ಪದ್ಯ ೬: ಬೃಹದಶ್ವನು ಯಾರ ಕಥೆಯನ್ನು ಹೇಳಲು ಪ್ರಾರಂಭಿಸಿದನು?

ಆತನೀತನ ಸಂತವಿಟ್ಟು
ದ್ಯೂತದಲಿ ನಳಚಕ್ರವರ್ತಿ ಮ
ಹೀತಳವ ಸೋತನು ಕಣಾ ಕಲಿಯಿಂದ ಪುಷ್ಕರಗೆ
ಭೂತಳವ ಬಿಸುಟಡವಿಗೈದಿದ
ನಾತ ನಿಜವಧು ಸಹಿತ ವನದಲಿ
ಕಾತರಿಸಿ ನಿಜಸತಿಯ ಬಿಸುಟನು ಹಾಯ್ದನಡವಿಯಲಿ (ಅರಣ್ಯ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಬೃಹದಶ್ವನು ಧರ್ಮಜನನ್ನು ಸಂತೈಸಿ ಅವನಿಗೆ ನಳನ ಕಥೆಯನ್ನು ಹೇಳಿದನು. ನಳ ಚಕ್ರವರ್ತಿಯು ಕಲಿಯ ದೆಸೆಯಿಂದ ಪುಷ್ಕರನಿಗೆ ರಾಜ್ಯವನ್ನು ಸೋತು, ಪತ್ನಿಯಾದ ದಮಯಂತಿಯೊಂದಿಗೆ ಕಾಡಿಗೆ ಹೋಗಿ, ಕಾಡಿನಲ್ಲಿ ಅವಳೊಬ್ಬಳನ್ನೇ ತ್ಯಜಿಸಿದನು.

ಅರ್ಥ:
ಸಂತವಿಡು: ಸಂತೈಸು; ದ್ಯೂತ: ಪಗಡೆಯಾಟ; ಚಕ್ರವರ್ತಿ: ರಾಜ; ಮಹೀತಳ: ಭೂಮಿ; ಸೋತು: ಪರಾಭವ; ಭೂತಳ: ಭೂಮಿ; ಬಿಸುಟು: ತ್ಯಜಿಸು, ಹೊರಹಾಕು; ಅಡವಿ: ಅರಣ್ಯ; ವಧು: ಹೆಂಡತಿ, ಹೆಣ್ಣು; ಸಹಿತ; ಜೊತೆ; ವನ: ಕಾಡು; ಕಾತರ: ಕಳವಳ; ಸತಿ: ಹೆಂಡತಿ; ಬಿಸುಟು: ಹೊರಹಾಕು; ಹಾಯ್ದು: ಮೇಲೆಬಿದ್ದು; ಅಡವಿ: ಕಾಡು;

ಪದವಿಂಗಡಣೆ:
ಆತನ್+ಈತನ +ಸಂತವಿಟ್ಟು
ದ್ಯೂತದಲಿ +ನಳ+ಚಕ್ರವರ್ತಿ +ಮ
ಹೀತಳವ +ಸೋತನು +ಕಣಾ +ಕಲಿಯಿಂದ +ಪುಷ್ಕರಗೆ
ಭೂತಳವ +ಬಿಸುಟ್+ಅಡವಿಗೈದಿದನ್
ಆತ +ನಿಜವಧು +ಸಹಿತ +ವನದಲಿ
ಕಾತರಿಸಿ +ನಿಜಸತಿಯ +ಬಿಸುಟನು +ಹಾಯ್ದನ್+ಅಡವಿಯಲಿ

ಅಚ್ಚರಿ:
(೧) ವಧು, ಸತಿ; ಅಡವಿ, ವನ; ಮಹೀತಳ, ಭೂತಳ – ಸಮನಾರ್ಥಕ ಪದ

ಪದ್ಯ ೫: ಧರ್ಮಜನು ಯಾರೊಂದಿಗೆ ತನ್ನ ದುಃಖದ ಸಂಗತಿಯನ್ನು ಹೇಳಿಕೊಂಡನು?

