ಪದ್ಯ ೫೬: ಪಾಂಡವರು ಹೇಗೆ ಯುದ್ಧಕ್ಕೆ ತಯಾರಾದರು?

ಅವರ ಸುಮ್ಮಾನವನು ಸೇನಾ
ನಿವಹ ರಭಸದ ಭೂರಿಭೇರಿಯ
ವಿವಿಧ ವಾದ್ಯಧ್ವನಿಯ ರಥಗಜಹಯದ ಗರ್ಜನೆಯ
ಇವರು ಕೇಳಿದರಕಟಕಟ ಕೌ
ರವನ ಗುಪ್ತ ಪ್ರಕಟವಾದುದೆ
ಶಿವಶಿವಾ ಹರಿ ಸವರ್ಗತನಹುದೆಂದನಾ ದ್ರೌಣಿ (ಗದಾ ಪರ್ವ, ೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯ ರಭಸ, ಸಂತೋಷ, ವಿವಿಧ ವಾದ್ಯಗಳ ಧ್ವನಿ, ರಥದ ಚೀತ್ಕೃತಿ, ಕುದುರೆಯ ಹೇಷಾರವ, ಆನೆಯ ಬೃಂಹಿತಗಳನ್ನು ಕೃಪ ಅಶ್ವತ್ಥಾಮ ಕೃತವರ್ಮರು ಕೇಳಿದರು. ಅಶ್ವತ್ಥಾಮನು, ಕೌರವನ ನೆಲೆ ಪ್ರಕಟ

ಅರ್ಥ:
ಸುಮ್ಮಾನ: ಸಂತಸ; ನಿವಹ: ಗುಂಪು; ರಭಸ: ವೇಗ; ಭೂರಿ: ಹೆಚ್ಚು, ಅಧಿಕ; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ; ವಿವಿಧ: ಹಲವಾರು; ವಾದ್ಯ; ಸಂಗೀತದ ಸಾಧನ; ಧ್ವನಿ: ಶಬ್ದ; ರಥ: ಬಂಡಿ; ಗಜ: ಆನೆ; ಹಯ: ಕುದುರೆ; ಗರ್ಜನೆ: ಆರ್ಭಟ; ಕೇಳು: ಆಲಿಸು; ಅಕಟಕಟ: ಅಯ್ಯಯ್ಯೋ; ಗುಪ್ತ: ರಹಸ್ಯ; ಪ್ರಕಟ: ತೋರು; ಹರಿ: ವಿಷ್ಣು; ಸರ್ವಗ: ಎಲ್ಲಾ ಕಡೆಯಲ್ಲೂ ವ್ಯಾಪಿಸಿರುವ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಅವರ +ಸುಮ್ಮಾನವನು +ಸೇನಾ
ನಿವಹ +ರಭಸದ +ಭೂರಿ+ಭೇರಿಯ
ವಿವಿಧ +ವಾದ್ಯ+ಧ್ವನಿಯ +ರಥ+ಗಜ+ಹಯದ +ಗರ್ಜನೆಯ
ಇವರು +ಕೇಳಿದರ್+ಅಕಟಕಟ +ಕೌ
ರವನ +ಗುಪ್ತ +ಪ್ರಕಟವಾದುದೆ
ಶಿವಶಿವಾ +ಹರಿ+ ಸವರ್ಗತನ್+ಅಹುದೆಂದನಾ +ದ್ರೌಣಿ

ಅಚ್ಚರಿ:
(೧) ಹರಿಯ ಹಿರಿಮೆ – ಹರಿ ಸವರ್ಗತನಹುದೆಂದನಾ ದ್ರೌಣಿ

ಪದ್ಯ ೧೯: ದುರ್ಯೋಧನನು ರಾಜರನ್ನು ಹೇಗೆ ಜರೆದನು?

ವೀರಮಾತೆಯರೆಂದು ತಾಯ್ಗಳ
ನಾರು ಕೊಂಡಾಡುವರು ಸತಿಯರು
ವೀರಪತ್ನಿಯರೆಂದು ನಿಇವರೆ ನಿಮ್ಮ ರಾಣಿಯರ
ವೀರಸಿರಿ ನಿಮಗೆಂದು ವಂದಿಗ
ಳೋರೆ ಕಟಕಿಯಲೆನ್ನರೇ ಕೈ
ವಾರಿಸುವ ಕವಿನಿಕರ ನಾಚದೆ ಶಿವಶಿವಾ ಎಂದ (ಗದಾ ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ನೀವೀಗ ಓಡಿಹೋದರೆ ನಿಮ್ಮ ತಾಯಂದಿರನ್ನು ವೀರ ಮಾತೆಯರೆಂದು ಯಾರು ಹೊಗಳುತ್ತಾರೆ? ನಿಮ್ಮ ಪತ್ನಿಯರನ್ನು ವೀರ ಪತ್ನಿಯರೆಂದು ಕರೆದಾರೆ? ನಿಮಗೆ ವೀರ ಲಕ್ಷ್ಮಿಯೊಲಿದಿದ್ದಾಳೆ? ಎಂದು ವಂದಿಗಳು ವ್ಯಂಗ್ಯವಾಗಿ ನುಡಿಯುವರಲ್ಲವೇ, ನಿಮ್ಮನ್ನು ಹೊಗಳುವ ಕವಿಗಳು ನಾಚಿಸುವುದಿಲ್ಲವೇ ಶಿವ ಶಿವಾ ಎಂದು ದುರ್ಯೋಧನನು ಜರೆದನು.

