ಪದ್ಯ ೩೨: ಕರ್ಣನು ಯಾರನ್ನು ತಡೆದನು?

ತರಣಿತನಯನ ತೆಗೆದು ಭೀಮನೊ
ಳುರವಣಿಸಿ ಗುರುಸೂನು ಕಾದು
ತ್ತಿರೆ ಧನಂಜಯ ತೆರಳಿದನು ಪಾಳೆಯದ ಪಥವಿಡಿದು
ಅರರೆ ಫಲುಗುಣನೋಟವನು ಸಂ
ಗರಸಮರ್ಥರ ನೋಟಾನು ನ
ಮ್ಮರಸ ಕಂಡನಲಾ ಎನುತ ನೂಕಿದನು ಕಲಿಕರ್ಣ (ಕರ್ಣ ಪರ್ವ, ೧೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕರ್ಣನನ್ನು ಕಳುಹಿಸಿ ಅಶ್ವತ್ಥಾಮನು ಭೀಮನೊಡನೆ ಯುದ್ಧಕ್ಕೆ ನಿಂತನು, ಇತ್ತ ಅರ್ಜುನನು ಧರ್ಮರಾಯನನ್ನು ನೋಡಲು ವೇಗವಾಗಿ ಪಾಂಡವರ ಬಿಡಾರಕ್ಕೆ ಹೋಗುತ್ತಿದ್ದನು. ಇದನ್ನು ನೋಡಿದ ಕರ್ಣನು, ಅರೇ, ಅರ್ಜುನನು ಓಡುವುದನ್ನು ನಮ್ಮ ದೊರೆ ಕಂಡ ಹಾಗಾಯಿತು ಎಂದು ಸಂತೋಷಿಸಿ ಅರ್ಜುನನನ್ನು ತಡೆದನು.

ಅರ್ಥ:
ತರಣಿ: ಸೂರ್ಯ; ತನಯ: ಮಗ; ತೆಗೆ: ಹೊರತರು; ಉರವಣಿಸು:ಆತುರಿಸು; ಸೂನು: ಮಗ; ಕಾದು:ಹೋರಾಟ, ಯುದ್ಧ; ತೆರಳು: ಹೋಗು, ನಡೆ; ಪಾಳೆಯ: ಬೀಡು, ಶಿಬಿರ; ಪಥ: ದಾರಿ; ಓಟ: ವೇಗವಾಗಿ ತೆರಳು; ಸಂಗರ: ಯುದ್ಧ; ಸಮರ್ಥ: ಬಲಶಾಲಿ, ಗಟ್ಟಿಗ;ಅರಸ: ರಾಜ; ಕಂಡನು: ನೋಡು; ನೂಕು: ತಳ್ಳು; ಕಲಿ: ಶೂರ;

ಪದವಿಂಗಡಣೆ:
ತರಣಿತನಯನ +ತೆಗೆದು ಭೀಮನೊಳ್
ಉರವಣಿಸಿ +ಗುರುಸೂನು +ಕಾದು
ತ್ತಿರೆ+ ಧನಂಜಯ +ತೆರಳಿದನು +ಪಾಳೆಯದ +ಪಥವಿಡಿದು
ಅರರೆ+ ಫಲುಗುಣನ್ + ಓಟವನು +ಸಂ
ಗರ+ಸಮರ್ಥರ +ನೋಟವನು +ನ
ಮ್ಮರಸ+ ಕಂಡನಲಾ+ ಎನುತ+ ನೂಕಿದನು+ ಕಲಿಕರ್ಣ

ಅಚ್ಚರಿ:
(೧) ತರಣಿತನಯ, ಕರ್ಣ – ಪದ್ಯದ ಮೊದಲ ಮತ್ತು ಕೊನೆ ಪದ
(೨) ಓಟವನು, ನೋಟವನು – ಪ್ರಾಸ ಪದಗಳು
(೩) ತರಣಿತನಯನ ತೆಗೆದು; ಪಾಳೆಯದ ಪಥವಿಡಿದು; ಸಂಗರ ಸಮರ್ಥರ; ನೋಟವನು ನಮ್ಮರಸ – ಜೋಡಿ ಪದಗಳ ಬಳಕೆ

ಪದ್ಯ ೩೧: ಅಶ್ವತ್ಥಾಮನೇಕೆ ಪಕ್ಕಕ್ಕೆ ಸರಿದನು?

