ಪದ್ಯ ೨೭: ಭೀಮಾರ್ಜುನರು ಭಾಷೆಯನ್ನು ಹೇಗೆ ನೆರವೇರಿಸಿದರು?

ತಲೆಯ ಕೊಂಬವಗಡದ ಭಾಷೆಯ
ಸಲಿಸಲೆಂದಾ ದ್ರೋಣತನುಜನ
ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ
ಗೆಲಿದು ತಿರುಗಿದರಿದರು ಸಾಹಸ
ವಳುಕಿಸದೆ ಮೂಜಗದ ಯದುಕುಲ
ತಿಲಕ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ತಲೆಯನ್ನುರುಳಿಸುವೆವೆಂದು ಮಾಡಿದ ಭಾಷೆಯನ್ನುಳಿಸಿಕೊಳ್ಳಲು ಭೀಮಾರ್ಜುನರು ಅಶ್ವತ್ಥಾಮನ ಕಿರೀಟದ ಮಾಣಿಕ್ಯವನ್ನು ತೆಗೆದುಕೊಂಡು ಹೋದರು. ಪಾಂಡವರು ವಿಜಯಶಾಲಿಗಳಾದರು. ಯದುಕುಲ ತಿಲಕನಾದ ವೀರನಾರಾಯಣನ ಕರುಣೆಯಿರಲು ಅವರ ಪರಾಕ್ರಮಕ್ಕೆ ಮೂರು ಲೋಕಗಳೂ ಅಳುಕದಿರುವುದೇ?

ಅರ್ಥ:
ತಲೆ: ಶಿರ; ಕೊಂಬು: ತೆಗೆದುಕೋ; ಅವಗಡ: ಅಸಡ್ಡೆ; ಭಾಷೆ: ನುಡಿ; ಸಲಿಸು: ದೊರಕಿಸಿ ಕೊಡು, ಪೂರೈಸು; ತನುಜ: ಮಗ; ಹೊಳೆ: ಪ್ರಕಾಶಿಸು; ಮಕುಟ: ಕಿರೀಟ; ಮಾಣಿಕ: ಮಾಣಿಕ್ಯ; ಕೊಂಡು: ಪಡೆದು; ಗೆಲಿದು: ಜಯಶಾಲಿ; ತಿರುಗು: ಸುತ್ತು, ಸಂಚರಿಸು; ಸಾಹಸ: ಪರಾಕ್ರಮ, ಶೌರ್ಯ; ಅಳುಕು: ಹೆದರು; ಮೂಜಗ: ತ್ರಿಜಗತ್ತು; ತಿಲಕ: ಶ್ರೇಷ್ಥ; ಕರುಣ: ದಯೆ; ಉತ್ತರಾಯ: ಜವಾಬುದಾರಿ;

ಪದವಿಂಗಡಣೆ:
ತಲೆಯ +ಕೊಂಬ್+ಅವಗಡದ +ಭಾಷೆಯ
ಸಲಿಸಲೆಂದ್+ಆ+ ದ್ರೋಣ+ತನುಜನ
ಹೊಳೆವ +ಮಕುಟದ +ಮಾಣಿಕವ +ಕೊಂಡ್+ಉತ್ತರಾಯದಲಿ
ಗೆಲಿದು +ತಿರುಗಿದ್+ಅರಿದರು+ ಸಾಹಸವ್
ಅಳುಕಿಸದೆ +ಮೂಜಗದ +ಯದುಕುಲ
ತಿಲಕ +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಭಾಷೆಯನ್ನು ತೀರಿಸಿದ ಪರಿ – ದ್ರೋಣತನುಜನ ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ

ಪದ್ಯ ೪೩: ಭೀಮನ ಪರಾಕ್ರಮದ ಮಾತುಗಳು ಹೇಗಿದ್ದವು?

ದೇಹ ಕೀರ್ತಿಗಳೊಳಗೆ ನಿಲುವುದು
ದೇಹವೋ ಕೀರ್ತಿಯೊ ಮುರಾಂತಕ
ಬೇಹುದನು ಬೆಸಸಿದಡೆ ಮಾಡೆನು ಬಲ್ಲಿರೆನ್ನನುವ
ಗಾಹುಗತಕದಲುಳಿವ ಧರ್ಮ
ದ್ರೋಹಿ ತಾನಲ್ಲಿನ್ನು ನೋಡಾ
ಸಾಹಸವನೆನುತಿತ್ತ ಮುರಿದನು ಸರಳ ಸಮ್ಮುಖಕೆ (ದ್ರೋಣ ಪರ್ವ, ೧೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೀಮನು ನುಡಿಯುತ್ತಾ, ದೇಹ ಕೀರ್ತಿಗಳಲ್ಲಿ ನಿಲ್ಲುವುದು ದೇಹವೋ ಕೀರ್ತಿಯೋ? ನಿನಗ ಬೇಕಾದುದನ್ನು ಹೇಳಿಕೊಂಡರೆ ನಾನು ಕೇಳುವವನಲ್ಲ. ನನ್ನ ರೀತಿ ನಿಮಗೆ ಗೊತ್ತಿದೆ, ಮೋಸದಿಂದ ಬದುಕಲು ಬಯಸುವ ಧರ್ಮದ್ರೋಹಿ ನಾನಲ್ಲ. ನನ್ನ ಸಾಹಸವನ್ನು ನೋಡು ಎಂದು ಭೀಮನು ಅಸ್ತ್ರವನ್ನಿದಿರಿಸಿದನು.

