ಪದ್ಯ ೨೧: ಭೀಮನೇಕೆ ಮರುಗಿದನು?

ಮಿಡುಕದದು ಮಹಿಯಿಂದ ಭೀಮನ
ಕಡುಹು ನಿಮ್ದುದು ಬಾಲದಲಿ ತುದಿ
ನಡುಗದನಿಲಜನಂಗವಟ್ಟದ ಕಡುಹು ಕಂಪಿಸದು
ತೊಡಕೆ ಕೆಟ್ಟುದು ಕಾರ್ಯ ದುರ್ಬಲ
ನೊಡನೆ ಭಂಗವ್ಯಾಪ್ತಿ ತನ್ನನು
ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ (ಅರಣ್ಯ ಪರ್ವ, ೧೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಹನುಮನ ಬಾಲವು ಭೂಮಿಯಿಂದ ಒಂದು ಚೂರು ಅಲುಗಾಡಲಿಲ್ಲ. ಭೀಮನ ಶಕ್ತಿಯು ಅದರೆದುರು ನಿಂತು ಹೋಯಿತು. ಬಾಲದ ತುದಿಯೂ ನಡುಗಲಿಲ್ಲ. ಭೀಮನ ಸರ್ವಶಕ್ತಿಯ ಪ್ರಯೋಗವೂ ನಿಷ್ಫಲವಾಯಿತು. ಆಗ ಭೀಮನು ಕಾರ್ಯದಲ್ಲಿ ತೊಡಗಿ ಕೆಟ್ಟು ಹೋದೆ, ದುರ್ಬಲನ ಜೊತೆ ಹೋರಿ ಅವಮಾನಿತನಾದೆ, ಹೀಗೆ ಯತ್ನದಲ್ಲಿ ಸೋತ ನನ್ನನ್ನು ಸುಡಬೇಕು ಎಂದುಕೊಂಡು ಹಿಂದಕ್ಕೆ ಸರಿದು ತುಂಬ ತಳಮಳಗೊಂಡನು.

ಅರ್ಥ:
ಮಿಡುಕು: ಅಲುಗಾಟ, ಚಲನೆ; ಮಹಿ: ಭೂಮಿ; ಕಡುಹು: ಸಾಹಸ, ಹುರುಪು; ನಿಂದು: ನಿಲ್ಲು; ಬಾಲ: ಪುಚ್ಛ; ತುದಿ: ಅಗ್ರಭಾಗ; ನಡುಗು: ನಡುಕ, ಕಂಪನ; ಅನಿಲಜ: ವಾಯುಪುತ್ರ (ಭೀಮ); ಅಂಗವಟ್ಟ: ಶರೀರ; ಕಂಪಿಸು: ಅಲುಗಾಡು; ತೊಡಕು: ಗೋಜು, ಗೊಂದಲ; ಕೆಟ್ಟು: ಸರಿಯಿಲ್ಲದ; ಕಾರ್ಯ: ಕೆಲಸ; ದುರ್ಬಲ: ಶಕ್ತಿಹೀನ; ಭಂಗ: ಚೂರು, ಮುರಿಯುವಿಕೆ; ವ್ಯಾಪ್ತಿ: ಹರಹು; ಸುಡು: ದಹಿಸು; ಹಿಮ್ಮೆಟ್ಟು: ಹಿಂದೆಸರಿ; ಮಮ್ಮಲ: ಅತಿಶಯವಾಗಿ, ವಿಶೇಷವಾಗಿ; ಮರುಗು: ತಳಮಳ;

ಪದವಿಂಗಡಣೆ:
ಮಿಡುಕದದು +ಮಹಿಯಿಂದ +ಭೀಮನ
ಕಡುಹು +ನಿಂದುದು +ಬಾಲದಲಿ+ ತುದಿ
ನಡುಗದ್+ಅನಿಲಜನ್+ಅಂಗವಟ್ಟದ +ಕಡುಹು +ಕಂಪಿಸದು
ತೊಡಕೆ +ಕೆಟ್ಟುದು +ಕಾರ್ಯ +ದುರ್ಬಲ
ನೊಡನೆ +ಭಂಗವ್ಯಾಪ್ತಿ +ತನ್ನನು
ಸುಡಲೆನುತ +ಹಿಮ್ಮೆಟ್ಟಿ +ಮಮ್ಮಲ +ಮರುಗಿದನು +ಭೀಮ

ಅಚ್ಚರಿ:
(೧) ಭಿಮನು ಕೊರಗಿದ ಪರಿ – ತೊಡಕೆ ಕೆಟ್ಟುದು ಕಾರ್ಯ ದುರ್ಬಲ ನೊಡನೆ ಭಂಗವ್ಯಾಪ್ತಿ ತನ್ನನು ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ

ಪದ್ಯ ೨೦: ಭೀಮನು ಹೇಗೆ ಹನುಮನ ಬಾಲವನ್ನು ಎತ್ತಲು ಪ್ರಯತ್ನಿಸಿದನು?

