ಪದ್ಯ ೫೬: ಭೂಮಿಯ ವಿಸ್ತಾರವೆಷ್ಟು?

ಹತ್ತು ಲಕ್ಕವು ಹೀನವಾಗಿ
ಪ್ಪತ್ತು ಕೋಟಿ ತಮಂಧದುರ್ವರೆ
ಸುತ್ತುವರೆ ಬೆಳೆದಿಹುದು ಗರ್ಭೋದಕದ ಪರ್ಯಂತ
ಇತ್ತಸುರಗಿರಿಯಿಂದ ಹಿಂದಿ
ಪ್ಪತ್ತು ಕೋಟಿಯ ಕೂಡಿನೋಡೆ ಧ
ರಿತ್ರಿ ತಾನೈವತ್ತು ಕೋಟಿಯ ಲೆಕ್ಕ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೫೬ ಪದ್ಯ)

ತಾತ್ಪರ್ಯ:
ಹತ್ತೊಂಬತ್ತು ಕೋಟಿ ತೊಂಬತ್ತು ಲಕ್ಷ ಯೋಜನ ವಿಸ್ತಾರವಾಗಿ ಲೋಕಾಲೋಕ ಪರ್ವತದತ್ತ ಹಬ್ಬಿದೆ. ಮೇರು ಪರ್ವತದ ಹಿಂದಿರುವ ಇಪ್ಪತ್ತು ಕೋಟಿಯನ್ನು ಕೂಡಿದರೆ ಭೂಮಿಯ ವಿಸ್ತಾರ ಐವತ್ತು ಕೋಟಿ ಯೋಜನೆ.

ಅರ್ಥ:
ಹತ್ತು: ದಶ; ಹೀನ: ಕಳೆ, ಕಡಿಮೆಯಾಗು; ತಮಂಧ: ಅಂಧಕಾರ; ಬೆಳೆ: ವಿಸ್ತರಿಸು, ಹೆಚ್ಚಾಗು; ಉದಕ: ನೀರು; ಸುರಗಿರಿ: ಮೇರು ಪರ್ವತ; ಗಿರಿ: ಬೆಟ್ಟ; ಸುರ: ದೇವತೆ; ಹಿಂದೆ: ಹಿಂಭಾಗ; ಕೂಡು: ಸೇರಿಸು; ಧರಿತ್ರಿ: ಭೂಮಿ; ಲೆಕ್ಕ: ಎಣಿಕೆ;

ಪದವಿಂಗಡಣೆ:
ಹತ್ತು +ಲಕ್ಕವು +ಹೀನವಾಗ್
ಇಪ್ಪತ್ತು +ಕೋಟಿ +ತಮಂಧದುರ್ವರೆ
ಸುತ್ತುವರೆ+ ಬೆಳೆದಿಹುದು +ಗರ್ಭೋದಕದ +ಪರ್ಯಂತ
ಇತ್ತ+ಸುರಗಿರಿಯಿಂದ +ಹಿಂದ್
ಇಪ್ಪತ್ತು +ಕೋಟಿಯ +ಕೂಡಿನೋಡೆ +ಧ
ರಿತ್ರಿ +ತಾನೈವತ್ತು +ಕೋಟಿಯ +ಲೆಕ್ಕ +ನೋಡೆಂದ

ಅಚ್ಚರಿ:
(೧) ಭೂಮಿಯ ವಿಸ್ತಾರವನ್ನು ೫೦ ಕೋಟಿ ಯೋಜನೆ ಎಂದು ಹೇಳಿರುವುದು

ಪದ್ಯ ೩೬: ಕೀಲಕ ಪರ್ವತವದಾವುದು?