ಅರ್ಥ:
ದೇಹ: ಒಡಲು, ಶರೀರ; ಕೀರ್ತಿ: ಯಶಸ್ಸು; ನಿಲುವು: ನಿಂತುಕೊಳ್ಳು; ಮುರಾಂತಕ: ಕೃಷ್ಣ; ಬೇಹುದು: ಬೇಕಾದುದು; ಬೆಸಸು: ಹೇಳು, ಆಜ್ಞಾಪಿಸು; ಬಲ್ಲಿರಿ: ತಿಳಿದ; ಗಾಹು: ಮೋಸ; ಉಳಿವ: ಮಿಕ್ಕ; ಧರ್ಮ: ಧಾರಣೆ ಮಾಡಿದುದು; ದ್ರೋಹ: ಮೋಸ; ಸಾಹಸ: ಪರಾಕ್ರಮ; ಮುರಿ: ಸೀಳು; ಸರಳ: ಬಾಣ; ಸಮ್ಮುಖ: ಎದುರು; ಅನುವು: ರೀತಿ;

ಪದವಿಂಗಡಣೆ:
ದೇಹ +ಕೀರ್ತಿಗಳೊಳಗೆ +ನಿಲುವುದು
ದೇಹವೋ +ಕೀರ್ತಿಯೊ +ಮುರಾಂತಕ
ಬೇಹುದನು+ ಬೆಸಸಿದಡೆ+ ಮಾಡೆನು +ಬಲ್ಲಿರ್+ಎನ್ನ್+ಅನುವ
ಗಾಹುಗತಕದಲ್+ಉಳಿವ +ಧರ್ಮ
ದ್ರೋಹಿ +ತಾನಲ್ಲ್+ಇನ್ನು +ನೋಡಾ
ಸಾಹಸವನ್+ಎನುತ್+ಇತ್ತ +ಮುರಿದನು +ಸರಳ +ಸಮ್ಮುಖಕೆ

ಅಚ್ಚರಿ:
(೧) ಭೀಮನ ಸಾಹಸದ ನುಡಿ – ದೇಹ ಕೀರ್ತಿಗಳೊಳಗೆ ನಿಲುವುದು ದೇಹವೋ ಕೀರ್ತಿಯೊ

ಪದ್ಯ ೨೨: ಕರ್ಣನು ಭೀಮನೊಡನೆ ಹೇಗೆ ಯುದ್ಧ ಮಾಡಿದನು?

ಸಾರೆಲವೊ ಸಾಯದೆ ವೃಥಾಹಂ
ಕಾರವೇತಕೆ ನುಗ್ಗ ಸದೆದ ಕ
ಠೋರ ಸಾಹಸವಿಲ್ಲಿ ಕೊಳ್ಳದು ಕರ್ಣ ತಾನೆನುತ
ಆರಿದೈದಂಬಿನಲಿ ಪವನಕು
ಮಾರಕನನೆಸೆ ಮೇಘ ಘನಗಂ
ಭೀರರವದಲಿ ಭೀಮ ನುಡಿದನು ಭಾನುನಂದನನ (ದ್ರೋಣ ಪರ್ವ, ೧೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಎಲೋ ಭೀಮ, ನುಗ್ಗುನುಸಿಗಳನ್ನು ಬಡಿದು ಬಂಡು ವೃಥ ಅಹಂಕಾರದಿಂದ ಸಾಹಸ ಮಾಡಲು ಬಂದರೆ ಇಲ್ಲಿ ನಡೆಯುವುದಿಲ್ಲ. ನಾನು ಕರ್ಣ, ಎನ್ನುತ್ತಾ ಗರ್ಜಿಸಿ ಭೀಮನನ್ನು ಐದು ಬಾಣಗಳಿಂದ ಹೊಡೆಯಲು ಭೀಮನು ಗಂಭೀರ ಶಬ್ದಗಳಿಂದ ಕರ್ಣನಿಗೆ ಹೀಗೆ ಹೇಳಿದನು.

ಅರ್ಥ:
ಸಾರು: ಪ್ರಕಟಿಸು, ಘೋಷಿಸು; ವೃಥ: ಸುಮ್ಮನೆ; ಅಹಂಕಾರ: ಗರ್ವ; ನುಗ್ಗು: ಳ್ಳಿಕೊಂಡು ಮುಂದೆ ಸರಿ; ಸದೆ: ಹೊಡಿ, ಬಡಿ; ಕಠೋರ: ಬಿರುಸಾದ; ಸಾಹಸ: ಪರಾಕ್ರಮ; ಕೊಳ್ಳು: ಪಡೆ; ಅಂಬು: ಬಾಣ; ಪವನಕುಮರ: ವಾಯುಪುತ್ರ (ಭೀಮ); ಮೇಘ: ಮೋಡ; ಘನ: ಶ್ರೇಷ್ಠ; ಗಂಭೀರ: ಆಳವಾದ; ರವ: ಶಬ್ದ; ನುಡಿ: ಮಾತಾಡಿಸು; ಭಾನು: ಸೂರ್ಯ; ನಂದನ: ಮಗ;

