ಪದ್ಯ ೨೩: ಉಳಿದ ಯಾವ ರಾಜರು ಧರ್ಮಜನಿಗೆ ಅಕ್ಷೋಹಿಣಿ ಬಲವನ್ನು ತೋರಿದರು?

ವರ ವಿರಾಟನು ಶಂಖ ನೃಪನು
ತ್ತರ ಶತದ್ಯುಮ್ನಕನು ಶತ ಚಂ
ದ್ರರು ಶತಾನೀಕರು ಶತಾಯುಧರೆನಿಪ ನೃಪವರರು
ತುರುಕರುರು ಸಾಹಣ ಸಮುದ್ರದ
ವರುಯವನ ಖುರಸಾಣ ಕಾಶೀ
ಶ್ವರರು ತಮ್ಮಕ್ಷೋಹಿಣಿಯ ತೋರಿದರು ಧರ್ಮಜಗೆ (ಉದ್ಯೋಗ ಪರ್ವ, ೧೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ವಿರಾಟ ರಾಜನು, ಅವನ ಮಕ್ಕಳು, ಉತ್ತರ ಶಂಖ, ಶತದ್ಯುಮ್ನ ಶತಚಂದ್ರರು, ವಿರಾಟನ ಬಳಿಯಿದ್ದ ಇನ್ನೊಬ್ಬ ರಾಜನಾದ ಶತಾನೀಕ, ಶತಾಯುಧ, ತುರುಕರು, ಸಾಹಣ, ಯವನರು, ಖುರಸಾಣ, ಕಾಶೀರಾಜರು ತಮ್ಮ ಅಕ್ಷೋಹಿಣಿ ಬಲವನ್ನು ಧರ್ಮಜನಿಗೆ ತೋರಿದರು.

ಅರ್ಥ:
ವರ: ಶ್ರೇಷ್ಠ; ನೃಪ: ರಾಜ; ತುರುಕ: ಅಶ್ವಾರೋಹಿ;ಸಮುದ್ರ: ಸಾಗರ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ತೋರು: ಪ್ರದರ್ಶಿಸು;

ಪದವಿಂಗಡಣೆ:
ವರ +ವಿರಾಟನು +ಶಂಖ +ನೃಪನ್
ಉತ್ತರ +ಶತದ್ಯುಮ್ನಕನು +ಶತ ಚಂ
ದ್ರರು +ಶತಾನೀಕರು +ಶತಾಯುಧರ್+ಎನಿಪ +ನೃಪವರರು
ತುರುಕರುರು +ಸಾಹಣ +ಸಮುದ್ರದ
ವರುಯವನ +ಖುರಸಾಣ +ಕಾಶೀ
ಶ್ವರರು +ತಮ್+ ಅಕ್ಷೋಹಿಣಿಯ +ತೋರಿದರು +ಧರ್ಮಜಗೆ

ಅಚ್ಚರಿ:
(೧) ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ;
(೨) ಶತದ್ಯುಮ್ನ, ಶತಚಂದ್ರ, ಶತಾನೀಕ, ಶತಾಯುಧ – ಶತ ಪದದಿಂದ ಪ್ರಾರಂಭವಾಗುವ ಹೆಸರುಗಳು

ಪದ್ಯ ೨೨: ಮತ್ತಾವ ರಾಜರು ತಮ್ಮ ಬಲವನ್ನು ತೋರಿಸಿದರು?

ವರ ಯುಧಾಯನ್ಯೂತ್ತಮೌಜಸ
ರುರು ಶಿಖಂಡಿ ಸುಚೇಕಿತಾನ ಸ
ಮರ ದುರಂಧರ ವೀರ ಪಾಂಚಾಲ ಕ್ಷಿತೀಶ್ವರರು
ತುರಗ ಗಜರಥ ಪಾಯದಳ ಸಾ
ಗರದ ಸಂರಂಭದೊಳು ನಿಜಸಂ
ವರಣೆಯನು ತೋರಿದರು ತಮ್ಮಕ್ಷೋಹಿಣೀ ಬಲವ (ಉದ್ಯೋಗ ಪರ್ವ, ೧೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರ ಮತ್ತು ಕೃಷ್ಣರಿಗೆ ಯುಧಾಮನ್ಯು, ಉತ್ತಮೌಜಸ, ಶಿಖಂಡಿ, ಚೀಕಿತಾನರೂ, ವೀರ ಪಾಂಚಾಲ ರಾಜರೂ ತಮ್ಮ ಅಕ್ಷೋಹಿಣೀ ಬಲವನ್ನು ತೋರಿಸಿದರು.

ಅರ್ಥ:
ವರ: ಶ್ರೇಷ್ಠ; ಸಮರ: ಯುದ್ಧ; ದುರಂಧರ: ಪ್ರವೀಣ; ವೀರ: ಶೂರ; ಕ್ಷಿತೀಶ್ವರ: ರಾಜ; ತುರಗ: ಕುದುರೆ; ಗಜ: ಆನೆ; ರಥ: ಬಂಡಿ; ಪಾಯ: ಪಾದ, ಅಡಿ, ಚರಣ; ಬಲ: ಸೈನ್ಯ; ಸಾಗರ: ಸಮುದ್ರ; ಸಂರಂಭ: ಸಡಗರ, ಸಂಭ್ರಮ; ನಿಜ: ದಿಟ; ಸಂವರಣೆ: ಸಂಗ್ರಹ, ಶೇಖರಣೆ; ತೋರು: ಪ್ರದರ್ಶಿಸು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಬಲ: ಶಕ್ತಿ; ಉರು: ಶ್ರೇಷ್ಠವಾದ;

