ಪದ್ಯ ೧: ಯಾವ ಜನರು ಧರ್ಮಜನನ್ನು ನೋಡಲು ಬಂದರು?

ಕೇಳು ಜನಮೇಜಯ ಧರಿತ್ರೀ
ಪಾಲ ಹಿಮಗಿರಿ ತೊಡಗಿ ಸಾಗರ
ವೇಲೆ ಪರಿಯಂತಖಿಳ ನಗರ ಗ್ರಾಮ ಪುರವರದ
ಮೇಲುವರ್ಣಪ್ರಮುಖವಾ ಚಾಂ
ಡಾಲರವಧಿ ಸಮಸ್ತ ಭೂಜನ
ಜಾಲ ಹಸ್ತಿನಪುರಿಗೆ ಬಂದುದು ಕಂಡುದವನಿಪನ (ಗದಾ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಹಿಮಗಿರಿಯಿಂದ ಸಮುದ್ರದವರೆಗಿರುವ ಎಲ್ಲಾ ನಗರಗಲ ಗ್ರಾಮಗಲ ಎಲ್ಲಾ ವರ್ಣಗಳ ಎಲ್ಲಾ ಜನರೂ ಹಸ್ತಿನಾಪುರಕ್ಕೆ ಬಂದು ಯುಧಿಷ್ಠಿರನನ್ನು ಕಂಡು ಕಾಣಿಕೆ ನೀಡಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಹಿಮಗಿರಿ: ಹಿಮಾಲಯ; ತೊಡಗು: ಒದಗು; ಸಾಗರ: ಸಮುದ್ರ; ಪರಿಯಂತ: ವರೆಗೂ; ನಗರ: ಪುರ; ಗ್ರಾಮ: ಹಳ್ಳಿ; ಪುರ: ಊರು; ವರ್ಣ: ಬಣ, ಪಂಗಡ; ಪ್ರಮುಖ: ಮುಖ್ಯ; ಅವಧಿ: ಕಾಲ; ಸಮಸ್ತ: ಎಲ್ಲಾ; ಭೂ: ಭೂಮಿ; ಜನ: ಗುಂಪು; ಜಾಲ: ಗುಂಪು; ಬಂದು: ಆಗಮಿಸು; ಅವನಿಪ: ರಾಜ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಹಿಮಗಿರಿ +ತೊಡಗಿ +ಸಾಗರ
ವೇಲೆ +ಪರಿಯಂತ್+ಅಖಿಳ +ನಗರ +ಗ್ರಾಮ +ಪುರವರದ
ಮೇಲುವರ್ಣನ+ಪ್ರಮುಖವಾ+ ಚಾಂ
ಡಾಲರ್+ಅವಧಿ +ಸಮಸ್ತ+ ಭೂಜನ
ಜಾಲ +ಹಸ್ತಿನಪುರಿಗೆ +ಬಂದುದು +ಕಂಡುದ್+ಅವನಿಪನ

ಅಚ್ಚರಿ:
(೧) ಧರಿತ್ರೀಪಾಲ, ಅವನಿಪ – ಸಮಾನಾರ್ಥಕ ಪದ
(೨) ಭಾರತದ ವಿಸ್ತಾರವನ್ನು ಹೇಳುವ ಪರಿ – ಹಿಮಗಿರಿ ತೊಡಗಿ ಸಾಗರವೇಲೆ ಪರಿಯಂತ

ಪದ್ಯ ೩: ಜೈಮಿನಿ ಮುನಿಗಳ ಆಶ್ರಮ ಎಲ್ಲಿತ್ತು?

