ಪದ್ಯ ೨೪:ಕುಮಾರವ್ಯಾಸರು ಯಾರನ್ನು ಧ್ಯಾನಿಸುತ್ತಾ ಭಾರತಕಥೆಯನ್ನು ಬರೆಯಲು ಪ್ರಾರಂಭಿಸುತ್ತಾರೆ?

ಶ್ರೀಗಿರಿಜೆಯರಸನನು ವಿಮಲಗು
ಣಾಗಮೋತ್ತಮವರ್ಣನನು ವರ
ಯೋಗಾಭಿವಂದ್ಯನನಖಿಳ ಶೃತಿ ಪೌರಾಣದಾಯಕನ
ನಾಗಭೂಷಣನಮರವಂದಿತ
ಯೋಗಿಜನ ಹೃದಯನನು ಕರುಣಾ
ಸಾಗರನ ಬಲಗೊಂಡು ಭಾರತಕಥೆಯ ವಿರಚಿಸುವೆ (ಆದಿ ಪರ್ವ, ೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಪಾರ್ವತೀಪತಿಯೂ, ಆಗಮಗಳಿಂದ ಉತ್ತಮ ಗುಣವುಳ್ಳವನೆಂದು ವರ್ಣೀತನಾದವನೂ, ಶ್ರೇಷ್ಠಜ್ಞಾನಿಗಯೆಂದು ವಂದಿತನೂ, ವೇದಪುರಾಣಗಳನ್ನು ನೀಡಿದವನೂ, ಯೋಗಿಗಳ ಹೃದಯದಲ್ಲಿ ವಾಸಿಸುವವನೂ, ಕರುಣಾಸಾಗರನೂ, ನಾಗಭೂಷಣನೂ ಆದ ಶಿವನನ್ನು ಪ್ರದಕ್ಷಿಣೆ ಮಾಡಿ ಮಹಾಭಾರತದ ಕಥೆಯನ್ನು ರಚಿಸಲು ಪ್ರಾರಂಭಿಸುತ್ತೇನೆ.

ಅರ್ಥ:
ಗಿರಿಜೆ: ಪಾರ್ವತಿ; ಅರಸು: ರಾಜ; ವಿಮಲ: ನಿರ್ಮಲ; ಗುಣ: ನಡತೆ, ಸ್ವಭಾವ; ಆಗಮ: ಶಾಸ್ತ್ರ ಗ್ರಂಥ, ಜ್ಞಾನ; ವರ್ಣ:ಹೊಳಪು,ರೂಪ; ವರ: ಶ್ರೇಷ್ಠ; ಯೋಗಾಭಿ: ಶ್ರೇಷ್ಠರಾದ; ಅಭಿವಂದ್ಯ: ನಮಸ್ಕರಿಸಲ್ಪಟ್ಟ; ಶೃತಿ: ವೇದ; ಪೌರಾಣ; ಗ್ರಂಥ; ದಾಯಕ: ನೀಡಿದ; ನಾಗ: ಹಾವು; ಭೂಷಣ: ಅಲಂಕಾರ; ಅಮರ: ದೇವತೆ; ವಂದಿತ: ಆರಾಧಿಸಲ್ಪಡುವ; ಯೋಗಿಜನ: ಋಷಿ ಮುನಿಗಳು; ಹೃದಯ: ಎದೆ, ವಕ್ಷಸ್ಥಳ; ಕರುಣೆ: ದಯೆ; ಸಾಗರ: ಸಮುದ್ರ; ಬಲ: ದಕ್ಷಿಣ ಪಾರ್ಶ್ವ; ಬಲಗೊಂಡು: ಪ್ರದಕ್ಷಿಣೆ; ವಿರಚಿಸು: ರಚಿಸು;

ಪದವಿಂಗಡಣೆ:
ಶ್ರೀಗಿರಿಜೆ+ಅರಸನನು +ವಿಮಲ+ಗುಣ
ಆಗಮೋತ್ತಮ+ವರ್ಣನನು +ವರ
ಯೋಗ+ ಅಭಿವಂದ್ಯನನ್+ಅಖಿಳ +ಶೃತಿ +ಪೌರಾಣ+ದಾಯಕನ
ನಾಗಭೂಷಣನ್+ಅಮರ+ವಂದಿತ
ಯೋಗಿಜನ+ ಹೃದಯನನು +ಕರುಣಾ
ಸಾಗರನ +ಬಲಗೊಂಡು +ಭಾರತಕಥೆಯ+ ವಿರಚಿಸುವೆ

