ಪದ್ಯ ೫೨: ಅಶ್ವತ್ಥಾಮನು ಹೇಗೆ ಶಿಬಿರಕ್ಕೆ ಹಿಂದಿರುಗಿದನು?

ಏನು ಮಾಡುವೆನಿನ್ನು ಭಾಗ್ಯವಿ
ಹೀನನಕಟಾ ಕೌರವನು ಸುರ
ಧೇನು ನೆರೆ ಗೊಡ್ಡಾಯ್ತು ಸುರತರು ಕಾಡಮರನಾಯ್ತು
ಹಾನಿಯಿವದಿರಿಗೊಲಿದುದಾರಿ
ದ್ದೇನಹುದು ಪರದೈವದನುಸಂ
ಧಾನವತ್ತಲು ಸುಡಲೆನುತ ತಿರುಗಿದನು ಪಾಳೆಯಕೆ (ದ್ರೋಣ ಪರ್ವ, ೧೯ ಸಂಧಿ, ೫೨ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ನಾನಿನ್ನೇನು ಮಾಡಲಿ, ಕಾಮಧೇನು ಗೊಡ್ಡಾಯಿತು, ನಾರಾಯಣಾಸ್ತ್ರವು ನಿಷ್ಫಲವಾಯಿತು, ಕಲ್ಪವೃಕ್ಷವು ಕಾಡುಮರವಾಯಿತು. ಕೌರವನು, ಅಯ್ಯೋ ಭಾಗ್ಯಹೀನನು, ಇವರಿಗೆ ಹಾನಿಯು ಒಲಿದು ಬಂದರೆ ಯಾರಿದ್ದು ಏನು ಮಾಡಲು ಸಾಧ್ಯ, ಸುಡಲಿ, ಪರದೈವವು ಪಾಂಡವರತ್ತ ಒಲಿದಿದೆ, ಎಂದು ಚಿಂತಿಸುತ್ತಾ ಪಾಳೆಯಕ್ಕೆ ಹೋದನು.

ಅರ್ಥ:
ಭಾಗ್ಯ: ಮಂಗಳ; ವಿಹೀನ: ತೊರೆದ, ತ್ಯಜಿಸಿದ; ಅಕಟಾ: ಅಯ್ಯೋ; ಸುರಧೇನು: ಕಾಮಧೇನು; ನೆರೆ: ಗುಂಪು; ಗೊಡ್ಡು: ಗಬ್ಬವಾಗದ ಹಸು, ನಿಷ್ಫಲತೆ; ಸುರತರು: ಕಲ್ಪವೃಕ್ಷ; ಕಾಡು: ವನ; ಮರ: ತರು; ಹಾನಿ: ನಷ್ಟ; ಒಲಿ: ಒಪ್ಪು; ಪರದೈವ: ಪರಮಾತ್ಮ; ಅನುಸಂಧಾನ: ಪರಿಶೀಲನೆ; ಸುಡು: ದಹಿಸು; ತಿರುಗು: ಮರಳು; ಪಾಳೆಯ: ಬೀಡು, ಶಿಬಿರ;

ಪದವಿಂಗಡಣೆ:
ಏನು +ಮಾಡುವೆನ್+ಇನ್ನು +ಭಾಗ್ಯವಿ
ಹೀನನ್+ಅಕಟಾ +ಕೌರವನು +ಸುರ
ಧೇನು +ನೆರೆ +ಗೊಡ್ಡಾಯ್ತು +ಸುರತರು +ಕಾಡಮರನಾಯ್ತು
ಹಾನಿಯಿವದಿರಿಗ್+ಒಲಿದುದ್+ಆರಿ
ದ್ದೇನಹುದು +ಪರದೈವದ್+ಅನುಸಂ
ಧಾನವ್+ಅತ್ತಲು +ಸುಡಲೆನುತ +ತಿರುಗಿದನು +ಪಾಳೆಯಕೆ

ಅಚ್ಚರಿ:
(೧) ರೂಪಕದ ಪ್ರಯೋಗ – ಸುರಧೇನು ನೆರೆ ಗೊಡ್ಡಾಯ್ತು ಸುರತರು ಕಾಡಮರನಾಯ್ತು

ಪದ್ಯ ೬೭: ದುರ್ಯೋಧನನು ಯಾರ ಮೊರೆಗೆ ಹೋದನು?

ಆನೆಗಳು ಮರಳಿದವು ಸುಭಟ ನಿ
ಧಾನರೋಸರಿಸಿದರು ಫಡ ಸುರ
ಧೇನುಗಳಲಾ ಕರೆಯರೇ ಪರಬಲಕೆ ವಾಂಛಿತವ
ಈ ನಪುಂಸಕರುಗಲ ನಂಬಿದ
ನಾನು ನೀತಿಜ್ಞನೆ ಮಹಾದೇ
ವೇನ ಹೇಳುವೆನೆನುತ ಭೀಷ್ಮನ ಹೊರೆಗೆ ನಡೆತಂದ (ಭೀಷ್ಮ ಪರ್ವ, ೮ ಸಂಧಿ, ೬೭ ಪದ್ಯ)

ತಾತ್ಪರ್ಯ:
ಆನೆಗಳು ಹಿಂದಿರುಗಿ ಬಂದವು, ಮಹಾವೀರರು ಹಿಮ್ಮೆಟ್ಟಿದರು, ಇವರೆಲ್ಲರೂ ಶತ್ರು ಸೈನ್ಯವು ಬೇಡಿದುದನ್ನೆಲ್ಲಾ ಕೊಡವ ಕಾಮಧೇನುಗಳಲ್ಲವೇ? ಈ ನಪುಂಸಕರನ್ನು ನಂಬಿದ ನಾನು ರಾಜನೀತಿಯನ್ನು ಬಲ್ಲವನೆಂದು ಹೇಗೆ ಹೇಳಿಕೊಳ್ಳಲಿ ಶಿವಶಿವಾ ಎಂದುಕೊಂಡು ದುರ್ಯೋಧನನು ಭೀಷ್ಮನ ಬಳಿಗೆ ಹೋದನು.