ಧನು ಮುರಿಯೆ ದಿಟ್ಟಾಯತನವೀ
ತನಲಿ ಸಾಕಿನ್ನೆನುತ ಗುರುನಂ
ದನನು ಮುರಿದನು ಹೊಗರು ಮೋರೆಯ ಹೊತ್ತ ದುಗುಡದಲಿ
ಅನಿಲಸೂನುವ ಹಳಚಿದರು ಮು
ಮ್ಮೊನೆಯ ಬೋಳೆಯ ಮೈಯ ಕೊಳು ಕೊಡೆ
ಯೆನಗೆ ತನಗಂಬಗ್ಗಳಿಕೆಗಳ ಮೆರೆದರಿಚ್ಛೆಯಲಿ (ಕರ್ಣ ಪರ್ವ, ೧೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ತನ್ನ ಬಿಲ್ಲು ಮುರಿಯಲು, ಅರ್ಜುನನೊಡನೆ ಯುದ್ಧ ಬೇಡವೆಂದು ತೀರ್ಮಾನಿಸಿ ದುಃಖತಪ್ತನಾಗಿ ಪಕ್ಕಕ್ಕೆ ಸರಿದನು. ಇತ್ತ ಕೌರವ ಯೋಧರು ನಾ ಮುಂದು ತಾ ಮುಂದು ಎನ್ನುತ್ತಾ ಭೀಮನೊಡನೆ ಯುದ್ಧ ಮಾಡುತ್ತಿದ್ದರು.

ಅರ್ಥ:
ಧನು: ಬಿಲ್ಲು, ಧನಸ್ಸು; ಮುರಿ: ಸೀಳು; ದಿಟ್ಟ: ಧೈರ್ಯಶಾಲಿ, ಸಾಹಸಿ; ಆಯತನ: ನೆಲೆ; ಸಾಕು: ನಿಲ್ಲಿಸು; ನಂದನ: ಮಗ; ಮುರಿ: ಸೀಳು; ಹೊಗರು: ಮಂಕು; ಮೊರೆ: ಮುಖ; ಹೊತ್ತು: ತೋರು; ದುಗುಡ: ದುಃಖ; ಅನಿಲಸೂನು: ವಾಯುಪುತ್ರ (ಭೀಮ); ಹಳಚು:ತಾಗು, ಬಡಿ, ಆಕ್ರಮಿಸು; ಮುಮ್ಮೊನೆ: ಮುಂದಿರುವ; ಬೋಳೆ:ಒಂದು ಬಗೆಯ ಹರಿತವಾದ ಬಾಣ; ಮೈಯ: ತನು; ಕೊಳು: ಯುದ್ಧ; ಕೊಡೆ: ನೀಡು; ಅಗ್ಗಳಿಕೆ: ಶ್ರೇಷ್ಠ; ಮೆರೆ: ಹೊಳೆ, ಪ್ರಕಾಶಿಸು; ಇಚ್ಛೆ: ಆಸೆ;

ಪದವಿಂಗಡಣೆ:
ಧನು +ಮುರಿಯೆ +ದಿಟ್ಟ+ಆಯತನವ್
ಈತನಲಿ +ಸಾಕಿನ್ನ್+ಎನುತ +ಗುರುನಂ
ದನನು +ಮುರಿದನು +ಹೊಗರು +ಮೋರೆಯ +ಹೊತ್ತ +ದುಗುಡದಲಿ
ಅನಿಲಸೂನುವ+ ಹಳಚಿದರು+ ಮು
ಮ್ಮೊನೆಯ+ ಬೋಳೆಯ +ಮೈಯ +ಕೊಳು +ಕೊಡೆ
ಎನಗೆ+ ತನಗ್+ಎಂಬ್+ಅಗ್ಗಳಿಕೆಗಳ+ ಮೆರೆದರ್+ಇಚ್ಛೆಯಲಿ

ಪದ್ಯ ೩೦: ಅರ್ಜುನ ಅಶ್ವತ್ಥಾಮರ ಬಿಲ್ಲು ಯುದ್ಧ ಹೇಗಿತ್ತು?

