ಪದ್ಯ ೨೪: ಪಾಂಡವರು ಯಾವ ತಪ್ಪು ಮಾಡಿದರೆಂದು ಬಲರಾಮನು ಹೇಳಿದನು?

ನೀವು ಮಾಡಿದ ಸತ್ಯಭಾಷೆಗೆ
ನೀವಲಾ ತಪ್ಪಿದಿರಿ ನೋಟಕ
ರಾವು ಮಧ್ಯಸ್ಥಿತರಲೇ ಧರ್ಮೈಕರಕ್ಷಕರು
ನಾವು ಸಾಕ್ಷಿಗಳಬಳರೆಂದೇ
ನೀವು ನೃಪತಿಯ ತೊಡೆಯನುಡಿದಿರಿ
ಡಾವರವೆ ಸಾಕೈಸೆ ಕಾಲಿಕ್ಕಿದಿರಿ ಸಿರಿಮುಡಿಗೆ (ಗದಾ ಪರ್ವ, ೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಬಲರಾಮನು ಮಾತನಾಡುತ್ತಾ, ನೀವು ಆಡಿದ ಸತ್ಯವಾಕ್ಯಕ್ಕೆ ನೀವೇ ತಪ್ಪಿದಿರಿ, ನಾವು ನೋಟಕರು ಮಧ್ಯಸ್ಥರು, ಸಾಕ್ಷಿಗಳಾದ ನಾವು ದುರ್ಬಲರೆಂದು ಭಾವಿಸಿ ಕೌರವನ ತೊಡೆಯನ್ನೊಡೆದಿರಿ, ಈ ಘೋರವೇ ಸಾಲದು ಎಂದು ಕೌರವನ ಸಿರಿಮುಡಿಯನ್ನು ಕಾಲಿನಿಂದೊದೆದಿರಿ.

ಅರ್ಥ:
ಸತ್ಯ: ನಿಜ; ಭಾಷೆ: ನುಡಿ; ತಪ್ಪು: ಸರಿಯಿಲ್ಲದ್ದು; ನೋಟಕ: ನೋಡುವವ; ಮಧ್ಯಸ್ಥಿತಿ: ನಡುವಿನವರು; ರಕ್ಷಕ: ಕಾಪಾಡುವವ; ಧರ್ಮ: ಧಾರಣೆ ಮಾಡಿದುದು; ಸಾಕ್ಷಿ: ಪುರಾವೆ, ರುಜುವಾತು; ನೃಪತಿ: ರಾಜ; ತೊಡೆ: ಜಂಘೆ; ಉಡಿ: ಮುರಿ, ತುಂಡು ಮಾಡು; ಡಾವರ: ಪ್ರತಾಪ, ಕಾವು, ದಗೆ, ತಾಪ; ಸಾಕು: ನಿಲ್ಲು; ಕಾಲು: ಪಾದ; ಸಿರಿಮುಡಿ: ಶ್ರೇಷ್ಠವಾದ ಶಿರ; ಅಬಳ: ದುರ್ಬಲ;

ಪದವಿಂಗಡಣೆ:
ನೀವು +ಮಾಡಿದ +ಸತ್ಯ+ಭಾಷೆಗೆ
ನೀವಲಾ +ತಪ್ಪಿದಿರಿ +ನೋಟಕರ್
ಆವು +ಮಧ್ಯಸ್ಥಿತರಲೇ +ಧರ್ಮೈಕ+ರಕ್ಷಕರು
ನಾವು +ಸಾಕ್ಷಿಗಳ್+ಅಬಳರೆಂದೇ
ನೀವು +ನೃಪತಿಯ +ತೊಡೆಯನ್+ಉಡಿದಿರಿ
ಡಾವರವೆ +ಸಾಕೈಸೆ +ಕಾಲಿಕ್ಕಿದಿರಿ+ ಸಿರಿಮುಡಿಗೆ

ಅಚ್ಚರಿ:
(೧) ನೀವು, ನಾವು, ಆವು – ಪ್ರಾಸ ಪದಗಳು

ಪದ್ಯ ೩೯: ದೇವತೆಗಳು ಯಾರ ಮುಡಿಗೆ ಹೂ ಮಳೆಗರೆದರು?

ಅರಸ ಕೇಳಾಶ್ಚರಿಯವನು ನಿ
ಮ್ಮರಸನಾಹವ ಸಫಲ ಸುರಕುಲ
ವರಳ ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ
ಅರಿನೃಪರು ತಲೆಗುತ್ತಿದರು ಮುರ
ಹರ ಯುಧಿಷ್ಠಿರ ಪಾರ್ಥ ಯಮಳರು
ಬೆರಲ ಮೂಗಿನಲಿದ್ದು ಸುಯ್ದರು ಬಯ್ದು ದುಷ್ಕೃತವ (ಗದಾ ಪರ್ವ, ೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ಆಶ್ಚರ್ಯಕರವಾದ ಸಂಗತಿಯನ್ನು ಕೇಳು. ಕೌರವನು ಯುದ್ಧದಲ್ಲಿ ಸಫಲನಾದನು. ಕೌರವನ ಸಿರಿಮುಡಿಗೆ ದೇವತೆಗಳು ಹೂ ಮಳೆಗರೆದರು. ವೈರಿರಾಜರು ತಲೆ ತಗ್ಗಿಸಿದರು. ಶ್ರೀಕೃಷ್ಣನೂ, ಪಾಂಡವರೂ ಮೂಗಿನ ಮೇಲೆ ಬೆರಳಿಟ್ಟು ನಿಟ್ಟುಸಿರುಗರೆದು ತಮ್ಮ ಪಾಪ ಕರ್ಮವನ್ನು ಬೈದುಕೊಂಡರು.

