ಪದ್ಯ ೨೩: ಹಾರವೇಕೈ ಕಂಗಳಿ ಎಂದು ಕೃಷ್ಣನು ಅರ್ಜುನನನ್ನು ಏಕೆ ಕೇಳಿದನು?

ತೇರಿನಲಿ ಚಾಚಿದನು ಮೆಲ್ಲನೆ
ಭಾರಿ ಧನುವನು ಕಯ್ಯ ಕಣೆಗಳ
ನೋರೆಯಲಿ ಸೈತಿರಿಸೆ ಕಂಡನು ಮತ್ತೆ ಮುರವೈರಿ
ಹಾರವೇಕೈ ಕಂಗಳಲಿ ಕ
ಸ್ತೂರಿಯೇಕೈ ಕದಪಿನಲಿ ಶೃಂ
ಗಾರವಿದು ವಿಪರೀತವೇನೈ ಪಾರ್ಥ ಹೇಳೆಂದ (ಕರ್ಣ ಪರ್ವ, ೨೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಕೈಯಲ್ಲಿದ್ದ ಗಾಂಡೀವವನ್ನು ರಥದಲ್ಲಿ ಮೆಲ್ಲನೆ ಇಟ್ಟನು. ಕೈಯಲ್ಲಿದ್ದ ಬಾಣಗಳನ್ನು ಪಕ್ಕಕ್ಕಿಟ್ಟನು. ಇದನ್ನು ನೋಡಿದ ಕೃಷ್ಣನು ಅರ್ಜುನ ಇದೇನಿದು, ಕಣ್ಣಿನಲ್ಲಿ ಹಾರವನ್ನು ಕೆನ್ನೆಯ ಮೇಲೆ ಕಸ್ತೂರಿಯನ್ನು ಏಕೆ ಧರಿಸಿದೆ? ನಿನ್ನ ಅಲಂಕಾರ ತಿರುಮುರುವಾಯಿತು ಎಂದನು.

ಅರ್ಥ:
ತೇರು: ರಥ, ಬಂಡಿ; ಚಾಚು: ಹರಡು; ಮೆಲ್ಲನೆ: ನಿಧಾನವಾಗಿ; ಭಾರಿ: ದೊಡ್ಡ; ಧನು: ಬಿಲ್ಲು; ಕಯ್ಯ: ಹಸ್ತ; ಕಣೆ: ಬಾಣ; ಓರೆ: ವಕ್ರ, ಡೊಂಕು; ಸೈತು: ಸುಮ್ಮನೆ, ಮೌನವಾಗಿ, ನೇರವಾದುದು; ಕಂಡು: ನೋಡು; ಮುರವೈರಿ: ಕೃಷ್ಣ; ಹಾರ: ಮಾಲೆ; ಕಂಗಳು: ಕಣ್ಣು, ನಯನ; ಕಸ್ತೂರಿ: ಸುಗಂಧ ದ್ರವ್ಯ; ಕದಪು: ಕೆನ್ನೆ; ಶೃಂಗಾರ: ಅಲಂಕಾರ, ಭೂಷಣ; ವಿಪರೀತ:ವಿರುದ್ಧವಾದ; ಹೇಳು: ತಿಳಿಸು;

ಪದವಿಂಗಡಣೆ:
ತೇರಿನಲಿ +ಚಾಚಿದನು +ಮೆಲ್ಲನೆ
ಭಾರಿ +ಧನುವನು +ಕಯ್ಯ +ಕಣೆಗಳನ್
ಓರೆಯಲಿ +ಸೈತಿರಿಸೆ +ಕಂಡನು +ಮತ್ತೆ +ಮುರವೈರಿ
ಹಾರವೇಕೈ+ ಕಂಗಳಲಿ+ ಕ
ಸ್ತೂರಿ+ಏಕೈ+ ಕದಪಿನಲಿ +ಶೃಂ
ಗಾರವಿದು +ವಿಪರೀತ+ಏನೈ +ಪಾರ್ಥ +ಹೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಾರವೇಕೈ ಕಂಗಳಲಿ ಕಸ್ತೂರಿಯೇಕೈ ಕದಪಿನಲಿ ಶೃಂಗಾರವಿದು ವಿಪರೀತವೇನೈ ಪಾರ್ಥ ಹೇಳೆಂದ

ಪದ್ಯ ೨೨: ಅರ್ಜುನನ ಮನಸ್ಸಿನಲ್ಲಿ ಯಾವ ಭಾವನೆ ಮೂಡಿತು?

