ಪದ್ಯ ೯: ಕೃಷ್ಣನ ಆಟವು ಯಾವ ಮಹಾರಥರನ್ನು ಸಂಹರಿಸಿತ್ತು?

ಕ್ರತುಹರನ ಸಮಜೋಳಿ ಗಂಗಾ
ಸುತನ ಜಯಿಸಿದರವರ ತೂಕದ
ವಿತತಬಲರೈ ಭಾವನವರೊಗ್ಗಿದರು ದಿವಿಜರಲಿ
ಅತಿರಥರೊಳಗ್ಗಳೆಯ ರಾಧಾ
ಸುತ ಸುಯೋಧನ ಮಾದ್ರಪತಿಯೀ
ವ್ಯತಿಕರದೊಳೇನಾದರಿದು ಮುರಹರನ ಕೃತಿಯೆಂದ (ಗದಾ ಪರ್ವ, ೯ ಸಂಧಿ, ೯ ಪದ್ಯ)

ತಾತ್ಪರ್ಯ:
ಭೀಷ್ಮರು ಶಿವನಿಗೆ ಸಮಬಲರಾದವರು. ಪಾಂಡವರು ಅವರನ್ನು ಜಯಿಸಿದರು. ಭಾವನವರು (ದ್ರೋಣ) ಭೀಷ್ಮನ ಸರಿಸಮಾನ ಬಲವುಳ್ಳವರಾದರೂ, ದೇವತೆಗಳೊಡನೆ ಸೇರಿದರು. ಅತಿರಥರಲ್ಲಿ ಮಿಕ್ಕನವರಾದ ಕರ್ಣ, ಶಲ್ಯ, ಸುಯೋಧನರು ಈ ಯುದ್ಧದಲ್ಲಿ ಏನಾದರು? ಇಷ್ಟೆಲ್ಲಾ ಕೃಷ್ಣನ ಆಟ.

ಅರ್ಥ:
ಕ್ರತು: ಯಾಗ, ಯಜ್ಞ; ಕ್ರತುಹರ: ಶಿವ; ಸಮಜೋಳಿ: ಸಮಾನ; ಸುತ: ಮಗ; ಜಯಿಸು: ಗೆಲ್ಲು; ತೂಕ: ಭಾರ; ವಿತತ: ವಿಸ್ತಾರವಾದ; ಬಲ: ಶಕ್ತಿ, ಸೈನ್ಯ; ಭಾವ: ಭಾವನೆ; ಒಗ್ಗು: ಗುಂಪು, ಸಮೂಹ, ಸೇರು; ದಿವಿಜ: ದೇವತೆ; ಅತಿರಥ: ಶೂರ, ಪರಾಕ್ರಮಿ; ಅಗ್ಗಳೆ: ಶ್ರೇಷ್ಠ; ರಾಧಾಸುತ: ಕರ್ಣ; ವ್ಯತಿಕರ: ಆಪತ್ತು, ಕೇಡು; ಕೃತಿ: ಕೆಲಸ;

ಪದವಿಂಗಡಣೆ:
ಕ್ರತುಹರನ+ ಸಮಜೋಳಿ +ಗಂಗಾ
ಸುತನ+ ಜಯಿಸಿದರ್+ಅವರ +ತೂಕದ
ವಿತತಬಲರೈ +ಭಾವನವರ್+ಒಗ್ಗಿದರು+ ದಿವಿಜರಲಿ
ಅತಿರಥರೊಳ್+ಅಗ್ಗಳೆಯ +ರಾಧಾ
ಸುತ +ಸುಯೋಧನ +ಮಾದ್ರಪತಿ+ಈ
ವ್ಯತಿಕರದೊಳ್+ಏನಾದರ್+ಇದು +ಮುರಹರನ +ಕೃತಿಯೆಂದ

ಅಚ್ಚರಿ:
(೧) ಶಿವನನ್ನು ಕ್ರತುಹರ (ಯಜ್ಞ ನಾಶಕ) ಎಂದು ಕರೆದಿರುವುದು
(೨) ಸತ್ತರು ಎಂದು ಹೇಳಲು – ಒಗ್ಗಿದರು ದಿವಿಜರಲಿ

ಪದ್ಯ ೫೬: ಯಾರ ಜೊತೆ ಸೆಣಸಿದರೆ ಪ್ರಯೋಜನವಾಗದು?