ಅರ್ಥ:
ವೀರ: ಶೂರ; ಮಾತೆ: ತಾಯಿ; ಕೊಂಡಾಡು: ಹೊಗಳು; ಸತಿ: ಹೆಂಡತಿ; ನುಡಿ: ಮಾತು; ರಾಣಿ: ಅರಸಿ; ಸಿರಿ: ಐಶ್ವರ್ಯ; ವಂದಿಗ: ಹೊಗಳುಭಟ್ಟ; ಕಟಕಿ: ಚುಚ್ಚುಮಾತು, ವ್ಯಂಗ್ಯ;ಕೈವಾರಿ: ಹೊಗಳುವವ; ಕವಿ: ಕಾವ್ಯಗಳನ್ನು ರಚಿಸುವವ; ನಿಕರ: ಗುಂಪು; ನಾಚು: ಅವಮಾನ ಹೊಂದು;

ಪದವಿಂಗಡಣೆ:
ವೀರ+ಮಾತೆಯರೆಂದು +ತಾಯ್ಗಳನ್
ಆರು +ಕೊಂಡಾಡುವರು +ಸತಿಯರು
ವೀರ+ಪತ್ನಿಯರೆಂದು +ನುಡಿವರೆ +ನಿಮ್ಮ +ರಾಣಿಯರ
ವೀರಸಿರಿ+ ನಿಮಗೆಂದು +ವಂದಿಗ
ಳೋರೆ+ ಕಟಕಿಯಲೆನ್ನರೇ +ಕೈ
ವಾರಿಸುವ +ಕವಿ+ನಿಕರ+ ನಾಚದೆ+ ಶಿವಶಿವಾ+ ಎಂದ

ಅಚ್ಚರಿ:
(೧) ವೀರಮಾತೆ, ವೀರಪತ್ನಿ, ವೀರಸಿರಿ – ವೀರ ಪದದ ಬಳಕೆ
(೨) ಮಾತೆ, ತಾಯಿ; ಸತಿ,ರಾಣಿ; ವಂದಿ, ಕಟಕಿ – ಸಾಮ್ಯಾರ್ಥ ಪದಗಳು

ಪದ್ಯ ೩: ಕೌರವರ ಸೈನ್ಯವು ಎಷ್ಟು ಕ್ಷೀಣಿಸಿತ್ತು?

ಸೂಳವಿಸಿದುವು ಸನ್ನೆಯಲಿ ನಿ
ಸ್ಸಾಳ ದಳಪತಿ ಕುರುಬಲದ ದೆ
ಖ್ಖಾಳವನು ನೋಡಿದನು ತೂಗಾಡಿದನು ಮಣಿಶಿರವ
ಆಳು ನೆರೆದಿರೆ ನಾಲ್ಕುದಿಕ್ಕಿನ
ಮೂಲೆ ನೆರೆಯದು ಮುನ್ನವೀಗಳು
ಪಾಳೆಯದ ಕಡೆವೀಡಿಗೈದದು ಶಿವಶಿವಾಯೆಂದ (ಶಲ್ಯ ಪರ್ವ, ೨ ಸಂಧಿ, ೩ ಪದ್ಯ)

ತಾತ್ಪರ್ಯ:
ಸನ್ನೆಯಾದೊಡನೆ ರಣಭೇರಿಗಳು ಬಡಿದವು. ಸೇನಾಧಿಪತಿಯು ತನ್ನ ಸೈನ್ಯವನ್ನು ನೋಡಿ ತಲೆದೂಗಿ, ಈ ಮೊದಲು ನಮ್ಮ ಸೈನ್ಯಕ್ಕೆ ನಾಲ್ಕು ದಿಕ್ಕಿನ ಮೂಲೆಗಳೂ ಸಾಲದಾಗಿದ್ದವು, ಈಗಲಾದರೋ ರಣಭೂಮಿಯಿಂದ ಪಾಳೆಯದ ವರೆಗಾಗುವಷ್ಟು ಯೋಧರಿಲ್ಲ, ಶಿವ ಶಿವಾ ಎಂದುಕೊಂಡನು.

ಅರ್ಥ:
ಸೂಳವಿಸು: ಧ್ವನಿಮಾಡು; ಸನ್ನೆ: ಗುರುತು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ದಳಪತಿ: ಸೇನಾಧಿಪತಿ; ದೆಖ್ಖಾಳ: ಗೊಂದಲ; ನೋಡು: ವೀಕ್ಷಿಸು; ತೂಗಾಡು: ಅಲ್ಲಾಡು; ಮಣಿಶಿರ: ಕಿರೀಟ; ಮಣಿ: ಬೆಲೆಬಾಳುವ ರತ್ನ; ಆಳು: ಸೇವಕ; ನೆರೆ: ಗುಂಪು; ದಿಕ್ಕು: ದಿಸೆ, ದೆಸೆ; ಮೂಲೆ: ಕೊನೆ; ನೆರೆ: ಪಕ್ಕ, ಪಾರ್ಶ್ವ; ಮುನ್ನ: ಮೊದಲು; ಪಾಳೆಯ: ಬೀಡು, ಶಿಬಿರ; ಕಡೆ: ಕೊನೆ, ಪಕ್ಕ; ಐದು: ಬಂದು ಸೇರು;

