ಪದ್ಯ ೪: ಧೃತರಾಷ್ಟ್ರನ ಸ್ಮರಣೆಯಿಂದ ಯಾರು ಆಗಮಿಸಿದರು?

ನೆನೆಯಲೊಡನೆ ಸನತ್ಸುಜಾತನು
ಮನೆಗೆ ಬರಲಿದಿರೆದ್ದು ಕೌರವ
ಜನಕ ಮೈಯಿಕ್ಕಿದನೆನಗೆ ಬ್ರಹ್ಮೋಪದೇಶವನು
ಮುನಿಪ ನೀ ಕೃಪೆ ಮಾಡಬೇಕೆನ
ಲನುನಯದೊಳವನೀಪತಿಗೆ ಜನ
ಜನಿತವೆನಲರುಹಿದನಲೈ ಪರಲೋಕ ಸಾಧನವ (ಉದ್ಯೋಗ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮನಸ್ಸಿನಲ್ಲಿ ಸ್ಮರಿಸಿದೊಡೆ ಸನತ್ಸುಜಾತನು ಅವನಿದ್ದಲ್ಲಿಗೆ ಆಗಮಿಸಿದನು. ಧೃತರಾಷ್ಟ್ರನು ಅವನಿಗೆ ನಮಸ್ಕರಿಸಿ “ಮುನಿವರ್ಯರೇ, ನನಗೆ ಬ್ರಹ್ಮೋಪದೇಶವನ್ನು ಕೃಪೆಯಿಂದ ಮಾಡಿ, ಎಂದು ಕೇಳಲು ಮುನಿಶ್ರೇಷ್ಠರಾದ ಸನತ್ಸುಜಾತರು ಬ್ರಹ್ಮವಿದ್ಯೆಯನ್ನು ಕುರಿತು ಹೇಳಿದರು.

ಅರ್ಥ:
ನೆನೆ: ಜ್ಞಾಪಿಸು; ಮನೆ: ಆಲಯ; ಬರಲು: ಆಗಮಿಸು; ಜನಕ: ತಂದೆ; ಮೈಯಿಕ್ಕಿದನು: ನಮಸ್ಕರಿಸಿದನು; ಉಪದೇಶ: ಬೋಧಿಸುವುದು; ಮುನಿ: ಋಷಿ; ಕೃಪೆ: ಕರುಣೆ; ಅನುನಯ:ನಯವಾದ ಮಾತುಗಳಿಂದ ಮನವೊಲಿಸುವುದು; ಅವನೀಪತಿ: ರಾಜ; ಜನಜನಿತ: ಜನರಲ್ಲಿ ಹಬ್ಬಿರುವ ವಿಷಯ; ಅರುಹು: ತಿಳಿವಳಿಕೆ; ಪರಲೋಕ: ಬೇರೆ ಜಗತ್ತು; ಸಾಧನ: ಅಭ್ಯಾಸ; ಇದಿರು: ಎದುರು;

ಪದವಿಂಗಡಣೆ:
ನೆನೆಯಲ್+ಒಡನೆ +ಸನತ್ಸುಜಾತನು
ಮನೆಗೆ +ಬರಲ್+ಇದಿರ್+ಎದ್ದು +ಕೌರವ
ಜನಕ +ಮೈಯಿಕ್ಕಿದನ್+ಎನಗೆ +ಬ್ರಹ್ಮೋಪದೇಶವನು
ಮುನಿಪ+ ನೀ +ಕೃಪೆ +ಮಾಡಬೇಕೆನಲ್
ಅನುನಯದೊಳ್+ಅವನೀಪತಿಗೆ+ ಜನ
ಜನಿತವೆನಲ್+ಅರುಹಿದನಲೈ +ಪರಲೋಕ +ಸಾಧನವ

ಅಚ್ಚರಿ:
(೧) ಕೌರವಜನಕ, ಅವನೀಪತಿ – ಧೃತರಾಷ್ಟ್ರನನ್ನು ಕರೆಯಲು ಬಳಸಿದ ಪದಗಳು
(೨) ನಮಸ್ಕರಿಸಿದನು ಎಂದು ಹೇಳಲು ಮೈಯಿಕ್ಕಿದನು ಪದದ ಬಳಕೆ

ಪದ್ಯ ೩: ಬ್ರಹ್ಮವಿದ್ಯೆಯನ್ನು ತಿಳಿಸಲು ಯಾರು ಅರ್ಹರು?

ಒರ್ವನೇ ಬಲ್ಲವನು ಲೋಕದೊ
ಳಿರ್ವರಿಲ್ಲ ಸನತ್ಸುಜಾತನು
ಸರ್ವಗುಣ ಸಂಪೂರ್ಣನಾತನ ಭಜಿಸಿದಡೆ ನೀನು
ಸರ್ವನಹೆಯೆನಲಾ ಮುನಿಪನೆಡೆ
ಸರ್ವಭಾವದೊಳರಸನಿರಲಾ
ಗುರ್ವಿಯಮರರ ತಿಲಕ ಬಂದನು ಕೃಪೆಯೊಳಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ಈ ಲೋಕದಲ್ಲಿ ಸನತ್ಸುಜಾನೇ ಬ್ರಹ್ಮವಿದ್ಯೆಯನ್ನು ತಿಳಿದವನು. ಇನ್ನೊಬ್ಬರು ಖಂಡಿತವಾಗಿಯೂ ತಿಳಿದವರಿಲ್ಲ. ಅವನು ಸಂಪೂರ್ಣಗುಣವಂತ. ಅವನನ್ನು ಸ್ಮರಿಸಿದರೆ ನಿನ್ನ ಆಶೆಯೆಲ್ಲವೂ ಕೈಗೂಡುತ್ತದೆ ಎಂದು ವಿದುರನು ಹೇಳಿದ. ಧೃತರಾಷ್ಟ್ರನು ಮನಸ್ಸಿನಲ್ಲೇ ಅವನ ಬಳಿಗೆ ಹೋಗಿ ಬಿಡುವ ಭಾವದಲ್ಲಿರಲು, ಬ್ರಾಹ್ಮಣ ಶ್ರೇಷ್ಠನಾದ ಸನತ್ಸುಜಾತನು ಅಲ್ಲಿಗೆ ಬಂದನು.