ಕೇಳಿ ಧರ್ಮಜ ಕ್ಷಣವನಿತ್ತನು
ಮೇಲೆ ನಾಲ್ವರಿಗಲ್ಲಿ ಜೈಮಿನಿ
ಯಾಲಯವ ನಾವರಿಯೆವೆಂದೆನೆ ಕೃಷ್ಣ ನಸುನಗುತ
ಲೋಲಮುನಿಯಾಶ್ರಮವು ಹಿಮಗಿರಿ
ಶೈಲದೊತ್ತಿನಲಿರುವುದಲ್ಲಿಗೆ
ನೀಲಗಿರಿಯೆಂಬೊಂದು ನಗವಿದೆ ದಿವ್ಯವನದಲ್ಲಿ (ಅರಣ್ಯ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಕೃಷ್ಣನು ಧರ್ಮಜನಿಗೆ ಹೇಳಿದೊಡನೆಯೇ, ಧರ್ಮಜನು ಅಲ್ಲಿಯೇ ನೆರೆದಿದ್ದ ದುರ್ವಾಸ, ಧೌಮ್ಯ, ವ್ಯಾಸ, ಕೌಶಿಕ ಮಹರ್ಷಿಗಳನ್ನು ಆಹ್ವಾನಿಸಿದನು. ಬಳಿಕ ಜೈಮಿನಿ ಮುನಿಗಳು ಎಲ್ಲಿರುವರೋ ತಿಳಿಯದು ಎಂದು ಹೇಳಿದಾಗ, ಕೃಷ್ಣನು ನಸುನಕ್ಕು, ಹಿಮಾಚಲ ಪರ್ವತದ ಪಕ್ಕದಲ್ಲಿ ನೀಲಗಿರಿಯೆಂಬ ಪರ್ವತವಿದೆ, ಅಲ್ಲಿರುವ ದಿವ್ಯವಾದ ವನದಲ್ಲಿ ಜೈಮಿನಿಗಳ ಆಶ್ರಮವಿದೆ ಎಂದು ತಿಳಿಸಿದನು.

ಅರ್ಥ:
ಕೇಳು: ಆಲಿಸು; ಕ್ಷಣ: ಕಾಲದ ಪರಿಮಾಣ; ಮೇಲೆ: ನಂತರ; ಆಲಯ: ಮನೆ; ಅರಿ: ತಿಳಿ; ನಗು: ಸಂತಸ; ಲೋಲ: ಪ್ರೀತಿ, ಅಕ್ಕರೆ, ತಲ್ಲೀನನಾದವನು, ಆಸಕ್ತ; ಮುನಿ: ಋಷಿ; ಆಶ್ರಮ: ಋಷಿಮುನಿಗಳ ಕುಟೀರ; ಹಿಮಗಿರಿ: ಹಿಮಾಲಯ; ಗಿರಿ: ಬೆಟ್ಟ; ಶೈಲ: ಬೆಟ್ಟ; ಒತ್ತು: ಹತ್ತಿರ; ನಗ: ಬೆಟ್ಟ; ದಿವ್ಯ: ಶ್ರೇಷ್ಠ; ವನ: ಕಾಡು;

ಪದವಿಂಗಡಣೆ:
ಕೇಳಿ +ಧರ್ಮಜ +ಕ್ಷಣವನ್+ಇತ್ತನು
ಮೇಲೆ +ನಾಲ್ವರಿಗ್+ಅಲ್ಲಿ+ ಜೈಮಿನಿ
ಆಲಯವ +ನಾವ್+ಅರಿಯೆವ್+ಎಂದೆನೆ +ಕೃಷ್ಣ +ನಸುನಗುತ
ಲೋಲಮುನಿ+ಆಶ್ರಮವು +ಹಿಮಗಿರಿ
ಶೈಲದ್+ಒತ್ತಿನಲ್+ಇರುವುದ್+ಅಲ್ಲಿಗೆ
ನೀಲಗಿರಿಯೆಂಬ್+ಒಂದು +ನಗವಿದೆ+ ದಿವ್ಯ+ವನದಲ್ಲಿ

ಅಚ್ಚರಿ:
(೧) ಜೈಮಿನಿ ಮುನಿಗಳನ್ನು ಲೋಲಮುನಿ ಎಂದು ಕರೆದಿರುವುದು
(೨) ಗಿರಿ, ಶೈಲ, ನಗ – ಸಮನಾರ್ಥಕ ಪದ

ಪದ್ಯ ೫: ಜನರು ಪಾಂಡವರಿಗೆ ಏನು ಹೇಳಿದರು?