ಆವ ಶರದಲಿ ಕೊರತೆ ನಿನ್ನವ
ರಾವ ಬಲದಲಿ ಕುಂದು ಭುವನದೊ
ಳಾವನೈ ಸಮಜೋಳಿ ನಿನ್ನರಮನೆಯ ಸುಭಟರಿಗೆ
ಆವನಿದ್ದೇನಹುದು ಜಗದಧಿ
ದೈವದಲಿ ಸೆಣಸಿದಿರಿ ಪಾಂಡವ
ಜೀವಿಯೆಂದರಿದರಿದು ಗದುಗಿನ ವೀರನಾರಾಯಣ (ದ್ರೋಣ ಪರ್ವ, ೧೯ ಸಂಧಿ, ೫೬ ಪದ್ಯ)

ತಾತ್ಪರ್ಯ:
ನಿನ್ನ ಅರಮನೆಯ ವೀರರಿಗೆ ಯಾವ ಅಸ್ತ್ರವಿಲ್ಲ? ಬಲದಲ್ಲಿ ಅವರಿಗೆ ನ್ಯೂನ್ಯತೆಗಳಿವೆಯೇ? ಅವರಿಗೆ ಸರಿಸಮನಾದವರು ಲೋಕದಲ್ಲಿ ಯಾರಿದ್ದಾರೆ? ಯಾರು ಇದ್ದರೇನು, ಜಗತ್ತಿನ ಅಧಿದೈವದ ವಿರುದ್ಧ ಸಮ್ರಕ್ಕಿಳಿದಿರಿ, ಅದೂ ಶ್ರೀಕೃಷ್ಣನು ಪಾಂಡವ ಜೀವಿ ಎಂದರಿತೂ ನೀವು ಪಾಂಡವರಲ್ಲಿ ಯುದ್ಧಮಾಡಿದಿರಿ ಎಂದು ಸಂಜಯನು ಹೇಳಿದನು.

ಅರ್ಥ:
ಶರ: ಬಾಣ; ಕೊರತೆ: ನ್ಯೂನ್ಯತೆ; ಬಲ: ಸೈನ್ಯ; ಕುಂದು: ತೊಂದರೆ; ಭುವನ: ಜಗತ್ತು, ಪ್ರಪಂಚ; ಸಮಜೋಳಿ: ಸರಿಸಮನಾದ; ಅರಮನೆ: ರಾಜರ ಆಲಯ; ಸುಭಟ: ಪರಾಕ್ರಮಿ; ಜಗ: ಪ್ರಪಂಚ; ಅಧಿದೈವ: ಭಗವಂತ; ಸೆಣಸು: ಹೋರಾದು; ಅರಿ: ತಿಳಿ;

ಪದವಿಂಗಡಣೆ:
ಆವ +ಶರದಲಿ +ಕೊರತೆ +ನಿನ್ನವರ್
ಆವ +ಬಲದಲಿ+ ಕುಂದು +ಭುವನದೊಳ್
ಆವನೈ +ಸಮಜೋಳಿ +ನಿನ್ನ್+ಅರಮನೆಯ +ಸುಭಟರಿಗೆ
ಆವನಿದ್ದೇನಹುದು +ಜಗದ್+ಅಧಿ
ದೈವದಲಿ +ಸೆಣಸಿದಿರಿ +ಪಾಂಡವ
ಜೀವಿ+ಎಂದ್+ಅರಿದರಿದು+ ಗದುಗಿನ +ವೀರನಾರಾಯಣ

ಅಚ್ಚರಿ:
(೧) ಆವ – ೧-೪ ಸಾಲಿನ ಮೊದಲ ಪದ
(೨) ಕೊರತೆ, ಕುಂದು – ಸಮಾನಾರ್ಥಕ ಪದ

ಪದ್ಯ ೪೧: ದ್ರೋಣನು ತನ್ನ ಮಗನನ್ನು ಯಾರಿಗೆ ಹೋಲಿಸಿದನು?

ಶಿವ ಶಿವಾ ಕರ್ಣಜ್ವರಾಯತ
ರವವಿದೆತ್ತಣದೋ ಕುಮಾರನ
ತಿವಿದರಾರೋ ತಾನಿದದುಭುತವೆನುತ ತನ್ನೊಳಗೆ
ತವಕಿಸುತ ತಿಳಿದನು ವೃಕೋದರ
ನಿವ ದುರಾತ್ಮನು ತನ್ನ ಮಗನಾ
ಶಿವನೊಡನೆ ಸಮಜೋಳಿ ಹುಸಿ ಹೋಗೆಂದನಾ ದ್ರೋಣ (ದ್ರೋಣ ಪರ್ವ, ೧೮ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶಿವ ಶಿವಾ, ಇದು ಕಿವಿಗೆ ಜ್ವರ ಬರಿಸುವ ಮಾತು, ಈ ಧ್ವನಿ ಎತ್ತಣಿಂದ ಬಂದಿತು? ಅಶ್ವತ್ಥಾಮನನ್ನು ಕೊಂದವರಾರು? ಇದು ಪರಮಾದ್ಭುತ, ಎಂದು ಚಿಂತಿಸುತ್ತಾ ದ್ರೋಣನು ಈ ಮಾತನ್ನು ಹೇಳಿದವನು ಭೀಮನೆಂದು ತಿಳಿದು, ಇವನು ದುಷ್ಟ, ನನ್ನ ಮಗನು ಶಿವನಿಗೆ ಸಮಾನನಾದವನು. ಇದು ಸುಳ್ಳು ತೊಲಗು ಎಂದು ಹೇಳಿದನು.