ಅರ್ಥ:
ಆನೆ: ಕರಿ;ಮರಳು: ಹಿಂದಿರುಗು; ಸುಭಟ: ಪರಾಕ್ರಮಿ; ನಿಧಾನ: ನಿರ್ಧಾರ, ಸಾವಕಾಶ; ಓಸರಿಸು: ಓರೆಮಾಡು, ಹಿಂಜರಿ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಸುರಧೇನು: ಕಾಮಧೇನು; ಕರೆ: ಬರೆಮಾಡು; ಪರಬಲ: ವೈರಿಸೈನ್ಯ; ವಾಂಛಿತ: ಬಯಸಿದುದು; ನಪುಂಸಕ: ಷಂಡ, ಬಲಹೀನ; ನಂಬು: ವಿಶ್ವಾಸವಿಡು; ನೀತಿ: ಒಳ್ಳೆಯ ಉಪದೇಶ; ಹೇಳು: ತಿಳಿಸು; ಹೊರೆ: ಆಶ್ರಯ; ನಡೆತಂದು: ಬಂದುಸೇರು;

ಪದವಿಂಗಡಣೆ:
ಆನೆಗಳು +ಮರಳಿದವು +ಸುಭಟ +ನಿ
ಧಾನರ್+ಓಸರಿಸಿದರು +ಫಡ +ಸುರ
ಧೇನುಗಳಲಾ +ಕರೆಯರೇ +ಪರಬಲಕೆ+ ವಾಂಛಿತವ
ಈ +ನಪುಂಸಕರುಗಲ +ನಂಬಿದ
ನಾನು +ನೀತಿಜ್ಞನೆ+ ಮಹಾದೇವ
ಏನ +ಹೇಳುವೆನ್+ಎನುತ +ಭೀಷ್ಮನ +ಹೊರೆಗೆ +ನಡೆತಂದ

ಅಚ್ಚರಿ:
(೧) ದುರ್ಯೋಧನನು ಬೇಸರ ಪಡುವ ಪರಿ – ಈ ನಪುಂಸಕರುಗಲ ನಂಬಿದ ನಾನು ನೀತಿಜ್ಞನೆ ಮಹಾದೇವ

ಪದ್ಯ ೮೧: ಕೃಷ್ಣನನ್ನು ಅರ್ಜುನನು ಹೇಗೆ ಹೊಗಳಿದನು?

ನಳಿನನಾಭ ಮುಕುಂದ ಮಂಗಳ
ನಿಳಯ ಭಕ್ತವ್ಯಸನಿ ದೈತ್ಯ
ಪ್ರಳಯಪಾವಕ ಭಕ್ತವತ್ಸಲ ಭಕ್ತಸುರಧೇನು
ಲಲಿತಮೇಘಶ್ಯಾಮ ಸೇವಕ
ಸುಲಭ ಶೌರಿ ಮುರಾರಿ ಭಕ್ತಾ
ವಳಿ ಕುಟುಂಬಿಕ ಕೃಷ್ಣ ಕೇಶವ ಕರುಣಿಸೆನಗೆಂದ (ಭೀಷ್ಮ ಪರ್ವ, ೩ ಸಂಧಿ, ೮೧ ಪದ್ಯ)

ತಾತ್ಪರ್ಯ:
ಕಮಲನಾಭ, ಮುಕುಂದ ಮಂಗಳಗಳ ಆವಾಸಸ್ಥಾನವೇ, ಭಕ್ತರೊಡನಾಡುವ ಚಿಂತೆಯುಳ್ಳವನೇ, ರಾಕ್ಷಸರಿಗೆ ಪ್ರಳಯಾಗ್ನಿಯಂತಿರುವವನೇ, ಭಕ್ತವತ್ಸಲ, ಭಕ್ತರಿಗೆ ಕಾಮಧೇನುವಿನಂತಿರುವವನೇ, ಸುಂದರನಾದ ಮೇಘಶ್ಯಾಮನೇ, ಸೇವಕರಿಗೆ ಸುಲಭನಾಗಿರುವವನೇ, ಶೌರಿ, ಮುರಾರಿ, ಭಕ್ತ ಕುಟುಂಬಿ, ಕೃಷ್ಣ, ಕೇಶವ ನನ್ನಲ್ಲಿ ಕರುಣೆ ತೋರು ಎಂದು ಕೃಷ್ಣನನ್ನು ಹೊಗಳಿದನು.

ಅರ್ಥ:
ನಳಿನನಾಭ: ಹೊಕ್ಕಳಲ್ಲಿ ಕಮಲವನ್ನಿಟ್ಟುಕೊಂಡಿರುವವನೇ; ಮಂಗಳ: ಶುಭ; ನಿಳಯ: ಆಲಯ; ಭಕ್ತ: ಆರಾಧಕ; ವ್ಯಸನಿ: ತಲ್ಲೀನ; ದೈತ್ಯ: ರಾಕ್ಷಸ; ಪ್ರಳಯ: ಸಾವು, ಮರಣ; ಪಾವಕ: ಅಗ್ನಿ, ಬೆಂಕಿ; ವತ್ಸಲ: ಪ್ರೀತಿಸುವ; ಸುರಧೇನು: ಕಾಮಧೇನು; ಲಲಿತ: ಸುಂದರವಾದ; ಮೇಘ: ಮೋಡ; ಶ್ಯಾಮ: ಕಪ್ಪು; ಸೇವಕ: ದಾಸ; ಸುಲಭ: ನಿರಾಯಾಸ; ಆವಳಿ: ಗುಂಪು, ಸಾಲು; ಕುಟುಂಬಿ: ಮನೆಯ ಯಜಮಾನ; ಕರುಣಿಸು: ದಯೆತೋರು;