ಅಚ್ಚರಿ:
(೧) ಶಿವನ ಗುಣವಾಚಕಗಳು: ಗಿರಿಜೆಯ ಅರಸ, ವಿಮಲಗುಣ, ಆಗಮೋತ್ತಮ, ಯೋಗಾಭಿವಂದ್ಯ, ಶೃತಿ ಪೌರಾಣದಾಯಕ, ನಾಗಭೂಷಣ, ಅಮರವಂದಿತ, ಯೋಗಿಜನ ಹೃದಯ, ಕರುಣಾಸಾಗರ

ಪದ್ಯ ೨೨: ಮಹಾಭಾರತದ ಕಥೆಯ ಶ್ರೇಷ್ಠತೆಯೇನು?

ಚೋರ ನಿಂದಿಸಿ ಶಶಿಯ ಬೈದಡೆ
ಕ್ಷೀರವನು ಕ್ಷಯರೋಗಿ ಹಳಿದಡೆ
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು
ಭಾರತದ ಕಥನ ಪ್ರಸಂಗವ
ಕ್ರೂರಕರ್ಮಿಗಳೆತ್ತ ಬಲ್ಲರು
ಘೋರರೌರವವನ್ನು ಕೆಡಿಸುಗು ಕೇಳ್ದ ಸಜ್ಜನರ (ಆದಿ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕಳ್ಳನನ್ನು ನಿಂದಿಸುತ್ತಾ ಚಂದ್ರನನ್ನು ಬೈದರೆ, ಕ್ಷಯರೋಗಿಯು ಹಾಲನ್ನು ಹಳಿದರೆ ಪುಣ್ಯಕ್ಷೇತ್ರವಾದ ವಾರಣಾಸಿಯನ್ನು ಹೆಳವನು ನಿಂದಿಸಿ ನಕ್ಕರೆ ಏನು ತಾನೆ ಆಗುವುದು. ಭಾರತದ ಕಥೆಯ ಪ್ರಸಂಗವನ್ನು ಕ್ರೂರಕರ್ಮಿಗಳು ಹೇಗೆ ತಾನೆ ಬಲ್ಲರು, ಈ ಕಥೆಯನ್ನು ಕೇಳಿದ ಸಜ್ಜನರಿಗೆ ರೌರವಾದಿ ಘೋರನರಕದ ಗತಿಯನ್ನು ತಪ್ಪಿಸಬಲ್ಲದು.

ಅರ್ಥ:
ಚೋರ: ಕಳ್ಳ; ನಿಂದಿಸು: ಬೈಯ್ಯುವುದು, ಹಳಿ, ದೂಷಿಸು; ಶಶಿ: ಚಂದ್ರ; ಕ್ಷೀರ: ಹಾಲು; ರೋಗ: ಖಾಯಿಲೆ; ಹಳಿ: ಬೈಯು; ಹೆಳವ: ಕುಂಟ; ನಿಂದಿಸು: ತೆಗಳು; ನಕ್ಕು: ಸಂತೋಷಿಸು; ಪ್ರಸಂಗ: ಸಂದರ್ಭ; ಕ್ರೂರ: ದುಷ್ಟ; ಬಲ್ಲ: ತಿಳಿ; ಘೋರ: ಉಗ್ರ; ರೌರವ: ನರಕ; ಕೆಡಿಸು: ತಪ್ಪಿಸು; ಸಜ್ಜನ: ಒಳ್ಳೆಯ ಜನ;

ಪದವಿಂಗಡಣೆ:
ಚೋರ +ನಿಂದಿಸಿ+ ಶಶಿಯ +ಬೈದಡೆ
ಕ್ಷೀರವನು +ಕ್ಷಯರೋಗಿ +ಹಳಿದಡೆ
ವಾರಣಾಸಿಯ +ಹೆಳವ +ನಿಂದಿಸಿ +ನಕ್ಕರೇನಹುದು
ಭಾರತದ+ ಕಥನ+ ಪ್ರಸಂಗವ
ಕ್ರೂರಕರ್ಮಿಗಳೆತ್ತ+ ಬಲ್ಲರು
ಘೋರ+ರೌರವವನ್ನು +ಕೆಡಿಸುಗು +ಕೇಳ್ದ +ಸಜ್ಜನರ

