ಪದ್ಯ ೩೦: ಯುದ್ಧಭೂಮಿ ಯಮನಂಗಡಿಯ ಸರಕಾಗಿ ಏಕೆ ಕಂಡಿತು?

ಕೆಡೆದ ಝಲ್ಲರಿಗಳ ರಥಾಗ್ರದೊ
ಳುಡಿದ ಸಿಂಧದ ಮಕುಟ ಪದಕದ
ಖಡೆಯ ಸರಪಣಿ ತೋಳಬಂದಿಯ ವಜ್ರಮಾಣಿಕದ
ಕಡುಕು ಹೀರಾವಳಿಯ ಹಾರದ
ಕಡಿಯ ರಚನೆಯ ರಾಶಿ ಯಮನಂ
ಗಡಿಯ ಪಸರವಿದೆನಲು ಮೆರೆದುದು ಕೂಡೆ ರಣಭೂಮಿ (ಕರ್ಣ ಪರ್ವ, ೧೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ರಥದ ಮೇಲಿಂದ ಬಿದ್ದ ಛತ್ರ, ಧ್ವಜಗಳು, ಯೋಧರು ಧರಿಸಿದ ಕಿರೀಟ, ಪದಕ, ಖಡೆಯ, ಸರಪಳಿ, ತೋಳ ಬಂದಿ, ವಜ್ರಮಾಣಿಕ್ಯಗಳ ಕಿವಿಯಾಭರಣ, ವಜ್ರಹಾರಗಳು ಹರಿದು ರಣರಂಗದಲ್ಲಿ ಬಿದ್ದಿದ್ದವು. ಇದು ಯಮನ ಅಂಗಡಿಯ ಸರಕೇನೋ ಎಂಬಂತೆ ಯುದ್ಧರಂಗದಲ್ಲಿ ಕಾಣಿಸಿದವು.

ಅರ್ಥ:
ಕೆಡೆ:ಬೀಳು; ಝಲ್ಲರಿ:ಕುಚ್ಚು, ಗೊಂಡೆ; ರಥ: ಬಂಡಿ; ಅಗ್ರ: ತುದಿ; ಉಡಿ: ತುಂಡು ಮಾಡು; ಸಿಂಧ: ಬಾವುಟ; ಮಕುಟ: ಕಿರೀಟ; ಪದಕ: ಅಲಂಕಾರಿಕ ಬಿಲ್ಲೆ; ಖಡೆ: ಕಾಲ ಕಡುಗ; ಸರಪಣಿ: ಹಾರ; ತೋಳಬಂಧಿ: ತೋಳಿನಲ್ಲಿ ತೊಡುವ ಆಭರಣ; ವಜ್ರಮಾಣಿಕ: ಬೆಲೆಬಾಳುವ ರತ್ನ; ಕಡುಕು: ಗಂಡಸರು ಕಿವಿಯಲ್ಲಿ ಧರಿಸುವ ಆಭರಣ; ಹೀರಾವಳಿ: ನವರತ್ನಗಳಲ್ಲಿ ಒಂದು, ವಜ್ರ; ಆವಳಿ: ಸಾಲು; ಹಾರ: ಸರ, ಮಾಲೆ; ಕಡಿ:ತುಂಡು; ರಚನೆ: ನಿರ್ಮಾಣ, ಸೃಷ್ಟಿ; ರಾಶಿ: ಗುಂಪು; ಯಮ: ಕಾಲ; ಅಂಗಡಿ: ಮಾರಾಟದ ವಸ್ತುಗಳನ್ನು ಚಿಲ್ಲರೆಯಾಗಿ ಮಾರುವ ಸ್ಥಳ; ಪಸರ:ಅಂಗಡಿ; ಮೆರೆ:ಶೋಭಿಸು; ರಣಭೂಮಿ: ಯುದ್ಧಭೂಮಿ;

ಪದವಿಂಗಡಣೆ:
ಕೆಡೆದ +ಝಲ್ಲರಿಗಳ+ ರಥಾಗ್ರದೊಳ್
ಉಡಿದ +ಸಿಂಧದ +ಮಕುಟ +ಪದಕದ
ಖಡೆಯ +ಸರಪಣಿ+ ತೋಳಬಂದಿಯ +ವಜ್ರಮಾಣಿಕದ
ಕಡುಕು +ಹೀರಾವಳಿಯ +ಹಾರದ
ಕಡಿಯ+ ರಚನೆಯ +ರಾಶಿ +ಯಮನಂ
ಗಡಿಯ +ಪಸರವಿದೆನಲು +ಮೆರೆದುದು +ಕೂಡೆ +ರಣಭೂಮಿ