ಅರ್ಥ:
ಕರ್ಣ: ಕಿವಿ; ಜ್ವರ: ಬೇನೆ; ಆಯತ: ಉಚಿತವಾದ; ರವ: ಶಬ್ದ; ಕುಮಾರ: ಮಗ; ತಿವಿ: ಚುಚ್ಚು; ಅದುಭುತ: ಆಶ್ಚರ್ಯ; ತವಕ: ಕಾತುರ; ತಿಳಿ: ಗೋಚರಿಸು; ವೃಕೋದರ: ತೋಳದಂತಹ ಹೊಟ್ಟೆ (ಭೀಮ); ದುರಾತ್ಮ: ದುಷ್ಟ; ಮಗ: ಸುತ; ಶಿವ: ಶಂಕರ; ಸಮಜೋಳಿ: ಸಮಾನವಾದ; ಹುಸಿ: ಸುಳ್ಳು; ಹೋಗು: ತೆರಳು;

ಪದವಿಂಗಡಣೆ:
ಶಿವ+ ಶಿವಾ+ ಕರ್ಣ+ಜ್ವರ+ಆಯತ
ರವವಿದ್+ಎತ್ತಣದೋ +ಕುಮಾರನ
ತಿವಿದರಾರೋ +ತಾನಿದ್+ಅದುಭುತವೆನುತ+ ತನ್ನೊಳಗೆ
ತವಕಿಸುತ +ತಿಳಿದನು +ವೃಕೋದರನ್
ಇವ +ದುರಾತ್ಮನು +ತನ್ನ +ಮಗನ್+ಆ
ಶಿವನೊಡನೆ +ಸಮಜೋಳಿ +ಹುಸಿ +ಹೋಗೆಂದನಾ +ದ್ರೋಣ

ಅಚ್ಚರಿ:
(೧) ರೂಪಕದ ಪ್ರಯೋಗ – ಶಿವ ಶಿವಾ ಕರ್ಣಜ್ವರಾಯತರವವಿದೆತ್ತಣದೋ
(೨) ಅಶ್ವತ್ಥಾಮನನ್ನು ಹೋಲಿಸುವ ಪರಿ – ತನ್ನ ಮಗನಾ ಶಿವನೊಡನೆ ಸಮಜೋಳಿ

ಪದ್ಯ ೪೦: ಅರ್ಜುನನ ಮಾತುಗಳು ಯಾವ ಬಾಣಗಳಿಗೆ ಸಮನಾದುದು?

ತೀರಿತಿನ್ನೇನರಿ ನೃಪನ ಸಂ
ಸಾರ ನೀನೇರುಸಿದ ನುಡಿಗಳ
ನಾರು ಕಳಚಲು ಬಲ್ಲರಗ್ಗದ ದೇವ ದೈತ್ಯರಲಿ
ವೀರ ರಾಮನ ನುಡಿಗೆ ರಾಮನು
ದಾರ ಬಾಣಕೆ ನಿನ್ನ ನುಡಿಗಳು
ಕೂರಲಗು ಸಮಜೋಳಿ ಜಗದೊಳಗೆಂದನಸುರಾರಿ (ದ್ರೋಣ ಪರ್ವ, ೮ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನ, ನೀನಾಡಿದ ಶಪಥವ ಮಾತುಗಳನ್ನು ದೇವ ದೈತ್ಯರಲ್ಲಿ ಯಾರು ತಾನೇ ತಡೆಯಬಲ್ಲರು. ವೈರಿರಾಜ ಸೈಂಧವನ ಬಾಳು ಮುಗಿದು ಹೋಯಿತು. ಶ್ರೀರಾಮನ ಮಾತು, ರಾಮಬಾಣಗಳಿಗೆ ನಿನ್ನ ಮಾತು ಬಾಣಗಳಿಗೆ ಸರಿಸಮ ಎಂದು ಕೃಷ್ಣನು ಹೇಳಿದನು.