ಪದವಿಂಗಡಣೆ:
ಸೂಳವಿಸಿದುವು +ಸನ್ನೆಯಲಿ +ನಿ
ಸ್ಸಾಳ +ದಳಪತಿ +ಕುರುಬಲದ +ದೆ
ಖ್ಖಾಳವನು +ನೋಡಿದನು +ತೂಗಾಡಿದನು +ಮಣಿಶಿರವ
ಆಳು +ನೆರೆದಿರೆ+ ನಾಲ್ಕು+ದಿಕ್ಕಿನ
ಮೂಲೆ +ನೆರೆಯದು +ಮುನ್ನವ್+ಈಗಳು
ಪಾಳೆಯದ +ಕಡೆವೀಡಿಗ್+ಐದದು +ಶಿವಶಿವಾಯೆಂದ

ಅಚ್ಚರಿ:
(೧) ಸೂಳ, ನಿಸ್ಸಾಳ,ದೆಖ್ಖಾಳ – ಪ್ರಾಸ ಪದಗಳು
(೨) ಕೌರವ ಸೈನ್ಯದ ವಿಸ್ತಾರ – ಆಳು ನೆರೆದಿರೆ ನಾಲ್ಕುದಿಕ್ಕಿನ ಮೂಲೆ ನೆರೆಯದು

ಪದ್ಯ ೫: ಅರ್ಜುನನು ಏನೆಂದು ಘೋಷಿಸಿದನು?

ಶಿವಶಿವಾ ಬಳಲಿದುದು ಬಲವಗಿ
ದವಗಡಿಸಿದುದು ನಿದ್ದೆ ನೂಕದು
ಬವರವುಬ್ಬಿದ ತಿಮಿರವಳಿಯಲಿ ಸಾಕು ರಣವೆನುತ
ದಿವಿಜಪತಿಸುತನೆದ್ದು ಸೇನಾ
ನಿವಹದಲಿ ಸಾರಿದನು ಲಗ್ಗೆಯ
ರವವ ನಿಲಿಸಿದನಖಿಳ ಘನಗಂಭೀರನಾದದಲಿ ಪಾರ್ಥ (ದ್ರೋಣ ಪರ್ವ, ೧೭ ಸಂಧಿ, ೫ ಪದ್ಯ)

ತಾತ್ಪರ್ಯ:
ಶಿವಶಿವಾ ಸೈನ್ಯವು ಹೋರಾಡಿ ಬಳಲಿದೆ, ನಿದ್ದೆಯ ಕಾಟ ಹೆಚ್ಚಿದೆ, ಕತ್ತಲು ಹೋಗುವವರೆಗೂ ಯುದ್ಧಬೇಡ, ಎಂದು ಚಿಂತಿಸಿ ಸೈನ್ಯಕ್ಕೆ ಲಗ್ಗೆಯನ್ನು ನಿಲ್ಲಿಸಿ ಎಂದು ಅರ್ಜುನನು ಗಂಭೀರ ಘೋಷ ಮಾಡಿದನು.

ಅರ್ಥ:
ಬಳಲು: ಆಯಾಸಗೊಳ್ಳು; ಅವಗಡಿಸು: ಕಡೆಗಣಿಸು; ನಿದ್ದೆ: ಶಯನ; ನೂಕು: ತಳ್ಳು; ಬವರ: ಕಾಳಗ, ಯುದ್ಧ; ಉಬ್ಬು: ಹೆಚ್ಚಾಗು; ತಿಮಿರ: ಕತ್ತಲೆ; ಸಾಕು: ನಿಲ್ಲು ರಣ: ಯುಚ್ಛ; ದಿವಿಜಪತಿ: ದೇವತೆಗಳ ಒಡೆಯ (ಇಂದ್ರ); ಸುತ: ಪುತ್ರ; ಎದ್ದು: ಮೇಲೇಳು; ನಿವಹ: ಗುಂಪು; ಸಾರು: ಹತ್ತಿರಕ್ಕೆ ಬರು; ಲಗ್ಗೆ: ಆಕ್ರಮಣ; ರವ: ಶಬ್ದ; ನಿಲಿಸು: ನಿಲ್ಲು; ಘನ: ಗಟ್ಟಿ; ಗಂಭೀರ: ಆಳವಾದ, ಗಹನವಾದ; ನಾದ: ಶಬ್ದ;

ಪದವಿಂಗಡಣೆ:
ಶಿವಶಿವಾ +ಬಳಲಿದುದು +ಬಲವಗಿದ್
ಅವಗಡಿಸಿದುದು +ನಿದ್ದೆ +ನೂಕದು
ಬವರವ್+ಉಬ್ಬಿದ +ತಿಮಿರವಳಿಯಲಿ +ಸಾಕು +ರಣವೆನುತ
ದಿವಿಜಪತಿಸುತನ್+ಎದ್ದು +ಸೇನಾ
ನಿವಹದಲಿ +ಸಾರಿದನು +ಲಗ್ಗೆಯ
ರವವ+ ನಿಲಿಸಿದನ್+ಅಖಿಳ +ಘನಗಂಭೀರ+ನಾದದಲಿ +ಪಾರ್ಥ