ಪದವಿಂಗಡಣೆ:
ವರ +ಯುಧಾಯನ್ಯು+ಉತ್ತಮೌಜಸರ್
ಉರು+ ಶಿಖಂಡಿ +ಸುಚೇಕಿತಾನ+ ಸ
ಮರ +ದುರಂಧರ+ ವೀರ +ಪಾಂಚಾಲ +ಕ್ಷಿತೀಶ್ವರರು
ತುರಗ +ಗಜರಥ +ಪಾಯದಳ +ಸಾ
ಗರದ +ಸಂರಂಭದೊಳು +ನಿಜಸಂ
ವರಣೆಯನು +ತೋರಿದರು +ತಮ್+ ಅಕ್ಷೋಹಿಣೀ +ಬಲವ

ಅಚ್ಚರಿ:
(೧) ದುರಂಧರ, ವೀರ – ಸಮನಾರ್ಥಕ ಪದ
(೨) ಯಧಾಮನ್ಯುವು ಒಬ್ಬ ಪಾಂಚಾಲ ರಾಜ, ಉತ್ತಮೌಜಸನು ದ್ರುಪದನ ಮಗ;
(೩) ಸಮರ, ಸಾಗರ, ಸಂವರಣೆ, ಸಂರಂಭ – ಸ ಕಾರದ ಪದಗಳು

ಪದ್ಯ ೨೧: ಯುಧಿಷ್ಠಿರನ ಬಳಿ ಎಷ್ಟು ಸೈನ್ಯದ ಬಲವಿತ್ತು?

ಹರಿಯುಧಿಷ್ಠಿರರೊಂದು ಗಜಕಂ
ಧರದೊಳಿದ್ದರು ನಿಖಿಳಸೇನೆಯ
ತೆರಳಿಕೆಯ ತೋರಿಸುತೆ ಬಂದರು ಭೀಮ ಫಲುಗುಣರು
ಬಿರುದ ಧೃಷ್ಟದ್ಯುಮ್ನ ಮೊದಲಾ
ಗಿರೆ ಕುತೂಹಲಿ ದ್ರುಪದ ಭೂವರ
ನುರವಣಿಸಿ ತೋರಿಸಿದನೊಂದ ಕ್ಷೋಹಿಣೀ ಬಲವ (ಉದ್ಯೋಗ ಪರ್ವ, ೧೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕೃಷ್ಣ ಮತ್ತು ಯುಧಿಷ್ಠಿರರು ಒಂದು ಆನೆಯ ಮೇಲೆ ಕೂತು ಇಡೀ ಸೈನ್ಯವನ್ನು ವೀಕ್ಷಿಸಲು ಮುಂದಾದರು. ಭೀಮ ಮತ್ತು ಅರ್ಜುನರು ಚಲಿಸುವ ಸೈನ್ಯವನ್ನು ಅವರಿಗೆ ತೋರಿಸುತ್ತಾ ಬಂದರು. ಉತ್ಸಾಹಿಗಳಾದ ಧೃಷ್ಟದ್ಯುಮ್ನನನ್ನು ಮತ್ತು ಒಂದು ಅಕ್ಷೋಹಿಣಿ ಸೈನ್ಯವನ್ನು ದ್ರುಪದನು ತೋರಿಸಿದನು.

ಅರ್ಥ:
ಹರಿ: ಕೃಷ್ಣ; ಗಜ: ಆನೆ; ಕಂಧರ: ಕಂಠ, ಕೊರಳು; ನಿಖಿಳ: ಎಲ್ಲಾ; ಸೇನೆ: ಸೈನ್ಯ; ತೆರಳು: ಹೋಗು, ನಡೆ; ತೋರಿಸು: ಪ್ರದರ್ಶಿಸು; ಬಂದರು: ಆಗಮಿಸು; ಫಲುಗುಣ: ಅರ್ಜುನ; ಬಿರು: ಬಿರುಸಾದುದು, ಗಟ್ಟಿಯಾದುದು; ಮೊದಲಾದ: ಮುಂತಾದ; ಕುತೂಹಲ: ವಿಸ್ಮಯ, ಅಚ್ಚರಿ; ಭೂವರ: ರಾಜ; ಉರವಣಿಸು: ಆತುರಿಸು, ಉತ್ಸಾಹಿಸು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಬಲ: ಶಕ್ತಿ, ಸೈನ್ಯ;

ಪದವಿಂಗಡಣೆ:
ಹರಿ+ಯುಧಿಷ್ಠಿರರ್+ಒಂದು +ಗಜ+ಕಂ
ಧರದೊಳಿದ್ದರು +ನಿಖಿಳ+ಸೇನೆಯ
ತೆರಳಿಕೆಯ +ತೋರಿಸುತೆ +ಬಂದರು +ಭೀಮ +ಫಲುಗುಣರು
ಬಿರುದ +ಧೃಷ್ಟದ್ಯುಮ್ನ +ಮೊದಲಾ
ಗಿರೆ+ ಕುತೂಹಲಿ+ ದ್ರುಪದ+ ಭೂವರನ್
ಉರವಣಿಸಿ +ತೋರಿಸಿದನ್+ಒಂದ್ ಅಕ್ಷೋಹಿಣೀ +ಬಲವ

ಅಚ್ಚರಿ:
(೧) ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; https://en.wikipedia.org/wiki/Akshauhini

ಪದ್ಯ ೨೦: ಸೈನ್ಯದ ಅಬ್ಬರವನ್ನು ಸಮುದ್ರಕ್ಕೆ ಹೋಲಿಸಬಹುದೆ?