ಸುರಗಿರಿಯ ಮೊದಲಲ್ಲಿ ಕೀಲಕ
ಗಿರಿಯು ನಾಲ್ಕವರಲ್ಲಿ ಕೇಸರ
ಸರಸಿ ನಾಲ್ಕರುಣೋದೆ ಭದ್ರೆ ಸಿತೋದೆ ಮಾನಸದ
ಹೊರಗೆ ನಾಲ್ಕುದ್ಯಾನ ಕೀಲಕ
ಗಿರಿಯುದಯವೈವತ್ತು ಯೋಜನ
ಹರಹು ತಾನು ಸಹಸ್ರಯೋಜನವದರ ಶಿಖರದಲಿ (ಅರಣ್ಯ ಪರ್ವ, ೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಮೇರು ಪರ್ವತದ ಪಕ್ಕದಲ್ಲಿ ನಾಲ್ಕು ಕೀಲಕ ಬೆಟ್ಟಗಳಿವೆ. ಅಲ್ಲಿ ಕೇಸರದಂತೆ ಅರುಣೋದೆ, ಭದ್ರೆ, ಸಿತೋದೆ, ಮಾನಸ ಎಂಬ ನಾಲ್ಕು ಸರೋವರಗಳಿವೆ. ಅವುಗಳಾಚೆ ನಾಲ್ಕು ಉದ್ಯಾನಗಳಿವೆ. ಕೀಲಕ ಗಿರಿಯ ಮೊದಲು ಐವತ್ತು ಯೋಜನ ವಿಸ್ತಾರ ಅದು ಸಹಸ್ರ ಯೋಜನಗಳಷ್ಟು ಹರಡಿದೆ. ಅದರ ಅಗ್ರಭಾಗದಲ್ಲಿ…

ಅರ್ಥ:
ಸುರಗಿರಿ: ಮೇರು ಪರ್ವತ; ಗಿರಿ: ಬೆಟ್ಟ; ಸರಸಿ: ಸರೋವರ; ಹೊರಗೆ: ಆಚೆ; ಉದ್ಯಾನ: ಉಪವನ; ಉದಯ: ಹುಟ್ಟು; ಹರಹು: ವಿಸ್ತಾರ; ಸಹಸ್ರ: ಸಾವಿರ; ಶಿಖರ: ತುದಿ, ಅಗ್ರ;

ಪದವಿಂಗಡಣೆ:
ಸುರಗಿರಿಯ +ಮೊದಲಲ್ಲಿ +ಕೀಲಕ
ಗಿರಿಯು +ನಾಲ್ಕವರಲ್ಲಿ+ ಕೇಸರ
ಸರಸಿ+ ನಾಲ್ಕ್+ಅರುಣೋದೆ +ಭದ್ರೆ +ಸಿತೋದೆ +ಮಾನಸದ
ಹೊರಗೆ +ನಾಲ್ಕ್+ಉದ್ಯಾನ +ಕೀಲಕ
ಗಿರಿ+ಉದಯವ್+ಐವತ್ತು +ಯೋಜನ
ಹರಹು +ತಾನು +ಸಹಸ್ರ+ಯೋಜನವ್+ಅದರ +ಶಿಖರದಲಿ

ಅಚ್ಚರಿ:
(೧) ಕೀಲಕ ಗಿರಿಯ ಸರೋವರ – ಅರುಣೋದೆ, ಭದ್ರೆ, ಸಿತೋದೆ, ಮಾನಸ

ಪದ್ಯ ೩೩: ವೃಷಸೇನನ ಪರಾಕ್ರಮ ಎಂತಹುದು?

ನರನ ಮಾರಂಕದ ಮಹೇಂದ್ರಗೆ
ಚರಣಯುಗ ಬೆನ್ನಿನಲಿ ಬವರದೊ
ಳರಿದಲೈ ಭೀಷ್ಮಾದಿಗಳಿಗೀ ರಣದ ಮೇಳಾಪ
ಜರಡನೈ ಭಾರಂಕದಾಳಿವ
ತರಳನೇ ಸುರಗಿರಿಯನಾನುವ
ಕೊರಳ ಸತ್ವವೆ ಶಿವಶಿವೆಂದುದು ಮೇಲೆ ಸುರಕಟಕ (ಕರ್ಣ ಪರ್ವ, ೨೦ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅರ್ಜುನನೊಡನೆ ಕಾದಿದ ದೇವೆಂದ್ರನು, ಬೆನ್ನು ತೋರಿಸಿ ಓಡಿದನು. ಭೀಷ್ಮನೇ ಮೊದಲಾದವರಿಗೂ ಇಂತಹ ಯುದ್ಧ ಚಾತುರ್ಯವಿರಲಿಲ್ಲ. ಇವನೇನು ನಿಸ್ಸತ್ವನೇ! ಇವನು ಮಹಾವೀರ. ಇವನನ್ನು ಹುಡುಗನೆನ್ನಬಹುದೇ? ಇವನು ತಲೆಯ ಮೇಲೆ ಮೇರು ಪರ್ವತವನ್ನು ಹೊರಬಲ್ಲ ಸತ್ವಯುತವಾದ ಕೊರಳನ್ನುಳ್ಳವನು ಎಂದು ಹೊಗಳಿದರು ಆಕಾಶದಲ್ಲಿದ್ದ ದೇವತೆಗಳು.