ಅಚ್ಚರಿ:
(೧) ಅರ್ಜುನನನ್ನು ದಿವಿಜಪತಿಸುತ ಎಂದು ಕರೆದಿರುವುದು
(೨) ಬವರ, ರಣ – ಸಮಾನಾರ್ಥಕ ಪದಗಳು

ಪದ್ಯ ೩: ಸಾತ್ಯಕಿಯು ಧರ್ಮಜನಿಗೆ ಏನೆಂದು ಉತ್ತರಿಸಿದನು?

ಮೊಲದ ಬಲೆಯಲಿ ವನದ ಮದಕರಿ
ಸಿಲುಕಲರಿವುದೆ ಶಿವಶಿವಾ ನರ
ನಳವನರಿಯಾ ಕೃಷ್ಣನಾರೆಂದರಸ ಮರೆದೆಯಲಾ
ಕೊಳುಗುಳವನಾರೈದು ಬಾಯೆನೆ
ನಿಲುವುದನುಚಿತವರ್ಜುನನ ನೆಲೆ
ಗೊಳಿಸಿ ಬಹೆನೆಂದಾಯುಧವ ಕೊಂಡಡರಿದನು ರಥವ (ದ್ರೋಣ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ಸಾತ್ಯಕಿಯು ಉತ್ತರಿಸುತ್ತಾ, ದೊರೆಯೇ, ನಿನಗೆ ಅರ್ಜುನನ ಸಾಮರ್ಥ್ಯ ತಿಳಿಯದೇ? ಕಾಡಿನ ಮದದಾನೆಯಮ್ತಿರುವ ಅವನು ಕೌರವರೆಂಬ ಮೊಲಗಳ ಬಲೆಗೆ ಬಿದ್ದಾನೆ? ಕೃಷ್ಣನು ಯಾರು ಎನ್ನುವುದು ಮರೆತೆಯಾ? ಯುದ್ಧವನ್ನು ನೋಡಿಕೊಂಡು ಬಾ ಎಂದು ಹೇಳಿದ ಮೇಲೆ ಸುಮ್ಮನಿರುವುದು ಉಚಿತವಲ್ಲ, ಅರ್ಜುನನು ಎಲ್ಲಿದ್ದಾನೆ ಎಂಬುದನ್ನು ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಸಾತ್ಯಕಿಯು ರಥವನ್ನು ಹತ್ತಿದನು.

ಅರ್ಥ:
ಬಲೆ: ಜಾಲ; ವನ:ಕಾಡು; ಮದ: ಮತ್ತು, ಅಮಲು; ಕರಿ: ಆನೆ; ಸಿಲುಕು: ಬಂಧಿಸು; ನರ:ಅರ್ಜುನ; ಅಳವು: ಶಕ್ತಿ; ಅರಿ: ತಿಳಿ; ಅರಸ: ರಾಜ; ಮರೆದೆ: ನೆನಪಿನಿಂದ ದೂರಮಾಡು; ಕೊಳುಗುಳ: ಯುದ್ಧ; ನಿಲುವು: ನಿಲ್ಲು; ಅನುಚಿತ: ಸರಿಯಲ್ಲದು; ನೆಲೆ: ಆಶ್ರಯ, ಆಧಾರ; ಬಹೆ: ಹಿಂದಿರುಗು; ಆಯುಧ: ಶಸ್ತ್ರ; ಅಡರು: ಹತ್ತು; ರಥ: ಬಂಡಿ;

ಪದವಿಂಗಡಣೆ:
ಮೊಲದ +ಬಲೆಯಲಿ +ವನದ +ಮದಕರಿ
ಸಿಲುಕಲ್+ಅರಿವುದೆ+ ಶಿವಶಿವಾ +ನರನ್
ಅಳವನರಿಯಾ +ಕೃಷ್ಣನಾರೆಂದ್+ಅರಸ +ಮರೆದೆಯಲಾ
ಕೊಳುಗುಳವನ್+ಆರೈದು +ಬಾಯೆನೆ
ನಿಲುವುದ್+ಅನುಚಿತವ್+ಅರ್ಜುನನ +ನೆಲೆ
ಗೊಳಿಸಿ +ಬಹೆನೆಂದ್+ಆಯುಧವ +ಕೊಂಡ್+ಅಡರಿದನು +ರಥವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮೊಲದ ಬಲೆಯಲಿ ವನದ ಮದಕರಿಸಿಲುಕಲರಿವುದೆ

ಪದ್ಯ ೬೧: ದ್ರೋಣನ ಪರಾಕ್ರಮ ಯಾರಿಗೆ ಸಮಾನ?

