ಪದ್ಯ ೧೦: ಕರ್ಣನು ಶಲ್ಯನಿಗೆ ಏನು ಹೇಳಿದ?

ಮಾತು ತಪ್ಪಿತು ರಿಪುಗಳೈವರಿ
ಗೌತಣಿಸಿದವು ನೆರವಿನಲಿ ಪುರು
ಹೂತ ಶಿಖಿ ಯಮ ನಿರುತಿ ವರುಣ ಸಮೀರ ಹರಸಖರು
ಆತುಕೊಳಲಿಂದೀ ಸುಯೋಧನ
ಜಾತಪುಣ್ಯನೊ ಧರ್ಮಪುತ್ರನೆ
ಭೂತಭಾಗ್ಯನೊ ಕಾಣಲಹದೈ ಶಲ್ಯ ಕೇಳೆಂದ (ಕರ್ಣ ಪರ್ವ, ೨೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕರ್ಣನು ಶಲ್ಯನಿಗೆ ಹೇಳಿದನು, ಈಗ ನಾನಾಡಿದ ಮಾತು ತಪ್ಪಾಗಿದೆ, ಪಾಂಡವರ ಐವರಿಗೂ ನಾನು ಯುದ್ಧಕ್ಕೆ ಔತಣವನ್ನು ನೀಡುತ್ತಿದ್ದೇನೆ. ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರರೂ ಅವರಿಗೆ ಸಹಾಯವಾಗಿ ಬಂದು ನಮ್ಮನ್ನಿದಿರಿಸಲಿ ಧರ್ಮಜನೇ ಪುಣ್ಯಶಾಲಿಯೋ, ದುರ್ಯೋಧನನೇ ಪೂರ್ವದಲ್ಲಿ ಪುಣ್ಯಮಾಡಿದವನೋ ಎಂಬುದನ್ನು ಈ ದಿವಸ ನೋಡಬಹುದು.

ಅರ್ಥ:
ಮಾತು: ನುಡಿ; ತಪ್ಪಿತು: ಸಿಕ್ಕದೆ ಹೋಗು, ಗುರಿ ತಪ್ಪು; ರಿಪು: ವೈರಿ; ಔತಣ: ಆಮಂತ್ರಣ; ನೆರವು: ಸಹಾಯ, ಬೆಂಬಲ; ಪುರುಹೂತ: ಇಂದ್ರ; ಶಿಖಿ: ಬೆಂಕಿ; ಯಮ: ಜವರಾಯ; ನಿರುತಿ: ನೈಋತ್ಯದಿಕ್ಕಿನ ಒಡೆಯ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ಸಮೀರ: ಗಾಳಿ, ವಾಯು; ಹರ: ಶಿವ; ಸಖ: ಮಿತ್ರ; ಹರಸಖ: ಕುಬೇರ; ಒಳಿತು: ಯೋಗ್ಯವಾದುದು, ಒಳ್ಳೆಯದು; ಜಾತ: ಹುಟ್ಟಿದ; ಪುಣ್ಯ: ಸದಾಚಾರ, ಪರೋಪಕಾರ; ಪುತ್ರ: ಮಗ; ಭಾಗ್ಯ: ವಿಧಿ, ಹಣೆಬರಹ; ಕಾಣು: ತೋರು; ಕೇಳು: ಆಲಿಸು;

ಪದವಿಂಗಡಣೆ:
ಮಾತು +ತಪ್ಪಿತು +ರಿಪುಗಳ್+ಐವರಿಗ್
ಔತಣಿಸಿದವು +ನೆರವಿನಲಿ +ಪುರು
ಹೂತ +ಶಿಖಿ +ಯಮ +ನಿರುತಿ +ವರುಣ +ಸಮೀರ +ಹರಸಖರು
ಆತುಕ್+ಒಳಲ್+ಇಂದ್+ಈ+ಸುಯೋಧನ
ಜಾತಪುಣ್ಯನೊ +ಧರ್ಮಪುತ್ರನೆ
ಭೂತಭಾಗ್ಯನೊ +ಕಾಣಲಹದೈ+ ಶಲ್ಯ +ಕೇಳೆಂದ

ಅಚ್ಚರಿ:
(೧) ಯಾರ ಸಹಾಯ ಪಡೆಯಲು ಪಾಂಡವರಿಗೆ ಹೇಳಿದನು – ಪುರುಹೂತ, ಶಿಖಿ, ಯಮ, ನಿರುತಿ, ವರುಣ, ಸಮೀರ, ಹರಸಖರು

ಪದ್ಯ ೯: ಎಷ್ಟು ಬಾಣಗಳನ್ನು ದುರ್ಯೋಧನ ಕರ್ಣನಿಗಾಗಿ ಕಳಿಸಿದನು?

ಸರಳ ಹೊದೆಗಳ ತುಂಬಿ ಬಂಡಿಯ
ನರಸ ಕಳುಹಿದನೆಂಟುನೂರನು
ಚರರು ಪರಿವೇಷ್ಟಿಸಿತು ಪರಿಚಾರಕರ ವಿಗ್ರಹದ
ಸರಿಸ ಸಿಂಧವನೆತ್ತಿಸುತ ಬೊ
ಬ್ಬಿರಿದು ಜವನಿಕೆವಿಡಿದು ಭೀಮನೊ
ನರನೊ ನಿಲುವವರಾರು ಬರಹೇಳೆಂದನಾ ಕರ್ಣ (ಕರ್ಣ ಪರ್ವ, ೨೧ ಸಂಧಿ, ೯ ಪದ್ಯ)