ವರಪುಲಸ್ತ್ಯ ಮುನೀಂದ್ರ ಭೀಷ್ಮಂ
ಗರುಹಿದುತ್ತಮ ತೀರ್ಥವನು ವಿ
ಸ್ತರಿಸಿದನು ಲೋಮಶ ಮುನೀಶ್ವರನವನಿಪಾಲಂಗೆ
ಧರಣಿಪತಿ ಬೃಹದಶ್ವನನು ಸ
ತ್ಕರಿಸಿ ನಿಜರಾಜ್ಯಾಪಹಾರದ
ಪರಮ ದುಃಖ ಪರಂಪರೆಯನರುಹಿದನು ಖೇದದಲಿ (ಅರಣ್ಯ ಪರ್ವ, ೧೦ ಸಂಧಿ, ೫ ಪದ್ಯ)

ತಾತ್ಪರ್ಯ:
ಪುಲಸ್ತ್ಯ ಮುನಿಗಳು ಭೀಷ್ಮನಿಗೆ ತಿಳಿಸಿದ ಪುಷ್ಕರಾದಿ ತೀರ್ಥಗಳ ಮಹಿಮೆಯನ್ನು ಲೋಮಶನು ಧರ್ಮಜನಿಗೆ ತಿಳಿಸಿದನು. ಆಗ ಬೃಹದಶ್ವನೆಂಬ ಮಹರ್ಷಿಯು ಬರಲು ಧರ್ಮರಾಜನು ಅವನ್ನ್

ಅರ್ಥ:
ವರ: ಶ್ರೇಷ್ಠ; ಮುನೀಂದ್ರ: ಋಷಿವರ್ಯ; ಅರುಹು: ತಿಳಿಸು; ಉತ್ತಮ: ಶ್ರೇಷ್ಠ; ತೀರ್ಥ: ಪುಣ್ಯಕ್ಷೇತ್ರ; ವಿಸ್ತರ: ಹಬ್ಬುಗೆ, ವಿಸ್ತಾರ, ವ್ಯಾಪ್ತಿ; ಮುನಿ: ಋಷಿ; ಅವನಿ: ಭೂಮಿ; ಅವನಿಪಾಲ: ರಾಜ; ಧರಣಿಪತಿ: ರಾಜ; ಸತ್ಕರಿಸು: ಗೌರವಿಸು; ರಾಜ್ಯ: ರಾಷ್ಟ್ರ,ದೇಶ; ಅಪಹಾರ: ಕಿತ್ತುಕೊಳ್ಳುವುದು; ಪರಮ: ಶ್ರೇಷ್ಠ; ದುಃಖ: ನೋವು, ದುಗುಡ; ಪರಂಪರೆ: ಒಂದರ ನಂತರ ಮತ್ತೊಂದು ಬರುವುದು, ಸಾಲು; ಖೇದ: ದುಃಖ;

ಪದವಿಂಗಡಣೆ:
ವರಪುಲಸ್ತ್ಯ +ಮುನೀಂದ್ರ +ಭೀಷ್ಮಂಗ್
ಅರುಹಿದ್+ಉತ್ತಮ +ತೀರ್ಥವನು+ ವಿ
ಸ್ತರಿಸಿದನು +ಲೋಮಶ +ಮುನೀಶ್ವರನ್+ಅವನಿಪಾಲಂಗೆ
ಧರಣಿಪತಿ +ಬೃಹದಶ್ವನನು +ಸ
ತ್ಕರಿಸಿ +ನಿಜ+ರಾಜ್ಯ+ಅಪಹಾರದ
ಪರಮ +ದುಃಖ +ಪರಂಪರೆಯನ್+ಅರುಹಿದನು +ಖೇದದಲಿ

ಅಚ್ಚರಿ:
(೧) ದುಃಖ, ಖೇದ; ವರ, ಉತ್ತಮ, ಪರಮ; ಮುನೀಂದ್ರ, ಮುನೀಶ್ವರ; ಧರಣಿಪತಿ, ಅವನಿಪಾಲ – ಸಮನಾರ್ಥಕ ಪದಗಳು

ಪದ್ಯ ೪: ಧರ್ಮಜನು ಯಾವ ಯಾತ್ರೆಯನ್ನು ಕೈಗೊಂಡನು?

