ಪದ್ಯ ೧೧: ಯಾವ ರೀತಿಯ ಜನರು ಯಾಗಶಾಲೆಯಲ್ಲಿ ನೆರೆದಿದ್ದರು?

ವಿಕಳ ವಾಮನ ಮೂಕ ಬಧಿರಾಂ
ಧಕರು ಮಾಗಧ ಸೂತ ವಂದಿ
ಪ್ರಕರ ಮಲ್ಲ ಮಹೇಂದ್ರ ಜಾಲಿ ಮಹಾಹಿತುಂಡಿತರು
ಸುಕವಿ ತಾರ್ಕಿಕ ವಾಗ್ಮಿ ವೈತಾ
ಳಿಕ ಸುಗಾಯಕ ಕಥಕ ಮಾರ್ದಂ
ಗಿಕರು ನೆರೆದುದು ನಿಖಿಳ ಯಾಚಕ ನಿಕರ ಸಂದಣಿಸಿ (ಸಭಾ ಪರ್ವ, ೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಯಾಗಶಾಲೆಯಲ್ಲಿ ಎಲ್ಲಾ ರೀತಿಯ ಜನರು ಸೇರಿದ್ದರು, ವಿಕಲಾಂಗರು, ಕುಬ್ಜರು (ಕುಳ್ಳ), ಮೂಕರು, ಕಿವುಡರು, ಕುರುಡರು, ವಂದಿಮಾಗಧರು, ರಥವನ್ನು ನಡೆಸುವವರು, ಜಟ್ಟಿಗಳು, ಮಹೇಂದ್ರಜಾಲವನ್ನು ಮಾಡುವವರು, ಹಾವಾಡಿಗರು, ಕವಿಗಳು, ತರ್ಕವಿಶಾರದರು, ವಾಗ್ಮಿಗಳು, ಮಂಗಳ ಪಾಠಕರು, ಗಾಯಕರು, ಕಥಾ ಕಲಾಕ್ಷೇಪ ಮಾದುವವರು, ಮೃದಂಗವಾದಕರು, ಯಾಚಕರು ಅಲ್ಲಿ ಸೇರಿದ್ದರು.

ಅರ್ಥ:
ವಿಕಳ: ಅಂಗವಿಕಲರು; ವಾಮನ: ಕುಬ್ಜ; ಮೂಕ: ಮಾತುಬಾರದವ; ಬಧಿರ: ಕಿವುಡರು; ಅಂಧಕ: ಕುರುಡರು; ಮಾಗಧ: ವಂದಿಮಾಗಧರು; ಮಾಗಧ: ಹೊಗಳುಭಟ್ಟ; ಸೂತ: ರಥವನ್ನು ನಡೆಸುವವನು; ವಂದಿ:ಹೊಗಳು ಭಟ್ಟ; ಪ್ರಕರ: ಗುಂಪು; ಮಲ್ಲ: ಜಟ್ಟಿ; ಮಹೇಂದ್ರಜಾಲಿ: ಇಂದ್ರಜಾಲ ಮಾಡುವವ; ಅಹಿ: ಹಾವು; ತುಂಡಿತರು: ಮಹಾಹಿ: ಶ್ರೇಷ್ಠವಾದ ಹಾವು; ತುಂಡಿತರು: ಆಡಿಸುವವರು; ಸುಕವಿ: ಶ್ರೇಷ್ಠವಾದ ಕವಿ; ತಾರ್ಕಿಕ: ತರ್ಕವಿಶಾರದರು; ವಾಗ್ಮಿ: ಚೆನ್ನಾಗಿ ಮಾತಾಡುವ; ವೈತಾಳಿಕ: ಮಂಗಳಪಾಠಕರು; ಸುಗಾಯಕ: ಚೆನ್ನಾಗಿ ಹಾಡುವವ; ಕಥಕ:ಕಥೆಯನ್ನು ಹೇಳುವವರು; ಮಾರ್ದಂಗಿಕರು: ಮೃದಂಗವಾದಗಕರು; ನೆರೆ: ಸೇರು; ನಿಖಿಳ: ಎಲ್ಲಾ; ಯಾಚಕ: ಬೇಡುವವನು; ಸಂದಣಿಸು: ಸೇರು; ನಿಕರ: ಗುಂಪು;

ಪದವಿಂಗಡಣೆ:
ವಿಕಳ+ ವಾಮನ+ ಮೂಕ +ಬಧಿರ
ಅಂಧಕರು +ಮಾಗಧ+ ಸೂತ +ವಂದಿ
ಪ್ರಕರ+ ಮಲ್ಲ +ಮಹೇಂದ್ರ +ಜಾಲಿ +ಮಹ+ಅಹಿತುಂಡಿತರು
ಸುಕವಿ+ ತಾರ್ಕಿಕ +ವಾಗ್ಮಿ +ವೈತಾ
ಳಿಕ +ಸುಗಾಯಕ +ಕಥಕ +ಮಾರ್ದಂ
ಗಿಕರು +ನೆರೆದುದು +ನಿಖಿಳ +ಯಾಚಕ+ ನಿಕರ+ ಸಂದಣಿಸಿ

