ಪದ್ಯ ೧೦: ಕೃಷ್ಣನಿಗೆ ಭಕ್ತರಲ್ಲಿರುವ ಅಭಿಮಾನ ಎಂತಹುದು?

ಇರಿಸನಿಲ್ಲಿ ಮುರಾರಿ ಕೌಂತೇ
ಯರನಿದೊಂದು ನಿಧಾನ ಮೇಣಿ
ಲ್ಲಿರಿಸಿದಡೆ ಕೊಲಲೀಯನಡ್ಡೈಸುವನು ಚಕ್ರದಲಿ
ಇರುಳು ಹಗಲಡವಿಯಲಿ ಮನೆಯಲಿ
ಶರಧಿಯಲಿ ಪರ್ವತದಲಗ್ನಿಯ
ಲಿರಲಿ ತನ್ನವರಲ್ಲಿ ಹರಿಗವಧಾನ ಬಲುಹೆಂದ (ಗದಾ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಪಾಂಡವರನ್ನು ಪಾಳೆಯದಲ್ಲಿರಲು ಬಿಡುವುದಿಲ್ಲ ಎನ್ನುವುದು ಒಂದು ವಾದವಾದರೆ, ಒಂದು ಪಕ್ಷ ಅವರನ್ನು ಇಲ್ಲಿಯೇ ಇರಲು ಬಿಟ್ಟಿದ್ದರೆ ತನ್ನ ಚಕ್ರವನ್ನು ಅಡ್ಡಹಿಡಿದು ಅವರು ಸಾಯುವುದನ್ನು ತಪ್ಪಿಸುತ್ತಾನೆ. ಹಗಲಾಗಲಿ, ರಾತ್ರಿಯಾಗಲಿ, ಮನೆ, ಕಾಡು, ಬೆಟ್ಟ, ಸಮುದ್ರ, ಅಗ್ನಿ, ಪಾಂಡವರು ಎಲ್ಲೇ ಇದ್ದರೂ ಅವರನ್ನು ರಕ್ಷಿಸುತ್ತಾನೆ. ತನ್ನ ಭಕ್ತರಲ್ಲಿ ಶ್ರೀಕೃಷ್ಣನಿಗೆ ಅಷ್ಟು ಅಭಿಮಾನ.

ಅರ್ಥ:
ಇರಿಸು: ಇರಲು ಬಿಡು; ಮುರಾರಿ: ಕೃಷ್ಣ; ಕೌಂತೇಯರು: ಪಾಂಡವರು; ನಿಧಾನ: ತಡೆ, ಆತುರವಿಲ್ಲದೆ; ಮೇಣ್: ಅಥವ; ಕೊಲು: ಸಾಯಿಸು; ಅಡ್ಡೈಸು: ಅಡ್ಡಪಡಿಸು; ಚಕ್ರ: ಸುದರ್ಶನ ಚಕ್ರ; ಇರುಳು: ರಾತ್ರಿ; ಹಗಲು: ಬೆಳಗ್ಗೆ; ಅಡವಿ: ಕಾಡು; ಮನೆ: ಆಲಯ; ಶರಧಿ: ಸಮುದ್ರ; ಪರ್ವತ: ಬೆಟ್ಟ; ಅಗ್ನಿ: ಬೆಂಕಿ; ಅವಧಾನ: ಎಚ್ಚರಿಕೆ ಹೇಳುವುದು, ಸ್ತುತಿಮಾಡು; ಬಲುಹು: ಶಕ್ತಿ, ದೃಢತೆ;

ಪದವಿಂಗಡಣೆ:
ಇರಿಸನ್+ಇಲ್ಲಿ +ಮುರಾರಿ +ಕೌಂತೇ
ಯರನ್+ಇದೊಂದು +ನಿಧಾನ +ಮೇಣ್+
ಇಲ್ಲಿರಿಸಿದಡೆ +ಕೊಲಲೀಯನ್+ಅಡ್ಡೈಸುವನು +ಚಕ್ರದಲಿ
ಇರುಳು +ಹಗಲ್+ಅಡವಿಯಲಿ +ಮನೆಯಲಿ
ಶರಧಿಯಲಿ +ಪರ್ವತದಲ್+ಅಗ್ನಿಯಲ್
ಇರಲಿ +ತನ್ನವರಲ್ಲಿ+ ಹರಿಗ್+ಅವಧಾನ +ಬಲುಹೆಂದ

ಅಚ್ಚರಿ:
(೧) ಕೃಷ್ಣನ ಶಕ್ತಿ – ತನ್ನವರಲ್ಲಿ ಹರಿಗವಧಾನ ಬಲುಹೆಂದ

ಪದ್ಯ ೩೨: ಕೌರವನು ಧರ್ಮಜನನ್ನು ಹೇಗೆ ನಿಂದಿಸಿದನು?