ಅರ್ಥ:
ಅರಸ: ರಾಜ; ಆಶ್ಚರಿಯ: ಅದ್ಭುತ; ಅರಸ: ರಾಜ; ಆಹವ: ಯುದ್ಧ; ಸಫಲ: ಫಲಕಾರಿಯಾದ; ಸುರಕುಲ: ದೇವತೆಗಳ ಗುಂಪು; ಅರಳ: ಹೂವು; ಮಳೆ: ವರ್ಶ; ಸಿರಿಮುಡಿ: ಶ್ರೇಷ್ಠವಾದ ಶಿರ; ಅರಿ: ವೈರಿ; ನೃಪ: ರಾಜ; ತಲೆ: ಶಿರ; ಕುತ್ತು: ತಗ್ಗಿಸು; ಮುರಹರ: ಕೃಷ್ಣ; ಯಮಳ: ಅವಳಿ ಮಕ್ಕಳು; ಬೆರಳು: ಅಂಗುಲಿ; ಮೂಗು: ನಾಸಿಕ; ಸುಯ್ದು: ನಿಟ್ಟುಸಿರು; ಬಯ್ದು: ಜರೆದು; ದುಷ್ಕೃತ: ಕೆಟ್ಟ ಕೆಲಸ, ಕರ್ಮ;

ಪದವಿಂಗಡಣೆ:
ಅರಸ +ಕೇಳ್+ಆಶ್ಚರಿಯವನು +ನಿ
ಮ್ಮರಸನ್+ಆಹವ +ಸಫಲ+ ಸುರಕುಲವ್
ಅರಳ +ಮಳೆಗರೆದುದು +ಕಣಾ +ಕುರುಪತಿಯ +ಸಿರಿಮುಡಿಗೆ
ಅರಿ+ನೃಪರು +ತಲೆಗುತ್ತಿದರು +ಮುರ
ಹರ +ಯುಧಿಷ್ಠಿರ +ಪಾರ್ಥ +ಯಮಳರು
ಬೆರಳ+ ಮೂಗಿನಲಿದ್ದು+ ಸುಯ್ದರು+ ಬಯ್ದು +ದುಷ್ಕೃತವ

ಅಚ್ಚರಿ:
(೧) ಅರಸ, ನೃಪ -ಸಮಾನಾರ್ಥಕ ಪದ
(೨) ಜಯವನ್ನು ಆಚರಿಸಿದ ಪರಿ – ಸುರಕುಲವರಳ ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ

ಪದ್ಯ ೪೧: ಕೌರವನು ಹೇಗೆ ಸಿದ್ಧನಾದನು?

ತೆಗೆದು ವಜ್ರಾಂಗಿಯನು ಮೈಯಲಿ
ಬಿಗಿದು ಹೊಂಬರಹದ ಸುರತ್ನಾ
ಳಿಗಳ ಬಲುಸೀಸಕವನಳವಡಿಸಿದನು ಸಿರಿಮುಡಿಗೆ
ಝಗಝಗಿಪ ಬೆಳುದಿಂಗಳಿನ ತೆಳು
ದಗಡೆನಲು ತೊಳಗುವ ದುಕೂಲವ
ಬಿಗಿದು ಮೊನೆಮುಂಜೆರಗನಳವಡಿಸಿದನು ದೇಸಿಯಲಿ (ಗದಾ ಪರ್ವ, ೫ ಸಂಧಿ, ೪೧ ಪದ್ಯ)

ತಾತ್ಪರ್ಯ:
ವಜ್ರಾಂಗಿಯನ್ನು ಧರಿಸಿ, ರತ್ನಖಚಿತವಾದ ಹೇಮರೇಖೆಗಳಿರುವ ಸೀಸಕವನ್ನು ಧರಿಸಿಕೊಂಡನು. ಬೆಳುದಿಂಗಳಿನ ತೆಳುವಾದ ತಗಡೋ ಎನ್ನುವಂತೆ ಹೊಳೆಯುತ್ತಿದ್ದ ಬಟ್ಟೆಯನ್ನು ತೊಟ್ಟು ಮುಂಜೆರಗನ್ನು ಕಟ್ಟಿಕೊಂಡನು.

ಅರ್ಥ:
ತೆಗೆ: ಹೊರತರು; ವಜ್ರ: ಬೆಲೆಬಾಳುವ ರತ್ನ; ಅಂಗಿ: ಕವಚ; ಮೈ: ತನು; ಹೊಂಬರಹ: ಚಿನ್ನದ ಲೇಖನ; ಸುರತ್ನ: ಒಳ್ಳೆಯ ಮಣಿ; ಆಳಿ: ಸಾಲು; ಬಲು: ಬಹಳ; ಸೀಸಕ: ಟೊಪ್ಪಿಗೆ, ಶಿರಸ್ತ್ರಾಣ; ಅಳವಡಿಸು: ಜೋಡಿಸು; ಸಿರಿ: ಐಶ್ವರ್ಯ, ಶ್ರೇಷ್ಠ; ಮುಡಿ: ಶಿರ; ಝಗ: ಹೊಳಪು; ಬೆಳುದಿಂಗಳು: ಹುಣ್ಣಿಮೆ; ತೆಳುವು: ನವುರು, ಸೂಕ್ಷ್ಮತೆ; ತೊಳಗು: ಕಾಂತಿ, ಪ್ರಕಾಶ; ದುಕೂಲ: ರೇಷ್ಮೆ ಬಟ್ಟೆ; ಬಿಗಿ: ಕಟ್ಟು, ಬಂಧಿಸು; ಮೊನೆ: ತುದಿ, ಕೊನೆ, ಹರಿತವಾದ; ಮುಂಜೆರಗು: ಹೊದ್ದ ವಸ್ತ್ರದ ಅಂಚು, ಸೆರಗಿನ ತುದಿ; ದೇಸಿ: ಗತ್ತು, ಠೀವಿ;