ಅಚ್ಚರಿ:
(೧) ೧೮ ರೀತಿಯ ಜನರನ್ನು ಹೇಳಿರುವುದು

ಪದ್ಯ ೧೦: ಯಾಗಶಾಲೆಯಲ್ಲಿ ಯಾವ ಜನರನ್ನು ಕಾಣಬಹುದು?

ದೇಶ ದೇಶಾಂತರದ ವಿದ್ಯಾ
ಭ್ಯಾಸಿಗಳು ಮೊದಲಾಗಿ ವರ್ಣನಿ
ವಾಸಿಗಳು ಫಲ ಮೂಲದಧಿ ಘೃತ ದುಗ್ಧ ಭಾರದಲಿ
ಆ ಸಮಸ್ತ ಮಹೀತಳದ ಧನ
ರಾಶಿ ಜನಸಂತತಿಯನೇಕನಿ
ವಾಸದಲಿ ನೆರೆ ಕಾಣಲಾಯಿತು ನೃಪತಿ ಕೇಳೆಂದ (ಸಭಾ ಪರ್ವ, ೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ಯಾಗ ಮಂಟಪಕ್ಕೆ ದೇಶ ದೇಶದ ಜನರು, ವಿದ್ಯಾರ್ಥಿಗಳು, ಎಲ್ಲಾ ವರ್ಣದವರು, ಹಣ್ಣು, ಗೆಡ್ಡೆಗೆಣಸ್, ತುಪ್ಪ, ಹಾಲು ಸಾಮಗ್ರಿಗಳನ್ನು ತಂದವರನ್ನೂ, ಭೂಮಂಡಲದ ಎಲ್ಲಾ ದೇಶ ನಿವಾಸಿಗಳನ್ನೂ, ಐಶ್ವರ್ಯವನ್ನೂ ಒಂದೇ ಕಡೆ ಕಾಣಬಹುದಾಗಿತ್ತು.

ಅರ್ಥ:
ದೇಶ: ರಾಷ್ಟ್ರ; ದೇಶಾಂತರ: ಬೇರೆ ದೇಶ; ವಿದ್ಯಾಭ್ಯಾಸಿ: ಛಾತ್ರ; ಮೊದಲಾಗಿ: ಮುಂತಾದ; ವರ್ಣ: ಪಂಗಡ; ನಿವಾಸಿ: ವಾಸಿಸುವ; ಫಲ: ಹಣ್ಣು; ದಧಿ: ಮೊಸರು; ಘೃತ: ತುಪ್ಪ; ದುಗ್ಧ:ಹಾಲು; ಭಾರ: ಹೊರೆ; ಸಮಸ್ತ: ಎಲ್ಲಾ; ಮಹೀತಳ: ರಾಜ; ಧನ: ಐಶ್ವರ್ಯ; ರಾಶಿ: ಗುಂಪು; ಸಂತತಿ:ವಂಶ; ನೆರೆ: ಗುಂಪು; ಕಾಣಲು: ನೋಡಲು; ನೃಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ದೇಶ +ದೇಶಾಂತರದ+ ವಿದ್ಯಾ
ಭ್ಯಾಸಿಗಳು +ಮೊದಲಾಗಿ +ವರ್ಣ+ನಿ
ವಾಸಿಗಳು +ಫಲ +ಮೂಲ+ದಧಿ +ಘೃತ +ದುಗ್ಧ+ ಭಾರದಲಿ
ಆ +ಸಮಸ್ತ +ಮಹೀತಳದ+ ಧನ
ರಾಶಿ +ಜನ+ಸಂತತಿ+ಅನೇಕ+ನಿ
ವಾಸದಲಿ +ನೆರೆ +ಕಾಣಲಾಯಿತು +ನೃಪತಿ +ಕೇಳೆಂದ

ಅಚ್ಚರಿ:
(೧) ನಿವಾಸ, ನಿವಾಸಿ – ೩, ೬ ಸಾಲಿನ ಮೊದಲ ಪದಗಳು
(೨) ಭ್ಯಾಸಿ, ವಾಸಿ – ಪ್ರಾಸ ಪದ

ಪದ್ಯ ೯: ಮತ್ತಾವ ಋಷಿಗಳು ಯಾಗಕ್ಕೆ ಆಗಮಿಸಿದರು?

