ಪದ್ಯ ೬೧: ಅಶ್ವತ್ಥಾಮನ ದೃಢ ನಿಶ್ಚಯ ಹೇಗಿತ್ತು?

ಹರಿಹರಬ್ರಹ್ಮಾದಿದೇವರು
ವೆರಸಿ ಕಾಯಲಿ ರಾತ್ರಿಯಲಿ ರಿಪು
ಶಿರವ ತಹೆನಿದಕೇಕೆ ಸಂಶಯವೆನ್ನ ಕಳುಹುವುದು
ಇರಲಿ ಕೃಪ ಕೃತವರ್ಮಕರುಹ
ತ್ತಿಕರೆ ರಣಾಧ್ಯಕ್ಷದಲಿ ಭಾಷಾ
ಚರಣ ಪೈಸರಿಸಿದಡೆ ದ್ರೋಣನ ತನಯನಲ್ಲೆಂದ (ಗದಾ ಪರ್ವ, ೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ತನ್ನ ಮಾತನ್ನು ಮುಂದುವರೆಸುತ್ತಾ, ಹರಿಹರಬ್ರಹ್ಮಾದಿ ದೇವತೆಗಳು ಈ ರಾತ್ರಿ ಅವರನ್ನು ಕಾಯುತ್ತಿದ್ದರೂ ಅವರ ತಲೆಯನ್ನು ನಾನು ತರುತ್ತೇನೆ. ಸಂಶಯವಿಲ್ಲದೆ ನನ್ನನ್ನು ಕಳುಹಿಸಿಕೊಡು. ಕ್ರ್ಪಕೃತವರ್ಮರು ಹತ್ತಿರದಲ್ಲೇ ಇರಲಿ, ನನ್ನ ಮಾತು ತಪ್ಪಿದರೆ ನಾನು ದ್ರೋಣನ ಮಗನೇ ಅಲ್ಲ ಎಂದು ಶಪಥ ಮಾಡಿದನು.

ಅರ್ಥ:
ಹರಿ: ವಿಷ್ಣು; ಹರ: ಶಿವ; ಬ್ರಹ್ಮ: ಅಜ, ವಿರಿಂಚಿ; ದೇವ: ಭಗವಂತ; ವೆರಸು: ಬೆರಸು; ಕಾಯು: ರಕ್ಷಿಸು; ರಾತ್ರಿ: ಇರುಳು; ರಿಪು: ವೈರಿ; ಶಿರ: ತಲೆ; ತಹೆ: ತರುವೆ; ಸಂಶಯ: ಅನುಮಾನ; ಕಳುಹು: ತೆರಳು; ಹತ್ತಿರ: ಸಮೀಪ; ಅಧ್ಯಕ್ಷ: ಒಡೆಯ; ರಣ: ಯುದ್ಧಭೂಮಿ; ಭಾಷೆ: ಮಾತು, ಪ್ರಮಾಣ; ಚರಣ: ನಡಿಗೆ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ತನಯ: ಮಗ;

ಪದವಿಂಗಡಣೆ:
ಹರಿ+ಹರ+ಬ್ರಹ್ಮಾದಿ+ದೇವರು
ವೆರಸಿ +ಕಾಯಲಿ +ರಾತ್ರಿಯಲಿ +ರಿಪು
ಶಿರವ +ತಹೆನ್+ಇದಕೇಕೆ +ಸಂಶಯವ್+ಎನ್ನ+ ಕಳುಹುವುದು
ಇರಲಿ +ಕೃಪ +ಕೃತವರ್ಮಕರು+ಹ
ತ್ತಿಕರೆ +ರಣಾಧ್ಯಕ್ಷದಲಿ +ಭಾಷಾ
ಚರಣ +ಪೈಸರಿಸಿದಡೆ +ದ್ರೋಣನ +ತನಯನಲ್ಲೆಂದ

ಅಚ್ಚರಿ:
(೧) ಅಶ್ವತ್ಥಾಮನ ದಿಟ್ಟ ಶಪಥ – ರಣಾಧ್ಯಕ್ಷದಲಿ ಭಾಷಾ ಚರಣ ಪೈಸರಿಸಿದಡೆ ದ್ರೋಣನ ತನಯನಲ್ಲೆಂದ

ಪದ್ಯ ೬೮: ದ್ರೋಣನ ರಚನೆಯನ್ನು ಕೃಷ್ಣನು ಯಾರಿಗೆ ಹೇಳಿದನು?

