ಪದ್ಯ ೩೨: ವ್ಯಾಸರು ಯಾವ ಆಶ್ರಮಕ್ಕೆ ಮರಳಿದರು?

ಎನಲು ಯೋಜನಗಂಧಿ ನಿಜ ನಂ
ದನನ ನುಡಿಯೇ ವೇದಸಿದ್ಧವಿ
ದೆನುತ ಸೊಸೆಯರು ಸಹಿತ ನಡೆದಳು ವರ ತಪೋವನಕೆ
ಮುನಿಪನತ್ತಲು ಬದರಿಕಾ ನಂ
ದನಕೆ ಮರಳಿದನಿತ್ತ ಗಂಗಾ
ತನುಜ ಸಲಹಿದನಖಿಳ ಪಾಂಡವ ಕೌರವ ವ್ರಜವ (ಆದಿ ಪರ್ವ, ೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಯೋಜನಗಮ್ಧಿಯು ವೇದವ್ಯಾಸರು ತನ್ನ ಮಗ ಹೇಳಿದ ಮಾತು ವೇದವಾಕ್ಯವೆಂದು ಒಪ್ಪಿ ತನ್ನ ಸೊಸೆಯಂದಿರ ಜೊತೆಗೆ ತಪೋವನಕ್ಕೆ ಹೊರಟು ಹೋದಳು. ವೇದವ್ಯಾಸರು ಬದರಿಕಾಶ್ರಮಕ್ಕೆ ಹಿಂದಿರುಗಿದರು. ಭೀಷ್ಮನು ಕೌರವ ಪಾಂಡವರನ್ನು ರಕ್ಷಿಸಿದನು.

ಅರ್ಥ:
ನಿಜ: ತನ್ನ, ದಿಟ; ನಂದನ: ಮಗ; ನುಡಿ: ಮಾತು; ಸಿದ್ಧ: ಸಾಧಿಸಿದ, ಅಣಿ; ಸೊಸೆ: ಮಗನ ಹೆಂಡತಿ; ಸಹಿತ: ಜೊತೆ; ನಡೆ: ಚಲಿಸು; ವರ: ಶ್ರೇಷ್ಠ; ತಪೋವನ: ಆಶ್ರಮ; ಮುನಿಪ: ಋಷಿ; ನಂದನ: ತೋಟ, ಉದ್ಯಾನ; ಮರಳು: ಹಿಂದಿರುಗು; ತನುಜ: ಮಗ; ಸಲಹು: ರಕ್ಶಿಸು; ಅಖಿಳ: ಎಲ್ಲಾ; ವ್ರಜ: ಗುಂಪು;

ಪದವಿಂಗಡಣೆ:
ಎನಲು+ ಯೋಜನಗಂಧಿ +ನಿಜ +ನಂ
ದನನ +ನುಡಿಯೇ +ವೇದಸಿದ್ಧವಿ
ದೆನುತ +ಸೊಸೆಯರು +ಸಹಿತ +ನಡೆದಳು +ವರ +ತಪೋವನಕೆ
ಮುನಿಪನ್+ಅತ್ತಲು +ಬದರಿಕಾ +ನಂ
ದನಕೆ +ಮರಳಿದನ್+ಇತ್ತ +ಗಂಗಾ
ತನುಜ+ ಸಲಹಿದನ್+ಅಖಿಳ +ಪಾಂಡವ +ಕೌರವ +ವ್ರಜವ

ಅಚ್ಚರಿ:
(೧) ನ ಕಾರದ ತ್ರಿವಳಿ ಪದ – ನಿಜ ನಂದನನ ನುಡಿಯೇ
(೨) ನಿಜನಂದನ, ಬದರಿಕಾ ನಂದನಕೆ- ನಂದನ ಪದದ ಬಳಕೆ

ಪದ್ಯ ೧೨: ಗಾಂಧಾರಿ ಯಾರನ್ನು ನೋಡಿ ದುಃಖಿಸಿದಳು?

ಭಾನುದತ್ತನ ಮೇಲೆ ಹೊರಳುವ
ಮಾನಿನಿಯರ ನಿರೀಕ್ಷಿಸೈ ಮ
ತ್ಸೂನುಗಳ ನೋಡಿತ್ತಲಿದೆ ದುಶ್ಯಾಸನಾದಿಗಳ
ಏನನೆಂಬೆನು ತನ್ನ ಸೊಸೆಯರ
ಹಾನಿಯನು ಮಾದ್ರೇಶನರಸಿಯ
ರೇನಧರ್ಮವ ನೆನೆದರೆಂದಳಲಿದಳು ಗಾಂಧಾರಿ (ಗದಾ ಪರ್ವ, ೧೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಭಾನುದತ್ತನ ಮೇಲೆ ಹೊರಲಾಡುತ್ತಿರುವ ಅವನ ಹೆಂಡಿರನ್ನು ನೋಡು. ದುಶ್ಯಾಸನನೇ ಮೊದಲಾದ ನನ್ನ ಮಕ್ಕಳ ದೇಹಗಳನ್ನು ಇತ್ತ ನೋಡು. ಇದರಿಂದ ನನ್ನ ಸೊಸೆಯರಿಗಾದ ಹಾನಿಯನ್ನು ನಾನು ಏನೆಂದು ಹೇಳಲಿ. ಅದಿರಲಿ ಶಲ್ಯನ ಬಳಿ ಅಳುತ್ತಿರುವ ಅವನ ಪತ್ನಿಯರು ಯಾವ ಅಧರ್ಮವನ್ನು ಆಚರಿಸಿದ್ದರು?