ಚ್ಯವನ ಗೌತಮ ವೇಣುಜಂಘ
ಪ್ರವರ ಕೌಶಿಕ ಸತ್ಯತಪ ಭಾ
ರ್ಗವ ಸುಮಾಲಿ ಸುಮಿತ್ರ ಕಾಶ್ಯಪ ಯಾಜ್ಞವಲ್ಕ್ಯ ಋಷಿ
ಪವನ ಭಕ್ಷಕ ದೀರ್ಘತಮ ಗಾ
ಲವನು ಶಿತ ಶಾಂಡಿಲ್ಯ ಮಾಂಡ
ವ್ಯವರರೆಂಬ ಮಹಾಮುನೀಂದ್ರರು ಬಂದರೊಗ್ಗಿನಲಿ (ಸಭಾ ಪರ್ವ, ೮ ಸಂಧಿ, ೯ ಪದ್ಯ)

ತಾತ್ಪರ್ಯ:
ಯಾಗಕ್ಕೆ ಇನ್ನು ಹಲವಾರು ಮುನೀಂದ್ರರು ಆಗಮಿಸಿದರು. ಚ್ಯವನ, ಗೌತಮ, ವೇಣುಜಂಘ, ಕೌಶಿಕ, ಸತ್ಯತಪ, ಭಾರ್ಗವ, ಸುಮಾಲಿ, ಸುಮಿತ್ರ, ಕಾಶ್ಯಪ, ಯಾಜ್ಞವಲ್ಕ್ಯ, ಪವನಭಕ್ಷಕ, ದೀರ್ಘತಮ, ಗಾಲವ, ಶಿತ, ಶಾಂಡಿಲ್ಯ, ಮಾಂಡವ್ಯರೆಂಬ ಋಷಿಗಳು ಆಗಮಿಸಿದರು.

ಅರ್ಥ:
ಋಷಿ: ಮುನಿ; ಮಹಾ: ಶ್ರೇಷ್ಠ; ಒಗ್ಗು: ಸಮೂಹ, ಗುಂಪು;

ಪದವಿಂಗಡಣೆ:
ಚ್ಯವನ+ ಗೌತಮ +ವೇಣುಜಂಘ
ಪ್ರವರ +ಕೌಶಿಕ+ ಸತ್ಯತಪ+ ಭಾ
ರ್ಗವ +ಸುಮಾಲಿ +ಸುಮಿತ್ರ +ಕಾಶ್ಯಪ +ಯಾಜ್ಞವಲ್ಕ್ಯ +ಋಷಿ
ಪವನ +ಭಕ್ಷಕ +ದೀರ್ಘತಮ +ಗಾ
ಲವನು +ಶಿತ+ ಶಾಂಡಿಲ್ಯ+ ಮಾಂಡ
ವ್ಯವರರ್+ಎಂಬ+ ಮಹಾಮುನೀಂದ್ರರು+ ಬಂದರ್+ಒಗ್ಗಿನಲಿ

ಅಚ್ಚರಿ:
(೧) ೧೬ ಋಷಿಗಳನ್ನು ಹೆಸರಿಸಿರುವುದು

ಪದ್ಯ ೮: ಯಾವ ಮುನಿಗಳು ಯಾಗಕ್ಕೆ ಆಗಮಿಸಿದರು?

ಜನಪ ಕೇಳೀಚೆಯಲಿ ಬಂದುದು
ಮುನಿಗಳಾಂಗಿರ ಕಣ್ವ ಭೃಗು ಜೈ
ಮಿನಿ ಸುಮಂತ ವಸಿಷ್ಠ ಶೌನಕ ಗಾರ್ಗ್ಯ ಬೃಹದಶ್ವ
ಸನಕ ಶುಕ ಜಾಬಾಲಿ ತಿತ್ತಿರಿ
ವಿನುತ ಮಾರ್ಕಂಡೇಯ ಮುದ್ಗಲ
ತನಯ ರೋಮಶರೈಭ್ಯವತ್ಸನು ಶೈಬ್ಯ ನಾರದರು (ಸಭಾ ಪರ್ವ, ೮ ಸಂಧಿ, ೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ರಾಜಸೂಯ ಯಾಗಕ್ಕೆ ರಾಜರಲ್ಲದೆ ಶ್ರೇಷ್ಠ ಮುನಿವರ್ಗವು ಆಗಮಿಸಿದರು. ಅಂಗಿರಸ, ಕಣ್ವ, ಭೃಗು, ಜೈಮಿನಿ, ಸುಮಂತ, ವಸಿಷ್ಠ, ಶೌನಕ, ಗಾರ್ಗ್ಯ, ಬೃಹದಶ್ವ, ಸನಕ, ಶುಕ, ಜಾಬಾಲಿ, ತಿತ್ತಿರಿ, ಮಾರ್ಕಂಡೇಯ, ಮೌದ್ಗಲ್ಯ, ರೋಮಶ, ರೈಭ್ಯ, ಶ್ರೀವತ್ಸ, ಶೈಬ್ಯ, ನಾರದರೇ ಮೊದಲಾದ ಋಷಿಗ್ತಳು ಆಗಮಿಸಿದರು.

