ಪದ್ಯ ೩೦: ಕರ್ಣನ ಪಟ್ಟಾಭಿಷೇಕದಿಂದ ಯಾರಿಗೆ ಸಂತಸವಾಯಿತು?

ಅರಳಿತರಸನ ವದನ ಶಕುನಿಯ
ಹರುಷಮಿಗೆ ದುಶ್ಯಾಸನಂಗು
ಬ್ಬರಿಸೆ ರೋಮಾವಳಿ ವಿಕರ್ಣಾದಿಗಳ ಮನ ನಲಿಯೆ
ಗುರುಜ ಕೃಪ ಕೃತವರ್ಮ ಶಲ್ಯಾ
ದ್ಯರಿಗೆ ಹೊಸಕದೊಲಹು ಮಿಗಿಲಾ
ಯ್ತಿರುಳು ಕರ್ಣಗೆ ಪಟ್ಟವಾಯಿತು ಭೂಪ ಕೇಳೆಂದ (ಕರ್ಣ ಪರ್ವ, ೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಕರ್ಣನು ಸೇನಾಧಿಪತಿಯಾಗುತ್ತಲೇ ದುರ್ಯೋಧನನ ಮುಖವರಳಿತು, ಶಕುನಿಗೆ ಅತಿಶಯ ಸಂತೋಷವಾಯಿತು. ದುಶ್ಯಾಸನಿಗೆ ಸಂತೋಷದ ರೋಮಾಂಚನವಾಯಿತು. ವಿಕರ್ಣಾದಿಗಳು ನಲಿದರು. ಅಶ್ವತ್ಥಾಮ, ಕೃಪಚಾರ್ಯರು, ಕೃತವರ್ಮ, ಶಲ್ಯನೇ ಮೊದಲಾದವರು ಮೇಲು ನೋಟಕ್ಕೆ ಸಂತೋಷಗೊಂಡರು ಒಳಗೆ ಕತ್ತಲೆಯನ್ನು ಕಾಣತೊಡಗಿದರು.

ಅರ್ಥ:
ಅರಳು: ಸಂತೋಷಗೊಳ್ಳು, ಅಗಲವಾಗು; ವದನ: ಮುಖ; ಅರಸ: ರಾಜ; ಹರುಷ: ಸಂತೋಷ; ಉಬ್ಬರಿಸು: ಹೆಚ್ಚಳ; ರೊಮ: ಕೂದಲು; ಆವಳಿ: ಸಾಲು; ಮನ: ಮನಸ್ಸು; ನಲಿ: ಸಂತೋಷಪಡು, ಆನಂದಿಸು; ಗುರುಜ: ಅಶ್ವತ್ಥಾಮ; ಆದಿ: ಮುಂತಾದ; ಹೊಸಕು: ಉಜ್ಜು, ತಿಕ್ಕು; ಒಲುಹು: ಒಲವು; ಮಿಗಿಲು: ಹೆಚ್ಚಾಗು; ಇರುಳು: ಕತ್ತಲೆ; ಭೂಪ: ರಾಜ;

ಪದವಿಂಗಡಣೆ:
ಅರಳಿತ್+ಅರಸನ +ವದನ +ಶಕುನಿಯ
ಹರುಷಮಿಗೆ +ದುಶ್ಯಾಸನಂಗ್+
ಉಬ್ಬರಿಸೆ+ ರೋಮಾವಳಿ +ವಿಕರ್ಣಾದಿಗಳ +ಮನ +ನಲಿಯೆ
ಗುರುಜ +ಕೃಪ +ಕೃತವರ್ಮ +ಶಲ್ಯಾ
ದ್ಯರಿಗೆ +ಹೊಸಕದ್+ಒಲಹು +ಮಿಗಿಲಾಯ್ತ್
ಇರುಳು +ಕರ್ಣಗೆ +ಪಟ್ಟವಾಯಿತು +ಭೂಪ +ಕೇಳೆಂದ