ಬೀಳುಕೊಂಡುದು ರಾಜಸಭೆ ತ
ಮ್ಮಾಲಯಕೆ ಸೈಂಧವನು ಚಿಂತಾ
ಲೋಲನಿರ್ದನು ಮರಣಜೀವನ ಜಾತ ಸಂಶಯನು
ಕೋಲಗುರುವಿನ ವಿವಿಧ ರಚನೆಯ
ಕೇಳಿದನು ನಸುನಗುತ ಪಾರ್ಥಗೆ
ಹೇಳಿದನು ಕರುಣದಲಿ ಗದುಗಿನ ವೀರನಾರಯಣ (ದ್ರೋಣ ಪರ್ವ, ೮ ಸಂಧಿ, ೬೮ ಪದ್ಯ
)

ತಾತ್ಪರ್ಯ:
ರಾಜಸಭೆಯು ವಿಸರ್ಜಿಸಿತು. ಸೈಂಧವನು ತನ್ನ ಅರಮನೆಗೆ ಬಂದು ನಾಳೆ ನಾನು ಸಾಯುತ್ತೇನೋ, ಬದುಕುವೆನೋ ಎಂಬ ಸಂಶಯವು ಅವನಲ್ಲಿ ಹುಟ್ಟಿತು. ಶ್ರೀಕೃಷ್ಣನು ತನ್ನ ಬೇಹುಗಾರರಿಂದ ದ್ರೋಣನ ವ್ಯೂಹ ರಚನೆಯನ್ನು ನಸುನಗುತ್ತಾ ಕೇಳಿ ಅರ್ಜುನನಿಗೆ ಅದನ್ನು ಕರುಣೆಯಿಮ್ದ ಹೇಳಿದನು.

ಅರ್ಥ:
ಬೀಳುಕೊಂಡು: ತೆರಳು; ರಾಜಸಭೆ: ಓಲಗ; ಆಲಯ: ಮನೆ; ಚಿಂತಾಲೋಲ: ಚಿಂತೆಯಲ್ಲಿ ಮಗ್ನನಾಗಿ; ಲೋಲ: ಪ್ರೀತಿ; ಮರಣ; ಸಾವು: ಜೀವನ: ಪ್ರಾಣ; ಜಾತ: ಹುಟ್ಟಿದ; ಸಂಶಯ: ಅನುಮಾನ; ಕೋಲ: ಬಾಣ; ಗುರು: ಆಚಾರ್ಯ; ವಿವಿಧ: ಹಲವಾರು; ರಚನೆ: ನಿರ್ಮಾಣ; ಕೇಳು: ಆಲಿಸು; ನಸುನಗು: ಹಸನ್ಮುಖ; ಹೇಳು: ತಿಳಿಸು; ಕರುಣೆ: ದಯೆ;

ಪದವಿಂಗಡಣೆ:
ಬೀಳುಕೊಂಡುದು +ರಾಜಸಭೆ +ತ
ಮ್ಮಾಲಯಕೆ +ಸೈಂಧವನು +ಚಿಂತಾ
ಲೋಲನಿರ್ದನು +ಮರಣ+ಜೀವನ +ಜಾತ +ಸಂಶಯನು
ಕೋಲಗುರುವಿನ +ವಿವಿಧ +ರಚನೆಯ
ಕೇಳಿದನು +ನಸುನಗುತ+ ಪಾರ್ಥಗೆ
ಹೇಳಿದನು +ಕರುಣದಲಿ +ಗದುಗಿನ+ ವೀರನಾರಯಣ

ಅಚ್ಚರಿ:
(೧) ಕೇಳಿದನು, ಹೇಳಿದನು – ಪ್ರಾಸ ಪದ
(೨) ಸೈಂಧವನ ಸಂಶಯ – ಸೈಂಧವನು ಚಿಂತಾಲೋಲನಿರ್ದನು ಮರಣಜೀವನ ಜಾತ ಸಂಶಯನು

ಪದ್ಯ ೧: ದ್ರೋಣರು ಭೀಷ್ಮರಿಗೆ ಏನು ಹೇಳಿದರು?