ಗುರುಸುತನೊಟ್ಟೈಸಿ ಫಲುಗುಣ
ತಿರುಗಿ ಹಾಯ್ದನು ಮುಂದೆ ಶರಪಂ
ಜರವ ಹೂಡಿದನೀತನಾತನ ಬಯ್ದು ಬೆಂಬತ್ತಿ
ಸರಳ ಹರಹಿನ ಹೂಟವನು ಕಾ
ಹುರದ ಕಡುಹಿನಲೊದೆದು ಬೊಬ್ಬಿರಿ
ದುರವಣಿಸಿದನು ಪಾರ್ಥನೀತನ ಧನುವ ಖಂಡಿಸಿದ (ಕರ್ಣ ಪರ್ವ, ೧೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನನ್ನು ನಿಲ್ಲಿಸಿ ಅರ್ಜುನನು ಮುಂದುವರೆದನು, ಅಶ್ವತ್ಥಾಮನು ಇವನ ಹಿಂದೆಯೇ ಬರಲು ಅರ್ಜುನನು ಮತ್ತೆ ತಿರುಗಿ ಅಶ್ವತ್ಥಾಮನನ್ನು ಬಾಣಗಲ ಪಂಜರದಲ್ಲಿ ಕಟ್ಟಿಹಾಕಿ ಜರೆದನು. ಅಶ್ವತ್ಥಾಮನು ಆ ಶರಪಂಜರವನ್ನು ಖಂಡಿಸಿ ಗರ್ಜಿಸುತ್ತಾ ಬರಲು ಅರ್ಜುನನು ಅವನ ಬಾಣವನ್ನೇ ಮುರಿದನು.

ಅರ್ಥ:
ಸುತ: ಮಗ; ತಿರುಗು:ಸುತ್ತು; ಹಾಯ್ದು: ಹೊಡೆ; ಮುಂದೆ: ಎದುರು; ಶರ: ಬಾಣ; ಪಂಜರ: ಗೂಡು; ಹೂಡು: ಸೇರಿಸು; ಬಯ್ದು: ಜರಿ; ಬೆಂಬತ್ತು: ಹಿಂಬಾಲಿಸು; ಸರಳ: ಬಾಣ; ಹರಹು: ವಿಸ್ತಾರ, ವೈಶಾಲ್ಯ; ಹೂಟ:ಬಂಡಿ, ರಥ; ಕಾಹುರ: ಆವೇಶ, ಸೊಕ್ಕು, ಕೋಪ; ಕಡುಹು: ಸಾಹಸ, ಹುರುಪು, ಉತ್ಸಾಹ; ಒದೆ: ಕಾಲಿನಿಂದ ನೂಕು; ಬೊಬ್ಬಿರಿ: ಆರ್ಭಟಿಸು; ಉರವಣಿ:ಅಬ್ಬರ; ಗರ್ವ; ಧನು: ಬಿಲ್ಲು; ಖಂಡಿಸು: ಮುರಿ;

ಪದವಿಂಗಡಣೆ:
ಗುರುಸುತನ್+ಒಟ್ಟೈಸಿ +ಫಲುಗುಣ
ತಿರುಗಿ+ ಹಾಯ್ದನು +ಮುಂದೆ +ಶರಪಂ
ಜರವ+ ಹೂಡಿದನ್+ಈತನ್+ಆತನ+ ಬಯ್ದು +ಬೆಂಬತ್ತಿ
ಸರಳ +ಹರಹಿನ +ಹೂಟವನು +ಕಾ
ಹುರದ+ ಕಡುಹಿನಲ್+ಒದೆದು +ಬೊಬ್ಬಿರಿದ್
ಉರವಣಿಸಿದನು +ಪಾರ್ಥನ್+ಈತನ+ ಧನುವ +ಖಂಡಿಸಿದ

ಅಚ್ಚರಿ:
(೧) ಹೂಡು, ಹಾಯ್ದು, ಹರಹು, ಹೂಟ – ಹ ಕಾರದ ಪದಗಳ ಬಳಕೆ
(೨) ಶರ, ಸರಳು – ಸಮನಾರ್ಥಕ ಪದ

ಪದ್ಯ ೨೯: ಅಶ್ವತ್ಥಾಮನು ಅರ್ಜುನನಿಗೆ ಏನು ಹೇಳಿದನು?

