ಪದ್ಯ ೫೬: ಶಿಶುಪಾಲನು ಯಾರನ್ನು ಹೇಗೆ ಕೊಲ್ಲುವೆನೆಂದು ಗರ್ಜಿಸಿದನು?

ನಿನಗೆ ಮೊದಲೊಳು ನಿಶಿತ ವಿಶಿಖದ
ಮೊನೆಯೊಳರ್ಚಿಸಿ ಬಳಿಕ ಭೀಷ್ಮನ
ಘನ ಘಟಾನಳ ಕುಂಡದೊಳ್ಸಾಹಾ ಸ್ವಧಾಹುತಿಯ
ಅನುಕರಿಸಿ ಬಳಿಕಿನಲಿ ಕುಂತೀ
ತನಯರೈವರ ರಕುತ ಘೃತದಲಿ
ವಿನುತ ರೋಷಾಧ್ವರವ ರಚಿಸುವೆನೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಶಿಶುಪಾಲನು ತನ್ನ ಕೋಪದ ಮಾತನ್ನು ಮುಂದುವರಿಸುತ್ತಾ, ಕೃಷ್ಣಾ ನಿನ್ನನ್ನು ಮೊದಲು ಚೂಪಾದ ಬಾಣಗಳು ತುದಿಯಿಂದ ಪೂಜೆ ಮಾಡಿ, ನಂತರ ಘಟಾಗ್ನಿಕುಂಡದಲ್ಲಿ ಭೀಷ್ಮನನ್ನು ಸ್ವಾಹಾ ಸ್ವಧಾಕಾರದಿಂದ ಆಹುತಿ ಕೊಟ್ಟು, ನಂತರ ಐವರು ಪಾಂಡವರನ್ನು ರಕ್ತವೆಂಬ ತುಪ್ಪದಿಂದ ರೋಷಯಜ್ಞವನ್ನು ಮಾಡುತ್ತೇನೆ ಎಂದು ಗರ್ಜಿಸಿದನು.

ಅರ್ಥ:
ಮೊದಲು: ಆದಿ; ನಿಶಿತ: ಹರಿತವಾದುದು, ಚೂಪಾಗಿರುವುದು; ವಿಶಿಖ: ಬಾಣ, ಅಂಬು; ಮೊನೆ: ತುದಿ, ಕೊನೆ; ಅರ್ಚಿಸು: ಪೂಜೆ ಮಾಡು; ಬಳಿಕ: ನಂತರ; ಘನ: ಶ್ರೇಷ್ಠ; ಅನಲ; ಬೆಂಕಿ; ಕುಂಡ: ಅಗ್ನಿ ಕುಂಡ, ಹೋಮದ ಗುಳಿ; ಸಾಹಾ: ಸ್ವಾಹ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಅನುಕರಿಸು: ಪ್ರತಿಫಲ ಕೊಡು; ತನಯ: ಮಗ; ರಕುತ: ನೆತ್ತರು; ಘೃತ: ತುಪ್ಪ; ವಿನುತ: ನಿರ್ಮಲ; ರೋಷ: ಕೋಪ; ಅಧ್ವರ: ಯಜ್ಞ; ರಚಿಸು: ನಿರ್ಮಿಸು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ನಿನಗೆ +ಮೊದಲೊಳು+ ನಿಶಿತ +ವಿಶಿಖದ
ಮೊನೆಯೊಳ್+ಅರ್ಚಿಸಿ +ಬಳಿಕ +ಭೀಷ್ಮನ
ಘನ+ ಘಟಾನಳ +ಕುಂಡದೊಳ್+ಸಾಹಾ +ಸ್ವಧಾಹುತಿಯ
ಅನುಕರಿಸಿ+ ಬಳಿಕಿನಲಿ +ಕುಂತೀ
ತನಯರ್+ಐವರ +ರಕುತ +ಘೃತದಲಿ
ವಿನುತ +ರೋಷ+ಅಧ್ವರವ +ರಚಿಸುವೆನ್+ಎಂದನಾ +ಚೈದ್ಯ

ಅಚ್ಚರಿ:
(೧) ನಿಶಿತ, ವಿಶಿಖ; ಘನ ಘಟಾನಳ; ಸಾಹಾ, ಸ್ವಧಾಹುತಿ – ಪದಗಳ ಬಳಕೆ