ಅಚ್ಚರಿ:
(೧) ಅರಳಿತು, ಹರುಷ, ಉಬ್ಬರಿಸು – ಸಂತೋಷವನ್ನು ಸೂಚಿಸುವ ಪದಗಳು
(೨) ಅಶ್ವತ್ಥಾಮನನ್ನು ಗುರುಜ ಎಂದು ಕರೆದಿರುವುದು
(೩) ಹೊಸಕದೊಲಹು ಮಿಗಿಲಾಯ್ತಿರುಳು – ಪದಗಳ ಬಳಕೆ

ಪದ್ಯ ೨೯: ಕರ್ಣನು ಪಟ್ಟಾಭಿಷಿಕ್ತನಾದ ನಂತರದ ದೃಶ್ಯ ಹೇಗಿತ್ತು?

ವಿರಚಿಸಿತು ಪಟ್ಟಾಭಿಷೇಕೋ
ತ್ಕರುಷ ಮಂತ್ರಾಕ್ಷತೆಯ ಮಳೆಗಳ
ಕರೆದರವನೀಸುರರು ಜಯರವಮೇಘಘೋಷದಲಿ
ಗುರುಸುತಾದಿ ಮಹಾಪ್ರಧಾನರು
ದರುಶನವ ನೀಡಿದರು ಕರ್ಣನ
ಬಿರುದಿನುಬ್ಬಟೆಲಹರಿ ಮಸಗಿತು ವಂದಿಜಲಧಿಯಲಿ (ಕರ್ಣ ಪರ್ವ, ೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕರ್ಣನಿಗೆ ಸೇನಾಧಿಪತ್ಯದ ಪಟ್ಟಾಭಿಷೇಕವಾಯಿತು. ಬ್ರಾಹ್ಮಣರು ಮಂತ್ರಾಕ್ಷತೆಗಳ ಮಳೆ ಕರೆದರು. ಗುಡುಗಿನ ಮೊಳಗಿನಂತಹ ಜಯಘೋಷಗಳಾದವು. ಅಶ್ವತ್ಥಾಮನೇ ಮೊದಲಾದ ಮಹಾಪ್ರಧಾನರು ಸೇನಾಧಿಪತಿಯನ್ನು ಕಂಡು ಗೌರವಿಸಿದರು. ವಂದಿಮಾಗಧರು ಕರ್ಣನ ಬಿರುದುಗಳನ್ನು ಹೊಗಳಿದರು.

ಅರ್ಥ:
ವಿರಚಿಸು: ನಿರ್ಮಿಸು; ಅಭಿಷೇಕ:ಪಟ್ಟ ಕಟ್ಟುವಾಗ ಮಾಡಿಸುವ ಮಂಗಳಸ್ನಾನ; ಪಟ್ಟ: ಪದವಿ; ಉತ್ಕರುಷ: ಹೆಚ್ಚಳ; ಮಂತ್ರಾಕ್ಷತೆ: ಭಕಾರ್ಯಗಳಲ್ಲಿ ಮಂತ್ರ ಪೂರ್ವಕವಾಗಿ ಬಳಸುವ ಅರಿಸಿನ ಯಾ ಕುಂಕುಮದಲ್ಲಿ ಕಲಸಿದ ಅಕ್ಕಿ; ಮಳೆ: ವರ್ಷ; ಕರೆ: ಬರೆಮಾಡು; ಅವನೀಸುರ: ಬ್ರಾಹ್ಮಣ; ಅವನಿ: ಭೂಮಿ; ಜಯರವ: ವಿಜಯಘೋಷ; ಮೇಘ: ಮೋಡ; ಘೋಷ: ಜೋರಾದ ಶಬ್ದ; ಗುರು: ಆಚಾರ್ಯ; ಸುತ: ಮಗ; ಆಗಿ: ಉಳಿದ; ಮಹಾ: ಶ್ರೇಷ್ಠ; ಪ್ರಧಾನ: ಮುಖ್ಯ; ದರುಶನ: ನೋಟ; ಬಿರುದು: ಗೌರವಸೂಚಕ ಹೆಸರು; ಉಬ್ಬಟೆ: ಅತಿಶಯ, ಹಿರಿಮೆ; ಲಹರಿ: ರಭಸ, ಆವೇಗ; ಮಸಗು: ಹರಡು; ವಂದಿ:ಹೊಗಳು ಭಟ್ಟ; ಜಲಧಿ: ಸಾಗರ;