ತಾತ್ಪರ್ಯ:
ಎಂತು ನೂರು ಬಂಡಿಗಳಲ್ಲಿ ಬಾಣಗಳ ಹೊರೆಗಳನ್ನು ತುಂಬಿಸಿ ಕೌರವನು ಕರ್ಣನಿಗಾಗಿ ಕಳಿಸಿದನು. ಕರ್ಣನ ಸುತ್ತಲೂ ಪರಿವಾರದವರು ನೆರೆದರು. ಅವರಿಂದ ಧ್ವಜ ದಂಡವನ್ನೆತ್ತಿ ಕಟ್ಟಿಸಿದನು. ರಥಕ್ಕೆ ಪರದೆಯನ್ನು ಹಾಕಿಸಿ ಕರ್ಣನು ಗರ್ಜಿಸಿ, ಯುದ್ಧಕ್ಕೆ ಬರುವವರಾರು, ಭೀಮನೋ ಅರ್ಜುನನೋ, ಅವರನ್ನು ಬರಹೇಳು ಎಂದು ಕರೆದನು.

ಅರ್ಥ:
ಸರಳ: ಬಾಣ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ತುಂಬು: ಭರ್ತಿಯಾಗು; ಬಂಡಿ: ರಥ; ಅರಸ: ರಾಜ; ಕಳುಹಿಸು: ತರು, ರವಾನಿಸು; ನೂರು: ಶತ; ಚರರು: ದೂತ; ಪರಿವೇಷ್ಟಿ: ಸುತ್ತುವರಿ; ಪರಿಚಾರಕ:ಆಳು, ಸೇವಕ; ವಿಗ್ರಹ: ರೂಪ; ಯುದ್ಧ; ಸರಿಸು: ಪಕ್ಕಕ್ಕೆ ಜರುಗಿಸು; ಸಿಂಧ:ಒಂದು ಬಗೆ ಪತಾಕೆ, ಬಾವುಟ; ಬೊಬ್ಬಿರಿದು: ಗರ್ಜಿಸು, ಜೋರಾಗಿ ಕೂಗು; ಜವನಿಕೆ: ತೆರೆ, ಪರದೆ;ನರ: ಅರ್ಜುನ; ನಿಲುವವರು: ಎದುರು ಬರುವವರು, ತಡೆ; ಬರಹೇಳು: ಕರೆಸು;

ಪದವಿಂಗಡಣೆ:
ಸರಳ +ಹೊದೆಗಳ +ತುಂಬಿ +ಬಂಡಿಯನ್
ಅರಸ +ಕಳುಹಿದನ್+ಎಂಟುನೂರನು
ಚರರು+ ಪರಿವೇಷ್ಟಿಸಿತು +ಪರಿಚಾರಕರ +ವಿಗ್ರಹದ
ಸರಿಸ+ ಸಿಂಧವನ್+ಎತ್ತಿಸುತ+ ಬೊ
ಬ್ಬಿರಿದು+ ಜವನಿಕೆವಿಡಿದು+ ಭೀಮನೊ
ನರನೊ+ ನಿಲುವವರಾರು+ ಬರಹೇಳೆಂದನಾ +ಕರ್ಣ

ಅಚ್ಚರಿ:
(೧) ಕರ್ಣನು ಕರೆಯುವ ಪರಿ -ಜವನಿಕೆವಿಡಿದು ಭೀಮನೊ ನರನೊ ನಿಲುವವರಾರು ಬರಹೇಳೆಂದನಾ ಕರ್ಣ

ಪದ್ಯ ೮: ಕರ್ಣನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ರಥವಿಳಿದು ಬಲವಂದು ನಿಜಸಾ
ರಥಿಗೆ ಕೈಮುಗಿದಶ್ವಚಯಕತಿ
ರಥಭಯಂಕರನೆರಗಿ ಕಂದವ ತಟ್ಟಿ ಬೋಳೈಸಿ
ರಥವನಡರಿದು ನೋಡಿ ಗಗನದ
ರಥಿಗೆ ತಲೆವಾಗಿದನು ಲೋಕ
ಪ್ರಥಿತಸಾಹಸಮಲ್ಲ ಮುದದಲಿ ತುಡುಕಿದನು ಧನುವ (ಕರ್ಣ ಪರ್ವ, ೨೧ ಸಂಧಿ, ೮ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ರಥದಿಂದ ಕೆಳಗಿಳಿದು ರಥಕ್ಕೆ ಪ್ರದಕ್ಷಿಣೆ ಮಾಡಿ, ಸಾರಥಿಯಾದ ಶಲ್ಯನಿಗೆ ಕೈಮುಗಿದು, ಕುದುರೆಗಳ ಕತ್ತನ್ನು ತಟ್ಟಿ ನಮಸ್ಕರಿಸಿ ರಥವನ್ನೇರಿ ಸೂರ್ಯನಿಗೆ ನಮಸ್ಕರಿಸಿದನು. ಲೋಕ ಪ್ರಖ್ಯಾತನಾದ ಸಾಹಸಮಲ್ಲ ಕರ್ಣನು ಬಿಲ್ಲನ್ನು ಹಿಡಿದನು.