ಹಾನಿಯೆಮಗಾಯ್ತೆಂದು ಕಡುಸು
ಮ್ಮಾನವುಕ್ಕಿತೆ ನಿಮಿಷದಲಿ ದು
ಮ್ಮಾನ ಶರಧಿಯೊಳದ್ದುವೆನು ತಿದ್ದುವೆನು ನಿನ್ನವರ
ಈ ನಗೆಯನೀ ಬಗೆಯನೀ ವಿಜ
ಯಾನುರಾಗವ ನಿಲಿಸುವೆನು ಯಮ
ಸೂನು ಸೈರಿಸೆನುತ್ತ ಜರೆದನು ವಾಮಹಸ್ತದಲಿ (ಗದಾ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕೌರವನು ಎಡಗೈ ನೀಡಿ, ನನಗೆ ಪೆಟ್ಟು ಬಿದ್ದಿತೆಂದು ನಿಮಗೆ ಸಂತೋಷವುಕ್ಕಿತೇ? ಇನ್ನೊಂದು ನಿಮಿಷದಲ್ಲಿ ನಿಮ್ಮನ್ನು ದುಃಖದ ಕಡಲಿನಲ್ಲಿ ಅದ್ದುತ್ತೇನೆ. ಈ ನಗು, ಈ ಹುಮ್ಮಸ್ಸು, ಜಯದ ಸಂತೋಷಗಳನ್ನು ನಿಲ್ಲಿಸುತ್ತೇನೆ ಎಂದು ಧರ್ಮಜನನ್ನು ಜರೆದನು.

ಅರ್ಥ:
ಹಾನಿ: ಹಾಳು; ಕಡು: ಬಹಳ; ಸುಮ್ಮಾನ:ಸಂತೋಷ, ಹಿಗ್ಗು; ನಿಮಿಷ: ಕ್ಷಣ; ದುಮ್ಮಾನ: ದುಃಖ; ಶರಧಿ: ಸಾಗರ; ಅದ್ದು: ಮುಳುಗಿಸು; ತಿದ್ದು: ಸರಿಪಡಿಸು; ನಗೆ: ಹರ್ಷ; ಬಗೆ: ರೀತಿ; ವಿಜಯ: ಗೆಲುವು; ಅನುರಾಗ: ಪ್ರೀತಿ; ನಿಲಿಸು: ತಡೆ; ಸೂನು: ಮಗ; ಸೈರಿಸು: ತಾಳು; ಜರೆ: ಬಯ್ಯು, ನಿಂದಿಸು; ವಾಮ: ಎಡಭಾಗ; ಹಸ್ತ: ಕೈ;

ಪದವಿಂಗಡಣೆ:
ಹಾನಿ+ಎಮಗಾಯ್ತೆಂದು +ಕಡು+ಸು
ಮ್ಮಾನವುಕ್ಕಿತೆ+ ನಿಮಿಷದಲಿ+ ದು
ಮ್ಮಾನ+ ಶರಧಿಯೊಳ್+ಅದ್ದುವೆನು +ತಿದ್ದುವೆನು +ನಿನ್ನವರ
ಈ +ನಗೆಯನೀ +ಬಗೆಯನೀ +ವಿಜಯ
ಅನುರಾಗವ +ನಿಲಿಸುವೆನು +ಯಮ
ಸೂನು +ಸೈರಿಸೆನುತ್ತ+ ಜರೆದನು +ವಾಮ+ಹಸ್ತದಲಿ

ಅಚ್ಚರಿ:
(೧) ಸುಮ್ಮಾನ, ದುಮ್ಮಾನ – ವಿರುದ್ಧ ಪದಗಳು
(೨) ದುಃಖವನ್ನು ಓಡಿಸುವೆ ಎಂದು ಹೇಳುವ ಪರಿ – ನಿಮಿಷದಲಿ ದುಮ್ಮಾನ ಶರಧಿಯೊಳದ್ದುವೆನು

ಪದ್ಯ ೧೫: ಪಾರ್ಥನು ವೀರರಿಗೆ ಏನು ಹೇಳಿದನು?

ಉಕ್ಕಿ ಶೋಕದ ಕಡಲು ಪಾರ್ಥನ
ಮುಕ್ಕುಳಿಸಿತಾ ಶೋಕಶರಧಿಯ
ಹೊಕ್ಕು ಬೆಳೆದುದು ಕೋಪಶಿಖಿವಡಬಾಗ್ನಿಯಂದದಲಿ
ಮಕ್ಕಳೊಳು ನೋಡಿದನು ಕಂದನ
ನಿಕ್ಕಿದಿರಲಾ ಲೇಸು ಮಾಡಿದಿ
ರೆಕ್ಕತುಳದಾಳುಗಳೆನುತ ಭೂಪತಿಗೆ ಪೊಡವಂಟ (ದ್ರೋಣ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶೋಕದ ಕಡಲು ಉಕ್ಕಿ ಪಾರ್ಥನನ್ನು ಉಗುಳಿತು. ಆ ಶೋಕ ಸಮುದ್ರವನ್ನು ಕೋಪವು ವಡಬಾಗ್ನಿಯಂತೆ ಹೊಕ್ಕು ಹೆಚ್ಚಿತು. ರಾಜಕುಮಾರರಿರುವ ಕಡೆಗೆ ನೋಡಿ, ಅಲ್ಲಿ ಅಭಿಮನ್ಯುವನ್ನು ಕಾಣದೆ, ಮಗನನ್ನ್ ಕೊಂದು ಮಹಾವೀರರಾದ ನೀವು ಒಳಿತನ್ನೇ ಮಾಡಿದಿರಿ ಎಂದು ಹೇಳುತ್ತಾ ಧರ್ಮಜನಿಗೆ ನಮಸ್ಕರಿಸಿದನು.