ಅವನಿಪಾಲರ ಮಕುಟ ಮಣಿಗಣ
ನಿವಹವೆತ್ತಿಗ ಖಡ್ಗ ಪರಶುಗ
ಳವಿರಳದ ತೆರೆಗಳ ಪತಾಕಾವಳಿಯ ಬೆಳುನೊರೆಯ
ವಿವಿಧಗಜ ಯಹ ಜಲ ಚರೌಘದ
ಪವನಜನ ಕೈಸನ್ನೆಗಳ ಘನ
ಪವನಗತಿಯಲಿ ಲಹರಿಮಸಗಿತು ಬಹಳ ಬಲಜಲಧಿ (ಉದ್ಯೋಗ ಪರ್ವ, ೧೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ರಾಜರ ಕಿರೀಟಗಳಲ್ಲಿದ್ದ ಮಣಿಗಳು, ಎತ್ತಿದ ಕತ್ತಿ, ಗಂಡುಗೊಡಲಿಗಳೇ ತೆರೆಗಳು, ಬಾವುಟಗಳೇ ಬಿಳಿನೊರೆ, ಅನೇಕ ಆನೆ ಕುದುರೆಗಳೇ ಜಲಚರಗಳು, ಭೀಮನ ಕೈಸನ್ನೆಗಳೇ ಬೀಸುವ ಗಾಳಿ ಇಂತಹ ಬಲ ಸಮುದ್ರದಲ್ಲಾದ ಸದ್ದೆ ಕಡಲ ಮೊರೆತ ಎಂದು ಹೇಳುತ್ತಾ ಸಮುದ್ರದ ಬೋರ್ಗರೆಯನ್ನು ಸೈನ್ಯಕ್ಕೆ ಹೋಲಿಸಿದ್ದಾರೆ ಕುಮಾರವ್ಯಾಸರು.

ಅರ್ಥ:
ಅವನಿ: ಭೂಮಿ; ಅವನಿಪಾಲ: ರಾಜ; ಮಕುಟ: ಕಿರೀಟ; ಮಣಿ: ರತ್ನ; ಗಣ: ಗುಂಪು; ನಿವಹ: ಗುಂಪು, ಸಮೂಹ; ಇತ್ತು: ಮೇಲೇಳು, ತೋರು; ಖಡ್ಗ: ಕತ್ತಿ; ಪರಶು:ಕೊಡಲಿ, ಕುಠಾರ; ಅವಿರಳ: ದಟ್ಟವಾದ; ತೆರೆ: ಬಿಚ್ಚು, ಆರಂಭ; ಪತಾಕ: ಬಾವುಟ; ಆವಳಿ: ಗುಂಪು; ಬೆಳು: ಬಿಳುಪು; ನೊರೆ: ಬುರುಗು; ವಿವಿಧ: ಹಲವಾರು; ಗಜ: ಆನೆ; ಹಯ: ಕುದುರೆ; ಜಲ: ನೀರು; ಚರ: ಓಡಾಡುವ; ಔಘ: ಗುಂಪು, ಸಮೂಹ; ಪವನಜ: ಭೀಮ; ಪವನ: ಗಾಳಿ; ಕೈ: ಕರ; ಸನ್ನೆ: ಗುರುತು, ಸಂಕೇತ, ಸುಳಿವು; ಘನ: ಭಾರ, ಶ್ರೇಷ್ಠ; ಗತಿ: ವೇಗ; ಲಹರಿ: ರಭಸ, ಆವೇಗ; ಮಸಗು:ಹರಡು; ಕೆರಳು; ತಿಕ್ಕು; ಬಲ: ಶಕ್ತಿ; ಜಲಧಿ: ಸಾಗರ;

ಪದವಿಂಗಡಣೆ:
ಅವನಿಪಾಲರ +ಮಕುಟ +ಮಣಿಗಣ
ನಿವಹವ್+ಎತ್ತಿಗ +ಖಡ್ಗ +ಪರಶುಗಳ್
ಅವಿರಳದ +ತೆರೆಗಳ +ಪತಾಕ+ಆವಳಿಯ +ಬೆಳುನೊರೆಯ
ವಿವಿಧಗಜ +ಹಯ+ ಜಲ +ಚರೌಘದ
ಪವನಜನ +ಕೈಸನ್ನೆಗಳ+ ಘನ
ಪವನಗತಿಯಲಿ +ಲಹರಿ+ಮಸಗಿತು +ಬಹಳ +ಬಲಜಲಧಿ

ಅಚ್ಚರಿ:
(೧) ಗಣ, ನಿವಹ, ಆವಳಿ, ಔಘ – ಸಮನಾರ್ಥಕ ಪದ
(೨) ಪವನ – ೫, ೬ ಸಾಲಿನ ಮೊದಲ ಪದ

ಪದ್ಯ ೧೯: ಯಾವ ರೀತಿಯ ರಥಗಳು ಸೈನ್ಯದಲ್ಲಿದ್ದವು?