ಅರ್ಥ:
ರಥ: ಬಂಡಿ; ಇಳಿದು: ಕೆಳಕ್ಕೆ ಬಂದು; ಬಲಬಂದು: ಪ್ರದಕ್ಷಿಣೆ ಹಾಕು; ಸಾರಥಿ: ಸೂತ, ರಥವನ್ನು ಓಡಿಸುವವ; ಕೈಮುಗಿ: ಎರಗು, ನಮಸ್ಕರಿಸು; ಅಶ್ವ: ಕುದುರೆ; ಚಯ: ಗುಂಪು; ಅತಿರಥ: ಪರಾಕ್ರಮಿ, ಬಹುಸಂಖ್ಯೆಯ ಶತ್ರುಗಳನ್ನು ಎದುರಿಸಿ ಒಬ್ಬನೇ ಯುದ್ಧ ಮಾಡುವ ವೀರ; ಭಯಂಕರ: ಸಾಹಸಿ, ಗಟ್ಟಿಗ; ಎರಗು: ನಮಸ್ಕರಿಸು; ಕಂದ: ಕತ್ತು; ತಟ್ಟು: ಮೆಲ್ಲನೆ ಸ್ಪರ್ಶಿಸು; ಬೋಳೈಸು: ಸಮಾಧಾನ ಮಾಡು; ಅಡರು: ಮೇಲಕ್ಕೆ ಹತ್ತು; ನೋಡು: ವೀಕ್ಷಿಸು; ಗಗನ: ಆಗಸ; ರಥಿ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ತಲವಾಗಿ: ನಮಸ್ಕರಿಸಿ; ಪ್ರಥಿತ: ಹೆಸರುವಾಸಿಯಾದ; ಲೋಕ: ಜಗತ್ತು; ಸಾಹಸಮಲ್ಲ: ಪರಾಕ್ರಮಿ; ಮುದ: ಸಂತಸ; ತುಡುಕು: ಬೇಗನೆ ಹಿಡಿಯುವುದು; ಧನು: ಬಿಲ್ಲು;

ಪದವಿಂಗಡಣೆ:
ರಥವಿಳಿದು +ಬಲವಂದು +ನಿಜಸಾ
ರಥಿಗೆ+ ಕೈಮುಗಿದ್+ಅಶ್ವ+ಚಯಕ್+ಅತಿ
ರಥ+ಭಯಂಕರನ್+ಎರಗಿ +ಕಂದವ +ತಟ್ಟಿ +ಬೋಳೈಸಿ
ರಥವನ್+ಅಡರಿದು+ ನೋಡಿ +ಗಗನದ
ರಥಿಗೆ+ ತಲೆವಾಗಿದನು+ ಲೋಕ
ಪ್ರಥಿತ+ಸಾಹಸಮಲ್ಲ +ಮುದದಲಿ +ತುಡುಕಿದನು+ ಧನುವ

ಅಚ್ಚರಿ:
(೧) ಸೂರ್ಯನಿಗೆ – ಗಗನದ ರಥಿ ಎಂದು ಕರೆದಿರುವುದು
(೨) ಅತಿರಥಮಹಾರಥರು ಯುದ್ಧವನ್ನು ಆರಂಭಿಸುವ ಪರಿಯನ್ನು ವಿವರಿಸುವ ಪದ್ಯ
(೩) ಕೈಮುಗಿ, ಎರಗು – ಸಮನಾರ್ಥಕ ಪದ

ಪದ್ಯ ೭: ಯುದ್ಧದ ಘೋಷವು ಹೇಗಿತ್ತು?

ಸಾರಿ ಸುಭಟರ ಜರೆವ ಕಹಳೆಯ
ಗೌರುಗಳ ತಿತ್ತಿರಿಯ ಚಿನ್ನದ
ಚೀರುಗಳ ನಿಡುಗೊಂಬುಗಳ ಚೆಂಬಕನ ನಿರ್ಘೋಷ
ಡೋರುಗಳೆದವು ನೆಲನನುದಧಿಯ
ಕಾರಿಸಿದವಡಿಮಳಲನೆನೆ ಹುರಿ
ಯೇರಿತಬ್ಬರವಿವರ ಬಲದಲಿ ಭೂಪ ಕೇಳೆಂದ (ಕರ್ಣ ಪರ್ವ, ೨೧ ಸಂಧಿ, ೭ ಪದ್ಯ)

ತಾತ್ಪರ್ಯ:
ಗೌರುಗಹಳೆಗಳ ಘೋಷ, ಚಿನ್ನದ ತಿತ್ತಿರಿಗಳ ಕೊಂಬುಗಳ ಚೆಂಬಕಗಳ ಸದ್ದು ಸುತ್ತಲೂ ಹಬ್ಬಿ ನೆಲವನ್ನೂ ಆಕಾಶವನ್ನೂ ಭೇದಿಸಿದವು. ಸಮುದ್ರವು ತಳದ ಮರಳನ್ನು ಮೇಲಕ್ಕೆ ಸೂಸಿತು ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಸಾರು: ಘೋಷಿಸು; ಸುಭಟ: ಸೈನಿಕರು; ಜರೆ: ಜೋರಾಗಿ ಕೂಗು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಗೌರು: ಗಟ್ಟಿಯಾದ ಕೀರಲು ಧ್ವನಿ, ಕರ್ಕಶ ಧ್ವನಿ; ತಿತ್ತಿರಿ: ತುತ್ತೂರಿ, ಒಂದು ವಾದ್ಯ ವಿಶೇಷ; ಚಿನ್ನ: ಬಂಗಾರ; ಚೀರು: ಕಿರಚು, ಕೂಗು; ನಿಡು: ಉದ್ದವಾದ; ಕೊಂಬು: ಒಂದು ಬಗೆಯ ವಾದ್ಯ; ಚೆಂಬು: ಕಳಶ; ನಿರ್ಘೋಷ: ಶಬ್ದ, ನಿನಾದ; ಡೋರುಗಳೆ: ತೂತುಮಾಡು, ರಂಧ್ರಮಾಡು; ನೆಲ: ಭೂಮಿ; ಉದಧಿ: ಸಮುದ್ರ; ಅಡಿ: ಆಳ; ಮಳಲು: ಮರಳು; ಹುರಿಯೇರು: ಧೈರ್ಯ ಹೆಚ್ಚಾಗು; ಅಬ್ಬರ: ಶಬ್ದ, ಆರ್ಭಟ; ಬಲ: ಶಕ್ತಿ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸಾರಿ +ಸುಭಟರ +ಜರೆವ +ಕಹಳೆಯ
ಗೌರುಗಳ +ತಿತ್ತಿರಿಯ +ಚಿನ್ನದ
ಚೀರುಗಳ +ನಿಡುಗೊಂಬುಗಳ+ ಚೆಂಬಕನ +ನಿರ್ಘೋಷ
ಡೋರುಗಳೆದವು+ ನೆಲನನ್+ಉದಧಿಯ
ಕಾರಿಸಿದವ್+ಅಡಿ+ಮಳಲನ್+ಎನೆ+ ಹುರಿ
ಯೇರಿತ್+ಅಬ್ಬರವ್+ಇವರ +ಬಲದಲಿ +ಭೂಪ +ಕೇಳೆಂದ (