ಅಚ್ಚರಿ:
(೧) ರಣಭೂಮಿಯಲ್ಲಿ ಬಿದ್ದಿದ್ದ ಬೆಲೆಬಾಳುವ ವಸ್ತುವನ್ನು ಯಮನಂಗಡಿಯ ಸರಕು ಎಂದು ಹೋಲಿಸಿರುವುದು
(೨) ಝಲ್ಲರಿ, ಸಿಂಧ, ಮಕುಟ, ಪದಕ, ಖಡೆ, ಸರಪಣಿ, ತೋಳಬಂದಿ, ಕಡುಕು, ಹೀರಾವಳಿ, ಹಾರ, – ಆಭರಣದ ವಿವರ

ಪದ್ಯ ೨೯: ಯುದ್ಧವು ಹೇಗೆ ಅದ್ಭುತವಾಗಿತ್ತು?

ರಾವುತರು ಕಡಿವಡೆಯೆ ಕಾಂಭೋ
ಜಾವಳಿಗಳೋಡಿದವು ಜೋದರ
ಜೀವ ಜಾಳಿಸೆ ಬೀದಿವರಿದವು ಗಜಘಟಾಳಿಗಳು
ತಾವು ನಿಬ್ಬರ ಗತಿಯ ರಥ ತುರ
ಗಾವಳಿಗಳೆಳೆದವು ರಥಂಗಳ
ನಾ ವಿಗಡ ವಿಗ್ರಹ ಮಹಾದ್ಭುತವರಸ ಕೇಳೆಂದ (ಕರ್ಣ ಪರ್ವ, ೧೫ ಸಂಧಿ, ೨೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ರಾಜ ಯುದ್ಧವು ಅತೀವ ಆಶ್ಚರ್ಯಕರವಾದುದನ್ನು ಹೇಳುತ್ತೇನೆ ಕೇಳು. ಕುದುರೆ ಸವಾರರು ಸತ್ತರೆ ಕುದುರೆಗಳೇ ಓಡಿದವು, ಯೋಧರು ಸಾವನ್ನಪ್ಪಿದರೆ ಆನೆಗಳ ಗುಂಪೇ ಮುನ್ನುಗ್ಗಿದವು, ರಥದ ಯೋಧರು ಮಡಿದರೆ, ರಥದ ಕುದುರೆಗಳೇ ರಥವನ್ನೆಳೆದುಕೊಂಡು ಮುಂದೆ ಹೋದವು. ಈ ರೀತಿ ಯುದ್ಧವು ಮಹಾದ್ಭುತವಾಗಿತ್ತು.

ಅರ್ಥ:
ರಾವುತ: ಕುದುರೆ ಸವಾರ, ಅಶ್ವಾರೋಹಿ; ಕಡಿ: ಸೀಳು; ಕಾಂಭೋಜ:ಒಂದು ದೇಶದ ಹೆಸರು (ಇಲ್ಲಿ ಕುದುರೆಯೆಂದು ಅರ್ಥೈಸಬೇಕು); ಆವಳಿ: ಗುಂಪು, ಸಾಲು; ಓಡು: ಪಲಾಯನಮಾಡು; ಜೋದ: ಯೋಧ; ಜೀವ: ಪ್ರಾಣ; ಜಾಳಿಸು:ಕಂಪಿಸು, ಅಲ್ಲಾಡು; ಬೀದಿವರಿದು: ಮುನ್ನುಗ್ಗು; ಗಜಘಟೆ: ಆನೆಗಳ ಗುಂಪು; ನಿಬ್ಬರ:ಅತಿಶಯ, ಹೆಚ್ಚಳ; ಗತಿ: ಸಂಚಾರ, ಸ್ಥಿತಿ; ರಥ: ಬಂಡಿ; ತುರಗ: ಕುದುರೆ; ಆವಳಿ: ಸಾಲು; ಎಳೆ: ನೂಕು, ತನ್ನ ಕಡೆಗೆ ಸೆಳೆದುಕೊ; ವಿಗಡ: ಭೀಕರವಾದ; ವಿಗ್ರಹ:ಯುದ್ಧ; ಅದ್ಭುತ: ಆಶ್ಚರ್ಯ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ರಾವುತರು +ಕಡಿವಡೆಯೆ +ಕಾಂಭೋ
ಜಾವಳಿಗಳ್+ಓಡಿದವು +ಜೋದರ
ಜೀವ +ಜಾಳಿಸೆ +ಬೀದಿವರಿದವು +ಗಜಘಟಾಳಿಗಳು
ತಾವು +ನಿಬ್ಬರ +ಗತಿಯ +ರಥ +ತುರ
ಗಾವಳಿಗಳ್+ಎಳೆದವು +ರಥಂಗಳನ್
ಆ+ ವಿಗಡ+ ವಿಗ್ರಹ+ ಮಹಾದ್ಭುತವ್+ಅರಸ +ಕೇಳೆಂದ