ಅರ್ಥ:
ಒರ್ವನೇ: ಒಬ್ಬನೇ; ಬಲ್ಲವ: ತಿಳಿದವ; ಲೋಕ: ಜಗತ್ತು; ಈರ್ವರು: ಇನ್ನೊಬ್ಬರು; ಸರ್ವ: ಎಲ್ಲಾ; ಗುಣ: ನಡತೆ, ಸ್ವಭಾವ; ಸಂಪೂರ್ಣ: ಅಖಂಡವಾದುದು; ಭಜಿಸು: ಧ್ಯಾನಿಸು, ಪೂಜಿಸು; ಅಹೆ: ಆಗಿರುವೆನು, ಆಗುತ್ತೀಯೆ; ಎನಲು: ಹೇಳಿದ ನಂತರ; ಮುನಿ: ಋಷಿ; ಭಾವ: ಅಭಿಪ್ರಾಯ; ಅರಸ: ರಾಜ; ಗುರು: ದೊಡ್ಡ; ಅಮರ: ದೇವತೆ; ತಿಲಕ: ಶ್ರೇಷ್ಠ; ಕೃಪೆ: ಕರುಣೆ, ದಯೆ;

ಪದವಿಂಗಡಣೆ:
ಒರ್ವನೇ +ಬಲ್ಲವನು +ಲೋಕದೊಳ್
ಇರ್ವರಿಲ್ಲ +ಸನತ್ಸುಜಾತನು
ಸರ್ವಗುಣ +ಸಂಪೂರ್ಣನ್+ಆತನ +ಭಜಿಸಿದಡೆ+ ನೀನು
ಸರ್ವನ್+ಅಹೆಯೆನಲಾ+ ಮುನಿಪನೆಡೆ
ಸರ್ವಭಾವದೊಳ್+ಅರಸನಿರಲ್+ ಆ
ಗುರ್ವಿ+ಅಮರರ+ ತಿಲಕ+ ಬಂದನು +ಕೃಪೆಯೊಳಾ +ಮುನಿಪ

ಅಚ್ಚರಿ:
(೧) ಒರ್ವ, ಸರ್ವ, ಇರ್ವ, – ಪ್ರಾಸ ಪದಗಳು
(೨) ಮುನಿಪ – ೩, ೬ ಸಾಲಿನ ಕೊನೆಯ ಪದ

ಪದ್ಯ ೨: ವಿದುರನು ಧೃತರಾಷ್ರನಿಗೆ ಬ್ರಹ್ಮವಿದ್ಯೆಯನ್ನು ಕಲಿಯುವ ಬಗ್ಗೆ ಏನು ಹೇಳಿದ?

ಅವಧರಿಸು ಪರತತ್ತ್ವ ವಿದ್ಯಾ
ವಿವರ ಭೇದವನನ್ಯ ಜಾತಿಗ
ಳೆವಗೆ ಸಲುವುದೆ ಮುನಿವರನ ಕರುಣೊದಯದಲಹುದು
ಅವರಿವರುಗಳ ಮುಖದಲಿದು ಸಂ
ಭವಿಸುವುದೆ ಬ್ರಹ್ಮೋಪದೇಶದ
ಹವಣ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಕೋರಿಕೆಗೆ ವಿದುರನು ವಿನಮ್ರನಾಗಿ, ರಾಜ ನಾನು ಅನ್ಯಜಾತಿಯವ, ಬ್ರಹ್ಮವಿದ್ಯೆಯ ಬಗ್ಗೆ ನಾನು ಹೇಳುವುದು ತಪ್ಪು. ಶ್ರೇಷ್ಠನಾದ ಮುನಿಯಿಂದಲೇ ಬ್ರಹ್ಮತತ್ತ್ವವು ತಿಳಿದು ಬಂದೀತು. ಅವರಿವರ ಮುಖದಿಂದ ಇದು ಬರಲಾರದು. ಬ್ರಹ್ಮೋಪದೇಶದ ವಿಸ್ತಾರವನ್ನು ಬಲ್ಲವರಾದರೂ ಯಾರು ಎಂದು ವಿದುರನು ಹೇಳಿದ.