ತೆಗೆದು ನಿಂದನು ಭೀಮ ಹೊಯ್ವ
ಳ್ಳೆಗಳ ತಲ್ಲಣವಡಗಲೊಳ ತಾ
ಳಿಗೆಗೆ ಕವಳವ ನೂಕಿದನು ಕರ್ಪುರದ ಹಳುಕುಗಳ
ಡಗೆ ಮರಳೆ ಮರುವಲಗೆ ಗೌಡೊ
ತ್ತುಗಳ ಬಲಿದವಯವದ ಸತ್ರಾ
ಣಿಗಳ ದೇವನು ಠಾವುರಿಯಲೊದಗಿದನು ಬಾಲದಲಿ (ಅರಣ್ಯ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭೀಮನು ಹಿಂದಕ್ಕೆ ಸರಿದು ತಾಂಬೂಲವನ್ನೂ, ಪಚ್ಚಕರ್ಪೂರವನ್ನೂ ಬಾಯಿಗೆ ಹಾಕಿಕೊಂಡು ತನ್ನಲ್ಲಾದ ತಲ್ಲಣವನ್ನು ಅಡಗಿಸಿಕೊಂಡನು. ಅವನಲ್ಲಿ ಧಗೆಯು ಮತ್ತೆ ಆವರಿಸಿತು. ಅವನು ಆವುಡೊತ್ತಿ ದೇಹವನ್ನು ಗಟ್ಟಿಮಾಡಿಕೊಂಡು ಠಾವುರಿಯಿಂದ ಬಾಲವನ್ನೆತ್ತಲು ಯತ್ನಿಸಿದನು.

ಅರ್ಥ:
ತೆಗೆ: ಹೊರತರು; ನಿಂದನು: ನಿಲ್ಲು; ಹೊಯ್ವಳ್ಳೆ: ತೇಕುತ್ತಿರುವ ಪಕ್ಕೆಗಳು; ತಲ್ಲಣ: ಅಂಜಿಕೆ, ಭಯ; ಅಡಗು: ಮುಚ್ಚು; ತಾಳಿಗೆ: ಗಂಟಲು; ಕವಳ: ಊಟ; ನೂಕು: ತಳ್ಳು; ಕರ್ಪುರ: ಹಳುಕು: ಚೂರು; ಡಗೆ: ಸೆಕೆ, ಕಾವು; ಮರಳು: ಹಿಂದಿರುಗು; ಮರು: ಮುಂದಿನ; ಗೌಡೊತ್ತು: ಜೋರಾಗಿ ಸರಿಸು; ಬಲಿದ: ಗಟ್ಟಿ; ಅವಯವ: ದೇಹದ ಒಂದು ಭಾಗ, ಅಂಗ; ಸತ್ರಾಣಿ: ಬಲಶಾಲಿ; ದೇವ: ಸುರ; ಠಾವುರಿ: ಒಂದು ಪಟ್ಟು; ಒದಗು: ಲಭ್ಯ, ದೊರೆತುದು; ಬಾಲ: ಪುಚ್ಛ;

ಪದವಿಂಗಡಣೆ:
ತೆಗೆದು+ ನಿಂದನು +ಭೀಮ +ಹೊಯ್ವ
ಳ್ಳೆಗಳ +ತಲ್ಲಣವ್+ಅಡಗಲ್+ಒಳ +ತಾ
ಳಿಗೆಗೆ +ಕವಳವ +ನೂಕಿದನು +ಕರ್ಪುರದ+ ಹಳುಕುಗಳ
ಡಗೆ+ ಮರಳೆ+ ಮರುವಲಗೆ+ ಗೌಡೊ
ತ್ತುಗಳ+ ಬಲಿದ್+ಅವಯವದ +ಸತ್ರಾ
ಣಿಗಳ +ದೇವನು +ಠಾವುರಿಯಲ್+ಒದಗಿದನು +ಬಾಲದಲಿ

