ಪದ್ಯ ೫೨: ದುರ್ಯೋಧನನು ಅರ್ಜುನನಿಗೆ ಏನೆಂದು ಉತ್ತರಿಸಿದನು?

ಆರ ದೀಪನ ಚೂರ್ಣಬಲದಲಿ
ವೀರರುದ್ರನು ಜಗವ ನುಂಗುವ
ನೋರೆಗೆಡೆಯದಿರಂಬ ಸುರಿ ಸುರಿ ಹೊಳ್ಳುನುಡಿಯೇಕೆ
ಸಾರು ನೀ ಬರಹೇಳು ಕೀಚಕ
ವೈರಿಯನು ಪಡಿಸಣವ ನೋಡಲಿ
ಭೂರಿಬಾಣದ ಸವಿಯನೆಂದನು ಕೌರವರಾಯ (ದ್ರೋಣ ಪರ್ವ, ೧೦ ಸಂಧಿ, ೫೨ ಪದ್ಯ)

ತಾತ್ಪರ್ಯ:
ಯಾರಾದರೂ ಕೊಟ್ಟ ದೀಪನ ಚೂರ್ಣದ ಬಲದಿಂದ ರುದ್ರನ ಜಗತ್ತನ್ನು ನುಂಗುವನೇ? ಅಸಂಬದ್ಧವಾದ ಮಾತನ್ನಾಡಬೇಡ. ಪುಳ್ಳುಮಾತನ್ನು ಬಿಟ್ಟು ಅದೆಷ್ಟು ಬಾಣಗಳನ್ನು ಸುರಿಯುವೆಯೋ ಸುರಿ, ನಿನ್ನಿಂದಾಗುವುದಿಲ್ಲ ಆಚೆಗೆ ಹೋಗು, ಭೀಮನನ್ನು ಕರೆ, ಅವನೂ ನನ್ನ ಬಾಣಗಳ ಸವಿನೋಡಲಿ ಎಂದು ದುರ್ಯೊಧನನು ಗುಡುಗಿದನು.

ಅರ್ಥ:
ದೀಪ: ದೀವಿಗೆ; ಚೂರ್ಣ: ಪುಡಿ; ವೀರ: ಶೂರ; ಜಗ: ಪ್ರಪಂಚ; ನುಂಗು: ಆವರಣ, ಮುಸುಕು; ಓರೆ: ವಕ್ರ, ಡೊಂಕು; ಕೆಡೆ: ಬೀಳು, ಕುಸಿ; ಸುರಿ: ವರ್ಷಿಸು; ಹೊಳ್ಳು: ಹುರುಳಿಲ್ಲದುದು, ಜೊಳ್ಳು; ನುಡಿ: ಮಾತು; ಸಾರು: ಹರಡು; ಬರಹೇಳು: ಆಗಮಿಸು; ವೈರಿ: ಶತ್ರು; ಪಡಿಸಣ: ಪರೀಕ್ಷೆ, ಪರಿಶೀಲನೆ; ನೋಡು: ವೀಕ್ಷಿಸು; ಭೂರಿ: ಹೆಚ್ಚು, ಅಧಿಕ; ಬಾಣ: ಸರಳು; ಸವಿ: ಸಿಹಿ; ರಾಯ: ರಾಜ;

ಪದವಿಂಗಡಣೆ:
ಆರ +ದೀಪನ +ಚೂರ್ಣಬಲದಲಿ
ವೀರ+ರುದ್ರನು +ಜಗವ +ನುಂಗುವನ್
ಓರೆ+ಕೆಡೆಯದಿರ್+ಅಂಬ+ ಸುರಿ+ ಸುರಿ+ ಹೊಳ್ಳು+ನುಡಿಯೇಕೆ
ಸಾರು +ನೀ +ಬರಹೇಳು +ಕೀಚಕ
ವೈರಿಯನು +ಪಡಿಸಣವ+ ನೋಡಲಿ
ಭೂರಿಬಾಣದ +ಸವಿಯನೆಂದನು +ಕೌರವರಾಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆರ ದೀಪನ ಚೂರ್ಣಬಲದಲಿ ವೀರರುದ್ರನು ಜಗವ ನುಂಗುವ

ಪದ್ಯ ೪೭: ಧರ್ಮಜನನ್ನು ರಕ್ಷಿಸಲು ದ್ರೋಣನೆದುರು ಯಾರು ಬಂದರು?