ಅಚ್ಚರಿ:
(೧) ನಿಂದಿಸು, ಬೈಯು, ಹಳಿ – ಸಮನಾರ್ಥಕ ಪದ
(೨) ಚೋರ, ಕ್ಷಯರೋಗಿ, ಹೆಳವ, ಕ್ರೂರಕರ್ಮಿ – ದುಷ್ಟರನ್ನು ಹೇಳಲು ಪ್ರಯೋಗಿಸಿದ ಪದಗಳು

ಪದ್ಯ ೨೦: ಭಾರತ ಕಥೆಯನ್ನು ಕೇಳುವವರಿಗೆ ಯಾವ ಭಾಗ್ಯ ದೊರೆಯುತ್ತದೆ?

ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ (ಆದಿ ಪರ್ವ, ೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಹಾಭಾರತದ ಒಂದು ಅಕ್ಷರದ ಮಹತ್ವವೇನು ಎಂದು ಕವಿ ತಿಳಿಸಿದ್ದಾರೆ. ವೇದಪಾರಾಯಣ, ಗಂಗಾದಿ ಪುಣ್ಯತೀರ್ಥಗಳ ಸ್ನಾನ, ಕೃಚ್ಛ್ರವೇ ಮೊದಲಾದ ತಪಸ್ಸುಗಳು, ಜ್ಯೋತಿಷ್ಯ, ಅಷ್ಟೋಮಯಾಗ, ಭೂದಾನ, ವಸ್ತ್ರ, ಕನ್ಯಾದಾನಗಳು, ಇವುಗಳನ್ನು ಮಾಡಿದರೆ ದೊರೆಯುವ ಎಲ್ಲಾ ಫಲಗಳು ಈ ಭಾರತದ ಒಂದಕ್ಷರವನ್ನು ಕೇಳಿದವರಿಗೆ ಸಿಗುತ್ತದೆ.

ಅರ್ಥ:
ವೇದ: ಜ್ಞಾನ; ಪಾರಾಯಣ: ಹೇಳು; ಫಲ: ಪ್ರಯೋಜನ; ತೀರ್ಥ: ಪವಿತ್ರ ನೀರು; ಸ್ನಾನ: ಜಳಕ; ಕೃಚ್ಛ್ರ: ಒಂದು ಬಗೆಯ ವ್ರತ; ಆದಿ: ಮುಂತಾದ; ತಪಸ್ಸು: ಧ್ಯಾನ ಮಾಡುವುದು; ಯಾಗ: ಕ್ರತು; ಮೇದಿನಿ: ಭೂಮಿ; ಒಲಿ: ಪ್ರೀತಿ, ಒಲಿಸು;ವಸ್ತ್ರ: ಬಟ್ಟೆ; ಕನ್ಯ: ಹೆಣ್ಣು; ದಾನ: ಕೊಡುಗೆ; ಆದರ: ಗೌರವ; ಅಕ್ಷರ: ಅಕಾರ ಮೊದಲಾದ ವರ್ಣ; ಕೇಳು: ಆಲಿಸು;

ಪದವಿಂಗಡಣೆ:
ವೇದಪಾರಾಯಣದ+ ಫಲ+ ಗಂ
ಗಾದಿ +ತೀರ್ಥಸ್ನಾನ +ಫಲ +ಕೃ
ಚ್ಛ್ರಾದಿ +ತಪಸಿನ+ ಫಲವು+ ಜ್ಯೋತಿಷ್+ಅಷ್ಟೋಮಯಾಗ+ಫಲ
ಮೇದಿನಿಯನ್+ಒಲಿದಿತ್ತ +ಫಲ +ವ
ಸ್ತ್ರಾದಿ +ಕನ್ಯಾ+ದಾನ+ಫಲವಹುದ್
ಆದರಿಸಿ+ ಭಾರತದೊಳ್+ಒಂದ್+ಅಕ್ಷರವ +ಕೇಳ್ದರಿಗೆ

ಅಚ್ಚರಿ:
(೧) ಫಲ – ೬ ಬಾರಿ ಪ್ರಯೋಗ

ಪದ್ಯ ೧೯: ಕುಮಾರವ್ಯಾಸ ಭಾರತ ಕಾವ್ಯದ ಹಿರಿಮೆಯೇನು?

ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರೀಜನಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ (ಆದಿ ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಈ ಮಹಾಕಾವ್ಯವು ರಾಜರಿಗೆ ಕ್ಷತ್ರಿಯಧರ್ಮವನ್ನು ತಿಳಿಸಿದರೆ, ಬ್ರಾಹ್ಮಣರಿಗೆ ವೇದದ ಸಾರವನ್ನು ತಿಳಿಸಿ, ಆತ್ಮಜ್ಞಾನಿಗಳಿಗೆ ಆತ್ಮತತ್ವದ ವಿಚಾರವನ್ನು, ಮಂತ್ರಿಗಳಿಗೆ ಬುದ್ಧಿದಾಯಕ, ವಿರಹಿಗಳಿಗೆ ಶೃಂಗಾರರಸ ಭರಿತವಾಗಿ, ವಿದ್ವಾಂಸರಿಗೆ ಅಲಂಕಾರ ಪ್ರಬೋಧಕವಾಗಿರುವ ಈ ಕಾವ್ಯ ಕಾವ್ಯಗಳಿಗೆ ಗುರುವಾಗಿದೆ.

ಅರ್ಥ:
ಅರಸು: ರಾಜ; ವೀರ: ಶೌರ್ಯ; ದ್ವಿಜ: ಬ್ರಾಹ್ಮಣ; ಪರಮ: ಶ್ರೇಷ್ಠ; ವೇದ: ಜ್ಞಾನ; ಸಾರ: ರಸ; ಯೋಗಿ: ಋಷಿ; ತತ್ವ: ಶಾಸ್ತ್ರ; ವಿಚಾರ: ವಿಮರ್ಶೆ; ಮಂತ್ರಿ: ಸಚಿವ; ಬುದ್ಧಿ: ಜ್ಞಾನ; ವಿರಹಿ: ವಿಯೋಗಿ; ಶೃಂಗಾರ: ಭೂಷಣ; ವಿದ್ಯಾ: ವಿದ್ಯೆ, ಜ್ಞಾನ; ಪರಿಣತ:ನೈಪುಣ್ಯ, ಪ್ರೌಢ; ಕಾವ್ಯ: ಪದ್ಯ; ಗುರು: ಆಚಾರ್ಯ; ರಚಿಸು: ರೂಪಿಸು, ಬರೆ;

ಪದವಿಂಗಡಣೆ:
ಅರಸುಗಳಿಗಿದು+ ವೀರ +ದ್ವಿಜರಿಗೆ
ಪರಮವೇದದ +ಸಾರ +ಯೋಗೀ
ಶ್ವರರ +ತತ್ವವಿಚಾರ +ಮಂತ್ರೀಜನಕೆ +ಬುದ್ಧಿಗುಣ
ವಿರಹಿಗಳ +ಶೃಂಗಾರ +ವಿದ್ಯಾ
ಪರಿಣತರ್+ಅಲಂಕಾರ+ ಕಾವ್ಯಕೆ
ಗುರುವ್+ಎನಲು +ರಚಿಸಿದ +ಕುಮಾರವ್ಯಾಸ +ಭಾರತವ

ಅಚ್ಚರಿ:
(೧) ವೀರ, ವೇದದ ಸಾರ, ತತ್ವವಿಚಾರ, ಬುದ್ಧಿಗುಣ, ಶೃಂಗಾರ, ಅಲಂಕಾರ, ಕಾವ್ಯಕೆ ಗುರು – ಕುಮಾರವ್ಯಾಸದ ಹಿರಿಮೆಯನ್ನು ತಿಳಿಸಿರುವುದು

ಪದ್ಯ ೧೮: ಕುಮಾರವ್ಯಾಸನ ಭಾರತದ ಕಥೆಯ ಹಿರಿಮೆಯೇನು?

