ಪದ್ಯ ೧೫: ಭೀಮನು ದ್ರೋಣರಿಗೇಕೆ ದಾರಿ ಬಿಡಿ ಎಂದನು?

ತರಳರರ್ಜುನ ಸಾತ್ಯಕಿಗಳವ
ದಿರಿಗೆ ಪಂಥವದೇಕೆ ನಿಮ್ಮನು
ಗರುಡಿಯಲಿ ವಂದಿಸುವ ವಂದನೆಯುಂಟೆ ಸಮರದಲಿ
ಮರುಳಲಾ ಮರುಮಾತು ಕಡುವೃ
ದ್ಧರಿಗದೇಕೆಂಬಂತೆ ಚಿತ್ತದ
ಹುರುಳ ಬಲ್ಲೆನು ಪಥವ ಬಿಡಿ ಕೆಲಸಾರಿ ಸಾಕೆಂದ (ದ್ರೋಣ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಎಲೈ ದ್ರೋಣನೇ, ಅರ್ಜುನ, ಸಾತ್ಯಕಿಯರು ಇನ್ನೂ ಬಾಲಕರು, ಅವರಿಗೆಂತಹ ಹುರುಡು, ಪಂಥ? ನನ್ನಲ್ಲದು ನಡೆಯದು, ಗರುಡಿಯಲ್ಲಿ ನೀವು ನಮಗೆ ಆಚಾರ್ಯರು ಅಲ್ಲಿ ನಮಸ್ಕರಿಸುತ್ತೇನೆ, ಯುದ್ಧಭೂಮಿಯಲ್ಲಿ ಎಂತಹ ನಮಸ್ಕಾರ? ನೀವು ಬಹಳ ವೃದ್ಧರು, ನಿಮಗೆದುರಾಡಬಾರದು, ನಿಮ್ಮ ಸತ್ವ ನನಗೆ ಗೊತ್ತು, ಸುಮ್ಮನೆ ಪಕ್ಕಕ್ಕೆ ಸರಿಯಿರಿ ಎಂದು ಭೀಮನು ದ್ರೋಣರಿಗೆ ಹೇಳಿದನು.

ಅರ್ಥ:
ತರಳ: ಬಾಲಕ; ಅವದಿರು: ಅಷ್ಟುಜನ; ಪಂಥವ: ಹಟ, ಛಲ, ಸ್ಪರ್ಧೆ; ಗರುಡಿ: ವ್ಯಾಯಾಮ ಶಾಲೆ; ವಂದಿಸು: ನಮಸ್ಕರಿಸು; ವಂದನೆ: ನಮಸ್ಕಾರ; ಸಮರ: ಯುದ್ಧ; ಮರುಳು: ಮೂಢ; ಮರುಮಾತು: ಎದುರುತ್ತರ; ವೃದ್ಧ: ಮುದುಕ; ಚಿತ್ತ: ಮನಸ್ಸು; ಹುರುಳು: ಸತ್ತ್ವ, ಸಾರ; ಬಲ್ಲೆ: ತಿಳಿ; ಪಥ: ದಾರಿ; ಬಿಡು: ತೊರೆ; ಕೆಲಸಾರು: ಪಕ್ಕಕ್ಕೆ ಹೋಗು;

ಪದವಿಂಗಡಣೆ:
ತರಳರ್+ಅರ್ಜುನ +ಸಾತ್ಯಕಿಗಳ್+ಅವ
ದಿರಿಗೆ +ಪಂಥವದೇಕೆ +ನಿಮ್ಮನು
ಗರುಡಿಯಲಿ +ವಂದಿಸುವ +ವಂದನೆ+ಯುಂಟೆ +ಸಮರದಲಿ
ಮರುಳಲಾ+ ಮರುಮಾತು +ಕಡು+ವೃ
ದ್ಧರಿಗ್+ಅದೇಕೆಂಬಂತೆ+ ಚಿತ್ತದ
ಹುರುಳ +ಬಲ್ಲೆನು +ಪಥವ+ ಬಿಡಿ +ಕೆಲಸಾರಿ +ಸಾಕೆಂದ

ಅಚ್ಚರಿ:
(೧) ಭೀಮನ ಬಿರುಸು ನುಡಿ – ವಂದನೆಯುಂಟೆ ಸಮರದಲಿ

ಪದ್ಯ ೩೦: ಭೀಷ್ಮರು ಅರ್ಜುನನಿಗೆ ಏನು ಹೇಳಿದರು?