ಭಯವು ಭಾರವಿಸಿತ್ತು ಜನಮೇ
ಜಯ ಮಹೀಪತಿ ಕೇಳು ಕುರು ಸೇ
ನೆಯಲಿ ಭೀಷ್ಮದ್ರೋಣರರಿದರು ಪಾರ್ಥನೆಂಬುದನು
ಜಯವು ಜೋಡಿಸಲರಿಯದಿದು ಸಂ
ಶಯದ ಸುಳಿವುತ್ಪಾತ ಶತವಿದು
ಲಯದ ಬೀಜವು ಭೀಷ್ಮ ಚಿತ್ತವಿಸೆಂದನಾ ದ್ರೋಣ (ವಿರಾಟ ಪರ್ವ, ೮ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಕೌರವ ಸೇನೆಯಲ್ಲಿ ಎಲ್ಲೆಲ್ಲೂ ಭಯವು ಆವರಿಸಿತ್ತು, ಎದುರಿನಲ್ಲಿ ಬಂದವನು ಅರ್ಜುನನೇ ಎಂದು ದ್ರೋಣ, ಭೀಷ್ಮರಿಗೆ ತಿಳಿಯಿತು, ದ್ರೋಣರು ಭೀಷ್ಮರಿಗೆ, “ಈ ಯುದ್ಧದಲ್ಲಿ ನಮಗೆ ಜಯವುಂಟಾಗುವುದಿಲ್ಲ, ಈಗ ತೋರುತ್ತಿರುವ ಅಪಶಕುನಗಳು ಈ ಸಂಶಯಕ್ಕೆ ಎಡೆಗೊಡುತ್ತದೆ, ನಮಗೆ ಶತಪ್ರತಿಶತ ಸೋಲಾಗುತ್ತದೆ” ಎಂದರು.

ಅರ್ಥ:
ಭಯ: ಅಂಜಿಕೆ; ಭಾರ: ಹೊರೆ, ತೂಕ; ಮಹೀಪತಿ: ರಾಜ; ಕೇಳು: ಆಲಿಸು; ಸೇನೆ: ಸೈನ್ಯ; ಅರಿ: ತಿಳಿ; ಜಯ: ಗೆಲುವು; ಜೋಡಿಸು: ಕೂಡಿಸು; ಸಂಶಯ: ಅನುಮಾನ; ಸುಳಿವು: ಕುರುಹು; ಉತ್ಪಾತ: ಅಪಶಕುನ; ಶತವಿದು: ಖಂಡಿತವಾಗಿಯು; ಲಯ: ಅಳಿವು, ನಾಶ; ಬೀಜ: ಮೂಲ; ಚಿತ್ತವಿಸು: ಗಮನವಿಡು;

ಪದವಿಂಗಡಣೆ:
ಭಯವು+ ಭಾರವಿಸಿತ್ತು +ಜನಮೇ
ಜಯ +ಮಹೀಪತಿ +ಕೇಳು +ಕುರು +ಸೇ
ನೆಯಲಿ +ಭೀಷ್ಮ+ದ್ರೋಣರ್+ಅರಿದರು +ಪಾರ್ಥನೆಂಬುದನು
ಜಯವು +ಜೋಡಿಸಲ್+ಅರಿಯದಿದು+ ಸಂ
ಶಯದ +ಸುಳಿವ್+ಉತ್ಪಾತ +ಶತವಿದು
ಲಯದ+ ಬೀಜವು +ಭೀಷ್ಮ +ಚಿತ್ತವಿಸೆಂದನಾ +ದ್ರೋಣ

ಅಚ್ಚರಿ:
(೧) ಜಯ, ಸಂಶಯ, ಭಯ, ಲಯ – ಪ್ರಾಸ ಪದಗಳು
(೨) ಅರಿದರು, ಅರಿಯದಿದು – ಅರಿ ಪದದ ಬಳಕೆ
(೩) ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳುವ ಪರಿ – ಸಂಶಯದ ಸುಳಿವುತ್ಪಾತ ಶತವಿದು ಲಯದ ಬೀಜವು

ಪದ್ಯ ೪೧: ಉತ್ತರನು ಯಾವ ಪ್ರಶ್ನೆಗಳನ್ನು ಕೇಳಿದನು?