ಹರಿಯ ಬಸುರೊಳಗಖಿಳ ಲೋಕದ
ವಿರಡವಡಗಿಹವೋಲು ಭಾರತ
ಶರಧಿಯೊಳಗಡಗಿಹವನೇಕ ಪುರಾಣ ಶಾಸ್ತ್ರಗಳು
ಪರಮ ಭಕ್ತಿಯಲೀ ಕೃತಿಯನವ
ಧರಿಸಿ ಕೇಳ್ದಾ ನರರ ದುರಿತಾಂ
ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ (ಆದಿ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ವೈಶಂಪಾಯನ ಮುನಿಗಳು ಭಾರತದ ಮಹತ್ವವನ್ನು ಜನಮೇಜಯರಾಜನಿಗೆ ತಿಳಿಸುತ್ತಿರುವ ಶ್ಲೋಕ. ಮಹಾವಿಷ್ಣುವಿನ ಜಠರದಲ್ಲಿ ಸಮಸ್ತಲೋಕಗಳು ಕೂಡಿದ ರೀತಿ ಮಹಾಭಾರತವೆಂಬ ಸಾಗರದಲ್ಲಿ ಅನೇಕ ಪುರಾಣಗಳು, ಶಾಸ್ತ್ರಗಳೂ, ಸೇರಿಹೋಗಿವೆ. ಪರಮಭಕ್ತಿಯಿಂದ ಈ ಕೃತಿಯನ್ನು ಕೇಳಿದ ಜನರ ಪಾಪಗಳು ಬೇರುಸಹಿತ ಸುಟ್ಟ ಹೋಗುತ್ತವೆ.

ಅರ್ಥ:
ಹರಿ: ಮಹಾವಿಷ್ಣು; ಬಸುರು: ಹೊಟ್ಟೆ; ಅಖಿಳ: ಎಲ್ಲಾ; ಲೋಕ: ಜಗತ್ತು; ಅಡಗು: ಹೊಕ್ಕು, ಸೇರು; ಶರಧಿ: ಸಮುದ್ರ; ಅನೇಕ: ಬಹಳ; ಪುರಾಣ: ಶಾಸ್ತ್ರಗ್ರಂಥ; ಶಾಸ್ತ್ರ: ಜ್ಞಾನ, ತತ್ವ; ಪರಮ: ಶ್ರೇಷ್ಠ; ಭಕ್ತಿ: ಪೂಜನೀಯ ಭಾವ; ಕೃತಿ: ಪುಸ್ತಕ; ಅವಧರಿಸು:ಮನಸ್ಸಿಟ್ಟು ಕೇಳು; ಕೇಳು: ಆಲಿಸು; ನರ: ಮನುಷ್ಯ; ದುರಿತ: ಕೆಟ್ಟ; ಅಂಕುರ; ಚಿಗುರು; ಬೇರು: ಮೂಲ; ಬೇಗೆ:ಬೆಂಕಿ, ಕಿಚ್ಚು; ಅರುಹು:ತಿಳಿವಳಿಕೆ; ಮುನಿ: ಋಷಿ;

ಪದವಿಂಗಡಣೆ:
ಹರಿಯ +ಬಸುರೊಳಗ್+ಅಖಿಳ +ಲೋಕದ
ವಿರಡವ್+ಅಡಗಿಹವೋಲು +ಭಾರತ
ಶರಧಿಯೊಳಗ್+ಅಡಗಿಹವ್+ಅನೇಕ+ ಪುರಾಣ+ ಶಾಸ್ತ್ರಗಳು
ಪರಮ+ ಭಕ್ತಿಯಲೀ+ ಕೃತಿಯನ್+ಅವ
ಧರಿಸಿ +ಕೇಳ್ದಾ +ನರರ +ದುರಿತಾಂ
ಕುರದ+ ಬೇರಿನ +ಬೇಗೆಯೆಂದ್+ಅರುಹಿದನು +ಮುನಿನಾಥ

ಅಚ್ಚರಿ:
(೧) ಹರಿಯ ಬಸುರು, ಭಾರತ ಶರಧಿ – ಹೋಲಿಕೆ ಮಾಡಿರುವ ಬಗೆ
(೨) ಬೇರಿನ ಬೇಗೆ – ಬೇ ಕಾರದ ಜೋಡಿ ಪದ

ಪದ್ಯ ೧೭: ಕುಮಾರವ್ಯಾಸನ ಹಿರಿಮೆಯೇನು?

