ಪದ್ಯ ೪೭: ಕವಚವು ದ್ರೋಣನ ಬಳಿ ಹೇಗೆ ಬಂದಿತು?

ಇದು ಮಹಾದೇವರದು ವೃತ್ರನ
ಕದನದಲಿ ಕೈ ಸಾರ್ದುದೀಶನಿ
ನಿದು ಸುರೇಂದ್ರಂಗಾ ಸುರೇಶ್ವರನಾಂಗಿರಂಗಿತ್ತ
ಇದು ಬೃಹಸ್ಪತಿಗಾಂಗಿರನಿನಾ
ದುದು ಭರದ್ವಾಜಂಗೆ ಬಳಿಕಾ
ದುದು ಭರದ್ವಾಜಾಖ್ಯನಿತ್ತನು ತನಗೆ ಕರುಣದಲಿ (ದ್ರೋಣ ಪರ್ವ, ೧೦ ಸಂಧಿ, ೪೭ ಪದ್ಯ)

ತಾತ್ಪರ್ಯ:
ಇದು ಶಿವನ ಕವಚ, ವೃತ್ರನೊಡನೆ ಯುದ್ಧಮಾದುವಾಗ ಶಿವನು ದೇವೇಂದ್ರನಿಗೆ ಕೊಟ್ಟನು, ಇಂದ್ರನು ಇದನ್ನು ಆಂಗಿರನಿಗೆ ನೀಡಿದನು, ಅವನು ಇದನ್ನು ಬೃಹಸ್ಪತಿಗೆ ಕೊಟ್ಟನು. ಅದು ಬೃಹಸ್ಪತಿಯಿಂದ ಭರದ್ವಾಜನಿಗೆ ಬಂದಿತು, ಭರದ್ವಾಜನು ಇದನ್ನು ನನಗೆ ನೀಡಿದನು ಎಂದು ದ್ರೋಣನು ದುರ್ಯೋಧನನಿಗೆ ಹೇಳಿದನು.

ಅರ್ಥ:
ಮಹಾದೇವ: ಶಿವ, ಶಂಕರ; ಕದನ: ಯುದ್ಧ; ಸುರೇಂದ್ರ: ಇಂದ್ರ; ಇತ್ತು: ನೀಡು; ಬಳಿಕ: ನಂತರ; ಕರುಣ: ದಯೆ;

ಪದವಿಂಗಡಣೆ:
ಇದು +ಮಹಾದೇವರದು +ವೃತ್ರನ
ಕದನದಲಿ +ಕೈ +ಸಾರ್ದುದ್+ಈಶನಿ
ನಿದು +ಸುರೇಂದ್ರಂಗ್+ಆ+ ಸುರೇಶ್ವರನ್+ಆಗಿರಂಗಿತ್ತ
ಇದು +ಬೃಹಸ್ಪತಿಗ್+ಆಂಗಿರನನಿನಾ
ದುದು +ಭರದ್ವಾಜಂಗೆ +ಬಳಿಕಾ
ದುದು +ಭರದ್ವಾಜಾಖ್ಯನಿತ್ತನು +ತನಗೆ +ಕರುಣದಲಿ

ಅಚ್ಚರಿ:
(೧) ಕವಚವು ಬಂದ ಪರಿ – ಮಹಾದೇವ, ಸುರೇಂದ್ರ, ಆಂಗಿರ, ಬೃಹಸ್ಪತಿ, ಭಾರದ್ವಾಜ, ದ್ರೋಣ

ಪದ್ಯ ೫೯: ಅಭಿಮನ್ಯುವನ್ನು ಯಾರಿಗೆ ಹೋಲಿಸಿದರು?