ಅಚ್ಚರಿ:
(೧) ಭೀಮನನ್ನು ಸತ್ರಾಣಿಗಳ ದೇವನು ಎಂದು ಕರೆದಿರುವುದು
(೨) ತಿನ್ನುವುದನ್ನು ಚಿತ್ರಿಸಿರುವ ಪರಿ – ಭೀಮ ಹೊಯ್ವಳ್ಳೆಗಳ ತಲ್ಲಣವಡಗಲೊಳ ತಾ
ಳಿಗೆಗೆ ಕವಳವ ನೂಕಿದನು ಕರ್ಪುರದ ಹಳುಕುಗಳ

ಪದ್ಯ ೧೯: ಭೀಮನೇಕೆ ಆಶ್ಚರ್ಯಗೊಂಡನು?

ಐಸಲೇ ತಪ್ಪೇನೆನುತ ತನ
ಗೇಸು ಬಲುಹುಂಟೈಸರಲಿ ಕ
ಟ್ಟಾಸುರದಲೌಕಿದನು ಬಾಲವನೊದರಿ ಬೊಬ್ಬಿರಿದು
ಗಾಸಿಯಾದನು ಪವನಸುತನೆ
ಳ್ಳೈಸು ಮಿಡುಕದು ಬಾಲವೂರ್ದ್ವ
ಶ್ವಾಸಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ (ಅರಣ್ಯ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಭೀಮನು ಹನುಮನ ಕೋರಿಕೆಯನ್ನು ಕೇಳಿ, ಅಷ್ಟೇ ತಾನೆ, ಇದರಲ್ಲೇನು ತಪ್ಪು ಎಂದು ಹೇಳಿ ಭೀಮನು ತನಗೆಷ್ಟು ಸತ್ವವಿತ್ತೋ ಆ ಬಲವನ್ನೇಲ್ಲ ಒಟ್ಟುಗೂಡಿಸಿ ಜೋರಾಗಿ ಬೊಬ್ಬೆಯಿಡುತ್ತಾ ಬಾಲವನ್ನು ಅಲುಗಾಡಿಸಿದರೂ ಆ ಬಾಲವು ಒಂದು ಎಳ್ಳಿನಷ್ಟೂ ಅಲುಗಲಿಲ್ಲ. ಭೀಮನಿಗೆ ಮೇಲುಸಿರು ಬಂತು, ಆಶ್ಚರ್ಯಚಕಿತನಾಗಿ ಭೀಮನು ಬೆಂಡಾದನು.

ಅರ್ಥ:
ಐಸಲೇ: ಅಲ್ಲವೇ; ಏಸು: ಎಷ್ಟು; ಬಲ: ಶಕ್ತಿ; ಐಸರ್: ಅಷ್ಟರಲ್ಲಿ; ಕಟ್ಟಾಸುರ: ಅತ್ಯಂತ ಭಯಂಕರ; ಔಕು: ನೂಕು; ಬಾಲ: ಪುಚ್ಛ; ಒದರು: ಕೊಡಹು, ಜಾಡಿಸು; ಬೊಬ್ಬೆ: ಗರ್ಜಿಸು; ಗಾಸಿ: ತೊಂದರೆ, ಕಷ್ಟ; ಪವನಸುತ: ವಾಯುಪುತ್ರ (ಭೀಮ); ಎಳ್ಳೈಸು: ಎಳ್ಳಿನಷ್ಟು, ಸ್ವಲ್ಪವೂ; ಮಿಡುಕು: ಅಲ್ಲಾಡು; ಊರ್ಧ್ವ: ಮೇಲ್ಭಾಗ; ಶ್ವಾಸ: ಉಸಿರು; ಲಹರಿ: ರಭಸ, ಆವೇಗ; ಅಡಿಗಡಿಗೆ: ಮತ್ತೆ ಮತ್ತೆ; ಲಟಕಟಿಸು: ಉದ್ವೇಗ, ಆಶ್ಚರ್ಯ;

ಪದವಿಂಗಡಣೆ:
ಐಸಲೇ +ತಪ್ಪೇನ್+ಎನುತ +ತನಗ್
ಏಸು+ ಬಲುಹುಂಟ್+ಐಸರಲಿ +ಕ
ಟ್ಟಾಸುರದಲ್+ಔಕಿದನು +ಬಾಲವನ್+ಒದರಿ +ಬೊಬ್ಬಿರಿದು
ಗಾಸಿಯಾದನು+ ಪವನಸುತನ್
ಎಳ್ಳೈಸು +ಮಿಡುಕದು +ಬಾಲವ್+ಊರ್ದ್ವ
ಶ್ವಾಸ+ಲಹರಿಯಲ್+ಅಡಿಗಡಿಗೆ+ ಲಟಕಟಿಸಿದನು +ಭೀಮ

