ಪದ್ಯ ೩೯: ದೇವತೆಗಳು ಯಾರ ಮುಡಿಗೆ ಹೂ ಮಳೆಗರೆದರು?

ಅರಸ ಕೇಳಾಶ್ಚರಿಯವನು ನಿ
ಮ್ಮರಸನಾಹವ ಸಫಲ ಸುರಕುಲ
ವರಳ ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ
ಅರಿನೃಪರು ತಲೆಗುತ್ತಿದರು ಮುರ
ಹರ ಯುಧಿಷ್ಠಿರ ಪಾರ್ಥ ಯಮಳರು
ಬೆರಲ ಮೂಗಿನಲಿದ್ದು ಸುಯ್ದರು ಬಯ್ದು ದುಷ್ಕೃತವ (ಗದಾ ಪರ್ವ, ೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ಆಶ್ಚರ್ಯಕರವಾದ ಸಂಗತಿಯನ್ನು ಕೇಳು. ಕೌರವನು ಯುದ್ಧದಲ್ಲಿ ಸಫಲನಾದನು. ಕೌರವನ ಸಿರಿಮುಡಿಗೆ ದೇವತೆಗಳು ಹೂ ಮಳೆಗರೆದರು. ವೈರಿರಾಜರು ತಲೆ ತಗ್ಗಿಸಿದರು. ಶ್ರೀಕೃಷ್ಣನೂ, ಪಾಂಡವರೂ ಮೂಗಿನ ಮೇಲೆ ಬೆರಳಿಟ್ಟು ನಿಟ್ಟುಸಿರುಗರೆದು ತಮ್ಮ ಪಾಪ ಕರ್ಮವನ್ನು ಬೈದುಕೊಂಡರು.

ಅರ್ಥ:
ಅರಸ: ರಾಜ; ಆಶ್ಚರಿಯ: ಅದ್ಭುತ; ಅರಸ: ರಾಜ; ಆಹವ: ಯುದ್ಧ; ಸಫಲ: ಫಲಕಾರಿಯಾದ; ಸುರಕುಲ: ದೇವತೆಗಳ ಗುಂಪು; ಅರಳ: ಹೂವು; ಮಳೆ: ವರ್ಶ; ಸಿರಿಮುಡಿ: ಶ್ರೇಷ್ಠವಾದ ಶಿರ; ಅರಿ: ವೈರಿ; ನೃಪ: ರಾಜ; ತಲೆ: ಶಿರ; ಕುತ್ತು: ತಗ್ಗಿಸು; ಮುರಹರ: ಕೃಷ್ಣ; ಯಮಳ: ಅವಳಿ ಮಕ್ಕಳು; ಬೆರಳು: ಅಂಗುಲಿ; ಮೂಗು: ನಾಸಿಕ; ಸುಯ್ದು: ನಿಟ್ಟುಸಿರು; ಬಯ್ದು: ಜರೆದು; ದುಷ್ಕೃತ: ಕೆಟ್ಟ ಕೆಲಸ, ಕರ್ಮ;

ಪದವಿಂಗಡಣೆ:
ಅರಸ +ಕೇಳ್+ಆಶ್ಚರಿಯವನು +ನಿ
ಮ್ಮರಸನ್+ಆಹವ +ಸಫಲ+ ಸುರಕುಲವ್
ಅರಳ +ಮಳೆಗರೆದುದು +ಕಣಾ +ಕುರುಪತಿಯ +ಸಿರಿಮುಡಿಗೆ
ಅರಿ+ನೃಪರು +ತಲೆಗುತ್ತಿದರು +ಮುರ
ಹರ +ಯುಧಿಷ್ಠಿರ +ಪಾರ್ಥ +ಯಮಳರು
ಬೆರಳ+ ಮೂಗಿನಲಿದ್ದು+ ಸುಯ್ದರು+ ಬಯ್ದು +ದುಷ್ಕೃತವ

ಅಚ್ಚರಿ:
(೧) ಅರಸ, ನೃಪ -ಸಮಾನಾರ್ಥಕ ಪದ
(೨) ಜಯವನ್ನು ಆಚರಿಸಿದ ಪರಿ – ಸುರಕುಲವರಳ ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ

ಪದ್ಯ ೩೬: ಅರ್ಜುನನು ರಥವನ್ನು ಹೇಗೆ ಏರಿದನು?