ಪದವಿಂಗಡಣೆ:
ತೆಗೆದು +ವಜ್ರಾಂಗಿಯನು +ಮೈಯಲಿ
ಬಿಗಿದು +ಹೊಂಬರಹದ +ಸುರತ್ನಾ
ಳಿಗಳ+ ಬಲು+ಸೀಸಕವನ್+ಅಳವಡಿಸಿದನು +ಸಿರಿಮುಡಿಗೆ
ಝಗಝಗಿಪ +ಬೆಳುದಿಂಗಳಿನ+ ತೆಳು
ದಗಡೆನಲು +ತೊಳಗುವ +ದುಕೂಲವ
ಬಿಗಿದು +ಮೊನೆ+ಮುಂಜೆರಗನ್+ಅಳವಡಿಸಿದನು +ದೇಸಿಯಲಿ

ಅಚ್ಚರಿ:
(೧) ತೆಗೆದು, ಬಿಗಿದು – ಪ್ರಾಸ ಪದ
(೨) ಒಂದೇ ಪದವಾಗಿ ರಚನೆ – ಬಲುಸೀಸಕವನಳವಡಿಸಿದನು, ಮೊನೆಮುಂಜೆರಗನಳವಡಿಸಿದನು

ಪದ್ಯ ೨೦: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು?

ಶಶಿರುಚಿಗೆ ಸೈರಿಸದ ಸಿರಿಮುಡಿ
ಬಿಸಿಲ ಸೆಕೆಗಾಂತುದೆ ಸುಗಂಧ
ಪ್ರಸರಪೂರ್ಣಘ್ರಾಣವೀ ಹಳೆವೆಣನ ಹೊಲಸಿನಲಿ
ಉಸುರುದೆಗಹಾದುದೆ ಸುಗೀತದ
ರಸದ ಮಧುವಿಂಗಾಂತ ಕಿವಿ ವಾ
ಯಸ ಸೃಗಾಲಧ್ವನಿಗೆ ಸೊಗಸಿತೆ ತಂದೆ ಕುರುರಾಯ (ಗದಾ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಸಂಜಯನು ತನ್ನ ಮಾತನ್ನು ಮುಂದುವರೆಸುತ್ತಾ, ತಂದೆ ಕುರುರಾಯ, ಬೆಳುದಿಂಗಳನ್ನೂ ತಡೆಯದ ನಿನ್ನ ಮುಡಿಯು ಈಗ ಬಿಸಿಲಿಗೊಡ್ಡಿತೇ? ಸುಗಂಧವನ್ನಾಘ್ರಾಣಿಸುವ ಮೂಗು ಹಳೆಯ ಹೆಣಗಳ ಹೊಲಸು ವಾಸನೆಯಿಂದ ಉಸುರಾಡಲು ಕಷ್ಟಪಡುತ್ತಿದೆಯೇ? ಮಧುರ ಸಂಗೀತದ ರಸವನ್ನು ಕೇಳುವ ಕಿವಿ, ಕಾಗೆ ನರಿಗಳ ಕೂಗನ್ನು ಕೇಳುವಂತಾಯಿತೇ ಎಂದು ಕೊರಗಿದನು.

ಅರ್ಥ:
ಶಶಿ: ಚಂದ್ರ; ರುಚಿ: ಸವಿ; ಸೈರಿಸು: ತಾಳು, ಸಹಿಸು; ಸಿರಿಮುಡಿ: ಶ್ರೇಷ್ಠವಾದ ಶಿರ; ಬಿಸಿಲು: ಸೂರ್ಯನ ಪ್ರಕಾಶ; ಸೆಕೆ: ಹಬೆ; ಸುಗಂಧ: ಪರಿಮಳ: ಪ್ರಸರ: ಹರಡು; ಪೂರ್ಣ: ತುಂಬ; ಘ್ರಾಣ: ಮೂಗು, ಮೂಸುವಿಕೆ; ಹಳೆ: ಹಿಂದಿನ; ಹಳೆವೆಣ: ಬಹಳ ಸಮಯವಾದ ಹೆಣ (ಜೀವವಿಲ್ಲದ ಶರೀರ); ಹೊಲಸು: ಕೊಳಕು, ಅಶುದ್ಧ; ಉಸುರು: ಜೀವ; ತೆಹವು: ತೆರವು, ಬಿಡುವು; ಸುಗೀತ: ಸುಸ್ವರವಾದ ಗಾಯನ, ಸಂಗೀತ; ರಸ: ಸಾರ; ಮಧು: ಜೇನು; ಕಿವಿ: ಕರ್ಣ; ವಾಯಸ: ಕಾಗೆ; ಸೃಗಾಅ: ನರಿ; ಧ್ವನಿ: ಶಬ್ದ; ಸೊಗಸು: ಚೆಂದ; ರಾಯ: ರಾಜ;

ಪದವಿಂಗಡಣೆ:
ಶಶಿರುಚಿಗೆ +ಸೈರಿಸದ +ಸಿರಿಮುಡಿ
ಬಿಸಿಲ +ಸೆಕೆಗಾಂತುದೆ +ಸುಗಂಧ
ಪ್ರಸರ+ಪೂರ್ಣ+ಘ್ರಾಣವೀ +ಹಳೆವೆಣನ +ಹೊಲಸಿನಲಿ
ಉಸುರುದೆಗಹಾದುದೆ +ಸುಗೀತದ
ರಸದ +ಮಧುವಿಂಗಾಂತ +ಕಿವಿ +ವಾ
ಯಸ +ಸೃಗಾಲ+ಧ್ವನಿಗೆ +ಸೊಗಸಿತೆ +ತಂದೆ +ಕುರುರಾಯ

ಅಚ್ಚರಿ:
(೧) ದುರ್ಯೋಧನನ ಹಿಂದಿನ ಸ್ಥಿತಿ – ಶಶಿರುಚಿಗೆ ಸೈರಿಸದ ಸಿರಿಮುಡಿ, ಸುಗಂಧ ಪ್ರಸರಪೂರ್ಣಘ್ರಾಣ, ಸುಗೀತದರಸದ ಮಧುವಿಂಗಾಂತ ಕಿವಿ

ಪದ್ಯ ೫೬: ಶಲ್ಯನು ಧರ್ಮಜನನ್ನು ಹೇಗೆ ಕೆಣಕಿದನು?

