ಪದ್ಯ ೩೫: ಪತ್ರದಲ್ಲಿ ಯಾರ ದರ್ಶನವನ್ನು ಬೇಡಲಾಯಿತು?

ದೇವ ನಿಮ್ಮಡಿಗಳ ಕೃಪಾಸಂ
ಜೀವಿನಿಯಲೆಮ್ಮಸುಗಳೊಡಲಿನ
ಠಾವ ಮೆಚ್ಚಿದವೊದೆದು ಹಾಯ್ದೆವು ವಿಪಿನ ಮಂದಿರವ
ಈ ವರುಷದಜ್ಞಾತವಾಸಗ
ತಾವ ಶೇಷವದಾಯ್ತು ಕಂಗಳಿ
ಗೀವುದವಯವ ದರ್ಶನಾಮೃತಪಾನ ಸಂಪದವ (ವಿರಾಟ ಪರ್ವ, ೧೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ದೇವ ನಿಮ್ಮ ಕೃಪೆಯಿಂದ ಸಂಜೀವಿನಿಯ ದೆಸೆಯಿಂದ ನಮ್ಮ ಪ್ರಾಣಗಳು ನಮ್ಮ ದೇಹದ ಮನೆಯನ್ನೇ ಮೆಚ್ಚಿ ಅಲ್ಲೇ ಇವೆ. ಅರಣ್ಯವಾಸವನ್ನು ಹಿಂದಕ್ಕೊದೆದು ಬಂದೆವು. ಒಂದು ವರ್ಷ ಅಜ್ಞಾತವಾಸವು ಪೂರ್ಣಕಳೆದು ಹೋಯಿತು. ನಮ್ಮ ಕಣ್ಣುಗಳಿಗೆ ನಿಮ್ಮ ದೇಹ ದರ್ಶನವೆಂಬ ಅಮೃತಪಾನ ಮಾಡಿಸಬೇಕು.

ಅರ್ಥ:
ದೇವ: ಭಗವಮ್ತ; ನಿಮ್ಮಡಿ: ನಿಮ್ಮ ಪಾದದ ಬಳಿ; ಕೃಪೆ: ದಯೆ; ಸಂಜೀವಿನಿ: ಜೀವವನ್ನು ನೀಡುವು ದೆಂದು ನಂಬಲಾಗಿರುವ ಒಂದು ಮೂಲಿಕೆ, ಪರಮೌಷಧ; ಅಸು: ಪ್ರಾಣ; ಒಡಲು: ದೇಹ; ಠಾವು: ಸ್ಥಳ, ಎಡೆ; ಮೆಚ್ಚು: ಒಲುಮೆ; ಹಾಯ್ದು: ಮೇಲೆ ಬಿದ್ದು; ವಿಪಿನ: ಅರಣ್ಯ; ಮಂದಿರ: ಆಲಯ; ವರುಷ: ಸಂವತ್ಸರ; ಅಜ್ಞಾತ: ಯಾರಿಗೂ ತಿಳಿಯದ; ಗತ: ಕಳೆದ, ಹಿಂದೆ ಆದುದು; ಶೇಷ: ಉಳಿದ; ಕಂಗಳು: ಕಣ್ಣು; ಅವಯವ: ದೇಹದ ಒಂದು ಭಾಗ, ಅಂಗ; ದರ್ಶನ: ನೋಟ; ಅಮೃತ: ಸುಧೆ; ಪಾನ: ಕುಡಿ; ಸಂಪದ: ಐಶ್ವರ್ಯ, ಸಂಪತ್ತು;

ಪದವಿಂಗಡಣೆ:
ದೇವ +ನಿಮ್ಮಡಿಗಳ+ ಕೃಪಾ+ಸಂ
ಜೀವಿನಿಯಲ್+ಎಮ್ಮ್+ಅಸುಗಳ್+ಒಡಲಿನ
ಠಾವ+ ಮೆಚ್ಚಿದವ್+ಒದೆದು +ಹಾಯ್ದೆವು +ವಿಪಿನ +ಮಂದಿರವ
ಈ +ವರುಷದ್+ಅಜ್ಞಾತ+ವಾಸ+ಗ
ತಾವ +ಶೇಷವದಾಯ್ತು +ಕಂಗಳಿಗ್
ಈವುದ್+ಅವಯವ +ದರ್ಶನಾಮೃತಪಾನ+ ಸಂಪದವ