ಅರ್ಥ:
ಹೊರಳು: ತಿರುವು, ಬಾಗು; ಮಾನಿನಿ: ಹೆಣ್ಣು; ನಿರೀಕ್ಷಿಸು: ತಾಳು; ಸೂನು: ಮಗ; ಆದಿ: ಮುಂತಾದ; ಎಂಬೆ: ಹೇಳು; ಸೊಸೆ: ಮಗನ ಹೆಂಡತಿ; ಹಾನಿ: ನಾಶ; ಅರಸಿ:ರಾಣಿ; ಅಧರ್ಮ: ಸರಿಯಿಲ್ಲದ; ನೆನೆ: ಜ್ಞಾಪಿಸು; ಅಳುಲು: ದುಃಖಿಸು; ಮತ್: ನನ್ನ;

ಪದವಿಂಗಡಣೆ:
ಭಾನುದತ್ತನ +ಮೇಲೆ +ಹೊರಳುವ
ಮಾನಿನಿಯರ +ನಿರೀಕ್ಷಿಸೈ +ಮ
ತ್ಸೂನುಗಳ +ನೋಡ್+ಇತ್ತಲಿದೆ +ದುಶ್ಯಾಸನಾದಿಗಳ
ಏನನೆಂಬೆನು +ತನ್ನ+ ಸೊಸೆಯರ
ಹಾನಿಯನು +ಮಾದ್ರೇಶನ್+ಅರಸಿಯರ್
ಏನ್+ಅಧರ್ಮವ +ನೆನೆದರ್+ಎಂದಳ್+ಅಳಲಿದಳು +ಗಾಂಧಾರಿ

ಅಚ್ಚರಿ:
(೧) ಮಾನಿನಿ, ಅರಸಿ, ಸೊಸೆ – ಹೆಂಗಸು ಎಂದು ವಿವರಿಸುವ ಪದಗಳು

ಪದ್ಯ ೧೪: ವ್ಯಾಸರು ಗಾಂಧಾರಿಗೆ ಏನೆಂದು ಹೇಳಿದರು?

ತಾಯೆ ಹದುಳಿಸು ದೇವಲೋಕದ
ಲಾಯದಲಿ ಸಲಿಸಾ ಕುಮಾರರ
ನಾಯುಷದ ಲಿಪಿ ಹಣೆಯಲೊರಸಿದಡಾರ ವಶವಿದಕೆ
ರಾಯನಲಿ ಸೊಸೆಯರಿಗೆ ಮಿಕ್ಕಬು
ಜಾಯತಾಕ್ಷಿಯರಿಗೆ ವಿಶೋಕದ
ಬಾಯಿನವ ಕೊಡಿಸೆಂದನಾ ಮುನಿ ಸುಬಲನಂದನೆಗೆ (ಗದಾ ಪರ್ವ, ೧೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ವ್ಯಾಸರು ಗಾಂಧಾರಿಯನ್ನುದ್ದೇಶಿಸಿ, ತಾಯಿ, ಹಣೆಯ ಮೇಲೆ ಬರೆದ ಆಯುಷ್ಯದ ಲಿಪಿ ಅಳಿಸಿ ಹೊದರೆ ಯಾರು ಮಾಡುವುದೇನು? ಸಮಾಧಾನದಿಮ್ದ ನಿನ್ನ ಮಕ್ಕಳ ಪಿತೃ ಕಾರ್ಯವನ್ನು, ಅವರನ್ನು ದೇವಲೋಕಕ್ಕೆ ಹೋಗಲು ಏನು ಮಾಡಿಸಬೇಕೋ ಅದನ್ನು ಮಾಡಿಸು. ನಿನ್ನ ಸೊಸೆಯರ ಶೋಕವನ್ನು ಸಮಾಧಾನ ಪಡಿಸಿದರೆ ಅದು ಅವರಿಗೆ ಬಾಗಿನ ಎಂದು ಹೇಳಿದನು.

