ಪದ್ಯ ೫೬: ಭೀಮ ಕರ್ಣರ ಯುದ್ಧವು ಹೇಗೆ ಸಾಗಿತ್ತು?

ಶರಹತಿಗೆ ಸೆಡೆಯದೆ ವೃಕೋದರ
ನೆರಡು ಕವಲಂಬಿನಲಿ ಕರ್ಣನ
ಶಿರವನೆಚ್ಚಡೆ ತರುದನೆಡೆಯಲಿ ಭಾನುಸುತ ನಗುತ
ತಿರುಹಿ ಶಕ್ತಿಯಲಿಟ್ಟರೆಡೆಯಲಿ
ತರುದು ಭೀಮನ ಕರದ ಚಾಪವ
ನೆರಡು ಕಡಿ ಮಾಡಿದನು ಬಳಿಯಲಿ ನೊಸಲನೊಡನೆಚ್ಚ (ದ್ರೋಣ ಪರ್ವ, ೧೩ ಸಂಧಿ, ೫೬ ಪದ್ಯ)

ತಾತ್ಪರ್ಯ:
ಬಾಣಗಳಿಂದ ತಬ್ಬಿಬ್ಬಾಗದೆ ಭೀಮನು ಎರಡು ಕವಲಂಬುಗಳಿಂದ ಕರ್ಣನ ತಲೆಗೆ ಗುರಿಯಿಟ್ಟು ಬಿಟ್ಟರೆ ಕರ್ಣನು ನಗುತ್ತಾ ಅವನ್ನು ಕತ್ತರಿಸಿದನು. ಭೀಮನು ಶಕ್ತಿಯನ್ನು ಪ್ರಯೋಗಿಸಿದರೆ ಅದನ್ನು ಮಧ್ಯದಲ್ಲೇ ಕತ್ತರಿಸಿದನು. ಬಳಿಕ ಭೀಮನ ಬಿಲ್ಲನ್ನು ಎರಡು ತುಂಡಾಗಿ ಕತ್ತರಿಸಿ, ಅವನ ಹಣೆಯೊಡೆಯುವಂತೆ ಬಾಣಗಳನ್ನು ಬಿಟ್ಟನು.

ಅರ್ಥ:
ಶರ: ಬಾಣ; ಹತಿ: ಪೆಟ್ಟು, ಸೆಡೆ: ಗರ್ವಿಸು, ಅಹಂಕರಿಸು; ಹೊಡೆತ; ವೃಕೋದರ: ತೋಳದಂತಹ ಹೊಟ್ಟೆಯುಳ್ಳವ; ಕವಲಂಬು: ಹರಿತವಾದ ಬಾಣ; ಶಿರ: ತಲೆ; ಎಚ್ಚು: ಬಾಣ ಪ್ರಯೋಗ ಮಾಡು; ಭಾನು: ಸೂರ್ಯ; ನಗು: ಹರ್ಷ; ತಿರುಹಿ: ಮರಳಿ; ಶಕ್ತಿ: ಕಸುವು, ಬಲ; ಕರ: ಹಸ್ತ; ಚಾಪ: ಬಿಲ್ಲು; ಕಡಿ: ಸೀಳು; ಬಳಿ: ಹತ್ತಿರ; ನೊಸಲು: ಹಣೆ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಶರಹತಿಗೆ +ಸೆಡೆಯದೆ +ವೃಕೋದರನ್
ಎರಡು +ಕವಲಂಬಿನಲಿ +ಕರ್ಣನ
ಶಿರವನ್+ಎಚ್ಚಡೆ +ತರುದನ್+ಎಡೆಯಲಿ +ಭಾನುಸುತ +ನಗುತ
ತಿರುಹಿ+ ಶಕ್ತಿಯಲಿಟ್ಟರ್+ಎಡೆಯಲಿ
ತರುದು +ಭೀಮನ +ಕರದ +ಚಾಪವನ್
ಎರಡು +ಕಡಿ +ಮಾಡಿದನು +ಬಳಿಯಲಿ +ನೊಸಲನ್+ ಒಡನೆಚ್ಚ

ಅಚ್ಚರಿ:
(೧) ಕರ್ಣ, ಭಾನುಸುತ; ಭೀಮ, ವೃಕೋದರ – ಹೆಸರನ್ನು ಕರೆದ ಪರಿ

ಪದ್ಯ ೪೫: ಭೀಮನನ್ನು ಯಾರು ಕೆಣಕಿದರು?

ಪವನಜನ ಬಡಿಹೋರಿ ಹೋದನೆ
ರವಿ ಸುತನು ಹೋಗಲಿ ವೃಕೋದರ
ನವಯವವ ಕೇಣಿಯನು ಕೊಟ್ಟೆವು ಬಾಣತತಿಗೆನುತ
ತವ ಕುಮಾರರು ಮತ್ತೆ ಬಹಳಾ
ಹವವ ಹೊಕ್ಕರು ಹಕ್ಕಲಾದವ
ರವಗಡಿಸಿ ಕೆಣಕಿದರು ರಿಪುಕಲ್ಪಾಂತ ಭೈರವನ (ದ್ರೋಣ ಪರ್ವ, ೧೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ಕರ್ಣನು ಹಿಮ್ಮೆಟ್ಟಲು, ನಿನ್ನ ಮಕ್ಕಳು, ಭೀಮನ ಬಡಿಹೋರಿಯಾದ ಕರ್ಣನು ಹೋದನೇ? ಹೋಗಲಿ, ನಮ್ಮ ಬಾಣಗಳಿಗೆ ಭೀಮನ ದೇಹವನ್ನು ಕೇಣಿ ಕೊಟ್ಟಿದ್ದೇವೆ, ಎಂದು ಅಬ್ಬರಿಸುತ್ತಾ ಅತ್ತಿತ್ತ ಹೋದವರೆಲ್ಲಾ ಸೇರಿ ಶತ್ರುಗಳ ಕಲ್ಪಾಂತ ಭೈರವನಾದ ಭೀಮನನ್ನು ಕೆಣಕಿದರು.