ಹೊಳ್ಳುಗಳ ತೂರಿದೆವು ಹಿಡಿ ಹಿಡಿ
ಬಿಲ್ಲ ಸುರಿ ಸುರಿ ಶರವನಕಟಿ
ನ್ನೆಲ್ಲಿ ಹೊಗುವೈ ಕಂದ ಕುಮ್ತಿಯ ಜಠರವಲ್ಪವಲೆ
ನಿಲ್ಲು ನಿಲ್ಲೆನುತೈದಿ ಬರಲ
ಲ್ಲಲ್ಲಿ ಮರುಗಿತು ಸೇನೆ ಸಾಹಸ
ಮಲ್ಲನಡಹಾಯಿದನು ದ್ರುಪದನು ಧನುವನೊದರಿಸುತ (ದ್ರೋಣ ಪರ್ವ, ೨ ಸಂಧಿ, ೪೭ ಪದ್ಯ)

ತಾತ್ಪರ್ಯ:
ಜೊಳ್ಳುಗಳನ್ನು ಹೊಡೆದೋಡಿಸಿದುದಾಯಿತು. ಧರ್ಮಜ, ಬಿಲ್ಲನ್ನು ಹಿಡಿ ಹಿಡಿ, ಬಾಣಗಳನ್ನು ಬಿಡು, ಇನ್ನೆಲ್ಲಿ ಹೊಕ್ಕು ಉಳಿಯುವೇ? ಕುಂತಿಯ ಜಠರವು ಚಿಕ್ಕದ್ದು. ನಿಲ್ಲು ನಿಲ್ಲು ಎನ್ನುತ್ತಾ ದ್ರೋಣನು ಮುನ್ನುಗ್ಗಲು, ಸೈನ್ಯವು ದುಃಖಿಸಿತು. ಆಗ ದ್ರುಪದನು ಸಾಹಸದಿಂದ ಬಿಲ್ಲನ್ನು ಧ್ವನಿ ಮಾಡುತ್ತಾ ಅಡ್ಡಬಂದನು.

ಅರ್ಥ:
ಹೊಳ್ಳು: ಹುರುಳಿಲ್ಲದುದು; ತೂರು: ಎಸೆ, ಬೀಸು; ಹಿಡಿ: ಗ್ರಹಿಸು, ಬಂಧನ; ಸುರಿ: ಮೇಲಿನಿಂದ ಬೀಳು; ಶರ: ಬಾಣ; ಅಕಟ: ಅಯ್ಯೊ; ಹೊಗು: ಸೇರು, ಪ್ರವೇಶಿಸು; ಕಂದ: ಮಗ; ಜಠರ: ಹೊಟ್ಟೆ; ಅಲ್ಪ: ಚಿಕ್ಕದ್ದು; ನಿಲ್ಲು: ತಡೆ; ಐದು: ಬಂದು ಸೇರು; ಬರಲು: ಆಗಮಿಸು; ಮರುಗು: ತಳಮಳ; ಸೇನೆ: ಸೈನ; ಸಾಹಸ: ಪರಾಕ್ರಮ; ಸಾಹಸಮಲ್ಲ: ಪರಾಕ್ರಮಿ; ಅಡಹಾಯಿ: ಮಧ್ಯಬಂದು; ಧನು: ಬಿಲ್ಲು; ಒದರು: ಕೊಡಹು, ಜಾಡಿಸು;

ಪದವಿಂಗಡಣೆ:
ಹೊಳ್ಳುಗಳ +ತೂರಿದೆವು +ಹಿಡಿ +ಹಿಡಿ
ಬಿಲ್ಲ +ಸುರಿ +ಸುರಿ +ಶರವನ್+ಅಕಟಿ
ನ್ನೆಲ್ಲಿ +ಹೊಗುವೈ +ಕಂದ +ಕುಂತಿಯ +ಜಠರವ್+ಅಲ್ಪವಲೆ
ನಿಲ್ಲು +ನಿಲ್ಲೆನುತ್+ಐದಿ +ಬರಲ್
ಅಲ್ಲಲ್ಲಿ +ಮರುಗಿತು +ಸೇನೆ +ಸಾಹಸ
ಮಲ್ಲನ್+ಅಡಹಾಯಿದನು +ದ್ರುಪದನು +ಧನುವನ್+ಒದರಿಸುತ

ಅಚ್ಚರಿ:
(೧) ಹಿಡಿ ಹಿಡಿ, ಸುರಿ ಸುರಿ, ನಿಲ್ಲು ನಿಲ್ಲು – ಜೋಡಿ ಪದಗಳ ಬಳಕೆ
(೨) ಹಂಗಿಸುವ ಪರಿ – ಅಕಟಿನ್ನೆಲ್ಲಿ ಹೊಗುವೈ ಕಂದ ಕುಮ್ತಿಯ ಜಠರವಲ್ಪವಲೆ

ಪದ್ಯ ೧೬: ಶಲ್ಯನು ಕರ್ಣನಿಗೆ ಯಾವ ಸಲಹೆ ನೀಡಿದನು?