ಅರ್ಥ:
ಜನಪ: ರಾಜ (ಇಲ್ಲಿ ಜನಮೇಜಯ); ಕೇಳು: ಆಲಿಸು; ಈಚೆಯಲಿ: ಇತ್ತಕಡೆ; ಬಂದುದು: ಆಗಮಿಸಿದರು; ಮುನಿ: ಋಷಿ; ತನಯ: ಮಗ;

ಪದವಿಂಗಡಣೆ:
ಜನಪ +ಕೇಳ್+ಈಚೆಯಲಿ +ಬಂದುದು
ಮುನಿಗಳ್+ಆಂಗಿರ+ ಕಣ್ವ+ ಭೃಗು +ಜೈ
ಮಿನಿ +ಸುಮಂತ +ವಸಿಷ್ಠ +ಶೌನಕ+ ಗಾರ್ಗ್ಯ +ಬೃಹದಶ್ವ
ಸನಕ+ ಶುಕ +ಜಾಬಾಲಿ +ತಿತ್ತಿರಿ
ವಿನುತ +ಮಾರ್ಕಂಡೇಯ +ಮುದ್ಗಲ
ತನಯ +ರೋಮಶ+ರೈಭ್ಯ+ವತ್ಸನು+ ಶೈಬ್ಯ+ ನಾರದರು

ಅಚ್ಚರಿ:
(೧) ೨೦ ಋಷಿಗಳ ಹೆಸರನ್ನು ಹೊಂದಿರುವ ಪದ್ಯ

ಪದ್ಯ ೭: ಪಾಂಡವರು ಯಾಗಕ್ಕೆ ಬಂದವರನ್ನು ಹೇಗೆ ಸ್ವಾಗತಿಸಿದರು?

ಬಂದರೈ ಚತುರಂಗದವನಿಪ
ವೃಂದವವರವರುಚಿತ ಮಿಗಿಲಿದಿ
ರ್ವಂದು ಭೀಷ್ಮ ದ್ರೋಣಕೃಪ ಧೃತರಾಷ್ಟ್ರರಿಗೆ ನಮಿಸಿ
ವಂದನೀಯರಿಗೆರಗಿ ಸಮರಿಗೆ
ನಿಂದು ಕುಶಲ ಕ್ಷೇಮ ಸಂಗತಿ
ಯಿಂದ ಸತ್ಕರಿಸಿದನು ನೃಪ ವಿದುರಾದಿ ಬಾಂಧವರ (ಸಭಾ ಪರ್ವ, ೮ ಸಂಧಿ, ೭ ಪದ್ಯ)

ತಾತ್ಪರ್ಯ:
ರಾಜರು ತಮ್ಮ ಸೈನ್ಯದ ಚತುರಂಗದೊಂದಿಗೆ ಯಾಗಕ್ಕೆ ಬಂದರು, ಅವರೆಲ್ಲರನ್ನು ಉಚಿತ ರೀತಿಯಿಂದ ಇದಿರುಗೊಂಡರು. ಭೀಷ್ಮ, ಕೃಪ, ಧೃತರಾಷ್ಟ್ರ, ದ್ರೋಣರಿಗೆ ನಮಸ್ಕರಿಸಿದರು. ಹಿರಿಯರಿಗೆ ವಂದಿಸಿ, ಸಮಾನರನ್ನು ಆಲಂಗಿಸಿಕೊಂಡು ಕುಶಲ ಕ್ಷೇಮವನ್ನು ವಿಚಾರಿಸಿದರು.

ಅರ್ಥ:
ಬಂದರು: ಆಗಮಿಸಿದರು; ಚತುರಂಗ: ಸೈನ್ಯದ ನಾಲ್ಕು ಅಂಗ; ಅವನಿಪ: ರಾಜ; ಅವನಿ: ಭೂಮಿ; ವೃಂದ: ಗುಂಪು; ಉಚಿತ: ಸರಿಯಾದ; ಮಿಗಿಲು: ಮೀರಿ; ನಮಿಸು: ನಮಸ್ಕರಿಸು; ವಂದನೀಯರು: ಗೌರವಾನ್ವಿತರು; ಸಮ: ಸರಿಸಮಾನವಾದುದು; ಕುಶಲ: ಚಾತುರ್ಯ; ಕ್ಷೇಮ: ಸ್ವಾಸ್ಥ್ಯ, ನೆಮ್ಮದಿ; ಸಂಗತಿ: ವಾರ್ತೆ; ಸತ್ಕರಿಸು: ಗೌರವಿಸು; ನೃಪ: ರಾಜ; ಬಾಂಧವರು: ಸಂಬಂಧಿಕರು;