ಬರಿಯ ಬೊಬ್ಬಾಟವೊ ಶರಾವಳಿ
ಯಿರಿಗೆಲಸವೇನುಂಟೊ ಧರಣಿಯ
ಲೆರಕ ನಿಮ್ಮೈವರಿಗೆ ಗಡ ದ್ರೌಪದಿಗೆ ಸಮವಾಗಿ
ಹೊರಗು ಗಡ ಕುರುರಾಯನೀಗಳೊ
ಮರುದಿವಸವೋ ಸಿರಿಮುಡಿಗೆ ನೀ
ರೆರೆವ ಪಟ್ಟವದೆಂದು ನಿಮಗೆನುತೆಚ್ಚನಾ ಶಲ್ಯ (ಶಲ್ಯ ಪರ್ವ, ೨ ಸಂಧಿ, ೫೬ ಪದ್ಯ)

ತಾತ್ಪರ್ಯ:
ಬರೀ ಅಬ್ಬರಿಸುವೆಯೋ? ಬಾಣಗಳಿಂದ ಹೊಡೆಯುವುದು ಹೇಗೆಂಬ ಅರಿವಿದೆಯೋ? ನಿಮ್ಮೈವರಿಗೂ ದ್ರೌಪದಿಯು ಪತ್ನಿ, ಹಾಗೆಯೇ ಭೂಮಿಯು ಸಹ. ಕೌರವನಾದರೋ ಹೊರಗಿನವನು, ಅವನನ್ನು ಬಿಟ್ಟು, ಈ ಭೂಮಿಯ ಚಕ್ರಾಧಿಪತ್ಯದ ಅಭಿಷೇಕ ನೆನಗೆ ಎಂದಾಗುತ್ತದೆ ಎಂದು ಹೇಳುತ್ತ ಬಾಣಗಳನ್ನು ಬಿಟ್ಟನು.

ಅರ್ಥ:
ಬರಿ: ಕೇವಲ; ಬೊಬ್ಬಾಟ: ಆರ್ಭಟ, ಅಬ್ಬರ; ಶರಾವಳಿ: ಬಾಣಗಳ ಸಾಲು; ಕೆಲಸ: ಕಾರ್ಯ; ಧರಣಿ: ಭೂಮಿ; ಎರಕ: ಪ್ರೀತಿ, ಅನುರಾಗ; ಗಡ: ಅಲ್ಲವೆ; ಸಮ: ಸರಿಯಾದ; ಹೊರಗು: ಆಚೆಯವ; ರಾಯ: ರಾಜ; ಮುಡಿ: ತಲೆ; ಸಿರಿ: ಐಶ್ವರ್ಯ; ನೀರು: ಜಲ; ಎರೆವ: ಹಾಕುವ, ಸಲುಹು; ಪಟ್ಟ: ಅಧಿಕಾರ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಬರಿಯ +ಬೊಬ್ಬಾಟವೊ +ಶರಾವಳಿ
ಯಿರಿ+ಕೆಲಸವೇನುಂಟೊ +ಧರಣಿಯಲ್
ಎರಕ +ನಿಮ್ಮೈವರಿಗೆ+ ಗಡ+ ದ್ರೌಪದಿಗೆ +ಸಮವಾಗಿ
ಹೊರಗು+ ಗಡ+ ಕುರುರಾಯನ್+ಈಗಳೊ
ಮರುದಿವಸವೋ +ಸಿರಿಮುಡಿಗೆ+ ನೀ
ರೆರೆವ+ ಪಟ್ಟವದೆಂದು +ನಿಮಗೆನುತ್+ಎಚ್ಚನಾ +ಶಲ್ಯ

ಅಚ್ಚರಿ:
(೧) ರಾಜ್ಯಾಭಿಷೇಕ ಎಂದು ಹೇಳುವ ಪರಿ – ಸಿರಿಮುಡಿಗೆ ನೀರೆರೆವ ಪಟ್ಟ
(೨) ಧರ್ಮಜನನ್ನು ಹಂಗಿಸುವ ಪರಿ – ಬರಿಯ ಬೊಬ್ಬಾಟವೊ ಶರಾವಳಿಯಿರಿಗೆಲಸವೇನುಂಟೊ

ಪದ್ಯ ೨: ಊರ್ವಶಿಯು ಹೇಗೆ ಸಿಂಗಾರಗೊಂಡಳು?

ವನಜಲೋಚನೆ ಮಾಡಿದಳು ಮ
ಜ್ಜನವನಮಳ ದುಕೂಲ ಪರಿ ಮಂ
ಡನದಲೆಸೆದಳು ವಿವಿಧ ರತ್ನಾಭರಣ ಶೋಭೆಯಲಿ
ತನತನಗೆ ಭರಣಿಗಳ ಲನುಲೇ
ಪನವ ತಂದರು ವಿಳಸದಧಿವಾ
ಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ (ಅರಣ್ಯ ಪರ್ವ, ೯ ಸಂಧಿ, ೨ ಪದ್ಯ)

ತಾತ್ಪರ್ಯ:
ಕಮಲಲೋಚನೆಯಾದ ಊರ್ವಶಿಯು ಸ್ನಾನ ಮಾಡಿ, ಉತ್ತಮವಾದ ರೇಷ್ಮೆ ವಸ್ತ್ರವನ್ನು ತೊಟ್ಟು, ರತ್ನಾಭರಣಗಳನ್ನು ಧರಿಸಿದಳು. ಸಖಿಯರು ಭರಣಿಗಳಲ್ಲಿ ಅನುಲೇಪಗಳನ್ನು ತಂದುಕೊಟ್ಟು, ಸುಗಂಧ ಪೂರಿತವಾದ ಹೂವಿನ ಮೊಗ್ಗುಗಳಿಂದ ಅವಳ ಮುಡಿಯನ್ನು ಅಲಂಕರಿಸಿದಳು.