ಅಚ್ಚರಿ:
(೧) ಕಾಂಭೋಜಾವಳಿ, ಗಜಘಟಾಳಿ, ತುರಗಾವಳಿ – ಆವಳಿ ಪದದಿಂದ ಕೊನೆಗೊಳ್ಳುವ ಪದಗಳು
(೨) ಜ ಕಾರದ ತ್ರಿವಳಿ ಪದ – ಜೋದರ ಜೀವ ಜಾಳಿಸೆ

ಪದ್ಯ ೨೮: ಕುರುಸೈನ್ಯವು ಭೀಮನೆದುರಿಗೆ ಹೇಗೆ ಹೋರಾಡಿತು?

ಕರಿ ಕೆಡೆಯೆ ಕಾಲಿನಲಿ ಜೋದರು
ತೆರಳದೆಚ್ಚಾಡಿದರು ರಥಚಯ
ಮುರಿಯೆ ಕಾಲಿನಲೊದಗಿದರು ಸಮರಥ ಮಹಾರಥರು
ಹರಿಯೆ ಹಯ ರೂಢಿಯಲಿ ನಿಂದ
ಬ್ಬರಿಸಿದರು ರಾವುತರು ಭೀಮನ
ಬಿರುಗದೆಯ ಫಲ್ಲಣೆಗೆ ಚೆಲ್ಲಿತು ನಿಮ್ಮ ಪರಿವಾರ (ಕರ್ಣ ಪರ್ವ, ೧೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ಆನೆಗಳು ನೆಲಕ್ಕೆ ಉರುಳಿದಾಗ, ಆನೆಯ ಮೇಲಿದ್ದ ಯೋಧರು ಓಡಿಹೋಗದೆ ಶತ್ರುಗಳನ್ನು ಇರಿದರು, ಭೀಮನ ಹೊಡೆತಕ್ಕೆ ರಥಗಳು ಮುರಿದರೆ, ರಥದಲ್ಲಿದ್ದ ಮಹಾರಥರು ಕಾಲಾಳುಗಳಾಗಿ ಯುದ್ಧ ಮಾಡಿದರು, ಕುದುರೆಗಳು ನೆಲಕಚ್ಚಿದರೆ, ರಾವುತರು ಓಡದೆ, ನಿಂತು ಶತ್ರುಗಳ ಮೇಲೆ ಗರ್ಜಿಸುತ್ತಾ ಎರಗಿದರು. ಭೀಮನ ಗದೆಯ ಬಿರುಹೊಡೆತಕ್ಕೆ ನಿಮ್ಮ ಸೈನ್ಯ ಚದುರಿತು ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಕರಿ: ಆನೆ; ಕೆಡೆಯೆ: ಕೆಡವಿ, ಉರುಳಿಸು; ಕಾಲು: ಪಾದ; ಜೋದ: ಯೋಧ, ಸೈನಿಕ; ತೆರಳು: ಹಿಂತಿರುಗು; ಎಚ್ಚು: ಬಾಣ ಬಿಡು; ರಥ: ಬಂಡಿ; ಚಯ:ಸಮೂಹ, ರಾಶಿ, ಗುಂಪು; ಮುರಿ: ಸೀಳು; ಒದಗು: ಲಭ್ಯ, ದೊರೆತುದು; ಸಮರಥ: ಮಹಾವೀರ, ಶ್ರೇಷ್ಠ ಯೋಧ; ಮಹಾರಥ: ಪರಾಕ್ರಮಿ; ಹರಿ: ಕಡಿ, ಕತ್ತರಿಸು; ಹಯ: ಕುದುರೆ; ರೂಢಿ: ಅಭ್ಯಾಸ, ಸಲುಗೆ; ಅಬ್ಬರಿಸು: ಜೋರಾಗಿ ಕೂಗು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಬಿರು: ಗಟ್ಟಿಯಾದುದು; ಗದೆ:ಮುದ್ಗರ; ಚೆಲ್ಲು: ಹರಡು, ಚೆದರು; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ಕರಿ+ ಕೆಡೆಯೆ +ಕಾಲಿನಲಿ +ಜೋದರು
ತೆರಳದ್+ಎಚ್ಚಾಡಿದರು +ರಥಚಯ
ಮುರಿಯೆ+ ಕಾಲಿನಲ್+ಒದಗಿದರು +ಸಮರಥ +ಮಹಾರಥರು
ಹರಿಯೆ +ಹಯ +ರೂಢಿಯಲಿ +ನಿಂದ್
ಅಬ್ಬರಿಸಿದರು +ರಾವುತರು +ಭೀಮನ
ಬಿರು+ಗದೆಯ +ಫಲ್ಲಣೆಗೆ+ ಚೆಲ್ಲಿತು +ನಿಮ್ಮ +ಪರಿವಾರ