ಪದವಿಂಗಡಣೆ:
ಸಾರ್+ಎಲವೊ +ಸಾಯದೆ +ವೃಥ+ಅಹಂ
ಕಾರವ್+ಏತಕೆ +ನುಗ್ಗ +ಸದೆದ +ಕ
ಠೋರ+ ಸಾಹಸವ್+ಇಲ್ಲಿ +ಕೊಳ್ಳದು +ಕರ್ಣ +ತಾನೆನುತ
ಆರಿದ್+ಐದಂಬಿನಲಿ +ಪವನಕು
ಮಾರಕನನ್+ಎಸೆ +ಮೇಘ +ಘನ+ಗಂ
ಭೀರ + ರವದಲಿ +ಭೀಮ +ನುಡಿದನು +ಭಾನುನಂದನನ

ಅಚ್ಚರಿ:
(೧) ಪವನಕುಮಾರ, ಭಾನುನಂದನ – ಕರ್ಣ ಮತ್ತು ಭೀಮರನ್ನು ಕರೆದ ಪರಿ
(೨) ಭೀಮನ ಆರ್ಭಟ – ಮೇಘ ಘನಗಂಭೀರರವದಲಿ ಭೀಮ ನುಡಿದನು

ಪದ್ಯ ೬೬: ದ್ರೋಣರು ಯುದ್ಧಕ್ಕೆ ಯಾವ ಆಲೋಚನೆಯನ್ನು ಮಾಡಿದ್ದರು?

ವ್ಯೂಹವನು ರಚಿಸುವೆನು ನಾಳಿನೊ
ಳಾಹವಕೆ ತಳತಂತ್ರವೊಂದೇ
ಮೋಹರಕೆ ನಡೆತರಲಿ ಷಡುರಥರಾದಿ ಯಾದವರು
ಸಾಹಸವನುದಯದಲಿ ತೋರುವೆ
ಬಾಹುಬಲವನು ಸೈಂಧವನ ಮೈ
ಗಾಹ ಬಲಿವೆನು ಕಾಂಬೆ ಕೃಷ್ಣನ ನೆನಹ ಬಳಿಕೆಂದ (ದ್ರೋಣ ಪರ್ವ, ೮ ಸಂಧಿ, ೬೬ ಪದ್ಯ)

ತಾತ್ಪರ್ಯ:
ನಾಳೆ ನಮ್ಮ ಸೈನ್ಯವನ್ನೆಲ್ಲಾ ಒಂದೇ ಕಡೆ ಸೇರಲಿ, ಯಾದವರು, ಷಡ್ರಥರೂ ಅಲ್ಲಿಗೇ ಬರಲಿ, ನಾಳೆ ಒಂದು ವ್ಯೂಹವನ್ನು ನಾನು ರಚಿಸಿ, ನನ್ನ ಚಾತುರ್ಯ ಮತ್ತು ಪರಾಕ್ರಮವನ್ನು ತೋರುತ್ತೇನೆ. ಸೈಂಧವನ ಅಂಗರಕ್ಷಣೆಗೆ ಭದ್ರವಾದ ಕಾವಲನ್ನೇರ್ಪಡಿಸುತ್ತೇನೆ, ಆಮೇಲೆ ಕೃಷ್ಣನ ಆಲೋಚನೆಯೇನು ಎಂದು ನೋಡುತ್ತೇನೆ ಎಂದು ಕೌರವನಿಗೆ ಹೇಳಿದರು.

ಅರ್ಥ:
ವ್ಯೂಹ: ಗುಂಪು, ಸಮೂಹ; ರಚಿಸು: ನಿರ್ಮಿಸು; ಆಹವ: ಯುದ್ಧ; ತಳತಂತ್ರ: ಕಾಲಾಳುಗಳ ಪಡೆ, ಸೈನ್ಯ; ಮೋಹರ: ಯುದ್ಧ; ನಡೆತರಲಿ: ಬಂದು ಸೇರಲಿ; ಷಡುರಥ: ಆರು ಮಹಾರಥಿಕರು; ಆದಿ: ಮುಂತಾದ; ಸಾಹಸ: ಪರಾಕ್ರಮ; ಉದಯ: ಬೆಳಗ್ಗೆ; ತೋರುವೆ: ಪ್ರದರ್ಶಿಸು; ಬಾಹುಬಲ: ಪರಾಕ್ರಮ; ಮೈ: ತನು, ದೇಹ; ಮೈಗಾಹ: ದೇಹ ರಕ್ಷಣೆ; ಬಲಿ: ಗಟ್ಟಿ, ದೃಢ; ನೆನಹು: ಆಲೋಚನೆ; ಬಳಿಕ: ನಂತರ;

ಪದವಿಂಗಡಣೆ:
ವ್ಯೂಹವನು+ ರಚಿಸುವೆನು +ನಾಳಿನೊಳ್
ಆಹವಕೆ +ತಳತಂತ್ರವ್+ಒಂದೇ
ಮೋಹರಕೆ +ನಡೆತರಲಿ +ಷಡುರಥರಾದಿ+ ಯಾದವರು
ಸಾಹಸವನ್+ಉದಯದಲಿ +ತೋರುವೆ
ಬಾಹುಬಲವನು +ಸೈಂಧವನ +ಮೈ
ಗಾಹ+ ಬಲಿವೆನು +ಕಾಂಬೆ +ಕೃಷ್ಣನ+ ನೆನಹ +ಬಳಿಕೆಂದ

ಅಚ್ಚರಿ:
(೧) ಆಹವ, ಮೋಹರ – ಸಮಾನಾರ್ಥಕ ಪದಗಳು

ಪದ್ಯ ೩೧: ದ್ರೋಣನು ಹೇಗೆ ನುಗ್ಗಿದನು?