ಕೊರಳಿಗೊಡ್ಡಲು ಹೊಳ್ಳುವರಿದ
ಸರಳು ಮಕುಟವ ತಾಗುವುದು ಮೇ
ಣುರಕೆ ತೊಟ್ಟರೆ ಕೊಯ್ವುದೀಗಳೆ ಕೊರಳನರ್ಜುನನ
ಮರಳಿ ತೊಡು ತೊಡು ಬೇಗ ಕೌರವ
ನರಸುತನವುಳಿವುದು ಕಣಾ ಹೇ
ವರಿಸದಿರು ಹೇಳುವುದು ಪಥ್ಯವೆದೆಂದನಾ ಶಲ್ಯ (ಕರ್ಣ ಪರ್ವ, ೨೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ಶಲ್ಯನು ತನ್ನ ಮಾತನ್ನು ಮುಂದುವರಿಸುತ್ತಾ, ಕರ್ಣ, ನೀನು ಅರ್ಜುನನನ್ ಕೊರಳಿಗೆ ಗುರಿಯಿಟ್ಟಿರುವೆ. ಇದರಿಂದ ಅಸ್ತ್ರವು ಹುಸಿಯಾಗಿ ಅರ್ಜುನನ ಕಿರೀಟಕ್ಕೆ ನೆಡುವ ಸಂಭವವುಂಟು ಆದರೆ ಇದೇ ಬಾಣವನ್ನು ಅರ್ಜುನನ ಎದೆಗೆ ಗುರಿಯಿಟ್ಟರೆ ಅವನ ಕೊರಳನ್ನು ಕತ್ತರಿಸುವುದು ಖಂಡಿತ. ಕರ್ಣ ಬಾಣವನ್ನು ಮತ್ತೆ ತೊಡು. ದುರ್ಯೋಧನನ ಚಕ್ರವರ್ತಿ ಪದವಿ ಉಳಿಯುತ್ತದೆ. ನನ್ನ ಮಾತನ್ನು ನಡೆಸಲು ಹಿಂಜರಿಯ ಬೇಡ. ನಾನು ಹೇಳುವುದು ಉಚಿತವೂ ಹಿತಕರವೂ ಆದದ್ದು ಎಂದು ಶಲ್ಯನು ಹೇಳಿದನು.

ಅರ್ಥ:
ಕೊರಳು: ಕಂಠ; ಒಡ್ಡು: ಮುಂದಿಡು; ವ್ಯೂಹರಚನೆಮಾಡು; ಹೊಳ್ಳು: ಹುರುಳಿಲ್ಲದುದು, ಜೊಳ್ಳು; ಸರಳು: ಬಾಣ; ಹಾರು: ಜಿಗಿ; ಮಕುಟ: ಕಿರೀಟ; ತಾಗು: ಮುಟ್ಟು; ಮೇಣ್: ಅಥವಾ; ಉರ: ಹೃದಯ; ತೊಡು: ಹೂಡು; ಕೊಯ್ವುದು: ಸೀಳು; ಮರಳಿ: ಮತ್ತೆ; ಬೇಗ: ಶೀಘ್ರ; ಅರಸು: ರಾಜ; ಉಳಿವುದು: ಬದುಕುವಿಕೆ; ಹೇವರಿಸು: ಹೇಸಿಗೆಪಡು; ಹೇಳು: ತಿಳಿಸು; ಪಥ್ಯ: ಯೋಗ್ಯವಾದುದು;