ಅರ್ಥ:
ಪವನಜ: ಭೀಮ; ಬಡಿಹೋರಿ: ಹೋರಿಯಂತೆ ಬಡಿಸಿಕೊಳ್ಳುವವನು; ಹೋಗು: ತೆರಳು; ರವಿ: ಭಾನು; ಸುತ: ಪುತ್ರ; ಹೋಗು: ತೆರಳು; ವೃಕೋದರ: ಭೀಮ; ಅವಯವ: ಮೂಳೆ; ಕೇಣಿ: ಮೈತ್ರಿ, ಗೆಳೆತನ; ಕೊಡು: ನೀಡು; ಬಾಣ: ಅಂಬು; ತತಿ: ಗುಂಪು; ಕುಮಾರ: ಪುತ್ರ; ಬಹಳ: ತುಂಬ; ಆಹವ: ಯುದ್ಧ; ಹೊಕ್ಕು: ಸೇರು; ಅವಗಡಿಸು: ಕಡೆಗಣಿಸು; ಕೆಣಕು: ರೇಗಿಸು; ರಿಪು: ವೈರಿ; ಕಲ್ಪಾಂತ: ಪ್ರಳಯ; ಭೈರವ: ಶಿವನ ಒಂದು ಅವತಾರ;

ಪದವಿಂಗಡಣೆ:
ಪವನಜನ +ಬಡಿಹೋರಿ +ಹೋದನೆ
ರವಿ +ಸುತನು +ಹೋಗಲಿ +ವೃಕೋದರನ್
ಅವಯವವ +ಕೇಣಿಯನು +ಕೊಟ್ಟೆವು +ಬಾಣ+ತತಿಗೆನುತ
ತವ +ಕುಮಾರರು +ಮತ್ತೆ +ಬಹಳ
ಆಹವವ +ಹೊಕ್ಕರು +ಹಕ್ಕಲಾದವರ್
ಅವಗಡಿಸಿ +ಕೆಣಕಿದರು+ ರಿಪು+ಕಲ್ಪಾಂತ +ಭೈರವನ

ಅಚ್ಚರಿ:
(೧) ಪವನಜ, ವೃಕೋದರ, ಕಲ್ಪಾಂತ ಭೈರವ – ಭೀಮನನ್ನು ಕರೆದ ಪರಿ

ಪದ್ಯ ೮: ದ್ರೊಣನು ಭೀಮನಿಗೆ ಏನು ಹೇಳಿದನು?

ಅನಿಲಸುತ ಫಡ ಮರಳು ಠಕ್ಕಿನ
ವಿನಯವೇ ನಮ್ಮೊಡನೆ ಕೌರವ
ನನುಜರನು ಕೆಡೆಹೊಯ್ದ ಗರ್ವದ ಗಿರಿಯನಿಳಿಯೆನುತ
ಕನಲಿ ಕಿಡಿ ಸುರಿವಂಬ ತೆಗೆದು
ಬ್ಬಿನಲಿ ಕವಿದೆಸುತಿರೆ ವೃಕೋದರ
ನನಿತುಶರವನು ಕಡಿದು ಬಿನ್ನಹ ಮಾಡಿದನು ನಗುತ (ದ್ರೋಣ ಪರ್ವ, ೧೩ ಸಂಧಿ, ೮ ಪದ್ಯ)

ತಾತ್ಪರ್ಯ:
ಭೀಮ, ಛೇ, ಮೋಸದ ವಿನಯವನ್ನು ನಮ್ಮೊಡನೆ ತೋರಿಸುವೆಯಾ? ಕೌರವನ ತಮ್ಮಂದಿರನ್ನು ಕೊಂದ ಗರ್ವದ ಗಿರಿಯನ್ನಿಳಿದು ಮರಳಿ ಹೋಗು ಎನ್ನುತ್ತಾ ದ್ರೋಣನು ಕಿಡಿ ಸುರಿಯುವ ಬಾಣಗಳನ್ನು ಮೇಲೆ ಮೇಲೆ ಬಿಡಲು, ಭೀಮನು ಆ ಬಾಣಗಳನ್ನು ಕಡಿದು ನಗುತ್ತಾ ಬಿನ್ನಹ ಮಾಡಿದನು.

