ಪದ್ಯ ೨೮: ಧರ್ಮಜಾದಿಯರನ್ನು ಯಾರು ತಡೆದರು?

ಅರಸು ಮಕ್ಕಳ ಕೊಂದನೈನೂ
ರ್ವರನು ಮೂರಕ್ಷೋಣಿ ಸೈನ್ಯವ
ನೊರಸಿದನು ಮಸೆಗಾಣಿಸಿದನಗ್ಗದ ಮಹಾರಥರ
ಧುರವ ಗೆಲಿದನು ಪಡಿತಳಿಸಿ ನಾ
ವುರವಣಿಸಲಡಹಾಯ್ದು ನಮ್ಮನು
ಹರನ ವರವುಂಟೆಂದು ತಡೆದನು ಸಿಂಧು ಭೂಪಾಲ (ದ್ರೋಣ ಪರ್ವ, ೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಐನೂರು ರಾಜಕುಮಾರರನ್ನು ಕೊಂದನು, ಮೂರು ಅಕ್ಷೋಹಿಣಿ ಸೈನ್ಯವನ್ನು ಒರಸಿದನು. ಮಹಾರಥರ ಮೈಗಳನ್ನು ಗಾಯಗೊಳಿಸಿದನು. ಅವನು ಅತ್ತ ಜಯಶಾಲಿಯಾಗುತ್ತಿದ್ದಾಗ ನಾವು ಅವನ ಹಿಂದೆ ಹೋಗಲು ಪದ್ಮವ್ಯೂಹದ ಬಾಗಿಲಿನಲ್ಲಿ ನನಗೆ ಶಿವನ ವರವಿದೆ, ಎಂದು ಸೈಂಧವನು ನಮ್ಮನ್ನು ತಡೆದನು.

ಅರ್ಥ:
ಅರಸು: ರಾಜ; ಮಕ್ಕಳು: ಸುತ; ಕೊಂದು: ಸಾಯಿಸು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಸೈನ್ಯ: ಸೇನೆ; ಒರಸು: ನಾಶ; ಮಸೆ: ಉಜ್ಜು, ತಿಕ್ಕು; ಅಗ್ಗ: ಶ್ರೇಷ್ಠ; ಮಹಾರಥ: ಪರಾಕ್ರಮ; ಧುರ: ಯುದ್ಧ; ಗೆಲಿದು: ಜಯಿಸು; ಪಡಿತಳ: ಮುನ್ನುಗ್ಗುವಿಕೆ, ಆಕ್ರಮಣ; ಉರವಣಿಸು: ಆತುರಿಸು; ಅಡಹಾಯ್ದು: ಅಡ್ಡ ಬಂದು ಹೋರಾಡು; ಹರ: ಶಿವ; ವರ: ಆಶೀರ್ವಾದ; ತಡೆ: ನಿಲ್ಲಿಸು; ಭೂಪಾಲ: ರಾಜ; ಸಿಂಧುಭೂಪಾಲ: ಸೈಂಧವ;

ಪದವಿಂಗಡಣೆ:
ಅರಸು +ಮಕ್ಕಳ +ಕೊಂದನ್+ಐನೂ
ರ್ವರನು +ಮೂರಕ್ಷೋಣಿ +ಸೈನ್ಯವನ್
ಒರಸಿದನು +ಮಸೆಗಾಣಿಸಿದನ್+ಅಗ್ಗದ +ಮಹಾರಥರ
ಧುರವ +ಗೆಲಿದನು +ಪಡಿತಳಿಸಿ +ನಾವ್
ಉರವಣಿಸಲ್+ಅಡಹಾಯ್ದು +ನಮ್ಮನು
ಹರನ +ವರವುಂಟೆಂದು +ತಡೆದನು +ಸಿಂಧು +ಭೂಪಾಲ

ಅಚ್ಚರಿ:
(೧) ಸೈಂಧವ ನೆಂದು ಹೇಳಲು – ಸಿಂಧು ಭೂಪಾಲ ಪದದ ಬಳಕೆ
(೨) ಅಭಿಮನ್ಯುವಿನ ಪರಾಕ್ರಮ – ಅರಸು ಮಕ್ಕಳ ಕೊಂದನೈನೂರ್ವರನು ಮೂರಕ್ಷೋಣಿ ಸೈನ್ಯವ
ನೊರಸಿದನು ಮಸೆಗಾಣಿಸಿದನಗ್ಗದ ಮಹಾರಥರ

ಪದ್ಯ ೧೭: ಅರ್ಜುನನು ದುಃಖದಿಂದ ಅಭಿಮನ್ಯುವನ್ನು ಹೇಗೆ ಕರೆದನು?