ಅರ್ಥ:
ತಾಯೆ: ಮಾತೆ; ಹದುಳಿಸು: ಸಮಾಧಾನಗೊಳ್ಳು, ನೆಮ್ಮದಿಗೊಳ್ಳು; ದೇವಲೋಕ: ಸ್ವರ್ಗ; ಲಾಯ: ಅಶ್ವಶಾಲೆ; ಸಲಿಸು: ದೊರಕಿಸಿ ಕೊಡು, ಪೂರೈಸು; ಕುಮಾರ: ಮಕ್ಕಳು; ಆಯುಷ: ಜೀವಿತಾವಧಿ; ಲಿಪಿ: ಬರಹ; ಹಣೆ: ಲಲಾಟ; ಒರಸು: ಅಳಿಸು; ವಶ: ಅಧೀನ, ಅಂಕೆ; ರಾಯ: ರಾಜ; ಸೊಸೆ: ಮಗನ ಹೆಂಡತಿ; ಮಿಕ್ಕ: ಉಳಿದ; ಅಬುಜಾಯತಾಕ್ಷಿ: ಕಮಲದಂತ ಕಣ್ಣುಳ್ಳವಳು (ಹೆಣ್ಣು); ವಿಶೋಕ: ದುಃಖ; ಬಾಯಿನ: ಬಾಗಿನ, ಉಡುಗೊರೆ; ಕೊಡು: ನೀದು; ಮುನಿ: ಋಷಿ; ನಂದನೆ: ಮಗಳು;

ಪದವಿಂಗಡಣೆ:
ತಾಯೆ +ಹದುಳಿಸು +ದೇವಲೋಕದ
ಲಾಯದಲಿ +ಸಲಿಸ್+ಆ +ಕುಮಾರರನ್
ಆಯುಷದ +ಲಿಪಿ +ಹಣೆಯಲ್+ಒರಸಿದಡ್+ಆರ+ ವಶವಿದಕೆ
ರಾಯನಲಿ+ ಸೊಸೆಯರಿಗೆ +ಮಿಕ್ಕ್+ಅಬು
ಜಾಯತಾಕ್ಷಿಯರಿಗೆ+ ವಿಶೋಕದ
ಬಾಯಿನವ +ಕೊಡಿಸೆಂದನಾ +ಮುನಿ +ಸುಬಲ+ನಂದನೆಗೆ

ಅಚ್ಚರಿ:
(೧) ಗಾಂಧಾರಿಯನ್ನು ತಾಯೆ, ಸುಬಲನಂದನೆ ಎಂದು ಕರೆದಿರುವುದು
(೨) ಸ್ವರ್ಗವೆಂದು ಹೇಳಲು – ದೇವಲೋಕದ ಲಾಯ ಪದದ ಬಳಕೆ
(೩) ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳುವ ಪರಿ – ಕುಮಾರರ ನಾಯುಷದ ಲಿಪಿ ಹಣೆಯಲೊರಸಿದಡಾರ ವಶವಿದಕೆ

ಪದ್ಯ ೪೭: ದ್ರೌಪದಿಯು ಧೃತರಾಷ್ಟ್ರನಿಗೆ ಹೇಗೆ ಉತ್ತರಿಸಿದಳು?

ಮಗಳಹೆನು ಸೊಸೆಯಹೆನು ನಿಮ್ಮಯ
ಮಗನ ಕಣ್ಣಿಗೆ ಕಾಳಕೂಟದ
ಮಗಳೊ ಸೊಸೆಯೋ ನಾದಿನಿಯೊ ಬೆಸಗೊಳ್ಳಿ ನಿಮ್ಮವನ
ಅಗಡು ಮಾಡಿದ ನಿಮ್ಮ ಮಕ್ಕಳ
ವಿಗಡ ತನಕಂಜಿದರೊ ದುರಿತದ
ಸೊಗಡಿಗಂಜಿದರೋ ಪೃಥಾಸುತರೆಂದಳಿಂದುಮುಖಿ (ಸಭಾ ಪರ್ವ, ೧೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ನಾನು ನಿಮಗೆ ಮಗಳಾಗಿರಬಹುದು ಅಥವ ಸೊಸೆಯಾಗಿರಬಹುದು, ಆದರೆ ನಿಮ್ಮ ಮಗನ ಕಣ್ಣಿಗೆ ನಾನು ಕಾಳಕೂಟ ವಿಷದ ಮಗಳೊ, ಸೊಸೆಯೋ, ನಾದಿನಿಯೋ ಸ್ವಲ್ಪ ನಿಮ್ಮ ಮಗನನ್ನೇ ಕೇಳಿಕೊಳ್ಳಿ. ನಿಮ್ಮ ಮಕ್ಕಳ ದುಷ್ಟತನದ ಪರಾಕ್ರಮಕ್ಕೆ ಪಾಂಡವರು ಸುಮ್ಮನಿರುವವರೋ ಅಥವ ಪಾಪದ ಭೀತಿಯಿಂದ ಸುಮ್ಮನಿರುವರೋ ನೀವೆ ಸ್ವಲ್ಪ ಯೋಚಿಸಿರೆ ಎಂದು ದ್ರೌಪದಿ ಧೃತರಾಷ್ಟ್ರನಿಗೆ ಹೇಳಿದಳು.