ಅರ್ಥ:
ಅನಿಲಸುತ: ವಾಯುಪುತ್ರ (ಭೀಮ); ಫಡ: ತಿರಸ್ಕಾರದ ಮಾತು; ಮರಳು: ಹಿಂದಿರುಗು; ಠಕ್ಕು: ಮೋಸ; ವಿನಯ: ಒಳ್ಳೆಯತನ, ಸೌಜನ್ಯ; ಅನುಜ: ಮಗ; ಹೊಯ್ದು: ಹೊಡೆ; ಗರ್ವ: ಅಹಂಕಾರ; ಗಿರಿ: ಬೆಟ್ಟ; ಇಳಿ: ಕೆಳಗೆ ನಡೆ; ಕನಲು: ಬೆಂಕಿ, ಉರಿ; ಕಿಡಿ: ಬೆಂಕಿ; ಸುರಿ: ವರ್ಷಿಸು; ಅಂಬು: ಬಾಣ; ತೆಗೆ: ಹೊರತರು; ಉಬ್ಬು: ಹಿಗ್ಗು; ಕವಿದು: ಆವರಿಸು; ವೃಕೋದರ: ಭೀಮ; ಶರ: ಬಾಣ; ಕಡಿ: ಸೀಳು; ಬಿನ್ನಹ: ಕೋರಿಕೆ; ನಗು: ಹರ್ಷ;

ಪದವಿಂಗಡಣೆ:
ಅನಿಲಸುತ +ಫಡ +ಮರಳು +ಠಕ್ಕಿನ
ವಿನಯವೇ +ನಮ್ಮೊಡನೆ +ಕೌರವನ್
ಅನುಜರನು +ಕೆಡೆಹೊಯ್ದ +ಗರ್ವದ +ಗಿರಿಯನ್+ಇಳಿಯೆನುತ
ಕನಲಿ +ಕಿಡಿ+ ಸುರಿವಂಬ+ ತೆಗೆದ್
ಉಬ್ಬಿನಲಿ +ಕವಿದೆಸುತಿರೆ+ ವೃಕೋದರನ್
ಅನಿತು+ಶರವನು+ ಕಡಿದು +ಬಿನ್ನಹ +ಮಾಡಿದನು +ನಗುತ

ಅಚ್ಚರಿ:
(೧) ಅನಿಲಸುತ, ವೃಕೋದರ – ಭೀಮನನ್ನು ಕರೆದ ಪರಿ

ಪದ್ಯ ೩: ಧರ್ಮಜನು ಭೀಮನ ಬಳಿ ಏನು ಹೇಳಿದನು?

ಎಲೆ ವೃಕೋದರ ವೈರಿಮೋಹರ
ದೊಳಗೆ ಸಿಲುಕಿದನೋ ಕಿರೀಟಿಗೆ
ನೆಲದ ಋಣಸಂಬಂಧ ಸವೆದುದೊ ಮೇಣು ಸಮರದಲಿ
ತಿಳಿಯಲಟ್ಟಿದ ಸಾತ್ಯಕಿಗೆ ಕೊಳು
ಗುಳದ ಭಾರಣೆಯಾಯ್ತು ಫಲುಗುಣ
ನಳಬಳವನರಿದಲ್ಲದೆನ್ನಸು ಸೈರಿಸದು ತನುವ (ದ್ರೋಣ ಪರ್ವ, ೧೨ ಸಂಧಿ, ೩ ಪದ್ಯ)

ತಾತ್ಪರ್ಯ:
ಎಲೈ ಭೀಮ, ಅರ್ಜುನನು ಶತ್ರುಸೈನ್ಯಕ್ಕೆ ಸೆರೆಯಾದನೋ, ಅಥವಾ ಅವನಿಗೆ ಭೂಮಿಯ ಋಣ ಸಂಬಂಧ ಯುದ್ಧದಲ್ಲಿ ತೀರಿಹೋಯಿತೋ, ತಿಳಿದು ಬಾ ಎಂದು ಕಳಿಸಿದ ಸಾತ್ಯಕಿಗೆ ಯುದ್ಧದ ಭಾರ ಹೆಚ್ಚಾಗಿರಬೇಕು, ಅರ್ಜುನನ ಸ್ಥಿತಿಯನ್ನು ತಿಳಿಯದೇ, ನನ್ನ ಜೀವವು ಈ ದೇಹದಲ್ಲಿರಲಾರದು ಎಂದು ಧರ್ಮಜನು ಹೇಳಿದನು.

ಅರ್ಥ:
ವೃಕೋದರ: ತೋಳದಂತಹ ಹೊಟ್ಟೆಯುಳ್ಳವ (ಭೀಮ); ವೈರಿ: ಶತ್ರು; ಮೋಹರ: ಯುದ್ಧ; ಸಿಲುಕು: ಬಂಧನಕ್ಕೊಳಗಾಗು; ಕಿರೀಟಿ: ಅರ್ಜುನ; ನೆಲ: ಭೂಮಿ; ಋಣ: ಸಾಲ, ಹಂಗು; ಸಂಬಂಧ: ಸಂಪರ್ಕ, ಸಹವಾಸ; ಸವೆದು: ಕಡಿಮೆಯಾಗು; ಮೇಣ್: ಅಥವ; ಸಮರ: ಯುದ್ಧ; ತಿಳಿ: ಅರಿ; ಅಟ್ಟು: ಕಳಿಸು; ಕೊಳುಗುಳ: ಯುದ್ಧ; ಭಾರಣೆ: ಮಹಿಮೆ; ಅಳಬಳ: ಸನ್ನಿವೇಶ, ಶಕ್ತಿ; ಅರಿ: ತಿಳಿ; ಅಸು: ಪ್ರಾಣ; ಸೈರಿಸು: ಸಹನೆ; ತನು: ದೇಹ;