ಪದವಿಂಗಡಣೆ:
ಬಂದರೈ +ಚತುರಂಗದ್+ಅವನಿಪ
ವೃಂದವ್+ಅವರ್+ಅವರ್+ಉಚಿತ +ಮಿಗಿಲಿದಿರ್
ಬಂದು+ಭೀಷ್ಮ+ ದ್ರೋಣ+ಕೃಪ+ ಧೃತರಾಷ್ಟ್ರರಿಗೆ +ನಮಿಸಿ
ವಂದನೀಯರಿಗ್+ಎರಗಿ+ ಸಮರಿಗೆ
ನಿಂದು +ಕುಶಲ +ಕ್ಷೇಮ +ಸಂಗತಿ
ಯಿಂದ +ಸತ್ಕರಿಸಿದನು +ನೃಪ +ವಿದುರಾದಿ+ ಬಾಂಧವರ

ಅಚ್ಚರಿ:
(೧) ನಮಿಸಿ, ಎರಗು – ಸಮನಾರ್ಥಕ ಪದ
(೨) ಕೌರವರ ೫ ಹಿರಿಯರನ್ನು ಈ ಪದ್ಯದಲ್ಲಿ ಹೆಸರಿಸಿರುವುದು

ಪದ್ಯ ೬: ಇಂದ್ರಪ್ರಸ್ಥಕ್ಕೆ ಹಸ್ತಿನಾಪುರದಿಂದ ಮತ್ತಾರು ಹೊರಟರು?

ಗುರುತನೂಜ ಸುಶರ್ಮ ನಂಗೇ
ಶ್ವರ ಬೃಹದ್ರಥ ಭೀಮರಥ ದು
ರ್ಮರುಷಣನು ವರಭಾನುದತ್ತ ವಿಕರ್ಣ ದುಸ್ಸಹರು
ವರ ವಿವಿಂಶತಿ ದೀರ್ಘಭುಜ ದು
ರ್ದರುಶ ದುರ್ಜಯ ಶಂಕುಕರ್ಣಾ
ದ್ಯರು ಸಹಿತ ದುಶ್ಯಾಸನನು ಹೊರವಂಟನರಮನೆಯ (ಸಭಾ ಪರ್ವ, ೮ ಸಂಧಿ, ೬ ಪದ್ಯ)

ತಾತ್ಪರ್ಯ:
ದ್ರೋಣಾಚಾರ್ಯರ ಮಗನಾದ ಅಶ್ವತ್ಥಾಮ, ಸುಶರ್ಮ, ಕರ್ಣ, ಬೃಹದ್ರಥ, ಭೀಮರಥ, ದುರ್ಮರ್ಷಣ, ಭಾನುದತ್ತ, ವಿಕರ್ಣ, ದುಸ್ಸಹ, ವಿವಿಂಶತಿ, ದೀರ್ಘಭುಜ, ದುರ್ದರ್ಶ, ದುರ್ಜಯ, ಶಂಕುಕರ್ಣನೇ ಮೊದಲಾದವರೊಡನೆ ದುಶ್ಯಾಸನನು ಇಂದ್ರಪ್ರಸ್ಥಕ್ಕೆ ಪ್ರಯಾಣ ಬೆಳೆಸಿದನು.

ಅರ್ಥ:
ತನುಜ: ಮಗ; ಗುರು: ಆಚಾರ್ಯ; ಸಹಿತ: ಜೊತೆ; ಆದಿ: ಮೊದಲಾದ; ಅರಮನೆ: ರಾಜರ ವಾಸಸ್ಥಾನ; ಈಶ್ವರ: ರಾಜ;

ಪದವಿಂಗಡಣೆ:
ಗುರು+ತನೂಜ+ ಸುಶರ್ಮನ್+ಅಂಗೇ
ಶ್ವರ +ಬೃಹದ್ರಥ +ಭೀಮರಥ+ ದು
ರ್ಮರುಷಣನು +ವರಭಾನುದತ್ತ+ ವಿಕರ್ಣ +ದುಸ್ಸಹರು
ವರ+ ವಿವಿಂಶತಿ +ದೀರ್ಘಭುಜ+ ದು
ರ್ದರುಶ+ ದುರ್ಜಯ +ಶಂಕುಕರ್ಣಾ
ಆದ್ಯರು +ಸಹಿತ+ ದುಶ್ಯಾಸನನು +ಹೊರವಂಟನ್+ಅರಮನೆಯ