ಅಚ್ಚರಿ:
(೧) ಬದುಕಿದ್ದೇವೆ ಎಂದು ಹೇಳುವ ಪರಿ – ದೇವ ನಿಮ್ಮಡಿಗಳ ಕೃಪಾಸಂಜೀವಿನಿಯಲೆಮ್ಮಸುಗಳೊಡಲಿನ
ಠಾವ ಮೆಚ್ಚಿದವೊ
(೨) ನಿಮ್ಮನ್ನು ನೋಡಬೇಕೆಂದು ಹೇಳುವ ಪರಿ – ಕಂಗಳಿಗೀವುದವಯವ ದರ್ಶನಾಮೃತಪಾನ ಸಂಪದವ

ಪದ್ಯ ೪೮: ಧರ್ಮಜನು ಮಾರ್ಕಂಡೇಯ ಮುನಿಗಳಿಗೆ ಏನು ಕೇಳಿದ?

ಬಂದ ಮಾರ್ಕಂಡೇಯ ಮುನಿಗಭಿ
ವಂದಿಸಿದನೀ ಬ್ರಹ್ಮಸೃಷ್ಟಿಯ
ಲಿಂದು ತಾನಲ್ಲದೆ ಸುಧಾಕರ ಸೂರ್ಯವಂಶದಲಿ
ಹಿಂದೆ ನವೆದವರಾರು ಪರಿಭವ
ದಿಂದ ನಮ್ಮಂದದಲಿ ವಿಪಿನದೊ
ಳಿಂದುಮುಖಿಯರು ಭಂಗಬಿಟ್ಟರೆಯೆನುತ ಬಿಸುಸುಯ್ದ (ಅರಣ್ಯ ಪರ್ವ, ೨೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ಆಗ ಮಾರ್ಕಂಡೇಯ ಮುನಿಗಳು ಪಾಂಡವರಿದ್ದ ಆಶ್ರಮಕ್ಕೆ ಬಂದರು, ಧರ್ಮಜನು ಅವರಿಗೆ ನಮಸ್ಕರಿಸಿ ಸ್ವಾಮೀ ನಾನೀಗ ಅಡವಿಯಲ್ಲಿ ಪಡಬಾರದ ಕಷ್ಟಗಳನ್ನನುಭವಿಸುತ್ತಿದ್ದೇನೆ, ನನ್ನನ್ನು ಬಿಟ್ಟರೆ, ಈ ಹಿಂದೆ ಚಂದ್ರವಂಶದಲ್ಲಾಗಲಿ, ಸೂರ್ಯವಂಶದಲ್ಲಾಗಲಿ ನಮ್ಮಂತೆ ಸೋತು, ಕಾಡಿನಲ್ಲಿ ಕಷ್ಟಗಳನ್ನನುಭವಿಸಿದವರುಂಟೇ? ಯಾವ ಹೆಂಗಸಾದರೂ ದ್ರೌಪದಿಯಂತೆ ಅಪಮಾನಕ್ಕೀಡಾದಳೇ ಎಂದು ಕೇಳುತ್ತಾ ನಿಟ್ಟುಸಿರಿಟ್ಟನು.

ಅರ್ಥ:
ಬಂದು: ಆಗಮಿಸು; ಮುನಿ: ಋಷಿ; ಅಭಿವಂದಿಸು: ನಮಸ್ಕರಿಸು; ಬ್ರಹ್ಮ: ಅಜ; ಸೃಷ್ಟಿ: ಹುಟ್ಟು; ಸುಧಾಕರ: ಚಂದ್ರ; ಸೂರ್ಯ: ಭಾಸ್ಕರ; ವಂಶ: ಕುಲ; ಹಿಂದೆ: ನಡೆದ, ಪುರಾತನ; ನವೆ: ದುಃಖಿಸು, ಕೊರಗು; ಪರಿಭವ: ಸೋಲು; ವಿಪಿನ: ಕಾಡು; ಇಂದುಮುಖಿ: ಚಂದ್ರನಂತೆ ಮುಖವುಳ್ಳವಳು (ದ್ರೌಪದಿ); ಭಂಗ: ಅಪಮಾನ; ಬಿಸುಸುಯ್: ನಿಟ್ಟುಸಿರು;