ಅಚ್ಚರಿ:
(೧) ಗೌರು, ತಿತ್ತಿರಿ, ನಿಡುಗೊಂಬು, ಚೆಂಬಕ – ಯುದ್ಧದಲ್ಲಿ ಬಳಸುವ ವಾದ್ಯಗಳು
(೨) ಉಪಮಾನದ ಪ್ರಯೋಗ – ನೆಲನನುದಧಿಯಕಾರಿಸಿದವಡಿಮಳಲನೆನೆ

ಪದ್ಯ ೬: ಕೌರವನೇಕೆ ಉತ್ಸಾಹಿಯಾಗಿದ್ದನು?

ರಾಯನನುಜನ ರುಧಿರ ಜೀವದ
ಬೀಯದಲಿ ಕರ್ಣಾತ್ಮಜನ ಕುಲಿ
ಶಾಯುಧನ ಸಾಲೋಕ್ಯದಲಿ ಕಣ್ದೆರೆದ ವೇದನೆಯ
ಆಯಸವ ನೆರೆ ಮರೆದು ಕೌರವ
ರಾಯ ಭುಲ್ಲವಿಸಿದನು ಲಹರಿಯ
ಘಾಯದಲಿ ಸೂಳೈಸಿದವು ನಿಸ್ಸಾಳಕೋಟಿಗಳು (ಕರ್ಣ ಪರ್ವ, ೨೧ ಸಂಧಿ, ೬ ಪದ್ಯ)

ತಾತ್ಪರ್ಯ:
ದುರ್ಯೋಧನನ ತಮ್ಮನ ರಕ್ತವನ್ನು ಕುಡಿದು ಪ್ರಾಣವು ಹೋಗಿತ್ತು, ಕರ್ಣನ ಮಗ ವೃಷಸೇನನು ಇಂದ್ರನ ಓಲಗಕ್ಕೆ ಹೋಗಿದ್ದನು, ಇಂತಹ ನೋವುಗಳನ್ನು ನೋಡಿದ ಮೇಲೆ ನೋವಿನ ಆಯಾಸವು ಮರೆತುಹೋದವು, ಕೌರವನು ಉತ್ಸಾಹಿಯಾಗಿ, ರಣಭೇರಿಗಳು ಮತ್ತೆ ಮತ್ತೆ ಮೊರೆದವು.

ಅರ್ಥ:
ರಾಯ: ರಾಜ; ಅನುಜ; ತಮ್ಮ; ರುಧಿರ: ರಕ್ತ; ಜೀವ: ಉಸಿರು; ಬೀಯ: ವ್ಯಯ, ಹಾಳು, ನಷ್ಟ; ಆತ್ಮಜ: ಮಗ; ಕುಲಿಶ: ವಜ್ರಾಯುಧ; ಸಾಲೋಕ್ಯ: ಒಂದೇ ಲೋಕದಲ್ಲಿರುವಿಕೆ; ಕಣ್ದೆರೆ: ನಯನಗಳನ್ನು ಅರಳಿಸು, ನೋಡು; ವೇದನೆ: ನೋವು; ಆಯಸ: ಬಳಲಿಕೆ; ನೆರೆ: ತುಂಬು ಪ್ರವಾಹ; ಮರೆ: ಜ್ಞಾಪಕದಿಂದ ದೂರ ಹೋಗು; ಭುಲ್ಲವಿಸು: ಉತ್ಸಾಹಗೊಳ್ಳು; ಲಹರಿ: ಅಲೆ, ತೆರೆ, ರಭಸ; ಘಾಯ: ಪೆಟ್ಟು; ಸೂಳೈಸು: ಮೊರೆ, ಶಬ್ದಮಾಡು; ನಿಸ್ಸಾಳ: ರಣಭೇರಿ;

ಪದವಿಂಗಡಣೆ:
ರಾಯನ್+ಅನುಜನ +ರುಧಿರ +ಜೀವದ
ಬೀಯದಲಿ+ ಕರ್ಣಾತ್ಮಜನ+ ಕುಲಿ
ಶಾಯುಧನ+ ಸಾಲೋಕ್ಯದಲಿ +ಕಣ್ದೆರೆದ+ ವೇದನೆಯ
ಆಯಸವ+ ನೆರೆ+ ಮರೆದು+ ಕೌರವ
ರಾಯ +ಭುಲ್ಲವಿಸಿದನು +ಲಹರಿಯ
ಘಾಯದಲಿ+ ಸೂಳೈಸಿದವು +ನಿಸ್ಸಾಳ+ಕೋಟಿಗಳು

ಅಚ್ಚರಿ:
(೧) ಸತ್ತನು ಎಂದು ಹೇಳಲು – ಕರ್ಣಾತ್ಮಜನ ಕುಲಿಶಾಯುಧನ ಸಾಲೋಕ್ಯದಲಿ ಕಣ್ದೆರೆದ

ಪದ್ಯ ೫: ಕೌರವ ಸೈನ್ಯದಲ್ಲಿ ಸಂತಸ ಪಸರಿಸಲು ಕಾರಣವೇನು?