ರಥವ ಬಿಟ್ಟನು ಸೂಠಿಯಲಿ ನಿ
ರ್ಮಥಿತ ರಿಪುಗಳನಟ್ಟಿಸಿದನು ಭುಜ
ಶಿಥಿಲ ಸಾಹಸರೇನ ನಿಲುವರು ದ್ರೋಣನುರವಣೆಗೆ
ಪೃಥಿವಿ ನೆಗ್ಗಿತು ಹೊತ್ತ ಕಮಠನ
ವ್ಯಥೆಯನಾರುಸುರುವರು ಸುಮಹಾ
ರಥರ ಹೊದರಲಿ ಹೊಕ್ಕನುರಿ ಬಲು ಮಳೆಯ ಹೊಕ್ಕಂತೆ (ದ್ರೋಣ ಪರ್ವ, ೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ದ್ರೋಣನು ರಥವನ್ನು ಅತಿ ವೇಗದಿಂದ ಬಿಟ್ಟು ಅಜೇಯರೆನ್ನಿಸಿಕೊಂಡಿದ್ದ ಮಹಾರಥರನ್ನು ಅಟ್ಟಿಸಿಕೊಂಡು ಹೋದನು. ಭುಜಸಾಹಸವಿಲ್ಲದ ಭಟರು ದ್ರೋಣನ ರಭಸಕ್ಕೆ ನಿಲ್ಲಲು ಸಾಧ್ಯವೇ? ಭೂಮಿ ತಗ್ಗಿತು, ಭೂಮಿಯನ್ನು ಹೊತ್ತಿದ ಆಮೆಯ ನೋವನ್ನು ಯಾರು ಕೇಳಬೇಕು! ಮಹಾರಥರ ನಡುವೆ ದ್ರೋಣನು ಮಳೆಯ ನಡುವೆ ಉರಿಹೊಕ್ಕಹಾಗೆ ನುಗ್ಗಿದನು.

ಅರ್ಥ:
ರಥ: ಬಂಡಿ; ಬಿಟ್ಟು: ಬಿಡು; ಸೂಠಿ: ವೇಗ; ಮಥಿತ: ಕಡೆಯಲ್ಪಟ್ಟ; ರಿಪು: ವೈರಿ; ಅಟ್ಟು: ಬೆನ್ನಟ್ಟುವಿಕೆ; ಭುಜ: ಬಾಹು; ಶಿಥಿಲ: ನಿಶ್ಶಕ್ತವಾದುದು; ಸಾಹಸ: ಪರಾಕ್ರಮ; ನಿಲುವು: ಸ್ಥಿತಿ, ಅವಸ್ಥೆ; ಉರವಣೆ: ಆತುರ, ಅವಸರ; ಪೃಥಿವಿ: ಭೂಮಿ; ನೆಗ್ಗು: ಕುಗ್ಗು, ಕುಸಿ; ಹೊತ್ತು: ಹೊರು, ಧರಿಸು; ಕಮಠ: ಕೂರ್ಮ; ವ್ಯಥೆ: ನೋವು; ಉಸುರು: ಹೇಳು; ಮಹಾರಥ: ಪರಾಕ್ರಮಿ, ಶೂರ; ಹೊದರು: ಗುಂಪು; ಹೊಕ್ಕು: ಸೇರು; ಬಲು: ಹೆಚು; ಮಳೆ: ವರ್ಷ;

ಪದವಿಂಗಡಣೆ:
ರಥವ+ ಬಿಟ್ಟನು +ಸೂಠಿಯಲಿ+ ನಿ
ರ್ಮಥಿತ +ರಿಪುಗಳನ್+ಅಟ್ಟಿಸಿದನು +ಭುಜ
ಶಿಥಿಲ+ ಸಾಹಸರೇನ +ನಿಲುವರು+ ದ್ರೋಣನ್+ಉರವಣೆಗೆ
ಪೃಥಿವಿ +ನೆಗ್ಗಿತು +ಹೊತ್ತ +ಕಮಠನ
ವ್ಯಥೆಯನಾರ್+ಉಸುರುವರು +ಸುಮಹಾ
ರಥರ+ ಹೊದರಲಿ+ ಹೊಕ್ಕನ್+ಉರಿ +ಬಲು +ಮಳೆಯ +ಹೊಕ್ಕಂತೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸುಮಹಾರಥರ ಹೊದರಲಿ ಹೊಕ್ಕನುರಿ ಬಲು ಮಳೆಯ ಹೊಕ್ಕಂತೆ
(೨) ಭೂಮಿಯ ಸ್ಥಿತಿ – ಪೃಥಿವಿ ನೆಗ್ಗಿತು ಹೊತ್ತ ಕಮಠನ ವ್ಯಥೆಯನಾರುಸುರುವರು

ಪದ್ಯ ೨೮: ಕರ್ಣನೇಕೆ ನಮಗೆ ಜಯವಿಲ್ಲ ಎಂದು ಹೇಳಿದನು?

