ಪದ್ಯ ೩: ಧರ್ಮಜನು ಏಕೆ ದುಃಖಿತನಾಗಿದ್ದನು?

ಎಹಗೆ ಸೈರಿಸಿ ನಿಂದರೋ ವ್ರಜ
ಮಹಿಳೆಯರು ಕೃಷ್ಣಾಂಘ್ರಿವಿರಹದ
ದಹನ ತಾಪಸ್ತಂಭಕೌಷಧದಾನಶೌಂಡರಿಗೆ
ಅಹಹ ಕೊಡುವೆನು ನನ್ನನೆನುತು
ಮ್ಮಹದ ಮೊನೆಮುರಿದವನಿಪತಿ ನಿ
ಸ್ಪೃಹೆಯಲಿದ್ದನು ರಾಜಕಾರ್ಯ ವಿಹಾರ ಲೀಲೆಗಳ (ಅರಣ್ಯ ಪರ್ವ, ೧೮ ಸಂಧಿ, ೩ ಪದ್ಯ)

ತಾತ್ಪರ್ಯ:
ಧರ್ಮಜನು ಯೋಚಿಸುತ್ತಾ, ಗೋಪಿಕೆಯರ ಗುಂಪು ಶ್ರೀಕೃಷ್ಣನ ಅಗಲಿಕೆಯನ್ನು ಹೇಗೆ ಸಹಿಸಿದರೋ ಏನೋ! ಕೃಷ್ಣನ ಪಾದಕಮಲದ ವಿರಹದ ತಾಪಕ್ಕೆ ಔಷಧವನ್ನು ಕೊಡುವವರಿಗೆ ನನ್ನನ್ನೇ ತೆತ್ತೆನು ಎಂದು ಚಿಂತಿಸುತ್ತಾ, ಸಂತೋಷ ಸಂಭ್ರಮವು ಮುರಿದು ಹೋಗಲು, ರಾಜಕಾರಣ ವಿಹಾರಗಳೆಲ್ಲವನ್ನೂ ಒಲ್ಲದೆ ಸುಮ್ಮನ್ನಿದ್ದನು.

ಅರ್ಥ:
ಎಹಗೆ: ಹೇಗೆ; ಸೈರಿಸು: ತಾಳು, ಸಹಿಸು; ನಿಂದು: ನಿಲ್ಲು; ವ್ರಜ: ಗುಂಪು; ಮಹಿಳೆ: ಸ್ತ್ರೀ; ಅಂಘ್ರಿ: ಪಾದ; ವಿರಹ: ಬೇರೆ, ಅಗಲಿಕೆ; ದಹನ: ಸುಡುವಿಕೆ; ತಾಪ: ಬಿಸಿ; ಸ್ತಂಭ: ನಿರೋಧ; ಔಷಧ: ಮದ್ದು; ಶೌಂಡ: ಆಸಕ್ತಿಯುಳ್ಳವನು; ಕೊಡು: ನೀಡು; ಉಮ್ಮಹ: ಉತ್ಸಾಹ; ಮೊನೆ: ಮುಖ; ಮುರಿ: ಸೀಳು; ಅವನಿಪತಿ: ರಾಜ; ನಿಸ್ಪೃಹ: ಆಸೆ ಇಲ್ಲದವ; ರಾಜಕಾರ್ಯ: ರಾಜಕಾರಣ; ವಿಹಾರ: ಅಲೆದಾಟ; ಲೀಲೆ: ಆನಂದ, ಕ್ರೀಡೆ;