ಅಚ್ಚರಿ:
(೧) ಭೀಮನು ಆಯಾಸಗೊಂಡ ಪರಿ – ಊರ್ದ್ವಶ್ವಾಸಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ

ಪದ್ಯ ೧೮: ಹನುಮಂತನು ಭೀಮನಿಗೆ ಏನು ಮಾಡಲು ಹೇಳಿದನು?

ನೀವು ಬಲ್ಲಿದರಿದಕೆ ಸಂಶಯ
ವಾವುದಲ್ಲದೊಡೀಮದದ್ವಿಭ
ವೀ ವಿಹಗಕುಲವೀ ಮೃಗ ವ್ರಜವಂಜುವುದೆ ನಿಮಗೆ
ನಾವು ವೃದ್ಧರು ನಮ್ಮ ಬಾಲವ
ನಾವು ಹದುಳಿಸಲಾರೆವೀಗಳು
ನೀವು ತೊಲಗಿಸಿ ಬಿಜಯ ಮಾಡುವುದೆಂದನಾ ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಹನುಮಂತನು ಭೀಮನ ಮಾತುಗಳನ್ನು ಕೇಳಿ, ನಿಜ ನೀವು ಬಲಶಾಲಿಗಳು, ಇದಕ್ಕೇನು ಅನುಮಾನವಿಲ್ಲ, ಇಲ್ಲದಿದ್ದರೆ ಈ ಮದದಾನೆಗಳು, ಮೃಗ ಪಕ್ಷಿಗಳ ಸಂಕುಲವು ನಿಮಗೆ ಹೆದರುತ್ತಿದ್ದವೇ? ನಾವಾದರೋ ಮುದುಕರು, ನಮ್ಮ ಬಾಲವನ್ನು ವಶದಲ್ಲಿಟ್ಟುಕೊಳ್ಳಲು ಸಮರ್ಥರಲ್ಲ. ಆದುದರಿಂದ ನಮ್ಮ ಬಾಲವನ್ನು ಆಚೆಗೆ ಸರಿಸಿ ಮುಂದೆಸಾಗಿರಿ ಎಂದು ಭೀಮನಿಗೆ ಹನುಮನು ತಿಳಿಸಿದನು.

ಅರ್ಥ:
ಬಲ್ಲಿದ: ಬಲಿಷ್ಠ; ಸಂಶಯ: ಅನುಮಾನ, ಸಂದೇಹ; ಇಭ: ಆನೆ; ಮದ: ಅಮಲು, ಸೊಕ್ಕು; ವಿಹಗ: ಪಕ್ಷಿ; ಕುಲ: ವಂಶ; ಮೃಗ: ಪ್ರಾಣಿ; ವ್ರಜ: ಗುಂಪು; ಅಂಜು: ಹೆದರು; ವೃದ್ಧ: ಮುಪ್ಪು; ಬಾಲ: ಪುಚ್ಛ; ಹದುಳ: ಕ್ಷೇಮ, ಆರೋಗ್ಯ; ತೊಲಗಿಸು: ಹೋಗಲಾಡಿಸು; ಬಿಜಯಂಗೈ: ದಯಮಾಡಿಸು, ನಡೆ;

ಪದವಿಂಗಡಣೆ:
ನೀವು +ಬಲ್ಲಿದರ್+ಇದಕೆ +ಸಂಶಯ
ವಾವುದಲ್ಲದೊಡ್+ಈ+ಮದದ್+ಇಭವ್
ಈ+ ವಿಹಗಕುಲವ್+ಈ+ ಮೃಗ +ವ್ರಜವ್+ಅಂಜುವುದೆ +ನಿಮಗೆ
ನಾವು +ವೃದ್ಧರು +ನಮ್ಮ +ಬಾಲವ
ನಾವು +ಹದುಳಿಸಲಾರೆವ್+ಈಗಳು
ನೀವು +ತೊಲಗಿಸಿ+ ಬಿಜಯ+ ಮಾಡುವುದೆಂದನಾ+ ಹನುಮ

ಅಚ್ಚರಿ:
(೧) ಭೀಮನ ಪರಾಕ್ರಮದ ಪರಿಚಯ ಮಾಡುವ ಪರಿ – ನೀವು ಬಲ್ಲಿದರಿದಕೆ ಸಂಶಯ
ವಾವುದಲ್ಲದೊಡೀಮದದ್ವಿಭವೀ ವಿಹಗಕುಲವೀ ಮೃಗ ವ್ರಜವಂಜುವುದೆ ನಿಮಗೆ

ಪದ್ಯ ೧೭: ಭೀಮನು ಏನೆಂದು ಗರ್ಜಿಸಿದನು?

