ಪದ್ಯ ೫೧: ಯುದ್ಧದ ಆರಂಭ ಹೇಗಾಯಿತು?

ತೂಳುವರೆಗಳ ಲಗ್ಗೆಯಲಿ ಕೆಂ
ಧೂಳು ಮಸಗಿ ವಿರಾಟ ಭೂಪತಿ
ಯಾಳು ಕವಿತರೆ ಕಂಡು ಸೈರಿಸಿ ತುರುವ ಹಿಂದಿಕ್ಕಿ
ಕಾಳಗವ ಕೊಟ್ಟರು ಛಡಾಳಿಸಿ
ಸೂಳವಿಸಿ ನಿಸ್ಸಾಳ ದಿಕ್ಕಿನ
ಮೂಲೆ ಬಿರಿಯೆ ವಿರಾಟಬಲ ಹಳಚಿದುದು ಪರಬಲವ (ವಿರಾಟ ಪರ್ವ, ೫ ಸಂಧಿ, ೫೧ ಪದ್ಯ)

ತಾತ್ಪರ್ಯ:
ತಮ್ಮಟೆ ಬಡಿಯುತ್ತಾ ಕಾಲು ತುಳಿತಕ್ಕೆ ಕೆಂಧೂಳಿ ಮೇಲೇಳಿತು. ವಿರಾಟನ ಸೈನ್ಯವು ಬಂದುದನ್ನು ನೋಡಿದ ತ್ರಿಗರ್ತ ಸೈನ್ಯದವರು ಗೋವುಗಳನ್ನು ತಮ್ಮ ಹಿಂದೆ ನಿಲ್ಲಿಸಿ ಕದನವನ್ನು ಆರಂಭಿಸಿದರು. ಕಹಳೆಗಳ ಮೊಳಗಿನಿಂದ ದಿಕ್ಕಿನ ಮೂಲೆ ಬಿರಿದು ಹೋಗುವಂತಿರಲು ವಿರಾಟನ ಸೈನ್ಯವು ಶತ್ರುಗಳೊಡನೆ ಹೋರಾಡಿತು.

ಅರ್ಥ:
ತೂಳು: ಆವೇಶ, ಉನ್ಮಾದ; ತೂಳುವರೆ: ಒಂದು ಬಗೆಯ ತಮಟೆ; ಲಗ್ಗೆ:ಮುತ್ತಿಗೆ, ಆಕ್ರಮಣ; ಕೆಂಧೂಳು: ಕೆಂಪಾದ ಧೂಳು; ಮಸಗು:ಹರಡು; ಭೂಪತಿ: ರಾಜ; ಆಳು: ಸೈನ್ಯ; ಕವಿ:ಮುಸುಕು, ದಟ್ಟವಾಗು; ಕಂಡು: ನೋಡಿ; ಸೈರಿಸಿ: ಸಹಿಸು; ತುರು: ಗೋವು; ಹಿಂದಿಕ್ಕು: ಹಿಂಬದಿ ಸೇರಿಸು; ಕಾಳಗ: ಯುದ್ಧ; ಕೊಟ್ಟು: ನೀದು; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಸೂಳವಿಸು: ಧ್ವನಿಮಾಡು; ನಿಸ್ಸಾಳ:ಒಂದು ಬಗೆಯ ಚರ್ಮವಾದ್ಯ; ದಿಕ್ಕು: ದಿಶೆ; ಮೂಲೆ: ಕೊನೆ; ಬಿರಿ:ಬಿರುಕು, ಸೀಳು; ಬಲ: ಸೈನ್ಯ, ದಳ; ಹಳಚು:ತಾಗು, ಬಡಿ; ಪರಬಲ:ಶತ್ರುಸೈನ್ಯ;

ಪದವಿಂಗಡಣೆ:
ತೂಳುವರೆಗಳ +ಲಗ್ಗೆಯಲಿ +ಕೆಂ
ಧೂಳು +ಮಸಗಿ +ವಿರಾಟ +ಭೂಪತಿ
ಯಾಳು +ಕವಿತರೆ +ಕಂಡು +ಸೈರಿಸಿ +ತುರುವ +ಹಿಂದಿಕ್ಕಿ
ಕಾಳಗವ +ಕೊಟ್ಟರು +ಛಡಾಳಿಸಿ
ಸೂಳವಿಸಿ +ನಿಸ್ಸಾಳ +ದಿಕ್ಕಿನ
ಮೂಲೆ +ಬಿರಿಯೆ +ವಿರಾಟಬಲ+ ಹಳಚಿದುದು +ಪರಬಲವ

ಅಚ್ಚರಿ:
(೧) ವಿರಾಟಬಲ, ಪರಬಲ; ಛಡಾಳಿಸಿ, ಸೂಳವಿಸಿ – ಬಲ ಪದದ ಬಳಕೆ

ಪದ್ಯ ೩೨: ಕೌರವರ ಸೈನ್ಯವು ಹೇಗೆ ಸಿದ್ಧವಾಯಿತು?