ಥಳಥಳಿಪ ಸೂಲಿಗೆಯ ಮುಮ್ಮೊನೆ
ಗಳ ರಥಾಂಗದ ಮೇಲು ಪಸರದ
ಪಳಹರದ ಖುರಗತಿಯ ಜೋಡ ಜವಾಯ್ಲ ಕುದುರೆಗಳ
ಬಲದ ಬದ್ದರಗೊಟ್ಟಿದಂಬಿನ
ಹೊಳೆವ ಹೊದೆಗಳ ಸೂತರುರವಣೆ
ಗಳ ಸುರೇಖೆಯ ಗತಿಯ ವಾಜಿಯ ರಥವ ನೋಡಿದರು (ಉದ್ಯೋಗ ಪರ್ವ, ೧೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಥಳಥಳಿಸುವ ಈಟಿಯ ಚೂಪಾದ ತುದಿಗಳು, ಚಕ್ರಗಳು, ರಥದ ಮೇಲೆ ಬಿಗಿದು ಕಟ್ಟಿದ ಧ್ವಜ, ನೆಲಕ್ಕೆ ಗೊರಸನ್ನೊದೆದು ಹೋಗುವ ವೇಗದ ಕುದುರೆಗಳು, ಸುತ್ತಲೂ ಸೈನಿಕರು ಒಟ್ಟಿ ನಿಲ್ಲಿಸಿದ ಗಾಡಿಗಳಲ್ಲಿದ್ದ ಬಾಣಗಳ ಹೊರೆಗಳು, ಉತ್ಸಾಹದಿಂದ ನಡೆಸುವ ಸಾರಥಿಗಳಿರುವ ರಥಗಳು ಸೈನ್ಯಗಳಲ್ಲಿ ಕಂಡವು.

ಅರ್ಥ:
ಥಳಥಳ: ಹೊಳೆವ; ಸೂಲಿಗೆ: ಈಟಿ; ಮೊನೆ: ತುದಿ, ಕೊನೆ, ಹರಿತವಾದ; ರಥ: ಬಂಡಿ; ಅಂಗ: ಭಾಗ; ಮೇಲೆ: ಎತ್ತರ; ಪಸರ: ಸಮೂಹ, ವಿಸ್ತಾರ; ಪಳಹರ: ಬಾವುಟ, ಧ್ವಜ; ಖುರ: ಕುದುರೆ ದನಕರು ಕಾಲಿನ ಗೊರಸು, ಕೊಳಗು; ಜೋಡು: ಜೊತೆ; ಜವಾಯ್ಲ: ವೇಗ; ಕುದುರೆ: ಅಶ್ವ; ಬಲ: ಶಕ್ತಿ; ಬದ್ದರ: ಬಿಗಿ, ಒಂದು ಬಗೆಯ ಆನೆ; ಒಟ್ಟು: ಸಮೂಹ, ಸೇರಿ; ಅಂಬು: ಬಾಣ; ಹೊಳೆ: ಕಾಂತಿ; ಹೊದೆ:ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಸೂತ: ರಥವನ್ನು ನಡೆಸುವವನು, ಸಾರ; ಉರವಣೆ: ಆತುರ, ಅವಸರ; ಸುರೇಖೆ: ಚೆಲುವಿನ ಮಾಟ, ಆಕಾರಸೌಷ್ಠವ; ಗತಿ: ವೇಗ; ವಾಜಿ: ಕುದುರೆ, ಬಾಣ; ರಥ: ಬಂಡಿ; ನೋಡು: ವೀಕ್ಷಿಸು;

ಪದವಿಂಗಡಣೆ:
ಥಳಥಳಿಪ +ಸೂಲಿಗೆಯ +ಮುಮ್ಮೊನೆ
ಗಳ +ರಥಾಂಗದ +ಮೇಲು +ಪಸರದ
ಪಳಹರದ+ ಖುರಗತಿಯ +ಜೋಡ +ಜವಾಯ್ಲ +ಕುದುರೆಗಳ
ಬಲದ+ ಬದ್ದರಗ್+ಒಟ್ಟಿದ್+ಅಂಬಿನ
ಹೊಳೆವ +ಹೊದೆಗಳ +ಸೂತರ್+ಉರವಣೆ
ಗಳ +ಸುರೇಖೆಯ +ಗತಿಯ +ವಾಜಿಯ +ರಥವ +ನೋಡಿದರು

ಅಚ್ಚರಿ:
(೧) ವಾಜಿ, ಕುದುರೆ; ವಾಜಿ, ಅಂಬು; ಥಳಥಳಿ, ಹೊಳೆ; ಜವಾಯ್ಲ, ಗತಿ – ಸಮನಾರ್ಥಕ ಪದಗಳು

ಪದ್ಯ ೧೮: ಆನೆಗಳು ಯುದ್ಧರಂಗದಲ್ಲಿ ಹೇಗೆ ಚಲಿಸಿದವು?

ಶೈಲದೆಡಬಲದೊರತೆಯೆನಲು ಕ
ಪೋಲದೊಳು ದಾರಿಡುವ ಮದಜಲ
ದಾಳಿಗಳ ಭರಿಕೈಯ ಲವುಡಿಯ ವಜ್ರಮುಷ್ಟಿಗಳ
ನಾಳಿವಿಲುಗಳ ರಾಯಜೋದರ
ಮೇಲುಗಣೆಗಳ ಚಿತ್ರಗತಿ ಶುಂ
ಡಾಲಗಳ ನೋಡಿದರು ಗಜಸೇನಾ ಸಮುದ್ರದಲಿ (ಉದ್ಯೋಗ ಪರ್ವ, ೧೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಬೆಟ್ಟದ ಬದಿಯಲ್ಲಿ ಒಸರುವ ಝರಿಯೋ ಎನ್ನುವಂತೆ ಕಪೋಲದಲ್ಲಿ ಒಸರುವ ಮದಜಲಧಾರೆ, ಸೊಂಡಿಲಿನಲ್ಲಿ ಹಿಡಿದ ಲವುಡಿ, ವಜ್ರ, ಮುಷ್ಟಿಗಳು ನಿರ್ದಿಷ್ಟ ಅಳತೆಯ ಬಿಲ್ಲುಗಳನ್ನು ಬಾಣಗಳನ್ನು ಹಿಡಿದ ಜೋದರು ಮೇಲೆ ಕುಳಿತಿರಲು ಆನೆಗಳು ಸೇನಾ ಸಮುದ್ರದಲ್ಲಿ ವಿಚಿತ್ರ ಗತಿಯಿಂದ ಚಲಿಸಿದವು.