ಅವನಿಪತಿ ಚಿತ್ತವಿಸು ಬಹಳಾ
ರ್ಣವವ ಹೊಗು ಹಿಮಗಿರಿಯಲಿರು ಭೂ
ವಿವರಗತಿಯಲಿ ಗಮಿಸು ಗಾಹಿಸು ಗಹನ ಗಹ್ವರವ
ಎನಗೆ ನೀನೇ ಜೀವ ನೀನೇ
ವಿವಿಧ ಧನ ಗತಿ ನೀನೆ ಮತಿ ನೀ
ನವಗಡಿಸ ಬೇಡಕಟ ಕೃಪೆ ಮಾಡೆಂದುದಖಿಳಜನ (ಅರಣ್ಯ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಪಾಂಡವರನ್ನು ಹಿಂಬಾಲಿಸುತ್ತಿದ್ದ ಜನರು ಭೀಮನ ಮಾತನ್ನು ಕೇಳಿ, ಎಲೇ ಧರ್ಮಜನೇ, ನೀನು ಸಮುದ್ರವನ್ನು ಸೇರು, ಹಿಮಾಚಲದಲ್ಲಿರು, ಭೂಮಿಯುದ್ದಕ್ಕೂ ತಿರುಗಾಡು, ದಟ್ಟವಾದ ಕಾಡನ್ನು ಸೇರು, ನಮಗೆ ಹೆದರಿಕೆಯಿಲ, ನಮಗೆ ನೀನೇ ಜೀವ, ನೀನೇ ಮತಿ, ಗತಿ ನಮ್ಮನ್ನು ನಿರಾಕರಿಸಬೇಡಿರಿ, ನಮ್ಮ ಮೇಲೆ ಕೃಪೆ ತೋರಿ ಎಂದು ಮೊರೆಯಿಟ್ಟರು.

ಅರ್ಥ:
ಅವನಿಪತಿ: ರಾಜ; ಅವನಿ: ಭೂಮಿ; ಪತಿ: ಒಡೆಯ; ಚಿತ್ತವಿಸು: ಗಮನವಿಟ್ಟು ಕೇಳು; ಬಹಳ: ತುಂಬ; ಅರ್ಣವ: ಸಮುದ್ರ; ಹೊಗು: ಸೇರು, ಪ್ರವೇಶಿಸು; ಹಿಮಗಿರಿ: ಹಿಮಾಲಯ, ಬೆಟ್ಟ; ಹಿಮ: ಮಂಜು; ಭೂ: ಭೂಮಿ; ವಿವರ: ವಿಸ್ತಾರ; ಗತಿ: ಸಂಚಾರ, ಚಲನೆ; ಗಮಿಸು: ಹೋಗು; ಗಾಹು: ಮೋಸ, ಕಪಟ, ತಿಳುವಳಿಕೆ; ಗಹನ: ದಟ್ಟವಾದ; ಗಹ್ವರ: ಕಾಡು; ಜೀವ: ಪ್ರಾಣ; ವಿವಿಧ: ಹಲವಾರು; ಧನ: ಐಶ್ವರ್ಯ; ಗತಿ: ದಿಕ್ಕು; ಮತಿ: ಬುದ್ಧಿ; ಅವಗಡಿಸು: ಕಡೆಗಣಿಸು, ವಿರೋಧಿಸು; ಬೇಡ: ಕೂಡದು, ಸಲ್ಲದು; ಅಕಟ: ಅಯ್ಯೋ; ಕೃಪೆ: ದಯೆ; ಅಖಿಳ: ಎಲ್ಲಾ; ಜನ: ಮಂದಿ;

ಪದವಿಂಗಡಣೆ:
ಅವನಿಪತಿ +ಚಿತ್ತವಿಸು +ಬಹಳ
ಅರ್ಣವವ +ಹೊಗು +ಹಿಮಗಿರಿಯಲ್+ಇರು +ಭೂ
ವಿವರ+ಗತಿಯಲಿ +ಗಮಿಸು +ಗಾಹಿಸು +ಗಹನ +ಗಹ್ವರವ
ಎನಗೆ+ ನೀನೇ +ಜೀವ +ನೀನೇ
ವಿವಿಧ+ ಧನ +ಗತಿ +ನೀನೆ +ಮತಿ +ನೀನ್
ಅವಗಡಿಸ+ ಬೇಡ್+ಅಕಟ +ಕೃಪೆ +ಮಾಡೆಂದುದ್+ಅಖಿಳ+ಜನ

ಅಚ್ಚರಿ:
(೧) ಗ ಕಾರದ ಸಾಲು ಪದ – ಗತಿಯಲಿ ಗಮಿಸು ಗಾಹಿಸು ಗಹನ ಗಹ್ವರವ
(೨) ಗತಿ, ಮತಿ – ಪ್ರಾಸ ಪದ

ಪದ್ಯ ೩: ಶಿವನ ರಥವು ಹೇಗೆ ತಯಾರಾಯಿತು?