ಪದವಿಂಗಡಣೆ:
ಬಂದ +ಮಾರ್ಕಂಡೇಯ +ಮುನಿಗ್+ಅಭಿ
ವಂದಿಸಿದನ್+ಈ+ ಬ್ರಹ್ಮಸೃಷ್ಟಿಯಲ್
ಇಂದು+ ತಾನಲ್ಲದೆ +ಸುಧಾಕರ+ ಸೂರ್ಯ+ವಂಶದಲಿ
ಹಿಂದೆ +ನವೆದವರಾರು +ಪರಿಭವ
ದಿಂದ +ನಮ್ಮಂದದಲಿ +ವಿಪಿನದೊಳ್
ಇಂದುಮುಖಿಯರು +ಭಂಗಬಿಟ್ಟರೆ+ಎನುತ +ಬಿಸುಸುಯ್ದ

ಅಚ್ಚರಿ:
(೧) ಚಂದ್ರವಂಶ ಎಂದು ಹೇಳಲು – ಸುಧಾಕರ ಪದದ ಬಳಕೆ
(೨) ದ್ರೌಪದಿಯನ್ನು ಇಂದುಮುಖಿ ಎಂದು ಕರೆದ ಪರಿ

ಪದ್ಯ ೧೩: ಪಾಂಡವರ ಆಯಾಸ ಹೇಗೆ ದೂರವಾಯಿತು?

ಮರಳಿ ಕಾಮ್ಯಕವನದ ದಳ ಮಂ
ದಿರವನೇ ನೆಲೆ ಮಾಡಿದೆವು ವಿ
ಸ್ತರಣವಿದು ಹಿಂದಾದ ವಿಪಿನಾಂತರ ಪರಿಭ್ರಮದಿ
ಕರುಣಿ ನಿಮ್ಮಡಿಯಂಘ್ರಿಕಮಲದ
ದರುಶನದಿನಾಯಾಸ ಪಾರಂ
ಪರೆಗೆ ಬಿಡುಗಡೆಯಾಯ್ತೆನುತ ಮೈಯಿಕ್ಕಿದನು ಭೂಪ (ಅರಣ್ಯ ಪರ್ವ, ೧೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ನಾವು ಮತ್ತೆ ಕಾಮ್ಯಕವನದಲ್ಲೇ ಬೀಡು ಬಿಟ್ಟೆವು. ನಮ್ಮ ವನವಾಸದ ತಿರುಗಾಟದ ವಿವರವದು. ಎಲೈ ಕರುಣಾಶಾಲಿಯೇ, ನಿಮ್ಮ ಪಾದಕಮಲಗಳ ದರುಶನದಿಂದ ನಮ್ಮ ಆಯಾಸ ಪರಂಪರೆ ಕೊನೆಗೊಂಡಿತು ಎಂದು ಹೇಳಿ ಧರ್ಮಜನು ಶ್ರೀಕೃಷ್ಣನ ಪಾದಗಳಿಗೆ ನಮಸ್ಕರಿಸಿದನು.

ಅರ್ಥ:
ಮರಳಿ: ಮತ್ತೆ, ಹಿಂದಿರುಗು; ವನ: ಕಾಡು; ದಳ: ಗುಂಪು; ಮಂದಿರ: ಆಲ್ಯ; ನೆಲೆ: ಸ್ಥಾನ; ವಿಸ್ತರಣ: ವಿಶಾಲ; ಹಿಂದೆ: ಪೂರ್ವ; ವಿಪಿನ: ಕಾಡು; ಪರಿಭ್ರಮಣ: ಸುತ್ತಾಡು, ಅಲೆದಾಟ; ಕರುಣಿ: ದಯೆ; ಅಡಿ: ಹೆಜ್ಜೆ, ತಳ; ಅಂಘ್ರಿ: ಪಾದ; ಕಮಲ: ತಾವರೆ; ದರುಶನ: ದೃಷ್ಟಿ, ಗೋಚರ; ಆಯಾಸ: ಬಳಲಿಕೆ, ಶ್ರಮ; ಪಾರಂಪರೆ: ಸಂಪ್ರದಾಯ; ಬಿಡುಗಡೆ: ಬಂಧನದಿಂದ ಪಾರಾಗುವಿಕೆ; ಮೈಯಿಕ್ಕು: ನಮಸ್ಕರಿಸು; ಭೂಪ: ರಾಜ;