ನುಡಿನುಡಿಗೆ ಸುಕ್ಷೇಮ ಕುಶಲವ
ನಡಿಗಡಿಗೆ ಬೆಸಗೊಂಡ ಪುಳಕದ
ಗುಡಿಯಬೀಡಿನ ರೋಮ ಪುಳಕದ ಪೂರ್ಣ ಹರುಷದಲಿ
ಪೊಡವಿಯಧಿಪತಿ ಬಳಿಕ ತೊಳಲಿದ
ನಡವಿಯಡವಿಯ ತೀರ್ಥಯಾತ್ರೆಗೆ
ಮಡದಿ ನಿಜಪರಿವಾರವವನೀದೇವಕುಲ ಸಹಿತ (ಅರಣ್ಯ ಪರ್ವ, ೧೦ ಸಂಧಿ, ೪ ಪದ್ಯ)

ತಾತ್ಪರ್ಯ:
ಧರ್ಮರಾಯನು ಮತ್ತೆ ಮತ್ತೆ ಅರ್ಜುನನ ಕ್ಷೇಮ ಕುಶಲಗಳನ್ನು ವಿಚಾರಿಸಿ ರೋಮಾಂಚನಗೊಂಡನು. ಅತೀವ ಸಂತೋಷ ಭರಿತನಾದನು, ಪುಳಕಜಲವು ಹರಿಯಲಾರಂಭಿಸಿತು, ತನ್ನ ಪರಿವಾರದವರು ಮತ್ತು ಬ್ರಾಹ್ಮಣರೊಡನೆ ಧರ್ಮಜನು ವನವನಗಳಲ್ಲಿ ತೊಳಲುತ್ತಾ ತೀರ್ಥಯಾತ್ರೆಯನ್ನು ಮಾಡಿದನು.

ಅರ್ಥ:
ನುಡಿ: ಮಾತು; ಕ್ಷೇಮ: ನೆಮ್ಮದಿ, ಸುಖ; ಕುಶಲ: ಕ್ಷೇಮ; ಅಡಿಗಡಿಗೆ: ಮತ್ತೆ ಮತ್ತೆ; ಬೆಸಗೊಳ್: ಕೇಳು; ಪುಳಕ: ರೋಮಾಂಚನ; ಗುಡಿಕಟ್ಟು: ಸಂತೋಷಗೊಳ್ಳು; ರೋಮ: ಕೂದಲು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಪೂರ್ಣ: ತುಂಬ; ಹರುಷ: ಸಂತೋಷ; ಪೊಡವಿ: ಪೃಥ್ವಿ, ಭೂಮಿ; ಅಧಿಪತಿ: ಒಡೆಯ; ಬಳಿಕ: ನಂತರ; ತೊಳಲು: ಅಲೆದಾಡು, ತಿರುಗಾಡು; ಅಡವಿ: ಕಾಡು; ತೀರ್ಥಯಾತ್ರೆ: ಪವಿತ್ರ ಸ್ಥಳಗಳ ದರ್ಶನಕ್ಕಾಗಿ ಮಾಡುವ ಯಾತ್ರೆ; ಮಡದಿ: ಹೆಂಡತಿ; ಪರಿವಾರ: ಸುತ್ತಲಿನವರು, ಪರಿಜನ; ಅವನೀದೇವ: ಬ್ರಾಹ್ಮಣ; ಕುಲ: ವಂಶ; ಸಹಿತ: ಜೊತೆ;

ಪದವಿಂಗಡಣೆ:
ನುಡಿನುಡಿಗೆ +ಸುಕ್ಷೇಮ +ಕುಶಲವನ್
ಅಡಿಗಡಿಗೆ +ಬೆಸಗೊಂಡ +ಪುಳಕದ
ಗುಡಿಯಬೀಡಿನ+ ರೋಮ +ಪುಳಕದ+ ಪೂರ್ಣ +ಹರುಷದಲಿ
ಪೊಡವಿ+ಅಧಿಪತಿ+ ಬಳಿಕ+ ತೊಳಲಿದನ್
ಅಡವಿ+ಅಡವಿಯ +ತೀರ್ಥಯಾತ್ರೆಗೆ
ಮಡದಿ +ನಿಜಪರಿವಾರವ್+ಅವನೀದೇವ+ಕುಲ ಸಹಿತ