ಪದವಿಂಗಡಣೆ:
ನಳಿನನಾಭ +ಮುಕುಂದ +ಮಂಗಳ
ನಿಳಯ +ಭಕ್ತವ್ಯಸನಿ +ದೈತ್ಯ
ಪ್ರಳಯಪಾವಕ +ಭಕ್ತವತ್ಸಲ+ ಭಕ್ತ+ಸುರಧೇನು
ಲಲಿತ+ಮೇಘಶ್ಯಾಮ +ಸೇವಕ
ಸುಲಭ +ಶೌರಿ +ಮುರಾರಿ +ಭಕ್ತಾ
ವಳಿ +ಕುಟುಂಬಿಕ +ಕೃಷ್ಣ +ಕೇಶವ+ ಕರುಣಿಸೆನಗೆಂದ

ಅಚ್ಚರಿ:
(೧) ಕ ಕಾರದ ಸಾಲು ಪದ – ಕುಟುಂಬಿಕ ಕೃಷ್ಣ ಕೇಶವ ಕರುಣಿಸೆನಗೆಂದ
(೨) ಕೃಷ್ಣನನ್ನು ವರ್ಣಿಸಿದ ಪರಿ – ನಳಿನನಾಭ ಮುಕುಂದ ಮಂಗಳ ನಿಳಯ ಭಕ್ತವ್ಯಸನಿ ದೈತ್ಯ
ಪ್ರಳಯಪಾವಕ ಭಕ್ತವತ್ಸಲ ಭಕ್ತಸುರಧೇನು

ಪದ್ಯ ೧೮: ಭೀಮನು ಧರ್ಮಜನಿಗೆ ಏನು ಹೇಳಿದ?

ಏನಿದೇನೆಲೆ ನೃಪತಿ ಚಿತ್ತ
ಗ್ಲಾನಿಯನು ಬಿಡು ನಿನ್ನ ವಚನಕೆ
ಹಾನಿಯೇಕೈ ಸುಡುವೆನೀಗಳೆ ಸುರಪತಿಯ ಪುರವ
ತಾನೆ ಪದವಿಡಿದೆಳೆದು ತಹೆ ಸುರ
ಧೇನುವನು ನಿಮ್ಮಡಿಗೆನುತ್ತ ಕೃ
ಶಾನುಸಖಸುತ ಗದೆಯ ಕೊಂಡನು ಬೇಗ ಬೆಸಸೆನುತ (ಅರಣ್ಯ ಪರ್ವ, ೧೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧರ್ಮಜನ ಮನಸ್ಸಿನ ತಳಮಳವನ್ನರಿತ ಭೀಮನು, ಇದೇನು ಮನಸ್ಸಿನ ಚಿಂತೆಯನ್ನು ಬಿಡು. ನಿನ್ನ ಮಾತು ಹೇಗೆ ಸುಳ್ಳಾಗಲು ಸಾಧ್ಯ? ನಾನು ಈಗಲೇ ಹೋಗಿ ಅಮರಾವತಿಯನ್ನು ಧ್ವಂಸ ಮಾಡಿ, ಕಾಮಧೇನುವನ್ನು ಕಾಲು ಹಿಡಿದು ನಿನ್ನ ಬಳಿಗೆ ಎಳೆ ತರುತ್ತೇನೆ ಎಂದು ಗದೆಯನ್ನು ಹಿಡಿದು ಅಪ್ಪಣೆಯನ್ನು ನೀಡು ಎಂದು ಹೇಳಿದನು.

ಅರ್ಥ:
ನೃಪತಿ: ರಾಜ; ಚಿತ್ತ: ಮನಸ್ಸು; ಗ್ಲಾನಿ: ಬಳಲಿಕೆ, ದಣಿವು; ಬಿಡು: ತೊರೆ; ವಚನ: ಮಾತು; ಹಾನಿ: ಹಾಳು; ಸುಡು: ದಹಿಸು; ಸುರಪತಿ: ಇಂದ್ರ; ಪುರ: ಊರು; ಪದ:ಕಾಲು; ಎಳೆ: ಸೆಳೆ; ತಹ: ತರುವ; ಸುರಧೇನು: ಕಾಮಧೇನು; ಕೃಶಾನು: ಅಗ್ನಿ, ಬೆಂಕಿ; ಸಖ: ಮಿತ್ರ; ಸುತ: ಮಗ; ಗದೆ: ಮುದ್ಗರ; ಬೆಸ: ಕೆಲಸ, ಕಾರ್ಯ;

ಪದವಿಂಗಡಣೆ:
ಏನಿದೇನ್+ಎಲೆ+ ನೃಪತಿ+ ಚಿತ್ತ
ಗ್ಲಾನಿಯನು +ಬಿಡು +ನಿನ್ನ +ವಚನಕೆ
ಹಾನಿಯೇಕೈ+ ಸುಡುವೆನ್+ಈಗಳೆ +ಸುರಪತಿಯ +ಪುರವ
ತಾನೆ +ಪದವಿಡಿದ್+ಎಳೆದು +ತಹೆ +ಸುರ
ಧೇನುವನು +ನಿಮ್ಮಡಿಗ್+ಎನುತ್ತ +ಕೃ
ಶಾನುಸಖ+ಸುತ+ ಗದೆಯ +ಕೊಂಡನು +ಬೇಗ +ಬೆಸಸೆನುತ

ಅಚ್ಚರಿ:
(೧) ಭೀಮನನ್ನು ಕೃಶಾನುಸಖಸುತ, ಅಗ್ನಿಯ ಮಿತ್ರನ ಮಗ (ವಾಯು ಪುತ್ರ) ಎಂದು ಕರೆದಿರುವುದು
(೨) ಸುರಧೇನು, ಸುರಪತಿ – ಪದಗಳ ಬಳಕೆ

ಪದ್ಯ ೨೮: ವಂದಿ ಮಾಗಧರು ಹೇಗೆ ದುಃಖಿಸಿದರು?