ಅರ್ಥ:
ತೀರಿತು: ಮುಗಿಯಿತು; ಅರಿ: ವೈರಿ; ನೃಪ: ರಾಜ; ಸಂಸಾರ: ಪರಿಜನ; ನುಡಿ: ಮಾತು; ಕಳಚು: ಸಡಲಿಸು; ಬಲ್ಲರು: ತಿಳಿದವರು; ಅಗ್ಗ: ಶ್ರೇಷ್ಠ; ದೇವ: ಅಮರರು; ದೈತ್ಯ: ದಾನವ; ವೀರ: ಶೂರ, ಪರಾಕ್ರಮ; ನುಡಿ: ಮಾತು; ಕೂರಲಗು: ಹರಿತವಾದ ಬಾಣ; ಸಮ: ಸರಿಯಾದುದು; ಜಗ: ಪ್ರಪಂಚ; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);

ಪದವಿಂಗಡಣೆ:
ತೀರಿತ್+ಇನ್ನೇನ್+ಅರಿ +ನೃಪನ +ಸಂ
ಸಾರ+ ನೀನೇರುಸಿದ+ ನುಡಿಗಳನ್
ಆರು +ಕಳಚಲು+ ಬಲ್ಲರ್+ಅಗ್ಗದ +ದೇವ +ದೈತ್ಯರಲಿ
ವೀರ +ರಾಮನ +ನುಡಿಗೆ +ರಾಮನು
ದಾರ+ ಬಾಣಕೆ+ ನಿನ್ನ +ನುಡಿಗಳು
ಕೂರಲಗು +ಸಮಜೋಳಿ +ಜಗದೊಳಗ್+ಎಂದನ್+ಅಸುರಾರಿ

ಅಚ್ಚರಿ:
(೧) ಅರ್ಜುನನ ಮಾತುಗಳನ್ನು ಹೋಲಿಸುವ ಪರಿ – ವೀರ ರಾಮನ ನುಡಿಗೆ ರಾಮನುದಾರ ಬಾಣಕೆ ನಿನ್ನ ನುಡಿಗಳು

ಪದ್ಯ ೩೯: ಅರ್ಜುನನ ಮಾತು ಯಾವುದಕ್ಕೆ ಸಮಾನ?

ನಾಳೆ ಖಚರೀಜನದ ತೊಡವಿನ
ತೋಳನವನಸು ನೆಮ್ಮದಿದ್ದರೆ
ಕಾಳೆಗದೊಳೆನ್ನೊಡಲ ಬಿಸುಡುವೆನಗ್ನಿ ಕುಂಡದಲಿ
ಕೇಳು ಧರ್ಮಜ ಎಂಬ ನುಡಿಗಳು
ಕಾಳೆಗದ ಸೊಗಸಾಗೆ ಲಕ್ಷ್ಮೀ
ಲೋಲ ಕೇಳುತ ಬಂದು ಪಾರ್ಥನ ಬಿರುದ ಹೊಗಳಿದನು (ದ್ರೋಣ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ನಾಳೆ ಗಂಧರ್ವರ ತೋಳಿನ ಆಭರಣವಾಗಿ ಸೈಂಧವನ ಪ್ರಾಣವು ಶೋಭಿಸಲಿದೆ, ಇದು ನಡೆಯದಿದ್ದರೆ ನಾಳಿನ ಯುದ್ಧದಲ್ಲಿ ನನ್ನ ದೇಹವು ಅಗ್ನಿಕುಂಡದೊಳಗೆ ಹಾಕಿರಿ ಎಂದು ಹೇಳಲು, ಕೃಷ್ಣನು ಆ ಸಮಯಕ್ಕೆ ಅಲ್ಲಿಗೆ ಬಂದು ಧರ್ಮಜ ಕೇಳು ಯುದ್ಧದಲ್ಲಿ ಇಂತಹ ಮಾತುಗಳು ಬಲು ಸೊಗಸಾಗಿರುತ್ತದೆ ಎಂದು ಹೇಳುತ್ತಾ ಕೃಷ್ಣನು ಅರ್ಜುನನ ಬಿರುದಾವಳಿಗಳನ್ನು ಹೊಗಳಿದನು.

ಅರ್ಥ:
ಖಚರ: ಆಕಾಶದಲ್ಲಿ ಸಂಚರಿಸುವ, ಆಕಾಶಗಾಮಿಯಾದ, ಗಂಧರ್ವ; ಜನ: ಗುಂಪು; ತೊಡವು: ತೊಡಿಗೆ, ಆಭರಣ; ತೋಳು: ಬಾಹು, ರಟ್ಟೆ; ಅಸು: ಪ್ರಾಣ; ಕಾಳೆಗ: ಯುದ್ಧ; ಒಡಲು: ದೇಹ; ಬಿಸುಡು: ಬಿಸಾಡು, ಹೊರಹಾಕು; ಅಗ್ನಿಕುಂಡ: ಹೋಮದ ಕುಂಡ; ಕೇಳು: ಆಲಿಸು; ನುಡಿ: ಮಾತು; ಸೊಗಸು: ಅಂದ; ಲಕ್ಷ್ಮೀಲೋಲ – ಲಕ್ಷ್ಮಿಯ ಪ್ರಿಯತಮ (ಕೃಷ್ಣ); ಕೇಳು: ಆಲಿಸು; ಬಿರುದು: ಗೌರವಸೂಚಕ ಪದಗಳು; ಹೊಗಳು: ಪ್ರಶಂಶಿಸು;