ಅರ್ಥ:
ಮಗಳು: ಸುತೆ; ಸೊಸೆ: ಮಗನ ಹೆಂಡತಿ; ಮಗ: ಸುತ; ಕಣ್ಣು: ನಯನ; ಕಾಳಕೂಟ: ವಿಷ; ನಾದಿನಿ: ಸಹೋದರನ ಹೆಂಡತಿ; ಬೆಸ: ಕೇಳುವುದು, ವಿಚಾರಿಸುವುದು; ಅಗಡು: ತುಂಟತನ; ವಿಗಡ: ಭೀಕರವಾದ; ಅಂಜು: ಹೆದರು; ದುರಿತ: ಪಾಪ, ಪಾತಕ; ಸೊಗಡು: ವಾಸನೆ; ಸುತ: ಮಗ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ಸುಂದರಿ);

ಪದವಿಂಗಡಣೆ:
ಮಗಳಹೆನು +ಸೊಸೆಯಹೆನು +ನಿಮ್ಮಯ
ಮಗನ +ಕಣ್ಣಿಗೆ +ಕಾಳಕೂಟದ
ಮಗಳೊ+ ಸೊಸೆಯೋ +ನಾದಿನಿಯೊ+ ಬೆಸಗೊಳ್ಳಿ+ ನಿಮ್ಮವನ
ಅಗಡು+ ಮಾಡಿದ +ನಿಮ್ಮ +ಮಕ್ಕಳ
ವಿಗಡ+ ತನಕ್+ಅಂಜಿದರೊ+ ದುರಿತದ
ಸೊಗಡಿಗ್+ಅಂಜಿದರೋ +ಪೃಥಾಸುತರ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಧೃತರಾಷ್ಟ್ರನನ್ನು ಪೃಥಾಸುತ ಎಂದು ಕರೆದಿರುವುದು
(೨) ಸಂಬಂಧ ಹೇಳುವ ಶಬ್ದ – ಮಗ, ಮಗಳು, ಸೊಸೆ, ನಾದಿನಿ

ಪದ್ಯ ೨೭: ದ್ರೌಪದಿಯು ದೇವತೆಗಳಲ್ಲಿ ಹೇಗೆ ಮೊರೆಯಿಟ್ಟಳು?

ಸೊಸೆಯಲಾ ದೇವೆಂದ್ರಯೆನ್ನಯ
ಘಸಣಿ ಯಾರದು ಹಿರಿಯ ಮಾವನ
ವಶವಲಾ ತ್ರೈಜಗದ ಜೀವರ ಜೀವ ವಿಭ್ರಮಣ
ಉಸುರು ನಿನ್ನಾಧೀನವೀ ದು
ರ್ವ್ಯಸನಿಗಳ ಕೊಂಡಾಡುವರೆ ಕರು
ಣಿಸು ಸಮೀರಣಯೆಂದು ಹಲುಬಿದಳಾಶ್ವಿನೇಯರಿಗೆ (ಸಭಾ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಪರಮಾತ್ಮರಲ್ಲಿ ಮೊರೆಯಿಟ್ಟ ದ್ರೌಪದಿ ನಂತರ ತನ್ನ ಮಾವನಾದ ಇಂದ್ರನಲ್ಲಿ ಬೇಡಿದಳು. ಹೇ ಇಂದ್ರದೇವ ನಾನು ನಿನಗೆ ಸೊಸೆಯಲ್ಲವೇ, ಈ ಕಷ್ಟದಿಂದ ನನ್ನನ್ನು ಪಾರು ಮಾಡುವವರು ಯಾರು, ಅದು ನಿನ್ನ ಕೆಲಸವಲ್ಲವೇ? ಹೇ ವಾಯುದೇವ, ಮೂರುಲೋಕಗಳಲ್ಲಿರುವ ಜೀವರಲ್ಲಿ ಜೀವವಾಗಿರುವ ಉಸಿರು ನಿನ್ನ ಅಧೀನವಲ್ಲವೇ? ಈ ದುರಾಚಾರಿಗಳನ್ನು ನೀನು ಸೈರಿಸಬಹುದೇ? ಹೇ ವಾಯುದೇವ ಕರುಣಿಸು, ಹೇ ಅಶ್ವಿನೀ ದೇವತೆಗಳೇ ನೀವಾದರೂ ನನ್ನನ್ನು ಕಷ್ಟದಿಂದ ಪಾರುಮಾಡಬಹುದಲ್ಲವೇ ಎಂದು ದ್ರೌಪದಿಯು ದೇವತೆಗಳಲ್ಲಿ ಮೊರೆಯಿಟ್ಟಳು.

ಅರ್ಥ:
ಸೊಸೆ: ಮಗನ ಹೆಂಡತಿ; ದೇವೇಂದ್ರ; ಇಂದ್ರ; ಘಸಣಿ: ತೊಂದರೆ; ಹಿರಿಯ: ದೊಡ್ಡವ; ಮಾವ: ಗಂಡನ ತಂದೆ; ವಶ: ಅಧೀನ, ಅಂಕೆ; ತ್ರೈಜಗ: ಮೂರುಲೋಕ; ಜೀವ: ಉಸಿರು; ವಿಭ್ರಮಣ: ಅಲೆಯುವಿಕೆ; ಉಸುರು: ವಾಯು; ಅಧೀನ: ವಶ, ಕೈಕೆಳಗಿರುವ; ದುರ್ವ್ಯಸನ: ಕೆಟ್ಟ ಚಟವುಳ್ಳ; ಕೊಂಡಾಡು: ಹೊಗಳು, ಆದರಿಸು; ಕರುಣಿಸು: ದಯಪಾಲಿಸು; ಸಮೀರ: ವಾಯು; ಹಲುಬು: ಗೋಳಿಡು, ಬೇಡಿಕೋ; ಅಶ್ವಿನಿ: ದೇವತೆಗಳ ಒಂದು ಗುಂಪು;