ಕಿತ್ತರೋ ಕಲ್ಪದ್ರುಮವ ಕೆಡೆ
ಗುತ್ತಿದರೊ ಸುರಧೇನುವನು ಕೈ
ವರ್ತಿಸಿದರೋ ಪರುಷವನು ಹಾ ಜಲಧಿ ಮಧ್ಯದಲಿ
ಎತ್ತಣದು ಭಾರತದ ರಣ ನಮ
ಗೆತ್ತಲರಸುತ ಬಂದುದಕಟಾ
ಮಿತ್ತುವೆಂದೊರಲಿದರು ವಂದಿಗಳೆರಡು ಥಟ್ಟಿನಲಿ (ಕರ್ಣ ಪರ್ವ, ೨೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಎರಡೂ ಕಡೆಯ ವಂದಿ ಮಾಗಧರು ದುಃಖಪಟ್ಟರು, ಕಲ್ಪವೃಕ್ಷವನ್ನು ಕಿತ್ತು ಹಾಕಿದರು, ಕಾಮಧೇನುವನ್ನು ಇರಿದರು, ಸ್ಪರ್ಷಮಣಿಯನ್ನು ಸಮುದ್ರದ ಮಧ್ಯೆ ಎಸೆದರಲಾ, ಅಯ್ಯೋ ಈ ಮೃತ್ಯು ಸದೃಶವಾದ ಈ ಭಾರದ ಯುದ್ಧವೆಲ್ಲಿತ್ತೋ, ನಮ್ಮನ್ನು ಏಕೆ ಹುಡುಕಿಕೊಂಡು ಬಂದಿತೋ ಎಂದು ಗೋಳಿಟ್ಟರು.

ಅರ್ಥ:
ಕಿತ್ತು: ಹೊರಹಾಕು; ಕಲ್ಪದ್ರುಮ: ಕಲ್ಪವೃಕ್ಷ; ಕೆಡೆ: ಬೀಳು, ಕುಸಿ; ಕುತ್ತು: ಚುಚ್ಚು, ತಿವಿ; ಸುರಧೇನು: ಕಾಮಧೇನು; ಕೈವರ್ತಿಸು: ಅಧೀನಗೊಳಿಸು; ಪರುಷ: ಸ್ಪರ್ಷಮಣಿ; ಜಲಧಿ: ಸಾಗರ; ಮಧ್ಯ: ನಡುವೆ; ಎತ್ತಣ: ಎಲ್ಲಿಯ; ರಣ: ಯುದ್ಧ; ಅರಸುತ: ಹುಡುಕು; ಬಂದುದು: ಆಗಮಿಸು; ಅಕಟ: ಅಯ್ಯೋ; ಒರಲು: ಗೋಳಿಡು; ವಂದಿ: ಹೊಗಳುಭಟ್ಟರು; ಥಟ್ಟು: ಗುಂಪು;

ಪದವಿಂಗಡಣೆ:
ಕಿತ್ತರೋ +ಕಲ್ಪದ್ರುಮವ +ಕೆಡೆ
ಗುತ್ತಿದರೊ +ಸುರಧೇನುವನು+ ಕೈ
ವರ್ತಿಸಿದರೋ +ಪರುಷವನು+ ಹಾ +ಜಲಧಿ+ ಮಧ್ಯದಲಿ
ಎತ್ತಣದು +ಭಾರತದ +ರಣ +ನಮ
ಗೆತ್ತಲ್+ಅರಸುತ+ ಬಂದುದ್+ಅಕಟಾ
ಮಿತ್ತುವ್+ಎಂದ್+ಒರಲಿದರು +ವಂದಿಗಳ್+ಎರಡು +ಥಟ್ಟಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಲ್ಪದ್ರುಮವ ಕೆಡೆಗುತ್ತಿದರೊ, ಸುರಧೇನುವನು ಕೈ ವರ್ತಿಸಿದರೋ, ಪರುಷವನು ಹಾ ಜಲಧಿ ಮಧ್ಯದಲಿ

ಪದ್ಯ ೩೦: ಐರಾವತದ ವ್ರತಕ್ಕೆ ಯಾರನ್ನು ತರುತ್ತೇನೆಂದು ಅರ್ಜುನನು ಹೇಳಿದನು?