ಗೆಲಿದನೈ ಮಝ ಪೂತು ದ್ರೋಣನ
ಬಲುಹು ಭರ್ಗನ ಸರಿ ಯುಧಿಷ್ಠಿರ
ಸಿಲುಕಿದನಲಾ ಶಿವಶಿವಾ ಕಲಿ ಕರ್ಣ ನೋಡೆನುತ
ಉಲಿವ ದುರಿಯೋಧನನನೀಕ್ಷಿಸು
ತಲಘುಭುಜಬಲ ಭಾನು ನಂದನ
ನಳುಕದೀ ಮಾತುಗಳನೆಂದನು ನೀತಿಸಮ್ಮತವ (ದ್ರೋಣ ಪರ್ವ, ೨ ಸಂಧಿ, ೬೧ ಪದ್ಯ
)

ತಾತ್ಪರ್ಯ:
ಈ ಕಾಳಗವನ್ನು ನೋಡುತ್ತಿದ್ದ ಕೌರವನು, ಕರ್ಣ ನೋಡು ದ್ರೋಣನ ಪರಾಕ್ರಮವು ಶಿವನ ಬಲ್ಮೆಗೆ ಸರಿ. ದ್ರೋಣನು ಗೆದ್ದ ಯುಧಿಷ್ಠಿರನು ಸೆರೆ ಸಿಕ್ಕ ಎನ್ನಲು ಮಹಾಬಾಹುಬಲನಾದ ಕರ್ಣನು ಅಳುಕದೆ ದುರ್ಯೋಧನನಿಗೆ ಈ ಮಾತುಗಳನ್ನು ಹೇಳಿದನು.

ಅರ್ಥ:
ಗೆಲಿದು: ಜಯ; ಮಝ: ಭಾಪು, ಭಲೇ; ಪೂತು: ಕೋಂಡಾಟದ ಮಾತು; ಬಲುಹು: ಬಲ, ಶಕ್ತಿ; ಭರ್ಗ: ಶಿವ, ಈಶ್ವರ; ಸರಿ: ಸಮಾನ; ಸಿಲುಕು: ಬಂಧನಕ್ಕೊಳಗಾಗು, ಸೆರೆಯಾಗು; ಕಲಿ: ಶೂರ; ನೋಡು: ವೀಕ್ಷಿಸು; ಉಲಿ: ಶಬ್ದ; ಈಕ್ಷಿಸು: ನೋಡು; ಅಲಗು: ಖಡ್ಗ, ಆಯುಧದ ಮೊನೆ, ಕತ್ತಿ; ಭುಜಬಲ: ಪರಾಕ್ರಮ; ಭಾನು: ಸೂರ್ಯ; ಅಳುಕು: ಹೆದರು; ನೀತಿ: ಮಾರ್ಗದರ್ಶನ; ಸಮ್ಮತ: ಒಪ್ಪಿಗೆಯಾದುದು;

ಪದವಿಂಗಡಣೆ:
ಗೆಲಿದನೈ +ಮಝ +ಪೂತು +ದ್ರೋಣನ
ಬಲುಹು +ಭರ್ಗನ +ಸರಿ +ಯುಧಿಷ್ಠಿರ
ಸಿಲುಕಿದನಲಾ+ ಶಿವಶಿವಾ+ ಕಲಿ+ ಕರ್ಣ +ನೋಡೆನುತ
ಉಲಿವ +ದುರಿಯೋಧನನನ್+ಈಕ್ಷಿಸುತ್
ಅಲಘು+ಭುಜಬಲ+ ಭಾನು +ನಂದನನ್
ಅಳುಕದೀ +ಮಾತುಗಳನ್+ಎಂದನು +ನೀತಿ+ಸಮ್ಮತವ

ಅಚ್ಚರಿ:
(೧) ದ್ರೋಣನ ಪರಾಕ್ರಮವನ್ನು ಹೊಗಳುವ ಪರಿ – ಗೆಲಿದನೈ ಮಝ ಪೂತು ದ್ರೋಣನ ಬಲುಹು ಭರ್ಗನ ಸರಿ

ಪದ್ಯ ೧೪: ದೇವತೆಗಳೇಕೆ ನಕ್ಕರು?

ಗಾಳಿಯುರುಬೆಗೆ ಮಲೆತ ಮೇಘದ
ತೋಳುವಲ ನಗೆಗೆಡೆಯಲಾ ಕುರು
ಪಾಲನೆತ್ತಲು ಭೀಮನೆತ್ತಲು ಶಿವಶಿವಾ ಎನುತ
ಮೇಲಣಮರರ ಮಂದಿ ನಗೆ ನೃಪ
ಮೌಳಿ ಜವಗೆಡೆ ಖಾತಿಯೊಳು ಕ
ಟ್ಟಾಳು ಹೊಕ್ಕುದು ಭೀಮಸೇನನ ರಥವ ಮುರಿಯೆಸುತ (ಭೀಷ್ಮ ಪರ್ವ, ೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಬೀಸುವ ಬಿರುಗಾಳಿಗೆ ಮೋಡಗಳು ಎದುರಾಗಿ ನಿಲ್ಲುವುದೆಂಬುದು ಹಾಸ್ಯಾಸ್ಪದ. ಭೀಮನೆಲ್ಲಿ, ದುರ್ಯೋಧನನೆಲ್ಲಿ ಶಿವ ಶಿವಾ! ಎಂದು ನೋಡುತ್ತಿದ್ದ ದೇವತೆಗಳು ನಕ್ಕರು. ಕೌರವನು ಬೆದರಿದನು. ಅದನ್ನು ಕಂಡ ಕೌರವ ಸೈನ್ಯದ ವೀರರು ಭೀಮನ ರಥವನ್ನು ಮುರಿ ಎಂದು ಗರ್ಜಿಸುತ್ತಾ ಭೀಮನತ್ತ ನುಗ್ಗಿದನು.