ಪದವಿಂಗಡಣೆ:
ಸೊಸೆಯಲಾ +ದೇವೆಂದ್ರ+ಎನ್ನಯ
ಘಸಣಿ +ಯಾರದು +ಹಿರಿಯ +ಮಾವನ
ವಶವಲಾ +ತ್ರೈಜಗದ+ ಜೀವರ +ಜೀವ +ವಿಭ್ರಮಣ
ಉಸುರು +ನಿನ್+ಅಧೀನವ್+ಈ+ ದು
ರ್ವ್ಯಸನಿಗಳ +ಕೊಂಡಾಡುವರೆ +ಕರು
ಣಿಸು +ಸಮೀರಣ+ಎಂದು +ಹಲುಬಿದಳ್+ಅಶ್ವಿನೇಯರಿಗೆ

ಅಚ್ಚರಿ:
(೧) ವಾಯುದೇವನನ್ನು ಹೊಗಳುವ ಪರಿ – ಜಗದ ಜೀವರ ಜೀವ ವಿಭ್ರಮಣ ಉಸುರು ನಿನ್ನಾಧೀನವೀ

ಪದ್ಯ ೧೦೮: ದ್ರೌಪದಿ ಮತ್ತಾರನ್ನು ಸಹಾಯಕ್ಕೆ ಬೇಡಿದಳು?

ಕ್ರೂರನಿವ ದುಶ್ಯಾಸನನು ಗಾಂ
ಧಾರಿ ಬಿಡಿಸೌ ಸೆಅರಗ ಸೊಸೆಯ
ಲ್ಲಾರು ಹೇಳೌ ತಂಗಿಯಲ್ಲಾ ನಿಮಗೆ ಭಾನುಮತಿ
ವೀರ ಸೈಂಧವನರಸಿ ರಾಜಕು
ಮಾರಿ ನೀ ನಾದಿನಿಯಲಾ ಖಳ
ರೌರವದೊಳದ್ದುವನು ಬಿಡಿಸೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೦೮ ಪದ್ಯ)

ತಾತ್ಪರ್ಯ:
ಅಯ್ಯೋ ದುಶ್ಯಾಸನು ಕ್ರೂರ, ಗಾಂಧಾರಿ ನಿನಗೆ ನಾನು ಸೊಸೆಯಲ್ಲವೇ? ನನ್ನ ಸೆರಗನ್ನು ದುಶ್ಯಾಸನನಿಂದ ಬಿಡಿಸು. ಭಾನುಮತಿ ನಿನಗೆ ನಾನು ತಂಗಿಯಲ್ಲವೇ? ದುಶ್ಯಳೆ ನಿನಗೆ ನಾನು ನಾದಿನಿಯಲ್ಲವೇ? ಈ ನೀಚನು, ದುಷ್ಟನೂ ಆದ ದುಶ್ಯಾಸನನು ನನ್ನನ್ನು ರೌರವನರಕದಲ್ಲಿ ಮುಳುಗಿಸಲು ಮುಂದಾಗುತ್ತಿದ್ದಾನೆ, ನೀವಾದರೂ ನನನ್ನು ಇವನಿಂದ ಬಿಡಿಸೆಂದು ಗೋಳಿಟ್ಟಳು ದ್ರೌಪದಿ.

ಅರ್ಥ:
ಕ್ರೂರ: ದುಷ್ಟ; ಬಿಡಿಸು:ನಿವಾರಿಸು, ಹೋಗಲಾಡಿಸು; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಸೊಸೆ: ಮಗನ ಹೆಂಡತಿ; ಹೇಳಿ: ತಿಳಿಸಿ; ತಂಗಿ: ಸೋದರಿ; ವೀರ: ಶೂರ; ಸೈಂಧವ: ಜಯದ್ರಥ; ಅರಸಿ: ರಾಣಿ; ಸೈಂಧವನರಸಿ: ದುಶ್ಯಳೆ; ಖಳ:ದುಷ್ಟ; ರೌರವ: ಭಯಂಕರವಾದ; ಅದ್ದು: ಮುಳುಗಿಸು; ಒರಲು: ಗೋಳಿಡು, ಅರಚು; ತರಳೆ: ಯುವತಿ;

ಪದವಿಂಗಡಣೆ:
ಕ್ರೂರನಿವ +ದುಶ್ಯಾಸನನು +ಗಾಂ
ಧಾರಿ+ ಬಿಡಿಸೌ+ ಸೆರಗ +ಸೊಸೆಯಲ್
ಆರು +ಹೇಳೌ+ ತಂಗಿಯಲ್ಲಾ+ ನಿಮಗೆ +ಭಾನುಮತಿ
ವೀರ +ಸೈಂಧವನರಸಿ+ ರಾಜಕು
ಮಾರಿ +ನೀ +ನಾದಿನಿಯಲಾ +ಖಳ
ರೌರವದೊಳ್+ಅದ್ದುವನು +ಬಿಡಿಸೆಂದ್+ಒರಲಿದಳು +ತರಳೆ