ಅರ್ಥ:
ನರ: ಅರ್ಜುನ; ಮಾರಂಕ: ಪ್ರತಿಯುದ್ಧ; ಮಹೇಂದ್ರ: ಇಂದ್ರ; ಚರಣ: ಪಾದ; ಬೆನ್ನು: ಹಿಂಭಾಗ; ಬವರ: ಯುದ್ಧ; ಇರಿ: ಸೀಳು, ಚುಚ್ಚು; ರಣ: ಯುದ್ಧ; ಮೇಳ: ಗುಂಪು; ಮೇಳಾಪ: ಜೋಡಣೆ; ಜರಡು: ಅಲ್ಪ, ನಿಷ್ಪ್ರಯೋಜಕ; ಭಾರಂಕ: ಮಹಾಯುದ್ಧ; ಅಳಿ: ಸಾವು; ತರಳು: ಹುಡುಗ; ಸುರಗಿರಿ: ಮೇರುಪರ್ವತ; ಆನು:ಎದುರಿಸು; ಕೊರಳು: ಕಂಠ; ಸತ್ವ: ಶಕ್ತಿ, ಬಲ; ಸುರ: ದೇವತೆ; ಕಟಕ:ಗುಂಪು;

ಪದವಿಂಗಡಣೆ:
ನರನ +ಮಾರಂಕದ+ ಮಹೇಂದ್ರಗೆ
ಚರಣಯುಗ+ ಬೆನ್ನಿನಲಿ +ಬವರದೊಳ್
ಅರಿದಲೈ+ ಭೀಷ್ಮಾದಿಗಳಿಗ್+ಈ+ ರಣದ +ಮೇಳಾಪ
ಜರಡನೈ+ ಭಾರಂಕದ್+ಅಳಿವ
ತರಳನೇ +ಸುರಗಿರಿಯನ್+ಆನುವ
ಕೊರಳ +ಸತ್ವವೆ +ಶಿವಶಿವೆಂದುದು +ಮೇಲೆ +ಸುರಕಟಕ

ಅಚ್ಚರಿ:
(೧) ಮಾರಂಕ, ಭಾರಂಕ – ಯುದ್ದವನ್ನು ಅರ್ಥೈಸುವ ಪ್ರಾಸ ಪದಗಳು
(೨) ಓಡಿದನು ಎಂದು ಹೇಳಲು – ನರನ ಮಾರಂಕದ ಮಹೇಂದ್ರಗೆ ಚರಣಯುಗ ಬೆನ್ನಿನಲಿ
(೩) ವೃಷಸೇನನ ಪರಾಕ್ರಮದ ವಿವರಣೆ – ಸುರಗಿರಿಯನಾನುವಕೊರಳ ಸತ್ವವೆ ಶಿವಶಿವೆಂದುದು ಮೇಲೆ ಸುರಕಟಕ

ಪದ್ಯ ೫೭: ಕೃಷ್ಣನು ರಥದಿಂದ ಹೇಗೆ ಇಳಿದನು?

ಎಂದು ಗಂಗಾನಂದನನು ನಲ
ವಿಂದ ಕೈಗೊಡೆ ಸುರಗಿರಿಯ ತುದಿ
ಯಿಂದ ಮರಿಮಿಂಚುಗಳ ಮುಗಿಲಿಳಿವಂತೆ ಭೂತಳಕೆ
ಅಂದು ನೀಲಾಚಲ ನಿಕಾಯದ
ಸೌಂದರಾಂಗದ ಕೌಸ್ತುಭ ಪ್ರಭೆ
ಯಿಂದ ಕಾಂಚನ ರಥವನಿಳಿದನು ದಾನವಾರಾತಿ (ಉದ್ಯೋಗ ಪರ್ವ, ೮ ಸಂಧಿ, ೫೭ ಪದ್ಯ)