ಹೇಳು ಸಾರಥಿ ಬಿಲ್ಲದಾವನ
ತೋಳಿಗಳವದುವುದು ಮಹಾಶರ
ಜಾಲ ಬೆಸರಿದಪವಿದಾರಿಗೆ ಮಿಕ್ಕ ಬಿಲ್ಲುಗಳು
ಕಾಳಗದೊಳಿವನಾರು ತೆಗೆವರು
ಮೇಲುಗೈದುಗಳಾರಿಗಿವು ಕೈ
ಮೇಳವಿಸುವವು ಮನದ ಸಂಶಯ ಹಿಂಗೆ ಹೇಳೆಂದ (ವಿರಾಟ ಪರ್ವ, ೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ಉತ್ತರನು ತನ್ನ ಪ್ರಶ್ನೆಗಳನ್ನು ಮುಂದುವರೆಸುತ್ತಾ, ಸಾರಥೀ ಈ ದೊಡ್ಡ ಬಿಲ್ಲು ಯಾರ ತೋಳಿನಲ್ಲಿರುತ್ತದೆ? ಈ ಮಹಾಶರಗಳು ಯಾರ ಅಧೀನದಲ್ಲಿವೆ? ಉಳಿದ ಬಿಲ್ಲುಗಳು ಯಾರವು? ಯುದ್ಧದಲ್ಲಿ ಇವನ್ನಾರು ಉಪಯೋಗಿಸುತ್ತಾರೆ? ಉಳಿದ ಆಯುಧಗಳು ಯಾರವು? ನನ್ನ ಮನಸ್ಸಿನ ಸಂಶಯವನ್ನು ನಿವಾರಿಸು ಎಂದು ಕೇಳಿದನು.

ಅರ್ಥ:
ಹೇಳು: ತಿಳಿಸು; ಸಾರಥಿ: ಸೂತ; ಬಿಲ್ಲು: ಚಾಪ; ತೋಳು: ಬಾಹು; ಅಳವಡು: ಹೊಂದು, ಸೇರು, ಕೂಡು; ಮಹಾಶರ: ದೊಡ್ಡ ಬಾಣ; ಜಾಲ: ಗುಂಪು; ಬೆಸಗೈ: ಅಪ್ಪಣೆಮಾದು; ಮಿಕ್ಕ: ಉಳಿದ; ಕಾಳಗ: ಯುದ್ಧ; ತೆಗೆ:ಹೊರತರು; ಮೇಲು: ಹಿರಿಯ, ದೊಡ್ಡ; ಕೈದು: ಆಯುಧ, ಕತ್ತಿ; ಕೈಮೇಳ: ಕೈಗೆ ಸೇರುವ; ಮನ: ಮನಸ್ಸು; ಸಂಶಯ: ಅನುಮಾನ; ಹಿಂಗು: ತಗ್ಗು; ಹೇಳು: ತಿಳಿಸು;

ಪದವಿಂಗಡಣೆ:
ಹೇಳು +ಸಾರಥಿ+ ಬಿಲ್ಲದ್+ಆವನ
ತೋಳಿಗ್+ಅಳವಡುವುದು +ಮಹಾಶರ
ಜಾಲ +ಬೆಸರಿದಪವಿದಾರಿಗೆ+ ಮಿಕ್ಕ+ ಬಿಲ್ಲುಗಳು
ಕಾಳಗದೊಳ್+ಇವನಾರು +ತೆಗೆವರು
ಮೇಲು+ಕೈದುಗಳ್+ಆರಿಗಿವು+ ಕೈ
ಮೇಳವಿಸುವವು +ಮನದ+ ಸಂಶಯ +ಹಿಂಗೆ+ ಹೇಳೆಂದ

ಅಚ್ಚರಿ:
(೧) ಹೇಳು – ಪದ್ಯದ ಮೊದಲ ಹಾಗು ಕೊನೆ ಪದ

ಪದ್ಯ ೧೮: ಹನುಮಂತನು ಭೀಮನಿಗೆ ಏನು ಮಾಡಲು ಹೇಳಿದನು?