ಎನ್ನ ಹವಣೇ ಹಗೆಯ ಗೆಲುವಡೆ
ನಿನ್ನವಂದಿಗರಿರಲು ನೂಕದು
ತನ್ನ ಸಾಹಸವೆಲ್ಲ ಪರಿಯಂತಹುದು ಕದನದಲಿ
ಗನ್ನಕಾರನು ಕೃಷ್ಣನವರಿಗೆ
ತನ್ನನೊಚ್ಚತಗೊಟ್ಟನಹಿತರ
ನಿನ್ನು ಗೆಲುವವರಾರು ಜಯವೆಲ್ಲಿಯದು ನಮಗೆಂದ (ದ್ರೋಣ ಪರ್ವ, ೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ನಿನ್ನಂತಹವರಿಗೇ ಆಗಲಿಲ್ಲವೆಂದ ಮೇಲೆ, ಶತ್ರುಗಳನ್ನು ಗೆಲ್ಲುವುದು ನನ್ನ ಯೋಗ್ಯತೆಗೆ ಸಾಧ್ಯವೇ? ಎಲ್ಲಿಯವರೆಗೆ ನನ್ನ ಸಾಹಸ ನಡೆದೀತು! ಮೋಸಗಾರನಾದ ಕೃಷ್ಣನು ಅವರಿಗೆ ತನ್ನನ್ನೇ ಮೀಸಲಾಗಿಟ್ಟಿದ್ದಾನೆ. ಶತ್ರುಗಳನ್ನು ಇನ್ನು ಯಾರು ಗೆಲ್ಲಲು ಸಾಧ್ಯ? ನಮಗೆಲ್ಲಿಯ ಜಯ ಎಂದು ಕರ್ಣನು ಹೇಳಿದನು.

ಅರ್ಥ:
ಹವಣೆ: ಮಿತಿ, ಪ್ರಯತ್ನ; ಹಗೆ: ವೈರಿ; ಗೆಲು: ಜಯಿಸು; ಅರಿ: ತಿಳಿ; ನೂಕು: ತಳ್ಳು; ಸಾಹಸ: ಪರಾಕ್ರಮ; ಪರಿ: ರೀತಿ; ಕದನ: ಯುದ್ಧ; ಗನ್ನ: ಕಪಟ, ಮೋಸ; ಒಚ್ಚತ: ಮೀಸಲು, ಮುಡಿಪು; ಅಹಿತ: ವೈರಿ; ಗೆಲುವು: ಜಯ;

ಪದವಿಂಗಡಣೆ:
ಎನ್ನ +ಹವಣೇ +ಹಗೆಯ +ಗೆಲುವಡೆ
ನಿನ್ನವಂದಿಗರ್+ಇರಲು +ನೂಕದು
ತನ್ನ +ಸಾಹಸವೆಲ್ಲ +ಪರಿಯಂತಹುದು +ಕದನದಲಿ
ಗನ್ನಕಾರನು +ಕೃಷ್ಣನ್+ಅವರಿಗೆ
ತನ್ನನ್+ಒಚ್ಚತ+ಕೊಟ್ಟನ್+ಅಹಿತರನ್
ಇನ್ನು +ಗೆಲುವವರಾರು +ಜಯವೆಲ್ಲಿಯದು +ನಮಗೆಂದ

ಅಚ್ಚರಿ:
(೧) ಹಗೆ, ಅಹಿತ – ಸಾಮ್ಯಾರ್ಥ ಪದ
(೨) ಕೃಷ್ಣನನ್ನು ಮೋಸಗಾರನೆಂದು ಕರೆದ ಪರಿ – ಗನ್ನಕಾರನು ಕೃಷ್ಣನವರಿಗೆತನ್ನನೊಚ್ಚತಗೊಟ್ಟನ

ಪದ್ಯ ೩೦: ದ್ರೋಣರು ಅರ್ಜುನನಿಗೆ ಏನು ಪ್ರದರ್ಶಿಸಲು ಕೇಳಿದರು?

ಇದಿರುಗೊಳ್ಳೈ ಪಾರ್ಥ ವಿಪ್ರರಿ
ಗದಟುತನವೆಲ್ಲಿಯದು ಕರ್ಣನ
ಸದೆ ಬಡಿದ ಸಾಹಸಕೆ ಹಿಗ್ಗದಿರೆಮ್ಮ ಕೈಗುಣವ
ಕದನದಲಿ ನೀನೋಡು ಕೈಸಾ
ರಿದವು ಗಡ ಕಾಮಾರಿ ಹಿಡಿವ
ಗ್ಗದ ಶರಾವಳಿಯದರ ಪರಿಯೆಂತೆಮಗೆ ತೋರೆಂದ (ವಿರಾಟ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅರ್ಜುನ ನನ್ನನ್ನು ಸ್ವಾಗತಿಸು, ಬ್ರಾಹ್ಮಣರಿಗೆ ಪರಾಕ್ರಮವೆಲ್ಲಿ ಬರಬೇಕು, ಕರ್ಣನನ್ನು ಸದೆ ಬಡಿದೆನೆಂದು ನಿನ್ನ ಸಾಹಸಕ್ಕೆ ನೀನೇ ಹಿಗ್ಗಬೇಡ, ಯುದ್ಧದಲ್ಲಿ ನಮ್ಮ ಕೈಗುಣವನ್ನು ನೋಡು, ಶಿವನು ಕೊಟ್ಟ ಶಸ್ತ್ರಾಸ್ತ್ರಗಳು ನಿನಗೆ ಕೈವಶವಾದವುದನ್ನು ನಮಗೆ ಪ್ರದರ್ಶಿಸು ಎಂದು ದ್ರೋಣನು ಅರ್ಜುನನಿಗೆ ಹೇಳಿದನು.