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣೀಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ (ಆದಿ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಾಮಾಯಣವನ್ನು ಬರೆದ ಅನೇಕ ಕವಿಗಳ ಭಾರವನ್ನು ಹೊರಲು ಕಷ್ಟವಾಗಿ ಆದಿಶೇಷನು ತಿಣುಕುತ್ತಿದ್ದಾನೆ. ಶ್ರೀರಾಮನ ಚರಿತ್ರೆಯಲ್ಲಿ ಕಾಲಿಡುವುದಕ್ಕೂ ಜಾಗವಿಲ್ಲ. ಕುಮಾರವ್ಯಾಸನು ಕ್ಷುಲ್ಲಕರಾದ ಕವಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವನೇ? ಶುಕಮಹರ್ಷಿಯಂತಿರುವ ಅವನು ಉಳಿದವರನ್ನು ಕುಣಿಸಿ ನಗುವುದಿಲ್ಲವೇ?

ಅರ್ಥ:
ತಿಣಿಕು: ಹುಡುಕಾಡು; ಫಣಿ: ಹಾವು; ಕವಿ: ಕಾವ್ಯಗಳನ್ನು ರಚಿಸುವವ; ಭಾರ: ಹೆಚ್ಚಿನ ತೂಕ; ತಿಂತಿಣಿ:ಗುಂಪು; ಚರಿತೆ: ಕಥೆ; ಕಾಲು: ಪಾದ; ತೆರಪು: ಜಾಗ; ಬಣಗು:ಅಲ್ಪವ್ಯಕ್ತಿ; ಲೆಕ್ಕ: ಗಣನೆಗೆ ತೆಗೆದುಕೊ; ಕುಣಿಸು: ನರ್ತಿಸು; ನಗು: ಸಂತೋಷ; ಉಳಿದ: ಮಿಕ್ಕ;

ಪದವಿಂಗಡಣೆ:
ತಿಣಿಕಿದನು +ಫಣಿರಾಯ +ರಾಮಾ
ಯಣದ +ಕವಿಗಳ +ಭಾರದಲಿ +ತಿಂ
ತಿಣಿಯ +ರಘುವರ+ ಚರಿತೆಯಲಿ +ಕಾಲಿಡಲು +ತೆರಪಿಲ್ಲ
ಬಣಗು +ಕವಿಗಳ +ಲೆಕ್ಕಿಪನೆ +ಸಾ
ಕೆಣಿಸದಿರು +ಶುಕರೂಪನಲ್ಲವೆ
ಕುಣಿಸಿ +ನಗನೇ +ಕವಿ +ಕುಮಾರವ್ಯಾಸನ್+ಉಳಿದವರ

ಅಚ್ಚರಿ:
(೧) ತಿಣಿ – ಪದದ ಬಳಕೆ ೧, ೩ ಸಾಲಿನ ಮೊದಲ ಪದ
(೨) ಸಾಕೆಣಿಸದಿರು, ಕುಣೀಸಿ – ಕೆಣಿಸು, ಕುಣಿಸು – ಪದಗಳ ಬಳಕೆ

ಪದ್ಯ ೧೬: ಕುಮಾರವ್ಯಾಸರು ಓದುಗರಿಗೆ ಏನು ಮನವಿ ಮಾಡುತ್ತಾರೆ?