ಅಚ್ಚರಿ:
(೧) ಸಾಲು ಪದಗಳ ಬಳಕೆ – ಕರಿ ಕೆಡೆಯೆ ಕಾಲಿನಲಿ; ಹರಿಯೆ ಹಯ; ಭೀಮನ
ಬಿರುಗದೆಯ
(೨) ಕೆಡೆ, ಮುರಿ, ಹರಿ – ಯುದ್ಧದಲ್ಲಾದ ಕೆಡುಕನ್ನು ವಿವರಿಸುವ ಪದ

ಪದ್ಯ ೨೭: ರಣರಂಗವು ಏಕೆ ಬಿಭತ್ಸ ರೂಪವಾಗಿತ್ತು?

ನೆಲಕೆ ದೊಪ್ಪನೆ ಹಾಯ್ದು ಕೊಂಡನು
ಹಲಗೆ ಗದೆಯನು ಮೇಲುವಾಯ್ದ
ಪ್ಪಳಿಸಿದರೆ ಕುಪ್ಪಳಿಸಿತರಿಬಲ ಘಾಯ ಘಾಯದಲಿ
ತಲೆಗಳೊಟ್ಟಿಲ ಕರಿಗಳಟ್ಟೆಯ
ನೆಳೆವ ರಕುತದ ಹೊನಲ ಮುಂಡದ
ಲಳಿಯ ನಾಟ್ಯದಲೆಸೆದುದೈ ಬೀಭತ್ಸ ರೌದ್ರದಲಿ (ಕರ್ಣ ಪರ್ವ, ೧೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ಕೌರವ ಸೇನೆಯು ತನ್ನ ರಥದ ಮೇಲೆ ಎರಗುವುದನ್ನು ನೋಡಿದ ಭೀಮನು ತಕ್ಷಣವೇ ದೊಪ್ಪನೆ ಕೆಳಗೆ ನೆಗೆದು ಗದೆ ಗುರಾಣಿಗಳನ್ನು ಕೈಯಲ್ಲಿ ಹಿಡಿದು ಶತ್ರುಸೈನ್ಯದ ಮೇಲೆ ಹಾರಿ ಅಪ್ಪಳಿಸಿಲು ಶತ್ರು ಸೈನ್ಯವು ಗಾಯಗೊಂಡಿತು. ವೈರಿ ಸೈನ್ಯದ ಸೈನಿಕರ ತಲೆಗಳು ರಾಶಿಯಾಗಿ ಬಿದ್ದವು, ಆನೆಗಳ ತಲೆಯಿಲ್ಲದ ದೇಹವು ಧರೆಗೆ ಉರುಳಿದವು, ರಕ್ತದ ಕೋಡಿ ಹರಿಯಿತು, ಸತ್ತ ದೇಹಗಳು ಈ ರಕ್ತದ ನದಿಯಲ್ಲಿ ಕುಣಿದವು, ಇಡೀ ದೃಶ್ಯವು ಅಸಹ್ಯ ಮತ್ತು ಭಯಂಕರವಾಗಿತ್ತು.