ಪದವಿಂಗಡಣೆ:
ಎಲೆ +ವೃಕೋದರ +ವೈರಿ+ಮೋಹರ
ದೊಳಗೆ +ಸಿಲುಕಿದನೋ +ಕಿರೀಟಿಗೆ
ನೆಲದ +ಋಣಸಂಬಂಧ +ಸವೆದುದೊ +ಮೇಣು +ಸಮರದಲಿ
ತಿಳಿಯಲ್+ಅಟ್ಟಿದ +ಸಾತ್ಯಕಿಗೆ +ಕೊಳು
ಗುಳದ +ಭಾರಣೆಯಾಯ್ತು +ಫಲುಗುಣನ್
ಅಳಬಳವನ್+ಅರಿದಲ್ಲದ್+ಎನ್ನಸು +ಸೈರಿಸದು +ತನುವ

ಅಚ್ಚರಿ:
(೧) ಸತ್ತನು ಎಂದು ಹೇಳುವ ಪರಿ – ಕಿರೀಟಿಗೆ ನೆಲದ ಋಣಸಂಬಂಧ ಸವೆದುದೊ
(೨) ಮೋಹರ, ಸಮರ, ಕೊಳುಗುಳ – ಸಮಾನಾರ್ಥಕ ಪದಗಳು

ಪದ್ಯ ೧೯: ಧರ್ಮಜನು ಹೇಗೆ ತನ್ನ ದುಃಖವನ್ನು ತೋಡಿಕೊಂಡನು?

ಎಲೆ ವೃಕೋದರ ನಕುಳ ಸಾತ್ಯಕಿ
ನಿಲಿಸಿರೈ ತಂಗಿಯನು ತನ್ನಯ
ಕೊಲೆಗೆ ಮಗನಳಿವೊಂದು ಸಾಲದೆ ತನ್ನ ನುಡಿಯೇಕೆ
ನಳಿನನಾಭನ ಕರುಣದೊರತೆಯು
ಕಳಿದರಾರೇಗುವರು ಶಿವ ಶಿವ
ನೆಲನೊಳೆನ್ನವೊಲಾರು ಪಾಪಿಗಳೆಂದು ಬಿಸುಸುಯ್ದ (ದ್ರೋಣ ಪರ್ವ, ೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೆ ಭೀಮ, ನಕುಲ, ಸಾತ್ಯಕಿ, ಸುಭದ್ರೆಯನ್ನು ಸುಮ್ಮನಿರಿಸಿರಿ. ನನ್ನ ಮಗನ ಸಾವೇ ನಾನು ಸಾಯುವುದಕ್ಕೆ ಸಾಕು. ಇದರ ಮೇಲೆ ಇವಳ ನಿಂದೆಯೇಕೆ? ಶ್ರೀಕೃಷ್ಣನ ಕರುಣೆಯ ಇಲ್ಲವಾದರೆ ಯಾರು ಏನು ಮಾಡಲು ಸಾಧ್ಯ, ಶಿವ ಶಿವಾ, ಈ ಭೂಮಿಯ ಮೇಲೆ ನನ್ನಂಥ ಪಾಪಿಗಳು ಯಾರಿದ್ದಾರೆ ಎಂದು ಯುಧಿಷ್ಠಿರನು ಶೋಕಿಸಿದನು.

ಅರ್ಥ:
ವೃಕೋದರ: ಭೀಮ; ನಿಲಿಸು: ತಡೆ; ತಂಗಿ: ಸಹೋದರಿ; ಕೊಲೆ: ಮರಣ; ಮಗ: ಪುತ್ರ; ಅಳಿ: ಸಾವು; ನುಡಿ: ಮಾತು; ನಳಿನನಾಭ: ವಿಷ್ಣು, ಕೃಷ್ಣ; ಕರುಣ: ದಯೆ; ಏಗು: ಸಾಗಿಸು, ನಿಭಾಯಿಸು; ಕಳಿ: ನಿವಾರಿಸು; ನೆಲ: ಭೂಮಿ; ಪಾಪಿ: ದುಷ್ಟ; ಬಿಸುಸುಯ್: ನಿಟ್ಟುಸಿರು ಬಿಡು;

ಪದವಿಂಗಡಣೆ:
ಎಲೆ +ವೃಕೋದರ +ನಕುಳ +ಸಾತ್ಯಕಿ
ನಿಲಿಸಿರೈ+ ತಂಗಿಯನು +ತನ್ನಯ
ಕೊಲೆಗೆ+ ಮಗನ್+ಅಳಿವೊಂದು +ಸಾಲದೆ +ತನ್ನ +ನುಡಿಯೇಕೆ
ನಳಿನನಾಭನ +ಕರುಣದೊರತೆಯು
ಕಳಿದರ್+ಆರ್+ಏಗುವರು +ಶಿವ +ಶಿವ
ನೆಲನೊಳ್+ಎನ್ನವೊಲ್+ಆರು +ಪಾಪಿಗಳೆಂದು +ಬಿಸುಸುಯ್ದ

ಅಚ್ಚರಿ:
(೧) ಭಗವಂತನ ಕೃಪೆಯ ಮುಖ್ಯ ಎಂದು ಹೇಳುವ ಪರಿ – ನಳಿನನಾಭನ ಕರುಣದೊರತೆಯು
ಕಳಿದರಾರೇಗುವರು

ಪದ್ಯ ೪೩: ದುಶ್ಯಾಸನು ಅಭಿಮನ್ಯುವಿನ ಶೌರ್ಯವನ್ನು ಹೇಗೆ ಅಪಹಾಸ್ಯ ಮಾಡಿದನು?