ಖುರಕೆ ರತುನವ ಸುರಿದು ತೇರಿನ
ತುರಗವನು ವಂದಿಸಿದನಾ ಪಳ
ಹರದ ಹನುಮಮ್ಗೆರಗಿದನು ಸುರಕುಲಕೆ ಕೈಮುಗಿದು
ವರರಥವ ಬಲಗೊಂಡು ಕವಚಾ
ಬರಿಗೆ ಬಿಗಿದನು ಕೈಗೆ ವಜ್ರದ
ತಿರುವೊಡೆಯನವಚಿದನು ರಥವೇರಿದನು ಕಲಿಪಾರ್ಥ (ದ್ರೋಣ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನು ರಥದ ಕುದುರೆಗಳ ಖುರಪುಟಗಳಿಗೆ ರತ್ನಗಳನ್ನು ಅರ್ಪಿಸಿ ನಮಸ್ಕರಿಸಿ, ಧ್ವಜದಲ್ಲಿದ್ದ ಹನುಮಂತನಿಗೆ ವಂದಿಸಿ, ದೇವತಾ ಸಮೂಹಕ್ಕೆ ಕೈಮುಗಿದು, ರಥವನ್ನು ಪ್ರದಕ್ಷಿಣೆ ಮಾಡಿ, ಕವಚವನ್ನು ಧರಿಸಿ ಕೈಗೆ ವಜ್ರದ ಖಡೆಯವನ್ನು ಹಾಕಿಕೊಂಡು ರಥವನ್ನೇರಿದನು.

ಅರ್ಥ:
ಖುರ:ಕುದುರೆ ದನಕರುಗಳ ಕಾಲಿನ ಗೊರಸು, ಕೊಳಗು; ರತುನ: ಮಣಿ; ಸುರಿ: ಚೆಲ್ಲು; ತೇರು: ಬಂಡಿ; ತುರಗ: ಅಶ್ವ; ವಂದಿಸು: ನಮಸ್ಕರಿಸು; ಪಳಹರ: ಬಾವುಟ; ಹನುಮ: ಆಂಜನೇಯ; ಎರಗು: ನಮಸ್ಕರಿಸು; ಸುರಕುಲ: ದೇವತೆ; ಕೈಮುಗಿ: ನಮಸ್ಕರಿಸು; ವರ: ಶ್ರೇಷ್ಠ; ರಥ: ಬಂಡಿ; ಕವಚ: ಉಕ್ಕಿನ ಅಂಗಿ; ಬರಿ: ಪಕ್ಕ, ಬದಿ; ಬಿಗಿ: ಕಟ್ಟು; ಕೈ: ಹಸ್ತ; ವಜ್ರ: ಗಟ್ಟಿಯಾದ; ಅವಚು: ಅಪ್ಪಿಕೊಳ್ಳು; ರಥ: ಬಂಡಿ; ಏರು: ಹತ್ತು; ಕಲಿ: ಶೂರ;

ಪದವಿಂಗಡಣೆ:
ಖುರಕೆ +ರತುನವ +ಸುರಿದು +ತೇರಿನ
ತುರಗವನು +ವಂದಿಸಿದನಾ +ಪಳ
ಹರದ +ಹನುಮಂಗ್+ಎರಗಿದನು +ಸುರಕುಲಕೆ +ಕೈಮುಗಿದು
ವರರಥವ+ ಬಲಗೊಂಡು +ಕವಚವ
ಬರಿಗೆ +ಬಿಗಿದನು +ಕೈಗೆ +ವಜ್ರದ
ತಿರುವೊಡೆಯನ್+ಅವಚಿದನು +ರಥವೇರಿದನು +ಕಲಿಪಾರ್ಥ

ಅಚ್ಚರಿ:
(೧) ವಂದಿಸು, ಎರಗು, ಕೈಮುಗಿ – ಸಾಮ್ಯಾರ್ಥ ಪದಗಳು

ಪದ್ಯ ೭೬: ಭಗದತ್ತನು ಹೇಗೆ ಧರೆಗೆ ಉರುಳಿದನು?