ಅರ್ಥ:
ವನಜ: ಕಮಲ; ಲೋಚನೆ: ಕಣ್ಣು; ಮಜ್ಜನ: ಸ್ನಾನ; ದುಕೂಲ: ರೇಷ್ಮೆ ಬಟ್ಟೆ; ಪರಿ: ರೀತಿ; ಮಂಡನ:ಸಿಂಗರಿಸುವುದು, ಅಲಂಕರಿಸುವುದು; ಎಸೆ: ತೋರು; ವಿವಿಧ: ಹಲವಾರು; ರತ್ನ: ಬೆಲೆಬಾಳುವ ಮಣಿ; ಆಭರಣ: ಒಡವೆ; ಶೋಭೆ: ಚೆಲುವು, ಕಾಂತಿ, ಹೊಳಪು; ಭರಣಿ: ಒಡವೆ, ವಸ್ತುಗಳನ್ನು ಇಡುವ ಮುಚ್ಚಳವಿರುವ ಸಂಪುಟ, ಡಬ್ಬಿ ಅನುಲೇಪ: ತೊಡೆತ, ಬಳಿಯುವಿಕೆ; ವಾಸನೆ: ಸುಗಂಧ; ಕುಸುಮ: ಹೂವು; ಮೊಗ್ಗೆ: ಪೂರ್ತಿಯಾಗಿ ಅರಳದೆ ಇರುವ ಹೂವು, ಮುಗುಳು; ರಚಿಸು: ನಿರ್ಮಿಸು; ಸಿರಿ: ಶ್ರೇಷ್ಠ; ಮುಡಿ: ತಲೆ, ಶಿರ;

ಪದವಿಂಗಡಣೆ:
ವನಜಲೋಚನೆ+ ಮಾಡಿದಳು +ಮ
ಜ್ಜನವನ್+ಅಮಳ +ದುಕೂಲ +ಪರಿ+ ಮಂ
ಡನದಲ್+ಎಸೆದಳು +ವಿವಿಧ +ರತ್ನಾಭರಣ +ಶೋಭೆಯಲಿ
ತನತನಗೆ+ ಭರಣಿಗಳಲ್ +ಅನುಲೇ
ಪನವ +ತಂದರು +ವಿಳಸದ್+ಅಧಿ+ವಾ
ಸನೆಯ +ಕುಸುಮದ +ಮೊಗ್ಗೆಯಲಿ +ರಚಿಸಿದರು+ ಸಿರಿ+ಮುಡಿಯ

ಅಚ್ಚರಿ:
(೧) ಶೃಂಗರಿಸುವ ಪರಿ – ವಿಳಸದಧಿವಾಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ

ಪದ್ಯ ೬೫: ದುಶ್ಯಾಸನು ಕೋಪಗೊಂಡು ಹೇಗೆ ದ್ರೌಪದಿಯ ಮುಡಿಗೆ ಕೈಹಾಕಿದ?

ಎಲ್ಲಿಯದು ದುಷ್ಪ್ರಶ್ನೆ ಮರು ಮಾ
ತೆಲ್ಲಿಯದು ನೀ ಪುಷ್ಪವತಿಯಾ
ಗಿಲ್ಲಿ ಫಲವತಿಯಾಗು ನಡೆ ಕುರುರಾಯ ಭವನದಲಿ
ಖುಲ್ಲರೈವರು ತಮ್ಮ ಸೋತರು
ಬಲ್ಲವಿಕೆಯುಚಿತವನು ಮೌಳಿಯ
ನಲ್ಲಿ ತೋರಾಯೆನುತ ತಪ್ಪಿದನಹಹ ಸಿರಿಮುಡಿಗೆ (ಸಭಾ ಪರ್ವ, ೧೫ ಸಂಧಿ, ೬೫ ಪದ್ಯ)

ತಾತ್ಪರ್ಯ:
ದ್ರೌಪದಿಯ ಮಾತಿನಿಂದ ಕೋಪಗೊಂಡ ದುಶ್ಯಾಸನನು ನಿನ್ನದೆಂತಹ ದುಷ್ಟ ಪ್ರಶ್ನೆ, ಅದಕ್ಕೆ ಉತ್ತರವೇಕೆ. ನೀನಿಲ್ಲಿ ಪುಷ್ಪವತಿಯಾಗಿದ್ದೀಯ ನಡೆ ದುರ್ಯೋಧನನ ಅರಮನೆಯಲ್ಲಿ ಫಲವತಿಯಾಗು, ಕೆಲಸಕ್ಕೆ ಬಾರದ ಐವರು ತಮ್ಮನ್ನೇ ತಾವು ಸೋತಿದ್ದಾರೆ, ನಿನ್ನ ಉಚಿತವಾದ ತಿಳುವಳಿಕೆಯನ್ನು, ಬುದ್ಧಿಯನ್ನು ಅಲ್ಲಿ ತೋರಿಸು ಎನ್ನುತಾ ಅಯ್ಯೋ ಆಕೆಯ ಸಿರಿಮುಡಿಗೆ ಕೈಹಾಕಿದನು.