ಅರ್ಥ:
ನೆಲ: ಭೂಮಿ; ದೊಪ್ಪನೆ: ಬೀಳುವುದನ್ನು ವಿವರಿಸುವ ಪದ; ಹಾಯ್ದು: ಹೊಡೆ; ಹಲಗೆ: ಒಂದು ಬಗೆಯ ಗುರಾಣಿ; ಗದೆ: ಮುದ್ಗರ;ಮೇಲುವಾಯ್ದು: ಮೇಲೆ ಬಿದ್ದು; ಅಪ್ಪಳಿಸು: ಜೋರಾಗಿ ತಟ್ಟು, ಧ್ವಂಸ ಮಾಡು; ಕುಪ್ಪಳಿಸು:ಜಿಗಿದು ಬೀಳು; ಅರಿಬಲ: ವೈರಿಸೈನ್ಯ; ಘಾಯ: ಪೆಟ್ಟು; ತಲೆ: ಶಿರ; ಒಟ್ಟು: ಎಲ್ಲಾಸೇರು; ಕರಿ: ಆನೆ; ಅಟ್ಟೆ:ತಲೆಯಿಲ್ಲದ ದೇಹ; ಎಳೆ: ಚಿಕ್ಕದಾದ ರಕುತ: ನೆತ್ತರು; ಹೊನಲು: ತೊರೆ, ಹೊಳೆ; ಮುಂಡ:ತಲೆಯಿಲ್ಲದ ದೇಹ; ಅಳಿ: ನಾಶವಾಗು; ನಾಟ್ಯ: ನೃತ್ಯ; ಬೀಭತ್ಸ: ಅಸಹ್ಯ, ಜುಗುಪ್ಸೆ; ರೌದ್ರ:ಸಿಟ್ಟು, ರೋಷ;

ಪದವಿಂಗಡಣೆ:
ನೆಲಕೆ+ ದೊಪ್ಪನೆ +ಹಾಯ್ದು +ಕೊಂಡನು
ಹಲಗೆ +ಗದೆಯನು +ಮೇಲುವಾಯ್ದ್
ಅಪ್ಪಳಿಸಿದರೆ+ ಕುಪ್ಪಳಿಸಿತ್+ಅರಿಬಲ+ ಘಾಯ +ಘಾಯದಲಿ
ತಲೆಗಳ್+ಒಟ್ಟಿಲ +ಕರಿಗಳ್+ಅಟ್ಟೆಯನ್
ಎಳೆವ +ರಕುತದ+ ಹೊನಲ +ಮುಂಡದಲ್
ಅಳಿಯ +ನಾಟ್ಯದಲ್+ಎಸೆದುದೈ+ ಬೀಭತ್ಸ +ರೌದ್ರದಲಿ

ಅಚ್ಚರಿ:
(೧) ಈ ಭಯಾನಕ ದೃಶ್ಯದಲ್ಲೂ ನಾಟ್ಯವನ್ನು ನೋಡುವ ಕವಿಯ ಚತುರತೆ
(೨) ಅಪ್ಪಳಿಸು, ಕುಪ್ಪಳಿಸು – ಪ್ರಾಸ ಪದ
(೨) ಅಟ್ಟೆ, ಮುಂಡ- ಸಮನಾರ್ಥಕ ಪದ

ಪದ್ಯ ೨೬: ಕುರುಸೈನ್ಯದವರು ಭೀಮನ ಮೇಲೆ ಹೇಗೆ ಎರಗಿದರು?