ತಳಿತು ಮುತ್ತುವ ಮುಗಿಲ ಝಾಡಿಸಿ
ಝಳಪಿಸುವ ರವಿಯಂತೆ ಭುವನವ
ಬೆಳಗಲುದ್ರೇಕಿಸುವ ಭರ್ಗನ ಭಾಳಶಿಖಿಯಂತೆ
ಹೊಳೆಹೊಳೆವ ಕರ್ಣ ಪ್ರತಾಪಾ
ನಳನ ನಾಟ್ಯವ ಕಂಡು ಕೌರವ
ಬಲದೊಳೊಸಗೆಯ ಲಗ್ಗೆ ಮಸಗಿತು ಭೂಪ ಕೇಳೆಂದ (ಕರ್ಣ ಪರ್ವ, ೨೧ ಸಂಧಿ, ೫ ಪದ್ಯ)

ತಾತ್ಪರ್ಯ:
ಮರೆ ಮಾಡಲು ಬಂದ ಮೋಡಗಳನ್ನು ಸರಸಿ ಹೊಳೆಯುವ ಸೂರ್ಯನಂತೆ ಲೋಕವನ್ನು ಬೆಳಗುವ ಶಿವನ ಹಣೆಗಣ್ಣಿನ ಅಗ್ನಿಯಂತೆ ಹೊಳೆ ಹೊಳೆಯುವ ಕರ್ಣನ ಪ್ರತಾಪದ ಅಗ್ನಿಯ ನೃತ್ಯವನ್ನು ಕಂಡು ಕೌರವಸೈನ್ಯದಲ್ಲಿ ಸಂತಸವು ಪಸರಿಸಿತು ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ತಳಿತ: ಚಿಗುರಿದ; ಮುತ್ತು: ಆವರಿಸು; ಮುಗಿಲು: ಆಗಸ; ಝಾಡಿಸು: ಹೊಡೆ; ಝಳಪಿಸು: ಹೊಳೆವ; ರವಿ: ಭಾನು; ಭುವನ: ಭೂಮಿ; ಬೆಳಗು: ಹಗಲು, ಹೊಳೆ; ಉದ್ರೇಕ: ಉದ್ವೇಗ, ಆವೇಗ; ಭರ್ಗ: ಶಿವ, ಈಶ್ವರ; ಭಾಳ: ಹಣೆ; ಶಿಖಿ: ಬೆಂಕು; ಹೊಳೆ: ಕಾಂತಿ; ಪ್ರತಾಪ: ಪರಾಕ್ರಮ; ಆನಳ:ಬೆಂಕಿ; ನಾಟ್ಯ: ನೃತ್ಯ; ಕಂಡು: ನೋಡಿ; ಬಲ: ಸೈನ್ಯ; ಒಸಗೆ: ಕಾಣಿಕೆ, ಉಡುಗೊರೆ; ಲಗ್ಗೆ: ಮುತ್ತಿಗೆ, ಆಕ್ರಮಣ; ಮಸಗು: ಹರಡು, ಕೆರಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ತಳಿತು +ಮುತ್ತುವ +ಮುಗಿಲ +ಝಾಡಿಸಿ
ಝಳಪಿಸುವ +ರವಿಯಂತೆ +ಭುವನವ
ಬೆಳಗಲ್+ಉದ್ರೇಕಿಸುವ +ಭರ್ಗನ +ಭಾಳ+ಶಿಖಿಯಂತೆ
ಹೊಳೆಹೊಳೆವ+ ಕರ್ಣ+ ಪ್ರತಾಪಾ
ನಳನ ನಾಟ್ಯವ ಕಂಡು ಕೌರವ
ಬಲದೊಳೊಸಗೆಯ ಲಗ್ಗೆ ಮಸಗಿತು ಭೂಪ ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಳಿತು ಮುತ್ತುವ ಮುಗಿಲ ಝಾಡಿಸಿ ಝಳಪಿಸುವ ರವಿಯಂತೆ; ಭುವನವ ಬೆಳಗಲುದ್ರೇಕಿಸುವ ಭರ್ಗನ ಭಾಳಶಿಖಿಯಂತೆ
(೨) ಪ್ರತಾಪಾನಳ ನಾಟ್ಯ – ಪರಾಕ್ರಮದ ಅಗ್ನಿಯ ನಾಟ್ಯ – ಪದಪ್ರಯೋಗ
(೩) ಝಾಡಿಸಿ ಝಳಪಿಸುವ – ಝ ಕಾರದ ಜೋಡಿ ಪದಗಳು
(೪) ಭ ಕಾರದ ಸಾಲು ಪದಗಳು – ಭುವನವ ಬೆಳಗಲುದ್ರೇಕಿಸುವ ಭರ್ಗನ ಭಾಳಶಿಖಿಯಂತೆ

ಪದ್ಯ ೪: ಕರ್ಣನ ಪ್ರತಾಪವು ಹೇಗೆ ಹೆಚ್ಚಿತು?