ಅರ್ಥ:
ದುಷ್ಪ್ರಶ್ನೆ: ದುಷ್ಟ ಪ್ರಶ್ನೆ; ಪ್ರಶ್ನೆ: ಪೃಚ್ಛೆ; ಮರು: ತಿರುಗಿ; ಮಾತು: ವಾಕ್, ನುಡಿ; ಪುಷ್ಪವತಿ: ಋತುವತಿ; ಫಲವತಿ: ಗರ್ಭಿಣಿ; ಕುರುರಾಯ: ದುರ್ಯೋಧನ; ಭವನ: ಅರಮನೆ; ಖುಲ್ಲ: ನೀಚ, ದುಷ್ಟ; ಸೋಲು: ಪರಾಭವ; ಬಲ್ಲವಿಕೆ: ತಿಳುವಳಿಕೆ; ಉಚಿತ: ಸರಿಯಾದುದ; ಮೌಳಿ: ತಲೆ; ತೋರು: ಪ್ರದರ್ಶಿಸು; ತಪ್ಪಿದ: ಸರಿನಡಿಗೆಯಲ್ಲದ; ಅಹಹ: ಅಯ್ಯೋ; ಸಿರಿ: ಶ್ರೇಷ್ಠ; ಮುಡಿ: ತಲೆ, ಶಿರ;

ಪದವಿಂಗಡಣೆ:
ಎಲ್ಲಿಯದು+ ದುಷ್ಪ್ರಶ್ನೆ +ಮರು +ಮಾ
ತೆಲ್ಲಿಯದು +ನೀ +ಪುಷ್ಪವತಿಯಾ
ಗಿಲ್ಲಿ+ ಫಲವತಿಯಾಗು +ನಡೆ +ಕುರುರಾಯ +ಭವನದಲಿ
ಖುಲ್ಲರ್+ಐವರು +ತಮ್ಮ +ಸೋತರು
ಬಲ್ಲವಿಕೆ+ಉಚಿತವನು +ಮೌಳಿಯ
ನಲ್ಲಿ+ ತೋರಾ+ಎನುತ +ತಪ್ಪಿದನ್+ಅಹಹ+ ಸಿರಿಮುಡಿಗೆ

ಅಚ್ಚರಿ:
(೧) ದುಶ್ಯಾಸನ ನೀಚ ಮಾತು – ನೀ ಪುಷ್ಪವತಿಯಾಗಿಲ್ಲಿ ಫಲವತಿಯಾಗು ನಡೆ ಕುರುರಾಯ ಭವನದಲಿ
(೨) ಕವಿಯೇ ನೊಂದು ಬರೆದ ಅನುಭವ – ತಪ್ಪಿದನಹಹ ಸಿರಿಮುಡಿಗೆ
(೩) ದ್ರೌಪದಿಯ ಶಿರವನ್ನು ವರ್ಣಿಸುವ ಪದ – ಸಿರಿಮುಡಿ

ಪದ್ಯ ೧೭: ಸೈನಿಕರು ಭೀಮಸೇನಂಗೆ ಏನು ಹೇಳಿದರು?

ಅರಸ ಕೇಳೈ ಸಮರಭೂಮಿಗೆ
ಪರಿದರರಸಾಳುಗಳು ರಾಯನ
ಸಿರಿಮುಡಿಗೆ ಸುಕ್ಷೇಮ ಮುಚ್ಚಿದವೇರುಮದ್ದಿನಲಿ
ಮರಳಿ ನೇಮವ ಕೊಂಡು ಫಲುಗುಣ
ಬರುತಲೈದನೆ ಜೀಯ ನಿಮ್ಮಯ
ಚರಣ ಸರಸಿಜದಾಣೆಯೆಂದರು ಭೀಮಸೇನಂಗೆ (ಕರ್ಣ ಪರ್ವ, ೧೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಧರ್ಮಜನ ದೂತರು ರಣರಂಗಕ್ಕೆ ಭೀಮನ ಬಳಿ ಬಂದು, ಒಡೆಯ ನಿಮ್ಮ ಚರಣಪದ್ಮಗಳ ಪ್ರಮಾಣವಾಗಿ ಅರಸನ ಗಾಯಗಳು ಔಷಧದಿಂದ ಮಾಗಿದವು, ಅರ್ಜುನನು ಅರಸನ ಅಪ್ಪಣೆಯಂತೆ ರಣರಂಗಕ್ಕೆ ಬರುತ್ತಿದ್ದಾನೆ ಎಂದು ತಿಳಿಸಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಸಮರಭೂಮಿ: ಯುದ್ಧಭೂಮಿ; ಆಳು: ಸೈನಿಕ; ರಾಯ: ರಾಜ; ಸಿರಿಮುಡಿ: ಶ್ರೇಷ್ಠವಾದ ಶಿರ; ಸುಕ್ಷೇಮ: ಸೌಖ್ಯ; ಮುಚ್ಚಿದವು: ಮಾಗು, ಮರೆಮಾಡು; ಏರು: ಹೆಚ್ಚು; ಮದ್ದು: ಔಷಧಿ; ಮರಳಿ: ಮತ್ತೆ; ನೇಮ: ನಿಯಮ, ಆಜ್ಞೆ; ಕೊಂಡು: ಪಡೆದು; ಬರುತ: ಆಗಮಿಸುತ; ಜೀಯ: ಒಡೆಯ; ಚರಣ: ಪಾದ; ಸರಸಿಜ: ಕಮಲ; ಆಣೆ: ಪ್ರಮಾಣ;

ಪದವಿಂಗಡಣೆ:
ಅರಸ +ಕೇಳೈ +ಸಮರ+ಭೂಮಿಗೆ
ಪರಿದರ್+ಅರಸಾಳುಗಳು +ರಾಯನ
ಸಿರಿಮುಡಿಗೆ +ಸುಕ್ಷೇಮ +ಮುಚ್ಚಿದವ್+ಏರು+ಮದ್ದಿನಲಿ
ಮರಳಿ +ನೇಮವ +ಕೊಂಡು +ಫಲುಗುಣ
ಬರುತಲೈದನೆ+ ಜೀಯ +ನಿಮ್ಮಯ
ಚರಣ+ ಸರಸಿಜದಾಣೆ+ ಎಂದರು +ಭೀಮಸೇನಂಗೆ

ಅಚ್ಚರಿ:
(೧) ಅರಸ, ರಾಯ – ಸಮನಾರ್ಥಕ ಪದಗಳು
(೨) ಪಾದಪದ್ಮ ಎಂದು ಸೂಚಿಸಲು – ಚರಣ ಸರಸಿಜ ಎಂಬ ಪದ ಪ್ರಯೋಗ

ಪದ್ಯ ೬: ಧರ್ಮಜನನ್ನು ಯಾರು ನೇವರಿಸುತ್ತಿದ್ದರು?