ಅರ್ಥ:
ಗಾಳಿ: ವಾಯು, ಅನಿಲ; ಉರುಬು: ಅತಿಶಯವಾದ ವೇಗ; ಮಲೆತ: ಪ್ರತಿಭಟಿಸಿದ; ಮೇಘ: ಮೋಡ; ತೋಳು: ಬಾಹು; ನಗೆಗಡೆ: ಹಾಸ್ಯಾಸ್ಪದ; ಕುರುಪಾಲ: ದುರ್ಯೋಧನ; ಮೇಲಣ: ಎತ್ತರದಲ್ಲಿದ್ದ; ಅಮರ: ದೇವತೆ; ಮಂದಿ: ಜನ; ನಗೆ; ಸಂತಸ; ನೃಪಮೌಳಿ: ಶ್ರೇಷ್ಠನಾದ ರಾಜ; ಜವ: ಯಮ,ಶಕ್ತಿ; ಕೆಡೆ: ಬೀಳು, ಕುಸಿ; ಖಾತಿ: ಕೋಪ; ಕಟ್ಟಾಳು: ಶೂರ, ಪರಾಕ್ರಮಿ; ಹೊಕ್ಕು: ಸೇರು; ರಥ: ಬಂಡಿ; ಮುರಿ: ಸೀಳು;

ಪದವಿಂಗಡಣೆ:
ಗಾಳಿ+ಉರುಬೆಗೆ +ಮಲೆತ +ಮೇಘದ
ತೋಳುವಲ+ ನಗೆಗೆಡೆಯಲಾ +ಕುರು
ಪಾಲನೆತ್ತಲು+ ಭೀಮನೆತ್ತಲು +ಶಿವಶಿವಾ +ಎನುತ
ಮೇಲಣ್+ಅಮರರ +ಮಂದಿ +ನಗೆ +ನೃಪ
ಮೌಳಿ +ಜವಗೆಡೆ +ಖಾತಿಯೊಳು +ಕ
ಟ್ಟಾಳು +ಹೊಕ್ಕುದು +ಭೀಮಸೇನನ+ ರಥವ +ಮುರಿಯೆಸುತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಾಳಿಯುರುಬೆಗೆ ಮಲೆತ ಮೇಘದ ತೋಳುವಲ ನಗೆಗೆಡೆಯಲಾ

ಪದ್ಯ ೩೮: ದ್ರೌಪದಿ ಏಕೆ ಆಶ್ಚರ್ಯಪಟ್ಟಳು?

ಆರಲರಿದನೊ ಭೀಮ ನೀ ಸೂ
ವಾರ ವಿದ್ಯೆಯ ಭಾಪು ವಿಧಿ ಮುನಿ
ದಾರನಾವಂಗದಲಿ ಬರಿಸದು ಶಿವಶಿವಾಯೆನುತ
ನಾರಿ ನಸು ನಗುತೊಳಗೆ ಹೊಕ್ಕು ಬ
ಕಾರಿ ಮಂಚದಲಿರಲು ನಿದ್ರಾ
ಭಾರ ವಿಹ್ವಲ ಕರನನನು ಹೊದ್ದಿದಳು ದುಗುಡದಲಿ (ವಿರಾಟ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಡುಗೆ ಮಾಡುವ ವಿದ್ಯೆಯನ್ನು ಭೀಮನು ಯಾರಲ್ಲಿ ಕಲಿತನೋ ಭಲೇ ವಿಧಿಯೇ ನೀನು ಕೋಪಗೊಂಡರೆ ನೀನು ಯಾರನ್ನು ಯಾವ ಗತಿಗೆ ತರುವೆಯೋ ಏನೊ ಶಿವ ಶಿವಾ ಎಂದು ಯೋಚಿಸಿ ನಸುನಕ್ಕು ಮುನ್ನಡೆಯುತ್ತಾ ಒಳಕ್ಕೆ ಬಂದು ಗಾಢ ನಿದ್ರೆಯಲ್ಲಿ ಮಂಚದ ಮೇಲೆ ಮಲಗಿದ್ದ ಭೀಮನನ್ನು ಕಂಡಳು.