ಮುಕ್ಕಿದನು ಮಹಿಮೆಯನು ಕಂಗಳು
ಮುಕ್ಕುಳಿಸಿದವು ನೀರನಹಿತನೊ
ಳುಕ್ಕುವನುರಾಗದಲಿ ಕೊಂಡನು ಬಳಿಕ ವೀಳೆಯವ
ಸಿಕ್ಕಿದನು ಕರುಣಾಲತಾಂಗಿಯ
ತೆಕ್ಕೆಯಲಿ ನಾನೇನ ಹೇಳುವೆ
ನೊಕ್ಕಲಿಕ್ಕಿತು ಶೋಕವರ್ಜುನನಂತರಂಗದಲಿ (ಕರ್ಣ ಪರ್ವ, ೨೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅರ್ಜುನನು ತಾನು ವೀರನೆಂಬ ಹಿರಿಮೆಯನ್ನು ಮರೆತು ಕಣ್ಣೀರಿಟ್ಟನು. ಶತ್ರುವಿನಲ್ಲಿ ಉದಿಸಿದ ಅತಿಶಯ ಪ್ರೀತಿಯಿಂದ ಕರುಣೆಯೆಂಬ ಹೆಣ್ಣಿನಿಂದ ತಾಂಬೂಲವನ್ನು ಸ್ವೀಕರಿಸಿ ಆಲಿಂಗಿತನಾದನು. ಶೋಕವು ಅವನ ಮನಸ್ಸಿನಲ್ಲಿ ನೆಲೆಮಾಡಿತು.

ಅರ್ಥ:
ಮುಕ್ಕು: ನಾಶಮಾಡು; ಮಹಿಮೆ: ವೈಶಿಷ್ಟ್ಯ, ಶ್ರೇಷ್ಠತೆ; ಕಂಗಳು: ನಯನ; ಮುಕ್ಕುಳಿಸು: ಹೊರಹಾಕು; ಅಹಿತ:ವೈರಿ, ಶತ್ರು; ಉಕ್ಕು: ಹಿಗ್ಗು; ಅನುರಾಗ: ಪ್ರೀತಿ; ಕೊಂಡು: ಪಡೆದು ಬಳಿಕ: ನಂತರ; ವೀಳೆ: ತಾಂಬೂಲ; ತೆಕ್ಕೆ; ಅಪ್ಪುಗೆ, ಆಲಿಂಗನ; ಹೇಳು: ತಿಳಿಸು; ಒಕ್ಕಲಿಕ್ಕು: ನೆಲಸು, ಬೀಡುಬಿಡು; ಶೋಕ: ದುಃಖ; ಅಂತರಂಗ: ಆಂತರ್ಯ, ಮನಸ್ಸು;

ಪದವಿಂಗಡಣೆ:
ಮುಕ್ಕಿದನು +ಮಹಿಮೆಯನು +ಕಂಗಳು
ಮುಕ್ಕುಳಿಸಿದವು+ ನೀರನ್+ಅಹಿತನೊಳ್
ಉಕ್ಕುವ್+ಅನುರಾಗದಲಿ+ ಕೊಂಡನು +ಬಳಿಕ +ವೀಳೆಯವ
ಸಿಕ್ಕಿದನು +ಕರುಣಾ+ಲತಾಂಗಿಯ
ತೆಕ್ಕೆಯಲಿ +ನಾನೇನ +ಹೇಳುವೆನ್
ಒಕ್ಕಲಿಕ್ಕಿತು +ಶೋಕವ್+ಅರ್ಜುನನ್+ಅಂತರಂಗದಲಿ

ಅಚ್ಚರಿ:
(೧) ಕಣ್ಣಿರನ್ನು ಹೇಳಲು – ಕಂಗಳು ಮುಕ್ಕುಳಿಸಿದವು ನೀರನ್
(೨) ಉಪಮಾನದ ಪ್ರಯೋಗ – ಅಹಿತನೊಳುಕ್ಕುವನುರಾಗದಲಿ ಕೊಂಡನು ಬಳಿಕ ವೀಳೆಯವ ಸಿಕ್ಕಿದನು ಕರುಣಾಲತಾಂಗಿಯ ತೆಕ್ಕೆಯಲಿ

ಪದ್ಯ ೨೧: ಅರ್ಜುನನು ಏಕೆ ಧೈರ್ಯ ಕಳೆದುಕೊಂಡನು?