ಕೃತಿಯನವಧರಿಸುವುದು ಸುಕವಿಯ
ಮತಿಗೆ ಮಂಗಳವೀವುದಧಿಕರು
ಮಥಿಸುವುದು ತಿದ್ದುವುದು ಮೆರೆವುದು ಲೇಸ ಸಂಚಿಪುದು
ನುತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರನಾರಾಯಣನ ಕಿಂಕರಗೆ (ಆದಿ ಪರ್ವ, ೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಈ ಕೃತಿಯನ್ನು ಸದ್ಗುಣಶಾಲಿಗಳು ಮನಸಿಟ್ಟು ಕೇಳುವುದು, ನನ್ನ ಮನಸ್ಸಿಗೆ ಮಂಗಳಕರವಾದ ಭಾವಗಳನ್ನು ನೀಡಿರಿ, ವಿದ್ವಾಂಸರು ಈ ಕಾವ್ಯವನ್ನು ಮಥಿಸಿ, ತಪ್ಪಿದ್ದರೆ ತಿದ್ದಿ ಪ್ರಖ್ಯಾತಿಗೊಳಿಸಿ ಎಲ್ಲೆಡೆ ಹರಡುವುದು. ಗುಣಶಾಲಿಗಳು, ಭಾವಜೀವಿಗಳು, ಪಂಡಿತರು, ಒಳ್ಳೆಯಜನರು, ಸುಭಾಷಿತಕಾರರು ಎಲ್ಲರೂ ವೀರನಾರಯಣನ ಸೇವಕನಾದ ನನಗೆ ಸನ್ಮತಿಯನ್ನು ನೀಡಿರಿ.

ಅರ್ಥ:
ಕೃತಿ: ಕಾವ್ಯ ಗ್ರಂಥ; ಅವಧರಿಸು: ಮನಸ್ಸಿಟ್ಟು ಕೇಳು; ಸುಕವಿ: ಒಳ್ಳೆಯ ಕವಿ; ಮತಿ: ಬುದ್ಧಿ; ಮಂಗಳ: ಒಳ್ಳೆಯ; ಅಧಿಕ: ಹೆಚ್ಚು; ಮಥಿಸು: ಚರ್ಚಿಸು; ತಿದ್ದು: ಸರಿಪಡಿಸು; ಮೆರೆ: ಪ್ರಖ್ಯಾತವಾಗು; ಲೇಸು: ಒಳ್ಳೆಯದು, ಹಿತವಾದುದು; ಸಂಚಿಸು: ಶೇಖರವಾಗು; ನುತ:ಶ್ರೇಷ್ಠವಾದ; ಗುಣ: ನಡತೆ, ಸ್ವಭಾವ; ಭಾವುಕರು: ಭಾವಜೀವಿ; ಪಂಡಿತರು: ವಿದ್ವಾಂಸರು; ಸುಜನರು: ಒಳ್ಳೆಯ ಜನರು; ಸೂಕ್ತಿಕಾರರು: ಸುಭಾಷಿತಕಾರರು; ಮತಿ: ಬುದ್ಧಿ; ಈವುದು: ನೀಡಲಿ; ಕಿಂಕರ: ಸೇವಕ;

ಪದವಿಂಗಡಣೆ:
ಕೃತಿಯನ್+ಅವಧರಿಸುವುದು +ಸುಕವಿಯ
ಮತಿಗೆ +ಮಂಗಳವ್+ಈವುದ್+ಅಧಿಕರು
ಮಥಿಸುವುದು+ ತಿದ್ದುವುದು +ಮೆರೆವುದು+ ಲೇಸ+ ಸಂಚಿಪುದು
ನುತಗುಣರು +ಭಾವುಕರು +ವರಪಂ
ಡಿತರು+ ಸುಜನರು +ಸೂಕ್ತಿಕಾರರು
ಮತಿಯನೀವುದು+ ವೀರನಾರಾಯಣನ +ಕಿಂಕರಗೆ

ಅಚ್ಚರಿ:
(೧) ದು ಕಾರದಿಂದ ಕೊನೆಗೊಳ್ಳುವ ಪದ (ಕ್ರಿಯಾ ಪದ) – ಮಥಿಸುವುದು, ತಿದ್ದುವುದು, ಮೆರೆವುದು, ಅವಧರಿಸುವುದು, ಸಂಚಿಪುದು
(೨) “ರು” ಕಾರದಿಂದ ಕೊನೆಗೊಳ್ಳುವ ಪದ (ನಾಮಪದ) – ಗುಣರು, ಭಾವುಕರು, ಪಂಡಿತರು, ಸುಜನರು, ಸೂಕ್ತಿಕಾರರು

ಪದ್ಯ ೧೪: ಕಾವ್ಯವನ್ನು ಯಾವ ರೀತಿ ಓದಬೇಕೆಂದು ಕುಮಾರವ್ಯಾಸರು ಹೇಳಿದ್ದಾರೆ?