ಅರ್ಥ:
ಅವಧರಿಸು:ಮನಸ್ಸಿಟ್ಟು ಕೇಳು; ಪರತತ್ತ್ವ; ಬ್ರಹ್ಮವಿದ್ಯೆ; ವಿದ್ಯ: ಜ್ಞಾನ; ವಿವರ: ವಿಚಾರ; ಭೇದ: ಮುರಿಯುವುದು; ಅನ್ಯ: ಬೇರೆ; ಜಾತಿ: ಕುಲ; ಸಲುವುದು:ಯೋಗ್ಯವಾಗು;ಮುನಿ: ಋಷಿ; ವರ: ಶ್ರೇಷ್ಠ; ಕರುಣೆ: ದಯೆ; ಉದಯ: ಹುಟ್ಟು; ಅವರಿವರು: ತಿಳಿಯದ, ಯಾರ್ಯಾರೋ; ಮುಖ: ಆನನ; ಸಂಭವಿಸು: ಒದಗಿಬರು; ಬ್ರಹ್ಮೋಪದೇಶ: ಪರತತ್ತ್ವದ ಉಪದೇಶ; ಉಪದೇಶ: ಬೋಧಿಸುವುದು; ಹವಣಿಸು: ಸಿದ್ಧಮಾಡು; ಬಲ್ಲವ: ತಿಳಿದವ; ಕೇಳು: ಆಲಿಸು;

ಪದವಿಂಗಡಣೆ:
ಅವಧರಿಸು +ಪರತತ್ತ್ವ +ವಿದ್ಯಾ
ವಿವರ +ಭೇದವನ್+ಅನ್ಯ +ಜಾತಿಗಳ್
ಎವಗೆ +ಸಲುವುದೆ +ಮುನಿವರನ +ಕರುಣೊದಯದಲ್+ಅಹುದು
ಅವರಿವರುಗಳ+ ಮುಖದಲಿದು +ಸಂ
ಭವಿಸುವುದೆ +ಬ್ರಹ್ಮೋಪದೇಶದ
ಹವಣ+ ಬಲ್ಲವನ್+ಆವನೈ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಅವಧರಿಸು, ಕೇಳು – ಸಮನಾರ್ಥಕ ಪದ

ಪದ್ಯ ೧: ಧೃತರಾಷ್ಟ್ರನು ವಿದುರನಿಗೆ ಏನು ಕೇಳಿದ?

ಕೇಳು ಜನಮೇಜಯ ಧರಿತ್ರೀ
ಪಾಲ ವಿದುರನ ಬೋಧೆಗಂಧನೃ
ಪಾಲನಂತಃಕರಣಶುದ್ಧಿಯನೈದಿದನು ಬಳಿಕ
ಹೇಳು ಹೇಳಿನ್ನಾತ್ಮ ವಿದ್ಯೆಯ
ಮೂಲ ಮಂತ್ರಾಕ್ಷರದ ಬೀಜವ
ನಾಲಿಸುವೆನೆನೆ ನಗುತ ಕೈಮುಗಿದೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧ ಪದ್ಯ)

ತಾತ್ಪರ್ಯ:
ವೈಶಂಪಾಯನ ಮುನಿಗಳು ಜನಮೇಜಯ ರಾಜನಿಗೆ ಮಹಾಭಾರತದ ಕಥೆಯನ್ನು ಮುಂದುವರೆಸುತ್ತಾ, ಕೇಳು ಜನಮೇಜಯ ರಾಜ, ವಿದುರನು ತನ್ನ ನೀತಿಯನ್ನು ಧೃತರಾಷ್ಟ್ರನಿಗೆ ಹೇಳಿ ಆತ್ಮ ವಿದ್ಯೆಯನ್ನು ಕಲಿಯಲಿಚ್ಛಿಸಿದರೆ ಸನತ್ಸುಜಾತನ ಬಳಿ ಹೋಗು ಎಂದು ಹೇಳಿದ್ದ. ವಿದುರನ ನೀತಿಯನ್ನು ಕೇಳಿ ಧೃತರಾಷ್ಟ್ರನ ಅಂತಃಕರಣ ಶುದ್ಧವಾಯಿತು. ಬಳಿಕೆ ಆತ ವಿದುರನಿಗೆ ಆತ್ಮವಿದ್ಯೆಯ ಮೂಲ ಬೀಜ ಮಂತ್ರಾಕ್ಷರವನ್ನು ಹೇಳಲು ವಿನಂತಿಸಿದನು. ಆಗ ವಿದುರ ನಗುತ್ತಾ ಕೈಮುಗಿದು ಹೀಗೆ ಹೇಳಿದ.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ಬೋಧೆ: ಬೋಧನೆ, ಪ್ರವಚನ, ತಿಳಿಸು; ನೃಪಾಲ: ರಾಜ; ಅಂತಃಕರಣ: ಚಿತ್ತವೃತ್ತಿ, ಮನಸ್ಸು; ಶುದ್ಧಿ: ಸ್ವಚ್ಛ; ಐದು: ಹೊಂದು, ಸೇರು, ಹೋಗು; ಬಳಿಕ: ನಂತರ; ಆತ್ಮ: ಜೀವ; ವಿದ್ಯೆ: ಜ್ಞಾನ; ಮೂಲ: ಕಾರಣ, ಬೇರು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಕ್ಷರ: ಲಿಪಿ, ಬರೆಹ; ಬೀಜ:ಮೂಲ ;ಆಲಿಸುವೆ: ಕೇಳುವೆ; ನಗುತ: ಸಂತಸ; ಕೈ: ಕರ; ಕೈಮುಗಿದು: ನಮಸ್ಕರಿಸು; ಅಂಧ: ಕುರುಡ; ಅಂಧನೃಪಾಲ: ಧೃತರಾಷ್ಟ್ರ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ವಿದುರನ +ಬೋಧೆಗ್+ಅಂಧನೃ
ಪಾಲನ್+ಅಂತಃಕರಣ+ಶುದ್ಧಿಯನ್+ಐದಿದನು +ಬಳಿಕ
ಹೇಳು+ ಹೇಳಿನ್+ಆತ್ಮ +ವಿದ್ಯೆಯ
ಮೂಲ +ಮಂತ್ರಾಕ್ಷರದ +ಬೀಜವನ್
ಆಲಿಸುವೆನ್+ಎನೆ +ನಗುತ +ಕೈಮುಗಿದ್+ಎಂದನಾ+ ವಿದುರ