ತೊಳಗಿ ಬೆಳಗುವ ಶಿರದ ಪಚ್ಚೆಯ
ಹಳುಕು ಬೆರಸಿದ ವೀಳೆಯವನಿ
ಕ್ಕೆಲದ ಶಲ್ಯಾದಿಗಳಿಗಿತ್ತನು ವರರಥಾಗ್ರದಲಿ
ಕಳಚಿ ತೆಗೆದನು ಜೋಡ ಮೈವೆ
ಗ್ಗಳಿಸಿ ದಳವೇರಿದುದು ಮನ ಮೊಗ
ಥಳಥಳಿಸೆ ಬಹಳಪ್ರತಾಪದಲಿದರ್ನಾ ಕರ್ಣ (ಕರ್ಣ ಪರ್ವ, ೨೧ ಸಂಧಿ, ೪ ಪದ್ಯ)

ತಾತ್ಪರ್ಯ:
ಕರ್ಣನು ರಥದಲ್ಲಿ ಕುಳಿತು ಪಚ್ಚಕರ್ಪೂರದ ವೀಳೆಯವನ್ನು ಉಡುಗೊರೆಯಾಗಿ ಶಲ್ಯ ಮೊದಲಾದವರಿಗೆ ಕೊಟ್ಟನು ತನ್ನ ಕವಚವನ್ನು ತೆಗೆದಿಟ್ತುಬಿಟ್ಟನು. ಮೈಪ್ರತಾಪದಿಂದ ಹೆಚ್ಚಿತು. ಮನಸ್ಸು ಉಲ್ಲಾಸ ಭರಿತವಾಯಿತು. ಮುಖವು ಕಾಂತಿಯಿಂದ ಹೊಳೆಯಿತು. ಕರ್ಣನ ಪ್ರತಾಪ ಹೆಚ್ಚಿತು.

ಅರ್ಥ:
ತೊಳಗು: ಹೊಳೆ, ಕಾಂತಿ; ಬೆಳಗು: ಹೊಳೆ; ಶಿರ: ತಲೆ; ಪಚ್ಚೆ: ಕರ್ಪೂರ; ಹಳುಕು: ಚೂರು; ಬೆರಸು: ಕಲಿಸು; ವೀಳೆ: ತಾಂಬೂಲ; ಇಕ್ಕೆಲ: ಎರಡೂ ಕಡೆ; ಆದಿ: ಮುಂತಾದವರು; ವರ: ಶ್ರೇಷ್ಠ; ರಥ: ಬಂಡಿ; ಅಗ್ರ: ಮುಂದೆ; ಕಳಚು: ತೆಗೆ, ಬಿಚ್ಚು; ತೆಗೆ: ಹೊರತರು; ಜೋಡು: ಜೊತೆ; ಮೈ: ತನು; ವೆಗ್ಗಳ: ಹೆಚ್ಚು, ಆಧಿಕ್ಯ; ದಳ: ಸೈನ್ಯ; ಏರು: ಹತ್ತು; ಮನ: ಮನಸ್ಸು; ಮೊಗ: ಮುಖ; ಥಳಥಳ: ಹೊಳೆ; ಬಹಳ: ತುಂಬ; ಪ್ರತಾಪ: ಪರಾಕ್ರಮ;

ಪದವಿಂಗಡಣೆ:
ತೊಳಗಿ +ಬೆಳಗುವ +ಶಿರದ +ಪಚ್ಚೆಯ
ಹಳುಕು +ಬೆರಸಿದ+ ವೀಳೆಯವನ್
ಇಕ್ಕೆಲದ +ಶಲ್ಯಾದಿಗಳಿಗ್+ಇತ್ತನು +ವರ+ರಥಾಗ್ರದಲಿ
ಕಳಚಿ +ತೆಗೆದನು +ಜೋಡ +ಮೈವೆ
ಗ್ಗಳಿಸಿ+ ದಳವೇರಿದುದು +ಮನ +ಮೊಗ
ಥಳಥಳಿಸೆ+ ಬಹಳ+ಪ್ರತಾಪದಲ್+ಇದರ್ನಾ +ಕರ್ಣ

ಪದ್ಯ ೩: ಕರ್ಣನು ತನ್ನ ಆಪ್ತರಿಗೆ ಏನನ್ನು ನೀಡಿದನು?

ತರಿಸಿ ಸಾದು ಜವಾಜಿಗಳ ಹೊಂ
ಭರಣಿಯಲಿ ಮೊಗೆಮೊಗೆದು ಶಲ್ಯಗೆ
ಸುರಿದು ಹಡಪಿಗ ಚಮರ ಬಾಹೆಯ ಬಾಣದಾಯಕರ
ಕರೆದು ಮನ್ನಿಸಿ ತನ್ನನತಿವಿ
ಸ್ತರಿಸಿ ಹೊಸಮಡಿವರ್ಗದಲಿ ಮಿಗೆ
ಮೆರೆದು ರಣಸುಮ್ಮಾನದಲಿ ಹೊಗರೇರಿದನು ಕರ್ಣ (ಕರ್ಣ ಪರ್ವ, ೨೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕರ್ಣನು ಕುಂಕುಮ, ಗಂಧ, ಸುವಾಸನ ದ್ರವ್ಯಗಳನ್ನು ಬಂಗಾರದ ತಟ್ಟೆಗಳಲ್ಲಿ ತರಿಸಿ ಕೈಗಳಿಂದ ತೆಗೆತೆಗೆದು ಶಲ್ಯನಿಗೆ ನೀಡಿದನು. ಹಡಪ, ಚಾಮರಗಲನ್ನು ಹಿಡಿಯುವವರನ್ನು ಬಾಣಗಳನ್ನು ತೆಗೆದುಕೊಡುವವರನ್ನೂ ಗೌರವಿಸಿ, ಹೊಸ ಮಡಿಗಳನ್ನುಟ್ಟು ಯುದ್ಧದ ಸುಮ್ಮಾನದಿಂದ ಹೊಳೆದನು.