ಸಿಕ್ಕಿದನು ಹಗೆ ಸ್ವಾಮಿದ್ರೋಹಿಯ
ಸೆಕ್ಕಿ ಸುರಗಿಯೊಳಿವನ ಖಂಡವ
ನಿಕ್ಕುಳಿನೊಳೊಡೆಯವಚಿ ಕೊಯ್ ಸುಂಟಿಗೆಯ ತಿನ್ನೆನುತ
ಹೊಕ್ಕು ಹೊಯ್ದರು ರಥವನಳವಿಗೆ
ಮಿಕ್ಕು ಕೈ ಮಾಡಿದರು ಕಾಲ್ದುಳಿ
ಯೊಕ್ಕಿಲಲಿ ಬೇಸರಿಸಿದರು ಪವಮಾನ ನಂದನನ (ಕರ್ಣ ಪರ್ವ, ೧೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಸ್ವಾಮಿ ದ್ರೋಹಿಯಾದ ಶತ್ರು ಸಿಕ್ಕಿದ್ದಾನೆ, ಸುರಗಿಯಲ್ಲಿ ಇವನ ಮಾಂಸ ಖಂಡವನ್ನು ಸಿಕ್ಕಿಸಿ ಇಕ್ಕಳಿನಲ್ಲಿ ತೆಗೆದು ಕೊಯ್ಯಿರಿ ಇವನ ಹೃದಯದವನ್ನು ಬಗೆದು ಮಾಂಸವನ್ನು ತಿನ್ನಿರಿ ಎಂದಬ್ಬರಿಸುತ್ತಾ ಹೊಕ್ಕು ರಥದ ಬಳಿ ಬಂದು ಮೇಲೇರಿ ಕೈಮಾಡಿ ಕಾಲುತುಳಿತದಿಂದ ಕುರುಸೈನಿಕರು ಭೀಮನನ್ನು ಬೇಸರಿಸಿದರು.

ಅರ್ಥ:
ಸಿಕ್ಕು: ದೊರಕು; ಹಗೆ: ವೈರಿ; ಸ್ವಾಮಿ: ಒಡೆಯ; ದ್ರೋಹಿ: ವಂಚಕ; ಸೆಕ್ಕು:ಹಿಡಿದೆಳೆ, ಜೀರು; ಸುರಗಿ:ಸಣ್ಣ ಕತ್ತಿ, ಚೂರಿ; ಖಂಡ: ಚೂರು; ಇಕ್ಕು: ಹೊಡೆ; ಒಡೆ: ಸೀಳು, ಬಿರಿ; ಅವಚು: ಹಿಸುಕು; ಕೊಯ್: ಸೀಳು; ಸುಂಟಿಗೆ: ಹೃದಯದ ಮಾಂಸ; ತಿನ್ನು: ಭಕ್ಷಿಸು; ಹೊಕ್ಕು: ಸೇರು; ಹೊಯ್ದು: ಹೊಡೆ; ರಥ: ಬಂಡಿ; ಅಳವಿ: ವಶ; ಮಿಕ್ಕು: ಉಳಿದ; ಕೈ: ಹಸ್ತ;ಕೈಮಾಡು: ಹೊಡೆ, ಯುದ್ಧ; ಕಾಲ್ದುಳಿ: ಕಾಲು ತುಳಿತ; ಒಕ್ಕು:ಪ್ರವಹಿಸು; ಬೇಸರ: ಬೇಜಾರು, ನೋವು; ಪವಮಾನ: ವಾಯು; ನಂದನ: ಮಗ;

ಪದವಿಂಗಡಣೆ:
ಸಿಕ್ಕಿದನು +ಹಗೆ +ಸ್ವಾಮಿ+ದ್ರೋಹಿಯ
ಸೆಕ್ಕಿ+ ಸುರಗಿಯೊಳ್+ಇವನ +ಖಂಡವನ್
ಇಕ್ಕುಳಿನೊಳ್+ಒಡೆ+ಅವಚಿ +ಕೊಯ್ +ಸುಂಟಿಗೆಯ +ತಿನ್ನೆನುತ
ಹೊಕ್ಕು +ಹೊಯ್ದರು +ರಥವನ್+ಅಳವಿಗೆ
ಮಿಕ್ಕು+ ಕೈ +ಮಾಡಿದರು+ ಕಾಲ್ದುಳಿ
ಯೊಕ್ಕಿಲಲಿ+ ಬೇಸರಿಸಿದರು+ ಪವಮಾನ +ನಂದನನ

ಅಚ್ಚರಿ:
(೧) ಇಕ್ಕು, ಹೊಕ್ಕು, ಮಿಕ್ಕು – ಪ್ರಾಸ ಪದಗಳು
(೨) ಹಿಂಸಿಸುವ ಬಗೆ – ಸೆಕ್ಕಿ ಸುರಗಿಯೊಳಿವನ ಖಂಡವನಿಕ್ಕುಳಿನೊಳೊಡೆಯವಚಿ ಕೊಯ್ ಸುಂಟಿಗೆಯ ತಿನ್ನೆನುತ

ಪದ್ಯ ೨೫: ಭೀಮನ ರಭಸದ ಯುದ್ಧಕ್ಕೆ ಯಾವುದು ಮುರಿದವು?