ಗಿರಿಯ ಶಿರದಲಿ ಹೂತ ಕಕ್ಕೆಯ
ಮರ ಮುರಿದು ಬೀಳ್ವಂತೆ ವಿಮಳಾ
ಭರಣ ಕಾಂತಿಯ ಕಡಲ ಕೋಮಲಕಾಯ ಭಗದತ್ತ
ಉರುಳಿದನು ಗಜದಿಂದ ಕುರುಬಲ
ಸರಿಯೆ ಸುರಕುಲ ಕುಸುಮ ವೃಷ್ಟಿಯ
ಸುರಿಯೆ ರಿಪುಸೇನೆಯಲಿ ಹರುಷದ ಹೊನಲು ಬಿರುವರಿಯೆ (ದ್ರೋಣ ಪರ್ವ, ೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ಬೆಟ್ಟದ ಮೇಲೆ ಹೂಬಿಟ್ಟ ಕಕ್ಕೆಯಮರವು ಬೀಳುವಂತೆ ದಿವ್ಯಾಭರಣ ಕಾಂತಿಯ ಸಮುದ್ರದಂತಿದ್ದ ಭಗದತ್ತನು ಆನೆಯ ಮೇಲಿಂದ ಉರುಳಿಬಿದ್ದನು. ಕೌರವ ಸೈನ್ಯವು ಹಿಮ್ಮೆಟ್ಟಿತು. ದೇವತೆಗಳು ಹೂಮಳೆಯನ್ನು ಸುರಿಸಿದರು. ಪಾಂಡವ ಸೇನೆಯಲ್ಲಿ ಹರ್ಷದ ಹೊಳೆ ವೇಗವಾಗಿ ಹರಿಯಿತು.

ಅರ್ಥ:
ಗಿರಿ: ಬೆಟ್ಟ; ಶಿರ: ತಲೆ; ಹೂತು: ಮುಚ್ಚು; ಕಕ್ಕೆ:ಹಳದಿ ಹೂವು ಬಿಡುವ ಒಂದು ಮರ; ಮರ: ತರು; ಮುರಿ: ಸೀಳು; ಬೀಳು: ಕುಸಿ; ವಿಮಳ: ನಿರ್ಮಲ; ಆಭರಣ: ಒಡವೆ; ಕಾಂತಿ: ಪ್ರಕಾಶ; ಕಡಲು: ಸಾಗರ; ಕೋಮಲ: ಮೃದು; ಕಾಯ: ಶರೀರ; ಉರುಳು: ಬೀಳು; ಗಜ: ಆನೆ; ಬಲ: ಸೈನ್ಯ; ಸರಿ: ಹೋಗು, ಗಮಿಸು; ಸುರಕುಲ: ದೇವತೆಗಳು; ಕುಸುಮ: ಹೂವು; ವೃಷ್ಟಿ: ಮಳೆ; ಸುರಿ: ಧಾರೆ; ರಿಪು: ವೈರಿ; ಸೇನೆ: ಸೈನ್ಯ; ಹರುಷ: ಸಂತಸ; ಹೊನಲು: ಪ್ರವಾಹ; ಬಿರು: ವೇಗ, ರಭಸ; ಬಿರುವರಿ: ವೇಗವಾಗಿ ಹರಿ;

ಪದವಿಂಗಡಣೆ:
ಗಿರಿಯ +ಶಿರದಲಿ +ಹೂತ +ಕಕ್ಕೆಯ
ಮರ +ಮುರಿದು +ಬೀಳ್ವಂತೆ +ವಿಮಳಾ
ಭರಣ+ ಕಾಂತಿಯ +ಕಡಲ +ಕೋಮಲ+ಕಾಯ +ಭಗದತ್ತ
ಉರುಳಿದನು +ಗಜದಿಂದ +ಕುರುಬಲ
ಸರಿಯೆ +ಸುರಕುಲ +ಕುಸುಮ +ವೃಷ್ಟಿಯ
ಸುರಿಯೆ +ರಿಪುಸೇನೆಯಲಿ +ಹರುಷದ +ಹೊನಲು +ಬಿರುವರಿಯೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಿರಿಯ ಶಿರದಲಿ ಹೂತ ಕಕ್ಕೆಯ ಮರ ಮುರಿದು ಬೀಳ್ವಂತೆ

ಪದ್ಯ ೮೩: ಸುಗಂಧದ ಓಕುಳಿಯ ಪ್ರಭಾವ ಹೇಗಿತ್ತು?