ಅರ್ಥ:
ತರಿಸು: ಬರೆಮಾಡು; ಸಾದು: ಕುಂಕುಮ ಗಂಧ; ಜವಾಜಿ: ಸುವಾಸನಾದ್ರವ್ಯ; ಹೊಂಭರಣಿ: ಚಿನ್ನದ ತಟ್ಟೆ; ಮೊಗೆ: ತೋಡು, ತುಂಬಿಕೊಳ್ಳು; ಸುರಿದು: ನೀಡಿ; ಹಡಪ: ಕೈಚೀಲ; ಬಾಹೆ: ಪಾರ್ಶ್ವ, ಹೊರವಲಯ; ಬಾಣ: ಶರ; ಬಾಣದಾಯಕ: ಬಾಣವನ್ನು ಕೊಡುವವ; ಕರೆದು: ಬರೆಮಾಡಿ; ಮನ್ನಿಸಿ: ಗೌರವಿಸು; ಅನತಿ: ಸ್ವಲ್ಪ; ವಿಸ್ತರಿಸು: ಹರಡು; ಹೊಸ: ನವೀಣ; ಮಡಿ: ಸ್ವಚ್ಛ; ವರ್ಗ: ಗುಂಪು, ಪಂಗಡ; ಮಿಗೆ: ಮತ್ತು; ಮೆರೆ: ಹೊಳೆ, ಪ್ರಕಾಶಿಸು; ರಣ: ಯುದ್ಧ; ಸುಮ್ಮಾನ: ಹಿಗ್ಗು; ಹೊಗರು: ಕಾಂತಿ;

ಪದವಿಂಗಡಣೆ:
ತರಿಸಿ +ಸಾದು +ಜವಾಜಿಗಳ+ ಹೊಂ
ಭರಣಿಯಲಿ +ಮೊಗೆಮೊಗೆದು +ಶಲ್ಯಗೆ
ಸುರಿದು +ಹಡಪಿಗ+ ಚಮರ +ಬಾಹೆಯ +ಬಾಣದಾಯಕರ
ಕರೆದು+ ಮನ್ನಿಸಿ+ ತನ್+ಅನತಿ+ವಿ
ಸ್ತರಿಸಿ +ಹೊಸ+ಮಡಿವರ್ಗದಲಿ+ ಮಿಗೆ
ಮೆರೆದು+ ರಣಸುಮ್ಮಾನದಲಿ+ ಹೊಗರ್+ಏರಿದನು +ಕರ್ಣ

ಅಚ್ಚರಿ:
(೧) ಹಡಪ, ಚಾಮರ, ಬಾಹೆ, ಬಾಣದಾಯಕ – ಆಪ್ತವರ್ಗದವರ ಹೆಸರು

ಪದ್ಯ ೨: ಕರ್ಣನು ಸೈನಿಕರಿಗೆ ಏನು ಹೇಳಿದನು?

ಆಳ ಹೊಯ್ ಹೊಯ್ ನಾಯಕರ ನಿಲ
ಹೇಳು ಕೃಪ ಗುರುನಂದನಾದಿಗ
ಳಾಲಿಗಳಿಗೌತಣವ ರಚಿಸುವೆ ನಿಮಿಷ ಸೈರಿಸಲಿ
ಕಾಳೆಗದಲಿಂದಹಿತರಾಯರ
ಭಾಳಲಿಪಿಗಳನೊರಸುವೆನು ಭೂ
ಪಾಲಕನ ಮೊಗವಡೆದ ದುಗುಡವನುಗಿವೆ ನಾನೆಂದ (ಕರ್ಣ ಪರ್ವ, ೨೧ ಸಂಧಿ, ೨ ಪದ್ಯ)

ತಾತ್ಪರ್ಯ:
ತನ್ನ ಸೈನಿಕರನ್ನುದ್ದೇಶಿಸಿ ಕರ್ಣನು, ಎಲೈ ಸೈನಿಕರೆ ಹೊಯ್ ಹೊಯ್ ಕೇಳಿರಿ, ನೀವೆಲ್ಲರು ಸ್ವಲ್ಪಹೊತ್ತು ಸುಮ್ಮನಿರಿ. ಕೃಪ, ಅಶ್ವತ್ಥಾಮದಿಗಳ ಕಣ್ಣುಗಳಿಗೆ ಶೀಘ್ರವಾಗಿ ಔತಣವನ್ನು ನೀಡುತ್ತೇನೆ, ಈ ದಿನ ನಮ್ಮ ವೈರಿರಾಜರ ಹಣೆಯ ಬರಹಗಳನ್ನು ಅಳಿಸಿ ಹಾಕುತ್ತೇನೆ, ಅರಸನ ಮುಖವನ್ನು ಆವರಿಸಿದ ದುಃಖವನ್ನು ತೊಲಗಿಸುತ್ತೇನೆ ಎಂದು ನುಡಿದನು.

ಅರ್ಥ:
ಆಳು: ಸೈನಿಕ; ನಾಯಕ: ಒಡೆಯ; ನಿಲ:ನಿಲ್ಲು; ಹೇಳು: ತಿಳಿಸು; ನಂದನ: ಮಗ; ಆದಿ: ಮುಂತಾದ; ಆಲಿಗಳು: ಗುಂಪು; ಔತಣ: ವಿಶೇಷ; ರಚಿಸು: ನಿರ್ಮಿಸು; ನಿಮಿಷ: ಕಾಲ ಪ್ರಮಾಣ; ಸೈರಿಸು: ತಾಳು, ಸಹಿಸು; ಕಾಳೆಗ: ಯುದ್ಧ; ಅಹಿತ: ವೈರಿ; ರಾಯ: ರಾಜ; ಭಾಳ: ಹಣೆ; ಲಿಪಿ: ಬರಹ; ಒರಸು: ನಾಶಮಾಡು; ಭೂಪಾಲಕ: ರಾಜ; ಮೊಗ: ಮುಖ; ಅಡೆ: ಮುಚ್ಚಿಹೋಗಿರು; ದುಗುಡ: ದುಃಖ; ಉಗಿ: ಹೋಗಲಾಡಿಸು;