ಅರ್ಥ:
ಉಕ್ಕು: ಹೊಮ್ಮಿ ಬರು; ಶೋಕ: ದುಃಖ; ಕಡಲು: ಸಾಗರ; ಮುಕ್ಕುಳಿಸು: ಹೊರಹಾಕು; ಶರಧಿ: ಸಾಗರ; ಹೊಕ್ಕು: ಸೇರು; ಬೆಳೆ: ಎತ್ತರವಾಗು; ಕೋಪ: ಸಿಟ್ಟು; ಶಿಖಿ: ಬೆಂಕಿ; ವಡಬಾಗ್ನಿ: ಸಮುದ್ರದೊಳಗಿನ ಬೆಂಕಿ; ಮಕ್ಕಳು: ಸುತರು; ನೋಡು: ವೀಕ್ಷಿಸು; ಕಂದ: ಮಗ; ಇಕ್ಕು: ಬಿಟ್ಟು ಹೋಗು; ಲೇಸು: ಒಳಿತು; ಎಕ್ಕತುಳ: ಮಹಾವೀರ; ಭೂಪತಿ: ರಾಜ; ಪೊಡವಡು: ನಮಸ್ಕರಿಸು;

ಪದವಿಂಗಡಣೆ:
ಉಕ್ಕಿ+ ಶೋಕದ +ಕಡಲು +ಪಾರ್ಥನ
ಮುಕ್ಕುಳಿಸಿತ್+ಆ+ ಶೋಕ+ಶರಧಿಯ
ಹೊಕ್ಕು +ಬೆಳೆದುದು +ಕೋಪ+ಶಿಖಿ+ವಡಬಾಗ್ನಿಯಂದದಲಿ
ಮಕ್ಕಳೊಳು +ನೋಡಿದನು+ ಕಂದನನ್
ಇಕ್ಕಿದಿರಲಾ +ಲೇಸು +ಮಾಡಿದಿರ್
ಎಕ್ಕತುಳದಾಳುಗಳ್+ಎನುತ +ಭೂಪತಿಗೆ+ ಪೊಡವಂಟ

ಅಚ್ಚರಿ:
(೧) ಶೋಕದ ತೀವ್ರತೆಯನ್ನು ವಿವರಿಸುವ ಪರಿ – ಉಕ್ಕಿ ಶೋಕದ ಕಡಲು ಪಾರ್ಥನ ಮುಕ್ಕುಳಿಸಿತಾ; ಶೋಕಶರಧಿಯ ಹೊಕ್ಕು ಬೆಳೆದುದು ಕೋಪಶಿಖಿವಡಬಾಗ್ನಿಯಂದದಲಿ
(೨) ಕಡಲು, ಶರಧಿ – ಸಮಾನಾರ್ಥಕ ಪದ

ಪದ್ಯ ೧೧: ದ್ರೋಣನು ಏನೆಂದು ಪ್ರತಿಜ್ಞೆ ಮಾಡಿದನು?

ಸಭೆ ಬೆದರೆ ಕಲ್ಪಾಂತ ಶರಧಿಯ
ರಭಸವಲ್ಲಿಯೆ ಕೇಳಲಾದುದು
ಸುಭಟರಹುದೋ ಜಾಗು ಜಾಗೆನುತೊಲೆದನಾ ದ್ರೋಣ
ಅಭವನಡಹಾಯ್ದಿರಲಿ ಪಾಂಡವ
ವಿಭುವ ಹಿಡಿವೆನು ಪಾರ್ಥನೊಬ್ಬನ
ಪ್ರಭೆಗೆ ಹೆದರುವೆನುಳಿದ ವೀರರ ಬಗೆವನಲ್ಲೆಂದ (ದ್ರೋಣ ಪರ್ವ, ೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕಲ್ಪಾಂತ ಸಾಗರದ ಕೂಗು ಸಭೆಯಲ್ಲಿ ಕೇಳಿ ಬಂತು. ದ್ರೋಣನು ನೀವು ಮಹಾವೀರರೇ ಇರಬಹುದು, ಭಲೇ, ಎನ್ನುತ್ತಾ ತಲೆದೂಗಿ, ಶಿವನೇ ಅಡ್ಡಬಮ್ದರೂ ಯುಧಿಷ್ಥಿರನನ್ನು ಹಿಡಿಯುತ್ತೇನೆ, ಅರ್ಜುನನೊಬ್ಬನ ಪರಾಕ್ರಮಕ್ಕೆ ಹೆದರುತ್ತೇನೆ ಉಳಿದವರು ಲೆಕ್ಕಕಿಲ್ಲ ಎಂದು ಪ್ರತಿಜ್ಞೆ ಮಾಡಿದನು.