ಅರ್ಥ:
ಅರಿ: ತಿಳಿ; ಸೂವಾರ: ಅಡುಗೆಯವ, ಬಾಣಸಿಗ; ವಿದ್ಯೆ: ಜ್ಞಾನ; ಭಾಪು: ಭಲೇ; ವಿಧಿ: ನಿಯಮ; ಮುನಿ:ಕೋಪ; ಅಂಗದಲಿ: ರೀತಿಯಲಿ; ನಾರಿ: ಹೆಣ್ಣು; ನಸು: ಕೊಂಚ, ಸ್ವಲ್ಪ; ನಗು: ಸಂತಸ; ಹೊಕ್ಕು: ಸೇರು; ಬಕಾರಿ: ಬಕನೆಂಬ ರಾಕ್ಷಸನ ವೈರಿ (ಭೀಮ); ಮಂಚ: ಪಲ್ಲಂಗ; ನಿದ್ರೆ: ಶಯನ; ಭಾರ: ಗಾಢ; ವಿಹ್ವಲ: ಹತಾಶ; ಕರಣ:ಕಿವಿ, ಮನಸ್ಸು; ಹೊದ್ದು: ಹೊಂದು, ಸೇರು, ತಬ್ಬಿಕೋ; ದುಗುಡ:ದುಃಖ;

ಪದವಿಂಗಡಣೆ:
ಆರಲ್+ಅರಿದನೊ+ ಭೀಮ +ನೀ +ಸೂ
ವಾರ +ವಿದ್ಯೆಯ +ಭಾಪು +ವಿಧಿ +ಮುನಿದ್
ಆರನ್+ಆವಂಗದಲಿ+ ಬರಿಸದು+ ಶಿವಶಿವಾಯೆನುತ
ನಾರಿ+ ನಸು +ನಗುತ್+ಒಳಗೆ+ ಹೊಕ್ಕು +ಬ
ಕಾರಿ +ಮಂಚದಲ್+ಇರಲು+ ನಿದ್ರಾ
ಭಾರ +ವಿಹ್ವಲ +ಕರಣನನು+ ಹೊದ್ದಿದಳು+ ದುಗುಡದಲಿ

ಅಚ್ಚರಿ:
(೧) ಭೀಮ, ಬಕಾರಿ – ಸಮನಾರ್ಥ ಪದ

ಪದ್ಯ ೧೮: ದ್ರೌಪದಿಯೇಕೆ ಗೋಳಿಟ್ಟಳು?

ಶಿವಶಿವಾ ಪಾಪಿಗಳು ಪತಿಯಾ
ದವರ ತಾಗಲಿ ಸುಯ್ಲಕಟ ನಾ
ಲುವರ ನಡುವಣ ಹಾವು ಸಾಯದು ನಿರಪರಾಧಿಯನು
ಅವಗಡಿಸಿದನು ಖಳನು ಧರ್ಮದ
ವಿವರ ಸುದ್ದಿಯನಾಡದೀ ಜನ
ನಿವಹ ಘೋರಾರಣ್ಯವಾಯ್ತೆಂದೊರಲಿದಳು ತರಳೆ (ವಿರಾಟ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಿವ ಶಿವಾ ನಾನು ಬಿಟ್ಟ ನಿಟ್ಟುಸಿರು ಪಾಪಿಗಳಾದ ನನ್ನ ಪತಿಗಳಿಗೆ ಮುಟ್ಟಲಿ, ನಾಲ್ಕು ಜನ ನಡುವಿನ ಹಾವು ಸಾಯುವುದಿಲ್ಲ, ನಿರಪರಾಧಿಯಾದ ನನ್ನನ್ನು ಈ ದುಷ್ಟನು ಬದಿದನು. ಅದನ್ನು ತಡೆಯುವ ಒಂದೂ ಮಾತಾಡದ ಈ ಜನರ ಗುಂಪಿನ ತಾಣ ಭಯಂಕರವಾದ ಕಾಡು, ಧರ್ಮವನ್ನರಿಯದ ಜಂಗುಳಿಯಿದು ಎಂದು ದ್ರೌಪದಿಯು ಗೋಳಿಟ್ಟಳು.

ಅರ್ಥ:
ಪಾಪಿ: ದುಷ್ಟ; ಪತಿ: ಗಂಡ; ತಾಗು: ಮುಟ್ಟು; ಸುಯ್ಲು: ನಿಟ್ಟುಸಿರು; ಅಕಟ: ಅಯ್ಯೋ; ಹಾವು: ಉರಗ; ಸಾವು: ಮರಣ; ನಿರಪರಾಧಿ: ಅಪರಾಧ ಮಾಡದಿರುವ; ಅವಗಡ: ಅಸಡ್ಡೆ; ಖಳ: ದುಷ್ಟ; ಧರ್ಮ: ಧಾರಣೆ ಮಾಡಿದುದು; ವಿವರ: ವಿಚಾರ; ಸುದ್ದಿ: ವಾರ್ತೆ, ಸಮಾಆರ; ನಿವಹ: ಗುಂಪು; ಘೋರ: ಉಗ್ರ, ಭಯಂಕರ; ಅರಣ್ಯ: ಕಾಡು; ಒರಳು: ಗೋಳಿಡು; ತರಳೆ: ಹೆಣ್ಣು;

ಪದವಿಂಗಡಣೆ:
ಶಿವಶಿವಾ +ಪಾಪಿಗಳು +ಪತಿಯಾ
ದವರ +ತಾಗಲಿ +ಸುಯ್ಲ್+ಅಕಟ+ ನಾ
ಲುವರ +ನಡುವಣ+ ಹಾವು +ಸಾಯದು +ನಿರಪರಾಧಿಯನು
ಅವಗಡಿಸಿದನು +ಖಳನು +ಧರ್ಮದ
ವಿವರ+ ಸುದ್ದಿಯನ್+ಆಡದ್+ಈ+ ಜನ
ನಿವಹ+ ಘೋರ+ಅರಣ್ಯವಾಯ್ತೆಂದ್+ಒರಲಿದಳು+ ತರಳೆ