ಅಚ್ಚರಿ:
(೧) ಸೊಸೆ, ತಂಗಿ, ನಾದಿನಿ – ಸಂಬಂಧಗಳನ್ನು ವಿವರಿಸುವ ಪದ
(೨) ದುಶ್ಯಳೆಯನ್ನು ಸೈಂಧವನರಸಿ, ರಾಜಕುಮಾರಿ ಎಂದು ಕರೆದಿರುವುದು

ಪದ್ಯ ೫: ಧೃತರಾಷ್ಟ್ರನ ಸೊಸೆಯರ ಆಕ್ರಂದನ ಹೇಗಿತ್ತು?

ಬಾಯ ಬಸುರಿನ ನೊಸಲ ಹೊಯ್ಲಿನ
ರಾಯನರಸಿಯರರಸನಿದಿರಲಿ
ಹಾಯಿದರು ಭಿತ್ತಿಗಳನೊದರಿದರೊಡನೆ ದೆಸೆಯೊದರೆ
ರಾಯನಾವೆಡೆ ಜೀಯ ಕಲಿ ರಾ
ಧೇಯನಾವೆಡೆ ನೂರು ಮಕ್ಕಳು
ಬೀಯವಾದರೆ ಮಾವ ಎಂದರು ಸೊಸೆಯರಡಗೆಡೆಯ (ಕರ್ಣ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಕೌರವರ ರಾಣಿಯರು ಬಾಯಿ ಹೊಟ್ಟೆ ಹಣೆಗಳನ್ನು ಗಟ್ಟಿಸಿಕೊಂಡು ಎದ್ದು ಗೋಡೆಗಳನ್ನು
ದಾಟಿ ಅಷ್ಟದಿಕ್ಕುಗಳು ಪ್ರತಿಧ್ವನಿಸುವಂತೆ ಅತ್ತರು. ದುರ್ಯೋಧನನೆಲ್ಲಿ, ಕರ್ಣನೆಲ್ಲಿ, ನೂರ್ವರು ಕೌರವರೂ ಹೋದರೇ ಮಾವಾ ಎಂದು ಭಾನುಮತಿಯೇ ಮೊದಲಾದ ಕೌರವರ ಪತ್ನಿಯರೆಲ್ಲರೂ ಧೃತಿಗೆಟ್ಟು ಕೂಗಿದರು.

ಅರ್ಥ:
ಬಾಯಿ: ಮುಖದಲ್ಲಿನ ಒಂದು ಅಂಗ; ಬಸುರು: ಹೊಟ್ಟೆ; ನೊಸಲ: ಹಣೆ; ಹೊಯ್ಲು: ಮಿಡಿತ, ತುಡಿತ; ರಾಯ: ರಾಜ; ಅರಸಿ: ರಾಣಿ; ಅರಸ: ರಾಜ; ಇದಿರು: ಎದುರು; ಹಾಯು: ದಾಟಿ ಹೋಗು, ದಾಟು; ಭಿತ್ತಿ: ಗೋಡೆ, ಆಶ್ರಯ, ಒಡೆಯುವುದು; ಒದರು: ಕೊಡಹು, ಜಾಡಿಸು; ದೆಸೆ: ದಿಕ್ಕು; ಜೀಯ: ಒಡೆಯ; ಕಲಿ: ಶೂರ; ರಾಧೇಯ: ಕರ್ಣ; ನೂರು: ಶತ; ಮಕ್ಕಳು: ಬೀಯ: ಹಾಳು, ನಷ್ಟ; ಮಾವ: ಗಂಡನ ತಂದೆ; ಸೊಸೆ: ಮಗನ ಹೆಂಡತಿ; ಆವೆಡೆ: ಎಲ್ಲಿ;

ಪದವಿಂಗಡಣೆ:
ಬಾಯ +ಬಸುರಿನ +ನೊಸಲ +ಹೊಯ್ಲಿನ
ರಾಯನ್+ಅರಸಿಯರ್+ಅರಸನ್+ಇದಿರಲಿ
ಹಾಯಿದರು +ಭಿತ್ತಿಗಳನ್+ಒದರಿದರ್+ಒಡನೆ +ದೆಸೆಯೊದರೆ
ರಾಯನ್+ಆವೆಡೆ +ಜೀಯ +ಕಲಿ +ರಾ
ಧೇಯನ್+ಆವೆಡೆ +ನೂರು +ಮಕ್ಕಳು
ಬೀಯವಾದರೆ +ಮಾವ +ಎಂದರು +ಸೊಸೆಯರ್+ಅಡಗೆಡೆಯ

ಅಚ್ಚರಿ:
(೧) ಅರಸ, ಅರಸಿ – ಜೋಡಿ ಪದಗಳು
(೨) ರಾಯ – ೨, ೪ ಸಾಲಿನ ಮೊದಲ ಪದ
(೩) ಮಾವ, ಸೊಸೆ – ಸಂಬಂಧಗಳನ್ನು ಸೂಚಿಸುವ ಪದಗಳ ಬಳಕೆ
(೪) ಭಾನುಮತಿಯನ್ನು ರಾಯನರಸಿ ಎಂದು ಕರೆದಿರುವುದು

ಪದ್ಯ ೭೪: ವ್ರತಕ್ಕೆ ಪರಿವಾರದವರನ್ನು ಕುಂತಿ ಹೇಗೆ ಆಹ್ವಾನಿಸಿದಳು?