ಅರ್ಥ:
ಇದಿರು: ಎದುರು; ವಿಪ್ರ: ಬ್ರಾಹ್ಮಣ; ಅದಟು: ಪರಾಕ್ರಮ; ಸದೆಬಡಿ: ಮೆಟ್ಟು, ತುಳಿ; ಸಾಹಸ: ಪರಾಕ್ರಮ; ಹಿಗ್ಗು: ಸಂತೋಷ, ಆನಂದ; ಕೈಗುಣ: ಕೌಶಲ್ಯ; ಕದನ: ಯುದ್ಧ; ಕೈಸಾರು: ಕೈವಶ; ಗಡ: ಅಲ್ಲವೆ; ಕಾಮಾರಿ: ಶಿವ; ಹಿಡಿ: ಗ್ರಹಿಸು; ಅಗ್ಗ: ಶ್ರೇಷ್ಠ; ಶರಾವಳಿ: ಬಾಣಗಳ ಗುಂಪು; ಪರಿ: ರೀತಿ; ತೋರು: ಪ್ರದರ್ಶಿಸು;

ಪದವಿಂಗಡಣೆ:
ಇದಿರುಗೊಳ್ಳೈ+ ಪಾರ್ಥ +ವಿಪ್ರರಿಗ್
ಅದಟುತನವ್+ಎಲ್ಲಿಯದು +ಕರ್ಣನ
ಸದೆ +ಬಡಿದ +ಸಾಹಸಕೆ +ಹಿಗ್ಗದಿರ್+ಎಮ್ಮ +ಕೈಗುಣವ
ಕದನದಲಿ +ನೀ+ನೋಡು +ಕೈಸಾ
ರಿದವು +ಗಡ +ಕಾಮಾರಿ +ಹಿಡಿವ
ಗ್ಗದ +ಶರಾವಳಿ+ಅದರ +ಪರಿಯೆಂತ್+ಎಮಗೆ +ತೋರೆಂದ

ಅಚ್ಚರಿ:
(೧) ದ್ರೋಣರು ತಮ್ಮನ್ನು ಎದುರಿಸಲು ಹೇಳುವ ಪರಿ – ಕರ್ಣನ ಸದೆಬಡಿದ ಸಾಹಸಕೆ ಹಿಗ್ಗದಿರೆಮ್ಮ ಕೈಗುಣವ ಕದನದಲಿ ನೀನೋಡು

ಪದ್ಯ ೧೪: ಸುಯೋಧನನು ಏನು ಹೇಳಿ ಹೊರಟನು?

ಬೇಹವರು ಸರಿರಾಜ್ಯಕದು ಸಂ
ದೇಹವೇ ಮೇಲವರು ಸತ್ವದ
ಸಾಹಸದ ಸತ್ಯದ ಸದಾಚಾರದ ನಿವಾಸರಲೆ
ಸ್ನೇಹಿತರು ನಿನಗವರ ಮೇಗವ
ಗಾಹಿಸಿದೆವನ್ಯಾಯದಲಿ ಸ
ದ್ರೋಹರಾವಿನ್ನೆಮಗೆ ನೇಮವೆಯೆನುತ ಹೊರವಂಟ (ಸಭಾ ಪರ್ವ, ೧೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನಿಗೆ ದುರ್ಯೋಧನನು ತಪ್ಪಿತಸ್ಥನಂತೆ ನಟಿಸುತ್ತಾ, ನಿನಗೆ ಪಾಂಡವರು ಬೇಕಾದವರು, ಅವರಿಗೆ ಅರ್ಧ ರಾಜ್ಯವನ್ನು ನೀಡಿರುವುದು ಸರಿಯಾದ ಕ್ರಮವೇಯಾಗಿದೆ, ಅವರು ಸಾಹಸಿಗಳು, ಸತ್ಯಮಾರ್ಗದಲ್ಲಿ ನಡೆವ ಸದಾಚಾರಿಗಳು, ಅವರಲ್ಲಿ ಒಳ್ಳೆಯ ಗುಣಗಳು ಮನೆಮಾಡಿವೆ, ಅವರು ನಿನ್ನಲ್ಲಿ ಸ್ನೇಹದಿಂದಿದ್ದಾರೆ, ನಾವು ಅವರಿಗೆ ಅನ್ಯಾಯ ಮಾದಿದ್ದೇವೆ, ದ್ರೋಹ ಬಗೆದಿದ್ದೇವೆ, ನಮಗೆ ತೆರಳಲು ಅಪ್ಪಣೆಯೇ ಎಂದು ಹೇಳಿ ದುರ್ಯೋಧನನು ಹೊರಹೊಂಟನು.