ಸಾಕು ತರುವಲಿತನದ ಮಾತುಗ
ಳೇಕೆ ಗರುವರ ಮುಂದೆ ವೀರೋ
ದ್ರೇಕದಲಿ ಮೈಮರೆದು ರಣದಲಿ ಹೊಯ್ದು ಹೊಟ್ಟುಗರ
ಆ ಕಿರೀಟಿ ವೃಕೋದರರು ಮೈ
ಸೋಕಿದರೆ ಸಂತೋಷ ನೀನವಿ
ವೇಕಿ ಬಾಲಕನೇನ ಮಾಡುವೆನೆಂದನವ ನಗುತ (ದ್ರೋಣ ಪರ್ವ, ೫ ಸಂಧಿ, ೪೩ ಪದ್ಯ)

ತಾತ್ಪರ್ಯ:
ದುಶ್ಯಾಸನನು ನಗುತ್ತಾ ಹೇಳಿದನು, ಚಿಕ್ಕಮಕ್ಕಳ ಈ ಮಾತುಗಳನ್ನು ಶ್ರೇಷ್ಠರೆದುರಿಗೆ ಆಡಿದ್ದು ಸಾಕು, ಯುದ್ಧದಲ್ಲಿ ಕೆಲಸಕ್ಕೆ ಬಾರದವರನ್ನು ಹೊಯ್ದು ಹೊಟ್ಟನೂದಿ ವೀರೋದ್ರೇಕ ಬಂದು ಬಿಡುತ್ತದೆಯೇ? ಭೀಮಾರ್ಜುನರು ಯುದ್ಧಕ್ಕೆ ಬಂದರೆ ಸಂತೋಷ, ಅವಿವೇಕೆ ಬಾಲಕನಾದ ನಿನ್ನೊಡನೆ ನನಗೇನು ಎಂದು ನಕ್ಕನು.

ಅರ್ಥ:
ಸಾಕು: ನಿಲ್ಲು; ತರುವಲಿ: ಹುಡುಗ; ಮಾತು: ವಾಣಿ; ಗರುವ: ಹಿರಿಯ, ಶ್ರೇಷ್ಠ; ಮುಂದೆ: ಎದುರು; ವೀರ: ಶೂರ, ಪರಾಕ್ರಮ; ಉದ್ರೇಕ: ಉದ್ವೇಗ, ಆವೇಗ; ಮೈಮರೆ: ತಲ್ಲೀನ, ನೆನಪಿನಿಂದ ದೂರ ಮಾಡು; ರಣ: ಯುದ್ಧ; ಹೊಯ್ದು: ಹೋರಾಡು; ಹೊಟ್ಟುಗ: ವ್ಯರ್ಥವಾಗಿ ಮಾತಾಡು; ಕಿರೀಟಿ: ಅರ್ಜುನ; ವೃಕೋದರ: ಭೀಮ; ಮೈಸೋಕು: ದೇಹವನ್ನು ತಾಗಿಸು; ಸಂತೋಷ: ಹರ್ಷ; ಅವಿವೇಕಿ: ತಿಳುವಳಿಕೆ ಇಲ್ಲದವ; ಬಾಲಕ: ಪುತ್ರ; ನಗು: ಸಂತೋಷ;

ಪದವಿಂಗಡಣೆ:
ಸಾಕು+ ತರುವಲಿತನದ +ಮಾತುಗಳ್
ಏಕೆ +ಗರುವರ +ಮುಂದೆ +ವೀರೋ
ದ್ರೇಕದಲಿ +ಮೈಮರೆದು +ರಣದಲಿ +ಹೊಯ್ದು +ಹೊಟ್ಟುಗರ
ಆ +ಕಿರೀಟಿ +ವೃಕೋದರರು +ಮೈ
ಸೋಕಿದರೆ +ಸಂತೋಷ +ನೀನ್+ಅವಿ
ವೇಕಿ +ಬಾಲಕನೇನ+ ಮಾಡುವೆನ್+ಎಂದನವ+ ನಗುತ

ಅಚ್ಚರಿ:
(೧) ಅಭಿಮನ್ಯುವನ್ನು ಹಂಗಿಸುವ ಪರಿ – ಸಾಕು ತರುವಲಿತನದ ಮಾತುಗಳೇಕೆ; ನೀನವಿವೇಕಿ ಬಾಲಕನೇನ ಮಾಡುವೆನೆಂದನವ ನಗುತ

ಪದ್ಯ ೩೨: ಭೀಮನನ್ನು ಕೌರವ ಸೈನ್ಯದವರು ಹೇಗೆ ಹಂಗಿಸಿದರು?