ಅರ್ಥ:
ಸಭೆ: ದರ್ಬಾರು, ಓಲಗ; ಬೆದರು: ಹೆದರು; ಕಲ್ಪಾಂತ: ಯುಗದ ಅಂತ್ಯ; ಶರಧಿ: ಸಾಗರ; ರಭಸ: ವೇಗ; ಕೇಳು: ಆಲಿಸು; ಸುಭಟ: ಪರಾಕ್ರಮಿ; ಜಾಗು: ಎಚ್ಚರ; ತಡಮಾಡು, ಹೊಗಳಿಕೆಯ ಮಾತು; ಅಭವ: ಶಿವ; ಅಡಹಾಯ್ದು: ಅಡ್ದಬಾ; ವಿಭು: ಸರ್ವವ್ಯಾಪಿಯಾದುದು, ಒಡೆಯ; ಹಿಡಿ: ಗ್ರಹಿಸು; ಪ್ರಭೆ: ಪ್ರಕಾಶ; ಹೆದರು: ಭಯ; ಉಳಿದ: ಮಿಕ್ಕ; ವೀರ: ಶೂರ; ಬಗೆ: ಎಣಿಸು;

ಪದವಿಂಗಡಣೆ:
ಸಭೆ +ಬೆದರೆ +ಕಲ್ಪಾಂತ +ಶರಧಿಯ
ರಭಸವ್+ಅಲ್ಲಿಯೆ +ಕೇಳಲಾದುದು
ಸುಭಟರಹುದೋ +ಜಾಗು +ಜಾಗೆನುತೊಲೆದನಾ +ದ್ರೋಣ
ಅಭವನ್+ಅಡಹಾಯ್ದಿರಲಿ +ಪಾಂಡವ
ವಿಭುವ +ಹಿಡಿವೆನು +ಪಾರ್ಥನೊಬ್ಬನ
ಪ್ರಭೆಗೆ +ಹೆದರುವೆನ್+ಉಳಿದ +ವೀರರ +ಬಗೆವನಲ್ಲೆಂದ

ಅಚ್ಚರಿ:
(೧) ದ್ರೋಣನ ಪ್ರತಿಜ್ಞೆ – ಅಭವನಡಹಾಯ್ದಿರಲಿ ಪಾಂಡವ ವಿಭುವ ಹಿಡಿವೆನು

ಪದ್ಯ ೪೯: ಹೊಸ ಜಗತ್ತು ಏಕೆ ಹುಟ್ಟಿತೆಂದೆನಿಸಿತು?

ಸುರಿವ ಗಜಮದಧಾರೆಯಲಿ ಹೊಸ
ಶರಧಿಗಳು ಸಂಭವಿಸಿದವು ನೃಪ
ವರರ ಮಕುಟದ ಮಣಿಯೊಳಾದರು ಚಂದ್ರಸೂರಿಯರು
ಗಿರಿಗಳಾದುವು ದಂತಿಯಲಿ ಪಡಿ
ಧರಣಿಯಾದವು ಛತ್ರಚಮರದ
ಲರರೆ ನೂತನ ಸೃಷ್ಟಿಯಾಯ್ತು ವಿರಿಂಚಸೃಷ್ಟಿಯಲಿ (ಭೀಷ್ಮ ಪರ್ವ, ೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ಸೈನ್ಯದ ಆನೆಗಳ ಮದಧಾರೆಯಿಂದ ಹೊಸ ಸಮುದ್ರಗಳಾದವು. ರಾಜರ ಕಿರೀಟಗಳ ಕಾಂತಿಯಿಂದ ಸೂರ್ಯ ಚಂದ್ರರು ಸಂಭವಿಸಿದರು. ಆನೆಗಳಿಂದ ಪರ್ವತ ಶ್ರೇಣಿಗಳಾದವು. ಛತ್ರ ಚಾಮರಗಳಿಂದ ಭೂಮಿಗೆ ಪ್ರತಿಯಾದ ಇನ್ನೊಂದು ಭೂಮಿಯೇ ನಿರ್ಮಾಣವಾಯಿತು, ಬ್ರಹ್ಮನ ಸೃಷ್ಟಿಯಲ್ಲಿ ಸೈನ್ಯದಿಂದ ಹೊಸ ಸೃಷ್ಟಿಯೊಂದ ಉಂಟಾಯಿತು.