ಅಚ್ಚರಿ:
(೧) ವರ – ಶ್ರೇಷ್ಠ ಅರ್ಥ ನೀಡುವ ಪದದ ಬಳಕೆ – ೨ ಬಾರಿ
(೨) ಅಶ್ವತ್ಥಾಮನನ್ನು ಗುರುತನುಜ, ಮತ್ತು ಕರ್ಣನನ್ನು ಅಂಗೇಶ್ವರ ಎಂದು ಸಂಭೋದಿಸಿರುವುದು
(೩) ೧೫ ಹೆಸರನ್ನು ಈ ಪದ್ಯದಲ್ಲಿ ಹೇಳಿರುವುದು

ಪದ್ಯ ೫: ಯಾವ ಕೌರವರು ಯಾಗಕ್ಕೆ ಬಂದರು?

ದ್ರುಪದ ಧೃಷ್ಟದ್ಯುಮ್ನ ರಣಲೋ
ಲುಪ ಯುಧಾಮನ್ಯೂತ್ತಮೌಜಸ
ರುಪಚಿತರು ಬಂದರು ಸಗಾಢದಿ ಪರಮಬಾಂಧವರು
ಕೃಪ ಜಯದ್ರಥ ಭೀಷ್ಮ ಮಾದ್ರಾ
ಧಿಪತಿ ಕರ್ಣದ್ರೋಣ ಮೊದಲಾ
ದಪರಿಮಿತ ಬಲಸಹಿತ ಕೌರವರಾಯ ನಡೆತಂದ (ಸಭಾ ಪರ್ವ, ೮ ಸಂಧಿ, ೫ ಪದ್ಯ)

ತಾತ್ಪರ್ಯ:
ದ್ರುಪದ, ದೃಷ್ಟದ್ಯುಮ್ನ, ಯುದ್ಧಾಸಕ್ತರಾದ ಯುಧಾಮನ್ಯು, ಉತ್ತಮೌಜಸರು ಮೊದಲಾದ ಆಪ್ತಬಾಂಧವರು ಇಂದ್ರಪ್ರಸ್ಥಕ್ಕೆ ಬಂದರು. ಕೌರವನು ತನ್ನ ಪರಿವಾರದವರಾದ ಭೀಷ್ಮ, ದ್ರೋಣ, ಕೃಪ, ಜಯದ್ರಥ, ಶಲ್ಯ, ಕರ್ಣ ಮತ್ತು ಅಪಾರವಾದ ಬಲದೊಡನೆ ಬಂದನು.

ಅರ್ಥ:
ರಣ: ಯುದ್ಧ; ಲೋಲುಪ: ಅತಿಯಾಸೆಯುಳ್ಳವನು; ಉಪಚಿತ: ಗೌರವಿಸಲ್ಪಟ್ಟವನು; ಗಾಢ: ಅತಿಶಯವಾದ; ಪರಮ: ಶ್ರೇಷ್ಠ; ಬಾಂಧವ: ಸಂಬಂಧಿಕರು; ಅಧಿಪತಿ: ರಾಜ; ಅಪರಿಮಿತ: ಬಹಳ; ಬಲ: ಶಕ್ತಿ, ಸಾಮರ್ಥ್ಯ; ಸಹಿತ: ಜೊತೆ; ರಾಯ: ರಾಜ; ನಡೆತಂದ: ಆಗಮಿಸು;

ಪದವಿಂಗಡಣೆ:
ದ್ರುಪದ +ಧೃಷ್ಟದ್ಯುಮ್ನ +ರಣಲೋ
ಲುಪ+ ಯುಧಾಮನ್ಯು+ಉತ್ತಮೌಜಸರ್
ಉಪಚಿತರು+ ಬಂದರು+ ಸಗಾಢದಿ+ ಪರಮ+ಬಾಂಧವರು
ಕೃಪ +ಜಯದ್ರಥ+ ಭೀಷ್ಮ +ಮಾದ್ರಾ
ಧಿಪತಿ+ ಕರ್ಣ+ದ್ರೋಣ +ಮೊದಲಾದ್
ಅಪರಿಮಿತ+ ಬಲಸಹಿತ+ ಕೌರವರಾಯ +ನಡೆತಂದ

ಪದ್ಯ ೪: ಉತ್ತರದ ಯಾವ ರಾಜರು ಯಾಗಕ್ಕೆ ಬಂದರು?

