ಪದ್ಯ ೨: ಯುಧಿಷ್ಠಿರನು ಯಾರನ್ನು ನೋಡುವ ತವಕದಲ್ಲಿದ್ದನು?

ಸರಸ ಸೌಗಂಧಿಕದ ಪುಷ್ಪೋ
ತ್ತರಕೆ ಪವನಜ ಹೋದನೆಂಬುದ
ನರಸಿಯಿಂದರಿದವನಿಪನು ಪೂರಾಯದುಗುಡದಲಿ
ನರನ ಹದನೇನೋ ವೃಕೋದರ
ನಿರವು ತಾನೆಂತೆನುತ ಚಿಂತಾ
ಭರಿತನಿದ್ದನು ಭೀಮಸೇನನ ಕಾಂಬ ತವಕದಲಿ (ಅರಣ್ಯ ಪರ್ವ, ೧೨ ಸಂಧಿ, ೨ ಪದ್ಯ)

ತಾತ್ಪರ್ಯ:
ಸೌಗಂಧಿಕ ಪುಷ್ಪವನ್ನು ತರಲೆಂದು ಭೀಮನು ಹೋದುದನ್ನು ತನ್ನ ಹೆಂಡತಿ ದ್ರೌಪದಿಯಿಂದ ಕೇಳಿದ ಬಳಿಕ ಧರ್ಮರಾಯನು ದುಃಖಾತಿಶಯದಿಂದ ಕೂಡಿ, ಅರ್ಜುನನು ಹೇಗಿರುವನೋ, ಭೀಮನು ಎಲ್ಲಿರುವನೋ ಎಂದು ಚಿಂತಿಸುತ್ತಾ ಭೀಮನ ನೋಡುವ ತವಕದಲ್ಲಿದ್ದನು.

ಅರ್ಥ:
ಸರಸ: ಸೊಬಗು; ಪುಷ್ಪ: ಹೂವು; ಪವನಜ: ವಾಯುಪುತ್ರ (ಭೀಮ); ಹೋದ: ತೆರಳು; ಅರಸಿ: ರಾಣಿ; ಅರಿ: ತಿಳಿ; ಅವನಿಪ: ರಾಜ; ಪೂರಾಯ: ಪರಿಪೂರ್ಣ; ದುಗುಡ: ದುಃಖ; ನರ: ಅರ್ಜುನ; ಹದ: ಸ್ಥಿತಿ; ವೃಕೋದರ: ಭೀಮ; ಇರವು: ನೆಲೆ; ಚಿಂತೆ: ಯೋಚನೆ; ಭರಿತ: ತುಂಬಿದ; ಕಾಂಬ: ನೋಡುವ; ತವಕ: ಆತುರ;

ಪದವಿಂಗಡಣೆ:
ಸರಸ +ಸೌಗಂಧಿಕದ +ಪುಷ್ಪೋ
ತ್ತರಕೆ +ಪವನಜ +ಹೋದನೆಂಬುದನ್
ಅರಸಿಯಿಂದ್+ಅರಿದ್+ಅವನಿಪನು +ಪೂರಾಯ+ದುಗುಡದಲಿ
ನರನ +ಹದನೇನೋ +ವೃಕೋದರನ್
ಇರವು +ತಾನೆಂತ್+ಎನುತ +ಚಿಂತಾ
ಭರಿತನಿದ್ದನು +ಭೀಮಸೇನನ +ಕಾಂಬ +ತವಕದಲಿ

ಅಚ್ಚರಿ:
(೧) ನರಸಿಯಿಂದರಿದವನಿಪನು – ಪದದ ರಚನೆ
(೨) ಜೋಡಿ ಅಕ್ಷರ ಪದದ ಬಳಕೆ – ಸರಸ ಸೌಗಂಧಿಕದ; ಪುಷ್ಪೋತ್ತರಕೆ ಪವನಜ;
(೩) ಪವನಜ, ವೃಕೋದರ, ಭೀಮಸೇನ – ಭೀಮನನ್ನು ಕರೆದ ಪರಿ

ಪದ್ಯ ೪೮: ಭೀಮನು ಯಕ್ಷರಿಗೆ ಏನು ಹೇಳಿದನು?