ಅರ್ಥ:
ಸುರಿ: ಹರಿ; ಗಜ: ಆನೆ; ಮದ: ಮತ್ತು, ಅಮಲು; ಧಾರೆ: ವರ್ಷ; ಹೊಸ: ನವ; ಶರಧಿ: ಸಾಗರ; ಸಂಭವಿಸು: ಹುಟ್ಟು; ನೃಪ: ರಾಜ; ವರ: ಶ್ರೇಷ್ಠ; ಮಕುಟ: ಕಿರೀಟ; ಮಣಿ: ಬೆಲೆಬಾಳುವ ಮಣಿ; ಸೂರಿಯ: ಸೂರ್ಯ; ಗಿರಿ: ಬೆಟ್ಟ; ದಂತಿ: ಹಲ್ಲು; ಪಡಿ: ಪ್ರತಿಯಾದುದು; ಧರಣಿ: ಭೂಮಿ; ಛತ್ರ: ಕೊಡೆ; ಚಮರ: ಚಾಮರ; ಅರರೆ: ಆಶ್ಚರ್ಯದ ಸಂಕೇತ; ನೂತನ: ಹೊಸ; ಸೃಷ್ಟಿ: ಹುಟ್ಟು; ವಿರಿಂಚ: ಬ್ರಹ್ಮ; ಸೃಷ್ಟಿ: ಉತ್ಪತ್ತಿ, ಹುಟ್ಟು;

ಪದವಿಂಗಡಣೆ:
ಸುರಿವ +ಗಜ+ಮದಧಾರೆಯಲಿ +ಹೊಸ
ಶರಧಿಗಳು+ ಸಂಭವಿಸಿದವು+ ನೃಪ
ವರರ +ಮಕುಟದ +ಮಣಿಯೊಳ್+ಆದರು +ಚಂದ್ರ+ಸೂರಿಯರು
ಗಿರಿಗಳ್+ಆದುವು +ದಂತಿಯಲಿ +ಪಡಿ
ಧರಣಿಯಾದವು +ಛತ್ರ+ಚಮರದಲ್
ಅರರೆ +ನೂತನ +ಸೃಷ್ಟಿಯಾಯ್ತು +ವಿರಿಂಚ+ಸೃಷ್ಟಿಯಲಿ

ಅಚ್ಚರಿ:
(೧) ಹೊಸ, ನೂತನ – ಸಮನಾರ್ಥಕ ಪದ
(೨) ಉಪಮಾನಗಳ ಬಳಕೆ – ಸುರಿವ ಗಜಮದಧಾರೆಯಲಿ ಹೊಸಶರಧಿಗಳು ಸಂಭವಿಸಿದವು; ನೃಪ ವರರ ಮಕುಟದ ಮಣಿಯೊಳಾದರು ಚಂದ್ರಸೂರಿಯರು; ಗಿರಿಗಳಾದುವು ದಂತಿಯಲಿ;

ಪದ್ಯ ೪೨: ಅರ್ಜುನನು ಯಾರ ಬಾಣಗಳನ್ನು ಕಡಿದನು?

ಗುರುತನೂಜನಲಾ ವಿಭಾಡಿಸಿ
ಹುರುಳುಗೆಡಿಸಲು ಬಹುದೆ ನೋಡು
ತ್ತರ ಸುಯೋಧನ ಸೈನ್ಯ ಶರಧಿಯ ಗುಂಪಿನತಿಬಲರ
ಹರನ ಸರಿದೊರೆಯಸ್ತ್ರ ವಿದ್ಯಾ
ಧರರು ಮರ್ತ್ಯರೊಳಾರು ಲೇಸೆಂ
ದುರುಳೆಗಡಿದನು ಪಾರ್ಥನಶ್ವತ್ಥಾಮನಂಬುಗಳ (ವಿರಾಟ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಎಲೈ ಉತ್ತರ ಕುಮಾರ, ಕೌರವನ ಸೈನ್ಯ ಸಮುದ್ರದ ಅತಿ ಬಲರನ್ನು ನೋಡು, ಇವನು ದ್ರೋಣನಪುತ್ರನಾದ ಅಶ್ವತ್ಥಾಮ, ಇವನನ್ನು ಹೊಡೆದು ಹುರುಳುಗೆಡಿಸಲು ಸಾಧ್ಯವೇ? ಇವರೆಲ್ಲರೂ ಶಿವನ ಸರಿಸಮಾನರಾದ ಅಸ್ತ್ರವಿದ್ಯಾ ನಿಪುಣರು. ಇವರಿಗೆ ಸರಿಸಮಾನರಾದವರು ಮನುಷ್ಯ ಲೋಕದಲ್ಲಿ ಯಾರಿದ್ದಾರೆ? ಎನ್ನುತ್ತಾ ಅರ್ಜುನನು ಅಶ್ವತ್ಥಾಮನ ಬಾಣಗಳನ್ನು ಕಡಿದು ಹಾಕಿದನು.