ಪದವಿಂಗಡಣೆ:
ವಿರಚಿಸಿತು +ಪಟ್ಟಾಭಿಷೇಕ+
ಉತ್ಕರುಷ +ಮಂತ್ರಾಕ್ಷತೆಯ +ಮಳೆಗಳ
ಕರೆದರ್+ಅವನೀಸುರರು+ ಜಯ+ರವ+ಮೇಘ+ಘೋಷದಲಿ
ಗುರುಸುತ+ಆದಿ+ ಮಹಾ+ಪ್ರಧಾನರು
ದರುಶನವ +ನೀಡಿದರು +ಕರ್ಣನ
ಬಿರುದಿನ್+ಉಬ್ಬಟೆ+ಲಹರಿ +ಮಸಗಿತು +ವಂದಿ+ಜಲಧಿಯಲಿ

ಅಚ್ಚರಿ:
(೧) ಉಪಮಾನಗಳ ಪ್ರಯೋಗ: ಮಂತ್ರಾಕ್ಷತೆಯ ಮಳೆ; ಜಯರವಮೇಘ ಘೋಷ; ಬಿರುದಿನುಬ್ಬಟೆ ಲಹರಿ ಮಸಗಿತು ವಂದಿ ಜಲಧಿಯಲಿ

ಪದ್ಯ ೨೮: ಕರ್ಣನ ಸೇನಾಧಿಪತ್ಯದ ಪದಗ್ರಹಣ ಹೇಗೆ ನಡೆಯಿತು?

ಕರಸಿದನು ಭೂಸುರರನೌದುಂ
ಬರದ ಮಣಿ ಮಡಿವರ್ಗ ದೂರ್ವಾಂ
ಕುರ ಸಿತಾಕ್ಷತ ಧವಳಸರ್ಷಪ ವರಫಲಾವಳಿಯ
ತರಿಸಿದನು ಹೊಂಗಳಶ ತತಿಯಲಿ
ವರ ನದೀವಾರಿಗಳನಾಡಂ
ಬರದ ಲಗ್ಗೆಯಲೊದರಿದವು ನಿಸ್ಸಾಳಕೋಟಿಗಳು (ಕರ್ಣ ಪರ್ವ, ೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಎಲ್ಲರೂ ಕರ್ಣನು ಸೇನಾಧಿಪತಿಯಾಗಲು ಸೂಚಿಸಿದ ನಂತರ ಸುಯೋಧನನು ಬ್ರಾಹ್ಮಣರನ್ನು ಕರೆಸಿದನು. ಪಟ್ಟಾಭಿಷೇಕಕ್ಕೆ ಬೇಕಾದ್ ಔದುಂಬರದ ಮಣಿ, ಶುಚಿಯಾದ ವಸ್ತ್ರಗಳು, ಗರಿಕೆ, ಬಿಳಿಯ ಅಕ್ಷತೆ, ಬಿಳಿ ಸಾಸುವೆ, ವಿಧವಿಧವಾದ ಹಣ್ಣುಗಳು, ಅನೇಕ ನದಿಗಳ ನೀರಿನಿಂದ ತುಂಬಿದ ಬಂಗಾರದ ಕೊಡಗಳು ಎಲ್ಲವನ್ನೂ ತರಿಸಿದನು. ಲೆಕ್ಕವಿಲ್ಲದಷ್ಟು ನಿಸ್ಸಾಳಗಳು ಮೊಳಗಿದವು.