ಪದವಿಂಗಡಣೆ:
ಎಹಗೆ+ ಸೈರಿಸಿ +ನಿಂದರೋ +ವ್ರಜ
ಮಹಿಳೆಯರು +ಕೃಷ್ಣಾಂಘ್ರಿ+ವಿರಹದ
ದಹನ+ ತಾಪಸ್ತಂಭಕ್+ಔಷಧ+ದಾನ+ಶೌಂಡರಿಗೆ
ಅಹಹ+ ಕೊಡುವೆನು+ ನನ್ನನ್+ಎನುತ್
ಉಮ್ಮಹದ +ಮೊನೆ+ಮುರಿದ್+ಅವನಿಪತಿ +ನಿ
ಸ್ಪೃಹೆಯಲಿದ್ದನು +ರಾಜಕಾರ್ಯ +ವಿಹಾರ +ಲೀಲೆಗಳ

ಅಚ್ಚರಿ:
(೧) ಹೋಲಿಕೆಯನ್ನು ತೋರುವ ಪರಿ – ಎಹಗೆ ಸೈರಿಸಿ ನಿಂದರೋ ವ್ರಜಮಹಿಳೆಯರು ಕೃಷ್ಣಾಂಘ್ರಿವಿರಹದ ದಹನ

ಪದ್ಯ ೨: ಧರ್ಮಜನೇಕೆ ಕೊರಗಿದನು?

ಸೂರೆವೋದುದು ರಾಜ್ಯ ಸಿರಿ ಮು
ಮ್ಮಾರುವೋದುದು ಲಜ್ಜೆ ಬೆಟ್ಟವ
ಸೇರಿ ಕಾನನಕಿಳಿದು ವನದಿಂದಡರಿ ಗಿರಿಕುಲವ
ತಾರುತಟ್ಟಿಗೆ ಹಾಯ್ವ ಸುಖಮನ
ದೇರು ಮಸಗಿ ಮುರಾರಿ ಕೃಪೆಯನು
ತೋರಿಯಡಗಿದನಕಟವಿಧಿಯೆಂದಳಲಿದನು ಭೂಪ (ಅರಣ್ಯ ಪರ್ವ, ೧೮ ಸಂಧಿ, ೨ ಪದ್ಯ)

ತಾತ್ಪರ್ಯ:
ರಾಜ್ಯಲಕ್ಷ್ಮಿಯನ್ನು ಕಳೆದುಕೊಂಡು ಕೊಳ್ಳೆಹೊಡೆದಂತಾಯಿತು, ಮಾನ ಕಳೆದು ಹೋಯಿತು, ಬೆಟ್ಟವನ್ನು ಹತ್ತಿ ಕಾಡಿಗಿಳಿದು ಮತ್ತೆ ಬೆಟ್ಟವನ್ನು ಹತ್ತಿ ಇಳಿದು ವನಭೂಮಿಯಲ್ಲಿ ನಡೆಯುವುದೇ ನಮ್ಮ ಪಾಲಿನ ಸುಖವೆಂದುಕೊಂಡನು, ಮನಸ್ಸಿಗೆ ವ್ಯಥೆಯು ಆವರಿಸಿತು, ಶ್ರೀಕೃಷ್ಣನು ತೋರಿ ಮಾಯಾವಾದನು ಎಂದು ಧರ್ಮಜನು ದುಃಖಿಸಿದನು.

ಅರ್ಥ:
ಸೂರೆ: ಕೊಳ್ಳೆ, ಲೂಟಿ; ರಾಜ್ಯ: ದೇಶ; ಸಿರಿ: ಸಂಪತ್ತು, ಐಶ್ವರ್ಯ; ಮುಮ್ಮಾರುವೋಗು: ಮೂರು ಮಾರು ದೂರ ಹೋಗು; ಲಜ್ಜೆ: ಮಾನ; ಬೆಟ್ಟ: ಗಿರಿ; ಸೇರು: ತಲುಪು, ಮುಟ್ಟು; ಕಾನನ: ಕಾಡು; ಇಳಿ: ತೆರಳು; ವನ: ಕಾಡು; ಅಡರು: ಹಬ್ಬು; ಗಿರಿ: ಬೆಟ್ಟ; ಕುಲ: ಗುಂಪು; ತಾರು: ಸೊರಗು; ತಟ್ಟು: ಹೊಡೆ, ಮುಟ್ಟು; ಹಾಯಿ: ಚಾಚು; ಸುಖ: ನೆಮ್ಮದಿ, ಸಂತಸ; ಮನ: ಮನಸ್ಸು; ಮಸಗು: ಕೆರಳು; ಮುರಾರಿ: ಕೃಷ್ಣ; ಕೃಪೆ: ಕರುಣೆ; ತೋರು: ಗೋಚರಿಸು; ಅಡಗು: ಮರೆಯಾಗು; ಅಕಟ: ಅಯ್ಯೋ; ವಿಧಿ: ನಿಯಮ; ಅಳಲು: ಕೊರಗು; ಭೂಪ: ರಾಜ;