ನಾವು ವೃದ್ಧರು ಬಿರುದು ಗಿರುದಿನ
ಲಾವಣಿಗೆ ನಮಗೇಕೆ ಹೇಳೈ
ನೀವಲೈ ಜವ್ವನದ ಭಂಟರು ರಣದ ಧುರಭರಕೆ
ನೀವಿರಲು ನಿರ್ನಾಯಕವೆ ಸೇ
ನಾವಳಿ ಮಹಾದೇವ ಮೂದಲೆ
ಗಾವು ಲಕ್ಷ್ಯವೆ ಹೇಳು ಫಲುಗುಣ ಎಂದನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ಮೂದಲಿಸಲು ನಮನ್ನೇಕೆ ಆರಿಸಿದೆ, ನಾವಾದರೋ ವಯೋವೃದ್ಧರು, ನಮಗೆ ಬಿರುದು ಗಿರುದಿನ ಯಾವ ಆಸೇಯೂ ಇಲ್ಲ, ನೀವಾದರೋ ಯುವಕರು, ವೀರರು, ಯುದ್ಧದ ಭರಕ್ಕೆ ನೀವಿರುವಾಗ ನಿಮ್ಮ ಸೈನ್ಯ ನಾಯಕರಿಲ್ಲದಂತಾಗಲು ಹೇಗೆ ಸಾಧ್ಯ ಹೇಳು ಎಂದು ಭೀಷ್ಮರು ಹೇಳಿದರು.

ಅರ್ಥ:
ವೃದ್ಧ: ವಯಸ್ಸಾದ; ಬಿರುದು: ಗೌರವ ಸೂಚಕ ಪದ; ಲಾವಣಿ: ಜನಪದ ಹಾಡುಗಳ ಒಂದು ಪ್ರಕಾರ; ಜವ್ವನ: ಯೌವ್ವನ; ಭಂಟ: ವೀರ, ಪರಾಕ್ರಮಿ; ರಣ: ಯುದ್ಧಭೂಮಿ; ಧುರಭರ: ಜೋರಾದ ಯುದ್ಧ; ನಿರ್ನಾಯಕ: ನಿರ್ಣಯ ಮಾಡುವ, ನಿರ್ಧಾರ; ಸೇನಾವಳಿ: ಸೈನ್ಯ; ಮೂದಲೆ: ಹಂಗಿಸು; ಲಕ್ಷ್ಯ: ಗುರುತು;

ಪದವಿಂಗಡಣೆ:
ನಾವು +ವೃದ್ಧರು +ಬಿರುದು +ಗಿರುದಿನ
ಲಾವಣಿಗೆ +ನಮಗೇಕೆ +ಹೇಳೈ
ನೀವಲೈ +ಜವ್ವನದ +ಭಂಟರು +ರಣದ +ಧುರಭರಕೆ
ನೀವಿರಲು +ನಿರ್ನಾಯಕವೆ +ಸೇ
ನಾವಳಿ +ಮಹಾದೇವ +ಮೂದಲೆಗ್
ಆವು +ಲಕ್ಷ್ಯವೆ +ಹೇಳು +ಫಲುಗುಣ+ ಎಂದನಾ +ಭೀಷ್ಮ

ಅಚ್ಚರಿ:
(೧) ಆಡು ಪದದ ಬಳಕೆ – ಬಿರುದು ಗಿರುದು;

ಪದ್ಯ ೧೪: ಅರ್ಜುನನು ಭೀಷ್ಮನನ್ನು ಹೇಗೆ ಹಂಗಿಸಿದನು?