ಮುರಿದು ನೆಗ್ಗಿದ ರಥವ ಬರಿಕೈ
ಹರಿದು ಬೀಳುವ ಗಜವ ಘಾಯದ
ನೆರವಣಿಗೆಯಲಿ ನೆಗ್ಗಿ ಮುಗ್ಗಿದ ಕುದುರೆ ಕಾಲಾಳ
ಅರಿಯೆನಭಿವರ್ಣಿಸಲು ಬಲ ಮು
ಕ್ಕುರಿಕಿಕೊಂಡುದು ಮೇಲೆ ಮೇಲ
ಳ್ಳಿರಿವ ಕಹಳೆಯ ಬಹಳ ಬಹುವಿಧ ವಾದ್ಯರಭಸದಲಿ (ಕರ್ಣ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ರಥಗಳು ಮುರಿದು ನೆಗ್ಗಿ ಹೋದವು. ಬರಿಕೈಯಿಂದ ಆನೆಗಳ ಸಂಡಿಲುಗಳು ಕತ್ತರಿಸಿ ಬಿದ್ದವು. ಕುದುರೆಗಳು ಕಾಲಾಳುಗಳು ಮುರಿದು ಬಿದ್ದವು. ಅದನ್ನು ನಾನು ಹೇಗೆ ಹೇಳಲಿ? ಇಷ್ಟಾದರೂ ಮತ್ತೆ ವಾದ್ಯರಭಸದೊಂದಿಗೆ ಕುರುಸೇನೆಯು ದಾಳಿಯಿಟ್ಟಿತು.

ಅರ್ಥ:
ಮುರಿ: ಸೀಳು; ನೆಗ್ಗು:ಕುಗ್ಗು, ಕುಸಿ; ರಥ: ಬಂಡಿ; ಬರಿಕೈ: ಕೇವಲ ಕರದಿಂದ; ಹರಿ: ಚೂರು; ಬೀಳು: ನೆಲಕಚ್ಚು; ಗಜ: ಆನೆ; ಘಾಯ: ಪೆಟ್ಟು; ನೆರವಣಿಗೆ: ಪರಿಪೂರ್ಣತೆ, ಒಳ್ತನ; ಮುಗ್ಗು: ಕುಗ್ಗು, ನಾಶವಾಗು; ಕುದುರೆ: ಅಶ್ವ; ಕಾಲಾಳು: ಪದಸೈನಿಕ; ಅರಿ: ತಿಳಿ; ವರ್ಣಿಸು: ವಿವರಿಸು; ಬಲ: ಶಕ್ತಿ, ಸೈನ್ಯ; ಮುಕ್ಕುರು: ಆವರಿಸು; ಅಳ್ಳಿರಿ: ನಡುಗಿಸು, ಚುಚ್ಚು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಬಹಳ: ತುಂಬ; ಬಹುವಿಧ: ಹಲವಾರು ಬಗೆ; ವಾದ್ಯ: ಸಂಗೀತದ ಸಾಧನ; ರಭಸ: ವೇಗ;

ಪದವಿಂಗಡಣೆ:
ಮುರಿದು +ನೆಗ್ಗಿದ +ರಥವ +ಬರಿಕೈ
ಹರಿದು +ಬೀಳುವ +ಗಜವ +ಘಾಯದ
ನೆರವಣಿಗೆಯಲಿ +ನೆಗ್ಗಿ +ಮುಗ್ಗಿದ +ಕುದುರೆ +ಕಾಲಾಳ
ಅರಿಯೆನ್+ಅಭಿವರ್ಣಿಸಲು +ಬಲ+ ಮು
ಕ್ಕುರಿಕಿಕೊಂಡುದು+ ಮೇಲೆ +ಮೇಲ್
ಅಳ್ಳಿರಿವ +ಕಹಳೆಯ +ಬಹಳ +ಬಹುವಿಧ +ವಾದ್ಯ+ರಭಸದಲಿ