ನೀವು ಬಲ್ಲಿದರಿದಕೆ ಸಂಶಯ
ವಾವುದಲ್ಲದೊಡೀಮದದ್ವಿಭ
ವೀ ವಿಹಗಕುಲವೀ ಮೃಗ ವ್ರಜವಂಜುವುದೆ ನಿಮಗೆ
ನಾವು ವೃದ್ಧರು ನಮ್ಮ ಬಾಲವ
ನಾವು ಹದುಳಿಸಲಾರೆವೀಗಳು
ನೀವು ತೊಲಗಿಸಿ ಬಿಜಯ ಮಾಡುವುದೆಂದನಾ ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಹನುಮಂತನು ಭೀಮನ ಮಾತುಗಳನ್ನು ಕೇಳಿ, ನಿಜ ನೀವು ಬಲಶಾಲಿಗಳು, ಇದಕ್ಕೇನು ಅನುಮಾನವಿಲ್ಲ, ಇಲ್ಲದಿದ್ದರೆ ಈ ಮದದಾನೆಗಳು, ಮೃಗ ಪಕ್ಷಿಗಳ ಸಂಕುಲವು ನಿಮಗೆ ಹೆದರುತ್ತಿದ್ದವೇ? ನಾವಾದರೋ ಮುದುಕರು, ನಮ್ಮ ಬಾಲವನ್ನು ವಶದಲ್ಲಿಟ್ಟುಕೊಳ್ಳಲು ಸಮರ್ಥರಲ್ಲ. ಆದುದರಿಂದ ನಮ್ಮ ಬಾಲವನ್ನು ಆಚೆಗೆ ಸರಿಸಿ ಮುಂದೆಸಾಗಿರಿ ಎಂದು ಭೀಮನಿಗೆ ಹನುಮನು ತಿಳಿಸಿದನು.

ಅರ್ಥ:
ಬಲ್ಲಿದ: ಬಲಿಷ್ಠ; ಸಂಶಯ: ಅನುಮಾನ, ಸಂದೇಹ; ಇಭ: ಆನೆ; ಮದ: ಅಮಲು, ಸೊಕ್ಕು; ವಿಹಗ: ಪಕ್ಷಿ; ಕುಲ: ವಂಶ; ಮೃಗ: ಪ್ರಾಣಿ; ವ್ರಜ: ಗುಂಪು; ಅಂಜು: ಹೆದರು; ವೃದ್ಧ: ಮುಪ್ಪು; ಬಾಲ: ಪುಚ್ಛ; ಹದುಳ: ಕ್ಷೇಮ, ಆರೋಗ್ಯ; ತೊಲಗಿಸು: ಹೋಗಲಾಡಿಸು; ಬಿಜಯಂಗೈ: ದಯಮಾಡಿಸು, ನಡೆ;

ಪದವಿಂಗಡಣೆ:
ನೀವು +ಬಲ್ಲಿದರ್+ಇದಕೆ +ಸಂಶಯ
ವಾವುದಲ್ಲದೊಡ್+ಈ+ಮದದ್+ಇಭವ್
ಈ+ ವಿಹಗಕುಲವ್+ಈ+ ಮೃಗ +ವ್ರಜವ್+ಅಂಜುವುದೆ +ನಿಮಗೆ
ನಾವು +ವೃದ್ಧರು +ನಮ್ಮ +ಬಾಲವ
ನಾವು +ಹದುಳಿಸಲಾರೆವ್+ಈಗಳು
ನೀವು +ತೊಲಗಿಸಿ+ ಬಿಜಯ+ ಮಾಡುವುದೆಂದನಾ+ ಹನುಮ

ಅಚ್ಚರಿ:
(೧) ಭೀಮನ ಪರಾಕ್ರಮದ ಪರಿಚಯ ಮಾಡುವ ಪರಿ – ನೀವು ಬಲ್ಲಿದರಿದಕೆ ಸಂಶಯ
ವಾವುದಲ್ಲದೊಡೀಮದದ್ವಿಭವೀ ವಿಹಗಕುಲವೀ ಮೃಗ ವ್ರಜವಂಜುವುದೆ ನಿಮಗೆ