ಬಿಗಿದು ಕಟ್ಟಿದ ಘಾಯ ಮದ್ದಿನ
ಜಿಗಿಯ ತೈಲದ ತಳಿತ ಲೇಪದ
ಲುಗಿದ ಬಾಣವ್ಯಥೆಯ ಕರ್ಣಧ್ಯಾನಚೇತನದ
ಸೊಗಸು ಮಿಗೆ ದ್ರೌಪದಿಯ ತುದಿವೆರ
ಳುಗುರುವೆರಸಿದ ಸಿರಿಮುಡಿಯ ಬಲು
ದುಗುಡ ಭರದಲಿ ಕುಸಿದ ಭೂಪನ ಕಂಡನಾ ಪಾರ್ಥ (ಕರ್ಣ ಪರ್ವ, ೧೬ ಸಂಧಿ, ೬ ಪದ್ಯ)

ತಾತ್ಪರ್ಯ:
ಧರ್ಮಜನಿಗೆ ಪೆಟ್ಟಾದ ಜಾಗದಲ್ಲಿ ಔಷಧಿ ಲೇಪಿಸಿ ತೈಲ ಹಚ್ಚಿ ಬಟ್ಟೆಯನ್ನು ಕಟ್ಟಿದ್ದರು. ಆ ಬಟ್ಟೆಯಿಂದ ತೈಲವು ತೊಟ್ಟಾಗಿ ಕೆಳಗೆಬೀಳುತ್ತಿತ್ತು, ಈ ಜೌಷಧಿಗಳಿಂದ ಬಾಣದ ನೋವನ್ನು ಬಿಸಿ ಉಸಿರಿನಿಂದ ಹೊರಹೊಮ್ಮುತ್ತಿದ್ದರೆ, ಧರ್ಮಜನ ಮನಸ್ಸು ಕರ್ಣನ ಧ್ಯಾನದಲ್ಲಿ ಚಿಂತಿಸುತ್ತಿತ್ತು. ಸೌಂದರ್ಯವತಿಯಾದ ದ್ರೌಪದಿಯು ತನ್ನೆರಡು ಬೆರಳಿನ ಉಗುರುಗಳಿಂದ ಧರ್ಮಜನ ಶಿರವನ್ನು ನೇವರಿಸುತ್ತಿದ್ದ ಶಕ್ತಿಹೀನನಾಗಿ ದುಃಖಿತನಾಗಿ ಕುಸಿದ ಧರ್ಮಜನನ್ನು ಅರ್ಜುನನು ಕಂಡನು.

ಅರ್ಥ:
ಬಿಗಿ: ಭದ್ರವಾಗಿ, ಗಟ್ಟಿಯಾಗಿ; ಕಟ್ಟು: ಬಂಧಿಸು; ಘಾಯ: ಪೆಟ್ಟು; ಮದ್ದು: ಔಷಧಿ; ಜಿಗಿ:ತೊಟ್ಟಿಕ್ಕು, ಜಿನುಗು; ತೈಲ: ಎಣ್ಣೆ; ತಳಿತ: ಚಿಗುರಿದ; ಲೇಪ: ಬಳಿಯುವಿಕೆ, ಹಚ್ಚುವಿಕೆ; ಉಗಿ: ಹೊರಕ್ಕೆ ತೆಗೆ; ಬಾಣ: ಸರಳು; ವ್ಯಥೆ: ನೋವು; ಧ್ಯಾನ: ಚಿಂತನೆ, ಮನನ; ಚೇತನ: ಮನಸ್ಸು; ಸೊಗಸು: ಚೆಲುವು; ಮಿಗೆ: ಅಧಿಕವಾಗಿ, ಮತ್ತು; ತುದಿ: ಅಗ್ರಭಾಗ; ಉಗುರು: ನಖ; ಸಿರಿ: ಶ್ರೇಷ್ಠ, ಚಿನ್ನ; ಮುಡಿ: ಶಿರ; ಬಲು: ಬಹಳ; ದುಗುಡ: ದುಃಖ; ಭರ: ರಭಸ, ವೇಗ; ಕುಸಿ: ಕೆಳಕ್ಕೆ ಬೀಳು; ಭೂಪ: ರಾಜ; ಕಂಡು: ನೋಡು;

ಪದವಿಂಗಡಣೆ:
ಬಿಗಿದು +ಕಟ್ಟಿದ +ಘಾಯ +ಮದ್ದಿನ
ಜಿಗಿಯ +ತೈಲದ +ತಳಿತ +ಲೇಪದಲ್
ಉಗಿದ +ಬಾಣವ್ಯಥೆಯ +ಕರ್ಣಧ್ಯಾನ+ಚೇತನದ
ಸೊಗಸು +ಮಿಗೆ +ದ್ರೌಪದಿಯ +ತುದಿವೆರಳ್
ಉಗುರುವೆರಸಿದ +ಸಿರಿಮುಡಿಯ +ಬಲು
ದುಗುಡ +ಭರದಲಿ+ ಕುಸಿದ+ ಭೂಪನ +ಕಂಡನಾ +ಪಾರ್ಥ

ಅಚ್ಚರಿ:
(೧) ಬಿಗಿ, ಜಿಗಿ, ಉಗಿ – ಪ್ರಾಸ ಪದಗಳ ಬಳಕೆ
(೨) ದ್ರೌಪದಿಯು ನೇವರಿಸುವ ಬಗೆ – ಸೊಗಸು ಮಿಗೆ ದ್ರೌಪದಿಯ ತುದಿವೆರಳುಗುರುವೆರಸಿದ ಸಿರಿಮುಡಿಯ

ಪದ್ಯ ೧೪: ಕೃಷ್ಣನು ಯುಧಿಷ್ಠಿರನ ನಿರ್ಧಾರವನ್ನು ಮಕ್ಕಳಾಟವೆಂದೇಕೆ ಹೇಳಿದನು?