ಅಚ್ಚರಿ:
(೧) ಕಹಳೆಯ ಬಹಳ ಬಹುವಿಧ – ‘ಹ’ಕಾರ ಹೊಂದಿದ ಪದಗಳ ರಚನೆ

ಪದ್ಯ ೨೪: ಭೀಮನ ಪರಾಕ್ರಮದ ಪ್ರದರ್ಶನ ಹೇಗೆ ತೋರಿತು?

ಮುಂದೆ ಸಬಳಿಗರೆಡ ಬಲದಲೋ
ರಂದದಲಿ ಬಿಲ್ಲಾಳು ದೊರೆಗಳ
ಮುಂದೆ ಹರಿಗೆಗಳೆರಡು ಬಾಹೆಯಲಾನೆ ಕುದುರೆಗಳು
ಸಂದಣಿಸಿದುದು ಮತ್ತೆ ಬೀಳುವ
ಮಂದಿಗದು ನೆರವಾಯ್ತು ನೆಗ್ಗಿದ
ನೊಂದು ಹಲಗೆಯಲೇರಿದವರನು ಭೂಪ ಕೇಳೆಂದ (ಕರ್ಣ ಪರ್ವ, ೧೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಸಬಳವನ್ನು ಹಿಡಿದ ಭಟರು ಮುಂದೆ, ಅವರ ಹಿಮ್ದೆ ಬಿಲ್ಲಾಳುಗಳು, ದೊರೆಗಳ ಮುಂದೆ ಗುರಾಣಿಗಳನ್ನು ತಲೆಗೆ ಹಿಡಿದ ಕಾಲಾಳುಗಳು, ಎರಡೂ ಪಕ್ಕದಲ್ಲಿದ್ದ ಆನೆ ಕುದುರೆಗಳು ಮತ್ತೆ ಸಿದ್ಧವಾಗಿ ಬಂದವು. ಮೊದಲು ಸತ್ತು ಬಿದ್ದವರೊಡನೆ ಒಂದೇ ಹೊಡೆತಕ್ಕೆ ಮತ್ತೆ ಬಂದವರನ್ನು ಸೇರಿಸಿದನು ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಮುಂದೆ: ಎದುರು; ಸಬಳ: ಈಟಿ, ಭರ್ಜಿ; ಬಲ: ಸೈನ್ಯ; ಬಿಲ್ಲಾಳು: ಬಿಲ್ಲುವಿದ್ಯಾಚತುರ; ದೊರೆ: ರಾಜ, ಒಡೆಯ; ಹರಿಗೆ: ಗುರಾಣಿ; ಬಾಹೆ: ಪಕ್ಕ, ಪಾರ್ಶ್ವ; ಆನೆ: ಗಜ; ಕುದುರೆ: ಅಶ್ವ; ಸಂದಣಿ: ಗುಂಪು, ಸಮೂಹ; ಬೀಳು: ಕೆಳಕ್ಕೆ ಜಾರು; ಮಂದಿ: ಜನ; ನೆರವು: ಸಹಾಯ; ನೆಗ್ಗು: ಕುಗ್ಗು, ಕುಸಿ; ಹಲಗೆ:ಒಂದು ಬಗೆಯ ಗುರಾಣಿ; ಏರು: ಮೇಲೆ ಹತ್ತು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುಂದೆ +ಸಬಳಿಗರ್+ಎಡ+ ಬಲದಲೋ
ರಂದದಲಿ+ ಬಿಲ್ಲಾಳು +ದೊರೆಗಳ
ಮುಂದೆ +ಹರಿಗೆಗಳ್+ಎರಡು +ಬಾಹೆಯಲ್+ಆನೆ +ಕುದುರೆಗಳು
ಸಂದಣಿಸಿದುದು +ಮತ್ತೆ +ಬೀಳುವ
ಮಂದಿಗದು +ನೆರವಾಯ್ತು +ನೆಗ್ಗಿದ
ನೊಂದು +ಹಲಗೆಯಲ್+ಏರಿದವರನು +ಭೂಪ +ಕೇಳೆಂದ