ಆರ ರಥವಿದು ಸೈನ್ಯ ಪಾರಾ
ವಾರಕಿದನಂಘೈಸುವನು ತ್ರಿಪು
ರಾರಿಯೋ ಮೇಣಾ ತ್ರಿವಿಕ್ರಮನೋ ಸುರೇಶ್ವರನೊ
ವೀರನಹನೋ ಪೂತು ರಣದ ದೊ
ಠಾರನಿವನಾರೆನುತ ತರುಬಿಯೆ
ತೋರಹತ್ತರು ತಾಗಿದರು ಸೌಬಲ ಜಯದ್ರಥರು (ದ್ರೋಣ ಪರ್ವ, ೪ ಸಂಧಿ, ೫೯ ಪದ್ಯ)

ತಾತ್ಪರ್ಯ:
ಪದ್ಮವ್ಯೂಹದ ಮುಂದೆ ನಿಂತಿದ್ದ ಶಕುನಿ ಮತ್ತು ಜಯದ್ರಥರು, ಈ ಸೈನ್ಯ ಸಮುದ್ರವನ್ನು ತುಡುಕಲು ಬಂದ ವೀರನಾರಿರಬಹುದು? ಇವನು ಶಿವನೋ, ವಿಷ್ಣುವೋ, ಇಂದ್ರನೋ ಇರಬೇಕು. ಹೀಗೆ ಬರುವ ಈತನು ವೀರನೇ ಸರಿ. ಆದರೆ ಮಹಾಪರಾಕ್ರಮಿ ಯಾರಿದ್ದಾನು ಎಂದುಕೊಂಡು ಅಭಿಮನ್ಯುವನ್ನು ತಡೆದು ಯುದ್ಧಾರಂಭ ಮಾಡಿದರು.

ಅರ್ಥ:
ರಥ: ಬಂಡಿ; ಸೈನ್ಯ: ದಳ; ಪಾರಾವಾರ: ಸಮುದ್ರ, ಕಡಲು, ಎಲ್ಲೆ; ಅಂಘೈಸು: ಬಯಸು, ಒಪ್ಪು; ತ್ರಿಪುರಾರಿ: ಶಿವ; ಮೇಣ್: ಅಥವ; ತ್ರಿವಿಕ್ರಮ: ವಿಷ್ಣು; ಸುರೇಶ್ವರ: ಇಂದ್ರ; ವೀರ: ಶೂರ; ಪೂತು: ಕೊಂಡಾಟದ ಪದ; ರಣ: ಯುದ್ಧರಂಗ; ದೊಠಾರ: ಶೂರ, ಕಲಿ; ತರುಬು: ತಡೆ, ನಿಲ್ಲಿಸು; ತೋರು: ಕಾಣಿಸು; ತಾಗು: ಪೆಟ್ಟು, ಎದುರಿಸು; ಸೌಬಲ: ಶಕುನಿ;

ಪದವಿಂಗಡಣೆ:
ಆರ +ರಥವಿದು +ಸೈನ್ಯ +ಪಾರಾ
ವಾರಕಿದನ್+ಅಂಘೈಸುವನು +ತ್ರಿಪು
ರಾರಿಯೋ +ಮೇಣ್+ಆ+ ತ್ರಿವಿಕ್ರಮನೋ +ಸುರೇಶ್ವರನೊ
ವೀರನಹನೋ +ಪೂತು +ರಣದ +ದೊ
ಠಾರನಿವನ್+ಆರೆನುತ +ತರುಬಿಯೆ
ತೋರಹತ್ತರು+ ತಾಗಿದರು +ಸೌಬಲ +ಜಯದ್ರಥರು

ಅಚ್ಚರಿ:
(೧) ಅಭಿಮನ್ಯುವನ್ನು ಹೋಲಿಸುವ ಪರಿ – ಸೈನ್ಯ ಪಾರಾವಾರಕಿದನಂಘೈಸುವನು ತ್ರಿಪು
ರಾರಿಯೋ ಮೇಣಾ ತ್ರಿವಿಕ್ರಮನೋ ಸುರೇಶ್ವರನೊ
(೨) ವೀರ, ದೊಠಾರ – ಸಾಮ್ಯಾರ್ಥ ಪದ

ಪದ್ಯ ೨೦: ಧೌಮ್ಯರು ಪುನಃ ಯಾರನ್ನು ಭಜಿಸಲು ಹೇಳಿದರು?