ಅರ್ಥ:
ಕರಸು: ಬರೆಮಾಡು; ಭೂಸುರ: ಬ್ರಾಹ್ಮಣ; ಔದುಂಬರ: ಅತ್ತಿಯ ಮರ; ಮಣಿ: ರತ್ನ; ದೂರ್ವಾಂಕುರ: ಎಳೆಯ ಗರಿಕೆ ಹುಲ್ಲು; ಮಡಿ: ಶುಭ್ರ, ನೈರ್ಮಲ್ಯ; ಸಿತ: ಬಿಳಿ, ಶ್ವೇತ; ಅಕ್ಷತ:
ಅರಿಸಿನ ಅಥವಾ ಕುಂಕುಮ ಲೇಪಿತ ಮಂತ್ರಿತ ಅಕ್ಕಿ; ಧವಳ: ಬಿಳುಪು, ಶ್ರೇಷ್ಠ; ಸರ್ಷಪ:ಸಾಸುವೆ ಕಾಳು; ವರ: ಶ್ರೇಷ್ಠ; ಫಲ: ಹಣ್ಣು; ಆವಳಿ: ಗುಂಪು; ತರಿಸು: ಬರೆಮಾಡು; ಹೊಂಗಳಶ: ಚಿನ್ನದ ಕೊಡ; ತತಿ: ಗುಂಪು, ಸಾಲು; ವರ: ಶ್ರೇಷ್ಠ; ನದಿ: ಸರೋವರ; ವಾರಿ: ನೀರು; ಆಡಂಬರ: ತೋರಿಕೆ, ಢಂಭ ; ಲಗ್ಗೆ: ಮುತ್ತಿಗೆ; ಒದರು: ತೋರು; ನಿಸ್ಸಾಳ: ಚರ್ಮವಾದ್ಯ; ಕೋಟಿ: ಬಹಳ, ಲೆಕ್ಕವಿಲ್ಲದಷ್ಟು;

ಪದವಿಂಗಡಣೆ:
ಕರಸಿದನು +ಭೂಸುರರನ್+ಔದುಂ
ಬರದ+ ಮಣಿ +ಮಡಿವರ್ಗ+ ದೂರ್ವಾಂ
ಕುರ+ ಸಿತ+ಅಕ್ಷತ +ಧವಳ+ಸರ್ಷಪ+ ವರ+ಫಲಾವಳಿಯ
ತರಿಸಿದನು +ಹೊಂಗಳಶ+ ತತಿಯಲಿ
ವರ +ನದೀ+ವಾರಿಗಳನ್+ಆಡಂ
ಬರದ +ಲಗ್ಗೆಯಲ್+ಒದರಿದವು +ನಿಸ್ಸಾಳ+ಕೋಟಿಗಳು

ಅಚ್ಚರಿ:
(೧) ಔದುಂಬರ, ಮಡಿವರ್ಗ, ದೂರ್ವಾಂಕುರ, ಸಿತಾಕ್ಷತ, ಧವಳ ಸರ್ಷಪ, ವರಫಲಾವಳಿ, ಹೊಂಗಳಶ, ನದೀವಾರಿ, ನಿಸ್ಸಾಳ – ಕರ್ಣನ ಪದಗ್ರಹಣಕ್ಕೆ ತರಿಸಿದ ವಸ್ತುಗಳು
(೨) ಸಿತ, ಧವಳ – ಸಮನಾರ್ಥಕ ಪದ
(೩) ಆಡಂಬರ, ಔದುಂಬರ – ಪ್ರಾಸ ಪದಗಳು

ಪದ್ಯ ೨೭: ಅಶ್ವತ್ಥಾಮನು ಏಕೆ ಕರ್ಣನಿಗೆ ಪಟ್ಟಕಟ್ಟಲು ಸೂಚಿಸಿದನು?