ಭಾನುಮತಿ ಮೊದಲಾದ ಸೊಸೆಯರು
ಸೂನು ಮಕ್ಕಳ ಸಹಿತಲಾ ವರ
ಮಾನಿನಿಯರೆಲ್ಲರನು ನೀವೊಡಗೊಂಡು ಲೀಲೆಯಲಿ
ಸಾನುರಾಗದಿ ಬಂದು ನೋಂಪಿಯ
ನ್ಯೂನವಿಲ್ಲದೆ ನೋನ ಬೇಹುದು
ಮಾನನಿಧಿ ನೀವ್ ತೆರಳಿ ಬೇಗದೊಳೆಂದಳಾ ಕುಂತಿ (ಆದಿ ಪರ್ವ, ೨೧ ಸಂಧಿ, ೭೪ ಪದ್ಯ)

ತಾತ್ಪರ್ಯ:
ಕುಂತಿ ಗಾಂಧಾರಿ ಒಬ್ಬರನ್ನೇ ಆಹ್ವಾನಿಸದೆ ಅವರ ಪರಿವಾರದವರಾದ ಭಾನುಮತಿ ಮೊದಲಾದ ಸೊಸೆಯರೊಡನೆ ಮತ್ತು ಮಗಳಾದ ದುಶ್ಯಳೆಯೊಡನೆ ಬಂದು ಸ್ವಲ್ಪವೂ ನ್ಯೂನವಾಗದಂತೆ ವ್ರತವನ್ನು ಮಾಡಬೇಕು, ನೀವು ಬೇಗ ಬನ್ನಿರಿ, ಎಂದು ಕುಂತಿಯು ಗಾಂಧಾರಿಗೆ ಹೇಳಿದಳು.

ಅರ್ಥ:
ಮೊದಲಾದ: ಮುಂತಾದ; ಸೊಸೆ: ಗಂಡನ ಹೆಂಡತಿ; ಸೂನು:ಪುತ್ರ; ಮಕ್ಕಳು: ಮಗು, ಪುತ್ರಪುತ್ರಿಯರು; ಸಹಿತ: ಜೊತೆ; ಮಾನಿನಿ: ಹೆಂಗಸರು; ವರ:ಶ್ರೇಷ್ಠ; ಒಡಗೊಂಡು: ಜೊತೆ; ಲೀಲೆ: ಸಂತೋಷ; ಸಾನುರಾಗ:ಅನುರಾಗ; ಬಂದು: ಆಗಮಿಸಿ; ಬೇಹುದು: ಮಾಡಬೇಕು; ಮಾನ:ಗೌರವ; ನಿಧಿ: ಸಂಪತ್ತು; ತೆರಳು: ನಡೆ; ಬೇಗ: ವೇಗ, ಶೀಘ್ರ; ನೋನ: ವ್ರತವನ್ನು ಮಾಡು;

ಪದವಿಂಗಡಣೆ:
ಭಾನುಮತಿ +ಮೊದಲಾದ +ಸೊಸೆಯರು
ಸೂನು +ಮಕ್ಕಳ+ ಸಹಿತಲಾ+ ವರ
ಮಾನಿನಿಯರ್+ಎಲ್ಲರನು +ನೀವ್+ಒಡಗೊಂಡು +ಲೀಲೆಯಲಿ
ಸಾನುರಾಗದಿ+ ಬಂದು +ನೋಂಪಿಯ
ನ್ಯೂನವಿಲ್ಲದೆ+ ನೋನ +ಬೇಹುದು
ಮಾನನಿಧಿ+ ನೀವ್ +ತೆರಳಿ +ಬೇಗದೊಳ್+ಎಂದಳಾ +ಕುಂತಿ

ಅಚ್ಚರಿ:
(೧) ಸೊಸೆ, ಸೂನು, ಸಹಿತ, ಸಾನುರಾಗ; ನೋಂಪು, ನೋನ, ನ್ಯೂನತೆ – ಮ, ನ, ಕಾರದ ಪದಗಳ ಬಳಕೆ
(೨) ಗಾಂಧಾರಿಯನ್ನು ಮಾನನಿಧಿ ಎಂದು ಕುಂತಿ ಕರೆದಿರುವುದು
(೩) ನೋಂಪಿಯ ನ್ಯೂನವಿಲ್ಲದೆ ನೋನ – ನ ಕಾರದ ತ್ರಿವಳಿ ಪದ

ಪದ್ಯ ೨೯: ಜನರು ಯಾವ ದೃಶ್ಯವನು ಅಚ್ಚರಿಯಿಂದ ನೋಡುತ್ತಿದ್ದರು?