ನಾವಲೇ ಕುಂತೀಕುಮಾರರು
ಭೂವಧೂವಲ್ಲಭರು ನಮ್ಮಯ
ದೇವಿಗಾದುದು ಬಯಕೆ ಸೌಗಂಧಿಕ ಸರೋರುಹದ
ಠಾವು ಕಾಣಿಸಿಕೊಂಡು ಬಹುದಾ
ತಾವರೆಯನೆನೆ ಬಂದೆವಿಲ್ಲಿಗೆ
ನೀವು ಕಾಹಿನಬಂಟರೆಂಬುದನರಿಯೆ ನಾನೆಂದ (ಅರಣ್ಯ ಪರ್ವ, ೧೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಾವು ಕುಂತೀಕುಮಾರರು, ಭೂಮಿಯ ಒಡೆಯರು, ನಮ್ಮ ದೇವಿಯು ಸೌಗಂಧಿಕ ಪುಷ್ಪವನ್ನು ಬಯಸಿದಳು, ಈ ಕಮಲ ಪುಷ್ಪವನ್ನು ತೆಗೆದುಕೊಂಡು ಬಾ ಎಂದು ಆಕೆ ಕೋರಿದುದರಿಂದ ನಾವಿಲ್ಲಿಗೆ ಬಂದೆವು, ಈ ಸರೋವರವನ್ನು ಕಾಯಲು ನೀವಿಷ್ಟು ಜನರಿದ್ದೀರಿ ಎನ್ನುವುದು ನನಗೆ ತಿಳಿದಿರಲಿಲ್ಲ ಎಂದು ಭೀಮನು ನುಡಿದನು.

ಅರ್ಥ:
ಕುಮಾರ: ಮಕ್ಕಳು; ಭೂ: ಭೂಮಿ; ವಧು: ಹೆಣ್ಣು; ವಲ್ಲಭ: ಒಡೆಯ, ಪ್ರಭು; ಭೂವಧೂವಲ್ಲಭ: ರಾಜ; ದೇವಿ: ಸ್ತ್ರಿ, ಹೆಣ್ಣು; ಬಯಕೆ: ಆಸೆ; ಸರೋರುಹ: ಕಮಲ; ಠಾವು: ಸ್ಥಳ, ಜಾಗ; ಕಾಣಿಸು: ತೋರು; ಬಹುದಾ: ತೆಗೆದುಕೊಂಡು ಬಾ; ತಾವರೆ: ಕಮಲ; ಬಂದೆ: ಆಗಮಿಸು; ಕಾಹಿನ: ಕಾವಲು, ರಕ್ಷಣೆ; ಬಂಟ: ಸೇವಕ; ಅರಿ: ತಿಳಿ;

ಪದವಿಂಗಡಣೆ:
ನಾವಲೇ+ ಕುಂತೀ+ಕುಮಾರರು
ಭೂವಧೂವಲ್ಲಭರು+ ನಮ್ಮಯ
ದೇವಿಗಾದುದು +ಬಯಕೆ +ಸೌಗಂಧಿಕ+ ಸರೋರುಹದ
ಠಾವು +ಕಾಣಿಸಿಕೊಂಡು +ಬಹುದಾ
ತಾವರೆಯನೆನೆ+ ಬಂದೆವಿಲ್ಲಿಗೆ
ನೀವು +ಕಾಹಿನ+ಬಂಟರೆಂಬುದನ್+ಅರಿಯೆ +ನಾನೆಂದ

ಅಚ್ಚರಿ:
(೧) ರಾಜ ಎನ್ನಲು ಭೂವಧೂವಲ್ಲಭ ಪದದ ಬಳಕೆ
(೨) ಸರೋರುಹ, ತಾವರೆ – ಸಮನಾರ್ಥಕ ಪದ

ಪದ್ಯ ೨೬: ಭೀಮನು ಹನುಮನಿಗೇಕೆ ನಮಸ್ಕರಿಸಿದ?