ಆ ಮಹಾರಥ ಭೀಷ್ಮನೇ ಸ್ವೇ
ಚ್ಛಾಮರಣಿಯಾಚಾರ್ಯಚಾಪ
ವ್ಯೋಮಕೇಶನು ಹೊಕ್ಕು ಕಾಣರು ಹಗೆಗೆ ಹರಿವುಗಳ
ಆ ಮಹಾ ನಾರಾಯಣಾಸ್ತ್ರದ
ಸೀಮೆ ಸೀದುದು ಮಿಕ್ಕ ಭಟರು
ದ್ಧಾಮರೇ ಸಾಕಿನ್ನು ಸೇನಾಪತಿಯ ಮಾಡೆಂದ (ಕರ್ಣ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ತನ್ನ ಮಾತನ್ನು ಮುಂದುವರಿಸುತ್ತಾ, ಮಹಾರಥಿಗಳಾದ ಭೀಷ್ಮರು ಇಚ್ಛಾಮರಣಿ, ಆಚಾರ್ಯ ದ್ರೋಣರು ಧನುರ್ವಿದ್ಯೆಯಲ್ಲಿ ಶಿವನಿಗೆ ಸಮಾನರು, ಅವರಿಬ್ಬರೂ ಶತ್ರುಗಳನ್ನು ಸೋಲಿಸಲಾರದೆ ಹೋದರು. ನಾರಾಯಣಾಸ್ತ್ರದ ಪ್ರಭಾವವೂ ಶೂನ್ಯವಾಯಿತು. ಇನ್ನುಳಿದ ವೀರರು ಇವರಿಗಿಂತ ಮಿಕ್ಕವರೇ? ಕರ್ಣನಿಗೇ ಸೇನಾಧಿಪತ್ಯವನ್ನು ಕಟ್ಟು ಎಂದು ಹೇಳಿದನು.

ಅರ್ಥ:
ಮಹಾರಥ: ಪರಾಕ್ರಮಿ; ಸ್ವ: ಸ್ವಂತ; ಇಚ್ಛ: ಇಷ್ಟ; ಮರಣ: ಸಾವು; ಆಚಾರ್ಯ: ಗುರು; ಚಾಪ: ಬಿಲ್ಲು; ವ್ಯೋಮ: ಗಗನ, ಆಕಾಶ; ವ್ಯೋಮಕೇಶ: ಶಿವ; ಹೊಕ್ಕು: ಸೇರು; ಕಾಣು: ತೋರು, ಗೋಚರ; ಹಗೆ: ವೈರತ್ವ; ಹರಿವು:ರಭಸವುಳ್ಳ; ಅಸ್ತ್ರ: ಶಸ್ತ್ರ; ಸೀಮೆ: ಎಲ್ಲೆ, ಗಡಿ; ಸೀದು: ಒಟ್ಟು ಮಾಡಿಕೊಳ್ಳು; ಮಿಕ್ಕ: ಉಳಿದ; ಭಟರು: ಸೈನಿಕ; ಉದ್ಧಾಮ: ಶ್ರೇಷ್ಠ; ಸಾಕು: ನಿಲ್ಲಿಸು; ಸೇನಾಪತಿ: ದಳವಾಯಿ;

ಪದವಿಂಗಡಣೆ:
ಆ +ಮಹಾರಥ +ಭೀಷ್ಮನೇ +ಸ್ವ
ಇಚ್ಛಾಮರಣಿ+ ಆಚಾರ್ಯ+ಚಾಪ
ವ್ಯೋಮಕೇಶನು +ಹೊಕ್ಕು +ಕಾಣರು+ ಹಗೆಗೆ+ ಹರಿವುಗಳ
ಆ +ಮಹಾ +ನಾರಾಯಣ+ಅಸ್ತ್ರದ
ಸೀಮೆ +ಸೀದುದು +ಮಿಕ್ಕ +ಭಟರ್
ಉದ್ಧಾಮರೇ +ಸಾಕಿನ್ನು +ಸೇನಾಪತಿಯ +ಮಾಡೆಂದ

ಅಚ್ಚರಿ:
(೧) ಶಿವನನ್ನು ವ್ಯೋಮಕೇಶ ಎಂದು ಹೇಳಿರುವುದು
(೨) ಒಂದೇ ಅಕ್ಷರದ ಜೋಡಿ ಪದಗಳ ಬಳಕೆ – ಸೀಮೆ ಸೀದುದು; ಹಗೆಗೆ ಹರಿವುಗಳ; ಸಾಕಿನ್ನು ಸೇನಾಪತಿಯ

ಪದ್ಯ ೨೬: ಕರ್ಣನಿಗೆ ಸೇನಾಧಿಪತ್ಯ ಪಟ್ಟ ಕಟ್ಟುವ ಪ್ರಸ್ತಾಪಕ್ಕೆ ಅಶ್ವತ್ಥಾಮನ ಅಭಿಪ್ರಾಯವೇನು?