ಆಸುರವಲೇ ವಿಂಧ್ಯ ಹಿಮಗಿರಿ
ಹಾಸು ಹಲಗೆಗಳಾದವಚ್ಚು ಮ
ಹಾ ಸಮುದ್ರವೆ ಆಯ್ತು ಗಾಲಿಗೆ ಬೇರೆ ತರಲೇಕೆ
ಆ ಸಸಿಯ ಸೂರಿಯನ ಮಂಡಲ
ವೈಸಲೇ ಗಂಗಾದಿ ಸಕಲ ಮ
ಹಾ ಸರಿತ್ಕುಲವಾಯ್ತು ಚಮರಗ್ರಾಹಿಣಿಯರಲ್ಲಿ (ಕರ್ಣ ಪರ್ವ, ೭ ಸಂಧಿ, ೩ ಪದ್ಯ)

ತಾತ್ಪರ್ಯ:
ಮಹಾ ಅದ್ರಿಗಳಾದ ವಿಂಧ್ಯ, ಹಿಮಾಚಲ ಪರ್ವತಗಳೇ ರಥದ ಹಾಸು ಹಲಗೆಗಳಾದವು, ಸಾಗರವೇ ಅಚ್ಚಾಯಿತು, ಸೂರ್ಯ ಮತ್ತು ಚಂದ್ರಮಂಡಲಗಳಿರುವಾಗ ಚಕ್ರಕ್ಕೆ ಬೇರೆಯಾಕೆ ಹುಡುಕಬೇಕು? ಗಂಗಾದಿ ನದಿಗಳೇ ಚಾಮರವನ್ನು ಬೀಸುವವರಾದರು.

ಅರ್ಥ:
ಆಸುರ: ಅತಿಶಯ, ಭಯಂಕರ; ಗಿರಿ: ಬೆಟ್ಟ; ಹಾಸು: ಹಗ್ಗ; ಹಲಗೆ: ಮರದ ಅಗಲವಾದ ಹಾಗೂ ತೆಳುವಾದ ಸೀಳು; ಅಚ್ಚು: ನಡುಗೂಟ, ಕೀಲು; ಸಮುದ್ರ: ಸಾಗರ; ಗಾಲಿ: ಚಕ್ರ; ಬೇರೆ: ಅನ್ಯ; ತರಲು: ಕೊಂಡು ಬಾ; ಸಸಿ: ಶಶಿ, ಚಂದ್ರ; ಸೂರಿಯ: ಸೂರ್ಯ, ಭಾನು; ಮಂಡಲ: ಗುಂಡಾಗಿರುವ ಆಕಾರ; ಐಸಲೇ: ಅಲ್ಲವೇ; ಗಂಗ: ಗಂಗಾನದಿ, ಜಾಹ್ನವಿ; ಆದಿ: ಮುಂತಾದ; ಸಕಲ: ಎಲ್ಲಾ; ಮಹಾ: ಶ್ರೇಷ್ಠ; ಸರಿತ್ಕುಲ: ನದಿಗಳ ಸಮೂಹ; ಚಮರ: ಚಾಮರ; ಗ್ರಾಹಿ: ಹಿಡಿಯುವ;

ಪದವಿಂಗಡಣೆ:
ಆಸುರವಲೇ +ವಿಂಧ್ಯ +ಹಿಮಗಿರಿ
ಹಾಸು +ಹಲಗೆಗಳಾದವ್+ಅಚ್ಚು +ಮ
ಹಾ +ಸಮುದ್ರವೆ +ಆಯ್ತು +ಗಾಲಿಗೆ+ ಬೇರೆ+ ತರಲೇಕೆ
ಆ +ಸಸಿಯ +ಸೂರಿಯನ + ಮಂಡಲವ್
ಐಸಲೇ +ಗಂಗಾದಿ +ಸಕಲ +ಮ
ಹಾ +ಸರಿತ್ಕುಲವಾಯ್ತು +ಚಮರ+ಗ್ರಾಹಿಣಿಯರಲ್ಲಿ

ಅಚ್ಚರಿ:
(೧) ಮಹಾ ಪದದ ಬಳಕೆ – ೨, ೫ ಸಾಲು
(೨) ವಿಂಧ್ಯ, ಹಿಮಗಿರಿ, ಸಮುದ್ರ, ಶಶಿ, ಸೂರ್ಯ, ಗಂಗಾದಿ ನದಿ – ಶಿವನ ರಥದ ಭಾಗಗಳು

ಪದ್ಯ ೧೯: ಪಾಂಡವರಿರುವ ಪ್ರದೇಶವನ್ನು ಹೇಗೆ ಗುರುತಿಸಬಹುದು?