ಅರ್ಥ:
ಶೈಲ: ಬೆಟ್ಟ; ಎಡಬಲ: ಎರಡು ಬದಿ; ಒರತೆ: ನೀರು ಜಿನುಗುವ ತಗ್ಗು, ಒಸರು; ಎನಲು: ಹೇಳುವಂತೆ; ಕಪೋಲ: ಕೆನ್ನೆ, ಗಲ್ಲ; ದಾರಿ: ಹಾದಿ, ಮಾರ್ಗ; ಮದ; ಅಹಂಕಾರ; ಜಲ: ನೀರು; ದಾಳಿ: ಆಕ್ರಮಣ; ಆಲಿ: ಸಮೂಹ, ಸಾಲು; ಭರಿ: ಆನೆಯ ಸೊಂಡಿಲು; ಲವಡಿ: ದಾಸಿ; ವಜ್ರ: ಗಟ್ಟಿಯಾದ, ಬಲವಾದ; ಮುಷ್ಟಿ: ಮುಚ್ಚಿದ ಅಂಗೈ; ಜೋಧ: ಆನೆಮೇಲೆ ಕೂತು ಯುದ್ಧ ಮಾಡುವ ಯೋಧ; ರಾಯ: ರಾಜ; ಮೇಲುಗಣೆ: ಎತ್ತರ; ಚಿತ್ರ: ಆಶ್ಚರ್ಯ, ಪ್ರಧಾನವಾದ; ಗತಿ: ವೇಗ; ಶುಂಡಾಲ:ಆನೆ; ನೋಡು: ವೀಕ್ಷಿಸು; ಗಜ: ಆನೆ; ಸೇನ: ಸೈನ್ಯ; ಸಮುದ್ರ: ಸಾಗರ; ನಾಳಿವಿಲು: ಟೊಳ್ಳಾದ ಬಿಲ್ಲು;

ಪದವಿಂಗಡಣೆ:
ಶೈಲದ್+ಎಡಬಲದ್+ಒರತೆಯೆನಲು+ ಕ
ಪೋಲದೊಳು +ದಾರಿಡುವ +ಮದಜಲ
ದಾಳಿಗಳ+ ಭರಿಕೈಯ+ ಲವುಡಿಯ +ವಜ್ರಮುಷ್ಟಿಗಳ
ನಾಳಿವಿಲುಗಳ +ರಾಯ+ಜೋದರ
ಮೇಲುಗಣೆಗಳ+ ಚಿತ್ರಗತಿ+ ಶುಂ
ಡಾಲಗಳ+ ನೋಡಿದರು +ಗಜಸೇನಾ +ಸಮುದ್ರದಲಿ

ಅಚ್ಚರಿ:
(೧) ಆನೆಯ ಚಲನೆಯನ್ನು ಝರಿಗೆ ಹೋಲಿಸಿರುವ ರೀತಿ
(೨) ಶುಂಡಾಲ,ಗಜ – ಸಮನಾರ್ಥಕ ಪದ

ಪದ್ಯ ೧೭: ಯಾವ ರೀತಿಯ ಕುದುರೆಗಳನ್ನು ಸೇನಾ ನಾಯಕರು ನೋಡಿದರು?

ಅಳವಿಗೊಟ್ಟೊಡೆ ರವಿಯ ತುರಗವ
ನುಳುಹಿ ಮುಂಚುವ ಜವದ ನೊಸಲೊಳು
ಹೊಳೆದ ಕನ್ನಡಿಗಳ ಖುರಾಂತದ ಜಡಿವ ಜೋಡುಗಳ
ಬಿಳಿಯ ಚೌರಿಯ ಜಲ್ಲಿಗಳ ಹ
ತ್ತಳದ ರಾಹುತ ಸನ್ನೆಯೊಳು ನೆಲ
ನಲುಗೆ ನಿಗುರುವ ನಿಲುವ ನಿರುಪಮ ಹಯವ ನೋಡಿದರು (ಉದ್ಯೋಗ ಪರ್ವ, ೧೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ಪಂಥಕ್ಕೆ ಬಂದರೆ ಸೂರ್ಯನ ಕುದುರೆಗಳನ್ನು ಸೋಲಿಸಿ ಮುಂದಕ್ಕೆ ಹೋಗಬಲ್ಲ ವೇಗವನುಳ್ಳ, ಹಣೆಯಲ್ಲಿ ಹೊಳೆಯುವ ಕನ್ನಡಿಗಳ ಅಲಂಕಾರವುಳ್ಳ, ಗೊರಸಿನಲ್ಲಿ ನಾಲುಗಳು, ಬಿಳಿಯ ಚೌರಿಗಳ ಗೊಂಡೆ ಇರುವ, ರಾವುತರ ಸನ್ನೆಯಿಂದ ಭೂಮಿಯೇ ನಡುಗುವಂತೆ ಮೇಲೇಳುವು, ನಿಲ್ಲುವ ಹೋಲಿಕೆಯೇ ಇಲ್ಲದ ಕುದುರೆಗಳು ಸೈನ್ಯದಲ್ಲಿರುವುದನ್ನು ಸೇನಾ ನಾಯಕರು ನೋಡಿದರು.