ಕಂದನಾವೆಡೆ ತನ್ನ ಮೋಹದ
ಸಿಂಧುವಾವೆಡೆ ತನುಜವನ ಮಾ
ಕಂದನಾವೆಡೆ ಹೇಳೆನುತ ಫಲುಗುಣನು ತೊದಳಿಸುತ
ನೊಂದು ಮನದಲಿ ಪಾರ್ಥನಾ ಸತಿ
ಯಂದವನು ಕಾಣುತ್ತ ಬೆದೆಬೆದೆ
ಬೆಂದು ಯಮರಾಜನ ಕುಮಾರನ ಮೊಗವ ನೋಡಿದನು (ದ್ರೋಣ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅರ್ಜುನನು ತೊದಲುತ್ತಾ, ಮಗನೆಲ್ಲಿ, ನನ್ನ ಪ್ರೀತಿಯ ಸಾಗರವೆಲ್ಲಿ, ಬಾಲಕರ ಉದ್ಯಾನದ ಮಾವಿನ ಮರವೆಲ್ಲಿ ಹೇಳು ಎಂದು ಮನಸ್ಸಿನಲ್ಲಿ ನೊಂದು, ಸುಭದ್ರೆಯ ಸ್ಥಿತಿಯನ್ನು ನೋಡಿ, ಬೆದೆ ಬೆದೆ ಬೆಂದು ಯುಧಿಷ್ಠಿರನ ಮುಖವನ್ನು ನೋಡಿದನು.

ಅರ್ಥ:
ಕಂದ: ಮಗು; ಮೋಹ: ಪ್ರೀತಿ; ಸಿಂಧು: ಸಾಗರ; ತನುಜ: ಮಗ; ವನ: ಉದ್ಯಾನವನ, ಕಾಡು; ಮಾಕಂದ: ಮಾವಿನ ಮರ; ಹೇಳು: ತಿಳಿಸು; ತೊದಲು: ಸರಿಯಾಗಿ ಮಾತನಾಡದ ಸ್ಥಿತಿ; ನೊಂದು: ನೋವನ್ನುಂಡು; ಮನ: ಮನಸ್ಸು; ಸತಿ: ಹೆಂಡತಿ; ಅಂದ: ಸ್ಥಿತಿ; ಕಾಣು: ತೋರು; ಬೆದೆ: ಬೇಯುವುದನ್ನು ವರ್ಣಿಸುವ ಪದ; ಬೆಂದು: ಸಂಕಟಕ್ಕೊಳಗಾಗು; ಯಮ: ಜವ; ಕುಮಾರ: ಮಗ; ಮೊಗ: ಮುಖ; ನೋಡು: ವೀಕ್ಷಿಸು;

ಪದವಿಂಗಡಣೆ:
ಕಂದನ್+ಆವೆಡೆ +ತನ್ನ +ಮೋಹದ
ಸಿಂಧುವ್+ಆವೆಡೆ +ತನುಜ+ವನ+ ಮಾ
ಕಂದನ್+ಆವೆಡೆ +ಹೇಳೆನುತ +ಫಲುಗುಣನು+ ತೊದಳಿಸುತ
ನೊಂದು +ಮನದಲಿ +ಪಾರ್ಥನಾ +ಸತಿ
ಅಂದವನು+ ಕಾಣುತ್ತ +ಬೆದೆ+ಬೆದೆ
ಬೆಂದು +ಯಮರಾಜನ +ಕುಮಾರನ +ಮೊಗವ +ನೋಡಿದನು

ಅಚ್ಚರಿ:
(೧) ಧರ್ಮಜನನ್ನು ಯಮರಾಜನ ಕುಮಾರ ಎಂದು ಕರೆದಿರುವುದು
(೨) ಅಭಿಮನ್ಯುವನ್ನು ಕರೆಯುವ ಪರಿ – ತನ್ನ ಮೋಹದ ಸಿಂಧುವಾವೆಡೆ ತನುಜವನ ಮಾಕಂದನಾವೆಡೆ
(೩) ಕಂದ, ಮಾಕಂದ – ಪದದ ಬಳಕೆ

ಪದ್ಯ ೩೨: ಸಿಂಧುರನ ಪರಾಕ್ರಮ ಹೇಗಿತ್ತು?