ಪದವಿಂಗಡಣೆ:
ಕೊರಳಿಗ್+ಒಡ್ಡಲು +ಹೊಳ್ಳು+ವರಿದ
ಸರಳು +ಮಕುಟವ+ ತಾಗುವುದು+ ಮೇಣ್
ಉರಕೆ +ತೊಟ್ಟರೆ +ಕೊಯ್ವುದ್+ಈಗಳೆ+ ಕೊರಳನ್+ಅರ್ಜುನನ
ಮರಳಿ+ ತೊಡು +ತೊಡು +ಬೇಗ+ ಕೌರವನ್
ಅರಸುತನ+ಉಳಿವುದು +ಕಣಾ +ಹೇ
ವರಿಸದಿರು+ ಹೇಳುವುದು+ ಪಥ್ಯವೆದೆಂದನಾ +ಶಲ್ಯ

ಅಚ್ಚರಿ:
(೧) ಸರಿಯಾದುದನ್ನು ಹೇಳುತ್ತಿರುವೆ ಎಂದು ಹೇಳಲು – ಪಥ್ಯ ಪದದ ಬಳಕೆ
(೨) ತೊಡು ಪದದ ೨ ಬಾರಿ ಬಳಕೆ- ಮರಳಿ ತೊಡು, ತೊಡು ಬೇಗ

ಪದ್ಯ ೪೦: ಅರ್ಜುನನು ಕೌರವ ಸೈನ್ಯವನ್ನು ಹೇಗೆ ಕೆಡಹಿದನು?

ಅರಸ ಕೇಳು ಜಯದ್ರಥನ ಮೋ
ಹರದ ಮಧ್ಯದೊಳಂದು ಸಿಲುಕದ
ನರನ ರಥವೀ ಹೊಳ್ಳುಗರ ಹೋರಟೆಗೆ ಹೆದರುವುದೇ
ಕರಿಘಟಾವಳಿಗೊಂದು ಶರವಾ
ತುರಗದಳಕೊಂದಂಬು ಬಳಿಕೆರ
ಡೆರಡು ಶರದಲಿ ಕೆಡಹಿದನು ಕಾಲಾಳುತೇರುಗಳ (ಕರ್ಣ ಪರ್ವ, ೨೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಮಹಾರಾಜ ಕೇಳು, ಹಿಂದೆ ಜಯದ್ರಥನ ಯುದ್ಧದಲ್ಲಿ ಅವನ ಸಮಸ್ತ ಸೈನ್ಯಕ್ಕೆ ಸಿಕ್ಕಿಹಾಕಿಕೊಳ್ಳದ ಅರ್ಜುನನ ರಥವು ಇಂದು ಈ ಜೊಳ್ಳು ಸೈನಿಕರ ಹೋರಾಟಕ್ಕೆ ಬೆದರುತ್ತದೆಯೇ? ಅರ್ಜುನನ ಒಂದು ಬಾಣವು ಆನೆಗಳ ಗುಂಪನ್ನು, ಇನ್ನೊಂದು ಬಾಣವು ಕುದುರೆಗಳ ಗುಂಪನ್ನು ಮತ್ತೆರಡು ಬಾಣಗಳು ಕಾಲಾಳುಗಳು ಮತ್ತು ರಥಿಕರನ್ನು ನಾಟಿ ಅವರೆಲ್ಲರನ್ನು ಕೆಡಹಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮೋಹರ: ಯುದ್ಧ; ಮಧ್ಯ: ನಡುವೆ; ಸಿಲುಕು: ಸೆರೆಯಾದ ವಸ್ತು, ಬಂಧನಕ್ಕೊಳಗಾದುದು; ನರ: ಅರ್ಜುನ; ರಥ: ಬಂಡಿ; ಹೊಳ್ಳು:ನಿಷ್ಪ್ರಯೋಜಕ, ಹೊಟ್ಟು, ತೌಡು; ಹೋರಟೆ: ಕಾಳಗ, ಯುದ್ಧ; ಹೆದರು: ಭಯಬೀಳು; ಕರಿ: ಆನೆ; ಘಟಾವಳಿ: ಗುಂಪು; ಶರ: ಬಾಣ; ತುರಗ: ಕುದುರೆ; ಅಂಬು: ಬಾಣ; ಬಳಿಕ: ನಂತರ; ಕೆಡಹು: ನಾಶಮಾಡು; ಕಾಲಾಳು: ಸೈನಿಕರು; ತೇರು: ರಥ;