ತೊಲತೊಲಗು ಕಲಿ ಭೀಷ್ಮ ವೃದ್ಧರಿ
ಗೆಳಭಟರ ಕೂಡಾವುದಂತರ
ವಳಿಬಲರ ಹೆದರಿಸಿದ ಹೆಕ್ಕಳವೇಕೆ ಸಾರೆನುತ
ತುಳುಕಿದನು ಕೆಂಗೋಳ ಜಲಧಿಯ
ನೆಲನದಾವುದು ದಿಕ್ಕದಾವುದು
ಸಲೆ ನಭೋಮಂಡಲವದಾವುದೆನಲೈ ಕಲಿ ಪಾರ್ಥ (ಭೀಷ್ಮ ಪರ್ವ, ೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅರ್ಜುನನು ಭೀಷ್ಮನನ್ನು ಎದುರಿಸುತ್ತಾ, ನೀನಾದರೂ ಮುದುಕ, ನೀನೆಲ್ಲಿ ಯುವಕನಾದ ನಾನೆಲ್ಲಿ, ಕೈಲಾಗದ ಯೋಧರನ್ನು ಬೆದರಿಸಿದ ಮಾತ್ರಕ್ಕೆ ನೀನು ಹೆಚ್ಚಿನ ವೀರನಾಗಲಾರೆ, ತೊಲಗು, ತೊಲಗು ಎನ್ನುತ್ತಾ ಕೆಂಪಾದ ಗರಿಗಳುಳ್ಳ ಬಾಣಗಳನ್ನು ಪ್ರಯೋಗಿಸಲು ಭೂಮಿ ಯಾವುದು, ಆಕಾಶವಾವುದು ಯಾವುದು ಯಾವ ದಿಕ್ಕು ಎಂದು ತಿಳಿಯದಂತಾಯಿತು.

ಅರ್ಥ:
ತೊಲಗು: ದೂರ ಸರಿ; ಕಲಿ: ಶೂರ; ವೃದ್ಧ: ವಯಸ್ಸಾದವನು, ಮುದುಕ; ಎಳ: ಚಿಕ್ಕ; ಭಟ: ಸೈನಿಕ; ಕೂಡು: ಸೇರು; ಅಂತರ: ದೂರ; ಅಳಿಬಲ: ನಾಶವಾಗುವ ಸೈನ್ಯ; ಹೆದರಿಸು: ಬೆದರಿಸು; ಹೆಕ್ಕಳ: ಹೆಚ್ಚಳ, ಅತಿಶಯ; ಸಾರು: ಡಂಗುರ ಹೊಡೆಸು, ಪ್ರಕಟಿಸು; ತುಳುಕು: ಹೊರಸೂಸುವಿಕೆ; ಕೆಂಗೋಲ: ಕೆಂಪಾದ ಬಾಣ; ಜಲಧಿ: ಸಾಗರ; ನೆಲ: ಭೂಮಿ; ದಿಕ್ಕು: ದಿಸೆಹ್; ಸಲೆ: ವಿಸ್ತೀರ್ಣ; ನಭೋ: ಆಗಸ; ಮಂಡಲ: ನಾಡಿನ ಒಂದು ಭಾಗ; ಕಲಿ: ಶೂರ;

ಪದವಿಂಗಡಣೆ:
ತೊಲತೊಲಗು +ಕಲಿ +ಭೀಷ್ಮ +ವೃದ್ಧರಿಗ್
ಎಳಭಟರ+ ಕೂಡಾವುದ್+ಅಂತರವ್
ಅಳಿಬಲರ +ಹೆದರಿಸಿದ +ಹೆಕ್ಕಳವೇಕೆ+ ಸಾರೆನುತ
ತುಳುಕಿದನು +ಕೆಂಗೋಳ +ಜಲಧಿಯ
ನೆಲನದ್+ಆವುದು +ದಿಕ್ಕದ್+ಆವುದು
ಸಲೆ +ನಭೋಮಂಡಲವದ್+ಆವುದ್+ಎನಲೈ +ಕಲಿ +ಪಾರ್ಥ

ಅಚ್ಚರಿ:
(೧) ಭೀಷ್ಮನನ್ನು ಹಂಗಿಸುವ ಪರಿ – ತೊಲತೊಲಗು ಕಲಿ ಭೀಷ್ಮ ವೃದ್ಧರಿಗೆಳಭಟರ ಕೂಡಾವುದಂತರ

ಪದ್ಯ ೧೦: ಧರ್ಮವ್ಯಾಧನ ತಂದೆ ತಾಯಿಯರ ಸ್ಥಿತಿ ಹೇಗಿತ್ತು?