ಪದವಿಂಗಡಣೆ:
ಮರಳಿ +ಕಾಮ್ಯಕವನದ+ ದಳ +ಮಂ
ದಿರವನೇ+ ನೆಲೆ +ಮಾಡಿದೆವು +ವಿ
ಸ್ತರಣವಿದು +ಹಿಂದಾದ +ವಿಪಿನಾಂತರ +ಪರಿಭ್ರಮದಿ
ಕರುಣಿ +ನಿಮ್ಮಡಿ+ಅಂಘ್ರಿ+ಕಮಲದ
ದರುಶನದಿನ್+ಆಯಾಸ +ಪಾರಂ
ಪರೆಗೆ +ಬಿಡುಗಡೆಯಾಯ್ತ್+ಎನುತ+ ಮೈಯಿಕ್ಕಿದನು +ಭೂಪ

ಅಚ್ಚರಿ:
(೧) ಕೃಷ್ಣನ ಹಿರಿಮೆಯನ್ನು ವಿವರಿಸುವ ಪರಿ – ಕರುಣಿ ನಿಮ್ಮಡಿಯಂಘ್ರಿಕಮಲದ
ದರುಶನದಿನಾಯಾಸ ಪಾರಂಪರೆಗೆ ಬಿಡುಗಡೆಯಾಯ್ತೆ

ಪದ್ಯ ೧೨: ಧರ್ಮಜನು ಕೃಷ್ಣನಿಗೆ ನಹುಷನ ವೃತ್ತಾಂತವನ್ನು ಹೇಗೆ ವಿವರಿಸಿದನು?

ಇಂತು ತಲೆಯೊತ್ತುತ ಮಹಾವಿಪಿ
ನಾಂತರವ ತೊಳಲಿದೆವು ಬಳಿಕವ
ನಾಂತರದೊಳಗಿಂದಾದುದೂಳಿಗ ನಹುಷ ನೃಪತಿಯಲಿ
ಭ್ರಾಂತಿಯೈಸಲೆ ಭೀಮನುರಗಾ
ಕ್ರಾಂತನಾದನು ಧರ್ಮಕಥೆಯಲಿ
ಸಂತವಾಯ್ತು ವಿಶಾಪನಾದನು ನಹುಷನಾಕ್ಷಣಕೆ (ಅರಣ್ಯ ಪರ್ವ, ೧೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಹೀಗೆ ಹೋರಾಡುತ್ತಾ ಮಹಾ ಕಾಡುಗಳನ್ನು ದಾಟಿ ದಣಿದೆವು. ಅಲ್ಲಿ ನಹುಷನು ಹಾವಿನ ರೂಪದಿಂದ ಭೀಮನನ್ನು ಹಿಡಿದನು. ಧರ್ಮ ಸಂವಾದದಿಂದ ಅವನು ಶಾಪ ಮುಕ್ತನಾದನು ಮತ್ತು ಭೀಮನು ಬಿಡುಗಡೆ ಹೊಂದಿದನು.

ಅರ್ಥ:
ತಲೆ: ಶಿರ; ತಲೆಯೊತ್ತು: ಯುದ್ಧಮಾಡಿ; ಮಹಾ: ದೊಡ್ಡ; ವಿಪಿನ: ಕಾಡು; ಅಂತರ: ದೂರ; ತೊಳಲು: ಬವಣೆ, ಸಂಕಟ; ಬಳಿಕ: ನಂತರ; ಊಳಿಗ: ಕೆಲಸ, ಕಾರ್ಯ; ನೃಪತಿ: ರಾಜ; ಭ್ರಾಂತಿ: ತಿರುಗುವಿಕೆ, ಸಂಚಾರ, ಭ್ರಮೆ; ಐಸಲೆ: ಅಲ್ಲವೇ; ಉರಗ: ಹಾವು; ಆಕ್ರಾಂತ: ಆಕ್ರಮಿಸಲ್ಪಟ್ಟ; ಕಥೆ: ವಿವರಣೆ; ಸಂತ: ಸಂಧಾನ; ವಿಶಾಪ: ಶಾಪದಿಂದ ಮುಕ್ತ; ಕ್ಷಣ: ಸಮಯ;

ಪದವಿಂಗಡಣೆ:
ಇಂತು +ತಲೆಯೊತ್ತುತ+ ಮಹಾ+ವಿಪಿನ
ಅಂತರವ +ತೊಳಲಿದೆವು +ಬಳಿಕ+ವ
ನಾಂತರದೊಳಗಿಂದ್+ಆದುದ್+ಊಳಿಗ +ನಹುಷ +ನೃಪತಿಯಲಿ
ಭ್ರಾಂತಿ+ಐಸಲೆ +ಭೀಮನ್+ಉರಗ
ಆಕ್ರಾಂತನಾದನು +ಧರ್ಮಕಥೆಯಲಿ
ಸಂತವಾಯ್ತು +ವಿಶಾಪನಾದನು +ನಹುಷನ್+ಆ+ಕ್ಷಣಕೆ