ತಾತ್ಪರ್ಯ:
ಎಲ್ಲರೂ ಕೃಷ್ಣನಿಗೆ ಎರಗಿದ ನಂತರ ಭೀಷ್ಮರು ಕೃಷ್ಣನನ್ನು ರಥದಿಂದ ಇಳಿಸಲು ತಮ್ಮ ಹಸ್ತವನ್ನು ಚಾಚಲು, ಮೇರುಪರ್ವತದ ತುದಿಯಿಂದ ಚಿಕ್ಕ ಮಿಂಚುಗಳು ಭೂಮಿಗೆ ಬರುವಂತೆ ಅಂದು ನೀಲವರ್ಣದ ಸುಂದರಾಂಗ ಕೃಷ್ಣನ ಧರಿಸಿದ ಕೌಸ್ತುಭಮಣಿಯ ಪ್ರಭೆಯು ಪ್ರಜ್ವಲಿಸಿ ಚಿನ್ನದ ರಥದಿಂದ ಕೃಷ್ಣನು ಇಳಿದನು.

ಅರ್ಥ:
ಗಂಗಾನಂದನ: ಭೀಷ್ಮ; ನಂದನ: ಮಗ; ನಲವು: ಸಂತೋಷ; ಕೈ: ಕರ, ಹಸ್ತ; ಕೊಡು: ನೀಡು; ಸುರ: ದೇವ; ಗಿರಿ: ಬೆಟ್ಟ; ತುದಿ: ಅಗ್ರಭಾಗ; ಮಿಂಚು: ಹೊಳಪು, ಕಾಂತಿ; ಮರಿ: ಚಿಕ್ಕ; ಮುಗಿಲು: ಆಗಸ; ಇಳಿ: ಕೆಳಗೆ ಬಾ; ಭೂತಳ: ಭೂಮಿ; ಅಚಲ: ಬೆಟ್ಟ; ನಿಕಾಯ: ದೇಹ, ಶರೀರ; ಸೌಂದರ: ಚೆಲುವು; ಅಂಗ: ಭಾಗ; ಕೌಸ್ತುಭ: ವಿಷ್ಣುವಿನ ಎದೆಯನ್ನು ಅಲಂಕರಿಸಿರುವ ಒಂದು ರತ್ನ; ಪ್ರಭೆ: ಕಾಂತಿ; ಕಾಂಚನ: ಚಿನ್ನ; ರಥ: ಬಂಡಿ; ದಾನವ: ರಾಕ್ಷಸ; ಅರಾತಿ: ಶತ್ರು; ಸುರಗಿರಿ: ಮೇರುಪರ್ವತ;

ಪದವಿಂಗಡಣೆ:
ಎಂದು +ಗಂಗಾ+ನಂದನನು +ನಲ
ವಿಂದ +ಕೈಗೊಡೆ +ಸುರಗಿರಿಯ +ತುದಿ
ಯಿಂದ +ಮರಿಮಿಂಚುಗಳ+ ಮುಗಿಲ್+ಇಳಿವಂತೆ+ ಭೂತಳಕೆ
ಅಂದು +ನೀಲ+ಅಚಲ+ ನಿಕಾಯದ
ಸೌಂದರಾಂಗದ+ ಕೌಸ್ತುಭ+ ಪ್ರಭೆ
ಯಿಂದ+ ಕಾಂಚನ +ರಥವನ್+ಇಳಿದನು+ ದಾನವ+ಅರಾತಿ

ಅಚ್ಚರಿ:
(೧) ಉಪಮಾನದ ಬಳಕೆ – ಸುರಗಿರಿಯ ತುದಿಯಿಂದ ಮರಿಮಿಂಚುಗಳ ಮುಗಿಲಿಳಿವಂತೆ ಭೂತಳಕೆ
(೨) ಕೃಷ್ಣನ ವರ್ಣನೆ – ನೀಲಾಚಲ ನಿಕಾಯದ ಸೌಂದರಾಂಗದ ಕೌಸ್ತುಭ ಪ್ರಭೆ
ಯಿಂದ ಕಾಂಚನ ರಥವನಿಳಿದನು ದಾನವಾರಾತಿ