ಅರ್ಥ:
ಅಳವಿ:ಶಕ್ತಿ, ವಶ; ಒಡೆ: ತಕ್ಷಣ; ರವಿ: ಭಾನು, ಸೂರ್ಯ; ತುರಗ: ಕುದುರೆ; ಉಳುಹು: ಕಾಪಾಡು; ಮುಂಚು: ಮುಂದೆ; ಜವ: ವೇಗ, ರಭಸ; ನೊಸಲು: ಹಣೆ; ಹೊಳೆ: ಕಾಂತಿ; ಕನ್ನಡಿ: ದರ್ಪಣ;ಖುರ: ಕುದುರೆ ದನಕರು ಮುಂ.ವುಗಳ ಕಾಲಿನ ಗೊರಸು, ಕೊಳಗು; ಜಡಿ: ಬೆದರಿಕೆ, ಹೆದರಿಕೆ, ಹೊಡೆತ; ಜೋಡು:ಜೊತೆ, ಜೋಡಿ; ಬಿಳಿ: ಶ್ವೇತ; ಚೌರಿ: ಚೌರಿಯ ಕೂದಲು, ಗಂಗಾವನ; ಜಲ್ಲಿ: ಕುಚ್ಚು, ಗೊಂಡೆ; ಹತ್ತಳ: ಚಾವಟಿ, ಬಾರುಗೋಲು; ರಾವುತ:ಕುದುರೆ ಸವಾರ, ಅಶ್ವಾರೋಹಿ; ಸನ್ನೆ:ಗುರುತು, ಸಂಕೇತ ; ನೆಲ: ಭೂಮಿ; ನಲುಗು:ಕಂಪನ, ಪಲುಕು; ನಿಗುರು:ಹೆಚ್ಚಳ, ಆಧಿಕ್ಯ ; ನಿಲುವ: ನಿಲ್ಲು; ನಿರುಪಮ: ಸಾಟಿಯಿಲ್ಲದ, ಅತಿಶಯವಾದ; ಹಯ: ಕುದುರೆ; ನೋಡು: ವೀಕ್ಷಿಸು;

ಪದವಿಂಗಡಣೆ:
ಅಳವಿಗ್+ಒಟ್ಟೊಡೆ +ರವಿಯ +ತುರಗವನ್
ಉಳುಹಿ +ಮುಂಚುವ +ಜವದ+ ನೊಸಲೊಳು
ಹೊಳೆದ +ಕನ್ನಡಿಗಳ +ಖುರಾಂತದ +ಜಡಿವ +ಜೋಡುಗಳ
ಬಿಳಿಯ +ಚೌರಿಯ +ಜಲ್ಲಿಗಳ +ಹ
ತ್ತಳದ +ರಾಹುತ +ಸನ್ನೆಯೊಳು +ನೆಲ
ನಲುಗೆ +ನಿಗುರುವ +ನಿಲುವ +ನಿರುಪಮ+ ಹಯವ +ನೋಡಿದರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಳವಿಗೊಟ್ಟೊಡೆ ರವಿಯ ತುರಗವನುಳುಹಿ ಮುಂಚುವ
(೨) ನಿ ಕಾರದ ತ್ರಿವಳಿ ಪದ – ನಿಗುರುವ ನಿಲುವ ನಿರುಪಮ

ಪದ್ಯ ೧೬: ಸೇನಾ ನಾಯಕರು ಏನನ್ನು ವೀಕ್ಷಿಸಿದರು?

ಹಿಣಿಲ ಹಾಹೆಯ ಬಿರುದುಗಳ ಡಾ
ವಣಿಯ ನಾಯಕವಾಡಿಗಳ ಸಂ
ದಣಿಯ ಸುಕರದ ಕೈದುಗಳ ವರವೀರ ನೂಪುರದ
ಕುಣಿವ ಸುಭಟರ ಪಳರವದ ಡೊಂ
ಕಣಿಯ ಖೇಟಕ ಖಡ್ಗ ಬಲು ಬಿಲು
ಗಣೆಯ ತಿಳಿವೊಡಸಂಖ್ಯೆಯಹ ಕಾಲಾಳ ನೋಡಿದರು (ಉದ್ಯೋಗ ಪರ್ವ, ೧೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಜೋಡಿಸಿ ಹಣೆದ ಬಿರುದಿನ ಪೆಂಡೆಗಳು, ದಾವಣಿಯನ್ನು ಹಿಡಿದ ನಾಯಕರ ಗುಂಪುಗಳು, ಕೈಯಲ್ಲಿ ಹಿಡಿದ ಆಯುಧಗಳು, ವೀರನೂಪುರಗಳನ್ನು ಧರಿಸಿ ಕುಣಿಯುವ ಯೋಧರು, ಹಿಡಿದ ಧ್ವಜಗಳು, ಡೊಂಕಣಿ, ಖಡ್ಗ ಮೊದಲಾದ ಆಯುಧಗಳನ್ನು ಬಿಲ್ಲುಬಾಣಗಳನ್ನು ಹಿಡಿದ ಕಾಲಾಳುಗಳನ್ನು ಸೇನಾ ನಾಯಕರಿಗೆ ತೋರಿದರು.