ಅಚ್ಚರಿ:
(೧) ಕೇಳು, ಹೇಳು – ಜೋಡಿ ಪದಗಳು
(೨) ಧರಿತ್ರೀಪಾಲ, ಅಂಧನೃಪಾಲ – ಪ್ರಾಸ ಪದಗಳು
(೩) ನೃಪಾಲ, ಧರಿತ್ರೀಪಾಲ – ಸಮನಾರ್ಥಕ ಪದ
(೪) ಅಕ್ಷರದ ಜೋಡಿ ಪದಗಳು – ಅಂಧನೃಪಾಲ, ಅಂತಃಕರಣ, ಹೇಳು ಹೇಳಿನ್ನಾತ್ಮ

ಪದ್ಯ ೧೩೯: ವಿದುರನು ಕಡೆಯದಾಗಿ ಧೃತರಾಷ್ಟ್ರನಿಗೆ ಏನು ಹೇಳಿದ?

ಸಕಲ ನೀತಿ ರಹಸ್ಯವನು ಸು
ವ್ಯಕುತವೆನಲರುಹಿದೆನು ತತ್ತ್ವಕೆ
ಯುಕುತಿಯಾದರೆ ನೆನೆವುದಿನ್ನು ಸನತ್ಸುಜಾತನನು
ಮುಕುತಿಗಮಳ ಬ್ರಹ್ಮ ವಿದ್ಯಾ
ಪ್ರಕಟವನು ನೆರೆ ಮಾಡಿ ಚಿತ್ತದ
ವಿಕಳತೆಯನೊಡಮೆಟ್ಟಿ ಸಲಹುವನೆಂದು ಬೋಧಿಸಿದ (ಉದ್ಯೋಗ ಪರ್ವ, ೩ ಸಂಧಿ, ೧೩೯ ಪದ್ಯ)

ತಾತ್ಪರ್ಯ:
ಹೀಗೆ ತನ್ನೆಲ್ಲಾ ಜ್ಞಾನವನ್ನು ನೀತಿಯ ರೂಪದಲ್ಲಿ ವಿದುರನು ಧೃತರಾಷ್ಟ್ರನಿಗೆ ತಿಳಿಸಿದ. ನಿಜ ತತ್ತ್ವವನ್ನರಿಯಲು ಮನಸ್ಸಾದರೆ ಸನತ್ಸುಜಾತನನ್ನು ನೆನೆ. ಮುಕ್ತಿಗೆ ಬೇಕಾದ ಬ್ರಹ್ಮವಿದ್ಯೆಯನ್ನು ಹೇಳಿ ನಿನ್ನ ಮನಸ್ಸಿನ ಭ್ರಾಂತಿಯನ್ನು ತುಳಿದು ಧ್ವಂಸಮಾಡಿ ನಿನ್ನನ್ನು ಉದ್ಧರಿಸುತ್ತಾನೆ ಎಂದು ವಿದುರ ಧೃತರಾಷ್ಟ್ರನಿಗೆ ಸಲಹೆ ನೀಡಿದ.

ಅರ್ಥ:
ಸಕಲ: ಎಲ್ಲಾ; ನೀತಿ: ಮಾರ್ಗ ದರ್ಶನ; ರಹಸ್ಯ:ಗುಟ್ಟು, ಗೋಪ್ಯ; ಸುವ್ಯಕ್ತ: ಸ್ಪಷ್ಟವಾಗಿ ಗೋಚರವಾದ; ಅರುಹು:ತಿಳಿಸು, ಹೇಳು; ತತ್ತ್ವ: ಸಿದ್ಧಾಂತ, ನಿಯಮ; ಯುಕುತಿ: ಬುದ್ಧಿ, ತರ್ಕಬದ್ಧವಾದ ವಾದಸರಣಿ; ನೆನೆ: ಜ್ಞಾಪಿಸು; ಸನಸುಜಾತ: ಬ್ರಹ್ಮನ ಮಾನಸ ಪುತ್ರ; ಮುಕ್ತಿ: ಮೋಕ್ಷ; ಅಮಳ: ನಿರ್ಮಲ; ಬ್ರಹ್ಮ: ಪರತತ್ವ; ವಿದ್ಯ: ಜ್ಞಾನ; ಪ್ರಕಟ: ನಿಚ್ಚಳ, ಸ್ಪಷ್ಟ; ನೆರೆ: ಗುಂಫು; ಚಿತ್ತ: ಬುದ್ಧಿ; ವಿಕಳ: ಭ್ರಾಂತಿ, ಭ್ರಮೆ; ಒಡಮಟ್ಟು: ನಾಶಮಾಡು, ಧ್ವಂಸಮಾಡು; ಸಲಹು:ಪೋಷಿಸು; ಬೋಧಿಸು: ಹೇಳು, ತಿಳಿಸು;

ಪದವಿಂಗಡಣೆ:
ಸಕಲ +ನೀತಿ +ರಹಸ್ಯವನು +ಸು
ವ್ಯಕುತವ್+ಎನಲ್+ಅರುಹಿದೆನು+ ತತ್ತ್ವಕೆ
ಯುಕುತಿಯಾದರೆ +ನೆನೆವುದಿನ್ನು +ಸನತ್ಸುಜಾತನನು
ಮುಕುತಿಗ್+ಅಮಳ +ಬ್ರಹ್ಮ +ವಿದ್ಯಾ
ಪ್ರಕಟವನು +ನೆರೆ +ಮಾಡಿ +ಚಿತ್ತದ
ವಿಕಳತೆಯನ್+ಒಡಮೆಟ್ಟಿ +ಸಲಹುವನೆಂದು+ ಬೋಧಿಸಿದ

ಅಚ್ಚರಿ:
(೧) ಯುಕುತಿ, ಮುಕುತಿ – ಪ್ರಾಸ ಪದಗಳು

ಪದ್ಯ ೧೩೮: ಹಿಂದೆ ಯಾವ ಘಟನೆಗಳಿಂದ ಕೌರವರು ಮುಖಭಂಗವನ್ನೆದುರಿಸಿದ್ದರು?