ಏನನೆಂಬೆನು ಜೀಯ ಕರ್ಣಂ
ಗೇನಹನೊ ಫಲುಗುಣನು ಬಳಿಕಾ
ದಾನವಾರಿಯ ನುಡಿಯ ಕೇಳಿದಉ ಕೇಳಿದಾಕ್ಷಣಕೆ
ಗ್ಲಾನಿಯಲಿ ಮುಳುಗಿದನು ಮನದಭಿ
ಮಾನ ಸರ್ಪನ ಕೆಡಹಿ ಧೈರ್ಯನಿ
ಧಾನವನು ಕೈಸೂರೆಗೊಂಡುದು ಶೋಕವರ್ಜುನನ (ಕರ್ಣ ಪರ್ವ, ೨೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ವಿವರಿಸುತ್ತಾ, ಒಡೆಯ ನಾನು ಏನೆಂದು ಹೇಳಲಿ, ಅರ್ಜುನನು ಕರ್ಣನಿಗೆ ಏನಾಗಬೇಕೋ ಏನೋ? ಶ್ರೀಕೃಷ್ಣನ ಮಾತನ್ನು ಕೇಳಿ, ಅವನು ಚಿಂತೆಯಿಂದ ಜಡನಾದನು. ಅವನ ಶೋಕವು ಸ್ವಾಮಿಭಾನವೆಂಬ ಸರ್ಪವನ್ನು ಕೊಂದು ಧೈರ್ಯನಿಧಿಯನ್ನು ಅಪಹರಿಸಿತು.

ಅರ್ಥ:
ಜೀಯ: ಒಡೆಯ; ಏನಹು: ಏನನ್ನೆಲಿ; ಬಳಿಕ: ನಂತರ; ದಾನವಾರಿ: ರಾಕ್ಷಸರ ವೈರಿ; ನುಡಿ: ಮಾತು; ಕೇಳು: ಆಲಿಸು; ಗ್ಲಾನಿ: ಬಳಲಿಕೆ, ದಣಿವು; ಮುಳುಗು: ಮರೆಯಾಗು, ಹುದುಗಿರು; ಮನ: ಮನಸ್ಸು; ಅಭಿಮಾನ: ಹೆಮ್ಮೆ, ಅಹಂಕಾರ; ಸರ್ಪ: ಹಾವು; ಕೆಡಹು: ಹೊಡೆ; ಧೈರ್ಯ: ಎದೆಗಾರಿಕೆ, ಕೆಚ್ಚು, ದಿಟ್ಟತನ; ನಿಧಾನ: ವಿಳಂಬ, ಸಾವಕಾಶ; ಸೂರೆ: ಕೊಳ್ಳೆ, ಲೂಟಿ; ಶೋಕ: ದುಃಖ;

ಪದವಿಂಗಡಣೆ:
ಏನನೆಂಬೆನು +ಜೀಯ +ಕರ್ಣಂಗ್
ಏನಹನೊ+ ಫಲುಗುಣನು +ಬಳಿಕ+ಆ
ದಾನವಾರಿಯ +ನುಡಿಯ +ಕೇಳಿದು+ ಕೇಳಿದಾಕ್ಷಣಕೆ
ಗ್ಲಾನಿಯಲಿ +ಮುಳುಗಿದನು +ಮನದ್+ಅಭಿ
ಮಾನ +ಸರ್ಪನ +ಕೆಡಹಿ +ಧೈರ್ಯ+ನಿ
ಧಾನವನು +ಕೈಸೂರೆಗೊಂಡುದು +ಶೋಕವ್+ಅರ್ಜುನನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗ್ಲಾನಿಯಲಿ ಮುಳುಗಿದನು ಮನದಭಿಮಾನ ಸರ್ಪನ ಕೆಡಹಿ ಧೈರ್ಯನಿಧಾನವನು ಕೈಸೂರೆಗೊಂಡುದು ಶೋಕವರ್ಜುನನ

ಪದ್ಯ ೨೦: ಕೃಷ್ಣನು ಅರ್ಜುನನಿಗೆ ಏಕೆ ಬಾಣವನ್ನು ಬಿಡಲು ಹೇಳಿದ?