ಪದವಿಂಗಡಣೆ:
ನಾಳೆ+ ಖಚರೀಜನದ +ತೊಡವಿನ
ತೋಳನ್+ಅವನ್+ಅಸು +ನೆಮ್ಮದಿದ್ದರೆ
ಕಾಳೆಗದೊಳ್+ಎನ್ನೊಡಲ +ಬಿಸುಡುವೆನ್+ಅಗ್ನಿ +ಕುಂಡದಲಿ
ಕೇಳು +ಧರ್ಮಜ+ ಎಂಬ +ನುಡಿಗಳು
ಕಾಳೆಗದ +ಸೊಗಸಾಗೆ +ಲಕ್ಷ್ಮೀ
ಲೋಲ +ಕೇಳುತ+ ಬಂದು +ಪಾರ್ಥನ +ಬಿರುದ +ಹೊಗಳಿದನು

ಅಚ್ಚರಿ:
(೧) ಅರ್ಜುನನ ವೀರನುಡಿ – ಕಾಳೆಗದೊಳೆನ್ನೊಡಲ ಬಿಸುಡುವೆನಗ್ನಿ ಕುಂಡದಲಿ

ಪದ್ಯ ೩೧: ಅರ್ಜುನನು ಭೀಷ್ಮನನ್ನು ಯಾರಿಗೆ ಹೋಲಿಸಿದನು?

ಕಟಕಿಯೇಕಿದು ಪರಶುರಾಮನ
ಪಟುತನಕೆ ಮದ್ದರೆದೆನೆಂಬೀ
ನಿಟಿಲನೇತ್ರನ ಭುಜಬಲಕೆ ಸಮಜೋಳಿ ಗಡ ನೀವು
ಕುಟಿಲ ಭಣಿತಯನರಿಯೆನಿದರೊಳು
ಭಟರು ನೀವಹುದೆನ್ನ ಶರ ಸಂ
ಘಟನವನು ಚಿತ್ತಯಿಸಿಯೆಂದನು ಪಾರ್ಥ ನಸುನಗುತ (ಭೀಷ್ಮ ಪರ್ವ, ೯ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅರ್ಜುನನು, ಈ ಹಂಗಿನ ಮಾತೇಕೆ, ಪರಶುರಾಮನ ಪರಾಕ್ರಮಕ್ಕೆ ಮದ್ದರೆದ ನೀವು ಶಿವನಿಗೆ ಸರಿಸಮಾನದ ಭಟರು. ನನ್ನ ಮಾತಿನಲ್ಲಿ ಕೊಂಕಿಲ್ಲ. ನಿಜಕ್ಕೂ ನೀವು ಪರಾಕ್ರಮಿಗಳು, ನನ್ನ ಶರಸಂಧಾನವನ್ನಿಷ್ಟು ಚಿತ್ತಗೊಟ್ಟು ನೋಡಿ ಎಂದು ಅರ್ಜುನನು ಹೇಳಿದನು.

ಅರ್ಥ:
ಕಟಕಿ: ಚುಚ್ಚುಮಾತು, ವ್ಯಂಗ್ಯ; ಪಟುತನ: ಸಾಮರ್ಥ್ಯ;ಮದ್ದು: ಔಷಧಿ, ಪರಿಹಾರ; ನಿಟಿಲನೇತ್ರ: ಶಿವ; ನಿಟಿಲ: ಹಣೆ; ನೇತ್ರ: ಕಣ್ಣು; ಭುಜಬಲ: ಪರಾಕ್ರಮ; ಸಮಜೋಳಿ: ಒಂದೇ ಸಮನಾದ ಜೋಡಿ; ಗಡ: ಅಲ್ಲವೆ; ತ್ವರಿತವಾಗಿ; ಕುಟಿಲ: ಮೋಸ, ವಂಚನೆ; ಭಣಿತೆ: ಮಾತು, ಹೇಳಿಕೆ; ಅರಿ: ತಿಳಿ; ಭಟ: ಸೈನಿಕ; ಶರ: ಬಾಣ; ಸಂಘಟ: ಘರ್ಷಣೆ, ಯುದ್ಧ; ಚಿತ್ತಯಿಸು: ಗಮನವಿಟ್ಟು ಕೇಳು; ನಸುನಗು: ಸಂತಸ, ಮಂದಸ್ಮಿತ;