ಕಾದಲೆನ್ನಳವಲ್ಲ ಬಲ ದು
ರ್ಭೇದವಿದು ಶಿವಶಿವಯೆನುತ್ತ ವೃ
ಕೋದರನು ಮರಳಿದನು ದುಗುಡಕೆ ತೆತ್ತು ನಿಜಮುಖವ
ಕೈದೆಗೆಯೆ ರಿಪುಬಲದ ಸುಭಟರು
ಕಾದಿದನು ಕಲಿ ಭೀಮ ಗೆಲಿದನು
ಪೋದನೆಂದರು ಕೂಡೆ ಕೈಗಳ ಹೊಯ್ದು ತಮತಮಗೆ (ದ್ರೋಣ ಪರ್ವ, ೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಈ ವ್ಯೂಹದಲ್ಲಿ ಯುದ್ಧಮಾಡುವುದು ನನಗೆ ಅಸಾಧ್ಯ, ಇದನ್ನು ಭೇದಿಸಲು ಆಗುವುದಿಲ್ಲ, ಎಂದು ಚಿಂತಿಸಿ ಭೀಮನು ದುಃಖಿಸಿ ಹಿಂದಿರುಗಿದನು. ಅವನು ಹಿಂದಿರುಗಲು ಕೌರವ ಯೋಧರು ಮಹಾ ಪರಾಕ್ರಮಿ ಭೀಮನು ಕಾದಿ ಗೆದ್ದು ಹೋದನು ಎಂದು ಕೈತಟ್ಟಿ ಕೂಗಿದರು.

ಅರ್ಥ:
ಕಾದು: ಹೋರಾದು; ಅಳವು: ಶಕ್ತಿ; ಬಲ: ಸೈನ್ಯ; ಭೇದ: ಬಿರುಕು, ಸೀಳು; ವೃಕೋದರ: ತೋಳದಂತ ಹೊಟ್ಟೆಯುಳ್ಳವ (ಭೀಮ); ಮರಳು: ಹಿಂದಿರುಗು; ದುಗುಡ: ದುಃಖ; ತೆತ್ತು: ಕೊಡು, ನೀಡು; ಮುಖ: ಆನನ; ಕೈದು: ಆಯುಧ; ರಿಪುಬಲ: ವೈರಿ ಸೈನ್ಯ; ಸುಭಟ: ಪರಾಕ್ರಮಿ; ಕಲಿ: ಶೂರ; ಗೆಲಿದ: ಜಯಿಸಿದ; ಪೋದು: ಹೋಗು; ಕೂಡ: ಜೊತೆ; ಹೊಯ್ದು: ಹೋರಾಡು; ಹೊಡೆ;

ಪದವಿಂಗಡಣೆ:
ಕಾದಲೆನ್ನ್+ಅಳವಲ್ಲ+ ಬಲ+ ದು
ರ್ಭೇದವಿದು+ ಶಿವಶಿವ+ಎನುತ್ತ +ವೃ
ಕೋದರನು +ಮರಳಿದನು +ದುಗುಡಕೆ +ತೆತ್ತು +ನಿಜಮುಖವ
ಕೈದೆಗೆಯೆ +ರಿಪುಬಲದ+ ಸುಭಟರು
ಕಾದಿದನು+ ಕಲಿ+ ಭೀಮ +ಗೆಲಿದನು
ಪೋದನೆಂದರು +ಕೂಡೆ +ಕೈಗಳ+ ಹೊಯ್ದು +ತಮತಮಗೆ

ಅಚ್ಚರಿ:
(೧) ವೃಕೋದರ, ಭೀಮ – ಹೆಸರನ್ನು ಕರೆದ ಪರಿ
(೨) ಹಂಗಿಸುವ ಪರಿ – ಕಾದಿದನು ಕಲಿ ಭೀಮ ಗೆಲಿದನುಪೋದನೆಂದರು ಕೂಡೆ ಕೈಗಳ ಹೊಯ್ದು

ಪದ್ಯ ೨೪: ಪದ್ಮವ್ಯೂಹವನ್ನು ಭೇದಿಸಲಾರಿಗೆ ಅಸಾಧ್ಯ?

ಖರೆಯರಹಿರುಂಟುಂಟು ನೆರವನೆ
ಕರಸಿಕೊಂಡೇ ಬಹೆನೆನುತ ರಿಪು
ಚರರ ಕಳುಹಲು ದ್ರೋಣನಟ್ಟಿದ ದೂತರೈತಂದು
ಕರೆದರ್ಜುನನನು ವೃಕೋದರ
ಧರಣಿಪತಿ ಮಾದ್ರೇಯ ಹೈಡಿಂ
ಬರಿಗೆ ನೂಕದು ಪಾರ್ಥ ಪದ್ಮವ್ಯೂಹವಿಂದಿನಲಿ (ದ್ರೋಣ ಪರ್ವ, ೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ಅರ್ಜುನನು, ನೀವು ನಿಷ್ಠುರ ಸತ್ಯವನ್ನೇ ಹೇಳುತ್ತಿದ್ದೀರಿ, ಸರಿಯಾದ ಸಹಾಯವನ್ನು ತೆಗೆದುಕೊಂಡೇ ಬರುತ್ತೇನೆ ಎಂದನು. ದ್ರೋಣನ ದೂತರು ಇದಕ್ಕೆ ಪ್ರತಿಯಾಗಿ, ಅರ್ಜುನನನ್ನು ಕರೆಯುತ್ತಾ ಇಂದಿನ ಪದ್ಮವ್ಯೂಹವು ಭೀಮ, ಧರ್ಮಜ, ನಕುಲ, ಸಹದೇವ, ಘಟೋತ್ಕಚರಿಗೆ ಅಸಾಧ್ಯವಾದುದು ಎಂದನು.