ಎಸು ಮರುಳೆ ಗಾಂಡೀವಿಯಾಪ
ತ್ತೆಸಗಿದಾಗಳೆ ಹಗೆಯ ಗೆಲುವುದು
ವಸುಮತೀಶರ ನೀತಿ ತೊಡು ತೊಡು ದಿವ್ಯಮಾರ್ಗಣವ
ವಿಷಮವೀರನು ರಥವ ಮೇಳಾ
ಪಿಸದ ಮುನ್ನವೆ ಹರಿವ ನೆನೆ ಸೈ
ರಿಸಿದ ಬಳಿಕೀ ಕರ್ಣ ಕೈಕೊಂಬನೆ ತ್ರಿಯಂಬಕನ (ಕರ್ಣ ಪರ್ವ, ೨೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅಯ್ಯೋ ಹುಚ್ಚ ಅರ್ಜುನ, ಬಾಣವನ್ನು ಬಿಡು, ಶತ್ರುವಿಗೆ ಆಪತ್ತು ಬಂದಗಳೇ ಅವನನ್ನು ಗೆಲ್ಲಬೇಕೆಂಬುದು ರಾಜ ನೀತಿ. ಬೇಗ ದಿವ್ಯಾಸ್ತ್ರವನ್ನು ಹೂಡು. ತಡಮಾಡಬೇಡ. ಅಸಮಾನ ವೀರನಾದ ಕರ್ಣನು ರಥವನ್ನು ಮೇಲೆತ್ತುವ ಮೊದಲೇ ಅವನನ್ನು ಕೊಲ್ಲು. ಸರಿಹೋದ ಬಳಿಕ ಕರ್ಣನು ಶಿವನನ್ನು ಲೆಕ್ಕಿಸುವುದಿಲ್ಲ ಎಂದು ಶ್ರೀಕೃಷ್ಣನು ಅರ್ಜುನನಿಗೆ ಹೇಳಿದನು.

ಅರ್ಥ:
ಎಸು: ಎಷ್ಟು; ಮರುಳು: ಬುದ್ಧಿಭ್ರಮೆ, ಹುಚ್ಚು; ಆಪತ್ತು: ತೊಂದರೆ, ಅಪಾಯ; ಎಸಗು: ಬಂದಾಗ; ಹಗೆ: ವೈರಿ; ಗೆಲುವು: ಜಯ; ವಸುಮತಿ: ಭೂಮಿ; ವಸುಮತೀಶರ: ರಾಜ; ನೀತಿ: ನಿಯಮ; ತೊಡು: ಧರಿಸು; ದಿವ್ಯ: ಶ್ರೇಷ್ಠ; ಮಾರ್ಗಣ: ಬಾಣ; ವೀರ: ಪರಾಕ್ರಮಿ; ವಿಷಮ: ಸಮವಾಗಿಲ್ಲದಿರುವುದು; ರಥ: ಬಂಡಿ; ಮೇಳಾಪಿಸು: ಮೇಲಕ್ಕೆತ್ತುವ; ಮುನ್ನ: ಮುಂಚೆ; ಹರಿ: ಕಡಿ, ಕತ್ತರಿಸು; ನೆನೆ: ತಿಳಿ, ಗ್ರಹಿಸು; ಸೈರಿಸು: ಸರಿಹೋದ, ಸಹಿಸು; ಬಳಿಕ: ನಂತರ; ಕೈಕೊಂಬು: ಎದುರಿಸು, ಸ್ವೀಕರಿಸು; ತ್ರಿಯಂಬಕ: ಶಿವ;

ಪದವಿಂಗಡಣೆ:
ಎಸು +ಮರುಳೆ +ಗಾಂಡೀವಿ+ಆಪ
ತ್ತೆಸಗಿದ್+ಆಗಳೆ +ಹಗೆಯ +ಗೆಲುವುದು
ವಸುಮತೀಶರ +ನೀತಿ +ತೊಡು +ತೊಡು +ದಿವ್ಯ+ಮಾರ್ಗಣವ
ವಿಷಮವೀರನು +ರಥವ +ಮೇಳಾ
ಪಿಸದ +ಮುನ್ನವೆ +ಹರಿವ +ನೆನೆ +ಸೈ
ರಿಸಿದ+ ಬಳಿಕ್+ಈ +ಕರ್ಣ +ಕೈಕೊಂಬನೆ +ತ್ರಿಯಂಬಕನ

ಅಚ್ಚರಿ:
(೧) ಅರ್ಜುನನನ್ನು ಬಯ್ಯುವ ಪರಿ – ಎಸು ಮರುಳೆ
(೨) ರಾಜನೀತಿಯ ಪಾಠ: ಆಪತ್ತೆಸಗಿದಾಗಳೆ ಹಗೆಯ ಗೆಲುವುದು ವಸುಮತೀಶರ ನೀತಿ

ಪದ್ಯ ೧೯: ಕೃಷ್ಣನು ಅರ್ಜುನನಿಗೆ ಏನು ಮಾಡಲು ಹೇಳಿದ?