ಪದವಿಂಗಡಣೆ:
ಅರಸ +ಕೇಳು +ಜಯದ್ರಥನ+ ಮೋ
ಹರದ +ಮಧ್ಯದೊಳ್+ಅಂದು+ ಸಿಲುಕದ
ನರನ+ ರಥವ್+ಈ+ ಹೊಳ್ಳುಗರ+ ಹೋರಟೆಗೆ +ಹೆದರುವುದೇ
ಕರಿಘಟಾವಳಿಗ್+ಒಂದು+ ಶರವಾ
ತುರಗದಳಕ್+ಒಂದ್+ಅಂಬು+ ಬಳಿಕ್+
ಎರಡೆರಡು +ಶರದಲಿ+ ಕೆಡಹಿದನು+ ಕಾಲಾಳು+ತೇರುಗಳ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಳ್ಳುಗರ ಹೋರಟೆಗೆ ಹೆದರುವುದೇ
(೨) ಶರ, ಅಂಬು – ಸಮನಾರ್ಥಕ ಪದ

ಪದ್ಯ ೨೫: ಅರ್ಜುನನು ಕರ್ಣನ ಸತ್ವವನ್ನು ಹೇಗೆ ಕಡಿಮೆ ಮಾಡಿದನು?

ಎಚ್ಚನೀತನ ಸಾರಥಿಯ ಮಗು
ಳೆಚನೀತನ ರಥವ ವಾಜಿಯ
ನೆಚ್ಚನೀತನ ಧನುವನೀತನ ಸಿಂಧ ಸೀಗುರಿಯ
ಎಚ್ಚನೀತನ ನಿಶಿತಶಸ್ತ್ರವ
ಕೊಚ್ಚಿದನು ಮಗುಳೆಚ್ಚು ಪುನರಪಿ
ಎಚ್ಚು ಕರ್ಣನ ಹೊಳ್ಳುಗಳೆದನು ಪಾರ್ಥ ನಿಮಿಷದಲಿ (ಕರ್ಣ ಪರ್ವ, ೨೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅರ್ಜುನನು ಬಾಣವನ್ನು ಹೂಡಿ ಕರ್ಣನ ಸಾರಥಿಯನ್ನು, ರಥವನ್ನೂ, ಕುದುರೆಗಳನ್ನೂ, ಬಿಲ್ಲನ್ನೂ, ಧ್ವಜವನ್ನೂ, ಚಾಮರವನ್ನೂ, ಹರಿತವಾದ ಶಸ್ತ್ರಗಲನ್ನೂ ಕದಿದು ಮತ್ತೆ ಬಾಣವನ್ನು ಹೂಡಿ ಹೊಡೆದು, ಕರ್ಣನ ಸತ್ವವನ್ನು ಉಡುಗುವಂತೆ ಮಾಡಿದನು.

ಅರ್ಥ:
ಎಚ್ಚು: ಬಾಣ ಬಿಡು; ಸಾರಥಿ: ಸೂತ; ಮಗುಳು: ಮತ್ತೆ; ರಥ: ಬಂಡಿ; ವಾಜಿ: ಕುದುರೆ; ಧನು: ಚಾಪ, ಬಿಲ್ಲು; ಸಿಂಧ: ಬಾವುಟ; ಸೀಗುರಿ: ಚಾಮರ; ನಿಶಿತ: ಹರಿತವಾದ; ಶಸ್ತ್ರ: ಆಯುಧ; ಕೊಚ್ಚು: ಸೀಳು; ಪುನರಪಿ: ಮತ್ತೆ; ಹೊಳ್ಳು:ಹುರುಳಿಲ್ಲದುದು, ಜೊಳ್ಳು; ಕಳೆ: ನಾಶಮಾಡು; ನಿಮಿಷ: ಕ್ಷಣಮಾತ್ರ;

ಪದವಿಂಗಡಣೆ:
ಎಚ್ಚನ್+ಈತನ +ಸಾರಥಿಯ +ಮಗುಳ್
ಎಚ್ಚನ್+ಈತನ +ರಥವ +ವಾಜಿಯನ್
ಎಚ್ಚನ್+ಈತನ +ಧನುವನ್+ಈತನ +ಸಿಂಧ +ಸೀಗುರಿಯ
ಎಚ್ಚನ್+ಈತನ +ನಿಶಿತ+ಶಸ್ತ್ರವ
ಕೊಚ್ಚಿದನು+ ಮಗುಳ್+ಎಚ್ಚು +ಪುನರಪಿ
ಎಚ್ಚು +ಕರ್ಣನ +ಹೊಳ್ಳುಗಳೆದನು+ ಪಾರ್ಥ +ನಿಮಿಷದಲಿ

ಅಚ್ಚರಿ:
(೧) ಎಚ್ಚನ್ ಈತನ – ೪ ಸಾಲುಗಳ ಮೊದಲ ಪದ

ಪದ್ಯ ೩೪: ಧೃಷ್ಟದ್ಯುಮ್ನನು ಏನು ಸಾರಿದನು?