ಪದವಿಂಗಡಣೆ:
ಸೂರೆವೋದುದು +ರಾಜ್ಯ +ಸಿರಿ+ ಮು
ಮ್ಮಾರುವೋದುದು +ಲಜ್ಜೆ +ಬೆಟ್ಟವ
ಸೇರಿ+ ಕಾನನಕಿಳಿದು+ ವನದಿಂದ್+ಅಡರಿ +ಗಿರಿಕುಲವ
ತಾರುತಟ್ಟಿಗೆ+ ಹಾಯ್ವ +ಸುಖ+ಮನ
ದೇರು+ ಮಸಗಿ+ ಮುರಾರಿ +ಕೃಪೆಯನು
ತೋರಿ+ಅಡಗಿದನ್+ಅಕಟ+ವಿಧಿಯೆಂದ್+ಅಳಲಿದನು +ಭೂಪ

ಅಚ್ಚರಿ:
(೧) ಕಾನನ, ವನ; ಗಿರಿ, ಬೆಟ್ಟ – ಸಮನಾರ್ಥಕ ಪದ
(೨) ಮನದೇರು ಮಸಗಿ ಮುರಾರಿ – ಮ ಕಾರದ ತ್ರಿವಳಿ ಪದ

ಪದ್ಯ ೧: ಪಾಂಡವರು ಯಾವ ಸ್ಥಿತಿಯಲ್ಲಿದ್ದರು?