ಅರ್ಥ:
ಗುರು: ಆಚಾರ್ಯ; ತನೂಜ: ಮಗ; ವಿಭಾಡ: ನಾಶಮಾಡುವವನು; ಹುರುಳು: ಸತ್ತ್ವ, ಸಾರ, ಶಕ್ತಿ; ಕೆಡಿಸು: ನಾಶಮಾದು; ಬಹುದೆ: ಆಗುವುದೆ ನೋಡು: ವೀಕ್ಷಿಸು; ಸೈನ್ಯ: ದಳ; ಶರಧಿ: ಸಾಗರ; ಗುಂಪು: ಸಮೂಹ; ಬಲ: ಶಕ್ತಿ; ಹರ: ಶಿವ; ಅಸ್ತ್ರ: ಶಸ್ತ್ರ; ಲೇಸು: ಒಳಿತು; ಉರುಳು: ಉರುಳುವಿಕೆ, ನಾಶವಾಗು; ಕಡಿ: ನಾಶಮಾಡು; ಅಂಬು: ಬಾಣ;

ಪದವಿಂಗಡಣೆ:
ಗುರುತನೂಜನಲಾ+ ವಿಭಾಡಿಸಿ
ಹುರುಳು+ಕೆಡಿಸಲು +ಬಹುದೆ +ನೋಡ್
ಉತ್ತರ +ಸುಯೋಧನ+ ಸೈನ್ಯ +ಶರಧಿಯ +ಗುಂಪಿನ್+ಅತಿಬಲರ
ಹರನ +ಸರಿದೊರೆ+ಅಸ್ತ್ರ +ವಿದ್ಯಾ
ಧರರು +ಮರ್ತ್ಯರೊಳ್+ಆರು+ ಲೇಸೆಂದ್
ಉರುಳೆ+ಕಡಿದನು +ಪಾರ್ಥನ್+ಅಶ್ವತ್ಥಾಮನ್+ಅಂಬುಗಳ

ಅಚ್ಚರಿ:
(೧) ಅಶ್ವತ್ಥಾಮನ ಹಿರಿಮೆ – ಹರನ ಸರಿದೊರೆಯಸ್ತ್ರ ವಿದ್ಯಾಧರರು

ಪದ್ಯ ೧೭: ಧರ್ಮಜನು ಯಾವುದಕ್ಕೆ ಅಂಜಿದನು?

ತುಡುಕಿ ಸುರಪನ ಸಿರಿಯ ಶರಧಿಯ
ಮಡುವಿನಲಿ ಹಾಯ್ಕಿದನು ರೋಷವ
ಹಿಡಿದೊಡೀಗಲೆ ಸುಟ್ಟು ಬೊಟ್ಟಿಡುವನು ಜಗತ್ರಯವ
ಮೃಡಮುನೀಶನು ತನಗೆ ಶಾಪವ
ಕೊಡಲಿ ತಾನದಕಂಜೆ ತನ್ನಯ
ನುಡಿಗನೃತ ಸಂದಪ್ಪವಾದರೆ ಕೆಟ್ಟೆ ತಾನೆಂದ (ಅರಣ್ಯ ಪರ್ವ, ೧೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ದೂರ್ವಾಸ ಮುನಿಗಳು ಹಿಂದೆ ಕೋಪದಿಂದ ದೇವೇಂದ್ರನ ಐಶ್ವರ್ಯವನ್ನು ಸಾಗರದ ಮಡುವಿನಲ್ಲಿ ಮುಳುಗಿಸಿದನು. ಈಗಲೂ ಕೋಪಗೊಂಡರೆ ಮೂರು ಲೋಕಗಳನ್ನು ಸುಟ್ಟು ಭಸ್ಮವನ್ನು ಹಣೆಗೆ ಧಾರಣೆ ಮಾಡಬಲ್ಲ. ಶಿವನ ಅವತಾರವಾದ ಈ ದೂರ್ವಾಸ ಮುನಿಗಳು ನನಗೆ ಶಾಪವನ್ನು ಕೊಟ್ಟರೆ ನನಗೆ ಹೆದರಿಕೆಯಿಲ್ಲ, ಆದರೆ ನನ್ನ ಮಾತು ಸುಳ್ಳಾದರೆ ನಾನು ಕೆಟ್ಟೆ ಎಂದು ಧರ್ಮಜನು ಹೇಳಿದನು.

ಅರ್ಥ:
ತುಡುಕು: ಆತುರದಿಂದ ಹಿಡಿ; ಸುರಪ: ಇಂದ್ರ; ಸಿರಿ: ಐಶ್ವರ್ಯ; ಶರಧಿ: ಸಾಗರ; ಮಡು: ನದಿ, ಹೊಳೆ; ಹಾಯ್ಕು: ಸೇರಿಸಿಕೊಳ್ಳು; ರೋಷ: ಕೋಪ; ಹಿಡಿ: ಗ್ರಹಿಸು; ಸುಟ್ಟು: ದಹಿಸು; ಬೊಟ್ಟಿಡು: ಹಣೆಗೆ ಬಳೆದುಕೋ; ಜಗತ್ರಯ: ಮೂರು ಲೋಕ; ಮೃಡ: ಶಿವ; ಮುನಿ: ಋಷಿ; ಈಶ: ಒಡೆಯ; ಶಾಪ: ಕೆಡುಕಾಗಲೆಂದು ಬಯಸಿ ಹೇಳುವ ಮಾತು; ಕೊಡಲಿ: ಪರಶು;ಅಂಜು: ಹೆದರು; ನುಡಿ: ಮಾತು; ಅನೃತ: ಸುಳ್ಳು; ಸಂದು: ಬಿರುಕು; ಕೆಟ್ಟೆ: ಕೆಡುಕು, ಹಾಳು;