ಅಚ್ಚರಿ:
(೧) ಬ್ರಾಹ್ಮಣ ಎಂದು ಹೇಳಲು ಅವನೀದೇವ ಪದದ ಬಳಕೆ
(೨) ಸಂತೋಷಗೊಂಡ ಎಂದು ತಿಳಿಸಲು – ಪುಳಕದ ಗುಡಿಯಬೀಡಿನ ರೋಮ ಪುಳಕದ ಪೂರ್ಣ ಹರುಷದಲಿ
(೩) ರಾಜನೆಂದು ಹೇಳಲು – ಪೊಡವಿಯಧಿಪತಿ
(೪) ಜೋಡಿ ಪದಗಳು: ಅಡಿಗಡಿ, ಅಡವಿಯಡವಿ, ನುಡಿನುಡಿ

ಪದ್ಯ ೩: ಲೋಮಶನನ್ನು ಹೇಗೆ ಸ್ವಾಗತಿಸಲಾಯಿತು?

ಈತನಿದಿರೆದ್ದರ್ಘ್ಯಪಾದ್ಯವ
ನಾ ತಪೋನಿಧಿಗಿತ್ತು ಬಹಳ
ಪ್ರೀತಿಯಲಿ ಬೆಸಗೊಂಡನವರಾಗಮನ ಸಂಗತಿಯ
ಆತನಮಳ ಸ್ವರ್ಗಸದನ ಸು
ಖಾತಿಶಯವನು ಹೇಳಿದನು ಪುರು
ಹೂತ ಭವನದಲರ್ಜುನನ ವಾರ್ತೆಯನು ವಿವರಿಸಿದ (ಅರಣ್ಯ ಪರ್ವ, ೧೦ ಸಂಧಿ, ೩ ಪದ್ಯ)

ತಾತ್ಪರ್ಯ:
ಧರ್ಮಜನು ಲೋಮಶನನ್ನು ಎದುರುಗೊಂಡು ಅಮರಾವತಿಯ ವಿದ್ಯಮಾನಗಳೇನೆಂದು ಕೇಳಿದನು, ಸ್ವರ್ಗದ ಸಂತೋಷಾತಿಶಯವನ್ನೂ ಅರ್ಜುನನು ದೇವೇಂದ್ರ ಭವನದಲ್ಲಿದ್ದ ವಾರ್ತೆಯನ್ನು ಲೋಮಶನು ತಿಳಿಸಿದನು.

ಅರ್ಥ:
ಅರ್ಘ್ಯ: ದೇವತೆಗಳಿಗೂ ಪೂಜ್ಯರಿಗೂ ಕೈತೊಳೆಯಲು ಕೊಡುವ ನೀರು; ಪಾದ್ಯ: ಕಾಲು ತೊಳೆಯುವ ನೀರು; ತಪೋನಿಧಿ: ಮುನಿ; ಬಹಳ: ತುಂಬ; ಪ್ರೀತಿ: ಒಲವು; ಬೆಸಗೊಳ್: ಕೇಳು;
ಆಗಮನ: ಬರುವಿಕೆ; ಸಂಗತಿ: ವಿಚಾರ; ಅಮಳ: ನಿರ್ಮಲ; ಸ್ವರ್ಗ: ನಾಕ; ಸದನ; ಆಲಯ; ಸುಖ: ಸಮಾಧಾನ, ಸಂತಸ; ಅತಿಶಯ: ಹೆಚ್ಚಳ; ಹೇಳು: ತಿಳಿಸು; ಪುರುಹೂತ: ಇಂದ್ರ; ಭವನ: ಆಲಯ; ವಾರ್ತೆ: ವಿಚಾರ, ವಿಷಯ; ವಿವರಿಸು: ತಿಳಿಸು;

ಪದವಿಂಗಡಣೆ:
ಈತನ್+ಇದಿರೆದ್+ಅರ್ಘ್ಯ+ಪಾದ್ಯವನ್
ಆ+ ತಪೋನಿಧಿಗಿತ್ತು +ಬಹಳ
ಪ್ರೀತಿಯಲಿ +ಬೆಸಗೊಂಡನ್+ಅವರ್+ಆಗಮನ +ಸಂಗತಿಯ
ಆತನ್+ಅಮಳ +ಸ್ವರ್ಗ+ಸದನ +ಸುಖ
ಅತಿಶಯವನು +ಹೇಳಿದನು +ಪುರು
ಹೂತ +ಭವನದಲ್+ಅರ್ಜುನನ +ವಾರ್ತೆಯನು +ವಿವರಿಸಿದ

ಅಚ್ಚರಿ:
(೧) ಲೋಮಶ ಮುನಿಗಳನ್ನು ತಪೋನಿಧಿ ಎಂದು ಕರೆದಿರುವುದು
(೨) ಇಂದ್ರನನ್ನು ಕರೆದ ಪರಿ – ಪುರುಹೂತ

ಪದ್ಯ ೨: ಧರ್ಮರಾಜನನ್ನು ನೋಡಲು ಯಾರು ಬಂದರು?