ಒಳಗೆ ಮಂಚದ ಮೇಲೆ ನಡುಗುವ
ತಲೆಯ ತೆರಳಿದ ಮೈಯ್ಯ ಬೆಳುಪಿನ
ತಲೆನವಿರ ತಗ್ಗಿದ ಶರೀರದ ನೆಗ್ಗಿದವಯವದ
ತಳಿತ ಸೆರೆಗಳ ತಾರಿದಾನನ
ದಿಳಿದ ಹುಬ್ಬಿನ ಹುದಿದ ಕಣ್ಗಳ
ಚಲಿತ ವಚನದ ವೃದ್ಧರನು ತೋರಿದನು ಮುನಿಸುತಗೆ (ಅರಣ್ಯ ಪರ್ವ, ೧೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ಧರ್ಮವ್ಯಾಧನ ಮನೆಯೊಳಗೆ ಮಂಚದ ಮೇಲೆ ಅವನ ತಂದೆ ತಾಯಿಗಳಿದ್ದರು. ಅತಿವೃದ್ಧರಾದ ಅವರ ತಲೆಗಳು ನಡುಗುತ್ತಿದ್ದವು, ಮೈಗಳು ಕೃಶವಾಗಿದ್ದವು, ತಲೆಗೂದಲುಗಳು ನೆರೆತಿದ್ದವು, ಶರೀರ ಕುಗ್ಗಿದ್ದವು, ಅವಯವಗಳು ನೆಗ್ಗಿದ್ದವು, ನರಗಳು ಉಬ್ಬಿದ್ದವು, ಹುಬ್ಬುಗಲು ಜೋತು ಬಿದ್ದಿದ್ದವು, ಕಣ್ಣುಗಳು ಕುಳಿಬಿದ್ದಿದ್ದವು ಅವರ ಮಾತು ಅಸ್ಪಷ್ಟವಾಗಿದ್ದವು.

ಅರ್ಥ:
ಒಳಗೆ: ಅಂತರ್ಯ; ಮಂಚ: ಪರ್ಯಂಕ; ನಡುಗು: ಅಲ್ಲಾಡು; ತಲೆ: ಶಿರ; ತೆರಳು: ಸುಕ್ಕುಗಟ್ಟು; ಮೈಯ್ಯ: ತನು, ಶರೀರ; ಬೆಳುಪು: ಸಿತವರ್ಣ; ನವಿರು:ಕೂದಲು, ಕೇಶ; ತಗ್ಗು: ಕುಗ್ಗಿರುವ ಸ್ಥಿತಿ; ಶರೀರ: ದೇಹ; ನೆಗ್ಗು: ಕುಗ್ಗು, ಕುಸಿ; ಅವಯವ: ಶರೀರದ ಅಂಗ; ತಳಿತ: ಚಿಗುರಿದ; ಸೆರೆ: ನರ; ತಾರು: ಸೊರಗು, ಬಡಕಲಾಗು; ಆನನ: ಮುಖ; ಇಳಿ: ಜಗ್ಗು; ಹುಬ್ಬು: ಕಣ್ಣ ಮೇಲಿನ ಕೂದಲು; ಹುದಿ: ಒಳಸೇರು; ಕಣ್ಣು: ನಯನ; ಚಲಿತ: ಓಡಾಟ; ವಚನ:ಮಾತು; ವೃದ್ಧ: ವಯಸ್ಸಾದ; ತೋರು: ಗೋಚರ; ಮುನಿ: ಋಷಿ; ಸುತ: ಮಗ;

ಪದವಿಂಗಡಣೆ:
ಒಳಗೆ +ಮಂಚದ +ಮೇಲೆ +ನಡುಗುವ
ತಲೆಯ +ತೆರಳಿದ +ಮೈಯ್ಯ +ಬೆಳುಪಿನ
ತಲೆನವಿರ +ತಗ್ಗಿದ +ಶರೀರದ +ನೆಗ್ಗಿದ್+ಅವಯವದ
ತಳಿತ +ಸೆರೆಗಳ +ತಾರಿದ್+ಆನನದ್
ಇಳಿದ +ಹುಬ್ಬಿನ +ಹುದಿದ +ಕಣ್ಗಳ
ಚಲಿತ +ವಚನದ +ವೃದ್ಧರನು +ತೋರಿದನು +ಮುನಿಸುತಗೆ

ಅಚ್ಚರಿ:
(೧) ವೃದ್ಧರನ್ನು ವಿವರಿಸುವ ಪರಿ – ನಡುಗುವ ತಲೆಯ, ತೆರಳಿದ ಮೈಯ್ಯ, ಬೆಳುಪಿನ
ತಲೆನವಿರ, ತಗ್ಗಿದ ಶರೀರದ, ನೆಗ್ಗಿದವಯವದ, ಚಲಿತ ವಚನದ

ಪದ್ಯ ೯: ಜೈಮಿನಿ ಮುನಿಗಳನ್ನು ಹೇಗೆ ಕರೆದೊಯ್ಯಲು ಭೀಮನು ಯೋಚಿಸಿದನು?