ಸುರಕರಿಯ ಹೋಲಿಕೆಗೆ ಕೌರವ
ರೆರೆಯ ಮಣ್ಣಲಿ ಮಾಡಿ ನೋಂತರೆ
ಧರೆಯ ಜನವೈತಂದು ನೋಡಿತಿದಾವ ಘನವೆಂದು
ಸುರಪನೈರಾವತವನಾ ಸುರ
ತರುಣಿಯರ ಸುರಧೇನುವನು ನ
ಮ್ಮರಮನೆಗೆ ತಹೆನೆನುತ ಧನುವನು ಕೊಂಡನಾ ಪಾರ್ಥ (ಆದಿ ಪರ್ವ, ೨೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಐರಾವತವನ್ನು ಹೋಲುವ ಹಾಗೆ ಹುತ್ತದ ಮಣ್ಣಿನಲ್ಲಿ ಆನೆಯ ಪ್ರತಿಕೃತಿಯನ್ನು ರಚಿಸಿ ಗಾಂಧಾರಿಯು ಪೂಜೆಯನ್ನು ಸಲ್ಲಿಸಿದಳು, ಇದನ್ನು ಇಡೀ ಜನಸ್ತೋಮ ನೋಡಿತು, ಇದು ಯಾವ ಮಹತ್ಕಾರ್ಯ. ನಾನು ದೇವೇಂದ್ರನ ಐರಾವತವನ್ನು, ಕಾಮಧೇನುವನ್ನು ನಮ್ಮ ಅರಮನೆಗೆ ತರಿಸಿ ಅದಕ್ಕೆ ಪೂಜೆ ಸಲ್ಲಿಸಲು ಅಣಿಮಾಡುತ್ತೇನೆಂದು ತನ್ನ ಧನುವನ್ನು ಕೊಂಡನು.

ಅರ್ಥ:
ಸುರಕರಿ: ಐರಾವತ; ಹೋಲಿಕೆ: ಸಾಮ್ಯ; ಎರೆಯ ಮಣ್ಣು: ಹುತ್ತದ ಮಣ್ಣು; ಮಾಡಿ: ನಿರ್ಮಿಸಿ; ನೋಂತು: ವ್ರತ; ಧರೆ: ಭೂಮಿ; ಜನ: ಮನುಷ್ಯ; ನೋಡು: ವೀಕ್ಷಿಸು; ಘನ: ಶ್ರೇಷ್ಠ; ಸುರಪ: ಇಂದ್ರ; ಸುರತರುಣಿ: ಅಪ್ಸರೆ; ಸುರಧೇನು: ಕಾಮಧೇನು; ಅರಮನೆ: ರಾಜರ ವಾಸಸ್ಥಾನ; ತಹೆನು: ತರುವೆನು; ಧನು: ಬಿಲ್ಲು; ಕೊಂಡನು: ತೆಗೆದುಕೊಂಡನು;

ಪದವಿಂಗಡಣೆ:
ಸುರಕರಿಯ+ಹೋಲಿಕೆಗೆ +ಕೌರವರ್
ಎರೆಯ +ಮಣ್ಣಲಿ +ಮಾಡಿ +ನೋಂತರೆ
ಧರೆಯ +ಜನವ್+ಐತಂದು +ನೋಡಿತ್+ಇದಾವ +ಘನವೆಂದು
ಸುರಪನ್+ಐರಾವತವನ್ನಾ+ಆ+ಸುರ
ತರುಣಿಯರ +ಸುರಧೇನುವನು +ನಮ್ಮ್
ಅರಮನೆಗೆ +ತಹೆನೆನುತ+ ಧನುವನು +ಕೊಂಡನಾ +ಪಾರ್ಥ

ಅಚ್ಚರಿ:
(೧) ಸುರಪ, ಸುರಧೇನು, ಸುರತರುಣಿ – “ಸುರ” ದಿಂದ ಪ್ರಾರಂಭವಾಗುವ ಪದ
(೨) ಇದಾವ ಘನ – ಇದೇನು ಮಹ, ಅರ್ಜುನನ ನುಡಿಗಳು

ಪದ್ಯ ೯೬: ಕುಂತಿ ಕಾಮಧೇನುವನ್ನು ಹೇಗೆ ಪೂಜಿಸಿದಳು?

ನಡೆದು ಬಂದಳು ಧೇನುವನು ಕಂ
ಡೆಡೆಗೆಡಹಿ ತನ್ನೊಡಲ ಚರಣದ
ನಡುವೆ ಪದ್ಮವ ಬರೆದು ಕಾಣಿಕೆಗೊಟ್ಟು ಪೊಡವಟ್ಟು
ಮಡದಿ ಗಂಧಾಕ್ಷತೆಯ ಪುಷ್ಪವ
ಹಿಡಿದು ಧೂಪನಿವಾಳಿಯಿಂದವ
ಕಡುಗರುವೆ ಸುರಧೇನುವನು ಪೂಜಿಸಿದಳಾ ಕುಂತಿ (ಆದಿ ಪರ್ವ, ೨೧ ಸಂಧಿ, ೯೬ ಪದ್ಯ)

ತಾತ್ಪರ್ಯ:
ಐರಾವತವನ್ನು ಪೂಜಿಸಿದ ನಂತರ ಕುಂತಿಯು ಕಾಮಧೇನುವಿದ್ದೆಡೆಗೆ ಬಂದಳು. ಕಾಮಧೇನುವಿಗೆ ನಮಸ್ಕರಿಸಿ, ಅದರ ಪಾದದ ನಡುವೆ ಕಮಲವನ್ನು ಚಿತ್ರಿಸಿ (ರಂಗೋಲಿ ಇಟ್ಟು), ಕಾಣಿಕೆಗಳನ್ನು ಅರ್ಪಿಸಿ, ಗಂಧ, ಅಕ್ಷತೆ, ಹೂವ, ಧೂಪ, ದೀಪಾದಿಗಳಿಂದ ಪೂಜಿಸಿ, ಅದಕ್ಕೆ ದೃಷ್ಟಿಯಾಗದಂತೆ ನಿವಾಳಿಸಿದಳು.