ಜಾಳಿಸಿತು ರಥ ಜಡಿವ ಕೌರವ
ನಾಳ ಝೋಂಪಿಸಿ ಡೊಂಬು ಮಾಡುವ
ಜಾಳ ಝಾಡಿಸಿ ಬೈದು ಹೊಕ್ಕನು ಮತ್ತೆ ಗುರುಸೂನು
ಖೂಳ ಫಡಫಡ ಜಾರದಿರು ತೋ
ರಾಳ ತೂರಿದ ಡೊಂಬು ಬೇಡ ವಿ
ಡಾಳ ವಿದ್ಯೆಗಳೆಮ್ಮೊಡನೆಯೆನುತೆಚ್ಚನರ್ಜುನನ (ಕರ್ಣ ಪರ್ವ, ೧೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಅರ್ಜುನನ ರಥವು ಕೌರವರ ಸೈನ್ಯವನ್ನು ಲೆಕ್ಕಿಸದೆ ಮುಂದೆ ಸಾಗಿತು, ಇದನ್ನು ನೋಡಿದ ಅಶ್ವತ್ಥಾಮನು, ವೃಥಾ ಯುದ್ಧದ ನಾಟಕವಾಡುವ ತಮ್ಮ ಸೈನ್ಯವನ್ನು ಬೈದು ಅರ್ಜುನನ ಎದುರಿಗೆ ಬಂದು, ನೀಚ ಅರ್ಜುನ, ತಪ್ಪಿಸಿ ಜಾರಿಕೊಳ್ಳಬೇಡ. ಸೈನಿಕರನ್ನು ತೂರಿದ ಜಂಭ ನಿನಗೆ ಸಲ್ಲದು, ನಮ್ಮ ಹತ್ತಿರ ನಿನ್ನ ಮೋಸದ ನಾಟಕ ನಡೆಯದು ಎನ್ನುತ್ತಾ ಅರ್ಜುನನ ಮೇಲೆ ಬಾಣವನ್ನು ಬಿಟ್ಟನು.

ಅರ್ಥ:
ಜಾಳಿಸು:ಚಲಿಸು, ನಡೆ; ರಥ: ಬಂಡಿ; ಜಡಿ: ಬೆದರಿಕೆ, ಹೆದರಿಕೆ; ಆಳ: ಅಂತರಾಳ, ಮರ್ಮ; ಝೋಂಪಿಸು: ಭಯಗೊಳ್ಳು; ಡೊಂಬು: ಮೋಸಗಾರ, ವಂಚಕ; ಜಾಳ: ಬಲೆ, ಕಪಟ; ಝಾಡಿಸು: ಅಲುಗಾಡಿಸು, ಒದರು; ಬೈದು: ಜರಿದು; ಹೊಕ್ಕು: ಸೇರು; ಸೂನು: ಮಗ; ಖೂಳ: ದುಷ್ಟ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಜಾರು: ನುಣುಚಿಕೊಳ್ಳು, ಕಳಚಿಕೊಳ್ಳು; ತೋರು: ಕಾಣು; ಆಳ: ಸೈನಿಕ; ತೂರು: ಎಸೆ, ಬೀಸು; ಡೊಂಬ: ವಂಚಕ; ಬೇಡ: ಸಲ್ಲದು, ಕೂಡದು; ವಿಡಾಳ: ಮೋಸ; ವಿದ್ಯೆ: ಜ್ಞಾನ; ಎಚ್ಚು: ಬಾಣಬಿಡು;

ಪದವಿಂಗಡಣೆ:
ಜಾಳಿಸಿತು +ರಥ +ಜಡಿವ +ಕೌರವನ್
ಆಳ +ಝೋಂಪಿಸಿ +ಡೊಂಬು +ಮಾಡುವ
ಜಾಳ+ ಝಾಡಿಸಿ+ ಬೈದು +ಹೊಕ್ಕನು +ಮತ್ತೆ +ಗುರುಸೂನು
ಖೂಳ +ಫಡಫಡ+ ಜಾರದಿರು+ ತೋರ್
ಆಳ+ ತೂರಿದ +ಡೊಂಬು +ಬೇಡ+ ವಿ
ಡಾಳ+ ವಿದ್ಯೆಗಳ್+ಎಮ್ಮೊಡನ್+ಎನುತ್+ಎಚ್ಚನ್+ಅರ್ಜುನನ

ಅಚ್ಚರಿ:
(೧) ಅರ್ಜುನನನ್ನು ಬೈಯ್ಯುವ ಬಗೆ – ಖೂಳ, ಫಡ
(೨) ಅಶ್ವತ್ಥಾಮನು ಸೈನ್ಯವನ್ನು ಬಯ್ಯುವ ಬಗೆ – ಕೌರವನಾಳ ಝೋಂಪಿಸಿ ಡೊಂಬು ಮಾಡುವ
ಜಾಳ ಝಾಡಿಸಿ ಬೈದು

ಪದ್ಯ ೨೮: ಅರ್ಜುನನ ಬಾಣ ಪ್ರಯೋಗ ಹೇಗಿತ್ತು?