ಪದವಿಂಗಡಣೆ:
ತುಡುಕಿ +ಸುರಪನ+ ಸಿರಿಯ +ಶರಧಿಯ
ಮಡುವಿನಲಿ +ಹಾಯ್ಕಿದನು +ರೋಷವ
ಹಿಡಿದೊಡ್+ಈಗಲೆ +ಸುಟ್ಟು +ಬೊಟ್ಟಿಡುವನು +ಜಗತ್ರಯವ
ಮೃಡ+ಮುನೀಶನು +ತನಗೆ+ ಶಾಪವ
ಕೊಡಲಿ +ತಾನದಕ್+ಅಂಜೆ+ ತನ್ನಯ
ನುಡಿಗ್+ಅನೃತ+ ಸಂದಪ್ಪವಾದರೆ+ ಕೆಟ್ಟೆ +ತಾನೆಂದ

ಅಚ್ಚರಿ:
(೧) ದೂರ್ವಾಸನ ಪ್ರತಾಪ – ತುಡುಕಿ ಸುರಪನ ಸಿರಿಯ ಶರಧಿಯ ಮಡುವಿನಲಿ ಹಾಯ್ಕಿದನು

ಪದ್ಯ ೪೯: ಶಾಲ್ಮಲೀ ಮತ್ತು ಪ್ಲಕ್ಷದ್ವೀಪಗಳು ಎಲ್ಲಿವೆ?

ವರುಷವನು ಗಿರಿಗಳನು ಬಳಸಿಹ
ಪಿರಿಯ ಲವಣ ಸಮುದ್ರ ತದನಂ
ತರದಿ ಪ್ಲಕ್ಷದ್ವೀಪ ಇಕ್ಷ್ ಸಮುದ್ರವಲ್ಲಿಂದ
ಇರಲು ಶಾಲ್ಮಲವದರ ಹೊರಗಣ
ಸುರೆಯ ಶರಧಿಯನೊಂದೊನೊಂದಾ
ವರಸಿ ಪರಿಭಾವಿಸಲು ತದಿವ್ಗುನಂಗಳಾಗಿಹವು (ಅರಣ್ಯ ಪರ್ವ, ೮ ಸಂಧಿ, ೪೯ ಪದ್ಯ)

ತಾತ್ಪರ್ಯ:
ಈ ಮೊದಲು ಹೇಳಿದ ವರ್ಷಗಳನ್ನು ಬೆಟ್ಟಗಳನ್ನು ಲವಣ ಸಮುದ್ರವು ಸುತ್ತುವರೆದಿದೆ. ಅಲ್ಲಿಂದ ಮುಂದೆ ಪ್ಲಕ್ಷದ್ವೀಪ, ಅದನ್ನು ಕಬ್ಬಿನ ಹಾಲಿನ ಸಮುದ್ರವು ಸುತ್ತುವರೆದಿದೆ, ಅಲ್ಲಿಂದ ಮುಂದೆ ಶಾಲ್ಮಲೀ ದ್ವೀಪ ಅದನ್ನು ಸುರೆಯ ಸಮುದ್ರವು ಸುತ್ತುವರೆದಿದೆ, ಇವು ಒಂದಕ್ಕೊಂದು ಎರಡರಷ್ಟಿವೆ.

ಅರ್ಥ:
ವರುಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಗಿರಿ: ಬೆಟ್ಟ; ಬಳಸು: ಆವರಿಸು; ಪಿರಿ: ದೊಡ್ಡ; ಲವಣ: ಉಪ್ಪು; ಸಮುದ್ರ: ಸಾಗರ; ನಂತರ: ಆಮೇಲೆ; ಇಕ್ಷು: ಕಬ್ಬು; ಆವರಿಸು: ಸುತ್ತುವರಿ; ಭಾವಿಸು: ತಿಳಿ; ದ್ವಿಗುಣ: ಎರಡು ಪಟ್ಟು;

ಪದವಿಂಗಡಣೆ:
ವರುಷವನು +ಗಿರಿಗಳನು+ ಬಳಸಿಹ
ಪಿರಿಯ +ಲವಣ +ಸಮುದ್ರ +ತದನಂ
ತರದಿ+ ಪ್ಲಕ್ಷದ್ವೀಪ+ ಇಕ್ಷು+ ಸಮುದ್ರವ್+ಅಲ್ಲಿಂದ
ಇರಲು +ಶಾಲ್ಮಲವ್+ಅದರ +ಹೊರಗಣ
ಸುರೆಯ +ಶರಧಿಯನ್+ಒಂದೊನ್+ಒಂದ್
ಆವರಸಿ+ ಪರಿಭಾವಿಸಲು +ತದ್ವಿಗುಣಂಗಳಾಗಿಹವು

ಅಚ್ಚರಿ:
(೧) ದ್ವೀಪಗಳ ಹೆಸರು – ಪ್ಲಕ್ಷ, ಶಾಲ್ಮಲ
(೨) ಸಮುದ್ರಗಳ ವಿವರ – ಇಕ್ಷುಸಮುದ್ರ, ಸುರೆಯ ಶರಧಿ
(೩) ಸಮುದ್ರ, ಶರಧಿ – ಸಮನಾರ್ಥಕ ಪದ

ಪದ್ಯ ೮೪: ಕೌರವನ ತಂಡದವರ ಮುಖ ಹೇಗಿತ್ತು?