ಪದವಿಂಗಡಣೆ:
ಆಳ +ಹೊಯ್ +ಹೊಯ್ +ನಾಯಕರ+ ನಿಲ
ಹೇಳು +ಕೃಪ +ಗುರುನಂದನ್+ಆದಿಗಳ್
ಆಲಿಗಳಿಗ್+ಔತಣವ+ ರಚಿಸುವೆ+ ನಿಮಿಷ+ ಸೈರಿಸಲಿ
ಕಾಳೆಗದಲಿಂದ್+ಅಹಿತ+ರಾಯರ
ಭಾಳಲಿಪಿಗಳನ್+ಒರಸುವೆನು +ಭೂ
ಪಾಲಕನ+ ಮೊಗವಡೆದ +ದುಗುಡವನ್+ಉಗಿವೆ +ನಾನೆಂದ

ಅಚ್ಚರಿ:
(೧) ಔತಣವ – ಭಾರಿ ರಣದ ವಿಶೇಷವನ್ನು ತೋರಿಸುವೆ ಎಂದು ಹೇಳುವ ಬಗೆ
(೨) ಕರ್ಣನ ವಿಶ್ವಾಸದ ನುಡಿಗಳು – ಕಾಳೆಗದಲಿಂದಹಿತರಾಯರ ಭಾಳಲಿಪಿಗಳನೊರಸುವೆನು ಭೂಪಾಲಕನ ಮೊಗವಡೆದ ದುಗುಡವನುಗಿವೆ

ಪದ್ಯ ೧: ಕರ್ಣನು ಸಂತೋಷಗೊಳ್ಳಲು ಕಾರಣವೇನು?

ಕೇಳು ಧೃತರಾಷ್ಟ್ರವನಿಪ ನಿ
ನಾಳುಸುಮ್ಮಾನವನು ತನುರೋ
ಮಾಳಿ ಪಲ್ಲವಿಸಿದುದು ಪರಿತೋಷಪ್ರವಾಹದಲಿ
ಕಾಳೆಗಕೆ ಕೈವೊಯ್ದು ಹಗೆವನ
ಮೇಳಯದ ಕಳನೇರಿದನು ತ
ನ್ನಾಳುತನವನು ತೋರಲಾಯ್ತೆನುತುಬ್ಬಿದನು ಕರ್ಣ (ಕರ್ಣ ಪರ್ವ, ೨೧ ಸಂಧಿ, ೧ ಪದ್ಯ)

ತಾತ್ಪರ್ಯ:
ಸಂಜಯನು ಯುದ್ಧದ ವಿವರಣೆಯನ್ನು ಧೃತರಾಷ್ಟ್ರನಿಗೆ ನೀಡುತ್ತ, ಕೇಳು ರಾಜನೇ, ಕೌರವರ ಸೇನಾಧಿಪತಿಯಾದ ಕರ್ಣನು ಅತೀವ ಸಂತಸಗೊಂಡನು, ಅವನು ದೇಹದ ರೋಮಗಳು ರೋಮಾಂಚನಗೊಂಡು ಎದ್ದು ನಿಂತವು, ಸಂತಸದ ಪ್ರವಾಹದಲ್ಲಿ ತೇಲಿದನು. ಯುದ್ಧಕ್ಕೆ ತೋಳುತಟ್ಟಿ ವೈರಿಯನ್ನೆದುರಿಸಲು ಅನುವಾದನು. ತನ್ನ ಪರಾಕ್ರಮವನ್ನು ತೋರಿಸುವ ಅವಕಾಶ ಒದಗಿತೆಂದು ಕರ್ಣನು ಉಬ್ಬಿದನು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಆಳು: ಸೇವಕ, ಸೈನಿಕ; ಸುಮ್ಮಾನ: ಅಹಂಕಾರ, ಗರ್ವ, ಸಂತೋಷ; ತನು: ದೇಹ; ರೋಮಾಳಿ: ಕೂದಲು; ಪಲ್ಲವಿಸು: ವಿಕಸಿಸು; ಪರಿತೋಷ: ಅತಿಯಾದ ಆನಂದ; ಪ್ರವಾಹ: ಹೆಚ್ಚಾದ ಹರಿಯುವಿಕೆ; ಕಾಳೆಗ: ಯುದ್ಧ; ಕೈ: ಹಸ್ತ; ವೊಯ್ದು: ಹೊಡೆದು; ಹಗೆ: ವೈರಿ; ಮೇಳ: ಗುಂಪು; ಕಳ: ರಣರಂಗ; ಏರು: ಪ್ರವೇಶಿಸು; ಆಳುತನ: ಪರಾಕ್ರಮ; ತೋರಲು: ಪ್ರದರ್ಶಿಸಲು; ಉಬ್ಬು: ಹಿಗ್ಗು;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ+ ನಿ
ನ್ನಾಳು+ಸುಮ್ಮಾನವನು+ ತನುರೋ
ಮಾಳಿ +ಪಲ್ಲವಿಸಿದುದು +ಪರಿತೋಷ+ಪ್ರವಾಹದಲಿ
ಕಾಳೆಗಕೆ+ ಕೈವೊಯ್ದು +ಹಗೆವನ
ಮೇಳಯದ +ಕಳನೇರಿದನು+ ತ
ನ್ನಾಳುತನವನು +ತೋರಲಾಯ್ತ್+ಎನುತ್+ಉಬ್ಬಿದನು +ಕರ್ಣ

ಅಚ್ಚರಿ:
(೧) ಉತ್ಸಾಹವನ್ನು ವಿವರಿಸುವ ಪದಗಳು – ತನುರೋಮಾಳಿ ಪಲ್ಲವಿಸಿದುದು ಪರಿತೋಷ ಪ್ರವಾಹದಲಿ