ಕೇಳು ಜನಮೇಜಯ ಧರಿತ್ರೀ
ಪಾಲ ನಿಜ ನಗರಕ್ಕೆ ಲಕ್ಷ್ಮೀ
ಲೋಲ ಬಿಜಯಂಗೈದನಿತ್ತಲು ಪಾಂಡು ನಂದನರು
ಮೇಲು ದುಗುಡದ ಮುಖದ ಚಿಂತೆಯ
ಜಾಳಿಗೆಯ ಜಡಮನದಲಿದ್ದರು
ಸೂಳು ಸುಯ್ಲಿನ ಹೊಯ್ಲ ನಾಸಾಪುಟದ ಬೆರಳಿನಲಿ (ಅರಣ್ಯ ಪರ್ವ, ೧೮ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಶ್ರೀಕೃಷ್ಣನು ತನ್ನ ನಗರವಾದ ದ್ವಾರಕೆಗೆ ತೆರಳಿದನು, ಇತ್ತ ಪಾಂಡವರು ಮುಖದಲ್ಲಿ ಚಿಂತೆಯ ಜಾಲ ವ್ಯಕ್ತವಾಯಿತು, ಮನಸ್ಸು ಭಾರವಗಿ ಮತ್ತೆ ಮತ್ತೆ ನಿಟ್ಟುಸಿರು ಹೊರಹೊಮ್ಮುತ್ತಾ ಮೂಗಿನ ಮೇಲೆ ಬೆರಳಿಟ್ಟು ಚಿಂತಿಸುತ್ತಿದ್ದರು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ನಿಜ: ತನ್ನ; ನಗರ: ಊರು; ಲಕ್ಷ್ಮೀಲೋಲ: ಲಕ್ಷ್ಮಿಗೆ ಪ್ರಿಯನಾದವ (ಕೃಷ್ಣ); ಬಿಜಯಂಗೈ: ತೆರಳು; ನಂದನ: ಮಕ್ಕಳು; ಮೇಲು: ಹೆಚ್ಚಿನ; ದುಗುಡ: ದುಃಖ; ಮುಖ: ಆನನ; ಚಿಂತೆ: ಯೋಚನೆ; ಜಾಲ: ಬಲೆ, ಕಪಟ; ಜಡ: ಆಲಸ್ಯ, ಜಡತ್ವ; ಮನ: ಮನಸ್ಸು; ಸೂಳು: ಸರದಿ, ಸಮಯ, ಆರ್ಭಟ; ಸುಯ್ಲು: ನಿಟ್ಟುಸಿರು; ಹೊಯ್ಲ: ಏಟು, ಹೊಡೆತ; ನಾಸಾಪುಟ: ಮೂಗಿನ ಮೇಲೆ; ಬೆರಳು: ಅಂಗುಲಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ನಿಜ +ನಗರಕ್ಕೆ+ ಲಕ್ಷ್ಮೀ
ಲೋಲ +ಬಿಜಯಂಗೈದನ್+ಇತ್ತಲು +ಪಾಂಡು +ನಂದನರು
ಮೇಲು +ದುಗುಡದ +ಮುಖದ +ಚಿಂತೆಯ
ಜಾಳಿಗೆಯ +ಜಡಮನದಲ್+ಇದ್ದರು
ಸೂಳು +ಸುಯ್ಲಿನ +ಹೊಯ್ಲ +ನಾಸಾಪುಟದ+ ಬೆರಳಿನಲಿ

ಅಚ್ಚರಿ:
(೧) ಚಿಂತೆಯನ್ನು ವಿವರಿಸುವ ಪರಿ – ಮೇಲು ದುಗುಡದ ಮುಖದ ಚಿಂತೆಯ
ಜಾಳಿಗೆಯ ಜಡಮನದಲಿದ್ದರು ಸೂಳು ಸುಯ್ಲಿನ ಹೊಯ್ಲ ನಾಸಾಪುಟದ ಬೆರಳಿನಲಿ