ಕರಿಗಳಿಗೆ ಗುಳ ಬೀಸಿದವು ವರ
ತುರಗ ಹಲ್ಲಣಿಸಿದವು ತೇಜಿಯ
ತರಿಸಿ ರಥದಲಿ ಹೂಡಿ ಕೈದುವ ಸೆಳೆದು ಕಾಲಾಳು
ಅರಸನಿದಿರಲಿ ಮೋಹಿದುದು ಸೀ
ಗುರಿಯ ಸಬಳದ ಸಾಲಿನೊಳಗಂ
ಬರವ ಮುಸುಕಿತು ಧರಣಿ ತಗ್ಗಿತು ನೆರೆದುದಾ ಸೇನೆ (ವಿರಾಟ ಪರ್ವ, ೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಆನೆಗಳಿಗೆ ಯುದ್ಧಕ್ಕೆ ಹೋಗಲು ಬೇಕಾದ ಅಂಬಾರಿ, ಅಲಂಕಾರವನ್ನು ಮಾಡಿದರು, ಶ್ರೇಷ್ಠ ಕುದುರೆಗಳಿಗೆ ಜೀನು ಹಾಕಿದರು, ರಥಗಳಿಗೆ ಕುದುರೆಗಳನ್ನು ಕಟ್ಟಿದರು, ಆಯುಧವನ್ನೆಳೆದು ಕಾಲಾಳುಗಳು ನಿಂತರು. ಎಲ್ಲಾ ಯೋಧರು ದೊರೆಯ ಮುಂದೆ ನಿಂತರು. ಚಾಮರ, ಭರ್ಜಿಗಳು ಆಕಾಶವನ್ನು ಮುಸುಕಿದವು. ಕಾಲ್ತುಳಿತಕ್ಕೆ ಭೂಮಿ ತಗ್ಗಿತೋ ಎಂಬಂತೆ ಸೈನ್ಯ ನಡೆಯಿತು.

ಅರ್ಥ:
ಕರಿ: ಆನೆ; ಗುಳ:ಕುಂಟೆ, ಆನೆ ಕುದುರೆಗಳ ಪಕ್ಷರಕ್ಷೆ; ಬೀಸು:ಸಂಚಾರ, ನಡೆ, ಓಟ; ವರ: ಶ್ರೇಷ್ಠ; ತುರಗ: ಕುದುರೆ; ಹಲ್ಲಣ:ಜೀನು, ತಡಿ; ತೇಜಿ:ಕುದುರೆ, ಅಶ್ವ; ತರಸಿ: ಬರೆಮಾಡು; ರಥ: ಬಂಡಿ; ಹೂಡಿ: ಸೇರಿ, ಜೋಡಿಸು; ಕೈದು: ಆಯುಧ, ಶಸ್ತ್ರ; ಸೆಳೆ: ಎಳೆತ, ಸೆಳೆತ, ವಶಪಡಿಸಿಕೊಳ್ಳು; ಕಾಲಾಳು: ಸೈನಿಕ; ಅರಸ: ರಾಜ; ಇದಿರು: ಎದುರು; ಮೋಹಿದ: ಅಡಸಿದ, ಮೇಲೆಬೀಳು;ಸೀಗುರಿ:ಚಾಮರ; ಸಬಳ:ಈಟಿ, ಭರ್ಜಿ; ಸಾಲು: ಆವಳಿ; ಅಂಬರ: ಆಗಸ; ಮುಸುಕು: ಹೊದಿಕೆ; ಧರಣಿ: ಭೂಮಿ; ತಗ್ಗು: ಕುಸಿತ;ನೆರೆ: ಗುಂಪು; ಸೇನೆ: ಸೈನ್ಯ;

ಪದವಿಂಗಡಣೆ:
ಕರಿಗಳಿಗೆ +ಗುಳ +ಬೀಸಿದವು+ ವರ
ತುರಗ +ಹಲ್ಲಣಿಸಿದವು+ ತೇಜಿಯ
ತರಿಸಿ +ರಥದಲಿ +ಹೂಡಿ +ಕೈದುವ +ಸೆಳೆದು +ಕಾಲಾಳು
ಅರಸನ್+ಇದಿರಲಿ +ಮೋಹಿದುದು +ಸೀ
ಗುರಿಯ +ಸಬಳದ +ಸಾಲಿನೊಳಗ್+
ಅಂಬರವ+ ಮುಸುಕಿತು +ಧರಣಿ +ತಗ್ಗಿತು +ನೆರೆದುದಾ +ಸೇನೆ