ಎಮ್ಮ ತೋರಿಸಬೇಡ ಸುಖದಲಿ
ನಿಮ್ಮ ಚಿತ್ತಕೆ ಬಹುದ ಮಾಡುವು
ದೆಮ್ಮ ಹೃದಯ ವ್ಯಥೆಯ ನಾವಿನ್ನಾಡಿ ಫಲವೇನು
ಎಮ್ಮ ಪುಣ್ಯದ ಬೆಳೆಗಳೊಣಗಿದ
ಡಮ್ಮಿ ಮಾಡುವುದೇನು ಕರ್ಣನು
ನಮ್ಮ ದಳವಾಯೆಂದನಶ್ವತ್ಥಾಮನರಸಂಗೆ (ಕರ್ಣ ಪರ್ವ, ೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಲ್ಲರೂ ಅಶ್ವತ್ಥಾಮನ ಕಡೆ ನೋಡಲು, ನಮ್ಮನ್ನು ತೋರಿಸಲು ಹೋಗಬೇಡಿ, ನಿನ್ನ ಮನಸ್ಸಿಗೆ ಬಂದಂತೆ ಮಾಡು, ನಮ್ಮ ಮನೋವ್ಯಥೆಯನ್ನು ಬಾಯಿ ಬಿಟ್ಟು ಆಡಿ ಫಲವೇನು? ನಮ್ಮ ಪುಣ್ಯಾ ಬೆಳೆಗಳು ಒಣಗಿ ಹೋದವು. ಹೋರಾಡಿ ಏನು ಮಾಡಬಹುದು ಕರ್ಣನೇ ನಮ್ಮ ಸೇನಾಧಿಪತಿ ಎಂದು ಅಶ್ವತ್ಥಾಮನು ನುಡಿದನು.

ಅರ್ಥ:
ಎಮ್ಮ: ನಮ್ಮ; ತೋರು: ಗೋಚರ, ಕಾಣು; ಸುಖ: ಆನಂದ, ಸಂತೋಷ; ಚಿತ್ತ: ಮನಸ್ಸು; ಬಹುದು: ಬರುವುದೋ; ಮಾಡು: ಕಾರ್ಯ ರೂಪಕ್ಕೆ ತರುವುದು; ಹೃದಯ: ವಕ್ಷಸ್ಥಳ; ವ್ಯಥೆ: ದುಃಖ; ಫಲ: ಪ್ರಯೋಜನ; ಪುಣ್ಯ:ಸದಾಚಾರ; ಬೆಳೆ: ಪೈರು; ಒಣಗು: ಬಾಡು, ಸಾರಹೀನ; ದಳವಾಯಿ: ಸೇನಾಧಿಪತಿ; ಅರಸ: ರಾಜ;

ಪದವಿಂಗಡಣೆ:
ಎಮ್ಮ +ತೋರಿಸಬೇಡ +ಸುಖದಲಿ
ನಿಮ್ಮ +ಚಿತ್ತಕೆ +ಬಹುದ +ಮಾಡುವುದ್
ಎಮ್ಮ +ಹೃದಯ +ವ್ಯಥೆಯ +ನಾವಿನ್ನಾಡಿ +ಫಲವೇನು
ಎಮ್ಮ +ಪುಣ್ಯದ +ಬೆಳೆಗಳ್+ಒಣಗಿದ
ಡಮ್ಮಿ +ಮಾಡುವುದೇನು +ಕರ್ಣನು
ನಮ್ಮ +ದಳವಾಯೆಂದನ್+ಅಶ್ವತ್ಥಾಮನ್+ಅರಸಂಗೆ

ಅಚ್ಚರಿ:
(೧) ಎಮ್ಮ – ೩ ಬಾರಿ ಪ್ರಯೋಗ
(೨) ಪುಣ್ಯವು ಹೋಯಿತೆನಲು ಬೆಳೆಗಳ ಉಪಮಾನ – ಎಮ್ಮ ಪುಣ್ಯದ ಬೆಳೆಗಳೊಣಗಿದಡಮ್ಮಿ ಮಾಡುವುದೇನು