ಗದೆಯ ಮೊನೆಯಲಿ ನೂಕಿದನು ರೋ
ಮದಲಿ ಚಲಿಸದು ಬಾಲ ನೋಡಿದ
ನಿದು ವಿಚಿತ್ರವಲಾಯೆನುತ ನುಡಿಸಿದನು ಕಪಿವರನ
ಒದೆದಡದ್ರಿಗಳಳಿವವೆನ್ನಂ
ಗದಲಿ ನಾ ಬಲ್ಲಿದನು ಬಾಲದ
ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ (ಅರಣ್ಯ ಪರ್ವ, ೧೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನು ಹನುಮನ ಬಾಲವನ್ನು ಗದೆಯ ತುದಿಯಿಂದ ನೂಕಿದನು, ಅವನ ಆಶ್ಚರ್ಯಕ್ಕೆ ಬಾಲದ ಕೂದಲೂ ಸಹ ಅಲ್ಲಾಡಲಿಲ್ಲ, ಈ ವಿಚಿತ್ರವನ್ನು ಕಂಡು ಬೆರಗಾಗಿ, ನಾನು ಕಾಲಿನಿಂದ ಒದೆದರೆ ಬೆಟ್ಟಗಳು ನಾಶವಾಗುತ್ತವೆ, ನಾನು ಮಹಾ ಬಲಶಾಲಿ, ನಿನ್ನ ಬಾಲವನ್ನು ದಾರಿಯಿಂದ ಎಳೆದುಕೋ ಎಂದು ಹನುಮನಿಗೆ ಹೇಳಿದನು.

ಅರ್ಥ:
ಗದೆ: ಮುದ್ಗರ; ಮೊನೆ: ತುದಿ; ನೂಕು: ತಳ್ಳು; ರೋಮ: ಕೂದಲು; ಚಲಿಸು: ಅಲ್ಲಾಡು; ಬಾಲ: ಪುಚ್ಛ; ನೋಡು: ವೀಕ್ಷಿಸು; ವಿಚಿತ್ರ: ಆಶ್ಚರ್ಯ; ನುಡಿಸು: ಮಾತನಾಡಿಸು; ಕಪಿ: ಹನುಮ; ಒದೆ: ಕಾಲಿನಿಂದ ಹೊಡೆ, ನೂಕು; ಅದ್ರಿ: ಬೆಟ್ಟ; ಅಳಿ: ನಾಶ; ಅಂಗ: ದೇಹದ ಭಾಗ; ಬಲ್ಲಿದ: ಬಲಿಷ್ಠ; ಕದ: ಬಾಗಿಲು; ತೆಗೆ: ಈಚೆಗೆ ತರು, ಹೊರತರು; ಬಟ್ಟೆ: ಹಾದಿ, ಮಾರ್ಗ; ಗರ್ಜಿಸು: ಜೋರಾಗಿ ಕೂಗು;

ಪದವಿಂಗಡಣೆ:
ಗದೆಯ +ಮೊನೆಯಲಿ +ನೂಕಿದನು +ರೋ
ಮದಲಿ +ಚಲಿಸದು +ಬಾಲ +ನೋಡಿದನ್
ಇದು +ವಿಚಿತ್ರವಲಾ+ಎನುತ +ನುಡಿಸಿದನು +ಕಪಿವರನ
ಒದೆದಡ್+ಅದ್ರಿಗಳ್+ಅಳಿವವ್+ಎನ್ನಂ
ಗದಲಿ+ ನಾ +ಬಲ್ಲಿದನು+ ಬಾಲದ
ಕದವ +ತೆಗೆ +ಬಟ್ಟೆಯಲೆನುತ +ಗರ್ಜಿಸಿದನಾ +ಭೀಮ

ಅಚ್ಚರಿ:
(೧) ಬಾಲವನ್ನು ತೆಗೆ ಎಂದು ಹೇಳುವ ಪರಿ – ಬಾಲದ ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ

ಪದ್ಯ ೧೬: ಭೀಮನ ಮಾರ್ಗವನ್ನು ಯಾರು ನಿಲ್ಲಿಸಿದರು?

