ಪದ್ಯ ೧೯: ಭೀಮನೇಕೆ ಆಶ್ಚರ್ಯಗೊಂಡನು?

ಐಸಲೇ ತಪ್ಪೇನೆನುತ ತನ
ಗೇಸು ಬಲುಹುಂಟೈಸರಲಿ ಕ
ಟ್ಟಾಸುರದಲೌಕಿದನು ಬಾಲವನೊದರಿ ಬೊಬ್ಬಿರಿದು
ಗಾಸಿಯಾದನು ಪವನಸುತನೆ
ಳ್ಳೈಸು ಮಿಡುಕದು ಬಾಲವೂರ್ದ್ವ
ಶ್ವಾಸಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ (ಅರಣ್ಯ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಭೀಮನು ಹನುಮನ ಕೋರಿಕೆಯನ್ನು ಕೇಳಿ, ಅಷ್ಟೇ ತಾನೆ, ಇದರಲ್ಲೇನು ತಪ್ಪು ಎಂದು ಹೇಳಿ ಭೀಮನು ತನಗೆಷ್ಟು ಸತ್ವವಿತ್ತೋ ಆ ಬಲವನ್ನೇಲ್ಲ ಒಟ್ಟುಗೂಡಿಸಿ ಜೋರಾಗಿ ಬೊಬ್ಬೆಯಿಡುತ್ತಾ ಬಾಲವನ್ನು ಅಲುಗಾಡಿಸಿದರೂ ಆ ಬಾಲವು ಒಂದು ಎಳ್ಳಿನಷ್ಟೂ ಅಲುಗಲಿಲ್ಲ. ಭೀಮನಿಗೆ ಮೇಲುಸಿರು ಬಂತು, ಆಶ್ಚರ್ಯಚಕಿತನಾಗಿ ಭೀಮನು ಬೆಂಡಾದನು.

ಅರ್ಥ:
ಐಸಲೇ: ಅಲ್ಲವೇ; ಏಸು: ಎಷ್ಟು; ಬಲ: ಶಕ್ತಿ; ಐಸರ್: ಅಷ್ಟರಲ್ಲಿ; ಕಟ್ಟಾಸುರ: ಅತ್ಯಂತ ಭಯಂಕರ; ಔಕು: ನೂಕು; ಬಾಲ: ಪುಚ್ಛ; ಒದರು: ಕೊಡಹು, ಜಾಡಿಸು; ಬೊಬ್ಬೆ: ಗರ್ಜಿಸು; ಗಾಸಿ: ತೊಂದರೆ, ಕಷ್ಟ; ಪವನಸುತ: ವಾಯುಪುತ್ರ (ಭೀಮ); ಎಳ್ಳೈಸು: ಎಳ್ಳಿನಷ್ಟು, ಸ್ವಲ್ಪವೂ; ಮಿಡುಕು: ಅಲ್ಲಾಡು; ಊರ್ಧ್ವ: ಮೇಲ್ಭಾಗ; ಶ್ವಾಸ: ಉಸಿರು; ಲಹರಿ: ರಭಸ, ಆವೇಗ; ಅಡಿಗಡಿಗೆ: ಮತ್ತೆ ಮತ್ತೆ; ಲಟಕಟಿಸು: ಉದ್ವೇಗ, ಆಶ್ಚರ್ಯ;

ಪದವಿಂಗಡಣೆ:
ಐಸಲೇ +ತಪ್ಪೇನ್+ಎನುತ +ತನಗ್
ಏಸು+ ಬಲುಹುಂಟ್+ಐಸರಲಿ +ಕ
ಟ್ಟಾಸುರದಲ್+ಔಕಿದನು +ಬಾಲವನ್+ಒದರಿ +ಬೊಬ್ಬಿರಿದು
ಗಾಸಿಯಾದನು+ ಪವನಸುತನ್
ಎಳ್ಳೈಸು +ಮಿಡುಕದು +ಬಾಲವ್+ಊರ್ದ್ವ
ಶ್ವಾಸ+ಲಹರಿಯಲ್+ಅಡಿಗಡಿಗೆ+ ಲಟಕಟಿಸಿದನು +ಭೀಮ

ಅಚ್ಚರಿ:
(೧) ಭೀಮನು ಆಯಾಸಗೊಂಡ ಪರಿ – ಊರ್ದ್ವಶ್ವಾಸಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