ಅರ್ಥ:
ಖರೆ: ದಿಟ, ಸತ್ಯ; ಅರುಹು: ಹೇಳು; ನೆರವು: ಸಹಾಯ; ಕರಸಿ: ಬರೆಮಾಡಿ; ಬಹೆ: ಬರು; ರಿಪು: ವೈರಿ; ಕಳುಹು: ತೆರಳು; ಅಟ್ಟು: ಹಿಂಬಾಲಿಸು; ದೂತ: ಸೇವಕ, ಸೈನಿಕ; ಐತಂದು: ಬಂದು ಸೇರು; ಕರೆ: ಬರೆಮಾಡು; ವೃಕೋದರ: ತೋಳದಂತ ಹೊಟ್ಟೆಯುಳ್ಳವ (ಭೀಮ); ಧರಣಿಪತಿ: ರಾಜ; ಮಾದ್ರೇಯ: ನಕುಲ, ಸಹದೇವ; ಹೈಡಿಂಬ: ಘಟೋತ್ಕಚ; ನೂಕು: ತಳ್ಳು;

ಪದವಿಂಗಡಣೆ:
ಖರೆ+ಅರುಹಿರ್+ಉಂಟುಂಟು +ನೆರವನೆ
ಕರಸಿಕೊಂಡೇ +ಬಹೆನ್+ಎನುತ +ರಿಪು
ಚರರ +ಕಳುಹಲು +ದ್ರೋಣನ್+ಅಟ್ಟಿದ +ದೂತರ್+ಐತಂದು
ಕರೆದರ್+ಅರ್ಜುನನನು +ವೃಕೋದರ
ಧರಣಿಪತಿ+ ಮಾದ್ರೇಯ +ಹೈಡಿಂ
ಬರಿಗೆ +ನೂಕದು +ಪಾರ್ಥ +ಪದ್ಮವ್ಯೂಹವಿಂದಿನಲಿ

ಅಚ್ಚರಿ:
(೧) ಖರೆ, ಕರೆ – ಪದದ ಬಳಕೆ

ಪದ್ಯ ೮೨: ಭೀಮನ ಆಕ್ರಮಣ ಹೇಗಿತ್ತು?

ಗಿಳಿಯ ಹಿಂಡುಗಳೆತ್ತ ಗಿಡಿಗನ
ದಳದುಳವು ತಾನೆತ್ತ ಭೀಮನ
ಸುಳಿವು ಗಡ ಕಾಲೂರುವವೆ ಕರಿ ಘಟೆಗಳೊಗ್ಗಿನಲಿ
ಕಳಿತ ಹೂವಿನ ತೊಡಬೆಗಳೊ ರಿಪು
ಬಲವೊ ಬಿರುಗಾಳಿಯೊ ವೃಕೋದರ
ನಳವ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೨ ಸಂಧಿ, ೮೨ ಪದ್ಯ)

ತಾತ್ಪರ್ಯ:
ಗಿಳಿವಿಂಡುಗಳೆಲ್ಲಿ ಗಿಡಗವೆಲ್ಲಿ? ಭೀಮನ ದಾಳಿಯಿಂದ ಆನೆಗಲದಳವು ಕಾಲೂರಿ ನಿಲ್ಲಲೂ ಆಗಲಿಲ್ಲ. ಭೀಮನೆಂಬ ಬಿರುಗಾಳಿಗೆ ಶತ್ರುಸೈನ್ಯವೆಂಬ ಅರಳಿದ ಹೂಗೊಂಚಲುಗಳು ಹಾರಿ ಹೋದವು. ಭೀಮನ ಪರಾಕ್ರಮವನ್ನು ಬಲ್ಲವರಾರು?

ಅರ್ಥ:
ಗಿಳಿ: ಗಿಣಿ, ಶುಕ; ಹಿಂಡು: ಗುಂಪು; ಗಿಡುಗ: ಹದ್ದು; ದಳ: ಗುಂಫು; ಉಳವು: ಉಳಿಸು, ಜೀವಿಸು; ಸುಳಿವು: ಕುರುಹು, ಜಾಡು; ಗಡ: ತ್ವರಿತವಾಗಿ, ಅಲ್ಲವೇ; ಕಾಲು: ಪಾದ; ಊರು: ಮೆಟ್ಟು; ಕರಿ: ಆನೆ; ಘಟೆ: ಗುಂಪು; ಒಗ್ಗು: ಗುಂಪು; ಕಳಿತ: ಪೂರ್ಣ ಹಣ್ಣಾದ; ಹೂವು: ಮಲರು, ಪುಷ್ಪ; ತೊಡಬೆ: ತುಂಬು, ಕಾವು, ಸಮೂಹ; ರಿಪು: ವೈರಿ; ಬಲ: ಸೈನ್ಯ; ಬಿರುಗಾಳಿ: ಜೋರಾದ ಗಾಳಿ; ವೃಕೋದರ: ತೋಳಿನಂತಹ ಹೊಟ್ಟೆ (ಭೀಮ); ಅಳವು: ಶಕ್ತಿ; ಬಲ್ಲ: ತಿಳಿದ; ಕೇಳು: ಆಲಿಸು;