ಹಿಂದೆ ಗೋಗ್ರಹಣದಲಿ ದ್ರುಪದನ
ನಂದನೆಯ ವೈವಾಹದಲಿ ಬಳಿ
ಸಂದ ಗಂಧರ್ವಕನ ದೆಸೆಯಲಿ ಘೋಷಯಾತ್ರೆಯಲಿ
ಬಂದ ಭಂಗವ ಕಂಡುಕಂಡೇ
ನೆಂದು ಪಾಂಡುಕುಮಾರರೊಡನನು
ಸಂಧಿಸುವೆ ಕಲಹವನು ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೩೮ ಪದ್ಯ)

ತಾತ್ಪರ್ಯ:
ಹಿಂದೆ ನಡೆದ ಘಟನೆಗಳಾದ ಗೋಗ್ರಹಣ, ದ್ರೌಪದೀ ಸ್ವಯಂವರದಲ್ಲಿ, ಘೋಷಯಾತ್ರೆಯಲಿ ನಿನಗೆ ಬಂದ ಭಂಗವನ್ನು ಕಂಡೂ ಕೂಡ ನೀನು ಪಾಂಡವರೊಡನೆ ಏನೆಂದು ಯುದ್ಧವನ್ನಾರಂಭಿಸುವೆ ಎಂದು ವಿದುರ ಧೃತರಾಷ್ಟ್ರನನ್ನು ಕೇಳಿದ.

ಅರ್ಥ:
ಹಿಂದೆ: ಪೂರ್ವ; ಗೋಗ್ರಹಣ: ಗೋವುಗಳನ್ನು ಸೆರೆಹಿಡಿಯುವುದು; ನಂದನೆ: ಮಗಳು; ವೈವಾಹ: ವಿವಾಹ; ಬಳಿ: ನಂತರ; ಸಂದ: ಕಳೆದ; ಗಂಧರ್ವ: ದೇವಲೋಕದ ಸಂಗೀತಗಾರ; ದೆಸೆ: ದೆಶೆ, ಅವಸ್ಥೆ; ಘೋಷ:ಗಟ್ಟಿಯಾದ ಶಬ್ದ; ಯಾತ್ರೆ: ಪ್ರಯಾಣ, ಸಂಚಾರ; ಬಂದ: ಆಗಮಿಸಿದ; ಭಂಗ: ತೊಂದರೆ; ಕಂಡು: ನೋಡಿ; ಕುಮಾರ: ಮಕ್ಕಳು; ಅನುಸಂಧಾನ: ಹುಡುಕು, ಏರ್ಪಾಡು; ಕಲಹ: ಯುದ್ಧ; ಚಿತ್ತೈಸು: ಗಮನವಿಡು;

ಪದವಿಂಗಡಣೆ:
ಹಿಂದೆ +ಗೋಗ್ರಹಣದಲಿ +ದ್ರುಪದನ
ನಂದನೆಯ +ವೈವಾಹದಲಿ +ಬಳಿ
ಸಂದ +ಗಂಧರ್ವಕನ +ದೆಸೆಯಲಿ +ಘೋಷಯಾತ್ರೆಯಲಿ
ಬಂದ +ಭಂಗವ +ಕಂಡುಕಂಡ್
ಏನೆಂದು +ಪಾಂಡುಕುಮಾರರ್+ಒಡನ್+ಅನು
ಸಂಧಿಸುವೆ+ ಕಲಹವನು+ ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಸಂದ, ಬಂದ – ಪ್ರಾಸ ಪದ
(೨) ನೋಡಿಯೂ ಎಂದು ಹೇಳಲು – ಕಂಡುಕಂಡೇ ಪದದ ಬಳಕೆ
(೩) ಅನುಸ್ವಾರವುಳ್ಲ ಪದಗಳ ಬಳಕೆ – ಬಂದ, ಭಂಗ, ಕಂಡು, ಕಂಡೇ – ೪ನೇ ಸಾಲು

ಪದ್ಯ ೧೩೭: ಜಯವು ಯಾರಿಗೆ ಒಲಿಯುತ್ತಾಳೆ?