ಅರ್ಥ:
ನಡೆದು: ನಡೆ, ಮುನ್ನಡೆ; ಬಂದಳು: ಆಗಮಿಸು; ಧೇನು: ಹಸು, ಕಾಮಧೇನು; ಎಡಹು: ಎಡವು, ಬೀಳು; ಒಡಲು: ಹೊಟ್ಟೆ, ಶರೀರ; ಚರಣ; ಪಾದ; ನಡುವೆ: ಮಧ್ಯ; ಪದ್ಮ:ಕಮಲ; ಬರೆ: ಚಿತ್ರಿಸು; ಕಾಣಿಕೆ: ಉಡುಗೊರೆ; ಪೊಡವಡು: ನಮಸ್ಕರಿಸು; ಮಡದಿ: ಹೆಂಡತಿ, ಸ್ತ್ರೀ; ಗಂಧ: ಸುವಾಸನೆ; ಅಕ್ಷತೆ: ಮಂತ್ರಿಸಿದ ಅಕ್ಕಿ; ಪುಷ್ಪ: ಹೂವು; ಹಿಡಿ: ಬಂಧಿಸು; ಧೂಪ:ಸುವಾಸನೆಯ ಪುಡಿ; ದೀಪ: ದೀವಿಗೆ; ನಿವಾಳಿ:ದೃಷ್ಟಿದೋಷ ಪರಿಹಾರಕ್ಕಾಗಿ ಇಳಿ ತೆಗೆಯುವುದು; ಗರುವ: ಶ್ರೇಷ್ಠ; ಕಡು: ಬಹಳ; ಸುರಧೇನು: ಕಾಮಧೇನು; ಪೂಜಿಸು: ಅರ್ಚಿಸು;

ಪದವಿಂಗಡಣೆ:
ನಡೆದು +ಬಂದಳು +ಧೇನುವನು +ಕಂಡ್
ಎಡೆಗೆಡಹಿ+ ತನ್ನೊಡಲ +ಚರಣದ
ನಡುವೆ +ಪದ್ಮವ+ ಬರೆದು+ ಕಾಣಿಕೆಗೊಟ್ಟು +ಪೊಡವಟ್ಟು
ಮಡದಿ+ ಗಂಧಾಕ್ಷತೆಯ+ ಪುಷ್ಪವ
ಹಿಡಿದು +ಧೂಪ+ನಿವಾಳಿಯಿಂದವ
ಕಡುಗರುವೆ+ ಸುರಧೇನುವನು+ ಪೂಜಿಸಿದಳಾ +ಕುಂತಿ

ಅಚ್ಚರಿ:
(೧) ನಮಸ್ಕರಿಸಿದಳು ಎಂದು ಹೇಳಲು – ಎಡೆಗೆಡಹಿ ತನ್ನೊಡಲ
(೨) ರಂಗೋಲೆ ಇಟ್ಟಳು ಎನ್ನಲು – ಚರಣದ ನಡುವೆ ಪದ್ಮವ ಬರೆದು
(೩) ಧೇನು – ೧, ೬ ಸಾಲಿನಲ್ಲಿ ಬರುವ ಪದ

ಪದ್ಯ ೬೫: ಐರಾವತದೊಂದಿಗೆ ಮತ್ತಾರು ಬಂದರು?

ಬಳಿಕ ತುಂಬುರು ನಾರದಾದ್ಯರು
ಕುಲಿಶವನು ಸುರಧೇನು ಸುರತರು
ಲಲನೆಯರು ಮೊದಲಾದ ನಾನಾವಸ್ತು ಸಂಕುಲವ
ಬಲವಿರೋಧಿಯ ಗಜದ ಬೆಂಬಳಿ
ಯೊಳಗೆ ಕಳುಹಲು ಸರಳ ಪಂಜರ
ಕಿಳೆ ಜಡಿಯೆ ನಡೆಯಿತ್ತು ಗಜಪುರಿಗರಸ ಕೇಳೆಂದ (ಆದಿ ಪರ್ವ, ೨೧ ಸಂಧಿ, ೬೫ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಆನೆಯ ಮೇಲೆ ಊರ್ವಶಿ ಮತ್ತಿತರ ಸುರಸತಿಯರು ಹೊರಡಲು ಸಿದ್ಧರಾದಾಗ, ಅಲ್ಲಿ ನೆರೆದಿದ್ದ ನಾರದಾದಿ ಮುನಿವರೇಣ್ಯರು, ವಜ್ರಾಯುಧ, ಕಾಮಧೇನು, ಕಲ್ಪವೃಕ್ಷ, ದೇವತಾಸ್ತ್ರೀಯರೆ ಮೊದಲಾದವರನ್ನು ಐರಾವತದ ಹಿಂದೆ ಕಳಿಸಿದರು. ಶರಪಂಜರದ ಮೇಲೆ ಸ್ವರ್ಗದಿಂದ ಇವರೆಲ್ಲಾ ಇಳಿಯುತ್ತಿರಲು ಭೂಮಿ ಅಲುಗಾಡಿತು.

ಅರ್ಥ:
ಬಳಿಕ: ನಂತರ; ತುಂಬುರ:ಒಂದು ಬಗೆಯ ವೀಣೆ; ಆದ್ಯ: ಮುಂತಾದವರು; ಕುಲಿಶ: ವಜ್ರಾಯುಧ;ಸುರಧೇನು: ಕಾಮಧೇನು; ಸುರತರು: ಕಲ್ಪವೃಕ್ಷ; ಲಲನೆ: ಸ್ತ್ರೀ; ಮೊದಲಾದ: ಮುಂತಾದ;ನಾನಾ: ವಿಧವಿಧವಾದ; ವಸ್ತು: ಸಾಮಗ್ರಿ; ಸಂಕುಲ: ಗುಂಪು; ಬೆಂಬಳಿ: ಬೆನ್ನ ಹಿಂದೆ ರಕ್ಷಣೆ; ಕಳುಹಲು: ಕಳುಹಿಸಲು, ಸರಳ: ಸರಾಗ,ಬಾಣ; ಸುಲಭ; ಪಂಜರ: ಗೂಡು; ಜಡಿ: ಭಾರದಿಂದ ಕೆಳಕ್ಕೆ ಜೋಲು; ನಡೆ: ಹೆಜ್ಜೆಹಾಕು; ಅರಸ: ರಾಜ; ಗಜ: ಆನೆ; ಪುರಿ:ಊರು; ಇಳೆ: ಭೂಮಿ;