ಅರ್ಥ:
ಬೇಹ: ಬೇಕಾದ; ರಾಜ್ಯ: ರಾಷ್ಟ್ರ; ಸಂದೇಹ: ಸಂಶಯ; ಮೇಲು: ಉತ್ತಮ ವ್ಯಕ್ತಿ; ಸತ್ವ: ಸಾತ್ವಿಕ ಗುಣ; ಸಾಹಸ: ಪರಾಕ್ರಮ; ಸತ್ಯ: ದಿಟ; ಸದಾಚಾರ: ಒಳ್ಳೆಯ ನಡತೆ; ನಿವಾಸ: ಮನೆ; ಸ್ನೇಹಿತ: ಗೆಳೆಯ; ಗಾಹು: ಮೋಸ, ಕಪಟ; ಅನ್ಯಾಯ: ಯೋಗ್ಯವಲ್ಲದ; ದ್ರೋಹ: ಮೋಸ, ವಿಶ್ವಾಸಘಾತ; ನೇಮ: ನಿಯಮ, ಅಪ್ಪಣೆ; ಹೊರವಂಟ: ತೆರಳು;

ಪದವಿಂಗಡಣೆ:
ಬೇಹವರು+ ಸರಿರಾಜ್ಯಕದು+ ಸಂ
ದೇಹವೇ +ಮೇಲವರು+ ಸತ್ವದ
ಸಾಹಸದ+ ಸತ್ಯದ+ ಸದಾಚಾರದ +ನಿವಾಸರಲೆ
ಸ್ನೇಹಿತರು +ನಿನಗ್+ಅವರ +ಮೇಗವ
ಗಾಹಿಸಿದೆವ್+ಅನ್ಯಾಯದಲಿ +ಸ
ದ್ರೋಹರಾವ್+ಇನ್ನೆಮಗೆ +ನೇಮವೆ+ಎನುತ +ಹೊರವಂಟ

ಅಚ್ಚರಿ:
(೧) ಪಾಂಡವರನ್ನು ಹೊಗಳುವ ಪರಿ – ಮೇಲವರು ಸತ್ವದ ಸಾಹಸದ ಸತ್ಯದ ಸದಾಚಾರದ ನಿವಾಸರಲೆ
(೨) ತನ್ನನ್ನು ತೆಗಳುವ ಪರಿ – ಅವರ ಮೇಗವಗಾಹಿಸಿದೆವನ್ಯಾಯದಲಿ ಸದ್ರೋಹರಾವಿನ್ನೆಮಗೆ

ಪದ್ಯ ೧೭: ಭೀಮನ ಸಾಹಸದ ಪರಿ ಹೇಗಿತ್ತು?

ಕರಿಯ ಬರಿಕೈಯೆಸುವ ಜೋಧರ
ಕರ ಮಹಾಂಕುಶದವನ ಕೈ ಕ
ತ್ತರಿಸಲೊಂದೇ ಶರದಲೆಚ್ಚನು ಮತ್ತೆ ಗದೆಗೊಂಡು
ತಿರುಗಿ ಹೊಯ್ದನು ಜೋಡು ಜೋಧರು
ಕರಿಯೊಡಲು ಸಮಸೀಳ ಸೀಳಲು
ಅರಸ ಬಣ್ಣಿಸಲಾರು ಬಲ್ಲರು ಭೀಮ ಸಾಹಸವ (ಕರ್ಣ ಪರ್ವ, ೧೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನು ಒಂದೇ ಬಾಣದಲ್ಲಿ ಆನೆಗಳ ಸೊಂಡಿಲು ಮತ್ತು ಅಂಕುಶವನ್ನು ಹಿಡಿದ ಯೋಧರ ಕೈಯನ್ನು ಕತ್ತರಿಸಿದನು. ಗದೆಯನ್ನು ಹಿಡಿದು ಜೋಧರು, ಆನೆಯ ಕವಚ, ಆನೆಯ ಮೈ ಎರಡು ಸಮವಾದ ಸೀಳುಗಳಾಗುವಂತೆ ಹೊಡೆದನು. ಭೀಮನ ಸಾಹಸವನ್ನು ಯಾರು ತಾನೆ ವರ್ಣಿಸಲು ಸಾಧ್ಯ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಕರಿ: ಆನೆ; ಬರಿ: ಕೇವಲ; ಕೈ: ಕರ, ಹಸ್ತ; ಎಸುವ: ಎಸೆ, ಬಿಸಾಡು; ಜೋಧ: ಯೋಧ; ಕರ: ಹಸ್ತ; ಮಹಾ: ಶ್ರೇಷ್ಠ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಕತ್ತರಿಸು: ಸೀಳು; ಶರ: ಬಾಣ; ಎಚ್ಚು: ಬಾಣಬಿಡು; ಮತ್ತೆ: ಪುನಃ; ಗದೆ: ಮುದ್ಗರ; ಕೊಂಡು: ತೆಗೆದು, ಪಡೆದು; ತಿರುಗಿ: ಮತ್ತೆ; ಹೊಯ್ದನು: ಹೊಡೆ; ಜೋಡು: ಜೊತೆ; ಜೋಧ: ಯೋಧ; ಒಡಲು: ದೇಹ; ಸಮ: ಸಮಾನವಾದ; ಸೀಳು: ಕತ್ತರಿಸು; ಅರಸ: ರಾಜ; ಬಣ್ಣಿಸು: ವಿವರಿಸು; ಬಲ್ಲರು: ತಿಳಿದವರು; ಸಾಹಸ: ಪರಾಕ್ರಮ;