ಎಲ್ಲಿ ಯೋಗಾಧಿಪತಿ ಮುರಹರ
ನೆಲ್ಲಿಯರ್ಜುನ ದೇವನಿಹನ
ಲ್ಲಲ್ಲಿ ಜಯಸಿರಿಯಲ್ಲದೇ ಬೇರಿಲ್ಲ ಕೇಳಿದನು
ಬಲ್ಲವರೆ ಬಲ್ಲರು ಕಣಾ ನೀ
ನಿಲ್ಲಿ ಪಾಂಡುಕುಮಾರರಿಗೆ ಸರಿ
ಯಿಲ್ಲ ಬಲ್ಲೈಹಿಂದೆ ಬಂದ ವಿಪತ್ಪರಂಪರೆಯ (ಉದ್ಯೋಗ ಪರ್ವ, ೩ ಸಂಧಿ, ೧೩೭ ಪದ್ಯ)

ತಾತ್ಪರ್ಯ:
ಎಲ್ಲಿ ಯೋಗೇಶ್ವರನಾದ ಕೃಷ್ಣನಿರುವನೋ, ಎಲ್ಲಿ ಬಲಶಾಲಿಯಾದ ಅರ್ಜುನನಿರುವನೋ ಅಲ್ಲಿಯೇ ಜಯಲಕ್ಷ್ಮಿ ನೆಲೆಸಿರುತ್ತಾಳೆ, ಇದನ್ನು ಬಲ್ಲವರೇ ಬಲ್ಲರು. ಇಲ್ಲಿ ಪಾಂಡುಪುತ್ರರಿಗೆ ಧರ್ಮ ಪರಾಕ್ರಮಗಳಲ್ಲಿ ಸರಿಸಮನಾದವರು ಯಾರೂ ಇಲ್ಲ. ಹಿಂದೆ ಬಂದ ವಿಪತ್ತಿನ ಪರಂಪರೆಯು ನಿನಗೆ ನೆನಪಿಲ್ಲವೇ ಎಂದು ವಿದುರ ಕೇಳಿದ.

ಅರ್ಥ:
ಯೋಗ:ಹೊಂದಿಸುವಿಕೆ, ಜೋಡಿಸುವಿಕೆ; ಅಧಿಪತಿ: ರಾಜ; ಮುರಹರ: ಕೃಷ್ಣ; ದೇವ: ಸುರ, ದೈವ; ಜಯ: ವಿಜಯ, ಗೆಲುವು; ಸಿರಿ: ಐಶ್ವರ್ಯ; ಬೇರೆ: ಅನ್ಯ; ಬಲ್ಲವರು: ತಿಳಿದವರು; ಕುಮಾರರು: ಪುತ್ರರು; ಬಲ್ಲೆ: ತಿಳಿದಿರುವೆ; ಹಿಂದೆ: ಪೂರ್ವದಲ್ಲಿ; ಬಂದ: ಆಗಮಿಸು; ವಿಪತ್ತು: ಆಪತ್ತು,ಕಷ್ಟ, ತೊಂದರೆ;

ಪದವಿಂಗಡಣೆ:
ಎಲ್ಲಿ +ಯೋಗಾಧಿಪತಿ +ಮುರಹರನ್
ಎಲ್ಲಿ+ ಅರ್ಜುನ +ದೇವನ್+ಇಹನ್
ಅಲ್ಲಲ್ಲಿ +ಜಯಸಿರಿಯಲ್ಲದೇ +ಬೇರಿಲ್ಲ +ಕೇಳಿದನು
ಬಲ್ಲವರೆ +ಬಲ್ಲರು +ಕಣಾ +ನೀ
ನಿಲ್ಲಿ+ ಪಾಂಡುಕುಮಾರರಿಗೆ+ ಸರಿ
ಯಿಲ್ಲ +ಬಲ್ಲೈಹಿಂದೆ+ ಬಂದ+ ವಿಪತ್ತ್+ಪರಂಪರೆಯ

ಅಚರಿ:
(೧) ಎಲ್ಲಿ ಅಲ್ಲಲ್ಲಿ, ಇಲ್ಲಿ, ನಿಲ್ಲಿ – ಪ್ರಾಸ ಪದಗಳು
(೨) ಬಲ್ಲವರೆ ಬಲ್ಲರು – ‘ಬ’ಕಾರದ ಜೋಡಿ ಪದ

ಪದ್ಯ ೧೩೬: ಅರ್ಜುನನೆದುರು ಯುದ್ಧವೇಕೆ ಒಳಿತಲ್ಲ?

ಬಲಿ ವಿಭೀಷಣ ಭೀಷ್ಮ ನಾರದ
ಫಲುಗುಣನು ಪ್ರಹ್ಲಾದ ದೇವನು
ಜಲರುಹಾಕ್ಷನ ನಚ್ಚುಮೆಚ್ಚಿನ ಡಿಂಗರಿಗರಿವರು
ಸುಲಭವೇ ನಿನಗವರ ಕೂಡಣ
ಕಲಹ ಭೀಭತ್ಸುವಿನ ಕೈಮನ
ದಳವನರಿಯಾ ಕಂಡು ಕಾಣದೆ ಮರುಳಹರೆಯೆಂದ (ಉದ್ಯೋಗ ಪರ್ವ, ೩ ಸಂಧಿ, ೧೩೬ ಪದ್ಯ)

ತಾತ್ಪರ್ಯ:
ಬಲಿ, ವಿಭೀಷಣ, ಭೀಷ್ಮ, ನಾರದ, ಅರ್ಜುನ, ಪ್ರಹ್ಲಾದ ಇವರು ವಿಷ್ಣುವಿಗೆ ಬಹಳ ಪ್ರೀತಿಪಾತ್ರರಾದವರು ಮತ್ತು ಹತ್ತಿರದ ಭಕ್ತರು. ಅರ್ಜುನನ ಕೂಡ ಯುದ್ಧ ಮಾಡುವುದು ಸುಲಭವೇ? ಅವನ ಕೈಚಳಕ, ಮನಸ್ಸಿನ ನಿಶಿತ ಪ್ರಭಾವಗಳನ್ನು ಕಂಡು ಕಾಣದವನಂತೆ ಅವನೊಡನೆ ಯುದ್ಧವು ಹುಚ್ಚುತನವಲ್ಲವೇ ಎಂದು ವಿದುರ ಹೇಳಿದ.