ಎನುತ ಗಾಲಿಯನಲುಗಿ ಕೀಲ
ಚ್ಚಿನಲಿ ಮುಂಗೈಗೊಟ್ಟು ಮೊಳಕಾ
ಲಿನಲಿ ಧರಣಿಯನೌಕಿ ತಗ್ಗಿದ ರಥವ ನೆಗಹುತಿರೆ
ದನುಜರಿಪು ಚಿಮ್ಮಟಿಗೆಯಲಿ ಫಲು
ಗುಣನ ತಿವಿದನು ನೋಡು ರಾಧಾ
ತನುಜನಿರವನು ಬೇಗಮಾಡೆಂದರ್ಜುನನ ಜರೆದ (ಕರ್ಣ ಪರ್ವ, ೨೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕರ್ಣನು ಅರ್ಜುನನಿಗೆ ಸ್ವಲ್ಪ ತಾಳು ಎಂದು ಹೇಇ ಗಾಲಿಯನ್ನು ಅಲುಗಿಸಿ ನೋಡಿ ಕೀಲಿನ ಬಳಿ ಅಚ್ಚನ್ನು ಮುಂಗೈಯಿಂದ ಹಿಡಿದು ಭೂಮಿಯ ಮೇಲೆ ಮಂಡಿಯೂರಿ ಕುಸಿದಿದ್ದ ರಥವನ್ನು ಮೇಲಕ್ಕೆತ್ತುತ್ತಿದ್ದನು. ಆಗ ಕೃಷ್ಣನು ಚಮ್ಮಟಿಗೆಯಿಂದ ಅರ್ಜುನನನ್ನು ತಿವಿದು ಕರ್ಣನ ಸ್ಥಿತಿಯನ್ನು ನೋಡು, ಬೇಗ ಇವನನ್ನು ಸಂಹರಿಸು ಎಂದು ಅರ್ಜುನನನ್ನು ಬಯ್ದನು.

ಅರ್ಥ:
ಗಾಲಿ: ಚಕ್ರ; ಅಲುಗು: ಅಲ್ಲಾಡಿಸು; ಕೀಲು: ಅಗುಳಿ; ಅಚ್ಚು:ಚಕ್ರ; ಮುಂಗೈ: ಹಸ್ತದ ಮುಂದಿನ ಭಾಗ; ಕೊಟ್ಟು: ಆಸರೆ ನೀಡಿ; ಮೊಳಕಾಲು: ಮಂಡಿಯೂರಿದ ಸ್ಥಿತಿ; ಧರಣಿ: ಭೂಮಿ; ಔಕು: ಒತ್ತು; ತಗ್ಗಿದ: ಬಾಗಿದ, ಕುಸಿದ; ರಥ: ಬಂಡಿ; ನೆಗಹು: ಮೇಲಕ್ಕೆತ್ತು; ದನುಜರಿಪು: ರಾಕ್ಷಸರ ವೈರಿ (ಕೃಷ್ಣ); ಚಿಮುಟ: ಇಕ್ಕಳದಂತ ಒಂದು ಸಣ್ಣ ಸಾಧನ; ಫಲುಗುಣ: ಅರ್ಜನ; ತಿವಿ: ಚುಚ್ಚು; ನೋಡು: ವೀಕ್ಷಿಸು; ತನುಜ: ಮಗ; ಇರವು: ಸ್ಥಿತಿ; ಬೇಗ: ವೇಗ; ಜರೆ: ಬಯ್ಯು;

ಪದವಿಂಗಡಣೆ:
ಎನುತ+ ಗಾಲಿಯನ್+ಅಲುಗಿ +ಕೀಲ್
ಅಚ್ಚಿನಲಿ + ಮುಂಗೈಗೊಟ್ಟು +ಮೊಳಕಾ
ಲಿನಲಿ +ಧರಣಿಯನ್+ಔಕಿ +ತಗ್ಗಿದ +ರಥವ +ನೆಗಹುತಿರೆ
ದನುಜರಿಪು +ಚಿಮ್ಮಟಿಗೆಯಲಿ +ಫಲು
ಗುಣನ +ತಿವಿದನು +ನೋಡು +ರಾಧಾ
ತನುಜನ್+ಇರವನು +ಬೇಗಮಾಡೆಂದ್+ಅರ್ಜುನನ +ಜರೆದ

ಅಚ್ಚರಿ:
(೧) ಕೃಷ್ಣನು ಅರ್ಜುನನನ್ನು ಕೊಲ್ಲಲು ಹೇಳುವ ಪರಿ: ದನುಜರಿಪು ಚಿಮ್ಮಟಿಗೆಯಲಿ ಫಲುಗುಣನ ತಿವಿದನು, ಬೇಗಮಾಡೆಂದರ್ಜುನನ ಜರೆದ