ಪದವಿಂಗಡಣೆ:
ಕರಿಯ+ ಬರಿಕೈ+ಯೆಸುವ+ ಜೋಧರ
ಕರ+ ಮಹಾಂಕುಶದವನ +ಕೈ +ಕ
ತ್ತರಿಸಲ್+ಒಂದೇ +ಶರದಲ್+ಎಚ್ಚನು +ಮತ್ತೆ +ಗದೆಗೊಂಡು
ತಿರುಗಿ +ಹೊಯ್ದನು +ಜೋಡು +ಜೋಧರು
ಕರಿಯೊಡಲು+ ಸಮಸೀಳ+ ಸೀಳಲು
ಅರಸ+ ಬಣ್ಣಿಸಲ್+ಆರು +ಬಲ್ಲರು +ಭೀಮ +ಸಾಹಸವ

ಅಚ್ಚರಿ:
(೧) ಕರಿ, ಕರ – ಪದಗಳ ಬಳಕೆ
(೨) ಕರ, ಕೈ – ಸಮನಾರ್ಥಕ ಪದ
(೩) ಜೋಡಿ ಪದ – ಜೋಡು ಜೋಧರು; ಸಮಸೀಳ ಸೀಳಲು; ಬಣ್ಣಿಸಲಾರು ಬಲ್ಲರು ಭೀಮ

ಪದ್ಯ ೨೦: ಅರ್ಜುನನ ಎದುರು ಯಾರು ನಿಂತರು?

ನೂಕಿದರು ಸಂಶಪ್ತಕರು ಬಲ
ದಾಕೆವಾಳರ ತೆಗಸಿ ಬಹಳೋ
ದ್ರೇಕ ಸಾಹಸರೊದಗಿದರು ಕಂಪಿತ ಕುಳಾಚಳರು
ತೋಕಿದರು ಶರವಳೆಯಲರ್ಜುನ
ಸಾಕು ಸಾರೈ ನಿನ್ನ ಜೊತ್ತಿನ
ಜೋಕೆಯಾಹವವಲ್ಲೆನುತ ತೆಗೆದೆಚ್ಚರಿದಿರಾಗಿ (ಕರ್ಣ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕುಲಾಚಲಗಳನ್ನು ನಡುಗಿಸಬಲ್ಲ ಸಂಶಪ್ತಕರು ಉಳಿದ ವೀರರನ್ನು ಓಡಿಸಿ ಉದ್ರೇಕದಿಂದ ಅರ್ಜುನನಿಗಿದಿರಾದರು. ಅರ್ಜುನ ಹೊರಟು ಹೋಗು, ನಿನ್ನ ಮೋಸ ಈ ಯುದ್ಧದಲ್ಲಿ ನಡೆಯದು ಎಂದು ಅವನನ್ನು ಎದುರು ನೋಡಿದರು.

ಅರ್ಥ:
ನೂಕು: ತಳ್ಳು; ಸಂಶಪ್ತ: ಸಂಬಂಧಿಸುದುದು; ಆಕೆವಾಳ: ಶೂರ; ಬಲ: ಶೂರ; ತೆಗಸು: ಹೊರಹಾಕು; ಬಹಳ: ತುಂಬ; ಉದ್ರೇಕ: ಉದ್ವೇಗ, ಆವೇಗ; ಸಾಹಸ: ಪರಾಕ್ರಮ, ಶೌರ್ಯ; ಒದಗು: ಲಭ್ಯ, ದೊರೆತುದು; ಕಂಪಿತ: ನಡುಗುವ; ಕುಳ:ಕುಲ; ತೋಕು: ಪ್ರಯೋಗಿಸು; ಶರ: ಬಾಣ; ಎಳೆ: ತನ್ನ ಕಡೆಗೆ ಸೆಳೆದುಕೊ; ಸಾಕು: ನಿಲ್ಲಿಸು; ಸಾರು: ಹರಡು; ಜೊತ್ತು:ಆಸರೆ, ನೆಲೆ; ಜೋಕೆ:ಸಂರಕ್ಷಣೆ, ಜಾಗರೂಕತೆ; ಆಹವ: ಯುದ್ಧ; ಎಚ್ಚು: ಬಾಣಬಿಡು; ತೆಗೆ: ಹೊರತರು; ಇದಿರು: ಎದುರು;

ಪದವಿಂಗಡಣೆ:
ನೂಕಿದರು +ಸಂಶಪ್ತಕರು+ ಬಲದ್
ಆಕೆವಾಳರ +ತೆಗಸಿ +ಬಹಳ
ಉದ್ರೇಕ +ಸಾಹಸರ್+ಒದಗಿದರು +ಕಂಪಿತ +ಕುಳಾಚಳರು
ತೋಕಿದರು +ಶರವಳೆಯಲ್+ಅರ್ಜುನ
ಸಾಕು +ಸಾರೈ +ನಿನ್ನ +ಜೊತ್ತಿನ
ಜೋಕೆ+ಆಹವವಲ್+ಎನುತ +ತೆಗೆದ್+ಎಚ್ಚರ್+ಇದಿರಾಗಿ

ಅಚ್ಚರಿ:
(೧) ಸಂಶಪ್ತಕ, ಕುಳಾಚಳ – ಪದಗಳ ಬಳಕೆ
(೨) ಜ ಕಾರದ ಜೋಡಿ ಪದ – ಜೊತ್ತಿನ ಜೋಕೆ