ನಾವು ಮರ್ತ್ಯರು ದೂರದಲಿ ರಾ
ಜೀವಗಂಧ ಸಮೀರಣನ ಸಂ
ಭಾವನೆಗೆ ಸೊಗಸಿದಳು ಸತಿಯಾಕೆಯ ಮನೋರಥದ
ತಾವರೆಯ ತಹೆನೆನುತ ಸಿಂಹಾ
ರಾವದಲಿ ವಿಕ್ರಮಿಸೆ ವಿಗಡನ
ಡಾವರವ ಬಲು ಬಾಲ ತಡೆದುದು ಪವನಜನ ಪಥವ (ಅರಣ್ಯ ಪರ್ವ, ೧೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಭೀಮನು ಹನುಮನಿಗೆ ಉತ್ತರಿಸುತ್ತಾ, ನಾವು ಮನುಷ್ಯರು, ದೂರದಿಂದ ಬೀಸುವ ಕಮಲಗಂಧದ ಸೊಗಸನ್ನು ನನ್ನ ಪತ್ನಿಯು ಇಷ್ಟಪಟ್ಟಳು. ಆ ಪುಷ್ಪವನ್ನು ನೋಡಬೇಕೆಂದು ಬಯಸಿದಳು. ಅವಳ ಮನೋರಥವನ್ನು ಪೂರೈಸಲು ಹೊರಟಿದ್ದೇನೆ, ಎಂದು ಹೇಳಿ ಮುಂದುವರೆಯಲು ಅವನ ಗಮನವನ್ನು ಹನುಮಂತನ ಬಾಲವು ತಡೆಯಿತು.

ಅರ್ಥ:
ಮರ್ತ್ಯ: ಮನುಷ್ಯ; ದೂರ: ಅಂತರ; ರಾಜೀವ: ಕಮಲ; ಗಂಧ: ಪರಿಮಳ; ಸಮೀರ: ವಾಯು; ಸಂಭಾವನೆ: ಮನ್ನಣೆ, ಅಭಿಪ್ರಾಯ; ಸೊಗಸು: ಚೆಲುವು; ಸತಿ: ಹೆಂಡತಿ; ಮನೋರಥ: ಇಚ್ಛೆ; ತಾವರೆ: ಕಮಲ; ತಹೆ: ತಂದುಕೊಡು; ಸಿಂಹಾರವ: ಗರ್ಜನೆ; ವಿಕ್ರಮ: ಗತಿ, ಗಮನ, ಹೆಜ್ಜೆ; ವಿಗಡ: ಶೌರ್ಯ, ಪರಾಕ್ರಮ; ಡಾವರ: ತೀವ್ರತೆ, ರಭಸ; ಬಲು: ದೊಡ್ಡ; ಬಾಲ: ಪುಚ್ಛ; ತಡೆ: ನಿಲ್ಲಿಸು; ಪವನಜ: ವಾಯುಪುತ್ರ; ಪಥ: ಮಾರ್ಗ;

ಪದವಿಂಗಡಣೆ:
ನಾವು +ಮರ್ತ್ಯರು +ದೂರದಲಿ+ ರಾ
ಜೀವ+ಗಂಧ +ಸಮೀರಣನ +ಸಂ
ಭಾವನೆಗೆ +ಸೊಗಸಿದಳು +ಸತಿ+ಆಕೆಯ +ಮನೋರಥದ
ತಾವರೆಯ +ತಹೆನೆನುತ+ ಸಿಂಹಾ
ರಾವದಲಿ +ವಿಕ್ರಮಿಸೆ+ ವಿಗಡನ
ಡಾವರವ+ ಬಲು+ ಬಾಲ+ ತಡೆದುದು+ ಪವನಜನ +ಪಥವ

ಅಚ್ಚರಿ:
(೧) ರಾಜೀವ, ತಾವರೆ – ಸಮನಾರ್ಥಕ ಪದ
(೨) ಸ ಕಾರದ ಸಾಲು ಪದ – ಸಮೀರಣನ ಸಂಭಾವನೆಗೆ ಸೊಗಸಿದಳು ಸತಿ