ಅಚ್ಚರಿ:
(೧) ತೇಜಿ, ತುರಗ – ಸಮನಾರ್ಥಕ ಪದ – ೨ನೇ ಸಾಲಿನ ಮೊದಲ ಹಾಗು ಕೊನೆಯ ಪದ
(೨) ಸೈನ್ಯದ ಬಲವನ್ನು ವಿವರಿಸುತ್ತಾ ಭೂಮಿಯೆ ತಗ್ಗಿತು ಎಂಬ ಹೋಲಿಕೆ

ಪದ್ಯ ೫೦: ವಿರಾಟ ಮತ್ತು ಅವನ ಸಹೋದರರು ಯುದ್ಧಕ್ಕೆ ಹೇಗೆ ಹೊರಟರು?

ವರ ವಿರಾಟನ ಸೋದರರು ಸಾ
ವಿರದ ಸಂಖ್ಯೆಯ ರಾಜಪುತ್ರರು
ಕೊರಳ ಪದಕದ ಕಾಲ ತೊಡರಿನ ಮಣಿಯ ಮೌಳಿಗಳ
ಪರಿಮಳದ ಕತ್ತುರಿಯ ತಿಲಕದ
ಹೊರೆದ ಗಂಧದ ತೋರ ಮುಡುಹಿನ
ಕರದ ಖಂಡೆಯದದಟರೈದಿದರಾನೆ ಕುದುರೆಯಲಿ (ವಿರಾಟ ಪರ್ವ, ೫ ಸಂಧಿ, ೫೦ ಪದ್ಯ)

ತಾತ್ಪರ್ಯ:
ವಿರಾಟ ಮತ್ತು ಅವನ ರಾಜಪರಿವಾರದ ಸಹೋದರರು, ಕೊರಳಲ್ಲಿ ಪದಕ, ಕಾಲ, ಸರಪಣಿ, ಮಣಿ ಖಚಿತ ಶಿರಭೂಷಣ, ಕಸ್ತೂರಿ ತಿಲಕ, ಪರಿಮಳಭರಿತ ಗಂಧ ಲೇಪನಗಳಿಂದ ಅಲಂಕೃತರಾಗಿ ಕೈಯಲ್ಲಿ ಖಡ್ಗಗಳನ್ನು ಹಿಡಿದು ಆನೆ ಕುದುರೆಗಳ ಮೇಲೆ ಹೊರಟರು.

ಅರ್ಥ:
ವರ: ಶ್ರೇಷ್ಠ; ಸೋದರ: ಬಾಂಧವರು, ಸಹೋದರ; ಸಾವಿರ: ಸಹಸ್ರ; ಸಂಖ್ಯೆ: ಅಂಕಿ; ರಾಜಪುತ್ರರು: ರಾಜಮನೆತನದವರು; ಕೊರಳು: ಕಂಠ; ಪದಕ: ಬಹುಮಾನವಾಗಿ ಕೊಡುವ ಬಿಲ್ಲೆ; ತೊಡರು: ಬಿರುದಿನ ಸಂಕೇತವಾಗಿ ಧರಿಸುವ ಕಾಲ ಬಳೆ; ಮಣಿ: ರತ್ನ; ಮೌಳಿ: ಶಿರ, ಕಿರೀಟ; ಪರಿಮಳ: ಸುಗಂಧ; ಕತ್ತುರಿ: ಕಸ್ತೂರಿ; ತಿಲಕ: ನಾಮ; ಹೊರೆ:ರಕ್ಷಿಸು, ಸಲಹು; ಗಂಧ: ಚಂದನ; ತೋರ:ದಪ್ಪವಾದ, ಸ್ಥೂಲವಾದ; ಮುಡುಹು: ಹೆಗಲು, ಭುಜಾಗ್ರ; ಕರ: ಕೈ; ಖಂಡೆಯ: ಕತ್ತಿ, ಖಡ್ಗ; ಅದಟ: ಶೂರ, ಪರಾಕ್ರಮಿ; ಆನೆ: ಕರಿ; ಕುದುರೆ: ಅಶ್ವ; ಐದು: ಸೇರು, ಹೋಗು;

ಪದವಿಂಗಡಣೆ:
ವರ+ ವಿರಾಟನ+ ಸೋದರರು+ ಸಾ
ವಿರದ+ ಸಂಖ್ಯೆಯ +ರಾಜ+ಪುತ್ರರು
ಕೊರಳ +ಪದಕದ+ ಕಾಲ +ತೊಡರಿನ +ಮಣಿಯ +ಮೌಳಿಗಳ
ಪರಿಮಳದ +ಕತ್ತುರಿಯ +ತಿಲಕದ
ಹೊರೆದ +ಗಂಧದ+ ತೋರ +ಮುಡುಹಿನ
ಕರದ+ ಖಂಡೆಯದ್+ಅದಟರ್+ಐದಿದರ್+ಅನೆ +ಕುದುರೆಯಲಿ

ಅಚ್ಚರಿ:
(೧) ಜೋಡಿ ಪದಗಳು – ‘ವ” ವರ ವಿರಾಟ; ‘ಸ’ – ಸೋದರರು ಸಾವಿರದ ಸಂಖ್ಯೆ

ಪದ್ಯ ೪೯: ಯುಧಿಷ್ಠಿರನು ಯಾವ ನೆಪವ ಹೇಳಿ ವಿರಾಟನೊಡನೆ ಹೊರಟನು?