ಪದವಿಂಗಡಣೆ:
ಕಟಕಿಯೇಕಿದು+ ಪರಶುರಾಮನ
ಪಟುತನಕೆ +ಮದ್ದರೆದೆನ್+ಎಂಬೀ
ನಿಟಿಲನೇತ್ರನ +ಭುಜಬಲಕೆ+ ಸಮಜೋಳಿ +ಗಡ +ನೀವು
ಕುಟಿಲ +ಭಣಿತಯನ್+ಅರಿಯೆನ್+ಇದರೊಳು
ಭಟರು+ ನೀವಹುದೆನ್ನ+ ಶರ +ಸಂ
ಘಟನವನು +ಚಿತ್ತಯಿಸಿ+ಎಂದನು +ಪಾರ್ಥ +ನಸುನಗುತ

ಅಚ್ಚರಿ:
(೧) ಭೀಷ್ಮನ ಪರಾಕ್ರಮವನ್ನು ವರ್ಣಿಸುವ ಪರಿ – ನಿಟಿಲನೇತ್ರನ ಭುಜಬಲಕೆ ಸಮಜೋಳಿ ಗಡ ನೀವು

ಪದ್ಯ ೬೦: ಅರ್ಜುನನು ಶಿವನಿಗೆ ಸಮಜೋಡಿಯೇ?

ಗಾಹು ಹತ್ತಾಹತ್ತಿ ಗಡ ನಿ
ರ್ದೇಹನೊಡನೆ ಮಹಾ ಶರೌಘಕೆ
ಮೇಹುಗಡ ಜೀವನವು ಮೃತ್ಯುಂಜಯನ ಸೀಮೆಯಲಿ
ಆಹ ಮೂದಲೆಗಡ ಸುನಿಗಮ
ವ್ಯೂಹದೂರನ ಕೂಡೆ ಹರನೊಡ
ನಾಹವಕೆ ಸಮಜೋಳಿ ನಾವ್ ಗಡ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೬೦ ಪದ್ಯ)

ತಾತ್ಪರ್ಯ:
ದೇಹ ರಹಿತನಾದ ಶಿವನು ಭುಜ ಯುದ್ಧಕ್ಕೆ ಗುರಿಯೆಂದುಕೊಂಡೆನಲ್ಲವೇ? ಮೃತ್ಯುಂಜಯನು ನನ್ನ ದಿವ್ಯಾಸ್ತ್ರಗಳಿಗೆ ಆಹಾರವೆಂದುಕೊಂಡೆನಲ್ಲಾ? ವೇದಗಳು ಯಾರನ್ನು ಹುಡುಕಿ ಕಾಣವೋ ಅವನನ್ನು ನಾನು ಮೂದಲಿಸಿದೆನಲ್ಲವೇ? ಯುದ್ಧದಲ್ಲಿ ಶಿವನಿಗೆ ನಾನು ಸರಿಸಮಾನನೇ, ಶಿವ ಶಿವಾ ಎಂದು ಅರ್ಜುನನು ಕೊರಗಿದನು.

ಅರ್ಥ:
ಗಾಹು: ಮೋಸ; ಹತ್ತಾಹತ್ತಿ: ಮುಷ್ಟಾಮುಷ್ಟಿ; ಗಡ: ಅಲ್ಲವೆ; ನಿರ್ದೇಹ: ಆಕಾರವಿಲ್ಲದ; ಮಹಾ: ದೊಡ್ಡ, ಶ್ರೇಷ್ಠ; ಶರ: ಬಾಣ; ಔಘ: ಗುಂಪು; ಮೇಹು: ಮೇಯುವ; ಗಡ: ಅಲ್ಲವೇ; ಜೀವನ: ಬಾಳು, ಬದುಕು; ಮೃತ್ಯು: ಸಾವು; ಮೃತ್ಯುಂಜಯ: ಶಿವ; ಸೀಮೆ: ಎಲ್ಲೆ; ಮೂದಲಿಸು: ಹಂಗಿಸು; ನಿಗಮ: ವೇದ, ಶೃತಿ; ವ್ಯೂಹ: ಗುಂಪು; ಕೂಡೆ: ಜೊತೆ; ಹರ: ಶಿವ; ಆಹವ: ಯುದ್ಧ; ಸಮಜೋಳಿ: ಒಂದೇ ರೀತಿಯಾದ ಜೋಡಿ; ಗಡ: ಅಲ್ಲವೇ;