ಆವರಿಸಿದುದು ಮತ್ತೆ ಹೊಸ ಮೇ
ಳಾವದಲಿ ಕುರುಸೇನೆ ಘನ ಗಾಂ
ಡೀವ ವಿಗಳಿತ ವಿಶಿಖ ವಿಸರದ ವಹಿಗೆ ವಂಚಿಸದೆ
ಲಾವಣಿಗೆಗೊಳಲಲಸಿ ಯಮನನು
ಜೀವಿಗಳ ಜಡರಾಯ್ತು ಫಲುಗುಣ
ನಾವ ವಹಿಲದಲೆಸುವನೆಂಬುದನರಿಯೆ ನಾನೆಂದ (ಕರ್ಣ ಪರ್ವ, ೧೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಸಂಜಯನು ಅರ್ಜುನನ ಪರಾಕ್ರಮವನ್ನು ವಿವರಿಸುತ್ತಾ, ಮತ್ತೆ ಹೊಸರಚನೆಯಿಂದ ಒಂದುಗೂಡಿದ ಕೌರವಸೇನೆಯು ಅರ್ಜುನನ ಬಾಣಗಳ ಜ್ವಾಲೆಗೆ ಬೆದರದೆ ಎದುರಾಯಿತು. ಸೈನಿಕರು ಯಮನನ್ನು ಹಿಂಬಾಲಿಸಿ ರಣರಂಅದಲ್ಲಿ ಬಿದ್ದರು. ಅರ್ಜುನನು ಅದೆಷ್ಟು ವೇಗದಿಂದ ಬಾಣಗಳನ್ನು ಬಿಟ್ಟನೋ ನಾನು ತಿಳಿಯೆ ಎಂದು ಸಂಜಯನು ಹೇಳಿದನು.

ಅರ್ಥ:
ಆವರಿಸು: ಮುಚ್ಚು; ಮತ್ತೆ: ಪುನಃ; ಹೊಸ: ನವೀನ; ಮೇಳ: ಗುಂಪು; ಘನ: ದೊಡ್ಡ, ಮಹತ್ತ್ವವುಳ್ಳ; ವಿಗಳಿತ: ಹರಡಿದ, ಜಾರಿದ; ವಿಶಿಖ: ಬಾಣ, ಅಂಬು; ವಿಸರ: ವಿಸ್ತಾರ, ವ್ಯಾಪ್ತಿ, ಗುಂಪು; ವಹಿಲ: ವೇಗ; ವಂಚಿಸು: ಮೋಸ ಮಾಡು; ಲಾವಣಿಗೆ: ಆಕ್ರಮಣ, ದಾಳಿ; ಅಲಸು: ತಡಮಾಡು, ಆಯಾಸಗೊಳ್ಳು; ಯಮ: ಜವರಾಯ; ಜೀವಿ: ಪ್ರಾಣಿ, ಉಸಿರಾಡುವ ಸಾಮರ್ಥ್ಯವುಳ್ಳದ್ದು; ಜಡ: ಅಚೇತನವಾದುದು; ವಹಿಲ:ಬೇಗ, ತ್ವರೆ;ಎಸು:ಬಾಣ ಪ್ರಯೋಗ ಮಾಡು; ಅರಿ: ತಿಳಿ;

ಪದವಿಂಗಡಣೆ:
ಆವರಿಸಿದುದು +ಮತ್ತೆ +ಹೊಸ +ಮೇ
ಳಾವದಲಿ +ಕುರುಸೇನೆ +ಘನ +ಗಾಂ
ಡೀವ +ವಿಗಳಿತ +ವಿಶಿಖ+ ವಿಸರದ +ವಹಿಗೆ +ವಂಚಿಸದೆ
ಲಾವಣಿಗೆಗೊಳ್+ಅಲಸಿ +ಯಮನನು
ಜೀವಿಗಳ +ಜಡರಾಯ್ತು +ಫಲುಗುಣನ್
ಆವ +ವಹಿಲದಲ್+ಎಸುವನ್+ಎಂಬುದನ್+ಅರಿಯೆ +ನಾನೆಂದ

ಅಚ್ಚರಿ:
(೧)ವ ಕಾರದ ಸಾಲು ಪದಗಳು – ವಿಗಳಿತ ವಿಶಿಖ ವಿಸರದ ವಹಿಗೆ ವಂಚಿಸದೆ
(೨) ಉಪಮಾನದ ಪ್ರಯೋಗ – ಲಾವಣಿಗೆಗೊಳಲಲಸಿ ಯಮನನು ಜೀವಿಗಳ ಜಡರಾಯ್ತು