ಎಂದು ತಮ್ಮಂದಿರು ಸಹಿತ ಯಮ
ನಂದನನು ಕಲಹಾವಲೋಕಾ
ನಂದ ಪರಿಕರಲುಳಿತ ಕೋಮಲಕಾಯನನುವಾಗಿ
ಬಂದು ಮತ್ಸ್ಯನ ನೇಮದಲಿ ನಡೆ
ತಂದು ರಥವೇರಿದನು ಪಾರ್ಥನ
ಹಿಂದಕಿರಿಸಿ ವಿರಾಟನೊಡನವನೀಶ ಹೊರವಂಟ (ವಿರಾಟ ಪರ್ವ, ೫ ಸಂಧಿ, ೪೯ ಪದ್ಯ)

ತಾತ್ಪರ್ಯ:
ಯುದ್ಧವನ್ನು ಮಾಡಲು ಸನ್ನದ್ಧರಾದ ಪಾಂಡವರು, ತನ್ನ ತಮ್ಮಂದಿರ ಸಹಿತ ಯುದ್ಧವನ್ನು ನೋಡಲು ನಮಗೆ ಅನುವು ಮಾಡಿಕೊಡಬೇಕೆಂದು ಕೋಮಲಕಾಯನಾದ ಯುಧಿಷ್ಠಿರನು ವಿರಾಟರಾಜನಲ್ಲಿ ಬೇಡಿದನು. ಅವನ ಸಮ್ಮತಿ ಪಡೆದು ಯುಧಿಷ್ಠಿರನಾದಿ ಎಲ್ಲರು ರಥವನ್ನೇರಿ ಯುದ್ಧಕ್ಕೆ ಹೊರಟರು. ಅರ್ಜುನನು ಮಾತ್ರ ಆರಮನೆಯಲ್ಲೇ ಉಳಿದನು.

ಅರ್ಥ:
ತಮ್ಮ: ಸಹೋದರ; ಸಹಿತ: ಜೊತೆ; ನಂದನ: ಪುತ್ರ; ಯಮ: ಕಾಲ; ಕಲಹ: ಯುದ್ಧ; ಅವಲೋಕ: ನೋಡಲು; ಪರಿಕರ: ಸುತ್ತುಮುತ್ತಲಿನ ಜನ; ಕೋಮಲ: ಮೃದು; ಕಾಯ: ದೇಹ; ಅನುವು:ರೀತಿ, ಅವಕಾಶ; ಬಂದು: ಆಗಮಿಸು; ನೇಮ: ವ್ರತ; ನಡೆ: ಮುಂದೆ ಹೋಗು; ರಥ: ಬಂಡಿ; ಏರು: ಹತ್ತು; ಹಿಂದಕಿರಿಸು: ಉಳಿಸು; ಅವನೀಶ: ರಾಜ; ಆನಂದ: ಸಂತೋಷ;

ಪದವಿಂಗಡಣೆ:
ಎಂದು +ತಮ್ಮಂದಿರು +ಸಹಿತ +ಯಮ
ನಂದನನು +ಕಲಹ+ಅವಲೋಕ
ಆನಂದ +ಪರಿಕರಲ್+ಉಳಿತ +ಕೋಮಲ+ಕಾಯನ್+ಅನುವಾಗಿ
ಬಂದು +ಮತ್ಸ್ಯನ +ನೇಮದಲಿ+ ನಡೆ
ತಂದು +ರಥವೇರಿದನು +ಪಾರ್ಥನ
ಹಿಂದಕಿರಿಸಿ +ವಿರಾಟನೊಡನ್+ಅವನೀಶ+ ಹೊರವಂಟ

ಅಚ್ಚರಿ:
(೧) ನಂದ, ಆನಂದ; ಬಂದು, ಎಂದು, ತಂದು – ಪ್ರಾಸ ಪದಗಳು
(೨) ಯಮನಂದನ, ಅವನೀಶ, ಕೋಮಲಕಾಯ – ಯುಧಿಷ್ಠಿರನನ್ನು ಸಂಭೋದಿಸಲು ಬಳಸಿರುವ ಪದಗಳು