ಬಾಸಿಗದ ನೊಸಲಿನಲಿ ಮೆರೆವ ಮ
ಹೀಶರೈವರು ಮಂಟಪದ ನೆಲ
ವಾಸಿನಲಿ ಕುಳ್ಳಿರ್ದರನುಪಮ ರಾಜತೇಜದಲಿ
ಆ ಸೊಸೆಯ ಸಂಗಾತ ಕುಂತಿವಿ
ಲಾಸದಲಿ ಕುಳ್ಳಿರ್ದಳಾ ವಿ
ನ್ಯಾಸವನು ಜನ ನೋಡುತಿರ್ದುದು ಬಿಗಿದ ಬೆರಗಿನಲಿ (ಆದಿ ಪರ್ವ, ೧೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ಶ್ರೇಷ್ಟವಾದ ಉಡುಗೆ, ಆಭರಣಗಳನ್ನು ಧರಿಸಿ, ಹಣೆಯಲ್ಲಿ ಬಾಸಿಂಗವನ್ನು ಧರಿಸಿ ಆ ಐದುಜನ ಪಾಂಡವರು ಮಂಟಪದಲ್ಲಿ ರಾಜತೇಜಸ್ಸನ್ನು ಹೊಮ್ಮುತ್ತ ಕುಳಿತ್ತಿದ್ದರು. ಕುಂತಿಯು ತನ್ನ ಸೊಸೆ ದ್ರೌಪದಿಯಜೊತೆ ಕುಳಿತಿದ್ದಳು. ಈ ವಿನ್ಯಾಸವನ್ನು ಜನ ಅತೀವ ಅಚ್ಚರಿಯಿಂದ ನೋಡುತ್ತಿದ್ದರು.

ಅರ್ಥ:
ಬಾಸಿಗ: ಬಾಸಿಂಗ, ಒಂದು ಅಲಂಕಾರ ಸಾಧನ; ನೊಸಲು: ಹಣೆ; ಮೆರೆ: ಹೊಳೆ, ಪ್ರಕಾಶಿಸು; ಮಹೀಶರು: ರಾಜರು; ಮಹಿ: ಭೂಮಿ; ಮಂಟಪ: ಓಲಗಶಾಲೆ, ದರ್ಬಾರು, ಚಪ್ಪರ; ನೆಲವಾಸು: ನೆಲವೇ ಹಾಸಿಗೆ; ಕುಳ್ಳಿರ್ದರು: ಕುಳಿತಿದ್ದರು, ಆಸೀನರಾಗಿದ್ದರು; ಅನುಪಮ: ಅಸಮಾನವಾದ, ಉತ್ಕೃಷ್ಠವಾದ; ರಾಜ: ನೃಪ; ತೇಜಸ್ಸು: ಹೊಳಪು; ಸೊಸೆ: ಮಗನ ಹೆಂಡತಿ; ಸಂಗ: ಜೊತೆ; ವಿಲಾಸ: ಉಲ್ಲಾಸ, ಸಂಭ್ರಮ; ವಿನ್ಯಾಸ: ರಚನೆ; ಬಿಗಿ: ಗಟ್ಟಿ; ಬೆರಗು: ಅಚ್ಚರಿ; ನೋಡು: ವೀಕ್ಷಿಸು;

ಪದವಿಂಗಡಣೆ:
ಬಾಸಿಗದ +ನೊಸಲಿನಲಿ +ಮೆರೆವ +ಮ
ಹೀಶರ್+ಐವರು +ಮಂಟಪದ +ನೆಲ
ವಾಸಿನಲಿ +ಕುಳ್ಳಿರ್ದರ್+ಅನುಪಮ +ರಾಜ+ತೇಜದಲಿ
ಆ +ಸೊಸೆಯ +ಸಂಗಾತ +ಕುಂತಿ+ವಿ
ಲಾಸದಲಿ +ಕುಳ್ಳಿರ್ದಳ್+ಆ+ ವಿ
ನ್ಯಾಸವನು +ಜನ +ನೋಡುತಿರ್ದುದು +ಬಿಗಿದ +ಬೆರಗಿನಲಿ

ಅಚ್ಚರಿ:
(೧) “ಮ” ಕಾರದ ತ್ರಿವಳಿ ಪದ – ಮೆರೆವ ಮಹೀಶರೈವರು ಮಂಟಪದ
(೨) ಕುಳ್ಳಿರ್ದ – ೨ ಬಾರಿ ಪ್ರಯೋಗ, ೩, ೫ ಸಾಲು
(೩) ವಿಲಾಸ, ವಿನ್ಯಾಸ – ಪ್ರಾಸ ಪದ
(೪) ಜೋಡಿ ಪದ – “ಸ” – ಸೊಸೆಯ ಸಂಗಾತ, “ಬ” – ಬಿಗಿದ ಬೆರಗಿನಲಿ