ಬಳಿಕ ಸೌಗಂಧಿಕದ ಪವನನ
ಬಳಿವಿಡಿದು ನಾ ಬಂದೆನೆಮ್ಮಯ
ಲಲನೆ ಕಾಮಿಸಿದಳು ಸಹಸ್ರದಳಾಬ್ಜದರ್ಶನವ
ತಿಳಿಯಲಿದು ವೃತ್ತಾಂತ ನೀನ
ಸ್ಖಲಿತ ಬಲ ನೀನಾರು ನಿನ್ನನು
ತಿಳುಹಬೇಕು ಮಹಾತ್ಮ ಕಪಿ ನೀನೆನುತ ಕೈಮುಗಿದ (ಅರಣ್ಯ ಪರ್ವ, ೧೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೀಮನು ತನ್ನ ಪರಿಚಯವನ್ನು ಮುಂದುವರಿಸುತ್ತಾ, ಈ ಸಹಸ್ರದಳ ಪದ್ಮದ ಸುಗಂಧವು ಗಾಳಿಯೊಡನೆ ಕೂಡಿ ನಮ್ಮಬಳಿ ಬರಲು, ನಮ್ಮ ಪತ್ನಿ ದ್ರೌಪದಿ ಇದನ್ನು ಆಘ್ರಣಿಸಿ ಮೋಹಿತಳಾಗಿ ಇದನ್ನು ನೋಡಲು ಬಯಸಿದಳು. ಆ ಸುಗಂಧದ ಗಾಳಿಯ ಜಾಡಿನಲ್ಲಿ ನಾನು ಬಂದಿದ್ದೇನೆ. ಇದು ನನ್ನ ವಿಚಾರ. ಎಲೈ ಮಹಾ ಪರಾಕ್ರಮಶಾಲಿಯಾದ ಮಹಾತ್ಮನಾದ ಕಪಿಯೇ, ನೀವು ಯಾರೆಂದು ತಿಳಿಸಿ ಎಂದು ಭೀಮನು ನಮಸ್ಕರಿಸುತ್ತಾ ಹನುಮನನ್ನು ಕೇಳಿದನು.

ಅರ್ಥ:
ಬಳಿಕ: ನಂತರ; ಸೌಗಂಧಿಕ: ಪರಿಮಳದಿಂದ ಕೂಡಿದುದು; ಪವನ: ಗಾಳಿ, ವಾಯು; ಬಳಿ: ಹತ್ತಿರ; ಹಿಡಿ: ಗ್ರಹಿಸು; ಬಂದೆ: ಆಗಮಿಸು; ಲಲನೆ: ಹೆಣ್ಣು, ಸ್ತ್ರೀ; ಕಾಮಿಸು: ಇಚ್ಛಿಸು; ಸಹಸ್ರ: ಸಾವಿರ; ದಳ: ಎಸಳು; ಅಬ್ಜ: ತಾವರೆ; ದರ್ಶನ: ನೋಟ; ತಿಳಿ: ಅರಿ; ವೃತ್ತಾಂತ: ವಾರ್ತೆ; ಅಸ್ಖಲಿತ: ಚಲನೆಯಿಲ್ಲದ; ಬಲ: ಶಕ್ತಿ; ತಿಳುಹ: ಅರಿತುಕೊಳ್ಳು; ಮಹಾತ್ಮ: ಶ್ರೇಷ್ಠ; ಕಪಿ: ಮಂಗ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಬಳಿಕ +ಸೌಗಂಧಿಕದ +ಪವನನ
ಬಳಿವಿಡಿದು +ನಾ +ಬಂದೆನ್+ಎಮ್ಮಯ
ಲಲನೆ +ಕಾಮಿಸಿದಳು +ಸಹಸ್ರ+ದಳ+ಅಬ್ಜ+ದರ್ಶನವ
ತಿಳಿಯಲಿದು +ವೃತ್ತಾಂತ +ನೀನ್
ಅಸ್ಖಲಿತ +ಬಲ+ ನೀನಾರು+ ನಿನ್ನನು
ತಿಳುಹಬೇಕು +ಮಹಾತ್ಮ +ಕಪಿ+ ನೀನ್+ಎನುತ +ಕೈಮುಗಿದ

ಅಚ್ಚರಿ:
(೧) ಭೀಮನು ನಡೆದು ಬಂದ ಪರಿ – ಸೌಗಂಧಿಕದ ಪವನನ ಬಳಿವಿಡಿದು ನಾ ಬಂದೆನ್

ಪದ್ಯ ೩: ಸುಗಂಧವು ಹೇಗೆ ಮುನಿಜನರನ್ನು ಮೋಹಿಸಿತು?