ಅರ್ಥ:
ಹಿಣಿಲು: ಹೆರಳು, ಜಡೆ; ಹಾಹೆ: ಗೊಂಬೆ, ಪುತ್ತಳಿ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಡಾವಣಿ:ಹಗ್ಗ, ದಾವಣಿ; ನಾಯಕ: ಒಡೆಯ; ವಾಡಿ:ಬಿಡಾರ; ಸಂದಣಿ: ಗುಂಪು; ಸುಕರ:ಸುಲಭವಾದುದು; ಕೈದು:ಕತ್ತಿ; ವರ: ಶ್ರೇಷ್ಠ; ವೀರ: ಶೂರ; ನೂಪುರ: ಕಾಲಿನ ಗೆಜ್ಜೆ, ಕಾಲಂದುಗೆ; ಕುಣಿ: ನರ್ತಿಸು; ಸುಭಟ: ಒಳ್ಳೆಯ ಸೈನಿಕ; ಪಳಹರ: ಬಾವುಟ; ಡೊಂಕಣಿ: ಈಟಿ; ಖೇಟಕ: ಗುರಾಣಿ; ಖಡ್ಗ: ಕತ್ತಿ, ಕರವಾಳ; ಬಲು: ಬಹಳ; ಬಿಲು: ಬಿಲ್ಲು, ಚಾಪ; ಬಿಲುಗಣೆ: ಬಿಲ್ಲು ಬಾಣ; ಅಸಂಖ್ಯ: ಲೆಕ್ಕವಿಲ್ಲದ; ಕಾಲಾಳು: ಸೈನ್ಯ; ನೋಡು: ವೀಕ್ಷಿಸು;

ಪದವಿಂಗಡಣೆ:
ಹಿಣಿಲ +ಹಾಹೆಯ +ಬಿರುದುಗಳ +ಡಾ
ವಣಿಯ +ನಾಯಕ+ವಾಡಿಗಳ +ಸಂ
ದಣಿಯ +ಸುಕರದ +ಕೈದುಗಳ +ವರವೀರ +ನೂಪುರದ
ಕುಣಿವ +ಸುಭಟರ +ಪಳರವದ +ಡೊಂ
ಕಣಿಯ +ಖೇಟಕ +ಖಡ್ಗ +ಬಲು+ ಬಿಲು
ಗಣೆಯ +ತಿಳಿವೊಡ್+ಅಸಂಖ್ಯೆಯಹ+ ಕಾಲಾಳ +ನೋಡಿದರು

ಅಚ್ಚರಿ:
(೧) ಡಾವಣಿ, ಸಂದಣಿ, ಡೊಂಕಣಿ, ಕುಣಿ – ಪ್ರಾಸ ಪದಗಳು
(೨) ಖೇಟಕ, ಖಡ್ಗ – ಖ ಕಾರದ ಜೋಡಿ ಪದ
(೩) ಸುಕರ, ಸುಭಟ – ೩, ೪, ಸಾಲಿನ ೨ನೇ ಪದ ಸು ಅಕ್ಷರದಿಂದ ಪ್ರಾರಂಭ

ಪದ್ಯ ೧೫: ಆದಿಶೇಷನು ಏಕೆ ಅಳುಕಿದನು?

ಎಲೆಲೆ ನೆಲ ಬೆಸಲಾದುದೆನೆ ಬಲು
ದಳದ ತೆರಳಿಕೆ ತೀವಿತವನಿಯ
ತಳಪಟದ ಹಬ್ಬುಗೆಯೊಳಬ್ಬರಿಸಿದವು ಬೊಬ್ಬೆಗಳು
ತಲೆವರೆಯ ತೂಕದೊಳು ಫಣಿಪತಿ
ಯಳುಕೆ ತೊಟ್ಟನು ತರಣಿ ಸೇನೋ
ಚ್ಚಳಿತ ಧೂಳಿಯ ಝಗೆಯನದ್ಭುತವಾಯ್ತು ದೆಖ್ಖಾಳ (ಉದ್ಯೋಗ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೂಮಿಯು ಈದಿತೋ ಎಂಬಂತೆ ಸೈನ್ಯಗಳು ಚಲಿಸಿದವು; ಸೈನಿಕರ ಗರ್ಜನೆಗಳು ರಣಭೂಮಿಯನ್ನಾವರಿಸಿದವು. ಸೈನ್ಯವು ತಲೆಯ ಮೇಲೆ ಸೇರಲು ಆದಿಶೇಷನಿಗೆ ತೂಕ ತಡೆಯದೆ ಅಳುಕಬೇಕಾಯಿತು. ಸೇನೆಯ ತುಳಿತದಿಂದ ಮೇಲೆ ಹಬ್ಬಿದ ಧೂಳಿನ ಉಡುಪನ್ನು ಸೂರ್ಯನು ಉಟ್ಟನು.

ಅರ್ಥ:
ನೆಲ: ಭೂಮಿ; ಬೆಸ: ಕೆಲಸ, ಕಾರ್ಯ; ಬಲು: ಬಹಳ; ದಳ: ಸೈನ್ಯ; ತೆರಳು: ಹೋಗುವಿಕೆ; ತೀವಿ: ಚುಚ್ಚು; ಅವನಿ: ಭೂಮಿ; ತಳಪಟ: ಅಂಗಾತವಾಗಿ ಬೀಳು; ಸೋಲು; ಹಬ್ಬುಗೆ: ಹರವು, ವಿಸ್ತಾರ; ಅಬ್ಬರ: ಗರ್ಜನೆ; ಬೊಬ್ಬೆ: ಆರ್ಭಟ; ತಲೆ: ಶಿರ; ತೂಕ: ಭಾರ; ಫಣಿಪತಿ: ಆದಿಶೇಷ; ಅಳುಕು: ಹೆದರು, ನಡುಗು; ತರಣಿ: ಸೂರ್ಯ; ಸೇನೆ: ಸೈನ್ಯ; ಉಚ್ಛಳಿತ: ಹೊರಹೊಮ್ಮಿದ; ಧೂಳು: ಸಣ್ಣ ಮಣ್ಣಿನ ಪುಡಿ; ದೆಖ್ಖಾಳ: ನೋಟ, ವೈಭವ;