ಸಕಳ ದಳ ಮೇಳಾಪದಲಿ ಭೀ
ಷ್ಮಕನು ರುಕ್ಮನು ಚಿತ್ರರಥ ಸಾ
ಲ್ವಕನು ರೋಹಿತ ರೋಚಮಾನ ಸಮುದ್ರ ಸೇನಕರು
ಪ್ರಕಟ ಬಲರುತ್ತರ ದಿಶಾ ಪಾ
ಲಕರು ಕುರುಪರಿಯಂತ ರಾಜ
ಪ್ರಕರ ನೆರೆದುದು ವಿಳಸದಿಂದ್ರಪ್ರಸ್ಥನಗರಿಯಲಿ (ಸಭಾ ಪರ್ವ, ೮ ಸಂಧಿ, ೪ ಪದ್ಯ)

ತಾತ್ಪರ್ಯ:
ಭೀಷ್ಮಕ, ರುಕ್ಮ, ಚಿತ್ರರಥ, ಸಾಲ್ವ, ರೋಹಿತ, ರೋಚಮಾನ, ಸಮುದ್ರಸೇನ, ಉತ್ತರ ಕುರುವರ್ಷದವರೆಗಿನ ಎಲ್ಲಾ ಉತ್ತರ ರಾಜ್ಯಗಳ ದೊರೆಗಳು ತಮ್ಮ ಸೈನ್ಯದೊಂದಿಗೆ ಇಂದ್ರಪ್ರಸ್ಥ ನಗರಕ್ಕೆ ಬಂದರು.

ಅರ್ಥ:
ಸಕಳ: ಎಲ್ಲಾ; ದಳ: ಸೈನ್ಯ; ಮೇಳ:ಗುಂಪು, ಸಂದಣಿ; ಸೇನ: ಸೈನ್ಯ; ಪ್ರಕಟ: ನಿಚ್ಚಳವಾದುದು; ದಿಶ: ದಿಕ್ಕು; ಪಾಲಕ: ರಕ್ಷಕ; ಪರಿ: ಪ್ರವಹಿಸು; ಪ್ರಕರ: ಸಮೂಹ; ನೆರೆ: ಸೇರು; ನಗರ: ಊರು;

ಪದವಿಂಗಡಣೆ:
ಸಕಳ +ದಳ +ಮೇಳಾಪದಲಿ+ ಭೀ
ಷ್ಮಕನು +ರುಕ್ಮನು +ಚಿತ್ರರಥ +ಸಾ
ಲ್ವಕನು +ರೋಹಿತ +ರೋಚಮಾನ +ಸಮುದ್ರ +ಸೇನಕರು
ಪ್ರಕಟ+ ಬಲರುತ್ತರ +ದಿಶಾ +ಪಾ
ಲಕರು +ಕುರುಪರಿಯಂತ +ರಾಜ
ಪ್ರಕರ+ ನೆರೆದುದು +ವಿಳಸದ್+ಇಂದ್ರಪ್ರಸ್ಥ+ನಗರಿಯಲಿ

ಅಚ್ಚರಿ:
(೧) ೭ ರಾಜ್ಯದ ಹೆಸರುಗಳನ್ನು ಸೂಚಿಸುವ ಪದ್ಯ

ಪದ್ಯ ೩: ಯಾವ ರಾಜರು ಯಾಗಕ್ಕೆ ಬಂದಿದ್ದರು?

ಭೂರಿ ಭೂರಿಶ್ರವನು ಬಾಹ್ಲಿಕ
ಶೂರಸೇನ ಕಳಿಂಗ ಸಲೆ ಗಾಂಧಾರ
ಸೌಬಲ ಸೋಮದತ್ತ ಸುಷೇಣ ಭಗದತ್ತ
ವೀರ ಪೌಂಡ್ರಕನೇಕಲವ್ಯ ಸು
ರಾರಿಗಳು ಶಿಶುಪಾಲ ಯವನ ಕು
ಮಾರ ಪೌರವ ದಂತವಕ್ತ್ರರು ಬಂದರೊಗ್ಗಿನಲಿ (ಸಭಾ ಪರ್ವ, ೮ ಸಂಧಿ, ೩ ಪದ್ಯ)

ತಾತ್ಪರ್ಯ:
ಭೂರಿ, ಭೂರಿಶ್ರವ, ಬಾಹ್ಲಿಕ, ಶೂರಸೇನ, ಕಳಿಂಗ, ಗಾಂಧಾರ, ಸೌಬಲ, ಸೋಮದತ್ತ (ಭೂರಿ ಭೂರಿಶ್ರವರ ತಂದೆ) ಸುಷೇಣ, ಭಗದತ್ತ, ಪೌಂಡ್ರಕ, ಏಕಲವ್ಯ, ರಾಕ್ಷಸರಾದ ಶಿಶುಪಾಲ, ಯವನ ಕುಮಾರ, ಪೌರವ ದಂತವಕ್ತ್ರರು ಒಂದಾಗಿ ಯಾಗಕ್ಕೆ ಬಂದರು.