ಪದವಿಂಗಡಣೆ:
ಬಳಿಕ +ತುಂಬುರು +ನಾರದಾದ್ಯರು
ಕುಲಿಶವನು +ಸುರಧೇನು +ಸುರತರು
ಲಲನೆಯರು +ಮೊದಲಾದ+ ನಾನಾವಸ್ತು +ಸಂಕುಲವ
ಬಲವಿರೋಧಿಯ +ಗಜದ+ ಬೆಂಬಳಿ
ಯೊಳಗೆ +ಕಳುಹಲು+ ಸರಳ +ಪಂಜರಕ್
ಇಳೆ +ಜಡಿಯೆ +ನಡೆಯಿತ್ತು +ಗಜಪುರಿಗ್+ಅರಸ+ ಕೇಳೆಂದ

ಅಚ್ಚರಿ:
(೧) ಭೂಮಿ ಅಲುಗಾಡಿತು ಎಂದು ವರ್ಣಿಸಲು – ಇಳೆ ಜಡಿಯೆ ನಡೆಯಿತ್ತು
(೨) “ಸುರ” ಪದದಿಂದ ಬಳಸಿದ ಪದಗಳು – ಸುರಧೇನು, ಸುರತರು

ಪದ್ಯ ೪೦: ಅರ್ಜುನನು ಪತ್ರದಲ್ಲಿ ಏನನ್ನು ಕಳುಹಿಸಲು ಕೇಳಿದ್ದನು?

ಕಳುಹಿಸುವುದೈರಾವತವ ಬಲು
ಕುಲಿಶವನು ಸುರಧೇನು ಸುರತರು
ಸುಲಲಿತಾಶ್ವವ ರಂಭೆ ತುಂಬುರು ನಾರದಾದಿಗಳ
ಕೆಲಸಮಾಡಲು ನಿಮ್ಮ ಭವನದ
ನಳಿನಮುಖಿಯರ ಕಳುಹು ಸುರಪತಿ
ಬಲುಹ ನುಡಿದರೆ ನಿನ್ನ ಕತದಲಿ ಕೆಡುವುದಾ ಲೋಕ (ಆದಿ ಪರ್ವ, ೨೧ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಪತ್ರದಲ್ಲಿ ವ್ರತಕ್ಕೆ ಬೇಕಾಗುವುದನ್ನು ಬರೆದಿದ್ದನು. ಇಂದ್ರನಿಗೆ ಸಂಭೋದಿಸಿದ ಆ ಪತ್ರದಲ್ಲಿ, ನಿನ್ನ ಬಳಿಯಿರುವ ಶ್ರೇಷ್ಠವಾದ ಆನೆ, ಐರವಾತ, ವಜ್ರಾಯುಧ, ಕಾಮಧೇನು, ಕಲ್ಪವೃಕ್ಷ, ಉಚ್ಚೈಶ್ರವಸ್ಸು, ರಂಬೆ ಮುಂತಾದ ಅಪ್ಸರಸ್ತ್ರೀಯರು, ತುಂಬುರು, ನಾರದರು, ನಿಮ್ಮ ಭವನದಲ್ಲಿ ಕೆಲಸಮಾಡುವ ಸ್ತ್ರೀಯರು, ಇವೆಲ್ಲವನ್ನು ನನ್ನ ತಾಯಿ ಮಾಡುವ ವ್ರತಕ್ಕೆ ಕಳುಹಿಸು, ನೀನೇನಾದರು ಇದಕ್ಕೆ ಒಪ್ಪದೆ ಹೆಮ್ಮೆಯ ಮಾತುಗಳನ್ನಾಡಿದರೆ, ಸ್ವರ್ಗಲೋಕವು ಕೆಟ್ಟುಹೋದೀತು.

ಅರ್ಥ:
ಕಳುಹಿಸು: ರವಾನಿಸು; ಕುಲಿಶ: ವಜ್ರಾಯುಧ, ಬೆಟ್ಟ; ಧೇನು: ಹಸು; ಸುರಧೇನು: ಕಾಮಧೇನು; ತರು: ಮರ; ಸುರತರು: ಕಲ್ಪವೃಕ್ಷ; ಅಶ್ವ: ಕುದುರೆ; ಲಲಿತ: ಚೆಲುವು; ಸುರಾಶ್ವ: ಉಚ್ಚೈಶ್ರವ; ತುಂಬುರು: ಗಂಧರ್ವನ ಹೆಸರು; ಕೆಲಸ: ಕಾರ್ಯ; ಭವನ: ಅರಮನೆ; ನಳಿನ: ಕಮಲ; ನಳಿನಮುಖಿ: ಸ್ತ್ರೀ; ಬಲುಹ: ಬಲ, ಶಕ್ತಿ, ದೃಢತೆ; ನುಡಿ: ಮಾತಾಡು; ಕತ: ನಿಮಿತ್ತ; ಕೆಡು:ಕೆಡುಕು; ಲೋಕ: ಜಗತ್ತು;