ನುಡಿಮುತ್ತುಗಳು: ಅರಣ್ಯ ಪರ್ವ ೧೮ ಸಂಧಿ

  • ಮೇಲು ದುಗುಡದ ಮುಖದ ಚಿಂತೆಯಜಾಳಿಗೆಯ ಜಡಮನದಲಿದ್ದರು ಸೂಳು ಸುಯ್ಲಿನ ಹೊಯ್ಲ ನಾಸಾಪುಟದ ಬೆರಳಿನಲಿ – ಪದ್ಯ ೧
  • ಉಲಿದು ತಂಬುಲ ಸೊಸೆ ನಕ್ಕರು ಹೊಯ್ದು ಕರತಳವ – ಪದ್ಯ ೮
  • ಮಕ್ಕಳು ಬೀದಿಗರುವಾದರು – ಪದ್ಯ ೯
  • ಆ ದಿವಾಕರನಂತೆ ನಿಚ್ಚಲು ಕಾದುದುದಯಾಸ್ತಂಗಳಲಿದನು ಜಾದಿ ಖಳರೊಡನಟವಿಗೋಟಲೆ – ಪದ್ಯ ೯
  • ಈ ಕುರುಕ್ಷಿತಿಪತಿಯೊಳನ್ಯಾಯೈಕ ಲವವುಂಟೇ – ಪದ್ಯ ೧೦
  • ವಿಷಯಲಂಪಟರಕ್ಷಲೀಲಾವ್ಯಸನಕೋಸುಗವೊತ್ತೆಯಿಟ್ಟರು ವಸುಮತಿಯನ – ಪದ್ಯ ೧೧
  • ಬೇವು ತಾ ಪರಿಪಕ್ವವಾದರೆಹಾವು ಮೆಕ್ಕೆಗೆ ಸಾಕ್ಷಿಗಡ – ಪದ್ಯ ೧೫
  • ಧರ್ಮಾವಮಾನದ ಕವಿಗೆ ಕಾಮಾದಿಗಳ ನೆರವಿ ಗಡ – ಪದ್ಯ ೧೫
  • ಮರುಗುತ ಸೂಸಿದೈ ಸಾಹಿತ್ಯ ಭಾಷೆಯನೆಂದನಾ ಕರ್ಣ – ಪದ್ಯ ೧೭
  • ಕಾಡಿಗೆಯ ಕೆಸರೊಳಗದ್ದ ನೀಲದ ಸರಿಗೆ ಸರಿಯಾಯ್ತು – ಪದ್ಯ ೧೮
  • ಸಿಂಗಿಯಲುಂಟೆ ಸವಿ – ಪದ್ಯ ೧೮
  • ತರಳಮನ ತಳಮಗುಚಿದಂತಾಯ್ತವರೊಲವು – ಪದ್ಯ ೧೮
  • ಮುಗುಳುಗಂಗಳ ಬಾಷ್ಪ ಬಿಂದುವ ನುಗುರು ಕೊನೆಯಲಿ ಮಿಡಿದು – ಪದ್ಯ ೧೮
  • ದುರ್ಭೇದ ಗರ್ವ ಗ್ರಂಥಿಕಲುಷ ವಿನೋದಶೀಲರು ಭುಜವ ಹೊಯ್ದರು – ಪದ್ಯ ೨೭
  • ಸಿಡಿಲಮರಿಯೆನೆ ಮೆರೆವ ಹುಂಕೃತಿಯ – ಪದ್ಯ ೩೬
  • ಕೆಲವಿದಿರುಬರಲದ್ರಿಯದ್ರಿಯಹಳಚುವಂತಿರೆ ಹರಿವ ಹಾರುವಸಲಗನಳ್ಳಿರಿದಾಡುತಿದ್ದವು – ಪದ್ಯ ೩೬

ಪದ್ಯ ೫೨: ಕೃಷ್ಣನು ಎಲ್ಲಿಗೆ ತೆರಳಿದನು?

ಎಂದು ಹರಿಯನು ಹೊಗಳಿ ನಾನಾ
ಚಂದದಲಿ ಪಾಂಡವರ ತಿಳುಹಿ ಮು
ನೀಂದ್ರ ತನ್ನಾಶ್ರಮಕೆ ಸರಿದನು ತಾಪಸರುಸಹಿತ
ಅಂದು ಕುಂತೀ ನಂದನರಿಗಾ
ನಂದ ಸುಖವನು ಕರೆದು ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದೋರಕಾಪುರಿಯ (ಅರಣ್ಯ ಪರ್ವ, ೧೭ ಸಂಧಿ, ೫೨ ಪದ್ಯ)

ತಾತ್ಪರ್ಯ:
ದೂರ್ವಾಸನು ಶ್ರೀಕೃಷ್ಣನನ್ನು ಹೀಗೆ ಹೊಗಳಿ, ಪಾಂಡವರಿಗೆ ತಿಳುವಳಿಕೆಯ ಮಾತುಗಳನ್ನು ಹೇಳಿ ಮುನಿಗಳೊಡನೆ ತನ್ನ ಆಶ್ರಮಕ್ಕೆ ಹೋದನು. ಪಾಂಡವರ ಕಷ್ಟವನ್ನು ಪರಿಹರಿಸಿ ಆನಂದವನ್ನುಂಟುಮಾಡಿ ಶ್ರೀಕೃಷ್ಣನು ದ್ವಾರಕೆಗೆ ತೆರಳಿದನು.