ಅರ್ಥ:
ಫಲುಗುಣ: ಅರ್ಜುನ; ಜಲ: ನೀರು; ಅರುಹ: ಹುಟ್ಟು; ಜಲರುಹ: ಕಮಲ; ಅಕ್ಷಿ: ಕಣ್ಣು; ಅಚ್ಚುಮೆಚ್ಚು: ಪ್ರೀತಿಪಾತ್ರ, ಹತ್ತಿರದವ; ಡಿಂಗರಿಗ: ಭಕ್ತ; ಸುಲಭ: ಸಲೀಸು, ಸರಾಗ; ಕೂಡಣ: ಜೊತೆ; ಕಲಹ: ಯುದ್ಧ; ಭೀಭತ್ಸು: ಅರ್ಜುನ; ಕೈ: ಕರ; ಮನ: ಮನಸ್ಸು: ದಳ: ಸೈನ್ಯ, ದಟ್ಟವಾದ; ಅರಿ: ತಿಳಿ; ಕಂಡು: ನೋಡಿ; ಕಾಣದೆ: ನೋಡದೆ; ಮರುಳ: ಹುಚ್ಚು;

ಪದವಿಂಗಡಣೆ:
ಬಲಿ +ವಿಭೀಷಣ+ ಭೀಷ್ಮ +ನಾರದ
ಫಲುಗುಣನು +ಪ್ರಹ್ಲಾದ +ದೇವನು
ಜಲರುಹಾಕ್ಷನನ್ +ಅಚ್ಚುಮೆಚ್ಚಿನ+ ಡಿಂಗರಿಗರ್+ಇವರು
ಸುಲಭವೇ +ನಿನಗವರ +ಕೂಡಣ
ಕಲಹ +ಭೀಭತ್ಸುವಿನ +ಕೈಮನ
ದಳವನ್+ಅರಿಯಾ +ಕಂಡು +ಕಾಣದೆ +ಮರುಳಹರೆ+ಯೆಂದ

ಅಚ್ಚರಿ:
(೧) ವಿಷ್ಣುವಿನ ಭಕ್ತರು: ಬಲಿ, ವಿಭೀಷಣ, ಭೀಷ್ಮ, ನಾರದ, ಫಲುಗುಣ, ಪ್ರಹ್ಲಾದ
(೨) ನೋಡಿಯೂ ನೋಡದೆ ಎಂದು ಹೇಳಲು – ಕಂಡು ಕಾಣದೆ

ಪದ್ಯ ೧೩೫ : ಪಾಂಡವರ ಜೊತೆ ಯುದ್ಧವೇಕೆ ಒಳಿತಲ್ಲ?

ಹರಿಹಯನು ಗುಹ ರಾಮ ಬಾಣಾ
ಸುರನು ದಶಶಿರ ಭೀಮಸೇನಾ
ದ್ಯರು ಕಣಾ ಗಿರಿಜಾಧಿನಾಥನ ಡಿಂಗರಿಗರಿವರು
ಸರಸವೇ ಮೃತ್ಯುಂಜಯನ ಕೂ
ಡರಸ ನಿನ್ನಳವರಿಯದೇ ಹರಿ
ಸುರರೊಡನೆ ಹಗೆಗೊಂಬನೇ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೩೫ ಪದ್ಯ)

ತಾತ್ಪರ್ಯ:
ಇಂದ್ರ, ಷಣ್ಮುಖ, ರಾಮ, ಬಾಣಾಸುರ, ರಾವಣ, ಭೀಮ ಮುಂತಾದವರು ಶಿವನ ಪರಮ ಭಕ್ತರು. ಇಂತಹವರೊಡನೆ ಯುದ್ಧಮಾಡುವುದು ಒಳಿತೆ? ಶಿವನ ಎದುರು ಯುದ್ಧಮಾಡುವುದು ವಿನೋದವೇ? ವಿಷ್ಣುವು ದೇವತೆಗಳ ಶತ್ರುತ್ವವನ್ನು ಕೈಗೊಳ್ಳುವನೇ ಎಂದು ವಿದುರ ಕೇಳಿದ. ದೈವೀ ಪ್ರವೃತ್ತಿಯುಳ್ಳ ಪಾಂಡವರೊಡನೆ ಅಸುರೀ ಪ್ರವೃತ್ತಿಯುಳ್ಳ ಕೌರವರು ಯುದ್ಧಮಾಡುವುದು ಸಮಂಜಸವಲ್ಲ. ಭಗವಂತ ದೇವತೆಗಳ ರಕ್ಷಣೆ ಮಾಡುತ್ತಾನೆ ಎಂದು ತಿಳಿಸುವ ಪದ್ಯ.

ಅರ್ಥ:
ಹರಿಹಯ: ಇಂದ್ರ; ಗುಹ: ಷಣ್ಮುಖ; ರಾಮ: ದಶರತಾತ್ಮಜ; ದಶಶಿರ: ರಾವಣ; ಕಣಾ: ನೋಡಾ; ಗಿರಿಜಾಧಿನಾಥ: ಈಶ್ವರ; ಡಿಂಗರಿಗ:ಭಕ್ತ; ಸರಸ:ಚೆಲ್ಲಾಟ, ವಿನೋದ; ಮೃತ್ಯುಂಜಯ: ಶಿವ, ಶಂಕರ; ಕೂಡು: ಜೊತೆ; ಅಳವು:ಶಕ್ತಿ; ಅರಿ: ತಿಳಿ; ಹರಿ: ವಿಷ್ಣು; ಸುರ: ದೇವತೆ; ಹಗೆ: ದ್ವೇಷ;