ಪದವಿಂಗಡಣೆ:
ಕಳುಹಿಸುವುದ್+ಐರಾವತವ +ಬಲು
ಕುಲಿಶವನು +ಸುರಧೇನು +ಸುರತರು
ಸುಲಲಿತಾಶ್ವವ+ ರಂಭೆ +ತುಂಬುರು +ನಾರದಾದಿಗಳ
ಕೆಲಸಮಾಡಲು +ನಿಮ್ಮ +ಭವನದ
ನಳಿನಮುಖಿಯರ +ಕಳುಹು +ಸುರಪತಿ
ಬಲುಹ +ನುಡಿದರೆ+ ನಿನ್ನ +ಕತದಲಿ +ಕೆಡುವುದಾ +ಲೋಕ

ಅಚ್ಚರಿ:
(೧) ಕಳಿಸಲು ಕೇಳಿ ಎಚ್ಚರಿಕೆಯ ನುಡಿಯನ್ನು ನೀಡಿದ ಅರ್ಜುನನ ಶೌರ್ಯದ ಪ್ರದರ್ಶನ – ಸುರಪತಿ
ಬಲುಹ ನುಡಿದರೆ ನಿನ್ನ ಕತದಲಿ ಕೆಡುವುದಾ ಲೋಕ
(೨) ಸುರಧೇನು, ಸುರತರು, ಸುಲಲಿತ – “ಸು” ಅಕ್ಷರದಿಂದ ಪ್ರಾರಂಭವಾಗುವ ಪದಗಳು

ಪದ್ಯ ೬೦: ದ್ರೋಣರು ಮಕ್ಕಳನ್ನು ಏನು ಕೇಳಿದರು?

ಏನಿರೈ ಕುರುವಂಶನಳಿನೀ
ಭಾನುಗಳಿರ ವಿದಗ್ಧ ಜನ ಸುರ
ಧೇನುಗಳಿರಾವಿಂದು ನಿಮ್ಮಲಿ ದಕ್ಷಿಣಾರ್ಥಿಗಳು
ಏನನೀವಿರಿ ನಮಗೆ ಕೊಡೆ ಸಂ
ಪೂರ್ಣರೈ ಕೊಡಲಾಪ ಸತ್ವನಿ
ಧಾನವುಂಟೇ ಹೇಳಿಯೆಂದನು ದ್ರೋಣನನಿಬರಿಗೆ (ಆದಿ ಪರ್ವ, ೭ ಸಂಧಿ, ೬೦ ಪದ್ಯ)

ತಾತ್ಪರ್ಯ:
ಎಲೈ ಕುರುವಂಶ ಕಮಲಕ್ಕೆ ಸೂರ್ಯನಂತಿರುವವರೇ, ಪಂಡಿತರಿಗೆ ಕಾಮಧೇನುವಿನಂತಿರುವವರೇ, ಇಂದು ನಾವು ನಿಮ್ಮಲ್ಲಿ ನಮಗೆ ಗುರು ದಕ್ಷಿಣಯಾಗಿ ಏನನ್ನು ನೀಡುವಿರಿ ಎಂದು ಕೇಳಿದರು. ಕೊಡುವಷ್ಟು ಸಮರ್ಥರಾಗಿರುವಿರಾ, ಕೊಡಬಲ್ಲ ಸತ್ವವು ನಿಮಗಿದೆಯೇ ಹೇಳಿರಿ ಎಂದು ದ್ರೋಣನು ಅವರನ್ನು ಕೇಳಿದನು.

ಅರ್ಥ:
ವಂಶ: ಕುಲ; ನಳಿನಿ: ಕಮಲ; ಭಾನು: ಸೂರ್ಯ, ಆದಿತ್ಯ; ವಿದಗ್ಧ: ಪಂಡಿತ; ಸುರ:ಅಮರ, ದೇವತೆ; ಸುರಧೇನು: ಕಾಮಧೇನು; ದಕ್ಷಿಣೆ: ಸಂಭಾವನೆ, ಕಾಣಿಕೆ; ನಿಧಾನ: ಸಹನೆ, ನಿಧಿ, ತಾಳ್ಮೆ; ಹೇಳು: ತಿಳಿಸು, ನುಡಿ; ಕೊಡು: ನೀಡು, ಸಲ್ಲಿಸು;

ಪದವಿಂಗಡನೆ:
ಏನಿರೈ +ಕುರು+ವಂಶ+ನಳಿನೀ
ಭಾನು+ಗಳಿರ+ ವಿದಗ್ಧ +ಜನ +ಸುರ
ಧೇನು+ಗಳಿರಾವ್+ಇಂದು +ನಿಮ್ಮಲಿ +ದಕ್ಷಿಣಾರ್ಥಿಗಳು
ಏನನ್+ಈವಿರಿ+ ನಮಗೆ+ ಕೊಡೆ +ಸಂ
ಪೂರ್ಣರೈ +ಕೊಡಲಾಪ+ ಸತ್ವನಿ
ಧಾನವುಂಟೇ +ಹೇಳಿ+ಯೆಂದನು+ ದ್ರೋಣನನ್+ಇಬರಿಗೆ

ಅಚ್ಚರಿ:
(೧) ಮಕ್ಕಳನ್ನು ಹೊಗಳುವ ರೀತಿ: ನಳಿನೀಭಾನುಗಳಿರ; ವಿದಗ್ಧ ಜನ ಸುರಧೇನುಗಳಿರ;
(೨) ಅವರನ್ನು ಕೇಳುವ ರೀತಿ: ಸಂಪೂರ್ಣರೈ, ಸತ್ವನಿಧಾನವುಂಟೆ
(೩) ೨ ಸಾಲಿನ ಕೊನೆಪದ – ಸುರಧೇನು, ೫ ಸಾಲಿನ ಕೊನೆ ಪದ: ಸತ್ವನಿಧಾನ,(ಧೇನು, ಧಾನ)
(೪) ಏನಿರೈ, ಏನನೀವಿರಿ – ೧ ಮತ್ತು ೪ ಸಾಲಿನ ಮೊದಲ ಪದ