ಕ್ಷತ್ರ ತೇಜದ ತೀವ್ರಪಾತ ನಿ
ಮಿತ್ತ ನಿಮಗಂಜನು ಸುರೇಶ್ವರ
ಸತ್ಯಕೆಡುವೊಡೆ ಸಾರೆಯಿದೆಲಾ ಕೌರವನ ನಗರ
ಸತ್ಯಮಾರಿಯ ಸುರಭಿಗಳುಪಿದ
ಕಾರ್ತವೀರ್ಯಾರ್ಜುನನ ಕಥೆಯನು
ಮತ್ತೆ ಹೇಳುವೆ ಭಜಿಸು ಕೃಷ್ಣನನೆಂದನಾ ಧೌಮ್ಯ (ಅರಣ್ಯ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಇಂದ್ರನು ನಿಮ್ಮ ಕ್ಷಾತ್ರ ತೇಜಸ್ಸಿಗೆ ಹೆದರುವವನಲ್ಲ. ಸತ್ಯವನ್ನು ಮೀರಬೇಕೆಂದರೆ ಹತ್ತಿರದಲ್ಲೇ ಕೌರವನ ರಾಜಧಾನಿಯಿದೆ ಅಲ್ಲಿಗೇ ನೀನು ನುಗ್ಗಬಹುದು, ಕಾಮಧೇನುವನ್ನು ಪಡೆಯಲೆಳಸಿದ ಸತ್ಯಹೀನನಾದ ಕಾರ್ತಿವೀರ್ಯಾರ್ಜುನನ ಕಥೆಯನ್ನು ಆಮೇಲೆ ಹೇಳುತ್ತೇನೆ. ಈಗ ಶ್ರೀಕೃಷ್ಣನನ್ನು ಭಜಿಸಿರಿ ಎಂದು ಧೌಮ್ಯನು ಬುದ್ಧಿವಾದವನ್ನು ಹೇಳಿದನು.

ಅರ್ಥ:
ಕ್ಷತ್ರ: ಕ್ಷತ್ರಿಯ; ತೇಜ: ತೇಜಸ್ಸು; ತೀವ್ರ: ಬಹಳ; ಪಾತ: ಪತನ; ನಿಮಿತ್ತ: ನೆಪ, ಕಾರಣ; ಅಂಜು: ಹೆದರು; ಸುರೇಶ್ವರ: ಇಂದ್ರ; ಸತ್ಯ: ದಿಟ, ನಿಜ; ಎಡುವು: ಬೀಳು; ಸಾರೆ: ಪ್ರಕಟಿಸು; ನಗರ: ಊರು; ಸತ್ಯ: ನಿಜ; ಮಾರಿ: ಕೇಡು, ಹಾನಿ; ಸುರಭಿ: ಕಾಮಧೇನುವಿನ ಮಗಳು; ಅಳುಪು: ಭಂಗತರು, ಬಯಸು; ಕಥೆ: ವಿವರಣೆ; ಮತ್ತೆ: ಆಮೇಲೆ; ಹೇಳು: ತಿಳಿಸು; ಭಜಿಸು: ಪ್ರಾರ್ಥಿಸು;

ಪದವಿಂಗಡಣೆ:
ಕ್ಷತ್ರ +ತೇಜದ +ತೀವ್ರ+ಪಾತ +ನಿ
ಮಿತ್ತ +ನಿಮಗ್+ಅಂಜನು +ಸುರೇಶ್ವರ
ಸತ್ಯಕ್+ಎಡುವೊಡೆ +ಸಾರೆಯಿದೆಲಾ+ ಕೌರವನ+ ನಗರ
ಸತ್ಯಮಾರಿಯ +ಸುರಭಿಗ್+ಅಳುಪಿದ
ಕಾರ್ತವೀರ್ಯಾರ್ಜುನನ+ ಕಥೆಯನು
ಮತ್ತೆ+ ಹೇಳುವೆ +ಭಜಿಸು +ಕೃಷ್ಣನನ್+ಎಂದನಾ +ಧೌಮ್ಯ

ಅಚ್ಚರಿ:
(೧) ಸತ್ಯಹೀನ ಎಂದು ಹೇಳಲು – ಸತ್ಯಮಾರಿ ಪದದ ಬಳಕೆ

ಪದ್ಯ ೩೯: ದೇವೆಂದ್ರನ ಸಭೆ ಹೇಗೆ ರಂಜಿಸಿತು?