ಅಚ್ಚರಿ:
(೧) ವಿಪಿನ, ವನ – ಸಮನಾರ್ಥಕ ಪದ

ಪದ್ಯ ೧: ಪಾಂಡವರು ಕಾಡಿನಲ್ಲಿ ಯಾವ ಪ್ರಾಣಿಗಳನ್ನು ನೋಡಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ಯಮಸುತ ಮುನಿಜನಂಗಳ
ಮೇಳದಲಿ ಹೊರವಂಟು ತನ್ನನುಜಾತರೊಡಗೂಡಿ
ತಾಳಿಗೆಯ ತಲ್ಲಣದ ಗಿರಿಗಳ
ಮೇಲೆ ಚರಿಸುತ ಬಂದು ವಿಪಿನ
ವ್ಯಾಳಗಜ ಶಾರ್ದೂಲ ಸಿಂಹಾದಿಗಳನೀಕ್ಷಿಸುತ (ಅರಣ್ಯ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಯುಧಿಷ್ಠಿರನು ತನ್ನ ತಮ್ಮಂದಿರು ದ್ರೌಪದಿ ಮತ್ತು ಮುನಿಗಳೊಡನೆ ಬಹು ಕಷ್ಟಕರವಾದ ಬೆಟ್ಟಗಳಲ್ಲಿ ಓಡಾಡುತ್ತಾ ಬಂದು ಕಾಡಿನಲ್ಲಿದ್ದ ಸರ್ಪ, ಆನೆ, ಹುಲಿ, ಸಿಂಹ ಮೊದಲಾದ ಪ್ರಾಣಿಗಳನ್ನು ನೋಡಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಸುತ: ಮಗ; ಮುನಿ: ಋಷಿ; ಜನ:
ಮನುಷ್ಯರ ಗುಂಪು; ಮೇಳ: ಗುಂಪು; ಹೊರವಂಟು: ಹೊರಟು; ಅನುಜ: ತಮ್ಮ; ಒಡಗೂಡು: ಜೊತೆ; ತಾಳಿಗೆ: ಗಂಟಲು; ತಲ್ಲಣ: ತಾಪ, ಸಂಕಟ; ಗಿರಿ: ಬೆಟ್ಟ; ಚರಿಸು: ಓಡಾಡು; ವಿಪಿನ: ಅರಣ್ಯ; ವ್ಯಾಳ: ಸರ್ಪ; ಗಜ: ಆನೆ; ಶಾರ್ದೂಲ: ಹುಲಿ; ಸಿಂಹ: ಕೇಸರಿ; ಈಕ್ಷಿಸು: ನೋಡು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಯಮಸುತ +ಮುನಿ+ಜನಂಗಳ
ಮೇಳದಲಿ+ ಹೊರವಂಟು+ ತನ್+ಅನುಜಾತರ್+ಒಡಗೂಡಿ
ತಾಳಿಗೆಯ +ತಲ್ಲಣದ+ ಗಿರಿಗಳ
ಮೇಲೆ +ಚರಿಸುತ+ ಬಂದು +ವಿಪಿನ
ವ್ಯಾಳ+ಗಜ+ ಶಾರ್ದೂಲ +ಸಿಂಹಾದಿಗಳನ್+ಈಕ್ಷಿಸುತ

ಅಚ್ಚರಿ:
(೧) ಕಷ್ಟಕರವಾದುದು ಎಂದು ಹೇಳಲು – ತಾಳಿಗೆಯ ತಲ್ಲಣದ ಗಿರಿಗಳ ಮೇಲೆ ಚರಿಸುತ

ಪದ್ಯ ೩: ಧರ್ಮರಾಯನು ಭೀಮನಿಗೆ ಏನು ಹೇಳಿದ?