ಅಚ್ಚರಿ:
(೧) ವಿಚಾರವನ್ನು ಹೇಳುವ ಪರಿ – ನಾಲುವರ ನಡುವಣ ಹಾವು ಸಾಯದು

ಪದ್ಯ ೫: ಸೈರಂಧ್ರಿಯು ಯಾರನ್ನು ನೆನೆವುತ್ತಾ ಚಲಿಸಿದಳು?

ದೇವಿ ನೇಮಿಸಲರಿಯೆನೆಂದೊಡಿ
ದಾವ ಧರ್ಮವು ಶಿವ ಶಿವೀ ಹದ
ಸಾವನವರಿಗೆ ತಹುದು ಬದ್ಧವಿಘಾತಿಯಿದು ಬಲುಹು
ಸೇವೆಯಿದಕೇ ಕಷ್ಟವೆಂಬುದು
ಕೋವಿದರ ಮತ ಶಿವಶಿವಾ ರಾ
ಜೀವಲೋಚನ ಕೃಷ್ಣ ಬಲ್ಲೆಯೆನುತ್ತ ಗಮಿಸಿದಳು (ವಿರಾಟ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ದೇವಿ ನಿಮ್ಮ ಆಜ್ಞೆಯನ್ನು ನಡೆಸಲಾರೆ ಎಂದು ಹೇಳಿದರೂ ಬಲವಂತವನ್ನು ಮಾಡುವುದು ಯಾವ ಧರ್ಮ? ನೀವು ಮಾಡಿದ ಆಜ್ಞೆಯಂತೆ ನಡೆಯುವುದು ನಿಮ್ಮ ತಮ್ಮನಿಗೆ ಸಾವನ್ನು ತರುತ್ತದೆ, ಈ ಬಲವಂತದ ಪೆಟ್ಟು ಬಲುದೊಡ್ಡದು, ಆದುದರಿಂದಲೇ ತಿಳಿದವರು ಹೇಳುತ್ತಾರೆ, ಸೇವೆಯು ಬಹುಕಷ್ಟಕರವೆಂದು, ಶಿವ ಶಿವಾ ಕೃಷ್ಣ ಇದರ ಪರಿಣಾಮವನ್ನು ನೀನೇ ಬಲ್ಲೆ ಎಂದು ಹೇಳುತ್ತಾ ಸೈರಂಧ್ರಿಯು ಕೀಚಕನ ಮನೆಯ ಕಡೆಗೆ ನಡೆದಳು.

ಅರ್ಥ:
ನೇಮಿಸು: ಅಪ್ಪಣೆ ಮಾಡು, ಗೊತ್ತು ಮಾಡು; ಅರಿ: ತಿಳಿ; ಧರ್ಮ: ಧಾರಣೆ ಮಾಡಿದುದು; ಹದ: ಸ್ಥಿತಿ; ಸಾವು: ಮರಣ; ತಹುದು: ತರುವುದು; ಬದ್ಧ: ಕಟ್ಟಿದ, ಬಿಗಿದ; ವಿಘಾತ: ನಾಶ, ಧ್ವಂಸ; ಬಲುಹು: ಬಲ, ಶಕ್ತಿ; ಸೇವೆ: ಊಳಿಗ; ಕಷ್ಟ: ತೊಂದರೆ; ಕೋವಿದ: ಪಂಡಿತ; ಮತ: ಅಭಿಪ್ರಾಯ; ರಾಜೀವಲೋಚನ: ಕಮಲದಂತ ಕಣ್ಣುಳ್ಳವ (ಕೃಷ್ಣ); ಬಲ್ಲೆ: ತಿಳಿದಿರುವೆ; ಗಮಿಸು: ತೆರಳು;

ಪದವಿಂಗಡಣೆ:
ದೇವಿ +ನೇಮಿಸಲ್+ಅರಿಯೆನ್+ಎಂದೊಡ್
ಇದಾವ +ಧರ್ಮವು +ಶಿವ +ಶಿವ್+ಈ+ ಹದ
ಸಾವನ್+ಅವರಿಗೆ+ ತಹುದು+ ಬದ್ಧ+ವಿಘಾತಿಯಿದು +ಬಲುಹು
ಸೇವೆಯಿದಕೇ+ ಕಷ್ಟವೆಂಬುದು
ಕೋವಿದರ+ ಮತ +ಶಿವಶಿವಾ+ ರಾ
ಜೀವಲೋಚನ +ಕೃಷ್ಣ +ಬಲ್ಲೆ+ಎನುತ್ತ +ಗಮಿಸಿದಳು

ಅಚ್ಚರಿ:
(೧) ಪಂಡಿತರ ಮಾತು – ಸೇವೆಯಿದಕೇ ಕಷ್ಟವೆಂಬುದು ಕೋವಿದರ ಮತ