ಪದವಿಂಗಡಣೆ:
ಗಾಹು +ಹತ್ತಾಹತ್ತಿ+ ಗಡ +ನಿ
ರ್ದೇಹ ನೊಡನೆ+ ಮಹಾ +ಶರೌಘಕೆ
ಮೇಹು+ಗಡ+ ಜೀವನವು +ಮೃತ್ಯುಂಜಯನ +ಸೀಮೆಯಲಿ
ಆಹ+ ಮೂದಲೆ+ಗಡ+ ಸುನಿಗಮ
ವ್ಯೂಹದೂರನ+ ಕೂಡೆ+ ಹರನೊಡನ್
ಆಹವಕೆ+ ಸಮಜೋಳಿ +ನಾವ್ +ಗಡ+ ಶಿವ+ ಶಿವಾಯೆಂದ

ಅಚ್ಚರಿ:
(೧) ಗಡ ಪದದ ಬಳಕೆ – ಶರೌಘಕೆ ಮೇಹು ಗಡ, ಆಹ ಮೂದಲೆ, ಹರನೊಡನಾಹವಕೆ ಸಮಜೋಳಿ ನಾವ್ ಗಡ

ಪದ್ಯ ೩೯: ಸಹದೇವಾದಿಗಳು ಕರ್ಣನಿಗೆ ಹೇಗೆ ಉತ್ತರವನಿತ್ತರು?

ಆಳನೋಯಿಸಿ ನೋಡುತಿಹ ಹೀ
ಹಾಳಿ ತಾನೇಕಕಟಕಟ ದೊರೆ
ಯಾಳ ಧೀವಶವೆನುತ ಸಹದೇವಾದಿಗಳು ಜರೆದು
ತೋಳು ಬಳಲದೆ ತೆಗೆದೆಸುತ ಸಮ
ಜೋಳಿಯಲಿ ನೂಕಿದರು ಕರ್ಣನ
ಮೇಲೆ ಸಾತ್ಯಕಿ ಭೀಮರವನೀಪಾಲನಿದಿರಿನಲಿ (ಕರ್ಣ ಪರ್ವ, ೧೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಲೈ ಕರ್ಣ ನಮ್ಮ ಸೈನಿಕರನ್ನು ನೋಯಿಸಿ ಸುಮ್ಮನೆ ನೋಡುತ ಕುಳಿತುಕೊಳ್ಳುವ ಹೀನಾಯ ಸ್ಥಿತಿ ನಮಗೇಕೆ ಅಯ್ಯೋ! ದೊರೆಯು ತನ್ನ ಯೋಧರ ಬುದ್ಧಿಮತ್ತೆಗೆ ತಕ್ಕಂತಿರುತ್ತಾನೆ ಎಂದು ಹೇಳುತ್ತಾ ಕರ್ಣನನ್ನು ಜರೆದರು. ಭುಜಗಳ ಆಯಾಸಗೊಳ್ಲದೆ ತಮ್ಮ ಬತ್ತಳಿಕೆಯಿಂದ ಬಾಣಗಳನ್ನು ತೆಗೆದು ತಮ್ಮ ಜೊತೆಯವರೊಡನೆ ಕೂಡಿ ಸಾತ್ಯಕಿ ಭೀಮರು ಕರ್ಣನೆದುರಿಗೆ ತಮ್ಮ ರಥಗಳನ್ನು ನೂಕಿದರು.

ಅರ್ಥ:
ಆಳು: ಸೈನಿಕ; ನೋಯಿಸು: ಕಷ್ಟಕ್ಕೆ ಒಡ್ಡು, ತೊಂದರೆ ನೀಡು; ನೋಡು: ವೀಕ್ಷಿಸು; ಹೀಹಾಳಿ: ತೆಗಳಿಕೆ, ಅವಹೇಳನ; ಅಕಟಕಟ: ಅಯ್ಯೋ; ದೊರೆ: ರಾಜ; ಧೀ: ಬುದ್ಧಿ; ವಶ: ಅಧೀನ, ಅಂಕೆ; ಆದಿ: ಮುಂತಾದ; ಜರೆ: ಬಯ್ಯು; ತೋಳು: ಭುಜ; ಬಳಲು: ಆಯಾಸಗೊಳ್ಳು; ತೆಗೆ: ಹೊರತರು; ಎಸು: ಬಾಣಬಿಡು, ಹೋರಾಡು; ಜೋಳಿ: ಜೋಡಿ, ಗುಂಪು; ನೂಕು: ತಳ್ಳು; ಅವನೀಪಾಲ: ರಾಜ; ಇದಿರು: ಎದುರು;

ಪದವಿಂಗಡಣೆ:
ಆಳನೋಯಿಸಿ +ನೋಡುತಿಹ +ಹೀ
ಹಾಳಿ +ತಾನೇಕ್+ಅಕಟಕಟ +ದೊರೆ
ಯಾಳ +ಧೀವಶವ್+ಎನುತ +ಸಹದೇವಾದಿಗಳು +ಜರೆದು
ತೋಳು +ಬಳಲದೆ +ತೆಗೆದ್+ಎಸುತ +ಸಮ
ಜೋಳಿಯಲಿ +ನೂಕಿದರು +ಕರ್ಣನ
ಮೇಲೆ +ಸಾತ್ಯಕಿ +ಭೀಮರ್+ಅವನೀಪಾಲನ್+ಇದಿರಿನಲಿ

ಅಚ್ಚರಿ:
(೧) ದೊರೆಯ ಲಕ್ಷಣ – ದೊರೆಯಾಳ ಧೀವಶ

ಪದ್ಯ ೩೫: ದುರ್ಯೋಧನನ ರಥದ ಸ್ಥಿತಿ ಏನಾಯಿತು?