ಅವನಿಪತಿಗಳು ಹೊಳ್ಳುವಾರಿದ
ರಿವರೊಳಿಲ್ಲಲೆ ದಕ್ಷಿಣೆಯ ಹಾ
ರುವ ಮಹಾಜನವಿದೆ ಸಮುದ್ರಕೆ ಪಡಿಸಮುದ್ರವೆನೆ
ಇವರೊಳಗೆ ಮುಂಗೈಯ ಬಲುಹು
ಳ್ಳವರು ನೆಗಹಲಿ ಧನುವನೀ ಯಂ
ತ್ರವನು ಜಯಿಸಲಿಯೆಂದು ಧೃಷ್ಟದ್ಯುಮ್ನ ಸಾರಿಸಿದ (ಆದಿ ಪರ್ವ, ೧೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಇಲ್ಲಿ ಸೇರಿರುವ ಅವನಿಪತಿಗಳೆಲ್ಲರು ಜೊಳ್ಳಾಗಿ ಪರಿಣಮಿಸಿದರು, ಇವರಲ್ಲಿ ಯಾವು ದ್ರೌಪದಿಯನ್ನು ವರಿಸಲು ಸಾಧ್ಯವಾಗಲಿಲ್ಲ, ಆದರೆ ಈ ರಾಜರ ಸಮುದ್ರಕ್ಕೆ ಎದುರಾಗಿ ಕೂತಿರುವ ಈ ಬ್ರಾಹ್ಮಣರ ಸಮುದ್ರವಿದೆ, ಇವರಲ್ಲಿ ಯಾರದರು ಬಲವುಳ್ಳವರಿದ್ದರೆ ಅವರು ಮುಂದೆ ಬಂದು ಈ ಯಂತ್ರವನ್ನು ಭೇದಿಸಲಿ ಎಂದು ಧೃಷ್ಟದ್ಯುಮ್ಯನು ಸಾರಿಸಿದ.

ಅರ್ಥ:
ಅವನಿ: ಭೂಮಿ; ಅವನಿಪತಿ: ರಾಜ; ಹೊಳ್ಳು:ಜೊಳ್ಳು, ಹುರುಳಿಲ್ಲದು; ದಕ್ಷಿಣೆ: ಸಂಭಾವನೆ; ಹಾರುವ: ಬ್ರಾಹ್ಮಣ; ಸಮುದ್ರ: ಸಾಗರ; ಪಡಿ: ಮಾದರಿ; ಬಲುಹು: ಬಲ, ಶಕ್ತಿ; ನೆಗಹು: ಮೇಲಕ್ಕೆ ಎತ್ತು, ಹಿಡಿ; ಧನು: ಚಾಪ; ಯಂತ್ರ: ಉಪಕರಣ; ಜಯ: ವಿಜಯ, ಗೆಲುವು; ಸಾರು: ಹೇಳು, ಗೊತ್ತುಮಾಡು;

ಪದವಿಂಗಡಣೆ:
ಅವನಿಪತಿಗಳು +ಹೊಳ್ಳುವಾರಿದರ್
ಇವರೊಳ್ಳ್+ಇಲ್ಲಲೆ +ದಕ್ಷಿಣೆಯ+ ಹಾ
ರುವ +ಮಹಾಜನವಿದೆ+ ಸಮುದ್ರಕೆ +ಪಡಿ+ಸಮುದ್ರವೆನೆ
ಇವರೊಳಗೆ +ಮುಂಗೈಯ +ಬಲುಹು
ಳ್ಳವರು+ ನೆಗಹಲಿ+ ಧನುವನ್+ಈ+ ಯಂ
ತ್ರವನು +ಜಯಿಸಲಿಯೆಂದು +ಧೃಷ್ಟದ್ಯುಮ್ನ +ಸಾರಿಸಿದ

ಅಚ್ಚರಿ:
(೧) ಇವರೊಳಿಲ್ಲಲೆ, ಇವರೊಳಗೆ – ೨, ೪ ಸಾಲಿನ ಮೊದಲ ಪದ
(೨) ರಾಜರು ಮತ್ತು ಬ್ರಾಹ್ಮಣರನ್ನು ಸಮುದ್ರಕ್ಕೆ ಹೋಲಿಸಿರುವುದು