ಪದದ ಪ್ರೌಢಿಯ ನವರಸಂಗಳ
ವುದಿತವೆನುವಭಿಧಾನ ಭಾವವ
ಬೆದಕಲಾಗದು ಬಲ್ಲ ಪ್ರೌಢಿರುಮೀ ಕಥಾಂತರಕೆ
ಇದ ವಿಚಾರಿಸೆ ಬರಿಯ ತೊಳಸಿಯ
ವುದಕದಂತಿರೆಯಿಲ್ಲಿ ನೋಳ್ಪುದು
ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು (ಆದಿ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಈ ಕಥೆಯಲ್ಲಿ ತಿಳಿದವರು, ಪಂಡಿತರು ಪ್ರೌಢವಾದ ಪದಗಳ ಬಳಕೆ, ನವರಸಗಳಿಂದುಟಾಗುವ ರಮಣೀಯತೆ, ಕಥಾನಿರೂಪಣಕ್ರಮ, ಇವುಗಳೆಲ್ಲವನ್ನು ಈ ಕಾವ್ಯದಲ್ಲಿ ಹುಡುಕಲು ಹೋಗಬಾರದು. ವಿಚಾರಿಸಿ ನೋಡಿದರೆ ನೀರು ಯಾವ ರೀತಿ ತುಳಸಿಯಿಂದ ಇಳಿದು ತೀರ್ಥವಾಗುತ್ತದೆಯೋ, ಈ ಕಾವ್ಯದಲ್ಲಿ ಶ್ರೀಕೃಷ್ಣನ ಮಹಿಮೆ ಮತ್ತು ಧರ್ಮವಿಚಾರಗಳನ್ನು ಮಾತ್ರ ನೋಡಬೇಕು.

ಅರ್ಥ:
ಪದ: ಪ್ರತ್ಯಯ ಸಹಿತವಾದ ಶಬ್ದ, ಮಾತು; ಪ್ರೌಢಿಮೆ: ಹಿರಿಮೆ; ನವ: ಒಂಬತ್ತು; ರಸ: ಸಾರ; ಉದಿತ: ಉತ್ಪನ್ನವಾದ; ಅಭಿಧಾನ:ಹೆಸರು; ಭಾವ:ಭಾವನೆ; ಬೆದಕು: ಹುಡುಕು; ಬಲ್ಲ: ತಿಳಿದ; ಅಂತರ:ವ್ಯತ್ಯಾಸ, ಭೇದ; ವಿಚಾರ: ವಿಮರ್ಶೆ; ಬರಿ: ಕೇವಲ; ತೊಳಸಿ: ತುಳಸಿ ಗಿಡ; ಉದಕ: ನೀರು; ನೋಳ್ಪುದು: ನೋಡುವುದು ಪದುಮನಾಭ: ಕೃಷ್ಣ; ಮಹಿಮೆ: ಹಿರಿಮೆ; ಧರ್ಮ: ಧಾರಣ ಮಾಡಿದುದು, ನಿಯಮ, ಆಚಾರ; ಮಾತ್ರ: ಕೇವಲ;

ಪದವಿಂಗಡಣೆ:
ಪದದ+ ಪ್ರೌಢಿಯ +ನವರಸಂಗಳವ್
ಉದಿತವ್+ಎನುವ+ಅಭಿಧಾನ +ಭಾವವ
ಬೆದಕಲಾಗದು+ ಬಲ್ಲ+ ಪ್ರೌಢಿರುಮ್+ಈ+ ಕಥಾಂತರಕೆ
ಇದ+ ವಿಚಾರಿಸೆ +ಬರಿಯ +ತೊಳಸಿಯ
ವುದಕದಂತ್+ಇರೆಯಿಲ್ಲಿ +ನೋಳ್ಪುದು
ಪದುಮನಾಭನ +ಮಹಿಮೆ +ಧರ್ಮವಿಚಾರ+ ಮಾತ್ರವನು

ಅಚ್ಚರಿ:
(೧) “ಬ” ಕಾರದ ಜೋಡಿ ಪದಗಳು – ಭಾವವ ಬೆದಕಲಾಗದು ಬಲ್ಲ
(೨) ಉದಕ, ಬೆದಕ – ಪ್ರಾಸ ಪದಗಳು