ಎದ್ದನವ ಬೊಬ್ಬಿರಿದು ಸಿಂಧುರ
ಗೆದ್ದ ಗರ್ವವನುಗುಳೆನುತಲು
ಬ್ಬೆದ್ದು ಹೊಕ್ಕನು ತೋಳ ತೆಕ್ಕೆಯ ಮಲ್ಲ ಹೋಲಿಕೆಗೆ
ಭದ್ರಗಜ ಕೈಯ್ಯಿಕ್ಕಿದವೊಲುರಿ
ದೆದ್ದು ಸಿಂಧುತರಹರಿಸಿ ಮೇ
ಲೆದ್ದು ಬರಸೆಳೆದೊದೆದು ಕುಸಿದೊತ್ತಿದನು ಮುಷ್ಟಿಯಲಿ (ವಿರಾಟ ಪರ್ವ, ೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಮುಂದಿನ ಮಲ್ಲ ತುಂಬುರನು ಎದ್ದು ಸಿಂಧುರನೆದುರು ಯುದ್ಧಕ್ಕೆ ನಿಂತನು, ಎಲೈ ಸಿಂಧುರ ಗೆದ್ದ ಗರ್ವವನ್ನುಗುಳು, ಎಂದು ಮದಗಜದಂತೆ ಕೈಯಿಟ್ಟು ತೋಳತೆಕ್ಕೆಯಲ್ಲಿ ಬಂಧಿಸಲು, ಸಿಂಧುರನು ಕೋಪದಿಂದೆದ್ದು ತುಂಬುರನನ್ನೆಳೆದು ಅವನ ತಲೆ ಮುಷ್ಟಿಕಟ್ಟಿ ಹೊಡೆದನು.

ಅರ್ಥ:
ಎದ್ದ: ಮೇಲೇಳು; ಬೊಬ್ಬಿರಿ: ಗರ್ಜಿಸು; ಗೆದ್ದು: ಜಯ; ಗರ್ವ: ಅಹಂಕಾರ; ಉಗುಳು: ಹೊರಹಾಕು; ಉಬ್ಬೆದ್ದು: ರಭಸದಿಂದ; ಹೊಕ್ಕು: ಸೇರು; ತೋಳು: ಭುಜ; ತೆಕ್ಕೆ: ಅಪ್ಪುಗೆ, ಆಲಿಂಗನ; ಹೋಲಿಕೆ: ಸಾದೃಶ್ಯ, ಸಾಮ್ಯ; ಭದ್ರ: ದೃಢ, ಗಟ್ಟಿ; ಗಜ: ಆನೆ; ಉರಿ: ಸಂಕಟ; ತರಹರಿಸು: ಕಳವಳಿಸು; ಬರ: ವೇಗ; ಸೆಳೆ: ತನ್ನ ಬಳಿ ಎಳೆದುಕೋ; ಒದೆ: ಕಾಲಿನಲ್ಲಿ ಜಾಡಿಸು; ಕುಸಿ: ಕೆಳಕ್ಕೆ ಬೀಳು; ಒತ್ತು: ಅಮುಕು; ಮುಷ್ಟಿ: ಮುಚ್ಚಿದ ಅಂಗೈ;

ಪದವಿಂಗಡಣೆ:
ಎದ್ದನವ +ಬೊಬ್ಬಿರಿದು +ಸಿಂಧುರ
ಗೆದ್ದ+ ಗರ್ವವನ್+ಉಗುಳ್+ ಎನುತಲ್
ಉಬ್ಬೆದ್ದು +ಹೊಕ್ಕನು +ತೋಳ +ತೆಕ್ಕೆಯ +ಮಲ್ಲ +ಹೋಲಿಕೆಗೆ
ಭದ್ರಗಜ+ ಕೈಯ್ಯಿಕ್ಕಿದವೊಲ್+ಉರಿ
ದೆದ್ದು +ಸಿಂಧು+ತರಹರಿಸಿ +ಮೇ
ಲೆದ್ದು +ಬರಸೆಳೆದ್+ಒದೆದು +ಕುಸಿದ್+ಒತ್ತಿದನು+ ಮುಷ್ಟಿಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭದ್ರಗಜ ಕೈಯ್ಯಿಕ್ಕಿದವೊಲುರಿ
(೨) ಯುದ್ಧದ ವಿವರಣೆ – ಮೇಲೆದ್ದು ಬರಸೆಳೆದೊದೆದು ಕುಸಿದೊತ್ತಿದನು ಮುಷ್ಟಿಯಲಿ