ಕಳುಹಿದನು ಲೋಮಶನನವನೀ
ತಳಕೆ ಸುರಪತಿ ಸಿತಹಯನ ಕೌ
ಶಲವನೊಡಹುಟ್ಟಿದರಿಗರುಹಲಿಕಭ್ರಮಾರ್ಗದಲಿ
ಇಳಿದನಾ ಮುನಿಪತಿ ಧರಿತ್ರೀ
ತಳಕೆ ಕಾಮ್ಯಕನಾಮ ವನದಲಿ
ತಳಿರಗೂಡಾರದಲಿ ಕಂಡನು ಧರ್ಮನಂದನನ (ಅರಣ್ಯ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ದೇವಲೋಕಕ್ಕೆ ಹೋಗಿದ್ದ ಲೋಮಶ ಮಹರ್ಷಿಗೆ ಅರ್ಜುನನ ವಿಜಯವನ್ನು ಧರ್ಮಜನಿಗೆ ತಿಳಿಸಲು ದೇವೇಂದ್ರನು ಧರ್ಮರಾಜನ ಬಳಿಗೆ ಕಳುಹಿಸಿದನು. ಲೋಮಶನು ಆಕಾಶಮಾರ್ಗವಾಗಿ ಕಾಮಾಕ್ಯವನದಲ್ಲಿ ಇಳಿದು ಪರ್ಣಕುಟೀರದಲ್ಲಿದ್ದ ಧರ್ಮರಾಜನನ್ನು ಕಂಡನು.

ಅರ್ಥ:
ಕಳುಹು: ತೆರಳು; ತಳ: ಕೆಳಗು, ಪಾತಾಳ; ಸುರಪತಿ: ಇಂದ್ರ; ಸಿತಹಯ: ಬಿಳಿಯ ಕುದುರೆ; ಕೌಶಲ: ಚದುರು; ಒಡಹುಟ್ಟು: ಜೊತೆಗೆ ಜನ್ಮತಾಳು; ಅರುಹು: ಹೇಳು; ಅಭ್ರ: ಆಗಸ; ಮಾರ್ಗ: ದಾರಿ; ಇಳಿ: ಕೆಳಗೆ ಬಾ; ಮುನಿ: ಋಷಿ; ಪತಿ: ಒಡೆಯ; ಧರಿತ್ರೀ: ಭೂಮಿ; ವನ: ಕಾಡು; ನಾಮ: ಹೆಸರು; ತಳಿರಗೂಡು: ಪರ್ಣಕುಟೀರ; ಕಂಡು: ನೋಡು; ನಂದನ: ಮಗ; ಅವನೀ: ಭೂಮಿ;

ಪದವಿಂಗಡಣೆ:
ಕಳುಹಿದನು +ಲೋಮಶನನ್+ಅವನೀ
ತಳಕೆ+ ಸುರಪತಿ +ಸಿತಹಯನ +ಕೌ
ಶಲವನ್+ಒಡಹುಟ್ಟಿದರಿಗ್+ಅರುಹಲಿಕ್+ಅಭ್ರ+ಮಾರ್ಗದಲಿ
ಇಳಿದನಾ+ ಮುನಿಪತಿ+ ಧರಿತ್ರೀ
ತಳಕೆ +ಕಾಮ್ಯಕನಾಮ+ ವನದಲಿ
ತಳಿರಗೂಡಾರದಲಿ+ ಕಂಡನು +ಧರ್ಮನಂದನನ

ಅಚ್ಚರಿ:
(೧) ಅವನೀತಳ, ಧರಿತ್ರೀತಳ – ಭೂಮಿಯನ್ನು ಕರೆದ ಪರಿ
(೨) ಅರ್ಜುನನನ್ನು ಕರೆದ ಪರಿ – ಸಿತಹಯನ
(೩) ಮುನಿಪತಿ, ಸುರಪತಿ – ಪ್ರಾಸ ಪದಗಳು