ಪದವಿಂಗಡಣೆ:
ಗಿಳಿಯ+ ಹಿಂಡುಗಳೆತ್ತ +ಗಿಡಿಗನ
ದಳದುಳವು +ತಾನೆತ್ತ +ಭೀಮನ
ಸುಳಿವು+ ಗಡ+ ಕಾಲೂರುವವೆ+ ಕರಿ+ ಘಟೆಗಳ್+ಒಗ್ಗಿನಲಿ
ಕಳಿತ+ ಹೂವಿನ +ತೊಡಬೆಗಳೊ+ ರಿಪು
ಬಲವೊ+ ಬಿರುಗಾಳಿಯೊ+ ವೃಕೋದರನ್
ಅಳವ +ಬಲ್ಲವನ್+ಆವನೈ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಿಳಿಯ ಹಿಂಡುಗಳೆತ್ತ ಗಿಡಿಗನ ದಳದುಳವು ತಾನೆತ್ತ

ಪದ್ಯ ೫೬: ಕೃಷ್ಣನನ್ನು ಹೇಗೆ ಸ್ವಾಗತಿಸಿದರು?

ಎರಡು ಕೈಯಲಿ ತುಂಬಿ ರತುನವ
ಸುರಿದು ಮೈಯಿಕ್ಕಿದನು ಭೂಪತಿ
ಚರಣದೊಳು ಚತುರಾಸ್ಯಜನಕನ ವಿಮಲ ಭಕ್ತಿಯೊಳು
ನರವೃಕೋದರ ನಕುಲ ಸಹದೇ
ವರು ವಿರಾಟದ್ರುಪದ ಮೊದಲಾ
ಗಿರೆ ಸಮಸ್ತನೃಪಾಲಜನ ಮೆಯ್ಯಿಕ್ಕಿತೊಲವಿನೊಳು (ವಿರಾಟ ಪರ್ವ, ೧೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಬೆಲೆಬಾಳುವ ರತ್ನಗಳನ್ನು ಬೊಗಸೆಯಲ್ಲಿ ತುಂಬಿ ಭಕ್ತಿಯಿಂದ ಕೃಷ್ಣನ ಪಾದಗಳಿಗೆ ಸುರಿದು ನಮಸ್ಕರಿಸಿದನು. ಭೀಮ ಅರ್ಜುನ, ನಕುಲ ಸಹದೇವ ವಿರಾಟ ದ್ರುಪದ ಮೊದಲಾದ ಸರ್ವರೂ ಕೃಷ್ಣನಿಗೆ ನಮಸ್ಕರಿಸಿದರು.

ಅರ್ಥ:
ಕೈ: ಹಸ್ತ; ತುಂಬ: ಭರ್ತಿ; ರತುನ: ಬೆಲೆಬಾಳುವ ಮಣಿ; ಸುರಿ: ಹರಡು; ಮೆಯ್ಯಿಕ್ಕು: ನಮಸ್ಕರಿಸು; ಭೂಪತಿ: ರಾಜ; ಚತುರಾಸ್ಯ: ನಾಲ್ಕು ಮುಖವುಳ್ಳ (ಬ್ರಹ್ಮ) ಜನಕ: ತಂದೆ; ವಿಮಲ: ನಿರ್ಮಲ; ಭಕ್ತಿ: ಪೂಜ್ಯಭಾವ; ನರ: ಅರ್ಜುನ; ವೃಕೋದರ: ಭೀಮ; ವೃಕ: ತೋಳ; ಉದರ: ಹೊಟ್ಟೆ; ಸಮಸ್ತ: ಎಲ್ಲಾ; ನೃಪಾಲ: ರಾಜರು; ಜನ: ಮನುಷ್ಯರು; ಒಲವು: ಪ್ರೀತಿ;

ಪದವಿಂಗಡಣೆ:
ಎರಡು +ಕೈಯಲಿ +ತುಂಬಿ +ರತುನವ
ಸುರಿದು +ಮೆಯ್ಯಿಕ್ಕಿದನು +ಭೂಪತಿ
ಚರಣದೊಳು +ಚತುರಾಸ್ಯ+ಜನಕನ +ವಿಮಲ +ಭಕ್ತಿಯೊಳು
ನರ+ವೃಕೋದರ +ನಕುಲ +ಸಹದೇ
ವರು +ವಿರಾಟ+ದ್ರುಪದ +ಮೊದಲಾ
ಗಿರೆ+ ಸಮಸ್ತ+ನೃಪಾಲಜನ+ ಮೆಯ್ಯಿಕ್ಕಿತ್+ಒಲವಿನೊಳು

ಅಚ್ಚರಿ:
(೧) ಕೃಷ್ಣನನ್ನು ಚತುರಾಸ್ಯಜನಕ ಎಂದು ಕರೆದಿರುವುದು
(೨) ನಮಸ್ಕರಿಸು ಎನ್ನುವುದಕ್ಕೆ ಮೆಯ್ಯಿಕ್ಕು ಎಂಬ ಪದದ ಬಳಕೆ