ಅತ್ತ ಹಿಮಗಿರಿ ಮೇರೆ ಭಾವಿಸ
ಲಿತ್ತ ಮೂರು ಸಮುದ್ರ ಗಡಿಯಿಂ
ದಿತ್ತ ನಾನಾ ದೇಶವೆಂಬಿವು ಬರದ ಬೇಗೆಯಲಿ
ಹೊತ್ತಿ ಹೊಗೆದವು ಮಧ್ಯದೇಶದ
ಲುತ್ತಮದ ಸಿರಿಫಲದ ಬೆಳಸುಗ
ಳೊತ್ತೆಯಿದು ಪಾಂಡವರ ಚಾವಡಿಯೆಂದನಾ ದ್ರೋಣ (ವಿರಾಟ ಪರ್ವ, ೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಉತ್ತರದ ಹಿಮಾಲಯದಿಂದ ದಕ್ಷಿಣದ ಮೂರು ಸಮುದ್ರದ ತಡಿಯಿಂದ ಒಳಗೆ ಇರುವ ದೇಶಗಳು ಬರದ ಬೇಗೆಯಿಂದ ಹೊತ್ತಿ ಉರಿಯುತ್ತಿವೆ. ಆದರೆ ಮಧ್ಯದೇಶದಲ್ಲಿ ಮಳೆ ಬೆಳೆ ಉತ್ತಮವಾಗಿದೆ ಎಂದರೆ ಅದೇ ಪಾಂಡವರಿರುವ ಸ್ಥಾನ, ಎಂದು ದ್ರೋಣರು ತಿಳಿಸಿದರು.

ಅರ್ಥ:
ಅತ್ತ: ಅಲ್ಲಿ; ಹಿಮಗಿರಿ: ಹಿಮಾಲಯ; ಗಿರಿ: ಬೆಟ್ಟ; ಹಿಮ: ಮಂಜು; ಮೇರೆ:ಎಲ್ಲೆ, ಗಡಿ; ಭಾವಿಸು:ತಿಳಿ; ಮೂರು: ತ್ರಿ; ಸಮುದ್ರ: ಸಾಗರ; ಗಡಿ: ಎಲ್ಲೆ; ನಾನಾ: ಹಲವಾರು; ದೇಶ: ರಾಷ್ತ್ರ; ಬರ: ಕ್ಷಾಮ; ಬೇಗೆ: ಉರಿ; ಹೊತ್ತು: ಜ್ವಲಿಸು; ಹೊಗೆ: ಧೂಮ; ಮಧ್ಯ: ನಡು; ಉತ್ತಮ: ಶ್ರೇಷ್ಠ; ಸಿರಿ: ಐಶ್ವರ್ಯ; ಫಲ: ಹಣ್ಣು; ಬೆಳಸು: ಬೆಳೆ; ಚಾವಡಿ:ಆಶ್ರಯಸ್ಥಾನ;

ಪದವಿಂಗಡಣೆ:
ಅತ್ತ +ಹಿಮಗಿರಿ +ಮೇರೆ +ಭಾವಿಸಲ್
ಇತ್ತ +ಮೂರು +ಸಮುದ್ರ +ಗಡಿಯಿಂದ್
ಇತ್ತ +ನಾನಾ +ದೇಶ+ವೆಂಬ+ಇವು +ಬರದ+ ಬೇಗೆಯಲಿ
ಹೊತ್ತಿ +ಹೊಗೆದವು +ಮಧ್ಯ+ದೇಶದಲ್
ಉತ್ತಮದ +ಸಿರಿಫಲದ +ಬೆಳಸುಗಳ್
ಒತ್ತೆ+ಯಿದು +ಪಾಂಡವರ+ ಚಾವಡಿ+ಯೆಂದನಾ +ದ್ರೋಣ

ಅಚ್ಚರಿ:
(೧) ಅತ್ತ, ಇತ್ತ – ಪ್ರಾಸ ಪದಗಳು
(೨) ಭಾರತದ ನಕ್ಷೆಯನ್ನು ನೀಡುವ ಪದ್ಯ – ಅತ್ತ ಹಿಮಗಿರಿ ಇತ್ತ ಮೂರು ಸಮುದ್ರ ಗಡಿ
(೩) ಜೋಡಿ ಪದಗಳು – “ಬ” – ಬರದ ಬೇಗೆಯಲಿ; “ಹ” – ಹೊತ್ತಿ ಹೊಗೆದವು;

ಪದ್ಯ ೩೦: ಹಿಮಾಲಯದ ಎಷ್ಟು ಯೋಜನವನ್ನು ಅರ್ಜುನನ ಸೈನ್ಯ ಆವರಿಸಿತು?