ಗೆಲುವು ನಮಗಾಯ್ತೆಂದು ಕೌರವ
ರುಲಿದರೆಮಗಗ್ಗಳಿಕೆಯೆಂದವ
ರುಲಿವುತಿರ್ದರು ಕಾದಿದರು ಸಮಜೋಳಿ ಜೋಕೆಯಲಿ
ಬಳಿಕ ಯಮನಂದನನ ಕೈ ವೆ
ಗ್ಗಳಿಸಿ ತಾಗಿತು ನಿನ್ನ ತನುಜನ
ಬಿಲು ಸರಳು ರಥ ಸೂತ ವಾಜಿಗಳೊರಗಿದವು ಧರೆಗೆ (ಕರ್ಣ ಪರ್ವ, ೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ಗೆಲುವು ನಮ್ಮದೆಂದು ಕೌರವರು ಕೂಗಿಕೊಂಡರು. ನಮ್ಮ ಕೈಯೇ ಮೇಲಾಯಿತೆಂದು ಪಾಂಡವರು ಕೂಗಿಕೊಂಡರು, ಸಮರೋಪಾದಿಯಲ್ಲಿ ಇಬ್ಬರ ನಡುವೆ ಯುದ್ಧ ನಡೆಯುತ್ತಿರಲು, ಬರಬರುತ್ತಾ ಧರ್ಮಜನ ಕೈ ಮೇಲಾಯಿತು, ಸಂಜಯನು ಧೃತರಾಷ್ಟ್ರನಿಗೆ ವಿವರಿಸುತ್ತಾ, ದುರ್ಯೋಧನನ ಬಿಲ್ಲು, ಬಾಣ, ರಥ, ಸಾರಥಿ, ಕುದುರೆಗಳು ಭೂಮಿಗೆ ಉರುಳಿದವೆಂದು ಯುದ್ಧದ ವೃತ್ತಾಂತವನ್ನು ತಿಳಿಸಿದನು.

ಅರ್ಥ:
ಗೆಲವು: ಜಯ; ಉಲಿ: ಕೂಗು; ಅಗ್ಗಳಿಕೆ: ಸಾಮರ್ಥ್ಯ, ಹೆಚ್ಚುಗಾರಿಕೆ; ಕಾದಿದರು: ಹೋರಾಡಿದರು; ಜೋಳಿ: ಜೋಡಿ, ಗುಂಪು; ಜೋಕೆ: ಎಚ್ಚರಿಕೆ; ಬಳಿಕ: ನಂತರ; ವೆಗ್ಗಳ: ಶ್ರೇಷ್ಠತೆ, ಹಿರಿಮೆ; ತನುಜ: ಮಗ; ಬಿಲು: ಬಿಲ್ಲು; ಸರಳು: ಬಾಣ; ರಥ: ಬಂಡಿ; ಸೂತ: ರಥ ಓಡಿಸುವವ; ವಾಜಿ: ಕುದುರೆ; ಒರಗು: ವಾಲು; ಧರೆ: ಭೂಮಿ;

ಪದವಿಂಗಡಣೆ:
ಗೆಲುವು +ನಮಗಾಯ್ತೆಂದು +ಕೌರವರ್
ಉಲಿದರ್+ಎಮಗ್+ಅಗ್ಗಳಿಕೆ+ಯೆಂದವರ್
ಉಲಿವುತಿರ್ದರು +ಕಾದಿದರು+ ಸಮಜೋಳಿ +ಜೋಕೆಯಲಿ
ಬಳಿಕ +ಯಮನಂದನನ+ ಕೈ +ವೆ
ಗ್ಗಳಿಸಿ +ತಾಗಿತು +ನಿನ್ನ +ತನುಜನ
ಬಿಲು +ಸರಳು +ರಥ +ಸೂತ +ವಾಜಿಗಳ್+ಒರಗಿದವು +ಧರೆಗೆ

ಅಚ್ಚರಿ:
(೧) ಯಮನಂದನ, ನಿನ್ನ ತನುಜನ – ಯುಧಿಷ್ಠಿರ, ದುರ್ಯೋಧನನನ್ನು ಉದ್ದೇಶಿಸಲು