ಅರ್ಥ:
ಹರಿ: ಕೃಷ್ಣ; ಹೊಗಳು: ಪ್ರಶಂಶಿಸು; ನಾನಾ: ಹಲವಾರು; ಚಂದ: ಸುಂದರ ತಿಳುಹಿ: ತಿಳುವಳಿಕೆಯ ಮಾತು; ಮುನೀಂದ್ರ: ಋಷಿ; ಆಶ್ರಮ: ಕುಟೀರ; ಸರಿ: ತೆರಳು; ತಾಪಸ: ಋಷಿಮುನಿ; ಸಹಿತ: ಜೊತೆ; ನಂದನ: ಮಕ್ಕಳು; ಆನಂದ ಸಂತಸ; ಸುಖ: ನೆಮ್ಮದಿ; ಕರೆ:ನೀಡು; ದೇವ: ಭಗವಂತ; ಬಿಜಯಂಗೈ: ತೆರಳು; ಹೊಕ್ಕು: ಸೇರು; ಪುರಿ: ಊರು;

ಪದವಿಂಗಡಣೆ:
ಎಂದು+ ಹರಿಯನು +ಹೊಗಳಿ +ನಾನಾ
ಚಂದದಲಿ +ಪಾಂಡವರ +ತಿಳುಹಿ +ಮು
ನೀಂದ್ರ +ತನ್ನಾಶ್ರಮಕೆ +ಸರಿದನು +ತಾಪಸರು+ಸಹಿತ
ಅಂದು +ಕುಂತೀ +ನಂದನರಿಗ್
ಆನಂದ +ಸುಖವನು +ಕರೆದು +ದೇವ +ಮು
ಕುಂದ +ಬಿಜಯಂಗೈದು +ಹೊಕ್ಕನು +ದೋರಕಾಪುರಿಯ

ಅಚ್ಚರಿ:
(೧) ಹರಿ, ಮುಕುಂದ – ಕೃಷ್ಣನನ್ನು ಕರೆದ ಪರಿ
(೨) ಸರಿದನು, ಹೊಕ್ಕನು – ಪದಗಳ ಬಳಕೆ

ಪದ್ಯ ೫೧: ಯಾರನ್ನು ದುಷ್ಟರು ಮುಟ್ಟಲ್ಲಿಕ್ಕಾಗುವುದಿಲ್ಲ?

ಮೃಷ್ಟಭೋಜನದಿಂದ ನಾವ್ ಸಂ
ತುಷ್ಟರಾಗೊಲಿದುದನು ಬೇಡೆನೆ
ದುಷ್ಟಕೌರವ ನಮ್ಮ ಕಳುಹಿದ ಧೂರ್ತವಿದ್ಯೆಯಲಿ
ಕಷ್ಟವೇ ಕೈಗಟ್ಟಿತಲ್ಲದೆ
ಕೆಟ್ಟರೇ ಪಾಂಡವರು ಹರಿಪದ
ನಿಷ್ಠರನು ನಿಲುಕುವನೆ ದುರ್ಜನನೆಂದನಾ ಮುನಿಪ (ಅರಣ್ಯ ಪರ್ವ, ೧೭ ಸಂಧಿ, ೫೧ ಪದ್ಯ)