ಎರಡು ಸಾವಿರ ಯೋಜನವು ಹಿಮ
ಗಿರಿಯ ಬಹಳೋತ್ಸೇಧ ಶಿಖರಕೆ
ಸರಿಸದಲಿ ಹತ್ತಿದುದು ಪಾಳೆಯವೇನ ಹೇಳುವೆನು
ಕರಿ ತುರಗ ವರ ರಥ ಪದಾತಿಗೆ
ಪರಿಗಣನೆಯೆಲ್ಲಿಯದು ಹಿಮಗಿರಿ
ಯೆರಡು ಸಾವಿರದಗಲ ತಿರುಗಿತು ರಾಯಕೇಳೆಂದ (ಸಭಾ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅರ್ಜುನನ ಸೈನ್ಯವು ಆ ಹಿಮಾಲಯದ ಎರಡು ಸಾವಿರ ಯೋಜನೆಯ ವಿಸ್ತಾರದ ಬೆಟ್ಟದ ಪ್ರದೇಶವನ್ನು ಆವರಿಸಿತು, ಅದರಲ್ಲಿ ಬಹು ಎತ್ತರದ ಶಿಖರವನ್ನು ಅವನ ಸೈನ್ಯವು ಹತ್ತಿ ಆವರಿಸಿಕೊಂಡಿತು. ಆ ಸೈನ್ಯದ ಲೆಕ್ಕವು ಎಣಿಕೆಗೆ ನಿಲುಕದಂತಹದು ಎಂದು ವೈಶಂಪಾಯನರು ಜನಮೇಜಯ ರಾಜನಿಗೆ ಹೇಳಿದರು.

ಅರ್ಥ:
ಎರಡು: ದ್ವಿ; ಸಾವಿರ: ಸಾಸಿರ; ಯೋಜನ: ಅಳತೆಯ ಪ್ರಮಾಣ; ಹಿಮ: ಮಂಜು; ಗಿರಿ: ಬೆಟ್ಟ; ಬಹಳ: ಅಧಿಕ; ಉತ್ಸೇಧ: ಎತ್ತರ; ಶಿಖರ: ತುದಿ; ಸರಿಸ: ಸಮೀಪ; ಹತ್ತು: ಏರು; ಪಾಳೆ: ಸೈನ್ಯ; ಕರಿ: ಆನೆ; ತುರಗ: ಕುದುರೆ; ವರ: ಶ್ರೇಷ್ಠ; ರಥ: ಬಂಡಿ; ಪದಾತಿ: ಕಾಲುಸೈನ್ಯ; ಪರಿಗಣನೆ: ಲೆಕ್ಕಕ್ಕೆ; ತಿರುಗು: ಸುತ್ತಾಡು; ರಾಯ: ರಾಜ;

ಪದವಿಂಗಡಣೆ:
ಎರಡು +ಸಾವಿರ +ಯೋಜನವು +ಹಿಮ
ಗಿರಿಯ +ಬಹಳ+ಉತ್ಸೇಧ+ ಶಿಖರಕೆ
ಸರಿಸದಲಿ +ಹತ್ತಿದುದು +ಪಾಳೆಯವೇನ+ ಹೇಳುವೆನು
ಕರಿ +ತುರಗ +ವರ +ರಥ +ಪದಾತಿಗೆ
ಪರಿಗಣನೆ+ಯೆಲ್ಲಿಯದು +ಹಿಮಗಿರಿ
ಯೆರಡು+ ಸಾವಿರದಗಲ+ ತಿರುಗಿತು+ ರಾಯಕೇಳೆಂದ

ಅಚ್ಚರಿ:
(೧) ೧, ೬ ಸಾಲಿನ ಮೊದಲೆರಡು ಪದ – ಎರಡು ಸಾವಿರ
(೨) ೧, ೫ ಸಾಲಿನ ಕೊನೆ ಪದ – ಹಿಮಗಿರಿ