ಪದವಿಂಗಡಣೆ:
ಎಲೆಲೆ +ನೆಲ +ಬೆಸಲಾದುದ್+ಎನೆ +ಬಲು
ದಳದ +ತೆರಳಿಕೆ +ತೀವಿತ್+ಅವನಿಯ
ತಳಪಟದ +ಹಬ್ಬುಗೆಯೊಳ್+ಅಬ್ಬರಿಸಿದವು +ಬೊಬ್ಬೆಗಳು
ತಲೆವರೆಯ +ತೂಕದೊಳು +ಫಣಿಪತಿ
ಯಳುಕೆ+ ತೊಟ್ಟನು+ ತರಣಿ+ ಸೇನೋ
ಚ್ಚಳಿತ+ ಧೂಳಿಯ +ಝಗೆಯನ್+ಅದ್ಭುತವಾಯ್ತು +ದೆಖ್ಖಾಳ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಲೆವರೆಯ ತೂಕದೊಳು ಫಣಿಪತಿ ಯಳುಕೆ ತೊಟ್ಟನು ತರಣಿ ಸೇನೋಚ್ಚಳಿತ ಧೂಳಿಯ ಝಗೆಯನದ್ಭುತವಾಯ್ತು ದೆಖ್ಖಾಳ
(೨) ಅವನಿ, ನೆಲ – ಸಮನಾರ್ಥಕ ಪದ

ಪದ್ಯ ೧೪: ರಾಜಾಜ್ಞೆಯನ್ನು ಉಳಿದ ರಾಜರು ಹೇಗೆ ಪಾಲಿಸಿದರು?

ಜೋಳಿ ಹರಿದುದು ದೆಸೆದೆಸೆಗೆ ಭೂ
ಪಾಲರಿಗೆ ರಾಯಸದ ಹದನನು
ಕೇಳಿದಾಗಳೆ ಕವಿದು ಬಂದರು ತಮ್ಮ ದಳ ಸಹಿತ
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳವಂದಿನ ಮರುದಿವಸ ವೈ
ಹಾಳಿಯನು ಹೊರವಂಟರನಿಬರು ದೈತ್ಯರಿಪು ಸಹಿತ (ಉದ್ಯೋಗ ಪರ್ವ, ೧೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕೃಷ್ಣನ ಆದೇಶದ ಮೇರೆಗೆ ದಿಕ್ಕುದಿಕ್ಕಿಗೂ ದೂತರಗುಂಪು ಹೋಗಿ ರಾಜಾಜ್ಞೆಯನ್ನು ತಿಳಿಸಿದೊಡನೆ ರಾಜರು ತಮ್ಮ ಸೈನ್ಯಗಳ ಜೊತೆ ಹೊರಟು ಬಂದರು. ಮರುದಿನ ದಳಪತಿಗಳ ಸನ್ನೆಯಂತೆ ನಿಸ್ಸಾಳಗಳು ಸರತಿಯ ಮೇಲೆ ಮೊಳಗಲು, ಎಲ್ಲರೂ ಶ್ರೀಕೃಷ್ಣನೊಡನೆ ಬಂದರು.

ಅರ್ಥ:
ಜೋಳಿ: ಜೋಡಿ, ಗುಂಪು; ಹರಿ: ಪಸರಿಸು; ದೆಸೆ: ದಿಕ್ಕು; ಭೂಪಾಲ: ರಾಜ; ರಾಯ: ರಾಜ; ಹದ: ಸರಿಯಾದ; ಕೇಳು: ಆಲಿಸು; ಕವಿ: ಮುಚ್ಚಳ; ಬಂದರು: ಆಗಮಿಸು; ದಳ: ಸೈನ್ಯ; ಸಹಿತ: ಜೊತೆ; ಸೂಳು: ಆವೃತ್ತಿ, ಬಾರಿ; ಸನ್ನೆ: ಗುರುತು, ಸಂಕೇತ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಅಂದಿನ: ಅವತ್ತು; ಮರುದಿವಸ: ನಾಳೆ; ವೈಹಾಳಿ:ಕುದುರೆ ಸವಾರಿ; ಹೊರವಂಟರು: ಆಚೆ ಬಂದರು; ದೈತ್ಯರಿಪು: ರಾಕ್ಷಸವೈರಿ (ಕೃಷ್ಣ); ಅನಿಬರು: ಅಷ್ಟು ಜನರು;

ಪದವಿಂಗಡಣೆ:
ಜೋಳಿ +ಹರಿದುದು +ದೆಸೆದೆಸೆಗೆ+ ಭೂ
ಪಾಲರಿಗೆ +ರಾಯಸದ +ಹದನನು
ಕೇಳಿದಾಗಳೆ+ ಕವಿದು +ಬಂದರು +ತಮ್ಮ +ದಳ +ಸಹಿತ
ಸೂಳವಿಸಿದವು+ ಸನ್ನೆಯಲಿ +ನಿ
ಸ್ಸಾಳವಂದಿನ +ಮರುದಿವಸ +ವೈ
ಹಾಳಿಯನು +ಹೊರವಂಟರ್+ಅನಿಬರು ದೈತ್ಯರಿಪು ಸಹಿತ

ಅಚ್ಚರಿ:
(೧) ಸಹಿತ – ೩, ೬ ಸಾಲಿನ ಕೊನೆ ಪದ
(೨) ಸೂಳ, ನಿಸ್ಸಾಳ – ಪ್ರಾಸ ಪದ
(೩) ಭೂಪಾಲ, ರಾಯ – ಸಮನಾರ್ಥಕ ಪದ