ನಕ್ಕನಸುರ ವಿರೋಧಿ ಮುನಿ ಹಾ
ಯಿಕ್ಕಿದನಲಾ ಬಲೆಯನಕಟಾ
ಸಿಕ್ಕಿದಿರಲಾ ಸ್ವಾಮಿದ್ರೋಹರು ಸದರವೇ ನೃಪರು
ಅಕ್ಕಜದ ಮಖವಿದರ ಚೂಣಿಗೆ
ಚುಕ್ಕಿಯಾಯಿತು ಮನಮಹೀಶನ
ಮಕ್ಕಳಾಟಿಕೆಯಾಯ್ತೆನುತ ತೂಗಿದನು ಸಿರಿಮುಡಿಯ (ಸಭಾ ಪರ್ವ, ೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಮಾತನ್ನು ಕೇಳಿದ ಶ್ರೀಕೃಷ್ಣನು “ನಾರದರು ಬೀಸಿದ ಬಲೆಗೆ ನೀವು ಸಿಕ್ಕಿಬಿದ್ದಿರಿ, ಅಯ್ಯೋ, ತಂದೆಗೆ ದ್ರೋಹಮಾಡಬಾರದೆಂದು ನೀವು ಸಿಕ್ಕಿಬಿದ್ದಿರೆ? ಭೂಮಂಡಲದ ರಾಜರು ಸುಲಭವಾಗಿ ಒಪ್ಪುವರೆಂದು ನೀವು ತಿಳಿದಿದ್ದೀರ? ಅತಿಶಯ ಕಷ್ಟದಿಂದ ಸಾಧಿಸಬಹುದಾರ ಈ ಯಾಗದ ಆಕ್ರಮಣಕ್ಕೆ ರಾಜನ ಮನಸ್ಸು ಬಲಿಯಾಯಿತೆ? ಇದೇನು ಮಕ್ಕಳಾಟವೇ ಎಂದು ಶ್ರೀಕೃಷ್ಣನು ತಲೆಯಲ್ಲಾಡಿಸಿದನು.

ಅರ್ಥ:
ನಕ್ಕು: ಸಂತೋಷಿಸು; ಅಸುರ: ರಾಕ್ಷರ; ವಿರೋಧಿ: ವೈರಿ; ಅಸುರವಿರೋಧಿ: ಕೃಷ್ಣ; ಮುನಿ: ಋಷಿ (ಇಲ್ಲಿ ನಾರದರು); ಹಾಯಿಕ್ಕು: ಹಾಕು; ಬಲೆ: ಜಾಲ; ಅಕಟ: ಅಯ್ಯೋ; ಸಿಕ್ಕಿ: ಸೆರೆಯಾಗು; ಸ್ವಾಮಿದ್ರೋಹ: ಒಡೆಯನಿಗೆ ಮೋಸಮಾಡುವುದು; ಸದರ: ಸುಲಭ, ಸರಾಗ; ನೃಪ: ರಾಜ; ಅಕ್ಕಜ: ಹೊಟ್ಟೆಕಿಚ್ಚು, ಅಸೂಯೆ; ಮಖ: ಯಾಗ; ಚೂಣಿ: ಮುಂಭಾಗ; ಚುಕ್ಕಿ: ಬಿಂದು, ಚಿಹ್ನೆ; ಮನ: ಮನಸ್ಸು; ಮಹೀಶ: ರಾಜ; ಆಟ: ಕ್ರೀಡೆ; ತೂಗು: ಅಲ್ಲಾಡಿಸು; ಸಿರಿಮುಡಿ: ಶಿರ, ತಲೆ;

ಪದವಿಂಗಡಣೆ:
ನಕ್ಕನಸುರ+ ವಿರೋಧಿ +ಮುನಿ +ಹಾ
ಯಿಕ್ಕಿದನಲಾ +ಬಲೆಯನ್+ಅಕಟಾ
ಸಿಕ್ಕಿದಿರಲಾ+ ಸ್ವಾಮಿ+ದ್ರೋಹರು +ಸದರವೇ +ನೃಪರು
ಅಕ್ಕಜದ+ ಮಖವಿದರ+ ಚೂಣಿಗೆ
ಚುಕ್ಕಿಯಾಯಿತು+ ಮನ+ಮಹೀಶನ
ಮಕ್ಕಳಾಟಿಕೆಯಾಯ್ತ್+ಎನುತ +ತೂಗಿದನು +ಸಿರಿಮುಡಿಯ

ಅಚ್ಚರಿ:
(೧) ಪ್ರಾಸ ಪದಗಳು: ಇಕ್ಕಿ, ಚುಕ್ಕಿ, ಸಿಕ್ಕಿ
(೨) ಮಹೀಶ, ನೃಪ – ರಾಜ ಪದದ ಸಮನಾರ್ಥಕ ಪದ, ೩, ೫ ಸಾಲಿನ ಕೊನೆ ಪದ
(೩) ಕೃಷ್ಣನನ್ನು ಅಸುರವಿರೋಧಿ ಎಂದು ಕರೆದಿರುವುದು