ಧರಣಿ ನೆನೆದುದು ಗಂಧರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆ
ವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ
ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ ಗಗನವ
ಪರಮಸೌರಭಕಲಸಿಕೊಂಡುದು ಸಕಲ ಸುರಕುಲವ (ವಿರಾಟ ಪರ್ವ, ೧೧ ಸಂಧಿ, ೮೩ ಪದ್ಯ)

ತಾತ್ಪರ್ಯ:
ಗಂಧ, ಕಸ್ತೂರಿ, ಪನ್ನೀರುಗಳ ಪ್ರವಾಹದಿಂದ ಭೂಮಿಯು ನೆನೆಯಿತು. ದಿಕ್ಕುಗಳು ಪರಿಮಳಭರಿತವಾದವು. ತುಂತುರಿನಿಂದ ಸಮುದ್ರವೂ ಕಂಪಾಯಿತು. ಸೂರ್ಯನೂ ಸುಗಂಧ ಭರಿತವಾದನೆಂದ ಮೇಲೆ ಗಾಳಿಯಲ್ಲಿ ಸುಗಂಧ ತುಂಬಿದುದು ಆಶ್ಚರ್ಯವೇನಲ್ಲ. ಓಕುಳಿಯ ಸುಗಂಧದಿಂದ ದೇವತೆಗಳೂ ತೃಪ್ತರಾದರು.

ಅರ್ಥ:
ಧರಣಿ: ಭೂಮಿ; ನೆನೆ: ಒದ್ದೆಯಾಗು; ಗಂಧ: ಚಂದನ; ರಸ: ಸಾರ; ಕತ್ತುರಿ: ಕಸ್ತೂರಿ; ಪನ್ನೀರು: ಸುಗಂಧಯುಕ್ತವಾದ ನೀರು; ಹೊನಲು: ಪ್ರವಾಹ; ಒಡೆ: ಸೀಳು, ಬಿರಿ; ಎರಚು: ಚಿಮುಕಿಸು, ಚೆಲ್ಲು; ದೆಸೆ: ದಿಕ್ಕು; ಕಂಪು: ಸುಗಂಧ; ಅಂಬುಧಿ: ಸಾಗರ; ನವ: ಹೊಸ; ತುಷಾರ: ಹಿಮ, ಮಂಜು; ತರಣಿ: ಸೂರ್ಯ, ನೇಸರು; ಪರಿಮಳ: ಸುಗಂಧ; ಪವನ: ವಾಯು; ಸುರಭಿ: ಸುಗಂಧ; ಅಚ್ಚರಿ: ಆಶ್ಚರ್ಯ; ಗಗನ: ಆಗಸ; ಪರಮ: ಶ್ರೇಷ್ಠ; ಸೌರಭ: ಸುವಾಸನೆ; ಕಲಸು: ಬೆರಸು; ಸಕಲ: ಎಲ್ಲಾ; ಸುರಕುಲ: ದೇವತೆಗಳ ವಂಶ;

ಪದವಿಂಗಡಣೆ:
ಧರಣಿ +ನೆನೆದುದು +ಗಂಧ+ರಸ+ ಕ
ತ್ತುರಿಯ +ಪನ್ನೀರುಗಳ +ಹೊನಲ್+ಒಡೆವ್
ಎರಸಿ+ ದೆಸೆ +ಕಂಪಿಟ್ಟುದ್+ಅಂಬುಧಿ +ನವ +ತುಷಾರದಲಿ
ತರಣಿ +ಪರಿಮಳಿಸಿದನು +ಪವನನ
ಸುರಭಿತನವ್+ಅಚ್ಚರಿಯೆ +ಗಗನವ
ಪರಮ+ಸೌರಭ+ಕಲಸಿಕೊಂಡುದು +ಸಕಲ+ ಸುರಕುಲವ

ಅಚ್ಚರಿ:
(೧) ಉತ್ಪ್ರೇಕ್ಷೆ – ಪರಿಮಳದಿಂದ ಸೂರ್ಯನು ಕಂಪಿಸಿದನು – ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ
(೨) ಸಾಗರವೂ ಸುಗಂಧಮಯವಾಯಿತು ಎಂದು ಹೇಳುವ ಪರಿ – ಧರಣಿ ನೆನೆದುದು ಗಂಧರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