ನಾವು ವೃದ್ಧರು ಪಥವೆಮಗೆ ದು
ರ್ಭಾವ ಕಾಲಕೆ ಹೋಹ ಬೇಹುದಿ
ದಾವ ಹದನೆಮ್ದೆನಲು ಪವನಜ ನಿಂದು ಕೈಮುಗಿದ
ನೀವು ಬಿಜಯಂಗೈಯೆ ಹೆಗಲ
ಲ್ಲಾವವೇಗದಲೊಯ್ವೆನೆನೆ ನಗು
ತಾ ವಿಬುಧವರ ಬಳಲಿದಾಗರುಹುವೆನು ನಡೆಯೆಂದ (ಅರಣ್ಯ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಜೈಮಿನಿ ಮುನಿಗಳು, ನಾನಾದರೋ ವಯಸ್ಸಾದ ಮುದುಕ, ದಾರಿಯೋ ದೂರ, ಕಾಲಕ್ಕೆ ಸರಿಯಾಗಿ ತಲುಪಬೇಕು, ಈಗ ಏನುಪಾಯ ಎಂದು ಕೇಳಲು, ಭೀಮನು ಅವರಿಗೆ ನಮಸ್ಕರಿಸಿ ನೀವು ನನ್ನ ಭುಜದ ಮೇಲೆ ಕುಳಿತುಕೊಳ್ಳಿ, ನಾನು ಅತಿ ವೇಗದಿಂದ ನಡೆದು ಸಮಯಕ್ಕೆ ಸರಿಯಾಗಿ ಕರೆದೊಯ್ಯುತ್ತೇನೆ ಎಂದು ಹೇಳಲು, ಜೈಮಿನಿ ಮುನಿಗಳು ನಸುನಕ್ಕು ನನಗೆ ಆಯಾಸವಾದಾಗ ನಿನಗೆ ಹೇಳುತ್ತೇನೆ, ಈಗ ನಡೆ ಹೋಗೋಣ ಎಂದು ಪ್ರಯಾಣಕ್ಕೆ ಅಣಿಯಾದರು.

ಅರ್ಥ:
ವೃದ್ಧ: ವಯಸ್ಸಾದ; ಪಥ: ದಾರಿ; ದುರ್ಭಾವ: ಕೆಟ್ಟ ಯೋಚನೆ, ದೂರ; ಕಾಲ: ಸಮಯ; ಹೋಹ: ಹೋಗು, ತೆರಳು; ಬೇಹುದು: ಬೇಕು; ಹದ: ರೀತಿ, ಕ್ರಮ; ಪವನಜ: ಭೀಮ; ಕೈಮುಗಿ: ನಮಸ್ಕರಿಸು; ನಿಂದು: ನಿಲ್ಲು, ಮೇಲೇಳು; ಬಿಜಯಂಗೈ: ದಯಮಾಡಿಸಿ; ಹೆಗಲು: ಭುಜ; ವೇಗ: ಗತಿ; ಒಯ್ವೆ: ಕರೆದುಕೊಂಡು ಹೋಗು; ನಗುತ: ಸಂತಸ; ವಿಬುಧ: ಜ್ಞಾನಿ, ವಿದ್ವಾಂಸ;ಬಳಲು: ಆಯಾಸ; ಅರುಹು: ಹೇಳು; ನಡೆ: ಚಲಿಸು;

ಪದವಿಂಗಡಣೆ:
ನಾವು +ವೃದ್ಧರು +ಪಥವ್+ಎಮಗೆ +ದು
ರ್ಭಾವ +ಕಾಲಕೆ +ಹೋಹ +ಬೇಹುದಿದ್
ಆವ +ಹದನೆಂದೆನಲು +ಪವನಜ+ ನಿಂದು +ಕೈಮುಗಿದ
ನೀವು +ಬಿಜಯಂಗೈಯೆ +ಹೆಗಲಲ್
ಆವ+ವೇಗದಲ್+ಒಯ್ವೆನ್+ಎನೆ +ನಗು
ತಾ +ವಿಬುಧವರ +ಬಳಲಿದ್+ಆಗ್+ಅರುಹುವೆನು +ನಡೆಯೆಂದ

ಅಚ್ಚರಿ:
(೧) ಭೀಮನ ಬಲದ ಪರಿಚಯ – ಪವನಜ ನಿಂದು ಕೈಮುಗಿದ ನೀವು ಬಿಜಯಂಗೈಯೆ ಹೆಗಲ
ಲ್ಲಾವವೇಗದಲೊಯ್ವೆನ್