ಸರಸ ಸೌಗಂಧಿಕದ ಪರಿಮಳ
ಭರದ ಭಾರವಣೆಯಲಿ ತಿಳಿಗೊಳ
ನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ
ಮೊರೆದೊಗುವ ಮರಿದುಂಬಿಗಳ ಮೋ
ಹರದ ಮೋಡಾ ಮೋಡಿಯಲಿಡಾ
ವರಿಸಿತೈದಿಂದ್ರಿಯದಲೊಂದಿರೆ ಸಕಲ ಮುನಿಜನವ (ಅರಣ್ಯ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ಚೆಲುವಾದ ಸೌಗಂಧಿಕ ಪುಷ್ಪದ ಪರಿಮಳವು, ಅದು ಬೆಳೆದ ಸರೋವರದ ತೆರೆಗಳಿಂದೆದ್ದ ನೀರಿನ ತುಂತುರಿನಿಂದಲೂ, ಸದ್ದು ಮಾಡುವ ದುಂಬಿಗಳ ಹಿಂಡುಗಳಿಂದಲೂ ಆಶ್ಚರ್ಯಕರವಾಗಿ ಸಕಲ ಮುನಿಗಳ ಇಂದ್ರಿಯಗಳನ್ನು ಮೋಹಿಸಿತು.

ಅರ್ಥ:
ಸರಸ: ಚೆಲ್ಲಾಟ, ವಿನೋದ; ಸೌಗಂಧಿಕ: ಪರಿಮಳದಿಂದ ಕೂಡಿದುದು; ಪರಿಮಳ: ಸುಗಂಧ; ಭರ:ಭಾರ, ಹೆಚ್ಚಳ; ಭಾರವಣೆ: ಘನತೆ, ಗೌರವ; ಉರುಬು: ರಭಸ, ವೇಗ; ತಿಳಿ: ನಿರ್ಮಲ, ಶುದ್ಧ; ಎರೆ: ಸುರಿ; ತಿವಿಗುಳಿ: ತಿವಿತ, ಚುಚ್ಚು; ತುಂತುರು: ಸಣ್ಣ ಸಣ್ಣ ಹನಿ; ತುಷಾರ: ಹಿಮ, ಮಂಜು; ಮೊರೆ:ದುಂಬಿಯ ಧ್ವನಿ, ಝೇಂಕಾರ; ಮರಿ: ಚಿಕ್ಕ; ದುಂಬಿ: ಭ್ರಮರ; ಮೋಹರ: ದಂಡು, ಸೈನ್ಯ; ಮೋಡಾಮೋಡಿ: ಆಶ್ಚರ್ಯಕರ; ಆವರಿಸು: ಸುತ್ತು; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಸಕಲ: ಎಲ್ಲಾ; ಮುನಿಜನ: ಋಷಿಗಳ ಗುಂಪು; ಒಂದು: ಕೂಡು;

ಪದವಿಂಗಡಣೆ:
ಸರಸ +ಸೌಗಂಧಿಕದ +ಪರಿಮಳ
ಭರದ +ಭಾರವಣೆಯಲಿ +ತಿಳಿಗೊಳನ್
ಉರುಬುದ್+ಎರೆಗಳ +ತಿವಿಗುಳಿನ +ತುಂತುರು +ತುಷಾರದಲಿ
ಮೊರೆದೊಗುವ +ಮರಿದುಂಬಿಗಳ+ ಮೋ
ಹರದ +ಮೋಡಾಮೋಡಿಯಲಿಡ್+
ಆವರಿಸಿತೈದ್+ಇಂದ್ರಿಯದಲ್+ಒಂದಿರೆ+ ಸಕಲ+ ಮುನಿಜನವ

ಅಚ್ಚರಿ:
(೧) ತ ಕಾರದ ಸಾಲು ಪದ – ತಿಳಿಗೊಳನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ
(೨) ಮ ಕಾರದ ಸಾಲು ಪದ – ಮೊರೆದೊಗುವ ಮರಿದುಂಬಿಗಳ ಮೋಹರದ ಮೋಡಾ ಮೋಡಿಯಲಿಡಾವರಿಸಿತೈದಿಂದ್ರಿಯದಲೊಂದಿರೆ ಸಕಲ ಮುನಿಜನವ