ತಿರುಗಿ ಕಂಡನು ಭೂಮಿಭಾರದ
ನೆರವಿಯನು ಗಲ್ಲದಲಿ ಕರವಿ
ಟ್ಟರಸ ತಲೆದೂಗಿದನು ಸುಯ್ದನು ಬೈದು ದುಷ್ಟತನ
ಧರಣಿ ಸೇರಿದುದಹಿತರಿಗೆ ಕರಿ
ತುರಗ ರಥವೆಮಗಿಲ್ಲ ವಿಪಿನದ
ಪರಿಭವಣೆಗಿವರೇಕೆ ಬೆಸಗೊಳು ಭೀಮ ನೀನೆಂದ (ಅರಣ್ಯ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ಪಾಂಡವರ ಹಿಂದೆ ಅಸಂಖ್ಯಾತ ಜನರು ಬರುತ್ತಿದ್ದರು, ಧರ್ಮರಾಯನು ಒಮ್ಮೆ ಹಿಂದಿರುಗಿ ನೋಡಿ, ತನ್ನ ಗಲ್ಲದ ಮೇಲೆ, ಕೈಯಿಟ್ಟು, ತಲೆದೂಗಿ, ತನ್ನ ಪಾಪಕರ್ಮವನ್ನು ಜರೆದುಕೊಂಡು, ನಿಟ್ಟುಸಿರು ಬಿಟ್ಟು, ಭೀಮನನ್ನು ಕರೆದು, ನಮ್ಮ ರಾಜ್ಯವು ಈಗ ವೈರಿಗಳ ಪಾಲಾಗಿದೆ, ನಮ್ಮ ಸೈನ್ಯವು, ಆನೆ, ಕುದುರೆ, ರಥಗಳೆಲ್ಲವೂ ವೈರಿಗಳಿಗೆ ಸೇರಿವೆ, ನಾವು ಕಾಡಿಗೆ ಬಂದಿದ್ದೇವೆ, ಕಾಡಿನ ತಿರುಗಾಟದ ಕಷ್ಟಗಳು ನಮ್ಮ ಈ ಜನರಿಗೇಕೆ ಎಂದು ಆ ಜನರನ್ನು ಕೇಳಲು ಭೀಮನಿಗೆ ಹೇಳಿದನು.

ಅರ್ಥ:
ತಿರುಗಿ: ಮರಳು; ಕಂಡು: ನೋಡು; ಭೂಮಿ: ಧರಣಿ; ಭಾರ: ಹೊರೆ; ಎರವು: ಅಭಾವ; ಗಲ್ಲ: ಕದಪು, ಕೆನ್ನೆ; ಕರ: ಕೈ; ಅರಸ: ರಾಜ; ತಲೆ: ಶಿರ; ತೂಗು: ಅಲ್ಲಾಡಿಸು; ಸುಯ್ದು: ನಿಟ್ಟುಸಿರು; ಬೈದು: ಜರೆದು; ದುಷ್ಟತನ: ಕೆಟ್ಟತನ, ಪಾಪಕರ್ಮ; ಧರಣಿ: ಭೂಮಿ; ಸೇರು: ಕೂಡು; ಅಹಿತ; ವೈರಿ; ಕರಿ: ಆನೆ; ತುರಗ: ಅಶ್ವ, ಕುದುರೆ; ರಥ: ಬಂಡಿ; ವಿಪಿನ: ಕಾಡು; ಪರಿಭವಣೆ: ತಿರುಗಾಟ; ಬೆಸ: ತಿಳಿಸು;

ಪದವಿಂಗಡಣೆ:
ತಿರುಗಿ +ಕಂಡನು +ಭೂಮಿ+ಭಾರದನ್
ಎರವಿಯನು +ಗಲ್ಲದಲಿ +ಕರವಿಟ್ಟ್
ಅರಸ +ತಲೆದೂಗಿದನು +ಸುಯ್ದನು +ಬೈದು +ದುಷ್ಟತನ
ಧರಣಿ+ ಸೇರಿದುದ್+ಅಹಿತರಿಗೆ +ಕರಿ
ತುರಗ+ ರಥವ್+ಎಮಗಿಲ್ಲ +ವಿಪಿನದ
ಪರಿಭವಣೆಗ್+ಇವರೇಕೆ+ ಬೆಸಗೊಳು+ ಭೀಮ +ನೀನೆಂದ

ಅಚ್ಚರಿ:
(೧) ತನ್ನ ಸ್ಥಿತಿಯನ್ನು ಬೈದುಕೊಳ್ಳುವ ಪರಿ – ಗಲ್ಲದಲಿ ಕರವಿಟ್ಟರಸ ತಲೆದೂಗಿದನು ಸುಯ್ದನು ಬೈದು ದುಷ್ಟತನ

ಪದ್ಯ ೨೧: ದುರ್ಯೋಧನನು ಯಾವ ಕುತಂತ್ರದ ಉಪಾಯವನ್ನು ಹೇಳಿದನು?