ಪಸರಿಸಿದ ಪರಿವಾರಶರಧಿಯ
ಮಸಕ ಮಸುಳಿತು ತೊಡೆಯಲಡಗೆಡೆ
ದ ಸುಹೃದನನ್ ದರುಶನದೊಳಗೆ ಮಸಗಿದವು ಮುಡುಹುಗಳು
ಶಶಿವದನೆಯುತ್ಸಾಹವತಿ ಢಾ
ಳಿಸಿತು ಭೀಮನಹರುಪಜಲ ನಿಧಿ
ವಿಸಟವರಿದುದು ಕೇಳು ಜನಮೇಜಯ ಮಹೀಪಾಲ (ಕರ್ಣ ಪರ್ವ, ೧೯ ಸಂಧಿ, ೮೪ ಪದ್ಯ)

ತಾತ್ಪರ್ಯ:
ವೈಶಂಪಾಯನರು ತಮ್ಮ ಕಥೆಯನ್ನು ಹೇಳುತ್ತಾ, ಜನಮೇಜಯ ರಾಜ ಕೇಳು, ದುಶ್ಯಾಸನನ ಪರಿವಾರ ಸಮುದ್ರದ ಉತ್ಸಾಹ ಮಂಕಾಯಿತು. ಕೆಳಬಿದ್ದ ರಕ್ಕಸನ ದರ್ಶನದಿಂದ ಅವರ ಮುಖಗಳು ಬಾಡಿಹೋದವು. ದ್ರೌಪದಿಯ ಉತ್ಸಾಹವು ಉಕ್ಕಿತು. ಭೀಮನ ಸಂತೋಷ ಸಮುದ್ರ ಉಕ್ಕಿ ಹರಿಯಿತು.

ಅರ್ಥ:
ಪಸರಿಸು: ವ್ಯಾಪಿಸು, ವಿಸ್ತಾರವಾಗು; ಪರಿವಾರ: ಸುತ್ತಲಿನವರು, ಪರಿಜನ; ಶರಧಿ: ಸಮುದ್ರ; ಮಸಕ:ಆಧಿಕ್ಯ, ಹೆಚ್ಚಳ; ಮಸುಳು: ಕಾಂತಿಹೀನವಾಗು, ಮಂಕಾಗು; ತೊಡೆಯಲು: ತೀಡು, ಸೋಕು; ಅಲಡ: ಅಲ್ಲಾಡು; ಕೆಡು: ಹಾಳಾಗು, ಅಳಿ; ಸುಹೃದ: ಸಹೃದಯ; ದರುಶನ: ದರ್ಶನ, ತೋರು; ಮಸಗು: ಹರಡು; ಕೆರಳು; ತಿಕ್ಕು; ಮುಡುಹು: ಕೊಲ್ಲು, ಸಾಯುವಂತೆ ಮಾಡು; ಶಶಿ: ಚಂದ್ರ; ವದನೆ: ಮುಖ; ಉತ್ಸಾಹ: ಹುರುಪು, ಆಸಕ್ತಿ; ಢಾಳು: ಹೊಳಪು, ಪ್ರಭೆ; ಹರುಷ: ಸಂತಸ; ಜಲನಿಧಿ: ಸಮುದ್ರ; ವಿಸಟ: ಯಥೇಚ್ಛವಾಗಿ, ಮನ ಬಂದಂತೆ; ಕೇಳು: ಆಲಿಸು; ಮಹೀಪಾಲ: ರಾಜ;

ಪದವಿಂಗಡಣೆ:
ಪಸರಿಸಿದ +ಪರಿವಾರ+ಶರಧಿಯ
ಮಸಕ +ಮಸುಳಿತು +ತೊಡೆಯಲ್+ಅಡಗೆಡೆ
ದ +ಸುಹೃದನ+ ದರುಶನದೊಳಗೆ+ ಮಸಗಿದವು+ ಮುಡುಹುಗಳು
ಶಶಿವದನೆ+ಉತ್ಸಾಹವ್+ಅತಿ+ ಢಾ
ಳಿಸಿತು+ ಭೀಮನ+ಹರುಷಜಲನಿಧಿ
ವಿಸಟವ್+ಅರಿದುದು +ಕೇಳು +ಜನಮೇಜಯ+ ಮಹೀಪಾಲ

ಅಚ್ಚರಿ:
(೧) ಜಲನಿಧಿ, ಶರಧಿ – ಸಮನಾರ್ಥಕ ಪದ