ತಾತ್ಪರ್ಯ:
ಎಲೈ ರಾಜ ಕೇಳು, ಕೌರವನು ಮೃಷ್ಟಾನ್ನ ಭೋಜನದಿಂದ ನಮ್ಮನ್ನು ತೃಪ್ತಿಪಡಿಸಿದಾಗ ಏನು ಬೇಕೋ ಕೇಳು ಎಂದು ನಾವು ಹೇಳಿದೆವು. ದ್ರೌಪದಿಯ ಊಟವಾದ ಮೇಲೆ ನಿಮ್ಮಲ್ಲಿಗೆ ಹೋಗಿ ಭೋಜನವನ್ನು ಬೇಡಿರಿ ಎಂದು ಧೂರ್ತನಾದ ಅವನು ನಮ್ಮನ್ನು ಕಳಿಸಿದನು. ನಿಮಗೆ ಕಷ್ಟವನ್ನು ಕೊಡುವುದು ಅವನ ಉದ್ದೇಶ. ಆದರೆ ಆ ಕಷ್ಟದ ಕೈಗಳು ಕಟ್ಟಿ ಹೋದವೇ ಹೊರತು ಪಾಂಡವರು ಕೆಡಲಿಲ್ಲ. ಹರಿಭಕ್ತರನ್ನು ದುರ್ಜನರು ಮುಟ್ಟಲು ಸಾಧ್ಯವೇ? ಎಂದು ದೂರ್ವಾಸ ಮುನಿಗಳು ಹೇಳಿದರು.

ಅರ್ಥ:
ಮೃಷ್ಟ: ಸವಿಯಾದ; ಭೋಜನ: ಊಟ; ಸಂತುಷ್ಟ: ಸಂತಸ; ಒಲಿ: ಸಮ್ಮತಿಸು, ಬಯಸು; ಬೇಡ: ತ್ಯಜಿಸು; ದುಷ್ಟ: ದುರುಳ; ಕಳುಹು: ತೆರಳು; ಧೂರ್ತ: ಕೆಟ್ಟವ; ವಿದ್ಯೆ: ಬುದ್ಧಿ; ಕಷ್ಟ: ಕಠಿಣ; ಕೈಗಟ್ಟು: ನೀಡು; ಕೆಟ್ಟರು: ಹಾಳಾಗು; ಹರಿ: ಕೃಷ್ಣ; ಪದ: ಚರಣ; ನಿಷ್ಠ: ಶ್ರದ್ಧೆಯುಳ್ಳವನು; ನಿಲುಕು: ಎಟುಕಿಸಿಕೊಳ್ಳು; ದುರ್ಜನ: ದುಷ್ಟ; ಮುನಿ: ಋಷಿ;

ಪದವಿಂಗಡಣೆ:
ಮೃಷ್ಟ+ಭೋಜನದಿಂದ +ನಾವ್ +ಸಂ
ತುಷ್ಟರಾಗ್+ಒಲಿದುದನು+ ಬೇಡ್+ಎನೆ
ದುಷ್ಟಕೌರವ +ನಮ್ಮ +ಕಳುಹಿದ+ ಧೂರ್ತ+ವಿದ್ಯೆಯಲಿ
ಕಷ್ಟವೇ +ಕೈಗಟ್ಟಿತಲ್ಲದೆ
ಕೆಟ್ಟರೇ +ಪಾಂಡವರು +ಹರಿಪದ
ನಿಷ್ಠರನು +ನಿಲುಕುವನೆ +ದುರ್ಜನನ್+ಎಂದನಾ+ ಮುನಿಪ

ಅಚ್ಚರಿ:
(೧) ಹರಿಭಕ್ತರ ಹಿರಿಮೆ – ಹರಿಪದನಿಷ್ಠರನು ನಿಲುಕುವನೆ ದುರ್ಜನ
(೨) ಮೃಷ್ಟ, ಸಂತುಷ್ಟ, ದುಷ್ಟ, ಕಷ್ಟ, ನಿಷ್ಠ – ಪ್ರಾಸ ಪದಗಳು

ಪದ್ಯ ೫೦: ದೂರ್ವಾಸ ಮುನಿಗಳೇಕೆ ಊಟವನ್ನು ಬೇಡವೆಂದರು?