ಕರೆಸಿಕೊಡಿ ನೀವಿಲ್ಲಿಗವರೈ
ವರನು ಜೂಜಿನಲೊಂದು ಹಲಗೆಯ
ಲರಸ ನೀ ಚಿತ್ತವಿಸು ಹನ್ನೆರಡಬುದ ವಿಪಿನದಲಿ
ವರುಷವೊಂದಜ್ಞಾತವದರೊಳ
ಗರಿದೆವಾದಡೆ ಮರಳಿ ವಿಪಿನಕೆ
ವರುಷ ಹನ್ನೆರಡಕ್ಕೆ ಕೊಡುವೆವು ಮತ್ತೆ ವೀಳೆಯವ (ಸಭಾ ಪರ್ವ, ೧೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಕುತಂತ್ರದ ಉಪಾಯವನ್ನು ಹೇಳಿದನು. ತಂದೆ ನೀವು ಇಲ್ಲಿಗೆ ಪಾಂಡವರನ್ನು ಕರೆಸಿರಿ, ಒಂದೇ ಹಲಗೆಯ ಪಗಡೆಯಾಟ. ಅದರಲ್ಲಿ ಅವರನ್ನು ಸೋಲಿಸಿ ಹನ್ನೆರಡು ವರುಷ ವನವಾಸ ಒಂದು ವರ್ಷ ಅಜ್ಞಾತವಾಸಕ್ಕೆ ಕಳಿಸಿಬಿಡುತ್ತೇವೆ. ಅಜ್ಞಾತವಾಸದಲ್ಲಿ ಅವರನ್ನು ನಾವು ಗುರುತಿಸಿದರೆ ಅವರು ಮತ್ತೆ ಹನ್ನೆರಡು ವರ್ಷ ವನವಾಸಕ್ಕೆ ಹೋಗಬೇಕೆಂಬುದು ಪಣ ಎಂದು ತಿಳಿಸಿದನು.

ಅರ್ಥ:
ಕರೆಸು: ಬರೆಮಾಡು; ಜೂಜು: ದ್ಯೂತ; ಹಲಗೆ: ಜೂಜಿನ ಪಟ, ಅಗಲವಾದ ಹಾಗೂ ತೆಳುವಾದ ಸೀಳು; ಅರಸ: ರಾಜ; ಚಿತ್ತವಿಸು: ಗಮನವಿಟ್ಟು ಕೇಳು; ಅಬುದ: ವರ್ಷ; ವಿಪಿನ: ಕಾಡು; ವರುಷ: ಸಂವತ್ಸರ; ಅಜ್ಞಾತ: ಯಾರಿಗೂ ತಿಳಿಯದ; ಅರಿ: ತಿಳಿ; ಮರಳಿ: ಪುನಃ; ವೀಳೆಯ: ಆಮಂತ್ರಿಸು, ಕೊಡು;

ಪದವಿಂಗಡಣೆ:
ಕರೆಸಿಕೊಡಿ +ನೀವಿಲ್ಲಿಗ್+ಅವರ್+
ಐವರನು +ಜೂಜಿನಲ್+ಒಂದು +ಹಲಗೆಯಲ್
ಅರಸ +ನೀ +ಚಿತ್ತವಿಸು +ಹನ್ನೆರಡ್+ಅಬುದ +ವಿಪಿನದಲಿ
ವರುಷವ್+ಒಂದ್+ ಅಜ್ಞಾತವ್+ಅದರೊಳಗ್
ಅರಿದೆವಾದಡೆ+ ಮರಳಿ +ವಿಪಿನಕೆ
ವರುಷ +ಹನ್ನೆರಡಕ್ಕೆ+ ಕೊಡುವೆವು +ಮತ್ತೆ +ವೀಳೆಯವ

ಅಚ್ಚರಿ:
(೧) ದುರ್ಯೋಧನನ ಕುತಂತ್ರ ಉಪಾಯವನ್ನು ಹೇಳುವ ಪರಿ – ವರುಷವೊಂದಜ್ಞಾತವದರೊಳ
ಗರಿದೆವಾದಡೆ ಮರಳಿ ವಿಪಿನಕೆ ವರುಷ ಹನ್ನೆರಡಕ್ಕೆ ಕೊಡುವೆವು ಮತ್ತೆ ವೀಳೆಯವ

ಪದ್ಯ ೫೧: ಧರ್ಮಜನನ್ನು ಕರ್ಣನೇಕೆ ಕೆಣಕಿದನು?

