ಪದ್ಯ ೧೩: ಬಿಲ್ಲುಗಾರರು ಹೇಗೆ ಸಿದ್ಧರಾದರು?

ಬೊಬ್ಬಿರಿದು ಮೊಳಕಾಲನೂರಿದ
ರುಬ್ಬಟೆಯಲಿದಿರಾಂತು ಕಾಲನ
ಹೆಬ್ಬೆಳಸು ಹುಲಿಸಾಯ್ತು ಬರಹೇಳೆಂಬವೋಲೊದರಿ
ಹಬ್ಬುಗೆಯ ಜೇವೊಡೆಯ ಝಾಡಿಯ
ತೆಬ್ಬುಗಳ ತೆಗೆವೆರಳುಗೋಲಿನ
ಕೊಬ್ಬಿ ನಾಳೆಚ್ಚಾಡಿತಿಕ್ಕಿದ ಮಂಡಿ ಚಂಡಿಸದೆ (ಭೀಷ್ಮ ಪರ್ವ, ೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಮೊಣಕಾಲನ್ನೂರಿ ಯುದ್ಧಕ್ಕೆ ಸಿದ್ಧರಾಗಿ, ಯಮನ ಹುಲುಸಾದ ಕೊಯ್ಲು ಸಿದ್ಧವಾಗಿದೆ, ಶತ್ರುವನ್ನು ಬರಹೇಳು, ಎಂಬಂತೆ ಒದರಿ ಬಿಲ್ಲನ್ನು ದನಿಮಾಡಿ, ಬಲಿಷ್ಠರಾದ ಬಿಲ್ಲುಗಾರರು ಬಾಣಗಳಿಂದ ಶತ್ರುಗಳನ್ನು ಹೊಡೆದರು, ತಾವು ಊರಿದ ಮಂಡಿಯನ್ನು ಕದಲಿಸಲಿಲ್ಲ.

ಅರ್ಥ:
ಬೊಬ್ಬಿರಿ: ಜೋರಾಗಿ ಅರಚು; ಮೊಳಕಾಲು: ಜಾನು, ಕಾಲು ಮತ್ತು ತೊಡೆ ಸೇರುವ ಭಾಗ; ಊರು: ತೊಡೆ, ನೆಲಸು; ಉಬ್ಬಟೆ: ಅತಿಶಯ; ಇದಿರು: ಎದುರು; ಕಾಲ: ಯಮ; ಹೆಬ್ಬೆಳಸು: ಸಮೃದ್ಧ ಫಸಲು; ಹುಲುಸು: ಹೆಚ್ಚಳ; ಬರಹೇಳು: ಕರೆ; ಒದರು: ಕೂಗು; ಹಬ್ಬುಗೆ: ಹರವು, ವಿಸ್ತಾರ; ಜೇವೊಡೆ: ಧನುಷ್ಟಾಂಕಾರ ಮಾಡು; ಝಾಡಿಸು: ಅಲುಗಾಡಿಸು; ತೆಬ್ಬು: ಬಿಲ್ಲಿನ ತಿರುವು; ತೆಗೆ: ಹೊರಹಾಕು; ವೆರಳು: ಬೆರಳು, ಅಂಗುಲಿ; ಕೋಲು: ಬಾನ; ಕೊಬ್ಬು: ಅಹಂಕಾರ; ಎಚ್ಚಾಡು: ಬಾಣಬಿಡು; ತಿಕ್ಕು: ಉಜ್ಜು, ಒರಸು; ಮಂಡಿ: ಮೊಳಕಾಲು, ಜಾನು; ಚಂಡಿ: ತೀಕ್ಷ್ಣವಾದುದು, ಛಲ;

ಪದವಿಂಗಡಣೆ:
ಬೊಬ್ಬಿರಿದು +ಮೊಳಕಾಲನ್+ಊರಿದರ್
ಉಬ್ಬಟೆಯಲ್+ಇದಿರಾಂತು+ ಕಾಲನ
ಹೆಬ್ಬೆಳಸು+ ಹುಲಿಸಾಯ್ತು+ ಬರಹೇಳ್+ಎಂಬವೋಲ್+ಒದರಿ
ಹಬ್ಬುಗೆಯ+ ಜೇವೊಡೆಯ +ಝಾಡಿಯ
ತೆಬ್ಬುಗಳ +ತೆಗೆ+ಬೆರಳು+ಕೋಲಿನ
ಕೊಬ್ಬಿನಾಳ್+ಎಚ್ಚಾಡಿ+ತಿಕ್ಕಿದ +ಮಂಡಿ +ಚಂಡಿಸದೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾಲನ ಹೆಬ್ಬೆಳಸು ಹುಲಿಸಾಯ್ತು ಬರಹೇಳೆಂಬವೋಲ್