ಬೇರು ನೀರುಂಡಾಗ ದಣಿಯವೆ
ಭೂರುಹದ ಶಾಖೋಪಶಾಖೆಗ
ಳೋರಣೆಯ ನಿಜದೇಹವಂಗೋಪಾಂಗವೆಂದೆನಿಪ
ಶ್ರೀರಮಣ ಸಂತುಷ್ಟನಾದೊಡೆ
ಬೇರೆ ಭೋಜನವೆಮಗೆ ಬೇಹುದೆ
ಭೂರಮಣ ಕೇಳೆನುತ ಮತ್ತಿಂತೆಂದನಾ ಮುನಿಪ (ಅರಣ್ಯ ಪರ್ವ, ೧೭ ಸಂಧಿ, ೫೦ ಪದ್ಯ)

ತಾತ್ಪರ್ಯ:
ಬೇರು ನೀರುಂಡರೆ ಮರದ ಕೊಂಬೆರೆಂಬೆಗಳಿಗೆ ತೃಪ್ತಿಯಾಗುವುದಿಲ್ಲವೇ? ಬ್ರಹ್ಮಾಂಡವೇ ತನ್ನ ಅಂಗೋಪಾಂಗವೆನಿಸಿದ ಶ್ರೀಕೃಷ್ನನು ತೃಪ್ತನಾದಮೇಲೆ ನಮಗೆ ಮತ್ತೆ ಭೋಜನದ ಅಗತ್ಯವೇನಿದೆ? ರಾಜ, ಕೇಳು ಎಂದು ದೂರ್ವಾಸ ಮುನಿಯು ಮತ್ತೆ ನುಡಿದನು.

ಅರ್ಥ:
ಬೇರು: ಮೂಲ; ನೀರು: ಜಲ; ಉಂಡು: ಊಟಮಾಡು; ದಣಿ: ಆಯಾಸ; ಭೂರುಹ: ಭೂಮಿಯಲ್ಲಿ ಬೆಳೆಯುವ ಮರ ಗಿಡ ಇತ್ಯಾದಿ; ಶಾಖೆ: ಕೊಂಬೆ; ಉಪಶಾಖೆ: ಚಿಕ್ಕ ಕೊಂಬೆ; ಓರಣೆ: ಸಾಲು; ನಿಜ: ತನ್ನ, ದಿಟ; ದೇಹ: ತನು; ಅಂಗೋಪಾಂಗ: ದೇಹದ ಅವಯವ; ಶ್ರೀರಮಣ: ಲಕ್ಷ್ಮೀಯ ಪ್ರಿಯತಮ (ಕೃಷ್ಣ); ಸಂತುಷ್ಟ: ಸಂತೋಷ; ಬೇರೆ: ಅನ್ಯ; ಭೋಜನ: ಊಟ; ಬೇಹುದೆ: ಬೇಕೆ; ಭೂರಮಣ: ರಾಜ; ಕೇಳು: ಆಲಿಸು; ಮುನಿ: ಋಷಿ;

ಪದವಿಂಗಡಣೆ:
ಬೇರು +ನೀರುಂಡಾಗ +ದಣಿಯವೆ
ಭೂರುಹದ +ಶಾಖೆ+ಉಪಶಾಖೆಗಳ್
ಓರಣೆಯ+ ನಿಜದೇಹವ್+ಅಂಗೋಪಾಂಗವ್+ಎಂದೆನಿಪ
ಶ್ರೀರಮಣ +ಸಂತುಷ್ಟನಾದೊಡೆ
ಬೇರೆ+ ಭೋಜನವ್+ಎಮಗೆ +ಬೇಹುದೆ
ಭೂರಮಣ+ ಕೇಳೆನುತ+ ಮತ್ತಿಂತೆಂದನಾ+ ಮುನಿಪ

ಅಚ್ಚರಿ:
(೧) ಭೂರಮಣ, ಶ್ರೀರಮಣ – ಪ್ರಾಸ ಪದಗಳು
(೨) ಉಪಮಾನದ ಪ್ರಯೋಗ – ಬೇರು ನೀರುಂಡಾಗ ದಣಿಯವೆ ಭೂರುಹದ ಶಾಖೋಪಶಾಖೆಗ
ಳೋರಣೆಯ