ಎವಗೆ ತವಗೆಂದೀ ಹವಿರ್ಭಾ
ಗವನು ಮುತ್ತಿತು ದೇವತತಿ ಸುರ
ಯುವತಿಯರೊಳೂರ್ವಶಿ ತಿಲೋತ್ತಮೆ ರಂಭೆ ಮೇನಕೆಯು
ದಿವಿಜರೊಳ ಹಸುಗೆಗಳ ಲೆಕ್ಕದ
ಸವಬೆಸನ ಸವಿವಾಯ ತುತ್ತಿನ
ತವಕಿಗರು ಹೊಯ್ದಾಡಿದರು ಸಭೆಯಲಿ ಸುರೇಶ್ವರನ (ಸಭಾ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಯಜ್ಞದಲ್ಲಿ ನೀಡಿದ ಹವಿಸ್ಸು ದೇವಲೋಕ ಸೇರಲು, ಸುರರು ನಮಗೆ ತಮಗೆ ಎಂದು ಮುತ್ತಿ ಹವಿಸ್ಸನ್ನು ಸ್ವೀಕರಿಸಿದರು. ಊರ್ವಶಿ, ತಿಲೋತ್ತಮೆ, ರಂಭೆ, ಮೇನಕೆಯರಿಗೂ ಭಾಗ ಬಂದಿತು. ದೇವತೆಗಳಿಗೆ ಸಂದ ಹವಿಸ್ಸಿನ ಪಾಲು ಹಂಚಿಕೆಯಲ್ಲಿ ಭಾಗಪಡೆದು ತುತ್ತಿನಿಂದ ಬಾಯನ್ನು ಸಿಹಿಮಾದಿಕೊಳ್ಳಲೆಂದು ದೊಡ್ಡ ಗದ್ದಲವೇ ಆಗಿ ದೇವೆಂದ್ರನ ಸಭೆ ರಂಜಿಸಿತು.

ಅರ್ಥ:
ಎವಗೆ: ನಿನಗೆ; ತವಗೆ: ನಮಗೆ; ಹವಿಸ್ಸು: ಅಗ್ನಿಗೆ ಹಾಕುವ ಆಹುತಿ; ಮುತ್ತು: ಸುತ್ತುವರಿ; ದೇವ: ಸುರರು; ತತಿ: ಗುಂಪು; ಸುರಯುವತಿ: ಅಪ್ಸರೆ; ದಿವಿಜ: ಸುರರು; ಹಸುಗೆ: ಹಂಚಿಕೆ, ವಿತರಣೆ; ಲೆಕ್ಕ: ಗಣನೆ; ಸವ: ಸವಬೆಸನ: ಸಮಾನವಾದ ಕಾರ್ಯ; ಸುರೇಶ್ವರ: ಇಂದ್ರ; ತುತ್ತು: ಆಹಾರ; ವಾಯ: ಹಂಚಿಕೆ; ತವಕಿ: ಕಾತುರ; ಹೊಯ್ದಾಡು: ಗುದ್ದಾಡು; ಸಭೆ: ಓಲಗ;

ಪದವಿಂಗಡಣೆ:
ಎವಗೆ +ತವಗೆಂದೀ +ಹವಿರ್
ಭಾಗವನು +ಮುತ್ತಿತು +ದೇವ+ತತಿ+ ಸುರ
ಯುವತಿಯರೊಳ್+ಊರ್ವಶಿ+ ತಿಲೋತ್ತಮೆ+ ರಂಭೆ+ ಮೇನಕೆಯು
ದಿವಿಜರೊಳ+ ಹಸುಗೆಗಳ+ ಲೆಕ್ಕದ
ಸವಬೆಸನ+ ಸವಿವಾಯ +ತುತ್ತಿನ
ತವಕಿಗರು+ ಹೊಯ್ದಾಡಿದರು+ ಸಭೆಯಲಿ +ಸುರೇಶ್ವರನ

ಅಚ್ಚರಿ:
(೧) ಎವಗೆ ತವಗೆ – ಪ್ರಾಸ ಪದಗಳು
(೨) ೪ ಅಪ್ಸರೆಯರ ಹೆಸರು ೩ ಸಾಲಿನಲ್ಲಿ
(೩) ಸುರಯುವತಿ, ಸುರೇಶ್ವರ – ಸುರ ಪದದ ಬಳಕೆ