ಪದವಿಂಗಡಣೆ:
ಹರಿಹಯನು+ ಗುಹ +ರಾಮ +ಬಾಣಾ
ಸುರನು +ದಶಶಿರ+ ಭೀಮಸೇನಾ
ದ್ಯರು +ಕಣಾ +ಗಿರಿಜಾಧಿನಾಥನ+ ಡಿಂಗರಿಗರ್+ಇವರು
ಸರಸವೇ +ಮೃತ್ಯುಂಜಯನ +ಕೂಡ್
ಅರಸ +ನಿನ್ನ್+ಅಳವ್+ಅರಿಯದೇ +ಹರಿ
ಸುರರೊಡನೆ +ಹಗೆಗೊಂಬನೇ+ ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಶಿವನ ಭಕ್ತರ ಹೆಸರುಗಳು: ಹರಿಹಯ, ಗುಹ, ರಾಮ, ಬಾಣಾಸುರ, ರಾವಣ, ಭೀಮ
(೨) ಗಿರಿಜಾಧಿನಾಥ, ಮೃತ್ಯುಂಜಯ – ಶಿವನ ಸಮನಾರ್ಥಕ ಪದ
(೩) ಸುರ – ೨, ೬ ಸಾಲಿನ ಮೊದಲ ಪದವಾಗಿರುವುದು

ಪದ್ಯ ೧೩೪: ಯಾರನ್ನು ನೆನೆದರೆ ಪಾಪಗಳು ಪರಿಹಾರವಾಗುತ್ತವೆ?

ಜನಪ ಕೇಳೈ ಸ್ಕಂದನನು ರಾ
ಮನನು ಹನುಮನ ಭೀಮಸೇನನ
ವಿನತೆಯಾತ್ಮಜನಿಂತಿದೈವರ ಭಾವ ಶುದ್ಧಿಯಲಿ
ನೆನೆದವರ ದುರಿತಂಗಳೋಡುವ
ವೆನಲು ನೀವೀ ಪವನಪುತ್ರನ
ನನುವರದೊಳೆಂತಕಟ ಜಯಿಸುವಿರೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೩೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನೇ ಕೇಳು, ಯಾರು ಸುಬ್ರಹ್ಮಣ್ಯ, ರಾಮ, ಹನುಮಂತ, ಭೀಮ ಮತ್ತು ಗರುಡ, ಈ ಐವರನ್ನು ಭಾವಶುದ್ಧಿಯಿಂದ ನೆನೆಯುತ್ತಾರೋ ಅಂತಹವರ ಪಾಪಗಳು ಪರಿಹಾರವಾಗುತ್ತವೆ. ಹೀಗಿರುವಾಗ ಭೀಮಸೇನನನ್ನು ಯುದ್ಧದಲ್ಲಿ ಹೇಗೆ ತಾನೆ ಜಯಿಸುವಿರಿ ಎಂದು ಪ್ರಶ್ನಿಸಿದ.

ಅರ್ಥ:
ಜನಪ: ರಾಜ; ಕೇಳು: ಆಲಿಸು; ಸ್ಕಂದ: ಸುಬ್ರಹ್ಮಣ್ಯ; ರಾಮ: ದಶರತಾತ್ಮಜ; ಹನುಮ: ಆಂಜನೇಯ; ಭೀಮ: ವೃಕೋಧರ; ವಿನತೆಯಾತ್ಮಜ: ಗರುಡ; ವಿನತೆ: ಕಶ್ಯಪ ಋಷಿಗಳ ಭಾರ್ಯೆ ; ಭಾವ: ಮನೋಧರ್ಮ, ಭಾವನೆ; ಶುದ್ಧಿ: ನಿರ್ಮಲ; ನೆನೆ: ಜ್ಞಾಪಿಸಿಕೊ; ದುರಿತ: ಪಾಪ, ಪಾತಕ; ಪವನಪುತ್ರ: ಭೀಮ; ಅನುವರದೊಳ್: ಯಾವಾಗಲು; ಅಕಟ: ಆಶ್ಚರ್ಯ, ಉದ್ಗಾರ, ಅಯ್ಯೋ; ಜಯಿಸು: ಗೆಲ್ಲು;

ಪದವಿಂಗಡಣೆ:
ಜನಪ +ಕೇಳೈ +ಸ್ಕಂದನನು +ರಾ
ಮನನು +ಹನುಮನ +ಭೀಮಸೇನನ
ವಿನತೆಯಾತ್ಮಜನ್+ಇಂತ್+ಇದ್+ಐವರ +ಭಾವ +ಶುದ್ಧಿಯಲಿ
ನೆನೆದವರ +ದುರಿತಂಗಳ್+ಓಡುವ
ವೆನಲು +ನೀವೀ +ಪವನಪುತ್ರನನ್
ಅನುವರದೊಳೆಂತ್+ಅಕಟ +ಜಯಿಸುವಿರ್+ಎಂದನಾ +ವಿದುರ

ಅಚ್ಚರಿ:
(೧) ಸ್ಕಂದ, ರಾಮ, ಹನುಮ, ಭೀಮ, ಗರುಡ – ಈ ಐವರ ಶಕ್ತಿಯನ್ನು ತಿಳಿಸುವ ಪದ್ಯ
(೨) ಗರುಡನನ್ನು ವಿನತೆಯಾತ್ಮಜ ಎಂದು ವರ್ಣಿಸಿರುವುದು
(೩) ಭೀಮ, ಪವನಪುತ್ರ – ಸಮನಾರ್ಥಕ ಪದ