗೆ ಹೇಳಿದನು.

ಅರ್ಥ:
ವಿವಿಧ: ಹಲವಾರು; ವನ: ಕಾಡು; ಪರಿಯಟಣ: ತಿರುಗಾಡು; ಆಯಾಸ; ದಣಿವು; ಪರಿಸರ: ಆವರಣ, ಪ್ರದೇಶ; ಕಂಟಕ: ತೊಂದರೆ; ನಿವಹ: ಗುಂಪು; ದಾನವ: ರಾಕ್ಷಸ; ದಕ್ಕಡ: ಸಮರ್ಥ, ಬಲಶಾಲಿ; ದಟ್ಟಣೆ: ಸಾಂದ್ರತೆ; ಅವಚು: ಅಪ್ಪಿಕೊಳ್ಳು, ಆವರಿಸು; ಆಪತ್ತು: ತೊಂದರೆ; ಮನ: ಮನಸ್ಸು; ಖೇದ: ದುಃಖ; ಖೋಡಿ: ದುರುಳತನ; ಖತಿ: ಕೋಪ, ಅಳಲು; ಲಜ್ಜೆ: ನಾಚಿಕೆ; ವಿವರಣ: ವಿಸ್ತಾರ, ವಿಚಾರ; ಅರುಹು: ತಿಳಿಸು; ಅವನೀಶ: ರಾಜ;

ಪದವಿಂಗಡಣೆ:
ವಿವಿಧ+ ವನ +ಪರಿಯಟಣದ್+ಆಯಾ
ಸವನು +ತತ್ಪರಿಸರದ +ಕಂಟಕ
ನಿವಹವನು +ದಾನವರ +ದಕ್ಕಡತನದ +ದಟ್ಟಣೆಯ
ಅವಚಿದ್+ಆಪತ್ತಿನ +ಮನಃ +ಖೇ
ದವನು +ಖೋಡಿಯ +ಖತಿಯ +ಲಜ್ಜಾ
ವಿವರಣವನ್+ಅರುಹಿದನು +ಧೃತರಾಷ್ಟ್ರ+ಅವನೀಶಂಗೆ

ಅಚ್ಚರಿ:
(೧) ದ ಕಾರದ ತ್ರಿವಳಿ ಪದ – ದಾನವರ ದಕ್ಕಡತನದ ದಟ್ಟಣೆಯ
(೨) ಖ ಕಾರದ ತ್ರಿವಳಿ ಪದ – ಖೇದವನು ಖೋಡಿಯ ಖತಿಯ

ಪದ್ಯ ೪: ಧೃತರಾಷ್ಟ್ರನು ಬ್ರಾಹ್ಮಣನಲ್ಲಿ ಏನು ಕೇಳಿದನು?

ಅರಸ ಕೇಳೈ ಹಸ್ತಿನಾಪುರ
ವರಕೆ ಕಾಮ್ಯಕವನದಿನೊಬ್ಬನು
ಧರಣಿಸುರನೈತಂದು ಕರ್ಣಾದಿಗಳ ಮನೆಗಳಲಿ
ಇರಲಿರಲು ಧೃತರಾಷ್ಟ್ರ ಭೂಪತಿ
ಕರೆಸಿ ಬೆಸಗೊಂಡನು ಯುಧಿಷ್ಠಿರ
ನಿರವನಟವೀತಟ ಪರಿಭ್ರಮಣೈಕ ಭೀಷಣವ (ಅರಣ್ಯ ಪರ್ವ, ೧೮ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಹಸ್ತಿನಾಪುರಕ್ಕೆ ಕಾಮ್ಯಕವನದಿಂದ ಒಬ್ಬ ಬ್ರಾಹ್ಮಣನು ಕರ್ಣನೇ ಮೊದಲಾದವರ ಮನೆಯಲ್ಲಿರುವುದನ್ನು ತಿಳಿದು ಧೃತರಾಷ್ಟ್ರನು ಅವನನ್ನು ಕರೆಸಿಕೊಂಡನು. ಯುಧಿಷ್ಠಿರನು ಕಾಡಿನಲ್ಲಿ ಹೇಗಿದ್ದಾನೆ, ದಟ್ಟಡವಿಯಲ್ಲಿ ಸಂಚರಿಸುತ್ತಾ ಎಂತಹ ಭಯಂಕರ ಪರಿಸ್ಥಿತಿಯಲ್ಲಿದ್ದಾನೆ ಎಂದು ಅವನು ಆ ಬ್ರಾಹ್ಮಣನನ್ನು ಕೇಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಪುರ: ಊರು; ವನ: ಕಾದು; ಧರಣಿಸುರ: ಬ್ರಾಹ್ಮಣ; ಐತಂದು: ಬಂದು ಸೇರು; ಆದಿ: ಮುಂತಾದ; ಮನೆ: ಆಲಯ; ಭೂಪತಿ: ರಾಜ; ಕರೆಸು: ಬರೆಮಾಡು; ಬೆಸ: ಅಪ್ಪಣೆ, ಆದೇಶ, ವಿಚಾರಿಸು; ಇರವು: ಸ್ಥಿತಿ; ಅಟವಿ: ಕಾಡು; ಪರಿಭ್ರಮಣ: ಸುತ್ತಾಡುವುದು; ಭೀಷಣ: ಭಯಂಕರವಾದ; ತಟ: ದಡ, ತೀರ;

ಪದವಿಂಗಡಣೆ:
ಅರಸ +ಕೇಳೈ +ಹಸ್ತಿನಾಪುರ
ವರಕೆ +ಕಾಮ್ಯಕ+ವನದಿನ್+ಒಬ್ಬನು
ಧರಣಿಸುರನ್+ಐತಂದು +ಕರ್ಣಾದಿಗಳ +ಮನೆಗಳಲಿ
ಇರಲಿರಲು+ ಧೃತರಾಷ್ಟ್ರ +ಭೂಪತಿ
ಕರೆಸಿ +ಬೆಸಗೊಂಡನು +ಯುಧಿಷ್ಠಿರನ್
ಇರವನ್+ಅಟವೀತಟ +ಪರಿಭ್ರಮಣೈಕ+ ಭೀಷಣವ

ಅಚ್ಚರಿ:
(೧) ಅರಸ, ಭೂಪತಿ; ಅಟವಿ, ವನ – ಸಮನಾರ್ಥಕ ಪದ