ಕಡಿದು ಬಿಸುಟನು ತೆಕ್ಕೆವರಿಗೆಯ
ಗಡಣವನು ಬದ್ಧರದ ಬಂಡಿಗ
ಳಡಗಿದವು ನಿಜ ಸೇನೆ ಸಹಿತರುಣಾಂಬು ಪೂರದಲಿ
ಅಡಿಗಡಿಗೆ ಮುಕ್ಕುರಿಸಿ ತನ್ನನು
ತಡೆವ ರಿಪುಚತುರಂಗ ವಿಪಿನದ
ಕಡಿತ ತೀರಿತು ಮತ್ತೆ ರಾಯನ ಕೆಣಕಿದನು ಕರ್ಣ (ಕರ್ಣ ಪರ್ವ, ೧೧ ಸಂಧಿ, ೫೧ ಪದ್ಯ)

ತಾತ್ಪರ್ಯ:
ಆನೆಗಳ ಮೇಲಿಂದ ಕರ್ಣನ ಬಾಣಗಳನ್ನು ತಡೆಯುತ್ತಿದ್ದ ಪಾಂಡವರ ಸೇನೆಯನ್ನು ಕರ್ಣನು ಆನೆಗಳ ಗುಂಪನ್ನು ಬದ್ಧರದ ಬಂಡಿಗಳನ್ನು ಕಡಿದು ಹಾಕಿದನು. ಪಾಂಡವರ ಸೇನೆಯು ರಕ್ತಸಿಕ್ತವಾಗಿ ಅಡಗಿತು. ಮತ್ತೆ ಮತ್ತೆ ತನ್ನನ್ನು ತಡೆಯುವ ಪಾಂಡವರ ಚತುರಂಗ ಸೇನೆಯ ಕಾಟ ತಪ್ಪಲು, ಕರ್ಣನು ಧರ್ಮಜನನ್ನು ಮತ್ತೆ ಕೆಣಕಿದನು.

ಅರ್ಥ:
ಕಡಿ: ಸೀಳು, ತುಂಡು ಮಾಡು; ಬಿಸುಟು: ಹೊರಹಾಕು, ಬಿಸಾಕು; ತೆಕ್ಕೆ: ಗುಂಪು, ಸಮೂಹ; ಗಡಣ: ಸೇರಿಸುವಿಕೆ, ಗುಂಪು; ಬಂಡಿ: ರಥ; ಅಡಗು: ಅವಿತುಕೊಳ್ಳು, ಮರೆಯಾಗು; ಮುಕ್ಕುರಿಸು: ಆತುರಪಡು, ಶ್ರಮಿಸು; ತಡೆ: ಅಡ್ಡಪಡಿಸು; ರಿಪು: ವೈರಿ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ವಿಪಿನ: ಅಡವಿ, ಕಾಡು; ಕದಿತ: ಕತ್ತರಿಸುವಿಕೆ; ತೀರು: ಅಂತ್ಯ, ಮುಕ್ತಾಯ; ರಾಯ: ರಾಜ; ಕೆಣಕು: ರೇಗಿಸು, ಪ್ರಚೋದಿಸು;

ಪದವಿಂಗಡಣೆ:
ಕಡಿದು+ ಬಿಸುಟನು +ತೆಕ್ಕೆವರಿಗೆಯ
ಗಡಣವನು+ ಬದ್ಧರದ +ಬಂಡಿಗಳ್
ಅಡಗಿದವು +ನಿಜ +ಸೇನೆ +ಸಹಿತ್+ಅರುಣಾಂಬು +ಪೂರದಲಿ
ಅಡಿಗಡಿಗೆ+ ಮುಕ್ಕುರಿಸಿ+ ತನ್ನನು
ತಡೆವ+ ರಿಪು+ಚತುರಂಗ +ವಿಪಿನದ
ಕಡಿತ+ ತೀರಿತು +ಮತ್ತೆ +ರಾಯನ +ಕೆಣಕಿದನು +ಕರ್ಣ

ಅಚ್ಚರಿ:
(೧) ರಕ್ತವನ್ನು ಸೂಚಿಸಲು – ಅರುಣಾಂಬು ಪದದ ಬಳಕೆ
(೨) ಚತುರಂಗ ಸೇನೆಯನ್ನು ಕಾಡು ಎಂದು ವರ್ಣಿಸಿರುವುದು (ವಿಪಿನ)