ಅರ್ಥ:
ಸುರ: ದೇವತೆ; ಅರಿ: ವೈರಿ;ಸುರಾರಿ: ರಾಕ್ಷಸ; ಬಂದರು: ಆಗಮಿಸು; ಒಗ್ಗು: ಗುಂಪು;

ಪದವಿಂಗಡಣೆ:
ಭೂರಿ +ಭೂರಿಶ್ರವನು +ಬಾಹ್ಲಿಕ
ಶೂರಸೇನ +ಕಳಿಂಗ +ಸಲೆ +ಗಾಂಧಾರ
ಸೌಬಲ+ ಸೋಮದತ್ತ +ಸುಷೇಣ +ಭಗದತ್ತ
ವೀರ +ಪೌಂಡ್ರಕನ್+ಏಕಲವ್ಯ +ಸುರ
ಅರಿಗಳು +ಶಿಶುಪಾಲ +ಯವನ+ ಕು
ಮಾರ +ಪೌರವ+ ದಂತವಕ್ತ್ರರು+ ಬಂದರ್+ಒಗ್ಗಿನಲಿ

ಅಚ್ಚರಿ:
(೧) ೧೭ ರಾಜರ ಹೆಸರುಗಳನ್ನು ಒಂದೇ ಪದ್ಯದಲ್ಲಿ ಪೋಣಿಸಿರುವುದು

ಪದ್ಯ ೨: ಯಾವ ದೇಶದ ಅಧಿಪತಿಗಳು ಯಾಗಕ್ಕೆ ಬಂದರು?

ಚೋಳ ಸಿಂಹಳ ಪಾಂಡ್ಯ ಕೇರಳ
ಮಾಳವಾಂಧ್ರ ಕರೂಷ ಬರ್ಬರ
ಗೌಳ ಕೋಸಲ ಮಗಧ ಕೇಕಯ ಹೂಣ ಸೌವೀರ
ಲಾಳ ಜೋನೆಗ ಜೀನ ಕುರು ನೇ
ಪಾಳ ಶಿಖಿ ಕಾಶ್ಮೀರ ಬೋಟ ವ
ರಾಳ ವರದೇಶಾಧಿಪತಿಗಳು ಬಂದರೊಗ್ಗಿನಲಿ (ಸಭಾ ಪರ್ವ, ೮ ಸಂಧಿ, ೨ ಪದ್ಯ)

ತಾತ್ಪರ್ಯ:
ಚೋಳ, ಸಿಂಹಳ, ಪಾಂಡ್ಯ, ಕೇರಳ, ಮಾಳವ, ಆಂಧ್ರ, ಕರೂಷ, ಬರ್ಬರ, ಗೌಳ, ಕೋಸಲ, ಮಗಧ, ಕೇಕಯ, ಹೂಣ, ಸೌವೀರ, ಲಾಳ, ಜೋನೆಗ, ಚೀನ, ಕುರು, ನೇಪಾಳ, ಶಿಖಿ, ಕಾಶ್ಮೀರ, ಭೋಟ, ವರಾಳ ಮೊದಲಾದ ದೇಶಾಧಿಪತಿಗಳು ಯಾಗಕ್ಕೆ ಬಂದರು.

ಅರ್ಥ:
ಅಧಿಪ: ರಾಜ; ಬಂದರು: ಆಗಮಿಸಿದರು; ಒಗ್ಗು: ಗುಂಪು, ಸಮೂಹ; ವರ:ಶ್ರೇಷ್ಠ;

ಪದವಿಂಗಡಣೆ:
ಚೋಳ +ಸಿಂಹಳ+ ಪಾಂಡ್ಯ +ಕೇರಳ
ಮಾಳವ+ಆಂಧ್ರ +ಕರೂಷ +ಬರ್ಬರ
ಗೌಳ+ ಕೋಸಲ+ ಮಗಧ+ ಕೇಕಯ +ಹೂಣ +ಸೌವೀರ
ಲಾಳ +ಜೋನೆಗ +ಜೀನ +ಕುರು+ ನೇ
ಪಾಳ +ಶಿಖಿ +ಕಾಶ್ಮೀರ +ಬೋಟ +ವ
ರಾಳ+ ವರ+ದೇಶಾಧಿಪತಿಗಳು+ ಬಂದರ್+ಒಗ್ಗಿನಲಿ

ಅಚ್ಚರಿ:
(೧) ೨೩ ದೇಶದ ಹೆಸರನ್ನು ಒಂದೇ ಪದ್ಯದಲ್ಲಿ ಹೇಳಿರುವುದು